Home Cover Story ಶತಕೋಟಿ ವೀರರ ಸಿಎಂ ಗಾದಿ ಕನಸು: ಲಿಂಗಾಯತ ಧರ್ಮ & ಕಾಂಗ್ರೆಸ್‌ನೊಳಗಿನ ಕಿತ್ತಾಟ

ಶತಕೋಟಿ ವೀರರ ಸಿಎಂ ಗಾದಿ ಕನಸು: ಲಿಂಗಾಯತ ಧರ್ಮ & ಕಾಂಗ್ರೆಸ್‌ನೊಳಗಿನ ಕಿತ್ತಾಟ

SHARE

‘ಅವನೇನು ಮೇಲಿಂದ ಉದುರಿ ಬಿದ್ದಿದ್ದಾನಾ?’… ಇದು ರಾಜ್ಯದ ಗೃಹ ಸಚಿವ ಎಂ. ಬಿ. ಪಾಟೀಲ್ ತನ್ನ ಸಹೋದ್ಯೋಗಿ, ಸಚಿವ ಡಿ. ಕೆ. ಶಿವಕುಮಾರ್ ಕುರಿತು ಶನಿವಾರ ಆಡಿದ ಮಾತುಗಳು ಸದ್ಯ ಸುದ್ದಿಕೇಂದ್ರದಲ್ಲಿವೆ.

ಲಿಂಗಾಯತ ಧರ್ಮದ ವಿಚಾರದಲ್ಲಿ ಈ ಇಬ್ಬರು ನಾಯಕರ ನಡುವಿನ ಭಿನ್ನ ನಿಲುವು ಈಗ ವೈಯಕ್ತಿಕ ಮಟ್ಟಕ್ಕೆ ಇಳಿದ ಹಾಗೆ ಕಾಣಿಸುತ್ತಿದೆ.

ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹಾಗೂ ಅಂದಿನ ಸಿಎಂ ಸಿದ್ದರಾಮಯ್ಯ, ವೀರಶೈವರಿಂದ ಲಿಂಗಾಯತರನ್ನು ಬೇರ್ಪಡಿಸುವ ಪ್ರತ್ಯೇಕ ಧರ್ಮ ಸ್ಥಾನಮಾನದ ವರದಿಗೆ ಒಪ್ಪಿಗೆ ನೀಡಿದ್ದರು. ಅದಕ್ಕೆ ಅಂದಿನ ಸಂಪುಟ ಕೂಡ ಹಸಿರು ನಿಶಾನೆ ತೋರಿಸಿತ್ತು. ಸಂಪುಟದಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಎಂ. ಬಿ. ಪಾಟೀಲ್ ಸದಸ್ಯರಾಗಿದ್ದರು.

ಅವತ್ತು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನದ ವಿಚಾರದಲ್ಲಿ ಕಾಂಗ್ರೆಸ್ ತೆಗೆದುಕೊಂಡಿದ್ದ ನಿಲುವಿನಿಂದ ರಾಜಕೀಯ ಬೆಳೆಯೊಂದನ್ನು ನಿರೀಕ್ಷಿಸಲಾಗಿತ್ತು.

ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಸಮುದಾಯ ವೀರಶೈವ- ಲಿಂಗಾಯತರ ನಡುವೆ ಬಿರುಕು ಮೂಡಿದರೆ ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತೋ ಅಲ್ಲವೋ, ಆದರೆ ಇದೇ ಮತಬ್ಯಾಂಕ್ ನಂಬಿಕೊಂಡಿರುವ ಬಿಜೆಪಿಗೆ ನಷ್ಟವಾಗುತ್ತೆ ಎಂಬುದು ಒಂದು ಲೆಕ್ಕಾಚಾರವಾಗಿತ್ತು. ಇದರ ಜತೆಗೆ ವೀರಶೈವ- ಲಿಂಗಾಯತ ಸಮುದಾಯದಲ್ಲಿ ರಾಮಕೃಷ್ಣ ಹೆಗಡೆ ನಂತರ ಪ್ರಭಾವಿ ನಾಯಕರಾಗಿ ಬೆಳೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನಂಬಿಕೊಂಡಿರುವ- ಈ ಕಾರಣಕ್ಕೇ ಸಿಎಂ ಗಾದಿಯನ್ನು ಆಗಾಗ್ಗೆ ಹತ್ತಿಳಿಯುವ- ಅಚಲ ಬೆಂಬಲದ ನೆಲೆಯನ್ನು ಕಳೆದುಕೊಳ್ಳುತ್ತಾರೆ ಎಂಬುದು ಮತ್ತೊಂದು ತರ್ಕವಾಗಿತ್ತು.

