Home ಅಂತಾರಾಷ್ಟ್ರೀಯ ಸುಡಾನ್‌ನಲ್ಲಿ ‘ಸೇನಾ ಕ್ರಾಂತಿ’; ಮೋದಿ ಕೈ ಕುಲುಕಿದ್ದ ಅಧ್ಯಕ್ಷ ಬಂಧನ, ಸರಕಾರ ವಜಾ

ಸುಡಾನ್‌ನಲ್ಲಿ ‘ಸೇನಾ ಕ್ರಾಂತಿ’; ಮೋದಿ ಕೈ ಕುಲುಕಿದ್ದ ಅಧ್ಯಕ್ಷ ಬಂಧನ, ಸರಕಾರ ವಜಾ

SHARE

ಕ್ಷಿಪ್ರ ಸೇನಾ ಕ್ರಾಂತಿಗೆ ಗುರುವಾರ ಸುಡಾನ್‌ ಮತ್ತೆ ಸಾಕ್ಷಿಯಾಗಿದೆ.

ಅಧ್ಯಕ್ಷ ಓಮರ್‌ ಅಲ್‌ ಬಶೀರ್‌ರನ್ನು ಸೇನೆ ಬಂಧಿಸಿದ್ದು, ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ರಕ್ಷಣಾ ಸಚಿವರು ಟಿವಿ ವಾಹಿನಿ ಮೂಲಕ ಘೋಷಿಸಿದ್ದಾರೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸೇನೆ ನೇತೃತ್ವದ ಮಧ್ಯಂತರ ಸರಕಾರ ರಚನೆಯಾಗಲಿದೆ ಎಂದವರು ಮಾಹಿತಿ ನೀಡಿದ್ದಾರೆ.

“ಈಗಿರುವ ಆಡಳಿತವನ್ನು ಕಿತ್ತೊಗೆದು ಸುರಕ್ಷಿತ ಸ್ಥಳದಲ್ಲಿ ಅದರ ಮುಖ್ಯಸ್ಥರನ್ನು ಬಂಧಿಸಿಟ್ಟಿರುವ ಘೋಷಣೆಯನ್ನು ರಕ್ಷಣಾ ಸಚಿವನಾಗಿ ನಾನು ಮಾಡುತ್ತಿದ್ದೇನೆ,” ಎಂದು ಸಚಿವ ಅಹಮದ್‌ ಅವಾದ್‌ ಇಬನ್ ಔಫ್‌ ಮಿಲಿಟರಿ ಧಿರಿಸಿನಲ್ಲಿ ಸರಕಾರಿ ಭಾಷೆಯಲ್ಲಿ ತಿಳಿಸಿದ್ದಾರೆ.

ರಕ್ಷಣಾ ಸಚಿವ ಅಹಮದ್‌ ಅವಾದ್‌ ಇಬನ್ ಔಫ್‌.

“ಸುಡಾನ್ ಜನರಿಗೆ ಘನತೆಯಿಂದ ಬದುಕುವ ಅವಕಾಶ ನೀಡಲು ಜನರ ಪ್ರಾತಿನಿಧ್ಯದೊಂದಿಗೆ ಸಶಸ್ತ್ರ ಪಡೆಗಳು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿವೆ,” ಎಂಬುದನ್ನೂ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿ ಹೇರಿರುವ ಅವರು, ಇದೇ ಅವಧಿಯಲ್ಲಿ ರಾಷ್ಟ್ರವ್ಯಾಪಿ ಕದನ ವಿರಾಮ ಮತ್ತು ಸಂವಿಧಾನದ ಅಮಾನತಿನಲ್ಲಿರುತ್ತದೆ ಎಂದು ವಿವರಿಸಿದ್ದಾರೆ. ಜತೆಗೆ ಸುಡಾನ್ ವಾಯು ಮಾರ್ಗವನ್ನು 24 ಗಂಟೆಗಳ ಅಮಾನತಿನಲ್ಲಿ ಇಡಲಾಗಿದ್ದು ಮುಂದಿನ ಆದೇಶದವರೆಗೆ ಸುಡಾನ್‌ ಗಡಿ ಮುಚ್ಚಿರುತ್ತದೆ ಎಂದಿದ್ದಾರೆ.

