Home Cover Story ಬಿಜೆಪಿ ಪ್ರಣಾಳಿಕೆ: ನೆನಪಿದೆಯಾ, 2014ರಲ್ಲಿ ಮೋದಿ ನೀಡಿದ ಆಶ್ವಾಸನೆಗಳೇನಿದ್ದವು?

ಬಿಜೆಪಿ ಪ್ರಣಾಳಿಕೆ: ನೆನಪಿದೆಯಾ, 2014ರಲ್ಲಿ ಮೋದಿ ನೀಡಿದ ಆಶ್ವಾಸನೆಗಳೇನಿದ್ದವು?

SHARE

ಈಗಾಗಲೇ ಬಿಡುಗಡೆಯಾಗಿರುವ ಕಾಂಗ್ರೆಸ್‌ ಪ್ರಣಾಳಿಕೆ ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ಒಂದಷ್ಟು ಸದ್ದು ಮಾಡಿದೆ. ಸೋಮವಾರ ಆಡಳಿತ ಪಕ್ಷ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗಲಿದೆ.

ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಪ್ರಣಾಳಿಕೆ ಹೆಸರಿನಲ್ಲಿ ತಾವು ಅಧಿಕಾರಕ್ಕೆ ಬಂದರೆ ಏನೇನು ಜಾರಿಗೆ ತರುತ್ತೇವೆ ಎಂಬುದರ ಮುನ್ನೋಟವನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಹೆಚ್ಚು ಕಡಿಮೆ ಎಲ್ಲಾ ರಾಜಕೀಯ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳು ತಮ್ಮ ಕ್ಷೇತ್ರದಿಂದ ಹಿಡಿದು ದೇಶದ ಅಭಿವೃದ್ಧಿವರೆಗೆ ಮುನ್ನೋಟವನ್ನು ಪ್ರಣಾಳಿಕೆ ಹೆಸರಿನಲ್ಲಿ ಮುಂದಿಡುತ್ತಾರೆ.

ಇದರಲ್ಲಿ ಅಧಿಕಾರಕ್ಕೆ ಬಂದವರ ಪ್ರಣಾಳಿಕೆ ದಾಖಲೆ ರೂಪದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅಧಿಕಾರ ಅವಧಿಯ ಕೊನೆಯಲ್ಲಿ ಆಡಳಿತ ನಡೆಸಿದವರ ಸಾಧನೆಯನ್ನು ಅಳೆಯಲು ಇದೇ ದಾಖಲೆ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ 2014ರಲ್ಲಿ ಅಧಿಕಾರಕ್ಕೆ ಏರುವ ಮುನ್ನ ಬಿಜೆಪಿ ನೀಡಿದ ಪ್ರಣಾಳಿಕೆಯಲ್ಲಿ ಏನಿತ್ತು? ಎಂಬುದರ ಹಿನ್ನೋಟವೊಂದರ ಅಗತ್ಯವಿದೆ.

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 2014ರ ಚುನಾವಣೆಯಲ್ಲಿ ತಾವು ನೀಡಿರುವ ಆಶ್ವಾಸನೆಗಳನ್ನು ಪೂರ್ಣಗೊಳಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ಸಾಧ್ಯವಾಗಿದೆ? ಇಷ್ಟಕ್ಕೂ ಅವರು ಹಾಗೂ ಬಿಜೆಪಿ ನೀಡಿದ ಭರವಸೆಗಳು ಏನವು? ವಿವರ ಇಲ್ಲಿದೆ.

ಅದು ಬಿಜೆಪಿ ಮುನ್ನೋಟವಾಗಿತ್ತು:

2014ರಲ್ಲಿ ಬಿಜೆಪಿ ಲೋಕಸಭಾ ಚುನಾವಣೆ ಸಮಯದಲ್ಲಿ ಒಟ್ಟು 42 ಪುಟಗಳ ಪ್ರಣಾಳಿಕೆಯೊಂದನ್ನು ಜನರ ಮುಂದಿಟ್ಟಿತ್ತು. ಅದು ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ಘೋಷವಾಕ್ಯವನ್ನು ಹೊಂದಿತ್ತು. ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ನಾಯಕರಾದ ಲಾಲ್‍ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿಯಂತಹವರ ಸಲಹೆ ಸೂಚನೆಗಳ ಮೇರೆಗೆ ಈ ಪ್ರಣಾಳಿಕೆ ರಚಿಸಿದ್ದೇವೆ ಎಂಬುದಾಗಿ ಬಿಜೆಪಿ ಹೇಳಿಕೊಂಡಿತ್ತು.

