Home ಕರ್ನಾಟಕ ಖೂಬಾ ವರ್ಸಸ್‌ ಖಂಡ್ರೆ: ಕರ್ನಾಟಕದ ಮುಕುಟ ಬೀದರ್‌ನಲ್ಲಿ ಗೆಲ್ಲವವರು ಯಾರು? 

ಖೂಬಾ ವರ್ಸಸ್‌ ಖಂಡ್ರೆ: ಕರ್ನಾಟಕದ ಮುಕುಟ ಬೀದರ್‌ನಲ್ಲಿ ಗೆಲ್ಲವವರು ಯಾರು? 

SHARE

ರಾಜ್ಯ ರಾಜಧಾನಿಯಿಂದ 700 ಕಿಮೀ ದೂರದಲ್ಲಿರುವ ಕರ್ನಾಟಕದ ಕಟ್ಟ ಕಡೆಯ ಜಿಲ್ಲೆ ಬೀದರ್. ಭೌಗೋಳಿಕವಾಗಿ ಮಾತ್ರವಲ್ಲ ಅಭಿವೃದ್ಧಿ ದೃಷ್ಟಿಕೋನದಲ್ಲೂ ಇದು ರಾಜ್ಯ ಸರಕಾರದಿಂದ ನಿರ್ಲಕ್ಷಿಸಲ್ಪಟ್ಟ ಜಿಲ್ಲೆ. ಈ ಜಿಲ್ಲೆಯ ಕುರಿತು ಎಲ್ಲಾ ಸರಕಾರಗಳು ಮಲತಾಯಿ ಧೋರಣೆ ತಾಳಿರುವುದು ಎಷ್ಟು ಸತ್ಯವೋ, ಅಭಿವೃದ್ಧಿ ವಿಚಾರದಲ್ಲಿ ಇಲ್ಲಿನ ಸ್ಥಳೀಯ ನಾಯಕರಲ್ಲೇ ಇಚ್ಚಾಶಕ್ತಿ ಕೊರತೆ ಇರುವುದೂ ಅಷ್ಟೇ ಸತ್ಯ.

ಹೈದರಾಬಾದ್ ಕರ್ನಾಟಕದ ಭಾಗವಾಗಿರುವ ಬೀದರ್ ರಾಜ್ಯದ ಶಾಶ್ವತ ಬರ ಪ್ರದೇಶಗಳಲ್ಲೊಂದು. ಜಿಲ್ಲೆಯ ಅಂತರ್ಜಲ ಮಟ್ಟವೂ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೃಷಿ ಕೆಲಸಗಳಿಗಿರಲಿ ಇಲ್ಲಿನ ಸಾಮಾನ್ಯ ಜನ ಕುಡಿಯಲು ನೀರು ಬೇಕಿದ್ದರು ಸಹ ಪ್ರತಿದಿನ ಕನಿಷ್ಟ 5 ಕಿ. ಮೀ. ಕ್ರಮಿಸಲೇಬೇಕು ಎಂಬ ಸ್ಥಿತಿ ಇದೆ.

ಜಿಲ್ಲೆಗೆ ಶಾಪವಾಗಿ ಪರಿಣಮಿಸಿರುವ ಅನಕ್ಷರತೆ ಒಂದೆಡೆಯಾದರೆ, ಯುವ ಸಮುದಾಯವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ ಸಮಸ್ಯೆ ಮತ್ತೊಂದೆಡೆ. ಪರಿಣಾಮ ಜಿಲ್ಲೆಯ ಯುವಜನ ಕೆಲಸಕ್ಕಾಗಿ ಮಹಾರಾಷ್ಟ್ರ, ಹೈದರಾಬಾದ್ ಹಾಗೂ ಪುಣೆ ಕಡೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಬಹುತೇಕ ಗ್ರಾಮೀಣ ಭಾಗಗಳಿಂದಲೇ ಕೂಡಿರುವ ಬೀದರ್‌ ಹಳ್ಳಿಗಳು ಅಕ್ಷರಶಃ ವೃದ್ಧಾಶ್ರಮಗಳಂತೆ ಗೋಚರಿಸುತ್ತಿವೆ.

1982ರಲ್ಲಿ ಜಿಲ್ಲೆಗೆ ಕಾಲಿಟ್ಟ 100ಕ್ಕೂ ಹೆಚ್ಚು ಕೈಗಾರಿಕೋದ್ಯಮಗಳ ಪೈಕಿ ಶೇ.90 ರಷ್ಟು ಉದ್ಯಮಗಳು ಇಂದು ಸಂಪೂರ್ಣ ಬಾಗಿಲು ಎಳೆದುಕೊಂಡಿವೆ. ಇಡೀ ಜಿಲ್ಲೆಗೆ ಏಕೈಕ ಜೀವನಾಡಿಯಾಗಿರುವ ಕಾರಂಜ ಜಲಾಶಯದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗುವ ಅವ್ಯವಹಾರದ ಕಥೆಯ ಪುಟಗಳು ಇಲ್ಲಿನ ಲಾಭಕೋರ ರಾಜಕೀಯದ ಇತಿಹಾಸವನ್ನು ಕಣ್ಣಮುಂದೆ ತೆರೆದಿಡುತ್ತಿದೆ.

ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದಲ್ಲಿ ಸಮ ಪ್ರಮಾಣದಲ್ಲಿ ಅಧಿಕಾರ ಉಂಡಿರುವ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ನಾಯಕರ ಕೊಡುಗೆ ನಗಣ್ಯವೇ ಸರಿ. ಇದೇ ಕಾರಣಕ್ಕೆ ಇಲ್ಲಿನ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಬರವಸೆಯನ್ನೇ ಕಳೆದುಕೊಂಡಿದ್ದಾರೆ.

ಇಂತಹ ಸಮಯದಲ್ಲೇ ಜಿಲ್ಲೆ ಮತ್ತೊಂದು ಚುನಾವಣೆಗೆ ಅಣಿಯಾಗುತ್ತಿದೆ. ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಸೋಲುಣಿಸಿದ್ದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಕಣ ಸಜ್ಜಾಗಿದೆ. ಆದರೆ, ಖೂಬಾ ಕಳೆದ ಬಾರಿ ಗೆದ್ದಷ್ಟು ಸುಲಭಕ್ಕೆ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಿವೆ ಗ್ರೌಂಡ್‌ ರಿಪೋರ್ಟ್.

ಬೀದರ್ ಕ್ಷೇತ್ರ ಪರಿಚಯ

ಬೀದರ್ ಲೋಕಸಭಾ ಕ್ಷೇತ್ರ.

ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಬೀದರ್, ಭಾಲ್ಕಿ, ಔರಾದ್ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಹಾಗೂ ಅಲಂದಾ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರ 1951ರಿಂದ 1989ರ ವರೆಗೆ ಕಾಂಗ್ರೆಸ್‌ ಕೋಟೆಯಾಗಿತ್ತು. ಆದರೆ. ಕಾಂಗ್ರೆಸ್‌ನಲ್ಲಿದ್ದ ಹಿರಿಯ ನಾಯಕ ರಾಮಚಂದ್ರ ವೀರಪ್ಪ 1991ರಲ್ಲಿ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ 1991ರ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿತ್ತು.

ನಂತರ ಸತತ 5 ಬಾರಿ ಈ ಕ್ಷೇತ್ರದಿಂದ ರಾಮಚಂದ್ರ ವೀರಪ್ಪ ಆಯ್ಕೆಯಾಗಿದ್ದರು. 2004ರಲ್ಲಿ ತಮ್ಮ 96ನೇ ವಯಸ್ಸಿನಲ್ಲೂ ಅವರು ಈ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಅತಿ ಹಿರಿಯ ಸಂಸದೀಯ ಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಆದರೆ, ಅದೇ ವರ್ಷ ಅವರು ಮರಣ ಹೊಂದಿದ ಪರಿಣಾಮ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ನರಸಿಂಗರಾವ್ ಸೂರ್ಯವಂಶಿ ಗೆಲುವು ಸಾಧಿಸಿದ್ದರು.

2009ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ. 2014ರ ಚುನಾವಣೆಯಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಭಗವಂತ ಖೂಬಾ ಎದುರು ಸೋಲನುಭವಿಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಪಡೆಯುವಂತಾಗಿತ್ತು.

ಜಿಲ್ಲೆಯ ಲೋಕಸಭಾ ಚುನಾವಣೆಯ ಮಟ್ಟಿಗೆ ಈವರೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸಿಹಿ ಹಾಗೂ ಕಹಿಯನ್ನು ಸಮಾನ ಪ್ರಮಾಣದಲ್ಲಿ ಉಂಡಿದೆ.

ಬೀದರ್ ಜಿಲ್ಲೆಯೊಂದು ಸಮಸ್ಯೆ ನೂರೊಂದು

ರಾಜ್ಯದ ಐತಿಹಾಸಿಕ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಬಲ್ಲ ಜಿಲ್ಲೆ ಬೀದರ್. ಕರ್ನಾಟಕದ ಮುಕುಟ ಎಂದೇ ಖ್ಯಾತಿ ಪಡೆದಿರುವ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮ ವಹಿಸಿದ್ದರೆ ಈ ಜಿಲ್ಲೆ ರಾಜ್ಯದ ಅತ್ಯುತ್ತಮ ಪ್ರವಾಸಿ ಕ್ಷೇತ್ರಗಳಲ್ಲೊಂದಾಗಿ ಪ್ರವಾಸಿಗಳನ್ನು ಸೆಳೆಯಬಹುದಿತ್ತು.