1989ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಸುಡಾನ್‌ ಆಡಳಿತವನ್ನು ಕೈ ವಶ ಮಾಡಿಕೊಂಡಿದ್ದ ಬಶೀರ್‌ ಸುಮಾರು ಮೂರು ದಶಗಳ ಕಾಲ ದೇಶವನ್ನು ತಮ್ಮ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದರು.

1993ರಲ್ಲಿ ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದ ಬಶೀರ್‌ ವಿರುದ್ಧ ಡಿಸೆಂಬರ್‌ನಲ್ಲಿ ದೇಶವ್ಯಾಪಿ ಪ್ರತಿಭಟನೆ ಆರಂಭಗೊಂಡಿತ್ತು. ಸತತ ನಾಲ್ಕು ತಿಂಗಳ ಕಾಲ ಅವರನ್ನು ಹುದ್ದೆಯಿಂದ ಕಿತ್ತೆಸೆಯಲು ಹಿಂಸಾತ್ಮಕ ಹೋರಾಟ ನಡೆದಿತ್ತು. ಇದರಲ್ಲಿ ಸುಮಾರು 38ಕ್ಕೂ ಹೆಚ್ಚು ಜನರು ಅಸುನೀಗಿದ್ದರು.

ಇದೀಗ ಅವರನ್ನು ಸೇನೆ ಬಂಧಿಸುತ್ತಿದ್ದಂತೆ ಹತ್ತಾರು ಸಾವಿರ ಸುಡಾನ್‌ ಪ್ರಜೆಗಳು ರಾಜಧಾನಿ ಖರ್ತೋಮ್‌ನ ಬೀದಿಗೆ ಇಳಿದು ಬಶೀರ್‌ ವಿರೋಧ ಘೋಷಣೆಗಳನ್ನು ಕೂಗಿ,. ಹೊಸ ಆಡಳಿತದ ಘೋಷಣೆಯನ್ನು ಸಂಭ್ರಮಿಸಿದ್ದಾರೆ.

ಇದಕ್ಕೂ ಮೊದಲು ಗುರುವಾರ ಮುಂಜಾನೆ ಇಲ್ಲಿನ ಸೇನೆ ಪ್ರಮುಖ ಘೋಷಣೆಯೊಂದನ್ನು ಮಾಡುವುದಾಗಿ ತಿಳಿಸಿತ್ತು. ಕಳೆದ ಆರು ದಿನಗಳಿಂದ ಅಧ್ಯಕ್ಷರ ಅಧಿಕೃತ ನಿವಾಸವೂ ಆಗಿರುವ ಸೇನಾ ಕೇಂದ್ರ ಕಚೇರಿ ಹೊರಗೆ ಜನರು ಧರಣಿ ಕೂತು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸೇನೆಯ ಸೂಚನೆ ಹೊರಬೀಳುತ್ತಿದ್ದಂತೆ ಇಲ್ಲಿನ ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದು ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದರು.

ಅದರಂತೆ ಇದೀಗ ಹೊರ ಬಿದ್ದಿರುವ ಘೋಷಣೆಯಲ್ಲಿ ಅಧ್ಯಕ್ಷರನ್ನು ವಜಾ ಮಾಡಲಾಗಿದೆ ಮತ್ತು ಅವರನ್ನು ಬಂಧನಕ್ಕೆ ಗುರಿಪಡಿಸಲಾಗಿದೆ.

ಸೇನಾ ಕೇಂದ್ರ ಕಚೇರಿ ಹೊರಗೆ ಕಳೆದ 6 ದಿನಗಳಿಂದ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರು.

