Home Cover Story ಮತದಾನಕ್ಕಿನ್ನು 8 ದಿನ; ಗೊಂದಲದಲ್ಲಿ ನಾಯಕರು, ಮತದಾರರು ಹಾಗೂ ಸಮೀಕ್ಷೆಗಳು

ಮತದಾನಕ್ಕಿನ್ನು 8 ದಿನ; ಗೊಂದಲದಲ್ಲಿ ನಾಯಕರು, ಮತದಾರರು ಹಾಗೂ ಸಮೀಕ್ಷೆಗಳು

SHARE

ಭಾರತದಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್‌ 11ರಂದು ಮೊದಲ ಹಂತದ ಲೋಕಸಭಾ ಚುನಾವಣೆ 20 ರಾಜ್ಯಗಳಲ್ಲಿ ನಡೆಯಲಿದೆ. ಇನ್ನೊಂದು ಕಡೆ ಕರ್ನಾಟಕದಲ್ಲಿ ಇದೇ ಏಪ್ರಿಲ್‌ 18ರಂದು 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇದಕ್ಕಿನ್ನು ಬಾಕಿ ಉಳಿದಿರುವುದು ಕೇವಲ ಒಂದು ವಾರ ಮಾತ್ರ.

ಹೀಗೆ ಚುನಾವಣೆ ಸಮೀಪಿಸುತ್ತಿದ್ದರೂ ಜನ ಪ್ರತಿನಿಧಿ ಆಯ್ಕೆಯ ಗೊಂದಲಗಳಿಗೆ ಪರಿಹಾರ ಸಿಗುವ ಲಕ್ಷಣಗಳು ಹಲವು ಕ್ಷೇತ್ರಗಳಲ್ಲಿ ಕಾಣಿಸುತ್ತಿಲ್ಲ. ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ, ಯಾಕೆ ಮತ ಹಾಕಬೇಕು ಎಂಬ ಪ್ರಶ್ನೆ ಇನ್ನೂ ಮತದಾರರಲ್ಲಿ ಕಾಡುತ್ತಿದೆ.

2014ರಲ್ಲಿ ಹೀಗಿರಲಿಲ್ಲ; ಅವತ್ತಿಗೆ ಯುಪಿಎ ಅವಧಿಯ ಭ್ರಷ್ಟಾಚಾರ ಪ್ರಕರಣಗಳು ಜನರ ಮನೆ ಮನೆ ತಲುಪಿದ್ದವು. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಮತದಾರರು ಬಂದಿದ್ದರು. ಪ್ರಬಲ ನರೇಂದ್ರ ಮೋದಿ ಅಲೆಯ ನಡುವೆಯೂ, ತಳ ಮಟ್ಟದಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದು ಕಾಂಗ್ರೆಸ್‌ ವಿರೋಧಿ ಅಲೆ ಎನ್ನುತ್ತವೆ ಅಂಕಿ ಅಂಶಗಳು.

ಅದಕ್ಕೆ ಸಾಕ್ಷಿಯಾಗಿ ತಮಿಳುನಾಡು, ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಮೊದಲಾದೆಡೆ ಪ್ರಾದೇಶಿಕ ಪಕ್ಷಗಳು ದಾಖಲೆಯ ಸಂಖ್ಯೆಗಳಲ್ಲಿ ಸೀಟುಗಳನ್ನು ಗೆದ್ದುಕೊಂಡಿದ್ದವು. ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಇಲ್ಲದ ಜಾಗದಲ್ಲಿ ಮಾತ್ರ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿತ್ತು (ಇದಕ್ಕೆ ಅಪವಾದ ಉತ್ತರ ಪ್ರದೇಶ ಮಾತ್ರ). ಒಂದು ಹಂತಕ್ಕೆ ಜನರೂ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯನ್ನು ದೆಹಲಿ ಗದ್ದುಗೆಯಲ್ಲಿ ಕೂರಿಸುವ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದ್ದರು. ಅದನ್ನು ಫಲಿತಾಂಶವೇ ಹೇಳಿತ್ತು.

ಚುನಾವಣೆ ಮುಗಿದಾಗ ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಿತು. ಎನ್‌ಡಿಎ ಮೈತ್ರಿ ಕೂಟದ ಒಟ್ಟು ಸ್ಥಾನಗಳ ಸಂಖ್ಯೆ ನಿರಾಯಾಸವಾಗಿ 300ರ ಗಡಿ ದಾಟಿತು. ಇಂತಹದೊಂದು ತೀರ್ಮಾನ ಈ ಬಾರಿಯ ಚುನಾವಣೆಯಲ್ಲಿ ಕಾಣಿಸುತ್ತಿಲ್ಲ. ಅದಕ್ಕೆ ಹಲವು ಕಾರಣಗಳೂ ಇವೆ.