ಇಲ್ಲಿನ ಕೈಗಾರಿಕೆಗಳನ್ನು ಸರಿಯಾಗಿ ನಿರ್ವಹಿಸಿದ್ದರೆ ಇಡೀ ಜಿಲ್ಲೆ ರಾಜ್ಯದ ವಾಣಿಜ್ಯೋದ್ಯಮ ರಾಜಧಾನಿಯಾಗಿ ಬದಲಾಗುವ ಸಾಧ್ಯತೆ ಇತ್ತು. ಈ ಮೂಲಕ ಯುವಕರ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಹುದಿತ್ತು. ಕಾರಂಜಾ, ಮಾಂಜ್ರಾ ನದಿಗಳ ನೀರನ್ನು ಸರಿಯಾಗಿ ಬಳಸಿಕೊಂಡಿದ್ದರೆ ರೈತರ ಬದುಕು ಹಸನಾಗಿರುತ್ತಿತ್ತು. ಆದರೆ, ಇಲ್ಲಿನ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಜಿಲ್ಲೆಯನ್ನು ರಾಜ್ಯದಲ್ಲೇ ತೀರಾ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ.

1982ರ ಆಸುಪಾಸಿನಲ್ಲಿ ಅಂದಿನ ಕೇಂದ್ರ ಸರಕಾರ ಬೀದರ್ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸುಮಾರು 100 ಕ್ಕೂ ಹೆಚ್ಚು ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ಮಂಜೂರು ಮಾಡಿತ್ತು. ಒಂದರ್ಥದಲ್ಲಿ ಆ ಕಾಲಘಟ್ಟದಲ್ಲಿ ಅದೊಂದು ದೊಡ್ಡ ಕೈಗಾರಿಕಾ ಕ್ರಾಂತಿಯಾಗಿ ಮನೆಮಾತಾಗಿತ್ತು. ನೋಡ ನೋಡುತ್ತಿದ್ದಂತೆ ಬೀದರ್ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ತಲೆ ಎತ್ತಿತ್ತು. ನೂರಾರು ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದವು. ಆದರೆ, ಕಾಲಾನಂತರದಲ್ಲಿ ಈ ಕೈಗಾರಿಕೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಸೋತರು.

ನಿರುದ್ಯೋಗ ಹಾಗೂ ಅನಕ್ಷರತೆ ಜಿಲ್ಲೆಯ ಬಹುದೊಡ್ಡ ಸಮಸ್ಯೆಯಾದರೆ ನೀರಾವರಿ ಯೋಜನೆಗಳಲ್ಲಿ ನಡೆದಿರುವ ಅಕ್ರಮ ಜಿಲ್ಲೆಯನ್ನು ದೊಡ್ಡ ಶಾಪದಂತೆ ಕಾಡುತ್ತಿದೆ.

ಮಹಾರಾಷ್ಟ್ರದಲ್ಲಿ ಹುಟ್ಟಿ ಬೀದರ್‌ನಲ್ಲಿ ಹರಿಯುವ ಮಾಂಜ್ರಾ ನದಿ ಜಿಲ್ಲೆಯ ಏಕೈಕ ಜೀವನಾಡಿ. ಆಂಧ್ರದಲ್ಲಿ ಹುಟ್ಟಿ ಬೀದರ್ ಪ್ರವೇಶಿಸುವ ಕಾರಂಜಾ ಇದರ ಉಪನದಿ. ಈ ಎರಡು ನದಿಗಳು ಜಿಲ್ಲೆಯ ಜೀವನಾಡಿ. ಕಾರಂಜ ನದಿ ನೀರು ಹಂಚಿಕೆಯ ಕುರಿತು ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ನಡುವೆ ತಗಾದೆ ಇತ್ತು. ಆದರೆ, ದಶಕಗಳ ಹಿಂದೆಯೇ ಈ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಈ ನದಿಯ 21 ಟಿಎಂಸಿ ನೀರನ್ನು ಬಳಸಿಕೊಳ್ಳುವ ಹಕ್ಕನ್ನು ಕರ್ನಾಟಕಕ್ಕೆ ನೀಡಿತ್ತು.

ಆದರೆ, ಸಾಕಷ್ಟು ಪ್ರಮಾಣದ ನೀರಿದ್ದಾಗ್ಯೂ ಬಿಸಿಲನಾಡು ಬೀದರ್‌ಗೆ ಈವರೆಗೆ ಈ ನದಿಯಿಂದ ಲಭ್ಯವಾಗುತ್ತಿರುವ ನೀರಿನ ಪ್ರಮಾಣ ಕೇವಲ 7 ಟಿಎಂಸಿ ಮಾತ್ರ ಎಂದರೆ ಇಲ್ಲಿ ಜನ ಪ್ರತಿನಿಧಿಗಳ ಇಚ್ಚಾಶಕ್ತಿಯನ್ನು ನೀವೆ ಊಹಿಸಿಕೊಳ್ಳಿ.