ಇದು ಸುಡಾನ್‌:

ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ತೈಲ ಸಂಪದ್ಭರಿತ ದೇಶವೇ ಸುಡಾನ್. ಹೆಸರಿಗೆ ಶ್ರೀಮಂತ ದೇಶವಾದರೂ ದೇಶದ ಒಂದು ಭಾಗದಲ್ಲಿ ಕಿತ್ತು ತಿನ್ನುವ ಬಡತನ. ಜನ ಹೊತ್ತಿನ ತುತ್ತಿಗೆ ತತ್ವಾರ ಪಟ್ಟುಕೊಂಡು ದೋಚಿ ತಿನ್ನಲು ತೊಡಗಿರುವ ಈ ದೇಶಕ್ಕಿದ್ದ ಓರ್ವ ಸರ್ವಾಧಿಕಾರಿಯೇ ಬಶೀರ್‌. ಆತನ ಭರಾಟೆ ಒಂದು ಕಡೆಯಾದರೆ ಇನ್ನೊಂದು ಕಡೆ ಬಂಡುಕೋರರು. ಇವರ ನಡುವೆ ಭ್ರಮ ನಿರಸನಗೊಂಡ ಜನ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ಬೃಹತ್‌ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದರು.

ಇದು 2010ರಲ್ಲಿ ಟ್ಯುನಿಷಿಯಾದ ಮೂಲಕ ಆರಂಭಗೊಂಡು ಹಲವು ಸರ್ವಾಧಿಕಾರಿಗಳನ್ನು ಬಲಿ ಪಡೆದ ‘ಅರಬ್‌ ಸ್ಪ್ರಿಂಗ್‌’ನ್ನು ನೆನಪಿಸಿತ್ತು. ಅರಬ್‌ ಸ್ಪ್ರಿಂಗ್‌ನಲ್ಲಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಬೆಂಬಲದೊಂದಿಗೆ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದ ಜನರು ತರಹೇವಾರಿ ಹೋರಾಟಗಳನ್ನು ನಡೆಸಿದ್ದರು. ಕೆಲವು ದೇಶಗಳಲ್ಲಿ ಬಂದೂಕುಗಳೇ ಹೆಚ್ಚು ಮಾತನಾಡಿದ್ದವು. ಹಾಗೆ ಹುಟ್ಟಿಕೊಂಡು ಆಂತರಿಕ ಸಂಘರ್ಷ ಸಿರಿಯಾದಂಥ ದೇಶಗಳಲ್ಲಿ ಇನ್ನೂ ನಿಂತಿಲ್ಲ. ಇನ್ನು ಕೆಲವು ದೇಶಗಳು ಅರಾಜಕತೆಗೆ ಹೋಗಿ ಇನ್ನೂ ಚೇತರಿಸಿಕೊಂಡಿಲ್ಲ.

ಇಂಥಹದ್ದೊಂದು ಇತಿಹಾಸವನ್ನು ಪಕ್ಕದಲ್ಲಿ ಇಟ್ಟುಕೊಂಡೇ ಸುಡಾನ್‌ನಲ್ಲಿ ಹೊಸ ತಲೆಮಾರಿನ ಹೋರಾಟ ಆರಂಭಗೊಂಡಿತ್ತು. ಇವರು 1989ರಲ್ಲಿ ಮಿಲಿಟರಿ ಕ್ರಾಂತಿ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಅಧ್ಯಕ್ಷ ಒಮರ್‌ ಅಲ್‌ ಬಶೀರ್‌ ವಿರುದ್ಧ ತಿರುಗಿ ಬಿದ್ದಿದ್ದರು. ಡಿಸೆಂಬರ್‌ 19ರಂದು ಮೊದಲ ಬಾರಿಗೆ ಬೆಲೆ ಏರಿಕೆ ವಿರೋಧಿ ಹೆಸರಿನಲ್ಲಿ ಹುಟ್ಟಿಕೊಂಡ ಪ್ರತಿಭಟನೆ ನಿಧಾನಕ್ಕೆ ‘ಸರಕಾರದ ವಿರೋಧಿ’ ರೂಪವನ್ನು ತಾಳಿತ್ತು.

