Home news-in-brief ಮುಂದುವರಿದ ಐಟಿ ದಾಳಿ; ರಿಜ್ವಾನ್‌ ಅರ್ಷದ್ ಆಪ್ತರ ಮನೆಗಳಲ್ಲಿ ಪರಿಶೀಲನೆ

ಮುಂದುವರಿದ ಐಟಿ ದಾಳಿ; ರಿಜ್ವಾನ್‌ ಅರ್ಷದ್ ಆಪ್ತರ ಮನೆಗಳಲ್ಲಿ ಪರಿಶೀಲನೆ

SHARE

ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೇ ಗುರುವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಬೆಂಬಲಿಗರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂಜಾನೆ 6 ಗಂಟೆಗೆ 100 ಕ್ಕೂ ಮಿಕ್ಕಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಕಡೆ ಪರಿಶೀಲನೆ ಮುಂದುವರಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ನಯಿಜ್ ಖಾನ್, ಅರಮನೆ ಮೈದಾನದಲ್ಲಿ ಹೂವಿನ ಅಲಂಕಾರ ಮಾಡುವ ಅಮಾನುಲ್ಲಾ ಖಾನ್ ಮತ್ತು ಕಮಲ್ ಪಾಷ ಅವರುಗಳ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರನ್ನು ಸೋಲಿಸಲೇಬೇಕೆಂದು ರಿಜ್ವಾನ್‌ ಅರ್ಷದ್‌ 2ನೇ ಬಾರಿ ಲೋಕಸಬೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇದಕ್ಕಾಗಿ ಹಲವಾರು ರೀತಿಯ ರಣತಂತ್ರಗಳನ್ನು ರೂಪಿಸಿದ್ದರು. ಬಿರುಸಿನ ಪ್ರಚಾರದಲ್ಲೂ ತೊಡಗಿದ್ದರು. ಇದರ ನಡುವೆ ಇಂದು ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿ ರಿಜ್ವಾನ್‌ಗೆ ಆಘಾತ ನೀಡಿದೆ.

ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಸಚಿವರಾದ ಸಿ.ಎಸ್‌. ಪುಟ್ಟರಾಜು, ಎಚ್‌.ಡಿ. ರೇವಣ್ಣ ಅವರ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಇದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲಾ ನಾಯಕರು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಬೆನ್ನಿಗೆ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್, ಸಿ.ಎಸ್‌. ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಐಟಿ ಅಧಿಕಾರಿಗಳು ದೂರು ನೀಡಿದ್ದರು.

ಪ್ರತಿಭಟನೆ ಮೂಲಕ ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ದೂರಿನ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

ಮೊದಲ ದಾಳಿಯ ನಂತರವೂ ಕರ್ನಾಟಕದಲ್ಲಿ ಐಟಿ ದಾಳಿ ಮುಂದುವರಿದಿದ್ದು ಬುಧವಾರ ಬಳ್ಳಾರಿ, ಚಿಕ್ಕೋಡಿಯಲ್ಲಿ ಆದಾಯ ತೆರಿಗೆಯವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದರು. ಇಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಆಪ್ತರೇ ದಾಳಿಗೆ ಗುರಿಯಾಗಿದ್ದರು.

ಇದೀಗ ನೇರವಾಗಿ ರಾಜಧಾನಿಯಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ರಿಜ್ವಾನ್ ಅರ್ಷದ್‍ ಅವರ ಆಪ್ತರು ಹಾಗೂ ಚುನಾವಣೆಗೆ ಬೆನ್ನೆಲುಬಾಗಿದ್ದವರ ಮನೆಗಳ ಮೇಲೆ ಮುಗಿಬಿದ್ದಿದ್ದಾರೆ ಎನ್ನಲಾಗಿದೆ.

ಬೆಳಗಾವಿ, ಬಳ್ಳಾರಿಯಲ್ಲಿ ಮುಂದುವರಿದ ದಾಳಿ:

ಬುಧವಾರ ಬೆಳಗಾವಿಯ ಚಿಕ್ಕೋಡಿಯಲ್ಲಿರುವ ಪ್ರಸಿದ್ಧ ಗುತ್ತಿಗೆದಾರ ಪ್ರಕಾಶ್ ವಂಟಮುಟ್ಟೆ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಅವರು ಚಿಕ್ಕೋಡಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದರು.

ಐಟಿ ಇಲಾಖೆ ಅಧಿಕಾರಿಗಳು ಚಿಕ್ಕೋಡಿಯ ಇಂದಿರಾ ನಗರ ಗೇಟ್ ಬಳಿಯಿರುವ ಪ್ರಕಾಶ್ ವಂಟಮುಟ್ಟೆ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೇ ಅಥಣಿ ತಾಲ್ಲೂಕಿನ ಶಿರಗುಪ್ಪದಲ್ಲಿರುವ ಮತ್ತೊಬ್ಬ ಕಾಂಟ್ರಾಕ್ಟರ್ ಆರ್.ಎಸ್. ಪಾಟೀಲ್ ಅವರ ನಿವಾಸದ ಮೇಲೆ ಕೂಡ ದಾಳಿ ಮಾಡಿದ್ದರು.

ಈ ದಾಳಿ ಇಂದು ಕೂಡ ಮುಂದುವರಿದಿದ್ದು ಜಾರಕಿಹೊಳಿ ಸೋದರರ ಆಪ್ತರಾಗಿರುವ ಗುತ್ತಿಗೆದಾರೆ ಜಯಶೀಲ ಶೆಟ್ಟಿ ಅವರ ಗೋಕಾಕ್ ತಾಲ್ಲೂಕಿನಲ್ಲಿರುವ ಘಟಪ್ರಭ ನಿವಾಸದ ಮೇಲೆ ದಾಳಿ ನಡೆದಿದೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಮಾಜಿ ಸಚಿವ ಅನಿಲ್ ಲಾಡ್ ಅವರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ಇಂದು ಮತ್ತೆ ದಾಳಿ ನಡೆಸಿದ್ದಾರೆ.

ದಾವಣಗೆರೆಯ ವಿದ್ಯಾನಗರದ ವಿವೇಕಾನಂದ ಬಡಾವಣೆಯಲ್ಲಿರುವ ಉದಯ ಶಿವಕುಮಾರ್ ಮನೆಯಲ್ಲಿ ಸದ್ಯ 10 ಜನ ಐಟಿ ಅಧಿಕಾರಿಗಳ ತಂಡ ಅಪಾರ ಪ್ರಮಾಣದ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದೆ. ಇವರು ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತರಾಗಿದ್ದಾರೆ.