ಕಾರಂಜಾ ನದಿನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬೀದರ್‌ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಹಳ್ಳಿಖೇಡ್ ಸಮೀಪ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ನಾಲ್ಕು ದಶಕಗಳ ಕಾಮಗಾರಿ 2008ರ ಆಸುಪಾಸಿನಲ್ಲಿ ಕೊನೆಯಾಗಿತ್ತು. ಇನ್ನಾದರೂ ಈ ಕ್ಷೇತ್ರದ ನೀರಿನ ಬವಣೆ ತೀರಲಿದೆ ಎಂದೇ ಇಲ್ಲಿನ ರೈತರು ಸಂತಸ ಪಟ್ಟಿದ್ದರು. ಆದರೆ, ಈ ಅಣೆಕಟ್ಟೆಯಿಂದ ಕೃಷಿ ಭೂಮಿಗಳಿಗೆ ನೀರು ಹರಿಸುವ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಕಾಮಗಾರಿ ಗುತ್ತಿಗೆಯಲ್ಲಿ ನಡೆದಿರುವ ಅವ್ಯವಹಾರ ರೈತರ ನಿರೀಕ್ಷೆಗಳನ್ನು ಸಂಪೂರ್ಣ ಹುಸಿಗೊಳಿಸಿದೆ.

ಕಾರಂಜಾ ನದಿಗೆ ಅಡ್ಡಲಾಗಿ ಬೀದರ್‌ ನಲ್ಲಿ ನಿರ್ಮಿಸಲಾಗಿರು ಅಣೆಕಟ್ಟು.

ರಾಜ್ಯ ಸರಕಾರ ಈ ಕಾಲುವೆಗಳಿಗಾಗಿ 460 ಕೋಟಿ ವ್ಯಯಿಸಿದೆ. ಆದರೆ, ಕಾಗದಗಳಲ್ಲಿ ಮಾತ್ರ ನಿರ್ಮಿಸಲಾಗಿರುವ ಈ ಕಾಲುವೆಗಳು ಕಾರ್ಯರೂಪಕ್ಕೆ ಬರಲೇ ಇಲ್ಲ. ಬೋಗಸ್ ಬಿಲ್ಲುಗಳ ಮೂಲಕ ನೂರಾರು ಕೋಟಿ ಅವ್ಯವಹಾರ ನಡೆಸಲಾಗಿದೆ. ಪರಿಣಾಮ ನೀರನ್ನು ಕೃಷಿ ಕೆಲಸಕ್ಕೆ ಬಳಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅಣೆಕಟ್ಟೆಯಿಂದ ಕೇವಲ 10 ಕಿಮೀ ದೂರವಿರುವ ಗ್ರಾಮಗಳಿಗೂ ಸಹ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವನ್ನು ಈವರೆಗೆ ಒದಗಿಸಲು ಸಾಧ್ಯವಾಗಿಲ್ಲ.

ಭಾಲ್ಕಿ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಪ್ರಸ್ತುತ ಬೀದರ್‌ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿರುವ ಈಶ್ವರ ಖಂಡ್ರೆ ತಮ್ಮ ಪ್ರಭಾವ ಬಳಸಿ ತಮ್ಮ ಕುಟುಂಬಸ್ಥರಿಗೆ ಈ ಕಾಲುವೆ ಕಾಮಗಾರಿಯನ್ನು ಕೊಡಿಸಿದ್ದರು. ಈ ಅವ್ಯವಹಾರದಲ್ಲಿ ಅವರ ಕೈವಾಡವೂ ಇದೆ ಎಂಬ ಬಲವಾದ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೂ, ಕಾಂಗ್ರೆಸ್ ಲಿಂಗಾಯತ ಕೋಟಾದ ಅಡಿಯಲ್ಲಿ ಅವರಿಗೆ ಟಿಕೆಟ್ ನೀಡಿದೆ.

ಆದರೆ, ಕಾಂಗ್ರೆಸ್‌ನ ಈ ನಡೆಯಿಂದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಅನುಕೂಲವಾಗಲಿದೆ ಎಂದು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಅಭಿವೃದ್ಧಿ ಅವ್ಯವಹಾರದ ಹೊರತಾಗಿಯೂ ಬೀದರ್‌ ರಾಜಕಾರಣಕ್ಕೆ ಬೇರೆಯದೆ ಮುಖವಿದೆ.

ಖೂಬಾ ಅವರ ಸ್ವಯಂಕೃತ ಅಪರಾಧ

ಬೀದರ್ ಜಿಲ್ಲೆಯ ಹಾಲಿ ಸಂಸದ ಹಾಗೂ ಬಿಜೆಪಿ ಪಕ್ಷದ ಹುರಿಯಾಳು.