ಹಾಗೆ ನೋಡಿದರೆ ಸುಡಾನ್‌ ಪಾಲಿಗೆ ಪ್ರತಿಭಟನೆಗಳು ಹೊಸತಲ್ಲ. ಅರಬ್‌ ಸ್ಪ್ರಿಂಗ್‌ ಸಮಯದಲ್ಲೇ 2011ರಲ್ಲಿ ಸುಡಾನ್‌ ಇಬ್ಭಾಗವಾಗಿ ದಕ್ಷಿಣ ಸುಡಾನ್‌ ಉದಯಿಸಿತ್ತು. ಇನ್ನು 2013ರ ಸೆಪ್ಟೆಂಬರ್‌ನಲ್ಲಿ ರಾಜಧಾನಿ ಖರ್ತೋಮ್‌ನಲ್ಲಿ ಹುಟ್ಟಿಕೊಂಡ ಪ್ರತಿಭಟನೆಯೊಂದನ್ನು 200 ಜನರ ಸಾವಿನೊಂದಿಗೆ ಕ್ರೂರವಾಗಿ ಹೊಸಕಿ ಹಾಕಿದ್ದರು ಅಧ್ಯಕ್ಷ ಒಮರ್‌ ಅಲ್‌ ಬಶೀರ್‌. ಮುಂದೆ 2015ರಲ್ಲಿ ಮತ್ತೊಂದು ಸುತ್ತಿನ ಹೋರಾಟ ಆರಂಭಗೊಂಡಾಗ ಚುನಾವಣಾ ಪ್ರಹಸನವನ್ನು ನಡೆಸಿ ಶೇಕಡಾ 96 ಮತಗಳೊಂದಿಗೆ ಅಧ್ಯಕ್ಷರು ಪುನರಾಯ್ಕೆಯಾಗಿದ್ದರು.

1989ರಲ್ಲಿ ಕ್ಷಿಪ್ರ ಕ್ರಾಂತಿ ಮೂಲಕ ಅಧಿಕಾರಕ್ಕೇರಿ 1993ರಲ್ಲಿ ತಮ್ಮನ್ನು ತಾವು ದೇಶದ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದ ಬಷೀರ್‌.

ನಂತರ 2016ರಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಇದೇ ಬೆಲೆ ಏರಿಕೆ ಮುಂದಿಟ್ಟುಕೊಂಡು 2018ರ ಜನವರಿಯಲ್ಲಿ ಇನ್ನೊಮ್ಮೆ ಪ್ರತಿಭಟನೆ ನಡೆದಿತ್ತು. ಆದರೆ ಅದು ಪೊಲೀಸರ ಅಶ್ರುವಾಯು ಪ್ರಯೋಗಕ್ಕೆ ತಣ್ಣಗಾಗಿತ್ತು. ಆದರೆ ಈ ಬಾರಿಯ ಪ್ರತಿಭಟನೆ ವಿಚಿತ್ರವಾಗಿತ್ತು ಮತ್ತು ಹೆಚ್ಚು ತೀವ್ರತೆಯಿಂದ ಕೂಡಿತ್ತು.

