Home Cover Story ಉತ್ತರ ಕರ್ನಾಟಕದ ಶಿಕ್ಷಣ ವ್ಯವಸ್ಥೆ; ಮತ್ತೆ ಎಚ್ಚರಿಸಿದ ಪಿಯುಸಿ ಫಲಿತಾಂಶ

ಉತ್ತರ ಕರ್ನಾಟಕದ ಶಿಕ್ಷಣ ವ್ಯವಸ್ಥೆ; ಮತ್ತೆ ಎಚ್ಚರಿಸಿದ ಪಿಯುಸಿ ಫಲಿತಾಂಶ

SHARE

ಲಕ್ಷಾಂತರ ವಿದ್ಯಾರ್ಥಿಗಳು-ಪೋಷಕರು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಮಾರ್ಚ್‌ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಶೇಕಡಾ 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಎಂದಿನಂತೆ ಈ ವರ್ಷವೂ ಬಾಲಕಿಯರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಮೊದಲ ಸ್ಥಾನ ಮತ್ತು ದಕ್ಷಿಣ ಕನ್ನಡ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. ಕಳೆದ ಬಾರಿ ಈ ಸ್ಥಾನಗಳು ಅದಲು ಬದಲಾಗಿದ್ದವು. ಇನ್ನು ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

ಫಲಿತಾಂಶ ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿದ್ದು ಅಧಿಕೃತ ಜಾಲತಾಣ http://karresults.nic.in/ ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು. ಕಾಲೇಜುಗಳಲ್ಲಿ ನಾಳೆ ಅಂದರೆ ಮಂಗಳವಾರ ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಬಾರಿಯ ಪರೀಕ್ಷೆಗೆ 6,71,653 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹೊಸಬರ ಪೈಕಿ 5,58,399 ವಿದ್ಯಾರ್ಥಿಗಳು ಹಾಜರಾಗಿದ್ದು ಇವರಲ್ಲಿ 3,83,521 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. 68.68ರಷ್ಟು ಫಲಿತಾಂಶ ಬಂದಿದೆ. ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 85,585 ವಿದ್ಯಾರ್ಥಿಗಳಲ್ಲಿ 23,425 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ. 27.37 ರಷ್ಟು ಫಲಿತಾಂಶ ದಾಖಲಾಗಿದೆ. ಖಾಸಗಿ ವಿದ್ಯಾರ್ಥಿಗಳ ಪೈಕಿ 27,669 ವಿದ್ಯಾರ್ಥಿಗಳಲ್ಲಿ 7,641 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 27.62ರಷ್ಟು ಫಲಿತಾಂಶ ಹೊರ ಬಿದ್ದಿದೆ.

ವಿಭಾಗವಾರು ನೋಡಿದಾಗ ವಿಜ್ಞಾನ ವಿಭಾಗದಿಂದ 2,17,766 ವಿದ್ಯಾರ್ಥಿಗಳು ಹಾಜರಾಗಿ 1,14,983 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.66.58ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 2,00,022 ವಿದ್ಯಾರ್ಥಿಗಳಲ್ಲಿ 1,01,073 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 50.53ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 2,53,865 ವಿದ್ಯಾರ್ಥಿಗಳಲ್ಲಿ 1,68,531 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ. 66.39ರಷ್ಟು ಫಲಿತಾಂಶ ದಾಖಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ 3,33,983 ವಿದ್ಯಾರ್ಥಿನಿಯರ ಪೈಕಿ 2,27,897 ವಿದ್ಯಾರ್ಥಿನಿಯರು ತೇರ್ಗಡೆಯಾಗಿ ಶೇ. 68.24ರಷ್ಟು ಫಲಿತಾಂಶ ಗಳಿಸಿದ್ದಾರೆ. 3,37,668 ಬಾಲಕರಲ್ಲಿ 1,86,691 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 55.29ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ನಗರ ಪ್ರದೇಶದಲ್ಲಿ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,20,657 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.61.38ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದ 1,49,262 ವಿದ್ಯಾರ್ಥಿಗಳಲ್ಲಿ 93,860 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದು ಶೇ.62.88ರಷ್ಟು ಫಲಿತಾಂಶ ದಾಖಲಾಗಿದೆ. ಈ ಮೂಲಕ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೇ. 1.5ರಷ್ಟು ಹೆಚ್ಚಿನ ಫಲಿತಾಂಶ ದಾಖಲಿಸಿದ್ದಾರೆ..

