Home news-in-brief ‘ಕುಟುಂಬ ರಾಜಕಾರಣ; ನಿಖಿಲ್‌ಗೆ ಅನ್ವಯಿಸಬೇಡಿ’: ಜೆಡಿಎಸ್‌ ಅಧ್ಯಕ್ಷ ವಿಶ್ವನಾಥ್

‘ಕುಟುಂಬ ರಾಜಕಾರಣ; ನಿಖಿಲ್‌ಗೆ ಅನ್ವಯಿಸಬೇಡಿ’: ಜೆಡಿಎಸ್‌ ಅಧ್ಯಕ್ಷ ವಿಶ್ವನಾಥ್

SHARE

“ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವುದು ಸರಿಯಾಗಿಯೇ ಇದೆ. ನಿಶ್ಚಿತವಾಗಿ ಅವರು ಗೆಲ್ಲುವ ಅಭ್ಯರ್ಥಿ. ಅವರನ್ನು ವಂಶಪಾರಂಪರ್ಯ ರಾಜಕಾರಣದ ಕನ್ನಡಿಯಲ್ಲಿ ನೋಡುವುದು ಬೇಡ.”

ಹೀಗಂದವರು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್.

ಗುರುವಾರ ಪ್ರೆಸ್‌ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇವತ್ತು ವಂಶಪಾರಂಪರ್ಯ ರಾಜಕಾರಣ ಚುನಾವಣೆಯ ವಿಷಯವೇ ಅಲ್ಲ. ದೇಶದ 544 ಸಂಸದರ ಪೈಕಿ 165 ಸಂಸದರು ಕೌಟುಂಬಿಕ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಹೀಗಿರುವಾಗ ದೇವೇಗೌಡರ ಮೇಲೆ ಮಾತ್ರ ಯಾಕೆ ಟೀಕೆ?,” ಎಂದು ಪ್ರಶ್ನಿಸಿದರು.

“ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಕುಟುಂಬ ರಾಜಕಾರಣದಲ್ಲಿದೆ. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಕುಟುಂಬದವರು ರಾಜಕಾರಣ ಮಾಡುತ್ತಿದ್ದಾರೆ. ಒರಿಸ್ಸಾದ ನವೀನ್‌ ಪಾಟ್ನಾಯಕ್‌ರದ್ದೂ ಕುಟುಂಬ ರಾಜಕಾರಣ. ಕರ್ನಾಟಕದ ಯಾವ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿಲ್ಲ?,” ಎಂದು ಕೇಳಿದರು.

ಮಂಡ್ಯ ರಾಜಕಾರಣದ ಬಗ್ಗೆ ಮತ್ತಷ್ಟು ಮಾತು ಹರಿಸಿದ ಅವರು, “ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿರುವ ಶ್ರೀಮತಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯೇನಲ್ಲ. ಬಿಜೆಪಿ ಬೆಂಬಲ ನೀಡಿದ ಮೇಲೆ ಅವರು ಬಿಜೆಪಿ ಪಕ್ಷದ ಕ್ಯಾಂಡಿಡೇಟ್ ಎಂದೇ ಅರ್ಥ,” ಎಂದರು.

“‘ಸುಮಲತಾ ಗೌಡ್ತಿಯಲ್ಲ ಎಂಬ ಸಂಸದ ಶಿವರಾಮೇಗೌಡರ ಮಾತು ಸರಿಯಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಮಂಡ್ಯ ಜಾತಿಯ ರಾಜಕಾರಣದ ನೆಲೆ ಬೀಡಲ್ಲ. ಅಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಇದೆ. ಮೇಲುಕೋಟೆಯೂ ಇದೆ. ಪಕ್ಕದಲ್ಲೇ ಬಾಹುಬಲಿ ನಿಂತಿರುವ ಶ್ರವಣ ಬೆಳಗೊಳದಂತಹ ಜಾಗದ ಪ್ರಭಾವವೂ ಇದೆ,” ಎಂದರು.

“ಹೀಗಾಗಿ ಶಿವರಾಮೇಗೌಡರು ಈ ರೀತಿ ಮಾತನಾಡಬಾರದಿತ್ತು,” ಎಂದ ಅವರು, “ಇಂತಹ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೀರಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ,” ಎಂದರು.

ಸಂವಾದದಲ್ಲಿ ತಮ್ಮ ಪಕ್ಷದ ಬಗ್ಗೆ ವಿವರಣೆ ನೀಡಿದ ಅವರು, “ಜೆಡಿಎಸ್ ಈ ದೇಶಕ್ಕೆ ಪ್ರಧಾನಿಯನ್ನು ನೀಡಿದ ಪಕ್ಷ. ಏಕಕಾಲಕ್ಕೆ ಅದು ಸ್ಥಳೀಯ ಸಮಸ್ಯೆಗಳ ಕಡೆ ನೋಡುತ್ತಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕಡೆಗೂ ಗಮನ ಹರಿಸುತ್ತಲೇ ಇರುತ್ತದೆ. ಅದಕ್ಕೆ ಜನಪರವಾದ ಬದ್ಧತೆ ಇದೆ,” ಎಂದು ಸಮರ್ಥಿಸಿಕೊಂಡರು.