ಮೊದಲಿಗೆ ಪ್ರತಿಭಟನೆ ಸುಡಾನ್‌ನ ಉತ್ತರದಲ್ಲಿರುವ ಅಟ್ಬಾರಾದಿಂದ ಆರಂಭಗೊಂಡಿತ್ತು. ಅಟ್ಬಾರಾ ಮತ್ತು ಇಲ್ಲಿನ ನೈಲ್‌ ನದಿ ಪಾತ್ರದಲ್ಲಿರುವ ಹೆಚ್ಚಿನ ಪ್ರದೇಶಗಳು ತನ್ನ ಹಿಡಿತದಲ್ಲಿವೆ ಎಂದು ಬಶೀರ್‌ ಅಂದುಕೊಂಡಿದ್ದರು. ಕಾರಣ ಅವರ ಸರಕಾರದಲ್ಲಿರುವ ಹೆಚ್ಚಿನ ಉನ್ನತ ಅಧಿಕಾರಿಗಳು ಈ ಭಾಗದಿಂದ ಬಂದಿದ್ದರು. ಆದರೆ ಈ ಬಾರಿ ಇದೇ ಭಾಗದಲ್ಲಿ ಮೊದಲಿಗೆ ಪ್ರತಿಭಟನೆಗಳು ಹುಟ್ಟಿಕೊಂಡಿತ್ತು.

ಇದನ್ನು ಬಲ ಪ್ರಯೋಗದ ಮೂಲಕ ಹೊಸಕಿ ಹಾಕುವ ಸೂಚನೆ ನೀಡಿದ್ದ ಬಶೀರ್‌, ರಾಜಕಾರಣಿಗಳು, ವಿರೋಧ ಪಕ್ಷದ ನಾಯಕರಲ್ಲದೆ ಖರ್ತೋಮ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಡಾನ್‌ನ ಖ್ಯಾತ ಕವಿ ಮಹಮದ್‌ ತಹಾ ಮತ್ತು ಇಬ್ಬರು ಲೇಖಕರನ್ನು ಬಂಧಿಸಿದ್ದರು.

ಆದರೆ ನೋಟುಗಳ ಅಮಾನ್ಯೀಕರಣ, ಇಂಧನ ಕೊರತೆ, ಬ್ರೆಡ್‌ನ ಬೆಲೆ ಏರಿಕೆಗೆ ಕಂಗಲಾದ ಜನ ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿ ಆಳುವ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಸಣ್ಣ ಪುಟ್ಟ ಪ್ರತಿರೋಧದ ಮೂಲಕ ವಿರೋಧಿಗಳನ್ನು ಸುಮ್ಮನಾಗಿಸಬಹುದು ಎಂದು ಅಂದುಕೊಂಡಿದ್ದ ಅಧ್ಯಕ್ಷರ ನಿರೀಕ್ಷೆ ಸುಳ್ಳಾಯಿತು.

ಮುಖ್ಯವಾಗಿ ಸುಡಾನ್‌ನ ವೈದ್ಯ ಸಮುದಾಯ ಜತೆಗೆ ಒಂದಷ್ಟು ಮೇಲ್ವರ್ಗದ ಜನ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸರಕಾರ ಬೀಳುವವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿದ್ದರು.

ಈ ಸಂದರ್ಭದಲ್ಲಿ ಸಿರಿಯಾಕ್ಕೆ ಹೋಗಿ ಬಂದಿದ್ದ ಬಶೀರ್‌ ಅಲ್ಲಿನ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಮಾದರಿಯಲ್ಲಿ ವಿರೋಧಿಗಳ ಹುಟ್ಟಡಗಿಸುವ ಧೈರ್ಯದಲ್ಲಿದ್ದರು. ಜತೆಗೆ ಪಕ್ಕದ ಈಜಿಪ್ಟ್‌ ಕೂಡ ಅಧ್ಯಕ್ಷರಿಗೆ ಬೆಂಬಲ ನೀಡಿತ್ತು. ಆದರೆ ಸಿರಿಯಾದಲ್ಲಿ ನಡೆದ ಬೆಳವಣಿಗೆ ಸುಡಾನ್‌ನಲ್ಲಿ ನಡೆದಿಲ್ಲ. ಯಾಕೆ ಎಂಬುದಕ್ಕೆ ಬಶೀರ್ ವ್ಯಕ್ತಿತ್ವದಲ್ಲೊಂದಿಷ್ಟು ಕುರುಹುಗಳು ಸಿಗುತ್ತವೆ.