2014 ರ ಲೋಕಸಭಾ ಚುನಾವಣೆ ಸಮಯದ ವರೆಗೆ ಹಾಲಿ ಸಂಸದ ಭಗವಂತ ಖೂಬಾ ಓರ್ವ ಸಾಮಾನ್ಯ ಬಿಜೆಪಿ ಕಾರ್ಯಕರ್ತ. ಆದರೆ, ಅವರಿಗೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಬಿಜೆಪಿ ಟಿಕೆಟ್‌ ಸಿಕಿತ್ತು. ಈ ನಡುವೆ ದೇಶದಾದ್ಯಂತ ವ್ಯಾಪಿಸಿದ್ದ ಮೋದಿ ಅಲೆಯಿಂದಾಗಿ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿರುದ್ಧ ಖೂಬಾ ದೊಡ್ಡ ಅಂತರದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು.

“ಮೊದಲ ಬಾರಿಗೆ ಸಂಸದರಾದ ಭಗವಂತ ಖೂಬಾ ತನ್ನ ಕಾರ್ಯವ್ಯಾಪ್ತಿಯಲ್ಲಿ ಕ್ಷೇತ್ರದಲ್ಲಿ ಗಮನಾರ್ಹವಾದ ಕೆಲಸವನ್ನೇ ಮಾಡಿದ್ದಾರೆ. ಬೀದರ್‌ನಿಂದ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 13 ಹೊಸ ರೈಲು ಸಂಚಾರವನ್ನು ಆರಂಭಿಸುವಲ್ಲಿ ಅವರ ಪಾತ್ರ ಮಹತ್ವವಾದದ್ದು. ಅಲ್ಲದೆ 12 ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಇವು ಸಂಸದರಾಗಿ ಖೂಬಾ ಅವರ ಗಮನಾರ್ಹ ಸಾಧನೆ ಎನ್ನಲಡ್ಡಿಯಿಲ್ಲ. ಆದರೆ, ಇಂತಹ ಸಾಧನೆಗಳಿಂದ ಬೀದರ್‌ನ ಗ್ರಾಮೀಣ ಸಮಾಜಕ್ಕೆ ಹತ್ತಿರಾಗಲು ಸಾಧ್ಯವೇ ಇಲ್ಲ” ಎನ್ನುತ್ತಾರೆ ಬೀದರ್‌ನ ಪ್ರಗತಿಪರ ಹೋರಾಟಗಾರರಾದ ಶಿವರಾಜ್ ನುಗುಡೋಣಿ.

“ಬೀದರ್‌ನಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಜನರನ್ನು ಕಾಡುತ್ತಿದೆ. ಆದರೆ, ಜನ ಈ ಕುರಿತು ಸಂಸದರನ್ನು ಪ್ರಶ್ನಿಸಿದರೆ ‘ಇದು ತನ್ನ ಕಾರ್ಯವ್ಯಾಪ್ತಿಯ ಕೆಲಸವಲ್ಲ ಶಾಸಕರನ್ನು ಕೇಳಿ’ ಎಂಬ ದರ್ಪದಿಂದ ಪ್ರತಿಕ್ರಿಯಿಸುತ್ತಾರೆ. ಸಾಮಾನ್ಯ ಕಾರ್ಯಕರ್ತನಾಗಿದ್ದಾಗ ಇದ್ದ ನಯ ವಿನಯ ಈಗ ಕಾಣೆಯಾಗಿದೆ. ಭಗವಂತ ಖೂಬಾ ಸಂಪೂರ್ಣವಾಗಿ ಬದಲಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬಿಜೆಪಿ ಪಕ್ಷದ ಹೆಸರೇಳಲಿಚ್ಚಿಸದ ಕಾರ್ಯಕರ್ತರೊಬ್ಬರು.

ಸಂಸದರಾದ ನಂತರ ಭಗವಂತ ಖೂಬಾ ಜನರಿಂದ ಸಂಪೂರ್ಣವಾಗಿ ದೂರಾಗಿದ್ದಾರೆ. ಕ್ಷೇತ್ರದಲ್ಲಿ ತಾನೇ ಮೋದಿ ಎಂಬಂತೆ ಬಿಂಬಿಸಿಕೊಳ್ಳುವ ಖೂಬಾ ಅವರ ನಡವಳಿಕೆಯಿಂದಾಗಿ ಬೀದರ್ ಜಿಲ್ಲಾ ಬಿಜೆಪಿ ಇಬ್ಬಾಗವಾಗಿದೆ. ಶಾಸಕ ಪ್ರಭು ಚೌವ್ಹಾನ್ ನೇತೃತ್ವದ ಮತ್ತೊಂದು ಬಣ ಸ್ವತಃ ಖೂಬಾ ಸೋಲಿಗೆ ನೀಲಿ ನಕ್ಷೆ ರೂಪಿಸಿದೆ ಎನ್ನುತ್ತಿವೆ ಸುದ್ದಿ ಮೂಲಗಳು.

