Home Cover Story ಜೆಎನ್‌ಯುನಿಂದ ಲೋಕಸಭೆಯತ್ತ: ಕನ್ಹಯ್ಯಾ ಎಂಬ ಗೆಲ್ಲುವ ಕುದುರೆ & ಕಮ್ಯುನಿಸ್ಟರ ಭವಿಷ್ಯ 

ಜೆಎನ್‌ಯುನಿಂದ ಲೋಕಸಭೆಯತ್ತ: ಕನ್ಹಯ್ಯಾ ಎಂಬ ಗೆಲ್ಲುವ ಕುದುರೆ & ಕಮ್ಯುನಿಸ್ಟರ ಭವಿಷ್ಯ 

SHARE

70 ವರ್ಷಗಳ ಕಾಂಗ್ರೆಸ್‌ ಆಡಳಿತದ ಬಗ್ಗೆ ಭ್ರಮನಿರಸನಗೊಂಡ ಜನ 2014ರಲ್ಲಿ ನರೇಂದ್ರ ಮೋದಿ ಎಂಬ ಹೊಸ ಮುಖಕ್ಕೆ ಮಣೆ ಹಾಕಿದ್ದರು. ಅದಾಗಿ ಇದೀಗ ಐದು ವರ್ಷ ಕಳೆದಿದೆ. ಪರಿಸ್ಥಿತಿಯಲ್ಲೇನಾದರೂ ಬದಲಾಯಿತೇ? ಇಲ್ಲ. ಬದಲಿಗೆ ಜನ ಮತ್ತಷ್ಟು ಭ್ರಮ ನಿರಸನಗೊಂಡಿದ್ದಾರೆ. ಇಂಥ ಹೊತ್ತಲ್ಲಿ ಅದೆಷ್ಟೋ ಜನರಿಗೆ ಭರವಸೆಯ ಕಿಡಿಯಂತೆ ಕಾಣುತ್ತಿರುವುದು ಆತನೊಬ್ಬ ಮಾತ್ರ; ಕನ್ಹಯ್ಯಾ ಕುಮಾರ್‌.

ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿರೋಧದ ಧ್ವನಿಯಾಗಿದ್ದ ಈತನನ್ನು ‘ಮಣ್ಣಿನ ಮಗ’ ಎಂಬುದಾಗಿ ‘ದಿ ಟೆಲಿಗ್ರಾಫ್‌’ ಕರೆದಿದೆ. ನುಡಿಗಟ್ಟಿಗೆ ಅರ್ಥ ತುಂಬುವಂತೆ ರಾಷ್ಟ್ರ ರಾಜಧಾನಿ ಬಿಟ್ಟು ತಮ್ಮ ತವರು ಬಿಹಾರದ ಬೆಗುಸರಾಯ್‌ನಿಂದ ಕನ್ಹಯ್ಯಾ ಕುಮಾರ್‌ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ.

ಅಂದ ಹಾಗೆ ಇಂದು ಕನ್ಹಯ್ಯಾ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಹತ್ತಾರು ಸಾವಿರ ಜನ, ಅವರ ಪೋಸ್ಟ್‌ಗಳಿಗೆ ಹರಿದು ಬಂದ ಸಾವಿರಾರು ಲೈಕು, ಕಮೆಂಟ್‌ ಮತ್ತು ಶೇರುಗಳು ಕನ್ಹಯ್ಯಾ ಸ್ಪರ್ಧೆಯಾಚೆಗೆ ಇನ್ನೇನನ್ನೋ ಹೇಳುತ್ತಿದ್ದವು. ಆತನ ಮೇಲೆ ಜನ ಇಟ್ಟಿದ್ದ ಭರವಸೆ ಮತ್ತು ನಿರೀಕ್ಷೆಯನ್ನು ತೋರಿಸುತ್ತಿತ್ತು.