ಯಾರು ಈ ಬಶೀರ್?

ಸುಡಾನ್‌ ಸೇನೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದವರು ಬಶೀರ್‌. ಬೇಸಿಕಲಿ ಒಬ್ಬ ಮಿಲಿಟರಿ ಶಿಸ್ತಿನ ಮನುಷ್ಯ. 1960ರಲ್ಲಿ ಸೇನೆ ಸೇರಿದ ಅವರು ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಉನ್ನತ ಮಟ್ಟದ ತರಬೇತಿಗಳನ್ನು ಪಡೆದುಕೊಂಡಿದ್ದರು. ಸೇನೆಯ ಸ್ಥರಗಳಲ್ಲಿ ಬಲು ಬೇಗ ಪ್ರವರ್ಧಮಾನಕ್ಕೆ ಬಂದಿದ್ದರು.

1989ರಲ್ಲಿ ಅವರು ಸೇನೆಯಲ್ಲಿ ಬ್ರಿಗೇಡಿಯರ್‌ ಹುದ್ದೆಗೇರಿದ ವೇಳೆ ಸಾದಿಕ್ ಅಲ್‌ ಮಹದಿ ಸರಕಾರ ಸುಡಾನ್‌ ಆಳ್ವಿಕೆ ನಡೆಸುತ್ತಿತ್ತು. ಇದೊಂದು ಮೈತ್ರಿ ಸರಕಾರವಾಗಿತ್ತು. ಈ ಸಂದರ್ಭದಲ್ಲಿ ಸರಕಾರ ದೇಶದಲ್ಲಿ ಕಾರ್ಯಚರಿಸುತ್ತಿದ್ದ ಬಂಡುಕೋರ ಪಡೆಗಳೊಡನೆ ಶಾಂತಿ ಮಾತುಕತೆ ಆರಂಭಿಸಿತ್ತು.

ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಬಶೀರ್‌ ಸೇನಾ ಅಧಿಕಾರಿಗಳ ಒಂದು ಗುಂಪು ಕಟ್ಟಿಕೊಂಡು ಸೇನಾ ಕ್ರಾಂತಿ ನಡೆಸಿಬಿಟ್ಟರು. ಈ ರಕ್ತ ರಹಿತ ಸೇನಾ ಕ್ರಾಂತಿಯ ಮೂಲಕ 1989 ಜೂನ್‌ 30ರಂದು ಅವರು ದೇಶದ ಅಧಿಕಾರದ ಗದ್ದುಗೆ ಏರಿದರು.

ಅಧಿಕಾರಕ್ಕೆ ಏರಿದ ನಂತರ ನಡೆದ ಮೂರು ಏಕಪಕ್ಷೀಯ ಚುನಾವಣೆಗಳಲ್ಲಿ ಅವರು ಅಧಿಕಾರ ಉಳಿಸಿಕೊಂಡಿದ್ದರು. ಇದರ ನಡುವೆ 2005ರಲ್ಲಿ ದೇಶದಲ್ಲಿ ಆಂತರಿಕ ಸಂಘರ್ಷ ಹುಟ್ಟಿಕೊಂಡಿತು. ಹಲವು ಅಂತರಾಷ್ಟ್ರೀಯ ಸಂಘಟನೆಗಳ ಪ್ರಕಾರ ಈ ನಾಗರಿಕ ಯುದ್ಧದಲ್ಲಿ 2 ರಿಂದ 4 ಲಕ್ಷ ಜನರು ಅಸುನೀಗಿದರು.