ಬಿಜೆಪಿಯೊಳಗೆ ಭಿನ್ನಮತ

ಬೀದರ್ ಬಿಜೆಪಿಯಲ್ಲಿ ಎರಡು ಬಣಗಳಿವೆ. ಒಂದು ಹಾಲಿ ಸಂಸದ ಭಗವಂತ ಖೂಬಾ ಬಣವಾದರೆ ಮತ್ತೊಂದು ಔರಾದ್ ಶಾಸಕ ಪ್ರಭು ಚೌವ್ಹಾಣ್ ಬಣ. ಜಿಲ್ಲೆಯಲ್ಲಿ ಈ ಇಬ್ಬರೂ ನಾಯಕರಿಗೆ ಒಬ್ಬರನ್ನು ಕಂಡರೆ ಒಬ್ಬರಿಗಾಗದ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ದರು ಎರಡೆರಡು ನಡೆಯುತ್ತವೆ. ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕ್ರಮ ನಡೆದರೆ, ಅದೇ ಕಾರ್ಯಕ್ರಮ ಮತ್ತೊಂದು ಭಾಗದಲ್ಲಿ ಶಾಸಕ ಪ್ರಭು ಚೌವ್ಹಾಣ್ ನೇತೃತ್ವದಲ್ಲಿ ನಡೆಯುತ್ತದೆ. ಹೀಗೆ ಜಿಲ್ಲೆಯ ಬಿಜೆಪಿ ಪರಿಸ್ಥಿತಿ.

ಶತಾಯಗತಾಯ ಭಗವಂತ ಖೂಭಾ ಅವರನ್ನು ಸೋಲಿಸಲೇಬೇಕು ಎಂಬ ಪಣ ತೊಟ್ಟಿರುವ ಪ್ರಭು ಚೌವ್ಹಾಣ್ ಈಗಾಗಲೇ ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ಪರವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆ ಎನ್ನುತ್ತಿವೆ ನಂಬಿಕಾರ್ಹ ಮೂಲಗಳು.

ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಮಕ್ಕಳಾದ ಸೂರ್ಯಕಾಂತ್, ಉಮಾಕಾಂತ್ ಹಾಗೂ ವಿಜಯಕುಮಾರ್ ನಾಗಮಾರಪಳ್ಳಿ ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಬಾರಿಯೂ ಟಿಕೆಟ್‌ಗಾಗಿ ಲಾಭಿ ನಡೆಸಿದ್ದರು. ಆದರೆ, ಎಲ್ಲಾ ಹಾಲಿ ಸಂಸದರಿಗೂ ಟಿಕೆಟ್ ನೀಡಬೇಕು ಎಂಬ ಬಿಜೆಪಿ ಹೈಕಮಾಂಡ್ ನಿರ್ಧಾರದಿಂದಾಗಿ ಖೂಬಾ ಅವರಿಗೆ ಟಿಕೆಟ್ ಲಭಿಸಿದೆ. ಕಳೆದ ಬಾರಿ ಟಿಕೆಟ್ ಸಿಗದೆ ನಿರಾಶೆಗೆ ಒಳಗಾಗಿದ್ದ ನಾಗಮಾರಪಳ್ಳಿ ಸಹೋದರರು ಕ್ಷೇತ್ರದಲ್ಲಿ ಖೂಬಾ ವಿರುದ್ಧ ಕೆಲಸ ಮಾಡಿದ್ದರು. ಆದರೆ ಮೋದಿ ಅಲೆ ಬಿಜೆಪಿಯನ್ನು ದಡ ಸೇರಿಸಿತ್ತು. ಈ ಬಾರಿಯೂ ಅವರು ಖೂಬಾ ವಿರುದ್ಧ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಮಾರಾಠಿ ಸಮಾಜಕ್ಕೆ ಸೇರಿದ ಮಾರುತಿರಾವ್ ಮೋಳಿ ಎಂಬವರಿಗೆ ಬಿಜೆಪಿ ಟಿಕೆಟ್ ಘೋಷಿಸಿತ್ತು. ಆದರೆ, ಅಷ್ಟರಲ್ಲಿ ಕೇಂದ್ರ ನಾಯಕರ ಬಳಿ ಮಾತನಾಡಿ ಇದನ್ನು ತಪ್ಪಿಸಿದ್ದ ಸಂಸದ ಭಗವಂತ ಖೂಬಾ ಬಸವಕಲ್ಯಾಣದ ಅಂದಿನ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಡಿಸಿದ್ದರು. ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖೂಬಾ ಹೀನಾಯವಾಗಿ ಸೋಲನುಭವಿಸಿದರು. ಈ ಪ್ರಸಂಗದಿಂದ ಭ್ರಮನಿರಶನಗೊಂಡಿರುವ ಮರಾಠಿ ಮತಗಳು ಬಿಜೆಪಿಯಿಂದ ಮಾನಸಿಕವಾಗಿ ಬಲುದೂರ ಸರಿದಿವೆ.

