Home Cover Story ಅಂಬಾನಿ ವಿರುದ್ಧ ಫ್ರೆಂಚ್‌ ಪತ್ರಿಕೆ ಬಾಂಬ್‌; ರಫೇಲ್‌ ಡೀಲ್‌ ಬೆನ್ನಲ್ಲೇ 1,100 ಕೋಟಿ ತೆರಿಗೆ ಮನ್ನಾ!

ಅಂಬಾನಿ ವಿರುದ್ಧ ಫ್ರೆಂಚ್‌ ಪತ್ರಿಕೆ ಬಾಂಬ್‌; ರಫೇಲ್‌ ಡೀಲ್‌ ಬೆನ್ನಲ್ಲೇ 1,100 ಕೋಟಿ ತೆರಿಗೆ ಮನ್ನಾ!

SHARE

ರಫೇಲ್‌ ಡೀಲ್‌ ಸಂಬಂಧ ಭಾರತದಲ್ಲಿ ಹಲವು ಆರೋಪಗಳಿಗೆ ಗುರಿಯಾಗಿರುವ ಉದ್ಯಮಿ ಅನಿಲ್‌ ಅಂಬಾನಿ ಇದೀಗ ಫ್ರಾನ್ಸ್‌ನಲ್ಲೂ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.

ವಿವಾದಿತ ರಫೇಲ್‌ ಡೀಲ್‌ ಘೋಷಣೆಯಾದ ತಿಂಗಳಲ್ಲೇ ಫ್ರಾನ್ಸ್‌ ಸರಕಾರ ಅಂಬಾನಿಗೆ ಸೇರಿದ ಕಂಪನಿಯ ದೊಡ್ಡ ಮೊತ್ತದ ತೆರಿಗೆ ಮನ್ನಾ ಮಾಡಿದೆ ಎಂಬ ಸ್ಫೋಟಕ ವಿಚಾರವನ್ನು ಖ್ಯಾತ ಫ್ರೆಂಚ್‌ ಪತ್ರಿಕೆ ‘ಲೆ ಮಾಂಡೆ’ ಹೊರಹಾಕಿದೆ.

‘ರಿಲಯನ್ಸ್‌ ಫ್ಲಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌’ ಎಂಬ ಕಂಪನಿ ವಿರುದ್ಧ ಫ್ರಾನ್ಸ್‌ನ ಸಂಸ್ಥೆಗಳು 2007 ಮತ್ತು 2012ರಲ್ಲಿ ತನಿಖೆಯೊಂದನ್ನು ಆರಂಭಿಸಿದ್ದರು. ಈ ತನಿಖೆ ಸಂಬಂಧ ಅಲ್ಲಿನ ತೆರಿಗೆ ಇಲಾಖೆ 60 ಮಿಲಿಯನ್‌ ಯೂರೋ (470 ಕೋಟಿ ರೂ.) ಮತ್ತು 91 ಮಿಲಿಯನ್‌ ಯೂರೋ (712 ಕೋಟಿ ರೂ.) ಗಳ ಎರಡು ದಂಡದ ನೋಟಿಸ್‌ಗಳನ್ನು ಕಂಪನಿಗೆ ನೀಡಿತ್ತು.

ಆರಂಭದಲ್ಲಿ ಈ ತೆರಿಗೆಯನ್ನು ರದ್ದುಗೊಳಿಸುವಂತೆ ಕೋರಿ ರಿಲಯನ್ಸ್‌ ತೆರಿಗೆ ಇಲಾಖೆಯನ್ನು ಕೋರಿಕೊಂಡಿತ್ತು. ಆದರೆ ಇದಕ್ಕೆ ಅಲ್ಲಿನ ತೆರಿಗೆ ಇಲಾಖೆ ನಿರಾಕರಿಸಿತ್ತು. ಬರೋಬ್ಬರಿ ಸುಮಾರು 1,100 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ತೆರಿಗೆ ಇದಾಗಿದ್ದರಿಂದ ಈ ತೀರ್ಮಾನಕ್ಕೆ ಅದು ಬಂದಿತ್ತು. ಬದಲಿಗೆ ಸಣ್ಣ ಮೊತ್ತದ ದಂಡ ಕಟ್ಟಿ ರಾಜಿಗೆ ಕಂಪನಿ ಮುಂದಾಗಿತ್ತು. ಆಗಲೂ ಇದಕ್ಕೆ ಒಪ್ಪದ ತೆರಿಗೆ ಇಲಾಖೆ, ರಫೇಲ್‌ ಡೀಲ್‌ ನಂತರ ಇದಕ್ಕೆ ಒಪ್ಪಿಕೊಂಡಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಇದೆಲ್ಲಾ ಆರಂಭವಾಗದ್ದು ಹೀಗೆ; 2007 ರ ಏಪ್ರಿಲ್‌ನಿಂದ ಮಾರ್ಚ್‌ 2010ರವರೆಗಿನ ರಿಲಯನ್ಸ್‌ನ ತೆರಿಗೆಯನ್ನು ಲೆಕ್ಕಾಚಾರ ಹಾಕಿದ್ದ ಫ್ರಾನ್ಸ್‌ನ ತೆರಿಗೆ ಅಧಿಕಾರಿಗಳು ಕಂಪನಿಗೆ ಮೊದಲ ನೋಟಿಸ್‌ನ್ನು ನೀಡಿದ್ದರು. ಈ ನೋಟಿಸ್‌ ಪ್ರಕಾರ 60 ಮಿಲಿಯನ್‌ ಯೂರೋ ದಂಡ ನೀಡುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಕಂಪನಿ ನಿರಕಾರಿಸಿತು.