ಇವತ್ತು ನಕಲಿ ರಾಷ್ಟ್ರೀಯತೆ ಹಾಗೂ ಬಹುತ್ವದ ಭಾರತದ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಬಣ್ಣಿಸಿದ ಅವರು, “ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದ ನರೇಂದ್ರ ಮೋದಿ ಸರ್ಕಾರ ಏನು ಮಾಡಿದೆ?” ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಜನ ವಿರೋಧಿ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಜನಪರ ಮೈತ್ರಿಕೂಟ ಸರ್ಕಾರದ ನಡುವೆ ಹಣಾಹಣಿ ನಡೆಯುತ್ತಿದ್ದು ಈ ಹಣಾಹಣಿಯಲ್ಲಿ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ಟೋಪಿ ಹಾಕಿದೆ. ಚುನಾವಣೆಯ ನಂತರ ಈ ಟೋಪಿ ಕಳಚಿ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೋದಿ ಸರಕಾರದ ವಿರುದ್ಧ ವಾಗ್ದಾಳಿ:

ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಕಾರ್ಮಿಕ ಸಂಘಟನೆಗಳ ಪ್ರಕಾರವೇ ಉದ್ಯೋಗದ ಪ್ರಮಾಣ ಕುಸಿದು ಹೋಗಿದೆ. ಇವತ್ತು ದೇಶಕ್ಕೆ ಉದ್ಯೋಗ ಬಹಳ ಮುಖ್ಯ. ಆದರೆ ಬಿಎಸ್ಎನ್ಎಲ್ ನಂತಹ ಸಂಸ್ಥೆಯಲ್ಲೇ ಐವತ್ತು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದು ಮೋದಿ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ಟೀಕಿಸಿದರು.

ಜಿಯೋ ಎಂಬ ಖಾಸಗಿ ಸಂಸ್ಥೆಯನ್ನು ಬೆಳೆಸಲು ಬಿಎಸ್ಎನ್ಎಲ್ ಅನ್ನು ಬಲಿಕೊಡಲಾಗುತ್ತಿದೆ. ಇದು ಸರಿಯಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿಗಳನ್ನು ಹಾಕುತ್ತೇವೆ ಎಂದ ಮೋದಿ ಹದಿನೈದು ರೂಪಾಯಿಯೂ ಹಾಕಲಿಲ್ಲ.

“ಕಾಂಗ್ರೆಸ್ ಕಾಲದಲ್ಲಿ ರಷ್ಯಾ ಮಾದರಿಯಲ್ಲಿ ಯೋಜನಾ ಆಯೋಗ ರಚಿಸಲಾಯಿತು. ಆದರೆ ನರೇಂದ್ರ ಮೋದಿ ಸರ್ಕಾರ ಬಂದು ಆ ವ್ಯವಸ್ಥೆಗೇ ಕಲ್ಲು ಹಾಕಿತು. ರಫೆಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಕಡತವೇ ನಾಪತ್ತೆಯಾಗಿದೆ ಎನ್ನುವ ಮೂಲಕ ದೇಶದ ಹಿತವನ್ನು ಕಾಪಾಡುವ ವಿಷಯ ಬಂದರೆ ತಾನು ನಾಪತ್ತೆಯಾಗುವ ಸಂಕೇತವನ್ನು ನರೇಂದ್ರ ಮೋದಿ ಸರ್ಕಾರ ನೀಡಿದೆ,” ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ನಡುವೆ ಹೊಂದಾಣಿಕೆಯ ಕೊರತೆಯಿಲ್ಲ ಎಂದ ಅವರು, ಚುನಾವಣೆಯಲ್ಲಿ ಇಂತಿಷ್ಟೇ ಸೀಟುಗಳನ್ನು ಗೆಲ್ಲುತ್ತೇವೆ ಎಂದು ನಿಖರವಾಗಿ ಹೇಳುವುದಿಲ್ಲ. ಆದರೆ ನಿಶ್ಚಿತವಾಗಿ ಬಿಜೆಪಿಗಿಂತ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಸಿದ್ದರಾಮಯ್ಯ ವಿಶ್ವನಾಥ್‌ ಜಂಟಿ ಪ್ರಚಾರ:

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸಿ.ಎಚ್‌. ವಿಜಯ ಶಂಕರ್ ಗೆಲ್ಲಲಿದ್ದಾರೆ ಎಂದ ಅವರು, “ಚುನಾವಣಾ ಪ್ರಚಾರಕ್ಕೆ ನಾನು ಹಾಗೂ ಸಿದ್ಧರಾಮಯ್ಯ ಇಬ್ಬರೂ ಹೋಗುತ್ತೇವೆ. ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಕೂರುವ ಕಾಲ ಇದಲ್ಲ,” ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ರಾಜ್ಯಾಧ್ಯಕ್ಷರಾಗಿರುವಾಗ ಸಂಭ್ರಮಕ್ಕಿಂತಲೂ ಸಂಕಟಗಳೇ ಹೆಚ್ಚಾಗಿವೆ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ನೀಡಲು ಬಯಸಿದ್ದೆ. ದೊಡ್ಡವರ ಬಳಿ ಹೋಗಿ ಬಿಡುಗಡೆ ಮಾಡುವಂತೆ ಕೇಳಿದ್ದೆ. ಆದರೆ ದೇವೇಗೌಡರು ಅಧ್ಯಕ್ಷರಾಗಿ ಮುಂದುವರಿಯುವಂತೆ ಹೇಳಿದರು. ಮರು ಮಾತನಾಡಲು ಸಾಧ್ಯವಾಗದೇ ಮುಂದುವರೆದಿದ್ದೇನೆ,” ಎಂದು ತಿಳಿಸಿದರು.