Home Cover Story ಮೋದಿ ರಫೇಲ್‌ ಡೀಲ್‌ ವಿಚಾರಣೆಗೆ ಮತ್ತೆ ಮುಹೂರ್ತ; ‘ಗೌಪ್ಯ ದಾಖಲೆ’ ಪರಿಗಣಿಸಿದ ಸುಪ್ರಿಂ

ಮೋದಿ ರಫೇಲ್‌ ಡೀಲ್‌ ವಿಚಾರಣೆಗೆ ಮತ್ತೆ ಮುಹೂರ್ತ; ‘ಗೌಪ್ಯ ದಾಖಲೆ’ ಪರಿಗಣಿಸಿದ ಸುಪ್ರಿಂ

SHARE

ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಸಮಯದಲ್ಲೇ ಸುಪ್ರಿಂ ಕೋರ್ಟ್ ರಫೇಲ್ ವಿಚಾರವನ್ನು ಮತ್ತೊಮ್ಮೆ ಕೈಗೆತ್ತಿಕೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸುಪ್ರಿಂ ಕೋರ್ಟ್‌ ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ತೆಗೆದುಕೊಂಡಿರುವ ತೀರ್ಮಾನ ಮರ್ಮಾಘಾತವಾಗುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ಡಿಸೆಂಬರ್‌ 14ರಂದು ನೀಡಿದ್ದ ಆದೇಶವನ್ನು ಮರು ಪರಿಶೀಲನೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೆ ಮುಖ್ಯವಾಹಿನಿ ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡಿಕೊಂಡು ಬಂದಿದ್ದ ಪಿಎಂ ಮೋದಿ, ರಫೇಲ್‌ ವಿಚಾರದಲ್ಲಿ ಎದುರಾದ ಪ್ರಶ್ನೆಗಳಿಗೆ ಸುಪ್ರಿಂ ಕೋರ್ಟ್‌ ಕಡೆಗೆ ಕೈ ತೋರಿಸಿದ್ದರು. ‘ನೀವು ಕೋರ್ಟ್‌ ತೀರ್ಮಾನವನ್ನು ಒಪ್ಪುವುದಿಲ್ಲವಾ?’ ಎಂದು ಅವರು ತಮ್ಮ ಸಮರ್ಥನೆಗೆ ನ್ಯಾಯಾಲಯವನ್ನು ಬಳಸಿಕೊಂಡಿದ್ದರು.

ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ತನಿಖೆಗೆ ಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿತ್ತು.

ಬಳಿಕ ರಫೇಲ್‌ ಡೀಲ್‌ನ ಗೌಪ್ಯ ದಾಖಲೆಗಳು ‘ದಿ ಹಿಂದೂ’ ಪತ್ರಿಕೆಗೆ ಸೋರಿಕೆಯಾಗಿದ್ದವು. ಈ ದಾಖಲೆಗಳಲ್ಲಿ ಪ್ರಧಾನ ಮಂತ್ರಿ ಸಚಿವಾಲಯ ರಫೇಲ್‌ ಡೀಲ್‌ನ ಸಮಾಲೋಚನೆಯಲ್ಲಿ ಮಧ್ಯ ಪ್ರವೇಶಿಸಿರುವುದು ಬೆಳಕಿಗೆ ಬಂದಿತ್ತು. ಬಳಿಕ ಡಿಸೆಂಬರ್‌ 14ರಂದು ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಹಲವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇಂದ್ರ ಸರಕಾರ, ‘ಅರ್ಜಿದಾರರು ಕಳ್ಳತನವಾದ ದಾಖಲೆಗಳನ್ನು ಆಧರಿಸಿ ಮೇಲ್ಮನವಿ ಸಲ್ಲಿಸಿದ್ದು, ಇದನ್ನು ಕೋರ್ಟ್‌ ಪರಿಗಣಿಸಬಾರದು ಮತ್ತು ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು’ ಎಂದು ವಾದಿಸಿತ್ತು.

ಕೇಂದ್ರ ಸರಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌, ದಾಖಲೆಗಳು ಗೌಪ್ಯವಾಗಿದ್ದು ಅನುಮತಿ ಇಲ್ಲದೆ ನ್ಯಾಯಾಲಯಕ್ಕೆ ಇವುಗಳನ್ನು ಹಾಜರುಪಡಿಸವಂತಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಅರ್ಜಿದಾರರು ಭ್ರಷ್ಟಾಚಾರವನ್ನು ನಿರೂಪಿಸುವ ದಾಖಲೆಯನ್ನು ರಾಷ್ಟ್ರೀಯ ಭದ್ರತೆಯ ನೆಪ ಮುಂದಿಟ್ಟು ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ವಾದವನ್ನು ಆಲಿಸಿದ್ದ ಸರ್ವೋಚ್ಛ ನ್ಯಾಯಾಲಯ ಮಾರ್ಚ್‌ 14ರಂದು ಆದೇಶವನ್ನು ಕಾಯ್ದಿರಿಸಿತ್ತು.