ಸಾಮಾನ್ಯವಾಗಿ ಚುನಾವಣಾ ಅಖಾಡದಲ್ಲಿ ಓರ್ವ ಅಭ್ಯರ್ಥಿ ಗೆಲ್ಲುತ್ತಾನೆ ಎಂದಾಗ ಜನ ನೀಡುವ ಪ್ರತಿಕ್ರಿಯೆಗೂ, ಸೋಲುತ್ತಾನೆ ಎಂದಾಗ ಜನ ನಡೆದುಕೊಳ್ಳುವ ರೀತಿಗೂ ವ್ಯತ್ಯಾಸಗಳಿವೆ. ಬೆಗುಸರಾಯ್‌ನಲ್ಲಿ ಇಂದು ಸೇರಿದ್ದ ಜನಸ್ತೋಮ, ನಿಧಿ ಸಂಗ್ರಹಕ್ಕೆ ಇಳಿದಾಗ ಹರಿದು ಬಂದ 70 ಲಕ್ಷ ದೇಣಿಗೆ ಕನ್ಹಯ್ಯಾ ಗೆಲುವಿನತ್ತ ಮುಖಮಾಡಿದ್ದರ ಸೂಚನೆಯನ್ನು ನೀಡುತ್ತಿವೆ.

ಜೆಎನ್‌ಯುನಿಂದ ನಾಪತ್ತೆಯಾದ ವಿದ್ಯಾರ್ಥಿ ನಜೀಬ್‌ ಅಹಮದ್‌ ತಾಯಿ ಫಾತಿಮಾ ನಫೀಸ್‌ ಮತ್ತು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ ಜತೆ ನಾಮಪತ್ರ ಸಲ್ಲಿಸಲು ತೆರಳುತ್ತಿರುವ ಕನ್ಹಯ್ಯಾ ಕುಮಾರ್‌.

ಇಲ್ಲಿ ಕನ್ಹಯ್ಯಾ ಕುಮಾರ್‌ ಎದುರಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಸ್ಪರ್ಧಿಸುತ್ತಿದ್ದಾರೆ. ಅವರು ನವಡಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದವರು. ಆ ಕ್ಷೇತ್ರವನ್ನು ಬಿಜೆಪಿ ಈ ಬಾರಿ ಜೆಡಿಯುಗೆ ಬಿಟ್ಟುಕೊಟ್ಟಿದ್ದರಿಂದ ಸಿಂಗ್‌ರನ್ನು ಇಲ್ಲಿಗೆ ಅಟ್ಟಲಾಗಿದೆ. ಆರಂಭದಲ್ಲಿ ಕನ್ಹಯ್ಯಾ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಸಿಂಗ್‌ ಕೊನೆಗೆ ಅನಿವಾರ್ಯವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಹಾಗೆ ನೋಡಿದರೆ ಕನ್ಹಯ್ಯಾ ಸ್ಪರ್ಧೆಯಾಚೆಗೂ ಬೆಗುಸರಾಯ್‌ನಲ್ಲಿ ಕಮ್ಯೂನಿಸ್ಟ್‌ ಪಕ್ಷಗಳಿಗೆ ನೆಲೆ ಇದೆ. ಮತ್ತು ವಿಭಿನ್ನ ರಾಜಕೀಯವನ್ನು ಪ್ರತಿಪಾದಿಸುವ ವಾತಾವರಣ ಇಲ್ಲಿದೆ.

