Home ದೇಶ ಮೇಡ್‌ ಇನ್ ಚೈನಾ: ಟಿಕ್‌ಟಾಕ್‌, ನೀತಿ ಸಂಹಿತೆ ಮತ್ತು ಕೈಲಿರುವ ಸ್ಮಾರ್ಟ್‌ಫೋನ್‌

ಮೇಡ್‌ ಇನ್ ಚೈನಾ: ಟಿಕ್‌ಟಾಕ್‌, ನೀತಿ ಸಂಹಿತೆ ಮತ್ತು ಕೈಲಿರುವ ಸ್ಮಾರ್ಟ್‌ಫೋನ್‌

SHARE

ಚೀನಾದ ಜನಪ್ರಿಯ ಸಣ್ಣ ವಿಡಿಯೋಗಳ ಆಪ್‌ ‘ಟಿಕ್‌ ಟಾಕ್‌’ ನಿಷೇಧಿಸುವಂತೆ ಮದ್ರಾಸ್‌ ಹೈಕೋರ್ಟ್‌ ಹೇಳಿರುವುದು ಚುನಾವಣೆ ಬಿಸಿಯ ನಡುವೆಯೂ ಅಗತ್ಯವಾಗಿದ್ದ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಬೆನ್ನಿಗೆ, ಭಾರತದ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿವೆ ಎಂಬ ನೆಪ ಮುಂದಿಟ್ಟು ಸಾಮಾಜಿಕ ಜಾಲತಾಣಗಳಾದ ‘ಹಲೋ’ ಮತ್ತು ‘ಟಿಕ್‌ ಟಾಕ್‌’ ಮೇಲೆ ನಿರ್ಬಂಧ ಹೇರುವಂತೆ ದೆಹಲಿ ಬಿಜೆಪಿ ಘಟಕ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಇವೆರಡು ಪ್ರತ್ಯೇಕ ಅಂಶಗಳೇ ಆದರೂ ಕಳೆದೊಂದು ವಾರದ ಅಂತರದಲ್ಲಿ ‘ಚೈನಾಮೇಡ್‌ ಆಪ್‌’ಗಳ ಸುತ್ತ ನಡೆದಿರುವ ಪ್ರಮುಖ ಬೆಳವಣಿಗಳು. ಇನ್ನೊಂದು ಕಡೆ ಇದೇ ಚೀನಾ ಮೂಲದ ‘ಪಬ್‌ಜಿ’ ಎಂಬ ಗೇಮಿಂಗ್‌ ಆಪ್‌ ಭಾರತದ ಹಲವು ಕಡೆಗಳಲ್ಲಿ ನಿಷೇಧಕ್ಕೊಳಗಾಗಿದೆ. ಮೊಬೈಲ್ ಬಳಸುವ ಯುವಕರಲ್ಲಿ ಮನೋರಂಜನೆಯ ಹೆಸರಿನಲ್ಲಿ ಮಾನಸಿಕ ಅಸ್ಥಿರತೆಯನ್ನು ಇದು ಸೃಷ್ಟಿಸುವ ಅಪಾಯವನ್ನು ತಜ್ಞರು ಮುಂದಿಡುತ್ತಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಆರಂಭದ ವರ್ಷಗಳಲ್ಲಿ ಅಮೆರಿಕಾ ಮೂಲದ ಕಂಪನಿಗಳ ಆಪ್‌ಗಳೇ ಮೊಬೈಲ್‌ಗಳಲ್ಲಿ ಕಾಣಸಿಗುತ್ತಿದ್ದವು. ಆದರೆ ಕಾಲ ಬದಲಾದಂತೆ, ಚೈನಾ ನೂರಾರು ಆಪ್‌ಗಳು, ಮೊಬೈಲ್‌ಗಳ ಮೂಲಕ ಸದ್ದಿಲ್ಲದೆ ಭಾರತವೂ ಸೇರಿದಂತೆ ಹಲವು ದೇಶಗಳ ಮಾರುಕಟ್ಟೆಯನ್ನು ಹತೋಟಿಗೆ ತೆಗೆದುಕೊಳ್ಳುವ ಹಾದಿಯಲ್ಲಿದೆ.