ಸರ್ಕಾರಿ ಕಾಲೇಜಿನ ಶೇ. 60.80ರಷ್ಟು ವಿದ್ಯಾರ್ಥಿಗಳಲ್ಲಿ ಪಾಸಾಗಿದ್ದರೆ, ಅನುದಾನಿತ ಕಾಲೇಜಿ ಶೇ. 65.37, ಅನುದಾನ ರಹಿತ ಕಾಲೇಜಿನ ಶೇ. 73.64, ವಿಭಜಿತ ಕಾಲೇಜಿನ ಶೇ. 72.46 ಮತ್ತು ಕಾರ್ಪೊರೇಷನ್‌ ಕಾಲೇಜಿನ ಶೇ. 62.60ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು ಜಾತಿವಾರು ಕೂಡ ಫಲಿತಾಂಶ ವರ್ಗೀಕರಣ ಮಾಡಲಾಗಿದ್ದು, ಪರಿಶಿಷ್ಟ ಜಾತಿಯ ಶೇ.51.97ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಪಂಗಡದ ಶೇ.53.34, ಪ್ರವರ್ಗ 1ರ ಶೇ.60.09, ಪ್ರವರ್ಗ 2ಎನ ಶೇ. 65.99, ಪ್ರವರ್ಗ 2ಬಿಯ ಶೇ. 57.07ರಷ್ಟು , ಪ್ರವರ್ಗ 3ಎನ ಶೇ.68.86, ಪ್ರವರ್ಗ 3 ಬಿನ ಶೇ.65.03 ಮತ್ತು ಸಾಮಾನ್ಯ ವರ್ಗದ ಶೇ.68.01ರಷ್ಟು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಮಾಧ್ಯಮವಾರು ನೋಡಿದಾಗ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ. 55.08ರಷ್ಟು ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡ ಶೇ. 66.90ರಷ್ಟು ಮಂದಿ ಪಾಸಾಗಿದ್ದಾರೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ,

 1. ಉಡುಪಿ – 92.20
 2. ದಕ್ಷಿಣ ಕನ್ನಡ – 90.91
 3. ಕೊಡಗು – 83.31
 4. ಉತ್ತರ ಕನ್ನಡ – 79.59
 5. ಚಿಕ್ಕಮಗಳೂರು – 76.42
 6. ಹಾಸನ – 75.19
 7. ಬಾಗಲಕೋಟೆ – 74.26
 8. ಬೆಂಗಳೂರು ದಕ್ಷಿಣ – 74.25
 9. ಶಿವಮೊಗ್ಗ – 73.54
 10. ಬೆಂಗಳೂರು ಗ್ರಾ. – 72.91
 11. ಬೆಂಗಳೂರು ಉತ್ತರ – 72.68
 12. ಚಾಮರಾಜನಗರ – 72.67
 13. ಚಿಕ್ಕಬಳ್ಳಾಪುರ – 70.11
 14. ವಿಜಯಪುರ – 68.55
 15. ಮೈಸೂರು – 68.55
 16. ಹಾವೇರಿ – 68.40
 17. ತುಮಕೂರು – 65.81
 18. ಕೋಲಾರ – 65.19
 19. ಬಳ್ಳಾರಿ – 64.87
 20. ಕೊಪ್ಪಳ – 63.15
 21. ಮಂಡ್ಯ – 63.08
 22. ದಾವಣಗೆರೆ – 62.53
 23. ಧಾರವಾಡ – 62.59
 24. ರಾಮನಗರ – 62.08
 25. ಚಿಕ್ಕೋಡಿ – 60.86
 26. ಗದಗ – 57.76
 27. ರಾಯಚೂರು – 56.73
 28. ಬೆಳಗಾವಿ – 56.18
 29. ಕಲಬುರಗಿ – 56.09
 30. ಬೀದರ್ – 55.78
 31. ಯಾದಗಿರಿ – 53.02
 32. ಚಿತ್ರದುರ್ಗ – 51.42

ವಿಭಾಗವಾರು ರ್‍ಯಾಂಕ್ ಗಳನ್ನು ನೋಡುವುದಾದರೆ,

ವಿಜ್ಞಾನ ವಿಭಾಗ:

ಪ್ರಥಮ ರ್‍ಯಾಂಕ್ : ರಜತ್ ಕಶ್ಯಪ್ ಎಸ್ – 594, ಕುಮಾರನ್ ಸಂಯುಕ್ತ ಕಾಲೇಜು, ಬೆಂಗಳೂರು.

ದ್ವಿತೀಯ ರ್‍ಯಾಂಕ್ : ದಿವ್ಯಾ ಕೆ – 593, ವಿದ್ಯಾಮಂದಿರ ಸ್ವತಂತ್ರ ಪದವಿಪೂರ್ವ ಕಾಲೇಜು, ಮಲ್ಲೇಶ್ವರಂ, ಬೆಂಗಳೂರು.

ತೃತೀಯ ರ್‍ಯಾಂಕ್ : ಪ್ರಿಯಾ ನಾಯಕ್ – 593, ಆರ್.ವಿ. ಪದವಿಪೂರ್ವ ಕಾಲೇಜು, ಬೆಂಗಳೂರು.