ಉದಾಹರಣೆಗೆ ಇಲ್ಲೊಬ್ಬರು ಪಿ. ಗುಪ್ತಾ ಎಂಬ ವೈದ್ಯರಿದ್ದಾರೆ. ಕಮ್ಯೂನಿಸ್ಟ್‌ ಸಿದ್ಧಾಂತ ಪ್ರತಿಪಾದಿಸುವ ಇವರು ವಿದೇಶಕ್ಕೆ ತೆರಳಲು ಸಿಕ್ಕಿದ ಸ್ಕಾಲರ್‌ಶಿಪ್‌ ಬಿಟ್ಟು ಜನ ಸೇವೆಗೆ ಇಳಿದವರು. ತಮ್ಮ ಊರಿನಲ್ಲಿ ಬಹಳ ಜನಪ್ರಿಯರಾಗಿರುವ ಇವರು ರೋಗಿಗಳಿಲ್ಲದಿದ್ದರೆ, ಮನೆ ಮನೆಗೆ ಹೋಗಿ ಆರೋಗ್ಯ ವಿಚಾರಿಸುವವರು. ಊರಿನವರ ಜತೆ ಹೀಗೊಂದು ಸಂಬಂಧ ಬೆಳೆಸುತ್ತಾ ಬಂದವರೀಗ ಕಮ್ಯೂಗಲಿನಿಷ್ಟ್‌ ಪಕ್ಷದ ವತಿಯಿಂದ ಆಸ್ಪತ್ರೆಯನ್ನು ತೆರೆದು ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇದೇ ರೀತಿ ‘ವಿಪ್ಲವಿ ಪುಸ್ತಕಾಲಯ’ ಎಂಬ ಗ್ರಂಥಾಲಯವೂ ಬೆಗುಸರಾಯ್‌ನಲ್ಲಿದೆ. 1931ರಲ್ಲಿ ಭಗತ್‌ ಸಿಂಗ್‌ ಅನುಯಾಯಿಗಳು ಹುಟ್ಟುಹಾಕಿದ ಈ ಪುಸ್ತಕಾಲಯ ಇವತ್ತು ಅಖಿಲ ಭಾರತ ಬರಹಗಾರರ ಸಂಘದ ಸಭೆ ನಡೆಸುವಷ್ಟು ದೊಡ್ಡದಾಗಿ ಬೆಳೆದಿದೆ. ಹೀಗೆ ವೈವಿಧ್ಯತೆ ಮತ್ತು ವಿಶಿಷ್ಠ ಸಿದ್ಧಾಂತದ ಬೇರುಗಳು ಬೆಗುಸರಾಯ್‌ನಲ್ಲಿವೆ.

ವಿಪ್ಲವಿ ಪುಸ್ತಕಾಲಯ…

ಹೀಗೊಂದು ಸಾಂಸ್ಕೃತಿಕ ಭಿನ್ನತೆಯ ನಾಡಿನಲ್ಲಿ ಕಮ್ಯೂನಿಸ್ಟ್‌ ಪಕ್ಷಗಳಿಗೆ ಒಂದಷ್ಟು ಮತಗಳಿವೆ. 2014ರಲ್ಲಿ ಇಲ್ಲಿ ಲೋಕಸಭೆ ಚುನಾವಣೆ ನಡೆದಾಗ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಭೋಲ ಸಿಂಗ್ 4.28 ಲಕ್ಷ ಮತಗಳನ್ನು ಪಡೆದಿದ್ದರೆ, ಎರಡನೇ ಸ್ಥಾನದಲ್ಲಿದ್ದ ಆರ್‌ಜೆಡಿಯ ತನ್ವೀರ್‌ ಹಸನ್‌ 3.70 ಲಕ್ಷ ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಕಮ್ಯೂನಿಷ್ಟ್‌ ಪಕ್ಷದ ಅಭ್ಯರ್ಥಿ ರಾಜೇಂದ್ರ ಪ್ರಸಾದ್‌ ಸಿಂಗ್‌ ಮೂರನೇ ಸ್ಥಾನ ಪಡೆದಿದ್ದರಾದರೂ 1.93 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು.

2009ರ ಚುನಾವಣೆಯಲ್ಲಂತೂ ಜಯ ಸಾಧಿಸಿದ ಜೆಡಿಯು ಅಭ್ಯರ್ಥಿ 2.06 ಮತಗಳನ್ನು ಪಡೆದುಕೊಂಡಿದ್ದರೆ, ಕೇವಲ 40 ಸಾವಿರ ಮತಗಳಿಂದ ಸಿಪಿಐ ಅಭ್ಯರ್ಥಿ ಸೋಲೊಪ್ಪಿಕೊಂಡಿದ್ದರು. ಹೀಗೊಂದು ಪ್ರಬಲ ಸ್ಪರ್ಧೆಗಳನ್ನು ನೀಡಿದ ಇತಿಹಾಸ ಇಲ್ಲಿನ ಕಮ್ಯೂನಿಸ್ಟ್‌ ಪಕ್ಷಕ್ಕೆ ಇದೆ.