ಇಂತಹ ರಾಜಕೀಯ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಅಂದಿನ ಸರಕಾರದ ಸಂಪುಟ 2018ರ ಮಾರ್ಚ್‌ ತಿಂಗಳಿನಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಅಂಗೀಕರಿಸಿತು. ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಕಳಿಸಲು ತೀರ್ಮಾನ ತೆಗೆದುಕೊಂಡಿತು. ಇದು ಅದೇ ವರ್ಷ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಲಾಭ ತಂದು ಕೊಡುತ್ತದೆ ಎಂದು ಭಾವಿಸಲಾಯಿತು.

“ಅವತ್ತಿನ ಸರಕಾರ ಅಗತ್ಯವಾಗಿದ್ದ ಶಿಫಾರಸ್ಸೊಂದನ್ನು ಮಾಡಿತ್ತು. ಆದರೆ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ಸಂಪುಟ ತೆಗೆದುಕೊಂಡ ತೀರ್ಮಾನ ಪರಿಣಾಮಕಾರಿಯಾಗಿ ಜನರಿಗೆ ತಲುಪಲಿಲ್ಲ. ಹೀಗಿದ್ದರೂ ಲಿಂಗಾಯತರ ಪ್ರಾಬಲ್ಯ ಇರುವ ಬೆಳಗಾವಿ ಜಿಲ್ಲೆಯಲ್ಲಿ 6 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದುಕೊಂಡಿತು. ಬಾಗಲಕೋಟೆಯಲ್ಲಿ 3 ಸ್ಥಾನದಿಂದ 4ಕ್ಕೆ ಏರಿಕೆಯಾಯಿತು. ಆದರೆ ಪ್ರತ್ಯೇಕ ಲಿಂಗಾಯತ ಹೋರಾಟದ ಮುಂಚೂಣಿ ನಾಯಕರು ಸೋತು ಹೋದರು. ಇದು ಗೆದ್ದ ಸ್ಥಾನಗಳಿಗಿಂತ ದೊಡ್ಡ ಪರಿಣಾಮ ಬೀರಿತು,” ಎನ್ನುತ್ತಾರೆ ಶಿವಾನಂದ ಮೆತ್ಯಾಲ್.

ಶಿವಾನಂದ ಮೆತ್ಯಾಲ್ ಯುವ ಪತ್ರಕರ್ತ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ತೊಡಗಿಸಿಕೊಂಡವರು. ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರತಿ ಮುದ್ರಿತವಾಗುವ ‘ಲಿಂಗಾಯತ ಕ್ರಾಂತಿ’ ಎಂಬ ವಾರ ಪತ್ರಿಕೆಯ ಸಂಪಾದಕರು.

ಶಿವಾನಂದ ಹೇಳುವಂತೆ ಕಾಂಗ್ರೆಸ್‌ಗೆ ಒಂದಷ್ಟು ಸ್ಥಾನಗಳ ಲಾಭವಾದರೂ, ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಧಾರವಾಡ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಸೋತು ಹೋದರು. ಕುಲಕರ್ಣಿ ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರೂ ಆಗಿರುವವರು. ಜತೆಗೆ, ಶರಣ್ ಪ್ರಕಾಶ್ ಪಾಟೀಲ್, ಬಸವರಾಜ ರಾಯರೆಡ್ಡಿ ತರಹದ ಹೋರಾಟದ ಮುಂಚೂಣಿ ನಾಯಕರು ಸೋತು ಹೋದರು. ಅಪವಾದ ಎಂಬಂತೆ ಎಲ್ಲದರ ನಡುವೆಯೂ ಗೆದ್ದು ಬಂದವರು ಎಂ. ಬಿ. ಪಾಟೀಲ್.

ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿದ್ದ ವರದಿ ಅಂಗೀಕಾರಗೊಳಿಸಿದ್ದರಿಂದಾದ ರಾಜಕೀಯ ಪರಿಣಾಮಗಳ ಸ್ಪಷ್ಟತೆ ಸಿಗುವ ಮುನ್ನವೇ ಪಕ್ಷದ ನಾಯಕ ಡಿ. ಕೆ. ಶಿವಕುಮಾರ್ ‘ನಮ್ಮಿಂದ ತಪ್ಪಾಯಿತು’ ಎಂದರು. ಫಲಿತಾಂಶ ಹೊರಬಿದ್ದ ನಾಲ್ಕು ತಿಂಗಳ ಅಂತರದಲ್ಲಿ ಒಮ್ಮೆ ಮಾಧ್ಯಮಗಳ ಜತೆ ಬೆಂಗಳೂರಿನ ಸದಾಶಿವನಗರದ ತಮ್ಮ ಮನೆಯಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, “ನಾವು ಮಾಡಿರುವ ತಪ್ಪಿನ ಅರಿವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕೈ ಹಾಕಬಾರದಿತ್ತು,” ಎಂಬ ದಾಳ ಉರುಳಿಸಿದರು.

ಈ ಮೂಲಕ ರಾಜಕೀಯ ಹಿತಾಸಕ್ತಿಯಿಂದ ಬೆಂಬಲಿಸಿದ ತಾತ್ವಿಕ ಹೋರಾಟವನ್ನು ಡಿ. ಕೆ. ಶಿವಕುಮಾರ್ ಕಡೆಗಣಿಸಿದರು ಮತ್ತು ಅದೇ ವೇಳೆ ಇನ್ನೂ ಪ್ರತ್ಯೇಕ ಧರ್ಮ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ತಮ್ಮದೇ ಪಕ್ಷದ ನಾಯಕರ ಓಟಕ್ಕೆ, ವಿಶೇಷವಾಗಿ ಎಂ. ಬಿ. ಪಾಟೀಲ್ ರಾಜಕೀಯ ಕನಸುಗಳಿಗೆ ಕಡಿವಾಣ ಹಾಕುವ ಮುನ್ಸೂಚನೆ ನೀಡಿದರು. ಆಗಿನ್ನೂ ಪಾಟೀಲ್‌ ಗೃಹ ಸಚಿವರಾಗಿರಲಿಲ್ಲ.

ಡಿ. ಕೆ. ಶಿವಕುಮಾರ್ ಕಡೆಯಿಂದ ಮೊದಲ ಬಾರಿಗೆ ಹೇಳಿಕೆ ಹೊರಬಿದ್ದಾಗ ಸಹಜವಾಗಿಯೇ ಒಂದಷ್ಟು ಕಂಪನಗಳನ್ನು ಸೃಷ್ಟಿಸಿತು. ಇಷ್ಟಕ್ಕೂ ಶಿವಕುಮಾರ್ ಯಾಕೆ ಲಿಂಗಾಯತರ ವಿಚಾರದಲ್ಲಿ ಹೇಳಿಕೆ ನೀಡಲು ಆಗಾಗ್ಗೆ ಉತ್ಸುಕತೆ ತೋರಿಸುತ್ತಾರೆ? ಇಂತಹದೊಂದು ಪ್ರಶ್ನೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದ ಮಾದರಿಯ ಉತ್ತರವೊಂದಿದೆ.