ಜತೆಗೆ ದೇಶದ ಡಾರ್ಫುರ್‌ ಭಾಗದಲ್ಲಿ ಪ್ರತಿಭಟನೆ ಹತ್ತಿಕುವ ಸಂಬಂಧ ಹಲವು ಯುದ್ಧಾಪರಾಧಗಳನ್ನೂ ಸರಕಾರ ನಡೆಸಿತು. ಈ ಸಂಬಂಧ ಅಂತರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ ಅವರ ವಿರುದ್ಧ 2008ರ ಜುಲೈನಲ್ಲಿ ಬಂಧನ ವಾರಂಟ್‌ ಜಾರಿಗೊಳಿಸಿತ್ತು. 2010ರ ಜುಲೈನಲ್ಲಿ ಎರಡನೇ ಬಾರಿಗೆ ಇದೇ ರೀತಿ ವಾರಂಟ್‌ ಜಾರಿಗೊಳಿಸಿತ್ತು.

ಭಾರತ-ಸುಡಾನ್‌ ಸಂಬಂಧ:

ಆದರೆ ಬಂಧನಕ್ಕೊಳಗಾಗದೇ ಬಶೀರ್‌ ತಮ್ಮ ಆಡಳಿತ ಮುಂದುವರಿಸಿದ್ದರು. 2012ರಲ್ಲಿ ದಕ್ಷಿಣ ಸುಡಾನ್‌ ಮತ್ತು ಸುಡಾನ್‌ ನಡುವೆ ಸಂಘರ್ಷ ತಾರಕಕ್ಕೇರಿದಾಗ ಅಮೆರಿಕಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಬಶೀರ್ ಸರಕಾರದ ಮೇಲೆ ಆರ್ಥಿಕ ದಿಗ್ಬಂಧನ ಹೇರಿತ್ತು. ಈ ಸಂದರ್ಭದಲ್ಲಿ ಅವರು ಭಾರತದತ್ತ ಕಣ್ಣು ಹಾಯಿಸಿದ್ದರು.

ಹಾಗೆ ನೋಡಿದರೆ ಭಾರತ ಮತ್ತು ಸುಡಾನ್‌ ಸಂಬಂಧ ನೂರಾರು ವರ್ಷಗಳಷ್ಟು ಹಳೆಯದು. 1900ರಲ್ಲೇ ಭಾರತದಿಂದ ಕೊಂಡೊಯ್ದ ಕಬ್ಬಿಣದಲ್ಲಿ ಇಲ್ಲಿ ಸೇತುವೆ ನಿರ್ಮಿಸಲಾಗಿದ್ದು ಅದಿನ್ನೂ ಇಲ್ಲಿ ಕಾರ್ಯಚರಿಸುತ್ತಿದೆ. 1935ರಲ್ಲಿ ಮಹಾತ್ಮಾ ಗಾಂಧಿ, 1938ರಲ್ಲಿ ಜವಹರ್‌ಲಾಲ್‌ ನೆಹರೂ ಈ ದೇಶಕ್ಕೆ ಭೇಟಿ ನೀಡಿದ ಇತಿಹಾಸವಿದೆ.

1951-52ರಲ್ಲಿ ಭಾರತದ ಮೊದಲ ಚುನಾವಣೆಯ ಆಯುಕ್ತರಾಗಿದ್ದ ಸುಕುಮಾರ್‌ ಸೇನ್‌ 1953ರ ಚೊಚ್ಚಲ ಸುಡಾನ್ ಚುನಾವಣೆಯ ಮೇಲುಸ್ತುವಾರಿಯನ್ನೂ ವಹಿಸಿದ್ದರು. ಈ ಮೂಲಕ ಎರಡೂ ದೇಶಗಳ ಚುನಾವಣೆಯ ಹೀರೋ ಆಗಿ ಅವರು ಮೂಡಿ ಬಂದಿದ್ದರು.