ಸದ್ಯ ಈ ಕ್ಷೇತ್ರಕ್ಕೆ ಒಳಪಡುವ 7 ವಿಧಾನಸಭೆ ಕ್ಷೇತ್ರಗಳಲ್ಲಿ ಬಛ್ವಾರದಲ್ಲಿ ಸಿಪಿಐ ಪಕ್ಷದ ಶಾಸಕರಾಗಿದ್ದಾರೆ. ತೆಘ್ರ ಎಂಬ ಇನ್ನೊಂದು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸಿಪಿಐ ಕಡಿಮೆ ಅಂತರದಿಂದ ಸೋತಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹೀಗಿರುವಾಗ ಇದಕ್ಕೆ ಇನ್ನೊಂದಷ್ಟು ಮತಗಳು ಸೇರ್ಪಡೆಯಾದರೆ ಕನ್ಹಯ್ಯಾ ಕುಮಾರ್‌ ಗೆಲುವು ಕಷ್ಟವೇನಲ್ಲ. ಜತೆಗೆ ಅವರ ಪರವಾಗಿ ಪ್ರಚಾರಕ್ಕೂ ಖ್ಯಾತ ನಾಮರು ಬರುತ್ತಿದ್ದಾರೆ. ಖ್ಯಾತ ಸಾಹಿತಿ, ಹಿಂದಿ ಗೀತ ರಚನೆಕಾರ ಜಾವೆದ್‌ ಅಖ್ತರ್‌ ಮತ್ತು ನಟಿ ಶಬಾನ ಅಜ್ಮಿ ದಂಪತಿ ಮತ ಯಾಚನೆ ಮಾಡಲಿದ್ದಾರೆ. ಗುಜರಾತ್‌ನ ಇನ್ನೋರ್ವ ಯುವ ನಾಯಕ ಜಿಗ್ನೇಶ್‌ ಮೇವಾನಿ ಬೆಗುಸರಾಯ್‌ನಲ್ಲೇ ಬೀಡು ಬಿಟ್ಟಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ.

ಅಂಧಕಾರದಲ್ಲಿ ಆಶಾಕಿರಣ:

ಹಲವು ಕಾರಣಗಳಿಗೆ ಕನ್ಹಯ್ಯಾ ಕುಮಾರ್‌ ರಾಜಕೀಯ ಪ್ರವೇಶ ಮತ್ತು ಗೆಲುವು ಅಗತ್ಯವಾಗಿದೆ. “ಉದ್ಯಮ ಮತ್ತು ರಾಜಕೀಯ ಒಟ್ಟಾಗಿರುವ ಹೊತ್ತಲ್ಲಿ ಈತ ಮಾತ್ರ ಅದಕ್ಕೆ ಅಪವಾದ,” ಎನ್ನುತ್ತಾರೆ ಜೆಎನ್‌ಯು ಪ್ರಾಧ್ಯಾಪಕ ಮಣೀಂದ್ರ ಠಾಕೂರ್‌.

“ಕನ್ಹಯ್ಯಾ ಕುಮಾರ್‌ ಎನ್ನುವುದು ಜನರಿಗೆ ಒಂದು ಹೊಸ ಭರವಸೆ” ಎನ್ನುತ್ತಾರೆ ಅವರು. ‘ದಿ ವೈರ್‌’ಗೆ ಅಂಕಣ ಬರೆದಿರುವ ಅವರು, “ರಾಜ್ಯದ ಜನರಿಗೆ ಕನ್ಹಯ್ಯಾ ನಮ್ಮನ್ನು ಲೋಕಸಭೆಯಲ್ಲಿ ಪ್ರತಿನಿಧಿಸಲಿದ್ದಾರೆ ಎಂಬ ಕಾರಣಕ್ಕೆ ಈ ಭರವಸೆಯಲ್ಲ; ಬದಲಿಗೆ ಜಾತಿ, ಸಮುದಾಯವನ್ನು ಓಲೈಸುವ ಹೇಳಿಕೆಗಳು ಮತ್ತು ಕಾರ್ಪೊರೇಟ್‌ ದೇಣಿಗೆ ಇಲ್ಲದೆಯೂ ಚುನಾವಣೆ ಗೆಲ್ಲಬಹುದು ಎಂಬ ಭರವಸೆಯನ್ನು ಅವರ ಗೆಲುವು ತಂದುಕೊಡಲಿದೆ,” ಎಂದು ವಿವರಿಸುತ್ತಾರೆ ಅವರು.

