Home Cover Story 2019ರ ಬಾಟಲಿಗೆ 2014ರ ಮದ್ಯ: ಇದು ಬಿಜೆಪಿಯ ಚುನಾವಣಾ ‘ಸಂಕಲ್ಪ ಪತ್ರ’ದ ಕಂಪ್ಲೀಟ್ ಡೀಟೆಲ್ಸ್

2019ರ ಬಾಟಲಿಗೆ 2014ರ ಮದ್ಯ: ಇದು ಬಿಜೆಪಿಯ ಚುನಾವಣಾ ‘ಸಂಕಲ್ಪ ಪತ್ರ’ದ ಕಂಪ್ಲೀಟ್ ಡೀಟೆಲ್ಸ್

SHARE

ಹೊಸ ಬಾಟಲಿಯಲ್ಲಿ ಹಳೆ ಮದ್ಯ… ಸೋಮವಾರ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆಗೆ ಸರಿಯಾಗಿ ಒಪ್ಪುವ ಮಾತಿದು.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಹಿರಿಯ ನಾಯಕ ರಾಜನಾಥ್‌ ಸಿಂಗ್‌ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು. ಇದರಲ್ಲಿ ಒಟ್ಟು 75 ಆಶ್ವಾಸನೆಗಳನ್ನು ಬಿಜೆಪಿ ನೀಡಿದ್ದು, 2014ರಲ್ಲಿ ನೀಡಿದ್ದ ಭರವಸೆಗಳೇ ಹೆಚ್ಚು ಕಡಿಮೆ ಈ ಪ್ರಣಾಳಿಕೆಯಲ್ಲೂ ಪುನರಾವರ್ತನೆಯಾಗಿವೆ.

‘ಮಂದಿರ ಅಲ್ಲೇ ಕಟ್ಟುವೆವು’ ಎಂಬ ಬಿಜೆಪಿಯ ಘೋಷವಾಕ್ಯ 1990ರ ದಶಕದಿಂದ ಇದೀಗ 2020ರ ದಶಕದಲ್ಲೂ ಮುಂದುವರಿದಿದ್ದರೆ, 370ನೇ ವಿಧಿಯ ರದ್ದು ಮಾಡುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಇದರ ಜತೆಗೆ ಮೂಲ ಸೌಕರ್ಯಕ್ಕೆ 100 ಲಕ್ಷ ಕೋಟಿ ನೀಡಲಿದ್ದೇವೆ ಎಂಬ ಅತಿಶಯೋಕ್ತಿಯ ಭರವಸೆಗಳೂ ಪ್ರಣಾಳಿಕೆಯಲ್ಲಿ ಇವೆ.