1955ರಲ್ಲಿ ಇಲ್ಲಿ ಭಾರತ ರಾಯಭಾರ ಕಚೇರಿ ತೆರಿದಿದ್ದಲ್ಲದೆ ಸರಕಾರ ಕಟ್ಟುವ ಪ್ರಕ್ರಿಯೆಯಲ್ಲಿ ಅಲ್ಲಿನ ಆಡಳಿತಾಂಗಕ್ಕೆ ಆರ್ಥಿಕ ನೆರವನ್ನೂ ನೀಡಿತ್ತು. ಸುಡಾನ್‌ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಸೇನೆ ಪಾಲ್ಗೊಂಡ ಇತಿಹಾಸವೂ ಇದೆ. ಹಲವು ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ಸರಕಾರಕ್ಕೆ ಭಾರತ ನೆರವು ನೀಡುತ್ತಾ ಇಂದಿಗೂ ಉತ್ತಮ ಸಂಬಂಧವನ್ನು ಪೋಷಿಸಿಕೊಂಡು ಬಂದಿದೆ. ಜವಹರಲ್‌ ಲಾಲ್‌ ನೆಹರೂ, ಅಬ್ದುಲ್‌ ಕಲಾಂ ಸೇರಿದಂತೆ ಭಾರತದ ಹಲವು ಗಣ್ಯ ನಾಯಕರು ಈ ದೇಶಕ್ಕೆ ಭೇಟಿ ನೀಡಿದ ಉದಾಹರಣೆಗಳಿವೆ.

ಚೀನಾ ನಂತರ ಸುಡಾನ್‌ಗೆ ಅತೀ ಹೆಚ್ಚಿನ ಬೆಲೆಯ ವಸ್ತುಗಳನ್ನು ರಫ್ತು ಮಾಡುವ ದೇಶ ಭಾರತವಾಗಿದ್ದು, ಎರಡೂ ದೇಶಗಳ ನಡುವೆ 2013-14ರಲ್ಲೇ 68 ಸಾವಿರ ಕೋಟಿ ರೂಪಾಯಿಗಳ ವ್ಯವಹಾರವಿತ್ತು.

2015ರ ಅಕ್ಟೋಬರ್‌ನಲ್ಲಿ ಇಂಡೋ-ಆಫ್ರಿಕಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಬಶೀರ್‌.

2015ರ ಅಕ್ಟೋಬರ್‌ನಲ್ಲಿ ಇಂಡೋ-ಆಫ್ರಿಕಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಬಶೀರ್‌ ಭಾರತಕ್ಕೆ ಬಂದಿದ್ದರು. ಈ ಸಂದರ್ಭ ಅವರನ್ನು ಬಂಧಿಸುವಂತೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಪಟ್ಟು ಹಿಡಿದಿತ್ತು. ಆದರೆ ರೋಮ್‌ ಒಪ್ಪಂದಕ್ಕೆ ಭಾರತ ಸಹಿ ಹಾಕದೇ ಇರುವ ಕಾರಣ ಭಾರತದಲ್ಲಿ ಅವರನ್ನು ಬಂಧಿಸಲು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅಧಿಕಾರವಿರಲಿಲ್ಲ.

ಇವೆಲ್ಲದರ ನಡುವೆ ಅವರ ವಿರುದ್ಧ 2018ರ ಡಿಸೆಂಬರ್‌ನಲ್ಲಿ ಆರಂಭಗೊಂಡ ಹೋರಾಟ ಪ್ರಬಲವಾಗುತ್ತಾ ಬಂದಿತ್ತು. ಅದೀಗ ಮತ್ತೊಂದು ಸೇನಾ ಕ್ರಾಂತಿಯ ಹೆಸರಿನಲ್ಲಿ ಕೊನೆಯಾಗಿದ್ದು ಬಶೀರ್‌ ಅಧಿಕಾರ ಕಳೆದುಕೊಂಡಿದ್ದಾರೆ. ಆದರೆ ಅಂತರಾಷ್ಟ್ರೀಯ ಬಂಧನ ವಾರಂಟ್‌ ಹಿನ್ನೆಲೆಯಲ್ಲಿ ಅವರ ಮುಂದಿನ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಇವತ್ತು ನಡೆದ ಪ್ರಮುಖ ಅಂತಾರಾಷ್ಟ್ರೀಯ ಬೆಳವಣಿಗೆ ಇದು.