ಇದೇ ಮಾತನ್ನು ಮುಂದುವರೆಸುವ ಕರ್ನಾಟಕದ ಪತ್ರಕರ್ತ ಜಿ. ಎನ್‌. ಮೋಹನ್‌, “ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಶೈಲಿಯ ರಾಜಕಾರಣ ಮತ್ತು ಸಂಘಪರಿವಾರ ಪ್ರೇರಿತ ಬಿಜೆಪಿ ರಾಜಕಾರಣದಾಚೆಗೆ ಏನೂ ಇಲ್ಲ ಎಂಬ ಅಭಿಪ್ರಾಯ ಸಮಾಜದಲ್ಲಿ ಬೇರೂರಿದೆ. ಮೋದಿ ವರ್ಸಸ್‌ ರಾಹುಲ್‌ ಎಂಬುದನ್ನು ಮಾಧ್ಯಮಗಳೂ ಮುಂದಿಟ್ಟಿದ್ದರಿಂದ ರಾಜಕೀಯದಲ್ಲಿ ಬೇರೆ ಆಯ್ಕೆ ಇಲ್ಲ ಮತ್ತು ಬೇರೆ ಪ್ರಯೋಗಕ್ಕೆ ಅವಕಾಶವಿಲ್ಲ ಎಂದು ಜನರೂ ಅಂದುಕೊಂಡಿದ್ದರು. ಇದರ ನಡುವೆ ಕನ್ಹಯ್ಯಾ ಕುಮಾರ್‌ ಇವತ್ತಿನ ಭಾರತದ ರಾಜಕೀಯದಲ್ಲಿ ಹೊಸ ಮಾದರಿಯ ರಾಜಕಾರಣವನ್ನು ಮುನ್ನಡೆಸುತ್ತಿದ್ದಾರೆ,” ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜತೆಗೆ “ಕನ್ಹಯ್ಯಾ ಕುಮಾರ್‌ ಹೊಸ ಪೀಳಿಗೆಯ ಪ್ರತಿನಿಧಿ,” ಎಂಬ ಅಭಿಪ್ರಾಯ ಮುಂದಿಡುತ್ತಾರೆ ಪತ್ರಕರ್ತ ಸನತ್‌ ಕುಮಾರ್‌ ಬೆಳಗಲಿ.

“ಇವತ್ತು ದೇಶದಲ್ಲಿ ಒಂದು ನಿರಾಶದಾಯಕ ವಾತಾವರಣ ಇದೆ. ಜನರಿಗೆ ಯಾವುದೇ ಪರಿಹಾರ ಕಾಣುತ್ತಿಲ್ಲ. ಅದರ ನಡುವೆ ಅಂಧಕಾರದಲ್ಲಿ ಆಶಾಕಿರಣವಾಗಿ ಕನ್ಹಯ್ಯಾ ಬಂದಿದ್ದಾರೆ,” ಎನ್ನುತ್ತಾರೆ ಅವರು.

“ಹಳೆ ಪೀಳಿಗೆಯ ಅದೇ ಮುಖಗಳ ನಡುವೆ ಇವರು ಹೊಸ ಮುಖ. ಜತೆಗೆ ಅವರಿಗೆ ಹೊರಡುವ ದಾರಿಯ ಬಗ್ಗೆ, ತಲುಪುವ ಗುರಿಯ ಬಗ್ಗೆ ಸ್ಪಷ್ಟತೆ ಇದೆ. ಪ್ರಾಮಾಣಿಕತೆ ಇದೆ. ಅವರೊಬ್ಬ ಓರ್ವ ಅಂಗನವಾಡಿ ಕಾರ್ಯಕರ್ತೆಯ ಮಗ. ಅವರ ಜೀವನವೂ ಪಾರದರ್ಶಕವಾಗಿದೆ,” ಎಂಬ ಮಾಹಿತಿಯನ್ನು ನೀಡುತ್ತಾರೆ ಬೆಳಗಲಿ.