ಕಲಾ ವಿಭಾಗ:

ಪ್ರಥಮ ರ್‍ಯಾಂಕ್ : ಕುಸುಮ ಉಜ್ಜೈನಿ – 594, ಇಂಧು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು, ಬಳ್ಳಾರಿ.

ದ್ವಿತೀಯ ರ್‍ಯಾಂಕ್ : ಹೊಸಮನಿ ಚಂದ್ರಪ್ಪ – 591, ಇಂಧು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು, ಬಳ್ಳಾರಿ.

ತೃತೀಯ ರ್‍ಯಾಂಕ್ : ನಾಗರಾಜು – 591, ಇಂಧು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು, ಬಳ್ಳಾರಿ.

ವಾಣಿಜ್ಯ ವಿಭಾಗ

ಪ್ರಥಮ ರ್‍ಯಾಂಕ್ : ಆಲ್ವಿತಾ ಆನ್ಸಿಲ್ಲಾ ಡಿಸೋಜ – 596, ಆಳ್ವಾಸ್ ಮಹಿಳಾ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ.

ದ್ವಿತೀಯ ರ್‍ಯಾಂಕ್ : ಶ್ರೀಕೃಷ್ಣ ಶರ್ಮ ಕೆ – 596, ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ದಕ್ಷಿಣ ಕನ್ನಡ.

ತೃತೀಯ ರ್‍ಯಾಂಕ್ : ಶ್ರೇಯ ಶೆಣೈ – 595, ಕೆನರಾ ಪಿಯು ಕಾಲೇಜು, ಕೋಡಿಬೈಲ್, ಮಂಗಳೂರು.

ನೂರಕ್ಕೆ ನೂರು ಫಲಿತಾಂಶ:

2018-19ನೇ ಸಾಲಿನ ದ್ವತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 80 ಕಾಲೇಜುಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿವೆ. ಇದರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು- 15, ಅನುದಾನಿತ ಪದವಿಪೂರ್ವ ಕಾಲೇಜು – 01, ಅನುದಾನ ರಹಿತ ಪದವಿಪೂರ್ವ ಕಾಲೇಜು – 63, ವಿಭಜಿತ ಪದವಿಪೂರ್ವ ಕಾಲೇಜು – 01 ಸೇರಿದೆ.

ಶೂನ್ಯ ಫಲಿತಾಂಶ:

ಒಟ್ಟು 98 ಕಾಲೇಜುಗಳು ಸೊನ್ನೆ ಸುತ್ತಿದ್ದು, ಇದರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು – 03, ಅನುದಾನಿತ ಪದವಿಪೂರ್ವ ಕಾಲೇಜು – 01, ಅನುದಾನ ರಹಿತ ಪದವಿಪೂರ್ವ ಕಾಲೇಜು – 94 ಸೇರಿವೆ.

ಶ್ರೇಣಿ:

ವಿದ್ಯಾರ್ಥಿಗಳು ಪಡೆದುಕೊಂಡ ಶ್ರೇಣಿಗಳನ್ನು ನೋಡುವುದಾದರೆ 54,823 ವಿದ್ಯಾರ್ಥಿಗಳು ಶೇ. 85ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕ ಪಡೆದುಕೊಂಡಿದ್ದಾರೆ. 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 80,357 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 52,106 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಮರು ಮೌಲ್ಯ ಮಾಪನ ಶುಲ್ಕ ವಿವರ:

ಸಿಕ್ಕಿರುವ ಅಂಕಗಳಲ್ಲಿ ತಕರಾರು ಹೊಂದಿರುವವರು ಮರು ಮೌಲ್ಯಮಾಪನಕ್ಕೆ ಮತ್ತು ಉತ್ತರ ಪತ್ರಿಕೆಯ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆಯ ಸ್ಕಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಕೆ ಏ. 17 ರಿಂದ ಆರಂಭವಾಗಲಿದ್ದು ಏಪ್ರಿಲ್‌ 29ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್‍ಲೌಡ್‍ಗೆ ಏ. 27 ರಿಂದ ಮೇ 6 ರವರೆಗೆ ಕಾಲವಕಾಶವಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಏಪ್ರಿಲ್‌ 29ರಿಂದ ಮೇ 8ರವರೆಗೆ ಅವಕಾಶವಿದೆ.

ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ವಿದ್ಯಾರ್ಥಿಗಳು 530 ರೂಪಾಯಿ ಪಾವತಿಸಬೇಕಿದ್ದರೆ, ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂಪಾಯಿಗಳನ್ನು ನೀಡಬೇಕಿದೆ.

ಚಿತ್ರ ಕೃಪೆ: ಒನ್‌ಇಂಡಿಯಾ