ಪ್ರಣಾಳಿಕೆಯ ಮುಖ್ಯ ಅಂಶಗಳನ್ನು ಗಮನಿಸುವುದಾದರೆ,

 • ಉಗ್ರವಾದ ಸಂಪೂರ್ಣ ನಿರ್ಮೂಲನೆಗೊಳ್ಳುವವರೆಗೆ ಭಯೋತ್ಪಾದನೆಯ ಬಗೆಗಿನ ಝೀರೋ ಟಾಲೆರೆನ್ಸ್‌ (ಸಹಿಷ್ಣುತೆ) ಮುಂದುವರಿಕೆ. ಭಯೋತ್ಪಾದನೆ ನಿಗ್ರಹಕ್ಕೆ ಸೇನೆಗೆ ಪೂರ್ಣ ಸ್ವಾತಂತ್ರ್ಯ.
 • ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿ ದೇಶದ ರಕ್ಷಣಾ ಪಡೆಗಳ ದಾಳಿ ಸಾಮರ್ಥ್ಯ ಹೆಚ್ಚಳ.
 • ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ರಕ್ಷಣಾ ನೀತಿ ರಚನೆ.
 • ಈಶಾನ್ಯ ಭಾರತದಲ್ಲಿ ಅಕ್ರಮ ವಲಸಿಗರು ಬರದಂತೆ ತಡೆಯಲು ಸೂಕ್ತ ಕ್ರಮ. ದೇಶದ ಇತರ ಭಾಗಗಳಿಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಸ್ತರಣೆ.
 • ರಾಮ ಮಂದಿರದ ವಿಚಾರದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗೆ ನಾವು ಬದ್ಧ. ಎಲ್ಲಾ ಆಯ್ಕೆಗಳ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಸೌಹಾರ್ದಯುತವಾಗಿ ರಾಮಮಂದಿರ ನಿರ್ಮಾಣ.
 • ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಎಲ್ಲಾ ರೈತರ ಖಾತೆಗೂ ವರ್ಷಕ್ಕೆ 6,000 ರೂಪಾಯಿ ಜಮೆ.
 • ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ‘ಮೇಕ್‌ ಇನ್‌ ಇಂಡಿಯಾ ಇನ್‌ ಡಿಫೆನ್ಸ್‌’ ಜಾರಿಗೆ ಬದ್ಧ.
 • ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ವಲಸೆ ತಡೆಯಲು ದೇಶದ ಗಡಿ ಭದ್ರತೆ ಹೆಚ್ಚಳ.
 • ಅಕ್ಕಪಕ್ಕದ ದೇಶದಿಂದ ತಪ್ಪಿಸಿಕೊಂಡು ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರ ರಕ್ಷಣೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬದ್ಧ. ನೆರೆಯ ದೇಶಗಳಿಂದ ವಲಸೆ ಬಂದ ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಗೆ ಪೌರತ್ವ.
 • ಮುಂದಿನ ಐದು ವರ್ಷಗಳಲ್ಲಿ ಎಡಪಂಥೀಯ ತೀವ್ರವಾದವನ್ನು ಕಿತ್ತೊಗೆಯಲು ಪರಿಣಾಮಕಾರಿ ಕ್ರಮ ಜಾರಿ.
 • ಸಂಸತ್ತಿನ 370ನೇ ವಿಧಿಯನ್ನು ರದ್ದುಗೊಳಿಸಲು ಇಂದಿಗೂ ಬದ್ಧ.
 • ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿ ಮರಳಲು ಅಗತ್ಯ ವ್ಯವಸ್ಥೆ, ಇದರ ಜತೆಗೆ ಪಶ್ವಿಮ ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಮತ್ತು ಛಾಂಬ್‌ನಿಂದ ಬರುವವರಿಗೆ ಆಶ್ರಯ ಪಡೆದುಕೊಳ್ಳಲು ಆರ್ಥಿಕ ಸಹಾಯ.
 • 2022ಕ್ಕೆ ರೈತರ ಆದಾಯ ದ್ವಿಗುಣ.
 • 60 ವರ್ಷ ದಾಟಿದ ದೇಶದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಂಚಣಿ ನಿಡುವ ಯೋಜನೆ