ಕಮ್ಯೂನಿಸ್ಟ್‌ ಪಕ್ಷದ ಹೊಸ ಭರವಸೆ:

ಇನ್ನೊಂದು ಕಡೆ ಕಮ್ಯೂನಿಷ್ಟ್‌ ಪಕ್ಷದ ನವತಾರೆಯಾಗಿ ಕನ್ಹಯ್ಯಾ ಕಾಣಿಸಿಕೊಳ್ಳುತ್ತಿದ್ದಾರೆ.

“ಪಕ್ಷದಲ್ಲಿ ತಳ ಹಂತದಿಂದ ಬೆಳೆದು ಏಣಿ ಹತ್ತಿಕೊಂಡು ಮೇಲೆ ಬರುವಾಗ ಹೆಚ್ಚಿನ ನಾಯಕರಿಗೆ ವಯಸ್ಸಾಗಿರುತ್ತದೆ. ಈಗ ಇರುವ ಬಹಳ ಜನ ಅಂಥಹವರೇ. ಇದರ ಜತೆಗೆ ಕಾರ್ಮಿಕ ಸಂಘಟನೆ, ಅಂಗನವಾಡಿ ಕಾರ್ಯಕರ್ತರನ್ನು ಒಟ್ಟು ಮಾಡುವುದು ಮೊದಲಾದವುಗಳ ಮಧ್ಯೆಯೂ ಕಮ್ಯೂನಿಸ್ಟ್‌ ನಿಂತ ನೀರಾಗಿದೆ. ಇಂಥಹ ವಾತಾವರಣದಲ್ಲಿ ಈತನ ಭಾಷೆ, ಮಾತುಗಳು ಬೇರೆ ರೀತಿ ಇದೆ. ಹೀಗಾಗಿ ಕಮ್ಯೂನಿಷ್ಟ್‌ ಚಳುವಳಿಗೆ ಹೊಸ ಚೈತ್ಯನ್ಯ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ,” ಎನ್ನುತ್ತಾರೆ ಸನತ್‌ ಕುಮಾರ್‌ ಬೆಳಗಲಿ.

ಆದರೆ ಕಮ್ಯೂನಿಸ್ಟ್‌ ರಾಜಕಾರಣ ಏಕತಾನತೆಯದ್ದು ಎಂಬುದನ್ನು ಜಿ. ಎನ್‌. ಮೋಹನ್‌ ಒಪ್ಪುವುದಿಲ್ಲ. “ಕನ್ಹಯ್ಯಾ ಕುಮಾರ್‌ ಮತ್ತು ಕಮ್ಯೂನಿಸ್ಟ್‌ ಪಕ್ಷಗಳನ್ನು ನಾನು ಬೇರೆ ಬೇರೆ ಎಂದು ನೋಡುವುದಿಲ್ಲ. ಕಮ್ಯೂನಿಸ್ಟ್‌ ರಾಜಕಾರಣವೇ ತುಂಬಾ ಅರ್ಥಗರ್ಭಿತವಾದ, ತುಂಬಾ ಹೊಸತನ್ನು ಹೊಂದಿದ ರಾಜಕಾರಣ. ಪರ್ಯಾಯ ರಾಜಕಾರಣವನ್ನು ಕೊಡುವ ಶಕ್ತಿ ಕಮ್ಯೂನಿಸ್ಟ್‌ ಪಕ್ಷಗಳಿಗೆ ಇದೆ. ಇದರಿಂದಲೇ ಹೊರ ಬಂದವನು ಕನ್ಹಯ್ಯಾ,” ಎನ್ನುತ್ತಾರೆ ಅವರು.

ಹೀಗೆ, ದೇಶದ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಗಿರಿಕಿ ಹೊಡೆಯುತ್ತಿರುವ ಸಮಯದಲ್ಲಿ ಮೂರನೇ ಆಯ್ಕೆಯ ಸಾಧ್ಯತೆಯನ್ನೂ ಕನ್ಹಯ್ಯಾ ಉಮೇದುವಾರಿಕೆ ದೇಶದ ಮುಂದಿಟ್ಟಿದೆ. ಇದು ಬಿಹಾರ ಒಂದು ಲೋಕಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಯಾಗಿ ಕಂಡರೂ, ಆಳದಲ್ಲಿ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಭವಿಷ್ಯದ ಹಾದಿಯಂತೆಯೂ ಕಾಣಿಸುತ್ತಿದೆ.