“ಡಿ. ಕೆ. ಶಿವಕುಮಾರ್ ರಾಜ್ಯದ ಇನ್ನೊಂದು ಪ್ರಬಲ ಒಕ್ಕಲಿಗ ಸಮಯದಾಯಕ್ಕೆ ಸೇರಿದವರು. ಒಕ್ಕಲಿಗ ರಾಜಕೀಯ ಮುಖಂಡರಿಗೆ ಲಿಂಗಾಯತರ ಬಗ್ಗೆ ವೀರಶೈವ ನಾಯಕರ ಕುರಿತು ಮೊದಲಿನಿಂದಲೂ ಅಸೂಯೆ ಇದೆ. ಪ್ರತಿಸ್ಫರ್ಧಿಗಳು ಎಂಬಂತೆ ನೋಡುತ್ತಾರೆ. ಹಿಂದೆ ಎಚ್. ಡಿ. ದೇವೇಗೌಡ ಹಾವನೂರು ವರದಿ ಜಾರಿ ವಿಚಾರದಲ್ಲಿ ಲಿಂಗಾಯತರಿಗೆ ಮೋಸ ಮಾಡಿದರು. ಇದೀಗ ಡಿ. ಕೆ. ಶಿವಕುಮಾರ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ. ಲಿಂಗಾಯತ ಧರ್ಮದ ಹೋರಾಟವನ್ನು ಕಡೆಗಣಿಸುವ ಮೂಲಕ ಅದರ ಮುಂಚೂಣಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಅಲೋಚನೆ ಅವರಲ್ಲಿದೆ,” ಎಂದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ತೊಡಗಿಸಿಕೊಂಡವರು ಜಾತಿ ರಾಜಕಾರಣದ ಆಯಾಮವೊಂದನ್ನು ಮುಂದಿಡುತ್ತಾರೆ.

ಹಾಗಾದರೆ, ಇದು ಕೇವಲ ಲಿಂಗಾಯತ ವರ್ಸಸ್‌ ಒಕ್ಕಲಿಗ ರಾಜಕಾರಣದ ಅಭಿವ್ಯಕ್ತಿಯಾ?

ಲಿಂಗಾಯತ ಪ್ರತ್ಯೇಕ ಧರ್ಮ ತಾತ್ವಿಕ ಹೋರಾಟವೇ ಆದರೂ ಅದರಿಂದ ಸ್ಪಷ್ಟ ರಾಜಕೀಯ ಲಾಭವೊಂದಿದೆ. ಅದನ್ನು ಪಡೆದುಕೊಳ್ಳುವ ಹಾದಿಯಲ್ಲಿರುವವರು ಎಂ. ಬಿ. ಪಾಟೀಲ್. “ಕರ್ನಾಟಕ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಪಾಟೀಲ್‌ರಿಗೆ ಲಿಂಗಾಯತರ ತಾತ್ವಿಕ ಹೋರಾಟದ ಬಗ್ಗೆ ಬದ್ಧತೆ ಇದೆ. ಅದು ಅವರಿಗೆ ನೈತಿಕ ಬಲ ಕೂಡ,’’ ಎನ್ನುತ್ತಾರೆ ಎಂ. ಬಿ. ಪಾಟೀಲ್ ಆಪ್ತರೊಬ್ಬರು.

ಇನ್ನೊಂದು ಕಡೆ ಸದ್ಯ ಮಂಡ್ಯದಿಂದ ಹಿಡಿದು ಶಿವಮೊಗ್ಗದವರೆಗೆ ಒಕ್ಕಲಿಗರ ಪ್ರಭಾವ ಇರುವ ಭಾಗಗಳಲ್ಲಿ ‘ಒಕ್ಕಲಿಗ ನಾಯಕ’ ಎಂಬ ಪಟ್ಟಕ್ಕಾಗಿ ಬಡಿದಾಡುತ್ತಿರುವ ಡಿ. ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ.

“ಇವತ್ತಲ್ಲ ನಾಳೆ ಈ ರಾಜ್ಯದ ಚುಕ್ಕಾಣಿ ಹಿಡಯಬೇಕು ಎಂಬ ಗುರಿಯನ್ನು ಇಟ್ಟುಕೊಂಡೇ ಡಿ. ಕೆ. ಶಿವಕುಮಾರ್ ಹಿಂದೆ ತಾವೇ ವಿರೋಧಿಸಿದ್ದ ದೇವೇಗೌಡರ ಕುಟುಂಬದ ಜತೆ ನಿಂತಿದ್ದಾರೆ. ನಾಳೆ ಡಿ. ಕೆ. ಶಿವಕುಮಾರ್ ಗೌಡ ಕುಟುಂಬದ ವಿರುದ್ಧ ತಿರುಗಿ ಬೀಳುತ್ತಾರೆ. ಆ ದಿನಗಳು ದೂರವಿಲ್ಲ. ಅವತ್ತು ಗೌಡರ ಕುಟುಂಬದ ವಿರುದ್ಧ ತಿರುಗಿ ಬಿದ್ದ ಒಕ್ಕಲಿಗರ ಹೊಸ ನಾಯಕ ಎಂದು ಕರೆಸಿಕೊಳ್ಳುವ ನೀಲಿನಕ್ಷೆಯನ್ನು ಶಿವಕುಮಾರ್ ಹಾಕಿಕೊಂಡಿದ್ದಾರೆ,” ಎನ್ನುತ್ತಾರೆ ಡಿ. ಕೆ. ಶಿವಕುಮಾರ್ ಅವರ ಇತ್ತೀಚಿನ ನಡೆಗಳನ್ನು ಗಮನಿಸುತ್ತಿರುವ ಹಿರಿಯ ಪತ್ರಕರ್ತರೊಬ್ಬರು.