ಗೊಂದಲದಲ್ಲಿ ಮತದಾರ:

ಮೊದಲನೆಯದಾಗಿ ತಾವು ನೀಡಿದ್ದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿಲ್ಲ. ಇದರ ಧ್ಯೋತಕವಾಗಿ ರಾಮ ಮಂದಿರದಿಂದ ಹಿಡಿದು, 370ನೇ ವಿಧಿವರೆಗೆ 2014ರಲ್ಲಿ ನೀಡಿದ್ದ ಭರವಸೆಗಳೆಲ್ಲಾ 2019ರ ಬಿಜೆಪಿ ಪ್ರಣಾಳಿಕೆಯಲ್ಲೂ ಮುಂದುವರಿದಿವೆ.

ಹಾಗಿದ್ದರೆ ಪರ್ಯಾಯವೇನು? ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

2014ರಲ್ಲಿ ಕಾಂಗ್ರೆಸ್‌ ಬಗ್ಗೆ ಭ್ರಮನಿರಸನಗೊಂಡಿದ್ದ ಜನರು ಕಮಲದ ಗುರುತಿಗೆ ಮತ ಹಾಕಿ ಬಂದಿದ್ದರು. ಅದೇ ಜನರು ಐದು ವರ್ಷದ ನಂತರ ಮತ್ತೆ ಕಾಂಗ್ರೆಸ್‌ ಅಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜೆಡಿಎಸ್‌ನಂಥ ಕರ್ನಾಟಕದ ಪಾಲಿನ ಏಕೈಕ ಪ್ರಾದೇಶಿಕ ಪಕ್ಷ ಅಗತ್ಯಕ್ಕಿಂತ ಹೆಚ್ಚೇ ಕುಟುಂಬ ರಾಜಕಾರಣ ಮಾಡಲು ಹೋಗಿ ಜನರಿಗೆ ರೇಜಿಗೆ ಹಿಡಿಸಿದೆ.

ಪರಿಸ್ಥಿತಿ ಹೀಗಿರುವಾಗ ಮತದಾರರ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದಂತೆ ಕಾಣಿಸುತ್ತಿದೆ. ಏಕಮುಖವಾದ ಸಮೀಕ್ಷೆಗಳು, ಅಭಿಪ್ರಾಯ ಸಂಗ್ರಹಗಳ ಆಚೆಗೆ ತಳಮಟ್ಟದಲ್ಲಿ ದೊಡ್ಡ ಸಂಖ್ಯೆಯ ಜನ ಇಂತಹದೊಂದು ಸಂದಿಗ್ಧ ಸ್ಥಿತಿಯಲ್ಲಿ ಇರುವಂತಿದೆ.

ಚರ್ಚೆಯಾಗದ ವಿಚಾರಗಳು, ಸ್ಪಷ್ಟ ತೀರ್ಮಾನಕ್ಕೆ ಅಡ್ಡಿ:

ಇದರ ಜತೆಗೆ “ನೈಜ ವಿಚಾರಗಳು ಚರ್ಚೆಗೆ ಬರುತ್ತಿಲ್ಲ. ಉದ್ಯೋಗ ಸಮೀಕ್ಷೆ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಜನರಿಂದ ಮುಚ್ಚಿಟ್ಟಿದ್ದಾರೆ. ಇದು ಜನರಿಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಅಡ್ಡಿಯಾಗಿದೆ,” ಎನ್ನುತ್ತಾರೆ ಆಹಾರ ತಜ್ಞ, ರಾಜಕೀಯ ವಿಶ್ಲೇಷಕ ಕೆ. ಸಿ. ರಘು.

ಮುಖ್ಯವಾಹಿನಿ ಮಾಧ್ಯಮಗಳೂ ಹಾದಿ ತಪ್ಪಿಸುತ್ತಾ, ಸುಳ್ಳು ಮಾಹಿತಿಗಳನ್ನೇ ಮುಂದಿಡುತ್ತಾ ಶ್ರೀಸಾಮನ್ಯರನ್ನು ಮತ್ತಷ್ಟು ಸಂಕೀರ್ಣತೆಗೆ ತಳ್ಳಿವೆ ಎಂಬುದು ಅವರ ಅಭಿಪ್ರಾಯ.