 • 2022ಕ್ಕೂ ಮೊದಲು ದೇಶದ ಎಲ್ಲಾ ಜನರಿಗೂ ವಸತಿ ಒದಗಿಸಲು ಕ್ರಮ
 • ಜಲ್‌ ಜೀವನ್‌ ಮಿಷನ್‌ಗೆ ಚಾಲನೆ ನೀಡಲಿದ್ದು 2024ಕ್ಕೆ ಮೊದಲು ಎಲ್ಲಾ ಮನೆಗಳಿಗೆ ಕೊಳವೆ ಜಾಲದ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ.
 • 2022ಕ್ಕೆ ಮೊದಲು ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್‌ ಫೈಬರ್‌ ಮೂಲಕ ಅಂತರ್ಜಾಲ ಸಂಪರ್ಕ.
 • ಗ್ರಾಮೀಣ ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗೆ ಚಾಲನೆ.
 • ಶೇಕಡಾ 100ರಷ್ಟು ತ್ಯಾಜ್ಯ ನೀರಿನ ವಿಲೇವಾರಿಗೆ ಕ್ರಮ, ಅನುಪಯಿಕ್ತ ನೀರಿನ ಮರುಬಳಕೆ.
 • 2030ಕ್ಕೆ ದೇಶವನ್ನು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿಸಲು ಕ್ರಮ. 2025ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್‌ ಮತ್ತು 2032ಕ್ಕೆ 10 ಟ್ರಿಲಿಯನ್‌ ಏರಿಸಲು ಅಗತ್ಯ ಯೋಜನೆ ಜಾರಿ.
 • ಜಿಎಸ್‌ಟಿಯ ಸರಳೀಕರಣ ಯತ್ನ ಮುಂದುವರಿಕೆ.
 • ಮೂಲಸೌಕರ್ಯ ವಲಯದಲ್ಲಿ 2024ಕ್ಕೆ 100 ಲಕ್ಷ ಕೋಟಿ ಬಂಡವಾಳ ಹೂಡಿಕೆ.
 • ಭಾರತವನ್ನು ಜಾಗತಿಕ ಉತ್ಪಾದನಾ ವಲಯವನ್ನಾಗಿ ಅಭಿವೃದ್ಧಿ ಪಡಿಸಲು ನಾವು ಹಲವು ಕ್ರಮ. ಅವುಗಳೆಂದರೆ, ಈಸ್‌ ಆಪ್‌ ಡೂಯಿಂಗ್‌ ಇಂಡೆಕ್ಸ್‌ನಲ್ಲಿ ದೇಶ 50ರೊಳಗಿನ ಸ್ಥಾನ ಪಡೆಯುವಂತೆ ಮಾಡುವುದು, ಕಂಪನಿ ಕಾಯ್ದೆ ಬಲವರ್ಧನೆ, ಇಂಡಸ್ಟ್ರಿ 4.0 ಹೆಸರಿನಲ್ಲಿ ಹೊಸ ಕೈಗರಿಕಾ ನೀತಿ ಜಾರಿ, ಮುಂದಿನ 5 ವರ್ಷಗಳಲ್ಲಿ ದೇಶದ 50 ನಗರಗಳಿಗೆ ಮೆಟ್ರೋ ಸಂಪರ್ಕ, ಮುಂದಿನ ಐದು ವರ್ಷಗಳಲ್ಲಿ 60,000 ಕಿ.ಮೀ.‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ಕಾರ್ಯಚರಿಸುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳ. ಅಂದರೆ, ಸದ್ಯ 100 ಏರ್ಪೋರ್ಟ್‌ಗಳು ಕಾರ್ಯಚರಿಸುತ್ತಿದ್ದು ಇವುಗಳ ಸಂಖ್ಯೆ 200ಕ್ಕೆ ಏರಿಕೆ.

ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆ ಕಾಂಗ್ರೆಸ್‌ ತೀಕ್ಷಣ ಪ್ರತಿಕ್ರಿಯೆ ನೀಡಿದೆ. 2014ರ ಪ್ರಣಾಳಿಕೆಯಲ್ಲಿದ್ದ ಶೇಕಡಾ 95ರಷ್ಟು ಅಂಶಗಳು ಇಲ್ಲೂ ಮುಂದುವರಿದಿವೆ ಎಂದಿರುವ ಕಾಂಗ್ರೆಸ್‌ ಇದನ್ನು ‘ಬಿಜೆಪಿಯ ಜುಮ್ಲಾ ಪ್ರಣಾಳಿಕೆ’ ಎಂದು ಕರೆದಿದೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಐದು ವರ್ಷದಲ್ಲಿ ಒಮ್ಮೆಯೂ ಮಂದಿರ ನೆನಪಾಗಲಿಲ್ಲವೇ? ಎಂದು ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ.