Home news-in-brief ಸುಪ್ರೀಂ ಚಾಟಿಗೆ ಎಚ್ಚೆತ್ತ ಚುನಾವಣಾ ಆಯೋಗ: ಯೋಗಿ, ಮಾಯಾ ಬಾಯಿಗೆ ಕಡಿವಾಣ

ಸುಪ್ರೀಂ ಚಾಟಿಗೆ ಎಚ್ಚೆತ್ತ ಚುನಾವಣಾ ಆಯೋಗ: ಯೋಗಿ, ಮಾಯಾ ಬಾಯಿಗೆ ಕಡಿವಾಣ

SHARE

ಮ್ಯಾರಥಾನ್ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು ಎರಡನೇ ಹಂತದ ಮತದಾನಕ್ಕೆ ಎದುರು ನೋಡಲಾಗುತ್ತಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತನ್ನ ಮೇಲಿದ್ದ ಆಪಾದನೆಗಳಿಂದ ಹೊರ ಬರುವ ಪ್ರಯತ್ನದಲ್ಲಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂದಿಗಿಂತ ತುಸು ಹೆಚ್ಚಾಗಿಯೇ ‘ಹಲ್ಲಿಲ್ಲದ ಹಾವು’ ಎಂಬ ಆರೋಪಕ್ಕೆ ಗುರಿಯಾಗುತ್ತಾ ಬಂದಿದ್ದ ಚುನಾವಣಾ ಆಯೋಗ ಕೊನೆಗೂ ಮೈ ಕೊಡವಿ ಎದ್ದಿದೆ. ಇಬ್ಬರು ನಾಯಕರ ವಿರುದ್ಧ ಕ್ರಮ ಕೈಗೊಂಡಿದೆ.

ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಮೂರು ದಿನಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿರುವ ಆಯೋಗ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಗೂ ಎರಡು ದಿನಗಳ ಕಾಲ ಪ್ರಚಾರದಿಂದ ದೂರವಿರುವಂತೆ ಸೂಚಿಸಿದೆ.

ಆಡಳಿತ ಪಕ್ಷದ ನಾಯಕರ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಚುನಾವಣಾ ಆಯೋಗ ಮೃದು ಧೋರಣೆ ತಾಳುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಾ ಬಂದಿದ್ದವು.

ಸುಪ್ರೀಂ ಕೋರ್ಟ್‌ ಸೋಮವಾರ ಚಾಟಿ ಬೀಸುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ. ಸುಪ್ರೀಂ ಕೋರ್ಟ್‌ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೇ ಇರುವ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಮತ್ತು ರಾಜಕೀಯ ನಾಯಕರನ್ನು ಹದ್ದು ಬಸ್ತಿನಲ್ಲಿಡಲು ತನಗಿರುವ ಅಧಿಕಾರದ ಬಗ್ಗೆ ಆಯೋಗಕ್ಕೆ ಅರಿವಿದೆಯೇ ಎಂದು ಖಾರವಾಗಿ ಪ್ರಶ್ನಿಸಿತ್ತು.

ಉಚ್ಛ ನ್ಯಾಯಾಲಯದಿಂದ ಇಂತಹದೊಂದು ಪ್ರತಿಕ್ರಿಯೆ ಹೊರ ಬಂದ ಕೆಲವೇ ಹೊತ್ತಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಯೋಗಿ ಆದಿತ್ಯನಾಥ್‌ ಮತ್ತು ಮಾಯಾವತಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಆಯೋಗ ಪ್ರಚೋದನಕಾರಿ ಭಾಷಣ ಮಾಡಿದ್ದ ಯೋಗಿ ಆದಿತ್ಯನಾಥ್‌ ಮತ್ತು ಮಾಯಾವತಿಗೆ ನೋಟಿಸ್‌ ಜಾರಿ ಮಾಡಿತ್ತು. ಇದೀಗ ಸಂವಿಧಾನದ 324ನೇ ವಿಧಿಯಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿಕೊಂಡಿರುವ ಆಯೋಗ ಪ್ರಚಾರಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಚುನಾವಣಾ ಆಯುಕ್ತರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ.

ಜಾತಿ-ಧರ್ಮ ರಾಜಕಾರಣ:

ಇತ್ತೀಚೆಗೆ ದಿಯೋಬಂದ್‌ನಲ್ಲಿ ಮಾತನಾಡಿದ್ದ ಮಾಯಾವತಿ, ಕಾಂಗ್ರೆಸ್‌ ಮತ್ತು ತಮ್ಮ ಮೈತ್ರಿಕೂಟದ ನಡುವೆ ಮತಗಳು ವಿಭಜನೆಯಾಗದ ಹಾಗೆ ನೋಡಿಕೊಳ್ಳುವಂತೆ ಮುಸ್ಲಿಂ ಸಮುದಾಯದವರಿಗೆ ಎಚ್ಚರಿಕೆ ನೀಡಿದ್ದರು.

ಚುನಾವಣಾ ಸಮಯದಲ್ಲಿ ಹೀಗೆ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಮತ ಯಾಚನೆ ಮಾಡುವುದು ಅಪರಾಧವಾಗಿರುತ್ತದೆ. ಜತೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಏನನ್ನು ಮಾಡಬಹುದು, ಏನನ್ನು ಮಾಡಬಾರದು ಎಂಬುದಾಗಿ ಚುನಾವಣಾ ಆಯೋಗದ ಪಟ್ಟಿಯೇ ಇದೆ.

ಹೀಗಿದ್ದೂ ಮಾಯಾವತಿ ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಯೋಗಿ ಆದಿತ್ಯನಾಥ್‌, “ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಎಸ್‌ಪಿಗೆ ಅಲಿಯ ಮೇಲೆ ನಂಬಿಕೆ ಇದ್ದರೆ ನಮಗೆ ಬಜರಂಗಬಲಿಯ ಮೇಲೆ ನಂಬಿಕೆ ಇದೆ,” ಎಂದಿದ್ದರು.

ಅಲಿ ಪ್ರವಾದಿ ಮೊಹಮ್ಮದ್‌ರ ಉತ್ತರಾಧಿಕಾರಿಯಾಗಿದ್ದರೆ ಹನುಮಂತನಿಗೆ ಬಜರಂಗಬಲಿ ಎಂದು ಕರೆಯಲಾಗುತ್ತದೆ. ಹೀಗೆ ಇವರಿಬ್ಬರನ್ನು ಉಲ್ಲೇಖಿಸಿ ಆದಿತ್ಯನಾಥ್‌ ಕೂಡ ಧರ್ಮದ ಹೆಸರಿನಲ್ಲಿ ಮತಗಳ ಬೆಳೆ ತೆಗೆಯಲು ಹೊರಟಿದ್ದರು.

ಈ ಹೇಳಿಕೆ ವಿರೋಧ ಪಕ್ಷಗಳು ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತು ಈ ಸಂಬಂಧ ಅವು ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿದ್ದವು. ಈ ದೂರಿನ ಹಿನ್ನೆಲೆಯಲ್ಲಿ ಆಯೋಗ ಇಬ್ಬರಿಗೂ ನೋಟಿಸ್‌ ನೀಡಿ ಸುಮ್ಮನಾಗಿತ್ತು.

ಇದರಿಂದ ಬೇಸತ್ತ ಕೆಲವರು, ‘ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿಯನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ’ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ಸಂದರ್ಭದಲ್ಲಿ ಹಾಜರಿದ್ದ ಚುನಾವಣಾ ಆಯೋಗದ ಪ್ರತಿನಿಧಿ, “ನಮಗೆ ಯಾವುದೇ ಅಧಿಕಾರವಿಲ್ಲ. ಅವರನ್ನು ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ,” ಎಂದು ವಾದಿಸಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠ, “ಚುನಾವಣಾ ಆಯೋಗ ನಾವು ಹಲ್ಲಿಲ್ಲದವರು ಎನ್ನುತ್ತಿದೆ. ಒಂದೊಮ್ಮೆ ಯಾರಾದರೂ ನೀತಿ ಸಂಹಿತೆ ಉಲ್ಲಂಘಿಸಿದರೆ, ಧರ್ಮ ಮತ್ತು ಜಾತಿಯನ್ನು ಬಳಸಿದರೆ ನೋಟಿಸ್ ನೀಡುತ್ತಾರೆ. ನಂತರ ನೋಟಿಸ್‌ಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಸಲಹೆ ನೀಡುತ್ತಾರೆ. ನಾವು ಇದನ್ನು ಪರಿಶೀಲನೆಗೆ ಒಳಪಡಿಸಲಿದ್ದೇವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಚುನಾವಣಾ ಅಧಿಕಾರಿ ನಮ್ಮ ಮುಂದೆ ಹಾಜರಾಗುವಂತೆ ಕೇಳುತ್ತೇವೆ,” ಎಂದಿತ್ತು.

ಇದರ ನಡುವೆ ಕ್ರಮ ಕೈಗೊಂಡು ಚುನಾವಣಾ ಆಯೋಗ ತನ್ನ ಮರ್ಯಾದೆ ಉಳಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಇದೇ ಆಯೋಗ ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೂ ತಡೆ ನೀಡಿತ್ತು. ಜತೆಗೆ ನಮೋ ಟಿವಿಯ ಎಲ್ಲಾ ಜಾಹೀರಾತುಗಳಿಗೆ ಮೊದಲೇ ಅನುಮತಿ ಪಡೆಯಬೇಕು ಎಂದು ಸೂಚಿಸಿತ್ತು. ಇದಲ್ಲದೆ ಮೋದಿ ಪರ ಪ್ರಚಾರ ನಡೆಸಿದ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಮೇಲೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗೂ ಪತ್ರ ಬರೆದಿತ್ತು.

2014ರಲ್ಲಿ ಶಾ, ಅಜಂ ಖಾನ್‌ಗೆ ಶಿಕ್ಷೆ:

ಇನ್ನು 2014ರಲ್ಲಿಯೂ ಇದೇ ರೀತಿ ಅಭ್ಯರ್ಥಿಗಳನ್ನು, ರಾಜಕೀಯ ನಾಯಕರನ್ನು ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿತ್ತು.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಧ್ವೇಷ ಭಾಷಣದ ಕಾರಣಕ್ಕೆ ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಇದೇ ರೀತಿ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿತ್ತು.

ಚುನಾವಣೆಗಳು ನ್ಯಾಯ ಸಮ್ಮತವಾಗಿ, ಮುಕ್ತವಾಗಿ ನಡೆಯಬೇಕು ಮತ್ತು ಅದನ್ನು ಆಯೋಗ ಮೇಲ್ವಿಚಾರಣೆ ಮಾಡಬೇಕು. ಆರಂಭದಿಂದ ಸೈನಿಕರು, ಪಾಕಿಸ್ತಾನ, ಧರ್ಮ ಹೀಗೆ ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ಬಳಸಬಾರದು ಎಂದು ಆಯೋಗವೇನೋ ಹೇಳಿತ್ತು. ಆದರೆ, ಇಂತಹ ವಿಚಾರಗಳು ಈಗಾಗಲೇ ಮುಖ್ಯವಾಹಿನಿಯ ಪ್ರಚಾರದಲ್ಲಿ ಸದ್ದು ಮಾಡುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಹಂತಗಳ ಮತದಾನ ಮುಗಿದು ಹೋಗಲಿದೆ.