ಸಾಮಾನ್ಯವಾಗಿ ಚುನಾವಣೆಗಳಲ್ಲಿ ಈ ರೀತಿಯ ಗೊಂದಲ ನಿರ್ಮಾಣವಾದಾಗ ಸಹಾಯಕ್ಕೆ ಬರುವುದು ಸ್ಥಳೀಯ ಅಭ್ಯರ್ಥಿಗಳು. ಆದರೆ ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸ್ವಪಕ್ಷೀರನ್ನೇ ಮತ್ತಷ್ಟು ಜಿಜ್ಞಾಸೆಗೆ ತಳ್ಳಿದೆ. ಇದಕ್ಕೆ ಕಣ್ಣ ಮುಂದಿರುವ ಹಲವು ಉದಾಹರಣೆಗಳೇ ಸಾಕು.

ಎರಡು ಬಾರಿ ದಕ್ಷಿಣ ಕನ್ನಡದ ಸಂಸದರಾದ ನಂತರವೂ ತಮ್ಮ ಸಾಧನೆ ಬಿಟ್ಟು ಮೋದಿ ಹೆಸರಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಮತಯಾಚಿಸುತ್ತಿದ್ದಾರೆ. ಸಂಸದ ಪ್ರತಾಪ್‌ ಸಿಂಹ, ಅನಂತ್‌ ಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ ಎಲ್ಲರದ್ದೂ ಇದೇ ಕತೆ. ಇವರೆಲ್ಲಾ ತಮ್ಮ ಪಕ್ಷದ ಕಾರ್ಯಕರ್ತರಿಂದಲೇ ದೊಡ್ಡ ಮಟ್ಟದ ವಿರೋಧ ಎದುರಿಸುತ್ತಾ ಬಂದವರು. ಆದರೆ ಹೈಕಮಾಂಡ್‌ ಕಾರ್ಯಕರ್ತರ ಅಪಸ್ವರಕ್ಕೆ ಮಣೆ ಹಾಕದೆ ಟಿಕೆಟ್‌ ನೀಡಿದ್ದರಿಂದ ಇವರಿಗೆ ಮತ ಹಾಕಬೇಕೋ ಬೇಡವೋ ಎಂಬ ಗೊಂದಲ ಪಕ್ಷ ನಿಷ್ಠೆ ಇರುವವರನ್ನು ಕಾಡುತ್ತಿದೆ.

“ಕೇಂದ್ರದಲ್ಲಿ ಮೋದಿ ಬರಬೇಕೆಂಬ ಬಯಕೆ ಜನರಲ್ಲಿದೆ. ಇನ್ನೊಂದೆಡೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡದ ಹಾಲಿ ಸಂಸದರನ್ನು ಬದಲಾಯಿಸಬೇಕು ಎಂದು ಜನ ಯೋಚಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ನಿಂದ ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಹಾಗೂ ಬದಲಾವಣೆಗಾಗಿ ಮತ ಯಾಚಿಸುತ್ತಿದ್ದಾರೆ. ಇದರಿಂದ ಜನರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ,” ಎನ್ನುತ್ತಾರೆ ದಕ್ಷಿಣ ಕನ್ನಡದ ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುವ ಪತ್ರಕರ್ತ ಚಂದ್ರಶೇಖರ ಅಂತರ.

ಇದೇ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಮೋದಿ ಮೋದಿ ಎನ್ನುತ್ತಿದ್ದ ಹಲವರು ಇಂದು ಮಿಥುನ್‌ ರೈ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಉಡುಪಿಯ ಕತೆಯೂ ಇದೇ ಆಗಿದೆ.

ಇದೆಲ್ಲಾ ಒಂದೆಡೆಯಾದರೆ ಬೆಂಗಳೂರು ದಕ್ಷಿಣದಲ್ಲಿ ಇನ್ನೊಂದು ಗೊಂದಲ. ಇಲ್ಲಿ ಬಿಜೆಪಿಗರಿಗೆ ಅವರ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಇಷ್ಟವಿಲ್ಲ. ಕಾಂಗ್ರೆಸಿಗರಿಗೆ ಬಿ. ಕೆ. ಹರಿಪ್ರಸಾದ್‌ ನಿಲ್ಲುವುದು ಬೇಕಾಗಿಲ್ಲ. ಹಾಗಿದ್ದರೆ ಇವರೆಲ್ಲ ಪರಸ್ಪರ ವಿರುದ್ಧ ಪಕ್ಷಗಳ ಪರ ಕೆಲಸ ಮಾಡುತ್ತಿರುವ ಸಾಧ್ಯತೆಗಳನ್ನು ತಳಮಟ್ಟದ ಬೆಳವಣಿಗೆಗಳು ಹೇಳುತ್ತಿವೆ. ಪಕ್ಷದ ನಾಯಕರ ತೀರ್ಮಾನವೇ ಇಷ್ಟೊಂದು ಸಂಕೀರ್ಣವಾಗಿರುವಾಗ ಸಹಜವಾಗಿಯೇ ಮತದಾರರೂ ದಾರಿ ಕಾಣದಾಗಿದ್ದಾರೆ.