2010-12ರ ನಡುವೆ ನಡೆದ ಇನ್ನೊಂದು ತನಿಖೆಯಲ್ಲಿ ‘ರಿಲಯನ್ಸ್‌ ಫ್ಲಾಕ್‌ ಅಟ್ಲಾಂಟಿಕ್‌ ಫ್ರಾನ್ಸ್‌’ಗೆ ಬಡ್ಡಿ, ದಂಡ ಸೇರಿ 90 ಮಿಲಿಯನ್‌ ಯೂರೋ ದಂಡ ನೀಡುವಂತೆ ಎರಡನೇ ನೋಟಿಸ್‌ ಜಾರಿ ಮಾಡಲಾಯಿತು.

ಈ ನೋಟಿಸ್‌ ನೋಡಿ ಕಂಪನಿ 2013ರಲ್ಲಿ 7.6 ಮಿಲಿಯನ್‌ ಯೂರೋ ಹಣ ನೀಡಿ ವಿವಾದಕ್ಕೆ ಅಂತ್ಯ ಹಾಡಲು ಹೊರಟಿತ್ತು. ಆದರೆ ಇಷ್ಟು ಕಡಿಮೆ ಮೊತ್ತಕ್ಕೆ ಫ್ರಾನ್ಸ್‌ ಸರಕಾರ ಒಪ್ಪಿಕೊಳ್ಳಲಿಲ್ಲ.

ಇವೆಲ್ಲದರ ನಡುವೆ 2015ರ ಜನವರಿಯಲ್ಲಿ ಕಂಪನಿಯ ಅಡಿಟರ್‌, ‘ಕಂಪನಿಯು ಫ್ರೆಂಚ್‌ ಲೆಕ್ಕಪರಿಶೋಧನೆಯ ನಿಯಮಗಳು ಮತ್ತು ತತ್ವಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ಖಾತರಿಪಡಿಸಲು ಸಾಧ್ಯವಿಲ್ಲ’ ಎಂದು ಷರಾ ಬರೆದಿದ್ದರು.

ರಾಜಿಗೆ ಯತ್ನ:

2015ರ ಸೆಪ್ಟೆಂಬರ್‌ನಲ್ಲಿ ಈ ವರದಿಯನ್ನು ಬದಲಾಯಿಸಲಾಯಿತು. ಕಂಪನಿಗೆ ಬಂದ ಹೊಸ ಆಡಿಟರ್‌ ಫ್ಯಾಬ್ರಿಸ್‌ ಅಬ್ಟಾನ್‌, ಅಲ್ಲಿನ ಸರಕಾರದ ಜತೆ ರಾಜಿ ಪಂಚಾಯಿತಿಕೆಗೆ ಹೊಸ ಸೂತ್ರವೊಂದನ್ನು ಮುಂದಿಟ್ಟರು. ಅದರ ಪ್ರಕಾರ ಪರಿಹಾರ ರೂಪದಲ್ಲಿ 7.5 ರಿಂದ 8 ಮಿಲಿಯನ್‌ ಯೂರೋ ಮೊತ್ತದ ಒಪ್ಪಂದವನ್ನು ತೆರಿಗೆ ಇಲಾಖೆ ಜತೆ ಮಾಡಿಕೊಳ್ಳಲಾಯಿತು.

“ಇದರಿಂದ 2008 ರಿಂದ 2014ರ ಅವಧಿಯ ಕಂಪನಿ ತೆರಿಗೆಯನ್ನು 7.3 ಮಿಲಿಯನ್‌ ಯೂರೋಗಳಿಗೆ ನಿಗದಿಪಡಿಸಲಾಯಿತು. ಇದರಿಂದ ಅನಿಲ್‌ ಅಂಬಾನಿಯ ಕಂಪನಿಗೆ 143.7 ಮಿಲಿಯನ್‌ ಯೂರೋಗಳಷ್ಟು ತೆರಿಗೆ ಉಳಿತಾಯವಾಯಿತು,” ಎಂಬುದಾಗಿ ‘ಲೆ ಮಾಂಡೆ’ ವರದಿ ಮಾಡಿದೆ.