ಮೇಡ್‌ ಇನ್‌ ಚೈನಾ:

ಕಮ್ಯುನಿಸ್ಟ್ ಚೀನಾದ ಉತ್ಪನ್ನಗಳು ಭಾರತ ತಲುಪುವುದು ಹೊಸದೇನೂ ಅಲ್ಲ. ಒಂದು ಕಾಲದಲ್ಲಿ ‘ಮೇಡ್‌ ಇನ್‌ ಚೈನಾ’ದ ಎಂದು ಬರೆದುಕೊಂಡ ಸರಕುಗಳು ಭಾರತದಲ್ಲಿ ಎಲ್ಲೆಂದರಲ್ಲಿ ಬಂದು ಬೀಳುತ್ತಿದ್ದವು. ಆಟಿಕೆಗಳು, ಛತ್ರಿ, ಪೆನ್ನು, ಬ್ಯಾಗು ಹೀಗೆ ಸಣ್ಣ ಪುಟ್ಟ ಉತ್ಪನ್ನಗಳನ್ನು ದೊಡ್ಡ ಸಂಖ್ಯೆಯಲ್ಲಿ ಚೀನಾ ಭಾರತಕ್ಕೆ ರವಾನಿಸುತ್ತಿತ್ತು. ಮುಂದೆ ತಂತ್ರಜ್ಞಾನ ಬೆಳೆದಂತೆ ಚೀನಾದ ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳ ಪ್ರವಾಹವೇ ಭಾರತದೊಳಕ್ಕೆ ನುಗ್ಗಿತು. ಒಪ್ಪೊ, ವಿವೋ, ಎಂಐ, ಶಿಯೋಮಿ, ಒನ್‌ಪ್ಲಸ್‌ ಹೀಗೆ ಭಾರತದಲ್ಲಿರುವ ಹೆಚ್ಚು ಕಡಿಮೆ ಅಷ್ಟೂ ಮೊಬೈಲ್‌ಗಳಿವತ್ತು ಚೀನಾದಲ್ಲಿಯೇ ತಮ್ಮ ನೆಲೆಗಳನ್ನು ಹೊಂದಿವೆ.

ಇದರ ಮುಂದುವರಿದ ಭಾಗವಾಗಿ ಈಗ ಆಪ್‌ಗಳ ರೂಪದಲ್ಲಿ ಚೀನಾದ ಡ್ರ್ಯಾಗನ್‌ ಜಾಗತಿಕ ಮಟ್ಟದಲ್ಲಿ ‘ವರ್ಚ್ಯುವಲ್‌ ವಾರ್‌’ಗೆ ಇಳಿದಿದೆ. ಈ ಯುದ್ಧದ ಮೊದಲ ಬಲಿ ಮತ್ಯಾರು ಅಲ್ಲ; ಭಾರತ.

ದೇಶದಲ್ಲಿ ಮಾರಾಟಗೊಂಡ ಹತ್ತಾರು ಕೋಟಿ ಮೊಬೈಲ್‌ ಸೆಟ್‌ಗಳ ಮೂಲಕ ತನ್ನ ಆಪ್‌ಗಳನ್ನು ಈಗಾಗಲೇ ಚೀನಾ ಕಂಪನಿಗಳು ತೂರಿಸಿಟ್ಟಿವೆ. ಇದರ ಜತೆಗೆ, ಈ ಕಾಲಘಟ್ಟದಲ್ಲಿ ಮನೋರಂಜನೆ ಸರಕನ್ನು ಸೃಷ್ಟಿಸುವ ಟಿಕ್‌ ಟಾಕ್‌, ಹಲೋ ತರಹದ ಆಪ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪಾಲು ಸೃಷ್ಟಿಸಿಕೊಂಡಿವೆ.

