Home news-in-brief ವಿಕಿಲೀಕ್ಸ್‌ ಸಂಸ್ಥಾಪಕ, ಹೊಸ ತಲೆಮಾರಿನ ಪತ್ರಿಕೋದ್ಯಮಿ ಅಸಾಂಜೆ ಬಂಧನ

ವಿಕಿಲೀಕ್ಸ್‌ ಸಂಸ್ಥಾಪಕ, ಹೊಸ ತಲೆಮಾರಿನ ಪತ್ರಿಕೋದ್ಯಮಿ ಅಸಾಂಜೆ ಬಂಧನ

SHARE

ಅಮೆರಿಕಾ ಮತ್ತು ವಿಕಿಲೀಕ್ಸ್‌ ಸಹ ಸಂಸ್ಥಾಪಕ, ಖ್ಯಾತ ಪತ್ರಕರ್ತ, ಹ್ಯಾಕರ್‌ ಜೂಲಿಯನ್‌ ಅಸಾಂಜೆ ನಡುವೆ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದ ಹಾವು-ಮುಂಗಿಸಿಯಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. 2012ರಲ್ಲಿ ಈಕ್ವೆಡಾರ್‌ ರಾಯಭಾರ ಕಚೇರಿ ಹೊಕ್ಕಿ ರಾಜಕೀಯ ಆಶ್ರಯ ಪಡೆದಿದ್ದ ಜೂಲಿಯನ್‌ ಅಸಾಂಜೆಯನ್ನು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸ್ವೀಡನ್‌ನಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ಎದುರಿಸುತ್ತಿದ್ದ (ಸದ್ಯ ಈ ಪ್ರಕರಣವನ್ನು ಕೈ ಬಿಡಲಾಗಿದೆ) ಅಸಾಂಜೆಯನ್ನು ಹಸ್ತಾಂತರಿಸುವಂತೆ ಕೋರಿ ಅಲ್ಲಿನ ಸರಕಾರ ಬ್ರಿಟನ್‌ ಸರಕಾರದ ಮೊರೆ ಹೋಗಿತ್ತು. ಈ ಸಂಬಂಧ 2012ರ ಜೂನ್‌ 29ರಂದು ಅಸಾಂಜೆ ವಿರುದ್ಧ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಬಂಧನದ ವಾರಂಟ್‌ ಹೊರಡಿಸಿತ್ತು. ಆದರೆ ಅಸಾಂಜೆ ನ್ಯಾಯಾಲಯಕ್ಕೆ ಹಾಜರಾಗದೆ ರಾಯಭಾರ ಕಚೇರಿಯೊಳಕ್ಕೆ ಹೊಕ್ಕು ರಾಜಕೀಯ ಆಶ್ರಯ ಪಡೆದುಕೊಂಡಿದ್ದರು.

ಒಂದೊಮ್ಮೆ ಲಂಡನ್‌ನಲ್ಲಿ ಬಂಧಿತನಾದರೆ ತಾನು ಸ್ವೀಡನ್‌ಗೆ ಹಸ್ತಾಂತರವಾಗಲಿದ್ದೇನೆ. ಅಲ್ಲಿಂದ ಅಮೆರಿಕಾಗೆ ಹಸ್ತಾಂತರವಾಗಿ ವಿಕಿಲೀಕ್ಸ್‌ ಕಾರ್ಯಾಚರಣೆ ಸಂಬಂಧ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅವರು ಕಚೇರಿಯಿಂದ ಹೊರ ಬರಲು ನಿರಕಾರಿಸಿದ್ದರು.

ಆದರೆ ಕಳೆದ ಕೆಲವು ದಿನಗಳ ಹಿಂದೆ ಈಕ್ವೆಡಾರ್‌ ಆಡಳಿತ ಬದಲಾಗಿತ್ತು. ಮತ್ತು ಹೊಸ ಆಡಳಿತ ಅಸಾಂಜೆಗೆ ನೀಡಿದ್ದ ಆಶ್ರಯವನ್ನು ಹಿಂತೆಗೆದುಕೊಂಡಿತ್ತು. ಅಲ್ಲಿನ ಅಧ್ಯಕ್ಷ ಲೆನಿನ್‌ ಮರೆನೋ, “ಅಸಾಂಜೆ ಪದೇ ಪದೇ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದ್ದರಿಂದ ಅವರಿಗೆ ನೀಡಿದ್ದ ಆಶ್ರಯವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ,” ಎಂದಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ವಿಕಿಲೀಕ್ಸ್‌, ‘ಅಂತರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಈಕ್ವೆಡಾರ್‌ ಅಸಾಂಜೆಗೆ ನೀಡಿದ್ದ ರಾಜಕೀಯ ಆಶ್ರಯವನ್ನು ಹಿಂಪಡೆದಿದೆ’ ಎಂದು ಆರೋಪಿಸಿತ್ತು. ಹೀಗಿದ್ದೂ ಅವರು ರಾಯಭಾರ ಕಚೇರಿಯಿಂದ ಹೊರ ಬಂದಿರಲಿಲ್ಲ. ಒಂದೊಮ್ಮೆ ಹೊರ ಬಂದರೆ ಅಮೆರಿಕಾಗೆ ಹಸ್ತಾಂತರವಾಗಲಿದ್ದೇನೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ಇದೀಗ ವೆಸ್ಟ್‌ಮಿನ್‌ಸ್ಟರ್‌ ಪೊಲೀಸರು ಈಕ್ವೆಡಾರ್‌ ರಾಯಭಾರ ಕಚೇರಿ ಒಳಹೊಕ್ಕು 47 ವರ್ಷದ ಅಸಾಂಜೆಯನ್ನು ಬಂಧಿಸಿ ಕರೆತಂದಿದ್ದಾರೆ. “ಸದ್ಯ ಕೇಂದ್ರ ಲಂಡನ್‌ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿ ಅವರನ್ನು ಇರಿಸಲಾಗಿದೆ. ಆದಷ್ಟು ಬೇಗ ಅವರನ್ನು ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು,” ಎಂಬುದಾಗಿ ಮೆಟ್ರೋಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

“ನಾನು ಮೆಟ್ರೋಪಾಲಿಟನ್‌ ಪೊಲೀಸರ ವೃತ್ತಿ ಬದ್ಧತೆಗೆ ಮತ್ತು ಈಕ್ವೆಡಾರ್‌ನ ಸಹಕಾರಕ್ಕೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ,” ಎಂದು ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಟ್ಟೀಟ್‌ ಮಾಡಿದ್ದಾರೆ.