ಒಂದು ವೇಳೆ, ಒಕ್ಕಲಿಗ ಸಮುದಾಯದ ನೆಲೆಯನ್ನು ವೇದಿಕೆಯಾಗಿ ಬಳಸಿಕೊಂಡು ಸಿಎಂ ಸ್ಥಾನದ ಹಾದಿಯಲ್ಲಿ ನಡೆದರೂ, ಪಕ್ಕದಲ್ಲಿ ಇನ್ನೊಂದು ಪ್ರಬಲ ಸಮುದಾಯದ ಆಕಾಂಕ್ಷಿ ಇದ್ದರೆ ಸಮಸ್ಯೆ ಸಹಜವಾಗಿಯೇ ಸೃಷ್ಟಿಯಾಗುತ್ತದೆ. ಹೀಗಿರುವಾಗ, ಆಗಾಗ್ಗೆ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನದ ಹೋರಾಟ ವಿಫಲ ಎನ್ನುವ ಮೂಲಕ ಡಿ. ಕೆ. ಶಿವಕುಮಾರ್ ಕೈಲಿರುವ ದಾಳವೊಂದನ್ನು ಉರುಳಿಸುತ್ತಿದ್ದಾರೆ.

ಎಂ. ಬಿ. ಪಾಟೀಲ್ ಈ ಬಾರಿ ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ ಮತ್ತು ಅದು ಸಾರ್ವಜನಿಕವಾಗುವಂತೆಯೂ ನೋಡಿಕೊಂಡಿದ್ದಾರೆ.

ಹೀಗಾಗಿ ಇದು ಇಬ್ಬರು ಪ್ರಬಲ ನಾಯಕರ ಭವಿಷ್ಯದ ರಾಜಕೀಯ ನಡೆಗಳಿಗೆ ನಡೆಸುತ್ತಿರುವ ಹೋರಾಟದ ಭಾಗ ಅಷ್ಟೆ. ಅದಕ್ಕಾಗಿ ಒಂದು ತಾತ್ವಿಕ ಹೋರಾಟ, ಜಾತಿಯ ನೆಲೆಗಳನ್ನು ಇಬ್ಬರೂ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಇವುಗಳ ಜತೆಗೆ ಮುಖ್ಯಮಂತ್ರಿಯಾಗಲು ಸಾವಿರಾರು ಕೋಟಿ ರೂಪಾಯಿಗಳನ್ನು ಸಂದಾಯ ಮಾಡುವ ತಾಕತ್ತೂ ಕೂಡ ಇರಬೇಕು ಎಂಬುದನ್ನು ರಾಜ್ಯದಲ್ಲಿ ನಡೆದ ಎರಡು ಡೈರಿ ಪ್ರಕರಣಗಳು ತಿಳಿಸಿವೆ. ಅಂದಹಾಗೆ ಡಿ. ಕೆ. ಶಿವಕುಮಾರ್ ಘೋಷಿತ ಆಸ್ತಿ 840 ಕೋಟಿಯಾಗಿದ್ದರೆ, ಎಂ. ಬಿ. ಪಾಟೀಲ್‌ ಘೋಷಿತ ಆಸ್ತಿ 104 ಕೋಟಿ ರೂಪಾಯಿಯಷ್ಟಿದೆ.