ಇದರ ಜತೆಗೆ, ಕ್ಯಾಬ್‌ ಹತ್ತಲು ಓಲಾ ತೆರೆದರೆ ಅದರಲ್ಲೂ ಚೀನಾ ಕಂಪನಿಗಳ ಹೂಡಿಕೆ ಇದೆ. ಬ್ರೌಸ್‌ ಮಾಡಲು ಯುಸಿ ಬ್ರೌಸರ್‌ ತೆರೆದರೆ ಅದೂ ಅವರದ್ದೇ. ಛಾಯಾ ಪ್ರತಿ ತೆಗೆಯಬೇಕೆಂದರೂ ಚೀನಾದ ಕ್ಯಾಮ್‌ ಸ್ಕ್ಯಾನರ್‌ ಬೇಕು, ಫೈಲ್‌ಗಳನ್ನು ವರ್ಗವಣೆ ಮಾಡಿಕೊಳ್ಳಲು ಶೇರ್‌ಇಟ್‌ ಬೇಕು. ಕೊನೆಗೊಮ್ಮೆ ಹಣ ವರ್ಗಾವಣೆಗೆ ಭಾರತದ ಡಿಜಿಟಲ್‌ ಪೇಮೆಂಟ್‌ ಪ್ರವರ್ತಕ ಪೇಟಿಎಂ ತೆರೆದರೆ ಅದರಲ್ಲೂ ಈ ಚೀನಾದ ಹೂಡಿಕೆ ಕಾಣಿಸುತ್ತಿದೆ.

ಟಿಕ್‌ಟಾಕ್‌ನಾಚೆಗೆ ಟ್ರೂಕಾಲರ್‌, ವಿಗೊ ವೀಡಿಯೋ, ಲೈಕ್‌, ಶೇರ್‌ ಚಾಟ್‌, ಮೈಟು (Meitu), ಕ್ಸೆಂಡರ್ (Xender), ಯುಸಿ ನ್ಯೂಸ್‌, ನ್ಯೂಸ್‌ ಡಾಗ್‌, ಕ್ಲಬ್‌ ಫ್ಯಾಕ್ಟರಿ, ಶೇನ್‌ (Shein), ಮ್ಯೂಸಿಕಲ್‌ (Musical.ly), ಕ್ವಾಯ್‌ ಕೂಡ ದೊಡ್ಟ ಮಟ್ಟಕ್ಕೆ ಭಾರತದಲ್ಲಿ ಅಸ್ಟಿತ್ವದಲ್ಲಿವೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಇ-ಕಾಮರ್ಸ್‌ವರೆಗೆ ಚೀನಾದ ಆಪ್‌ಗಳು ಹರಡಿಕೊಂಡಿವೆ.

ಇವೇ 42 ಚೀನಾ ಆಪ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಇಲಾಖೆ ಇವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಸೂಚಿಸಿತ್ತು. ಗುಪ್ತಚರ ಇಲಾಖೆ, ರಿಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್‌ (ರಾ) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ನೀಡಿದ ಮಾಹಿತಿಗಳ ಮೇಲೆ ಈ ಸೂಚನೆ ನೀಡಿತ್ತು.