ಅದರಲ್ಲಿದ್ದ ಕೆಲವು ಪ್ರಮುಖ ಆಶ್ವಾಸನೆಗಳು ಹೀಗಿದ್ದವು;

ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿ:

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ. ಪ್ರಮುಖವಾಗಿ ಪ್ರವಾಸೋದ್ಯಮ ಹಾಗೂ ಐಟಿ ಉದ್ಯಮದ ಮೂಲಕ ಹೆಚ್ಚಿನ ಯುವಕರು, ಪದವೀಧರರಿಗೆ ಉದ್ಯೋಗ.

2014ರ ಬಿಜೆಪಿ ಪ್ರಣಾಳಿಕೆ ಪುಸ್ತಕದ ಮುಖಪುಟ.

ನರೇಂದ್ರ ಮೋದಿ ಹಾಗೂ ಬಿಜೆಪಿ ಚುನಾವಣಾ ಪ್ರಣಾಳಿಕೆ ನೀಡಿದ ಅತ್ಯಂತ ದುಬಾರಿ ಆಶ್ವಾಸನೆಗಳ ಪೈಕಿ ಸ್ಮಾರ್ಟ್ ಸಿಟಿ ಹಾಗೂ ಬುಲೆಟ್ ರೈಲು ಪ್ರಮುಖವಾದವು. ಆಧುನೀಕರಣ, ಅಭಿವೃದ್ಧಿ ಹಾಗೂ ದೇಶವನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ, ಒಟ್ಟು 100 ನಗರಗಳನ್ನು ‘ಸ್ಮಾರ್ಟ್ ಸಿಟಿ’ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಬಿಜೆಪಿ ಹೇಳಿಕೊಂಡಿತ್ತು.

ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಜಪಾನ್ ಮಾದರಿಯ ‘ಬುಲೆಟ್ ಟ್ರೈನ್’ ಅಭಿವೃದ್ಧಿಪಡಿಸುವುದಾಗಿಯೂ ಅದು ತಿಳಿಸಿತ್ತು.

ಅಲ್ಪ ಸಂಖ್ಯಾತರ, ದಲಿತರ, ಗುಡ್ಡಗಾಡು ಜನರ ಏಳಿಗೆಗೆ ಬದ್ಧ, ಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ:

ಅಲ್ಪ ಸಂಖ್ಯಾತ ಸಮುದಾಯದ ಅತಿದೊಡ್ಡ ಭಾಗವಾದ ಮುಸ್ಲಿಂ ಸಮುದಾಯ ಈಗಲೂ ಬಡತನದಲ್ಲಿ ನರಳುತ್ತಿದೆ. ತಾರತಮ್ಯವಿಲ್ಲದೆ ಇವರಿಗೆ ಶಿಕ್ಷಣ, ಉದ್ಯೋಗ ನೀಡಲಾಗುವುದು. ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆ, ಉರ್ದು ಭಾಷೆಗೆ ಉತ್ತೇಜನ ನೀಡಲಾಗುವುದು ಎಂಬುದಾಗಿ 2014ರ ಚುನಾವಣೆಗೂ ಮುನ್ನ ಬಿಜೆಪಿ ಹೇಳಿಕೊಂಡಿತ್ತು.

ಗುಡ್ಡಗಾಡು ಜನರ ಅಭಿವೃದ್ಧಿಗಾಗಿ ‘ವನಬಂಧು ಕಲ್ಯಾಣ ಯೋಜನೆ’. ಗುಡ್ಡಗಾಡು ವಸತಿ ಸಮೂಹಗಳ ವಿದ್ಯುದ್ಧೀಕರಣ ಮತ್ತು ಸರ್ವಋತು ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಗುಡ್ಡಗಾಡು ಸಂಶೋಧನೆ ಮತ್ತು ಸಾಂಸ್ಕೃತಿಕ ಕೇಂದ್ರ ಸ್ಥಾಪನೆ, ಗ್ರಾಮೀಣ ಮಾರುಕಟ್ಟೆಗಳ ಜಾಲ ನಿರ್ಮಾಣ ಅದು ನೀಡಿದ್ದ ಇನ್ನಿತರ ಭರವಸೆಗಳಾಗಿದ್ದವು.