ಬೀದರ್‌ನಲ್ಲಿ ಮರಾಠಿ ಮತಗಳು ಶೇ. 20 ರಷ್ಟಿದೆ. ಮಹಾರಾಷ್ಟ್ರದ ಪಂಡರಾಪುರಕ್ಕೆ ನಡೆದುಕೊಳ್ಳುವ ಇಲ್ಲಿನ ಮರಾಠಿಗರು ಅಲ್ಲಿನ ಆದೇಶಕ್ಕೆ (ಫತ್ವಾ) ತಕ್ಕಂತೆ ನಡೆದುಕೊಳ್ಳುವುದು ವಾಡಿಕೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಫತ್ವಾ ಹೊರಡಿಸಲಾಗಿತ್ತು. ಹೀಗಾಗಿ ಎಲ್ಲಾ ಮತಗಳು ಖೂಬಾ ಪರ ಚಲಾವಣೆಯಾಗಿದ್ದವು.

ಆದರೆ, ಈ ಬಾರಿ ಮರಾಠಿ ಸಮಾಜದ ಮತಗಳು ಖೂಬಾ ಪರ ಚಲಾವಣೆಯಾಗದಂತೆ ಫತ್ವಾ ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 2 ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿರುವ ಮರಾಠಿ ಮತಗಳು ಬಿಜೆಪಿ ಬೆನ್ನು ತೋರಿಸಿದರೆ ಖೂಬಾ ಗೆಲ್ಲುವುದು ಕಷ್ಟ ಎನ್ನುತ್ತಿವೆ ಜಿಲ್ಲಾ ರಾಜಕೀಯ ವಿಶ್ಲೇಷಣೆಗಳು.

ಇದಲ್ಲದೆ ಜಿಲ್ಲೆಯಲ್ಲಿ ಬಿಜೆಪಿಗೆ ಸರಿಯಾದ ಮುಖಂಡತ್ವವಿಲ್ಲ. ಮಾಜಿ ಸಂಸದ ರಾಮಚಂದ್ರ ವೀರಣ್ಣ ಹಾಗೂ ಸಚಿವರುಗಳಾದ ಗುರುಪಾದಪ್ಪ ನಾಗಮಾರನಪಳ್ಳಿ ಹಾಗೂ ಬಸವರಾಜ್ ಪಾಟೀಲ್ ಹುಮ್ನಾಬಾದ್ ಮರಣದ ನಂತರ ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿಯಾದ ನಾಯಕತ್ವವಿಲ್ಲದಂತಾಗಿದೆ. ಇದರಿಂದ ಪಕ್ಷದೊಳಗೆ ದಿನಕ್ಕೊಂಡು ಬಣ ಸೃಷ್ಟಿಯಾಗುತ್ತಿದ್ದು ಇದು ಸಹ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ ಪ್ರತಿಕೂಲ ವಾತಾವರಣ ನಿರ್ಮಾಣ ಮಾಡುವ ಸೂಚನೆ ನೀಡಿದೆ.

ಈಶ್ವರ ಖಂಡ್ರೆಗಿದೆ ಜನ ಬಲ

ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಬೀದರ್ ಕ್ಷೇತ್ರದ ಕಾಂಗ್ರೆಸ್ ಹುರಿಯಾಳಿ ಈಶ್ವರ ಖಂಡ್ರೆ.

ಈಶ್ವರ ಖಂಡ್ರೆ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಬೀದರ್ ರಾಜಕೀಯದಲ್ಲಿ ಗುರುತಿಸಿಕೊಂಡಿದೆ. ಅವ್ಯವಹಾರದ ಹತ್ತಾರು ಆರೋಪಗಳು ಇದ್ದಾಗ್ಯೂ ಜಿಲ್ಲೆಯ ಪ್ರಬಲ ವೀರಶೈವ ಲಿಂಗಾಯತ ಮುಖಂಡ ಎಂದರೆ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳುವ ನಾಯಕ ಈಶ್ವರ ಖಂಡ್ರೆ.

ಖಂಡ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಭಾಲ್ಕಿ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲದೆ ಪ್ರಸ್ತುತ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ಲಾಭಿ ನಡೆಸಿದ್ದರು. ಆದರೆ, ಈಶ್ವರ ಖಂಡ್ರೆ ಈ ಬಾರಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ತಿಳಿದ ಕಾಂಗ್ರೆಸ್ ಅವರಿಗೆ ಟಿಕೆಟ್ ಫೈನಲ್ ಮಾಡಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಧರಂ ಸಿಂಗ್ ಅವರ ಮಗ ವಿಜಯ್ ಸಿಂಗ್ ಸಹ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಹೊರಗಿನವರಿಗೆ ಸುತಾರಾಂ ಟಿಕೆಟ್ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿತ್ತು. ಅಲ್ಲದೆ ಅಂತಿಮವಾಗಿ ಖಂಡ್ರೆ ಹೆಸರನ್ನೇ ಶಿಫಾರಸು ಮಾಡಿತ್ತು. ಹೀಗಾಗಿ ಧರಂ ಸಿಂಗ್ ಕುಟುಂಬಕ್ಕೆ ಟಿಕೆಟ್ ತಪ್ಪಲು ಖಂಡ್ರೆ ಕಾರಣರಲ್ಲ ಎಂಬ ವಿಚಾರವೆ ಖಂಡ್ರೆ ಹಾಗೂ ಸಿಂಗ್ ಕುಟುಂಬದ ನಡುವೆ ಸಂಬಂಧ ಗಟ್ಟಿಯಾಗಲು ಕಾರಣವಾಗಿದೆ.