ಈ 42 ಆಪ್‌ಗಳಲ್ಲಿ ವಿಬೋ, ವಿಚಾಟ್‌, ಟ್ರೂಕಾಲರ್‌, ಯುಸಿಬ್ರೌಸರ್‌, ನ್ಯೂಸ್‌ ಡಾಗ್‌, ಯೂಕ್ಯಾಮ್‌ ಮೊದಲಾದವು ಸೇರಿದ್ದವು. ಇವುಗಳಲ್ಲಿ ಕೆಲವು ಆಪ್‌ಗಳು ದೇಶದ ಮೇಲೆ ಸೈಬರ್‌ ವಾರ್‌ ನಡೆಸುವಷ್ಟು ಶಕ್ತಿಶಾಲಿಯಾಗಿದೆ ಎಂಬುದಾಗಿ ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯ ನಿಷೇಧಿಸುವಂತೆ ಆದೇಶಿಸಿರುವ ಟಿಕ್‌ ಟಾಕ್‌ನ್ನು ಇವತ್ತು ಜಗತ್ತಿನಾದ್ಯಂತ 50 ಕೋಟಿಗೂ ಹೆಚ್ಚು ಜನರು ಬಳಸುತ್ತಿದ್ದಾರೆ. ಇದರಲ್ಲಿ 20 ಕೋಟಿಗೂ ಹೆಚ್ಚು ಭಾರತೀಯರಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಆಪ್‌ ಲಭ್ಯವಿದ್ದು, ಕಂಪನಿ ಬಳಿ ಇರುವ ಡೇಟಾ ಮತ್ತದರ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬಹುದು.

ಜಗತ್ತಿನಾದ್ಯಂತ ಬಲು ಬೇಗ ಜನಪ್ರಿಯತೆ ಪಡೆದಿರುವ ಟಿಕ್‌ ಟಾಕ್‌ ವಿಡಿಯೋ ಶೇರಿಂಗ್‌ ಆಪ್‌.

ಅಮೆರಿಕಾ ಕಂಪನಿಗಳಿಗೆ ಸಡ್ಡು:

ಒಂದು ಕಾಲದಲ್ಲಿ ಫೇಸ್‌ಬುಕ್‌, ಟ್ಟಿಟ್ಟರ್‌, ವಾಟ್ಸಾಪ್‌ನಂಥ ಅಮೆರಿಕಾ ಮತ್ತು ಪಾಶ್ಚಿಮಾತ್ಯ ಜಗತ್ತಿನ ಆಪ್‌ಗಳು ಜಗತ್ತನ್ನು ಆಳುತ್ತಿದ್ದವು. ಆದರೆ ನೋಡ ನೋಡುತ್ತಿದ್ದಂತೆ ತಂತ್ರಜ್ಞಾನದಲ್ಲಿ ಚೀನಾ ಪ್ರವರ್ಧಮಾನಕ್ಕೆ ಬಂದಿದೆ. ಎಷ್ಟರ ಮಟ್ಟಿಗೆ ಎಂದರೆ ಇವತ್ತು ಅಮೆರಿಕಾದಂಥ ಮಾರುಕಟ್ಟೆಯಲ್ಲೂ ಟಿಕ್‌ ಟಾಕ್‌ ನಂಬರ್‌ 1 ಸ್ಥಾನದಲ್ಲಿದೆ. ಅಷ್ಟರಮಟ್ಟಿಗೆ ಚೀನಾ ತನ್ನ ಡ್ಯಾಗನ್‌ ನಾಲಿಗೆಯನ್ನು ಜಗತ್ತಿನಾದ್ಯಂತ ಚಾಚಿದೆ. ಪಕ್ಕದಲ್ಲೇ ಇರುವ ಭಾರತದ ಮೊಬೈಲ್ ಮಾರುಕಟ್ಟೆ ಅನಾಯಾಸವಾಗಿ, ಯಾವ ಪೈಪೋಟಿಯೂ ಇಲ್ಲದೆ ಬಾಯಿಗೆ ಬಿದ್ದಿದೆ.

ದಶಕದ ಹಿಂದೆ ಕಟ್ಟಡ ನಿರ್ಮಾಣ, ನಗರ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡ ಚೀನಾದಲ್ಲಿ ರಿಯಲ್‌ ಎಸ್ಟೇಟ್ ದೊಡ್ಡ ಮಾರುಕಟ್ಟೆ ಸೃಷ್ಟಿಸಿತ್ತು. ಈ ಕಾರಣಕ್ಕೆ ಕಬ್ಬಿಣಕ್ಕೆ ದೊಡ್ಡ ಬೇಡಿಕೆ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಮತ್ತು ಪಕ್ಕದ ಆಂಧ್ರದಲ್ಲಿ ಕಬ್ಬಿಣದ ಗಣಿಗಾರಿಕೆ ನಡೆದು ಕೊನೆಗದು ಆಕ್ರಮ ಎನ್ನಿಸಿಕೊಂಡಿತು.