‘ಅಂಬಾನಿಗೆ ಆಪ್ತರಾಗಿರುವ ಅನಾಮಧೇಯ ಮೂಲ’ಗಳನ್ನು ಉಲ್ಲೇಖಿಸಿ ವರದಿ ಮಾಡಿದ ಲೆ ಮಾಂಡೆ, ‘ಕಂಪನಿ ಎಮ್ಯಾನುಯೆಲ್‌ ಮ್ಯಾಕ್ರನ್‌ ಜತೆ ಬರ್ಸಿಯಲ್ಲಿರುವ ಅವರ ಕಚೇರಿಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ಪರಿಹಾರ ಕಂಡುಕೊಂಡಿತ್ತು.” ಅಂದ ಹಾಗೆ ಹಾಲಿ ಅಧ್ಯಕ್ಷ ಮ್ಯಾಕ್ರಾನ್‌ ಅವತ್ತಿಗೆ ಹಣಕಾಸು ಮತ್ತು ಕೈಗಾರಿಕೆ ಸಚಿವರಾಗಿದ್ದರು.

ಈ ಕುರಿತು ‘ದಿ ವೈರ್‌’ಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್‌, “ಫ್ರಾನ್ಸ್‌ ತೆರಿಗೆ ಸಂಸ್ಥೆ ಕಂಪನಿಯನ್ನು ಪರಿಶೀಲನೆಗೆ ಒಳಡಪಡಿಸಿದ್ದ 2008-12ರ ಅವಧಿ 10 ವರ್ಷ ಹಿಂದಿನದು. ಅವತ್ತು ಕಂಪನಿ 20 ಕೋಟಿ ರೂಪಾಯಿಗಳ (2.7 ಮಿಲಿಯನ್‌ ಯೂರೋ) ನಷ್ಟ ಅನುಭವಿಸಿತ್ತು. ಇದೇ ಅವಧಿಗೆ ಫ್ರೆಂಚ್‌ ತೆರಿಗೆ ಇಲಾಖೆ 1,100 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆ ಇಟ್ಟಿತು. ಫ್ರಾನ್ಸ್‌ ತೆರಿಗೆ ಪಾವತಿ ಒಪ್ಪಂದದ ಪ್ರಕಾರ ಕಾನೂನಾತ್ಮಕವಾಗಿಯೇ ಅಂತಿಮ ಮೊತ್ತ 56 ಕೋಟಿ ರೂಪಾಯಿಗಳನ್ನು ಪಾವತಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ,” ಎಂದು ಹೇಳಿದೆ.

ಅನುಮಾನ ಹುಟ್ಟಿಸುವ ಸಮಯ-ಸಂದರ್ಭ:

ಆದರೆ ಈ ಪಾವತಿ ಒಪ್ಪಂದದ ಸಮಯ ಸಂದರ್ಭ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಲೆ ಮಾಂಡೆ ಪ್ರಕಾರ ಫೆಬ್ರವರಿ 2015 ರಿಂದ ಸೆಪ್ಟಂಬರ್‌ 2015ರ ಅವಧಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಇದೇ ಅವಧಿಯಲ್ಲಿ ರಫೇಲ್‌ ಡೀಲ್‌ ನಡೆದಿದೆ.

ಈ ತೆರಿಗೆ ಮನ್ನಾಕ್ಕೂ ರಪೇಲ್ ಡೀಲ್‌ಗೂ ಸಂಬಂಧ ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ಲೆ ಮಾಂಡೆ ಮುಂದಿಟ್ಟಿಲ್ಲ. ಆದರೆ ಅನಾಮಧೇಯ ಮೂಲಗಳ ಪ್ರಕಾರ ತುಂಬ ಸುದೀರ್ಘ ಕಾಲ ಈ ತೆರಿಗೆ ವಿವಾದದ ಕಡತ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿತ್ತು. ಹೀಗಿರುವಾಗ ಅತ್ಯಂತ ವೇಗವಾಗಿ ಈ ವಿವಾದ ಬಗೆಹರಿದಿದ್ದರ ಹಿಂದೆ ‘ರಾಜಕೀಯ ಸನ್ನಿವೇಶ’ ಕೆಲಸ ಮಾಡಿರುವ ಅನುಮಾನಗಳಿವೆ.