ಎಸ್‍ಸಿ, ಎಸ್‍ಟಿ, ಒಬಿಸಿ ಮತ್ತು ಇತರೆ ದುರ್ಬಲ ವರ್ಗಗಳ ಶಿಕ್ಷಣ ಮತ್ತು ಉದ್ಯಮಶೀಲತೆ ಕುರಿತ ಸಮಗ್ರ ವ್ಯವಸ್ಥೆ ಜಾರಿ. ಎಲ್ಲಾ ಹಂತದಲ್ಲೂ ಅಸ್ಪೃಶ್ಯತೆ ಹಾಗೂ ಮಲಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು.

ಕೃಷಿಕರಿಗೆ ಬಂಪರ್‌ ಭರವಸೆ:

ಕೃಷಿ ಉತ್ಪಾದನೆಯ ವೆಚ್ಚದ ಮೇಲೆ ಕನಿಷ್ಟ ಶೇ 50 ರಷ್ಟು ಲಾಭ ಸಿಗುವಂತೆ ನೋಡಿಕೊಳ್ಳುವ ವ್ಯವಸ್ಥೆ. ಕೃಷಿ ವಿಮೆ ಯೋಜನೆ, ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳು, ಆಗ್ರೋ-ಫುಡ್ ಸಂಸ್ಕರಣಾ ಸಮುಚ್ಛಯಗಳ ಸ್ಥಾಪನೆ, ಪ್ರತಿಯೊಂದು ಜಿಲ್ಲೆಯಲ್ಲೂ ಬೀಜ ಉತ್ಪಾದನಾ ಪ್ರಯೋಗಾಲಯ ಸ್ಥಾಪನೆ, ಪ್ರದೇಶಿಕ ಕಿಸಾನ್ ಟಿವಿ ಚಾನಲ್, ಎಪಿಎಂಸಿ ಕಾಯ್ದೆಯ ಸುಧಾರಣೆ ಹೀಗೆ ಬಿಜೆಪಿ ಭರವಸೆಗಳ ಸರಣಿ ಮುಂದುವರಿದಿತ್ತು.

ಪ್ರತಿ ಹೊಲಕ್ಕೂ ನೀರು, ನದಿಗಳ ರಾಷ್ಟ್ರೀಕರಣ, ನದಿಗಳ ಜೋಡನೆ ಹಾಗೂ ನದಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವುದಾಗಿ ಈ ದೇಶದ ಅನ್ನದಾತರಿಗೆ ಕೇಸರಿ ಪಕ್ಷ ಆಶ್ವಾಸನೆಗಳ ಭರಪೂರವನ್ನೇ ಹರಿಸಿತ್ತು.

ಬೆಲೆ ಏರಿಕೆ ನಿಯಂತ್ರಣಕ್ಕೆ ಯೋಜನೆ:

ಗರಿಷ್ಠ ಹಣದುಬ್ಬರ, ಹೆಚ್ಚು ಬಡ್ಡಿ ದರದ ವಿಷವೃತ್ತವನ್ನು ಒಡೆಯುವುದು, ಕಾಳಸಂತೆ ತಡೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಬೆಲೆ ಸ್ಥರೀಕರಣ ನಿಧಿ, ಏಕ ‘ರಾಷ್ಟ್ರೀಯ ಕೃಷಿ ಮಾರುಕಟ್ಟೆ’ ಸ್ಥಾಪನೆ, ಭಾರತೀಯ ಆಹಾರ ನಿಗಮದ ಸುಧಾರಣೆ ಮಾಡುವುದಾಗಿ ಬಿಜೆಪಿ ತಿಳಿಸಿತ್ತು.

ಮಹಿಳೆಯರ, ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಅಭಿವೃದ್ಧಿಗಾಗಿ ವಿಶೇಷ ಯೋಜನೆ:

ಸಂಸತ್ ಹಾಗೂ ರಾಜ್ಯ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಹೆಸರಿನಲ್ಲಿ ರಾಷ್ಟ್ರೀಯ ಅಭಿಯಾನ, ಬಾಲಿಕಾ ಸಮೃದ್ಧಿ, ಮಹಿಳೆಯರಿಗೆ ಪತ್ಯೇಕ ಐಐಟಿ ಸ್ಥಾಪನೆ, ಸರ್ವ ಮಹಿಳಾ ಮೊಬೈಲ್ ಬ್ಯಾಂಕ್‍ಗಳ ಸ್ಥಾಪನೆ, ಪ್ರತಿಯೊಂದೂ ಜಿಲ್ಲೆಯಲ್ಲೂ ಮಹಿಳೆಯರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಮೂಹಗಳ ಸ್ಥಾಪನೆ ಮಾಡುವುದಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹೇಳಿತ್ತು.