ಇದೀಗ ಚೀನಾದಲ್ಲಿ ಡಿಜಿಟಲ್ ಬೆಳವಣಿಗೆಯ ಭಾಗವಾಗಿ ಆಪ್‌ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. 2012ರಲ್ಲಿ ಸ್ಥಾಪನೆಯಾದ ಸ್ಟಾರ್ಟ್‌ಅಪ್‌ ಕಂಪನಿ ಬೈಟ್‌ಡಾನ್ಸ್‌ ಇವತ್ತು ಮ್ಯೂಸಿಕಲ್, ಟಿಕ್‌ ಟಾಕ್‌ ಮೂಲಕ ಜಾಗತಿಕ ಕಂಪನಿಯಾಗಿ ಬೆಳೆದಿದೆ. ಉಬರ್‌ನನ್ನು ಮೀರಿಸುವ ಮೌಲ್ಯ ಇದಕ್ಕಿದ್ದು ಮಾರುಕಟ್ಟೆಯಲ್ಲಿ 5 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುತ್ತಿದೆ. ಪಬ್‌ಜಿ, ಕ್ವಾಯ್‌ನಂತರ ಮನೋರಂಜನಾ ಆಪ್‌ಗಳ ಹಿಂದಿರುವ ಟೆನ್ಸೆಂಟ್ ಜಗತ್ತಿನ ಅತ್ಯಂತ ದೊಡ್ಡ ಗೇಮಿಂಗ್‌ ಕಂಪನಿ; ಬ್ರ್ಯಾಂಡ್‌ ವ್ಯಾಲ್ಯೂನಲ್ಲಿ ಇದಕ್ಕೆ ಜಾಗತಿಕವಾಗಿ ಐದನೇ ಸ್ಥಾನವಿದೆ. ಇನ್ನೊಂದು ಅರ್ಥದಲ್ಲಿ ಇವು ಆಧುನಿಕ ಯುಗದ ತಂತ್ರಜ್ಞಾನ ಆಧಾರಿತ ‘ಈಸ್ಟ್‌ ಇಂಡಿಯಾ ಕಂಪನಿ’ಗಳು.

ಓಬಿರಾಯನ ಕಾಲದಲ್ಲೇ ಉಳಿದ ಭಾರತ:

ಹಾಗಂತ ಚೀನಾದ ಉತ್ಪನ್ನಗಳ ಬಗ್ಗೆ ಭಾರತದಲ್ಲಿ ವಿರೋಧವೇ ಕೇಳಿ ಬಂದಿಲ್ಲ ಎಂದೇನೂ ಇಲ್ಲ. ದೀಪಾವಳಿ ಸಂದರ್ಭದಲ್ಲಿ ಚೀನಾ ಪಟಾಕಿಗಳನ್ನು ನಿಷೇಧಿಸುವಂತೆ, ಪ್ರೇಮಿಗಳ ದಿನದಂದು ಗ್ರೀಟಿಂಗ್‌ ಕಾರ್ಡ್‌, ಗಿಫ್ಟ್‌, ಬಲೂನ್‌ಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಆಗ್ರಹಿಸುತ್ತಲೇ ಬಂದಿದ್ದಾರೆ. 2014ರಲ್ಲಿ ಬಿಜೆಪಿ ಬೆಂಬಲಿತ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಕ್ರಿಯೆ ಬಿರುಸಾಗಿಯೇ ನಡೆದಿದೆ. ಬೀದಿಗಳಲ್ಲಿ ಸಾಂಕೇತಿಕವಾಗಿ ಸಾಮಾನ್ಯ ಜನ ಕೊಳ್ಳುವ ಚೀನಾ ಉತ್ಪನ್ನಗಳಿಗೆ ಬೆಂಕಿ ಹಚ್ಚುವ ಪ್ರತಿಭಟನೆಗಳೂ ನಡೆದಿವೆ. ಆದರೆ ಚೀನಾ ಮಾರುಕಟ್ಟೆಯನ್ನು ಆವರಿಸಿಕೊಳ್ಳುವುದನ್ನು ಇವು ತಡೆಯಲು ಸಾಧ್ಯವಾಗಲಿಲ್ಲ.