ಇದೀಗ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ನ್ಯಾ. ಎಸ್‌. ಕೆ. ಕೌಲ್‌ ಮತ್ತು ಕೆ. ಎಂ. ಜೋಸೆಫ್‌ ಅವರುಗಳಿದ್ದ ತ್ರಿ ಸದಸ್ಯ ನ್ಯಾಯಪೀಠ, ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಎಂ.ಎಲ್‌. ಶರ್ಮಾ ಮತ್ತು ವಿನೀತ್‌ ಧಂಡ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆಗೆ ದಿನ ನಿಗದಿಪಡಿಸುವುದಾಗಿ ಹೇಳಿದೆ.

ಜತೆಗೆ ಸೋರಿಕೆಯಾಗಿರುವ ಗೌಪ್ಯ ದಾಖಲೆಗಳನ್ನು ಮೇಲ್ಮನವಿ ವಿಚಾರಣೆ ವೇಳೆ ಪರಿಗಣಿಸಲಿದ್ದೇವೆ ಎಂಬುದಾಗಿಯೂ ಹೇಳಿದೆ.

ಗೌಪ್ಯ ದಾಖಲೆಗಳಲ್ಲಿ ಏನಿತ್ತು?:

ಫ್ರಾನ್ಸ್‌ ತಂಡದ ಜತೆ ಸಮಾಲೋಚನೆ ಪೂರ್ಣಗೊಂಡ ನಂತರ ಮತ್ತು ಡೀಲ್‌ಗೆ ಸಹಿ ಹಾಕುವ (ಸೆಪ್ಟೆಂಬರ್‌ 23, 2016) ಒಂದು ತಿಂಗಳ ಮೊದಲು ಬರೆದ ಪತ್ರವೊಂದರನ್ನು ‘ದಿ ಹಿಂದೂ’ ಪ್ರಕಟಿಸಿತ್ತು. ತಮ್ಮ 8 ಪುಟಗಳ ಪತ್ರದಲ್ಲಿ ನರೇಂದ್ರ ಮೋದಿ ಸರಕಾರದ ಈ ಡೀಲ್‌ಗೆ, ಬೆಲೆಗಳ ಬಗೆಗಿನ ಸಲಹೆಗಾರರಾದ ಎಂ.ಪಿ. ಸಿಂಗ್‌, ವಾಯುಸೇನೆ ಹಣಕಾಸು ವ್ಯವಸ್ಥಾಪಕ ಎ.ಆರ್‌. ಸುಳೆ ಮತ್ತು ಸ್ವಾಧೀನ ವ್ಯವಸ್ಥಾಪಕ ಹಾಗೂ ವಾಯುಸೇನೆಯ ಜಂಟಿ ಕಾರ್ಯದರ್ಶಿ ರಾಜೀವ್‌ ವರ್ಮಾ ವಿರೋಧ ವ್ಯಕ್ತಪಡಿಸಿದ್ದರು.

ಹೊಸ ರಫೇಲ್‌ ಡೀಲ್‌ನ 7.87 ಬಿಲಿಯನ್‌ ಯೂರೋಗಳ ಅಂತಿಮ ಮೊತ್ತದ ಬಗ್ಗೆ ಪ್ರತಿಕ್ರಿಯೆ ನೀಡುವ ಈ ತಜ್ಞರು, “ಫ್ರಾನ್ಸ್‌ ಸರಕಾರ ತಾನು ಮುಂದಿಟ್ಟ ಬೆಲೆಗೆ ಯಾವುದೇ ಸರಿಯಾದ ವಿವರಣೆಗಳನ್ನು ನೀಡಿಲ್ಲ. ‘ಎಂಎಂಆರ್‌ಸಿ(medium multi-role combat aircraft)’ಗೆ ಹೋಲಿಕೆ ಮಾಡಿದರೆ ಫ್ರಾನ್ಸ್‌ ಸರಕಾರದ ಅಂತಿಮ ಬೆಲೆ ಪ್ರಸ್ತಾಪವನ್ನು ಉತ್ತಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಜಂಟಿ ಹೇಳಿಕೆಯನ್ನು ಸಮ್ಮತಿಸಲು ಸಾಧ್ಯವಿಲ್ಲ,” ಎಂಬುದಾಗಿ ಅಧಿಕಾರಿಗಳು ತಮ್ಮ ಪತ್ರದಲ್ಲಿ ಹೇಳಿದ್ದರು.

ಇದರ ಜತೆಗೆ 36 ರಫೇಲ್‌ ಯುದ್ಧ ವಿಮಾನಗಳಲ್ಲಿ 18ರ ಪೂರೈಕೆಗೆ ನಿಗದಿ ಪಡಿಸಿದ್ದ ಸಮಯವೂ ಮೂಲ ಸ್ವಾಧೀನ ಪ್ರಕ್ರಿಯೆಯಲ್ಲಿ ಇದ್ದಿದ್ದಕ್ಕಿಂತ ನಿಧಾನಗತಿಯಲ್ಲಿದೆ ಎಂದು ಪತ್ರಿಕೆ ವರದಿ ಮಾಡಿತ್ತು.