ಮಕ್ಕಳ ಶಿಕ್ಷಣ:

ಶಿಕ್ಷಣ ಹಕ್ಕು ಹಾಗೂ ಆಹಾರ ಭದ್ರತೆಯ ಹಕ್ಕು ಪರಿಣಾಮಕಾರಿ ಜಾರಿ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 6ರಷ್ಟು ಶಿಕ್ಷಣಕ್ಕೆ ಮೀಸಲು.

ವಿದ್ಯಾರ್ಥಿಗಳು ಓದುವಾಗಲೇ ಆದಾಯ ಗಳಿಸಲು ಅವಕಾಶ ನಿರ್ಮಾಣ, ಮುಕ್ತ ಆನ್‍ಲೈನ್ ಕೋರ್ಸ್‍ಗಳ ಆರಂಭ, ರಾಷ್ಟ್ರೀಯ ಕೌಶಲ್ಯ ಮಿಷನ್‍ಗೆ ಚಾಲನೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪುನಾರಚನೆ ಮಾಡುವುದಾಗಿ ಈ ದೇಶದ ಜನರಿಗೆ ಕಮಲ ಪಕ್ಷ ಮಾತು ನೀಡಿತ್ತು.

ಪಾರದರ್ಶಕ ತೆರಿಗೆ ವ್ಯವಸ್ಥೆ:

ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಸಾಧಿಸುವ ಮಾತನಾಡಿದ್ದ ಬಿಜೆಪಿ, ನಂಬಿಕೆಗೆ ಅರ್ಹವಾದ, ಧಕ್ಕೆಗೆ ಕಾರಣವಾಗದ ಮತ್ತು ಸುಸೂತ್ರ ತೆರಿಗೆ ವಾತಾವರಣದ ನಿರ್ಮಾಣ. ತೆರಿಗೆ ವ್ಯವಸ್ಥೆಯಲ್ಲಿ ಪ್ರಾಮಾಣೀಕರಣ ಮತ್ತು ಸರಳೀಕರಣ, ಬಹು-ಬ್ರ್ಯಾಂಡ್‍ಗಳ ಚಿಲ್ಲರೆ ರಂಗವೊಂದನ್ನು ಬಿಟ್ಟು ಆಸ್ತಿ ನಿರ್ಮಾಣ ಸೇರಿದಂತೆ ಉಳಿದೆಲ್ಲ ರಂಗದಲ್ಲೂ ಸಂಪೂರ್ಣ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವುದಾಗಿ ತಿಳಿಸಿತ್ತು.

ಭ್ರಷ್ಟಾಚಾರ ನಿರ್ಮೂಲನೆ:

ತಂತ್ರಜ್ಞಾನ ಪ್ರೇರಿತ ಇ-ಗವರ್ನೆನ್ಸ್ ಜಾರಿ, ವ್ಯವಸ್ಥೆ ಆಧಾರಿತ, ನೀತಿ-ಚಾಲಿತ ಆಡಳಿತ ಹಾಗೂ ಈಗಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಅಥವಾ ಬದಲಿಸಲು ಕಾರ್ಯಪಡೆ ಸ್ಥಾಪನೆ.

ಕಠಿಣ ಲೋಕಪಾಲ ಮಸೂದೆ ಜಾರಿ:

ಅಲ್ಲದೆ ಚುನಾವಣಾ ಪ್ರಚಾರ ಸಭೆಗಳಲ್ಲಿ ರಂಗು ರಂಗಿನ ಭಾಷಣ ಮಾಡಿದ್ದ ನರೇಂದ್ರ ಮೋದಿ ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಪ್ರತಿಯೊಬ್ಬರನ್ನೂ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ಕಠಿಣ ಲೋಕಪಾಲ ಮಸೂದೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು.