ಮೇಕ್‌ ಇನ್‌ ಇಂಡಿಯಾಗೆ ಅದ್ಧೂರಿ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ. 

ಇದಕ್ಕೆ ಚೀನಾದ ಆಕ್ರಮಣಕಾರಿ ರಾಜನೀತಿಗಳು ಕಾರಣ ಎಂಬುದು ಒಂದು ಆಯಾಮ. ಇನ್ನೊಂದು ಕಡೆ ಇಂತಹ ತಂತ್ರಜ್ಞಾನವನ್ನು ಸೃಷ್ಟಿಸಲು ‘ಮೇಕ್‌ ಇನ್ ಇಂಡಿಯಾ’ ಘೋಷಣೆಯಾಚೆಗೂ ಭಾರತ ಸೋತಿದೆ. ಇಲ್ಲಿ ದೈತ್ಯ ಐಟಿ ಸಂಸ್ಥೆಗಳು ಇವೆ ಮತ್ತು ಐಟಿ- ಬಿಟಿ ಸೃಷ್ಟಿಸಿದ ‘ಉದಾರವಂತ ಉದ್ಯಮಿಪತಿ’ಗಳೂ ಇದ್ದಾರೆ. ಆದರೆ ವಿದೇಶಿ ಕಂಪನಿಗಳಿಗೆ ಭಾರತೀಯರ ಕೌಶಲ್ಯ ಮಾರಾಟದಲ್ಲಿಯೇ ಏಳ್ಗೆ ಕಂಡವರು ಅದಾರಾಚೆಗೆ ಆಲೋಚನೆ ಮಾಡದ ಹಿನ್ನೆಲೆಯಲ್ಲಿ ಇವತ್ತು ಭಾರತದಲ್ಲಿ ಒಂದು ಟೆನ್ಸೆಂಟ್‌ ಕಂಪನಿ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇವತ್ತಿಗೆ ಗಡಿಯಲ್ಲಿರುವ ಕಾಲಾಳು ಸೇನೆ ಎಷ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿದೆ ಎಂಬುದರ ಮೇಲಷ್ಟೇ ದೇಶದ ಭದ್ರತೆ ವಿಚಾರ ನಿಂತಿಲ್ಲ. ತನ್ನ ಪ್ರಜೆಗಳ ಕೈಲಿರುವ ಮೊಬೈಲ್‌ ರಕ್ಷಣೆಗೂ ಆಯಾ ದೇಶಗಳು ಆಲೋಚನೆ ಮಾಡಬೇಕಾದ ಸವಾಲನ್ನುಸರಕಾರಗಳು ಕೈಗೆತ್ತಿಕೊಳ್ಳಬೇಕಿದೆ. ಜನ ಮತ ಹಾಕುವ ಮುನ್ನ ಎಲ್ಲಾ ವಿಚಾರಗಳ ನಡುವೆ ತಮ್ಮ ಕೈಲಿರುವ ಮೊಬೈಲ್‌ನ ಭವಿಷ್ಯವನ್ನೂ ಚಿಂತಿಸಲಿ ಎಂಬ ಕಾರಣಕ್ಕಾಗಿ ಈ ವರದಿ, ಅಷ್ಟೆ.