ಇನ್ನು ಕಲಬುರಗಿಯಲ್ಲಿ ಕಾಂಗ್ರೆಸ್‌ನಿಂದ ಹಾರಿರುವ ಉಮೇಶ್‌ ಜಾಧವ್‌ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಹಾಸನದಲ್ಲಿ ಎ. ಮಂಜು ಇದೇ ಹಾದಿ ತುಳಿದಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್‌ ನಾಯಕ ಪ್ರಮೋದ್‌ ಮಧ್ವರಾಜ್‌ ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ತುಮಕೂರು, ಉತ್ತರ ಕನ್ನಡದಲ್ಲಿ ಜೆಡಿಎಸ್‌ಗಿಂತ ಪ್ರಬಲವಾಗಿರುವ ಕಾಂಗ್ರೆಸ್‌ ಇದೀಗ ತೆನೆ ಹೊತ್ತ ಮಹಿಳೆ ಪರ ಕೆಲಸ ಮಾಡಬೇಕಿದೆ. ಮಂಡ್ಯ, ಹಾಸನದಲ್ಲಿ ಜೆಡಿಎಸ್‌ ವಿರುದ್ಧ ಸಮರ ಸಾರುತ್ತಲೇ ಬಂದ ಕಾಂಗ್ರೆಸ್‌ ಪಕ್ಷದ ಮತದಾರರು ತಮ್ಮದಲ್ಲದ ಪಕ್ಷಕ್ಕೆ ಮತ ಚಲಾಯಿಸಬೇಕಾದ ಇಕ್ಕಟ್ಟಿನಲ್ಲಿದ್ದಾರೆ.

ಹೀಗೊಂದು ಗೋಜಲು ಪರಿಸ್ಥಿಯಲ್ಲಿ ಯಾರು ನಿಂತರೂ ಬಿಜೆಪಿ ಗೆಲ್ಲುತ್ತದೆ ಎನ್ನುತ್ತಿದ್ದ ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗದಂಥ ಕ್ಷೇತ್ರಗಳಲ್ಲೇ ಸೋಲಿನ ಸಣ್ಣ ಅನುಮಾನಗಳು ಕೇಸರಿ ಪಕ್ಷದ ನಾಯಕರನ್ನು ಕಾಡುತ್ತಿವೆ. ಗೆಲ್ಲುವ ಖಚಿತ ಧೈರ್ಯ ಅವರುಗಳಿಗೆ ಇದ್ದಂತೆ ಕಾಣಿಸುತ್ತಿಲ್ಲ.

ಜನರ ಕತೆ ಹೀಗಾದರೆ ಸಾಮಾನ್ಯವಾಗಿ ಊರಿಗಿಂತ ಮೊದಲೇ ಬಿಡುಗಡೆಯಾಗುತ್ತಿದ್ದ ಸಮೀಕ್ಷೆಗಳು ಜನರ ಮೂಡ್‌ ಸೆಟ್‌ ಮಾಡಲು ಯತ್ನಿಸುತ್ತಿದ್ದವು. ಈ ಚುನಾವಣೆಯಲ್ಲಿ ಅವುಗಳೂ ನಾಪತ್ತೆಯಾಗಿವೆ.

ಸಮೀಕ್ಷೆಗಳಿಲ್ಲದ ಚುನಾವಣೆ:

ಈ ಬಾರಿ ಎಂದಿಗಿಂತ ಕಡಿಮೆ ಸಮೀಕ್ಷೆಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಸೋಮವಾರ ಬಿಡುಗಡೆಯಾಗಿರುವ ಟೈಮ್ಸ್‌ ನೌ-ವಿಎಂಆರ್‌ ಸಮೀಕ್ಷೆ ಎನ್‌ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂದು ಹೇಳಿದೆ. ಎನ್‌ಡಿಎ 279 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಯುಪಿಎ 149 ಹಾಗೂ ಇತರರು 115 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.

ತಮಾಷೆಯ ಸಂಗತಿ ಏನೆಂದರೆ, ವಾರದ ಹಿಂದೆ ಬಿಡುಗಡೆಯಾಗಿದ್ದ ಇದೇ ಸಮೀಕ್ಷೆ ಎನ್‌ಡಿಎ 283, ಯುಪಿಎ 135 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂಬುದಾಗಿ ಹೇಳಿತ್ತು. ಅಂದರೆ ವಾರದ ಅಂತರದಲ್ಲಿ ಆಡಳಿತ ಪಕ್ಷ ಸ್ಥಾನಗಳನ್ನು ಕಳೆದುಕೊಳ್ಳುತ್ತಾ ಸಾಗಿದರೆ ಕಾಂಗ್ರೆಸ್‌ ಅವುಗಳನ್ನು ಹೆಕ್ಕಿ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. ಮತದಾನ ಆರಂಭವಾಗುವ ಮುಂದಿನ ವಾರದ ಕತೆ ಏನಾಗಿರಬಹುದು? ಇಲ್ಲೂ ಗೊಂದಲ ಅಷ್ಟೆ ಕಾಣಿಸುತ್ತಿದೆ.

ಇದಕ್ಕೂ ಬಹಳ ಮೊದಲು ಅಂದರೆ ಜನವರಿಯಲ್ಲಿ ಬಿಡುಗಡೆಯಾಗಿದ್ದ ಎಬಿಪಿ-ಸಿವೋಟರ್‌ ಸಮೀಕ್ಷೆ ಎನ್‌ಡಿಎ 233 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಮತ್ತು ಯುಪಿಎ 167 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು. ಈ ಸಮೀಕ್ಷೆ ಸ್ಪಷ್ಟವಾಗಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದಿತ್ತು. ಆದರೆ ಮಾರ್ಚ್‌ನಲ್ಲಿ ಬಿಡುಗಡೆಯಾದ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಎನ್‌ಡಿಎ 285 ಸ್ಥಾನಗಳಲ್ಲಿ ಗೆಲಲ್ಲಿದೆ ಎಂದು ತಿಳಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ 13, ಕಾಂಗ್ರೆಸ್‌ 13 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ವರದಿ ಮಾಡಿತ್ತು.

ಮಾರ್ಚ್‌ 24ರಂದು ಮತ್ತೊಮ್ಮೆ ಬಿಡುಗಡೆಯಾದ ಐಎಎನ್‌ಎಸ್‌-ಸಿವೋಟರ್‌ ಸಮೀಕ್ಷೆ ಕೂಡ ಎನ್‌ಡಿಎ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಅನುಭವಿಸಲಿದೆ ಎಂದು ತಿಳಿಸಿದೆ. 261 ಸ್ಥಾನಗಳನ್ನು ಗೆದ್ದುಕೊಳ್ಳಲಿರುವ ಎನ್‌ಡಿಎ ಅಧಿಕಾರಕ್ಕೆ ಬರಲು ಟಿಆರ್‌ಎಸ್‌, ಬಿಜೆಡಿ, ವೈಎಸ್‌ಆರ್‌ ಕಾಂಗ್ರೆಸ್‌ನತ್ತ ಕೈ ಚಾಬೇಕಾಗುತ್ತದೆ ಎಂದು ಸಮೀಕ್ಷೆ ತಿಳಿಸಿತ್ತು.

ಹೀಗೆ ಜನರ ಗೊಂದಲ ಸಮೀಕ್ಷೆಗಳಲ್ಲೂ ಎದ್ದು ಕಾಣಿಸುತ್ತಿದೆ. ಇದರಿಂದ ಸೋಲು ಗೆಲುವನ್ನು ನಿರ್ಧರಿಸುವ ನಿರ್ಣಾಯಕ ಮತದಾರರು ಈ ಬಾರಿ ಯಾರ ಪರ ವಾಲಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿಯೇ ಉಳಿದುಕೊಂಡಿದೆ. ಎಷ್ಟಾದರೂ ಗೌಪ್ಯ ಮತದಾನ ಪ್ರಕ್ರಿಯೆ ಇರುವ ದೇಶದಲ್ಲಿ ಈ ಬಾರಿ ಗೌಪ್ಯತೆಗೆ ಗೊಂದಲವೂ ಸೇರಿಕೊಂಡು ಫಲಿತಾಂಶವನ್ನು ಇನ್ನಷ್ಟು ನಿಗೂಢವಾಗಿಟ್ಟಿದೆ.