ಸಮಗ್ರ ರಾಷ್ಟ್ರೀಯ ಇಂಧನ ನೀತಿ, ಸಣ್ಣ ವಿದ್ಯುತ್ ಯೋಜನೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ದೇಶದ ಪ್ರತಿಯೊಂದು ಸಾರ್ವಜನಿಕ ಸ್ಥಳಗಳಿಗೂ ಉಚಿತ ವೈ- ಫೈ, ಕರಾವಳಿ ಪ್ರದೇಶಗಳಲ್ಲಿ ನೀರು ಶುದ್ದೀಕರಣ ಘಟಕ, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ಕಲಂ 370 ವಿಶೇಷ ಪ್ರಾತಿನಿಧ್ಯದ ಕುರಿತು ಮರು ಚಿಂತನೆ ಹಾಗೂ ಕಾಶ್ಮೀರಿ ಪಂಡಿತರನ್ನು ಮತ್ತೆ ಕಣಿವೆ ರಾಜ್ಯಕ್ಕೆ ಕರೆಸಿ ಗೌರವಾನ್ವಿತ ಬದುಕು ಕಟ್ಟಿಸಿಕೊಡುವ ಭರವಸೆ ಬಿಜೆಪಿ ಕಡೆಯಿಂದ ಕೇಳಿ ಬಂದಿತ್ತು.

ವಿದೇಶದಲ್ಲಿರುವ ಕಪ್ಪುಹಣ ವಾಪಸ್:

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಜನರಿಗೆ ನೀಡಿದ ಅತ್ಯಂತ ವರ್ಣರಂಜಿತ ಆಶ್ವಾಸನೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತರುವುದು.

“ಸುಮಾರು 75 ಲಕ್ಷ ಕೋಟಿ ಹಣವನ್ನು ಭಾರತದ ಕಾಳಧನಿಕರು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ. ಸ್ವಿಟ್ಜರ್ಲೆಂಡ್‌ನ ಪ್ರಮುಖ ಬ್ಯಾಂಕುಗಳಲ್ಲಿ ಭಾರತೀಯರ ಹಣ ಕೊಳೆಯುತ್ತಿದೆ. ಇದನ್ನು ಭಾರತಕ್ಕೆ ತಂದು ಪ್ರತಿಯೊಬ್ಬ ಭಾರತೀಯನ ಖಾತೆಯಲ್ಲಿ ಸುಮಾರು 15 ಲಕ್ಷ ಹಣವನ್ನು ಹಾಕುತ್ತೇನೆ,” ಎಂದಿದ್ದರು ಪ್ರಧಾನಿ ನರೇಂದ್ರ ಮೋದಿ.

ನಂತರ ಡಿಮಾನಟೈಸೇಷನ್‌ ಜಾರಿಗೊಳಿಸಿದ್ದ ಅವರು, “50 ದಿನ ಕಾಯಿರಿ. ಒಂದೊಮ್ಮೆ ನಾನು ನೀಡಿದ ಭರವಸೆ ವಿಫಲವಾದರೆ ನನ್ನನ್ನು ಜೀವಂತ ಸುಟ್ಟುಬಿಡಿ” ಎಂದೂ ಭಾಷಣ ಮಾಡಿದ್ದರು.

ಹೀಗೆ ಪ್ರಣಾಳಿಕೆ ರೂಪದಲ್ಲಿ ಹಾಗೂ ಭಾಷಣಗಳಲ್ಲಿ ರಂಗು ರಂಗಿನ ಆಶ್ವಾಸನೆ ನೀಡಿತ್ತು ಆಡಳಿತರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ. ಇದೀಗ ಐದು ವರ್ಷಗಳ ನಂತರ ಹೊಸ ಪ್ರಣಾಳಿಕೆಯೊಂದಿಗೆ ಬಿಜೆಪಿ ದೇಶವಾಸಿಗಳ ಮುಂದೆ ಬರುತ್ತಿದೆ. ಇದರಲ್ಲಿ ಏನಿರುತ್ತೆ? ಎಂಬುದು ಸದ್ಯದಲ್ಲೇ ಜನರ ಮುಂದೆ ಬರಲಿದೆ. ಅದನ್ನು ಪರಿಶೀಲನೆಗೆ ಒಳಪಡಿಸಲು ಈ ಹಿನ್ನೋಟ ಮಾಹಿತಿ ಸಹಾಯಕವಾಗಲಿದೆ.