ಇದಲ್ಲದೆ, “ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಬಣ ರಾಜಕೀಯ ಇಲ್ಲದಿರುವುದು ಖಂಡ್ರೆಗೆ ದೊಡ್ಡ ಬಲವಾಗಿ ಪರಿಣಮಿಸಲಿದೆ. ಇನ್ನೂ ಚಿಂಚೊಳ್ಳಿ, ಆಳಂದ ಕ್ಷೇತ್ರದಲ್ಲಿ ವ್ಯಾಪಕ ಜನ ಬೆಂಬಲ ಹೊಂದಿರುವ ಧರಂ ಸಿಂಗ್ ಮಕ್ಕಳಾದ ಅಜಯ್ ಸಿಂಗ್ ಹಾಗೂ ವಿಜಯ್ ಸಿಂಗ್ ಕಾಂಗ್ರೆಸ್ ಪರ ಕೆಲಸ ಮಾಡಿದರೆ ಈಶ್ವರ ಖಂಡ್ರೆಗೆ ಗೆಲುವು ಕಷ್ಟವಲ್ಲ” ಎನ್ನುತ್ತಾರೆ ಹಿರಿಯ ಪತ್ರಕರ್ತ ಅನಿಲ್ ಕುಮಾರ್ ದೇಶಮುಖ್.

ಜಾತಿ ಲೆಕ್ಕದಲ್ಲೂ ಕಾಂಗ್ರೆಸ್‌ ಮುಂದು

ಕ್ಷೇತ್ರದಲ್ಲಿ ಶೇ. 26 ರಷ್ಟು ಮತಗಳನ್ನು ಹೊಂದಿರುವ ಮುಸ್ಲಿಂ ಸಮುದಾಯ ನಿರ್ಣಾಯಕ. ಇದಲ್ಲದೆ ಲಿಂಗಾಯತ ಸಮುದಾಯ ಶೇ.22 ಹಾಗೂ ಶೇ.20 ರಷ್ಟು ಮತಗಳನ್ನು ಹೊಂದಿರುವ ಮರಾಠರು ನಂತರದ ಸ್ಥಾನದಲ್ಲಿದ್ದಾರೆ.

ಮುಸ್ಲಿಂ ಮತಗಳ ಕಾಂಗ್ರೆಸ್‌ ಪಕ್ಷದ ಪಾರಂಪರಿಕ ಮತಗಳಾಗಿದ್ದು ಈ ಮತಗಳು ಬೇರ್ಪಡುವ ಸಾಧ್ಯತೆಯೇ ಇಲ್ಲ. ಇನ್ನೂ ಈಗಾಗಲೆ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಮರಾಠ ಮತಗಳು ಈ ಬಾರಿ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ.

ಇದಲ್ಲದೆ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜೆಡಿಎಸ್ ಮತಗಳಿವೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿರುವುದು ಸಹ ಈಶ್ವರ ಖಂಡ್ರೆಗೆ ವರದಾನವಾಗಲಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ವಿಶ್ಲೇಷಿಸಿದರೆ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಗೆಲುವಿನ ಹತ್ತಿರದಲ್ಲಿದೆ.

ಒಂದು ವೇಳೆ ಚುನಾವಣೆಯ ಒಳಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬೀದರ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದರೆ ಮೇಲಿನ ಎಲ್ಲಾ ವಿಶ್ಲೇಷಣೆಗಳು ತಲೆ ಕೆಳಗಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಸ್ಥಳೀಯರು. ಇಂತಹ ಸ್ಥಿತಿಯಲ್ಲಿ ಪ್ರಬಲ ಪಕ್ಷಗಳ ಅಭ್ಯರ್ಥಿಗಳ ನಡುವೆ ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ, ಯಾರೇ ಗೆದ್ದರೂ ಬೀದರ್‌ಗೆ ಅಂಟಿರುವ ಶಾಪ ವಿಮೋಚನೆಯಾಗುತ್ತಾ ಎಂಬುದಷ್ಟೆ ಮತದಾರರ ಎದುರಿಗೆ ಇರುವ ಪ್ರಶ್ನೆಯಾಗಬೇಕಿದೆ.