Home ದೇಶ ರಾಹುಲ್ ವಿರುದ್ಧ ಸರಿತಾ ನಾಯರ್: ವಯನಾಡಿಗೂ ಬಂದಾಕೆಯ ಹಿನ್ನೆಲೆಯೇ ಒಂದು ಸಿನೆಮಾ ಕತೆ!

ರಾಹುಲ್ ವಿರುದ್ಧ ಸರಿತಾ ನಾಯರ್: ವಯನಾಡಿಗೂ ಬಂದಾಕೆಯ ಹಿನ್ನೆಲೆಯೇ ಒಂದು ಸಿನೆಮಾ ಕತೆ!

SHARE

ಮೂವತ್ತಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳ ಆರೋಪಿ, ಜೀವನದ ಅರ್ಧ ಭಾಗ ಪೂರ್ತಿ ಜೈಲು, ಕೋರ್ಟ್, ವಿಚಾರಣೆಗಳಲ್ಲೇ ಮುಳುಗೆದ್ದರಿರುವ ಸೆಮಿ ಪೋರ್ನ್‌ ನಟಿ, ಸೋಲಾರ್‌ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಒಂದು ಕಾಲದಲ್ಲಿ ಕೇರಳ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಈಕೆ ಇದೀಗ ವಯನಾಡಿನಿಂದ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಕೆ. ಸಿ. ವೇಣುಗೋಪಾಲ್‌ರಿಂದ ಹಿಡಿದು ಉಮ್ಮನ್‌ ಚಾಂಡಿವರೆಗೆ ಕೇರಳದ ಹಲವು ಹಿರಿಯ ಕಾಂಗ್ರೆಸಿಗರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆರೋಪ ಹೊರಿಸಿರುವ ಅವರು ಎರ್ನಾಕುಲಂನಿಂದ ಹಿಬಿ ಈಡನ್‌ ವಿರುದ್ಧವೂ ಸ್ಪರ್ಧಿಸಲಿದ್ದಾರೆ.

ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕರನ್ನು ಪಕ್ಷದಲ್ಲಿ ತೆರೆ ಮರೆಗೆ ಸರಿಸುವಂತೆ ಮತ್ತು ಕೈ ಬೀಡುವಂತೆ ಒಂದು ವರ್ಷದಿಂದ ರಾಹುಲ್‌ ಗಾಂಧಿಗೆ ಹಲವು ಪತ್ರ ಬರೆದಿದ್ದೇನೆ. ಆದರೆ ಅದಕ್ಕೆ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಯಾರೀಕೆ ಸರಿತಾ ನಾಯರ್‌?

ಸದಾ ವಿವಾದಗಳಲ್ಲೇ ಮುಳುಗೇಳುವ ಸರಿತಾ ನಾಯರ್ ಇತಿಹಾಸ ಆರಂಭವಾಗುವುದು 40 ವರ್ಷಗಳ ಹಿಂದೆ. ಕೇರಳದ ಚೆಂಗನ್ನೂರಿನ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ ಸರಿತಾ ನಾಯರ್‌ ಬಿ. ಕಾಂ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ಅದಕ್ಕೂ ಮೊದಲೇ ಆಕೆಗೆ 18 ವರ್ಷ ತುಂಬುವಾಗಲೇ ದುಬೈನ ಅನಿವಾಸಿ ಭಾರತೀಯನೊಂದಿಗೆ ಆಕೆಯ ಮದುವೆ ನಡೆದು ಹೋಗಿತ್ತು. ಆದರೆ ಎಂಟು ವರ್ಷಗಳ ನಂತರ ಆಕೆ ಗಂಡನಿಗೆ ಕೈಕೊಟ್ಟು ಭಾರತಕ್ಕೆ ವಾಪಸ್‌ ಬಂದರು.

ಹಾಗೆ ಭಾರತಕ್ಕೆ ಬಂದ ಸರಿತಾ ಬದುಕುವ ದಾರಿ ಕಂಡುಕೊಳ್ಳಲು ಖಾಸಗಿ ಬ್ಯಾಂಕ್ ನೌಕರಿಗೆ ಸೇರಿಕೊಳ್ಳಬೇಕಾಯಿತು. ಅಲ್ಲಿ ಆಕೆ ಬ್ಯಾಂಕ್‍ ಸಿಬ್ಬಂದಿಗೆ 2 ಲಕ್ಷ ರೂಪಾಯಿ ಪಂಗನಾಮ ಹಾಕಿ ಮೊದಲ ಬಾರಿಗೆ ಅಪರಾಧ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ಮುಂದೆ ಆಕೆ ತಿರುಗಿ ನೋಡಿದ್ದೇ ಇಲ್ಲ.

ಆಕೆಗೆ ಏನು ಕನಸಿತ್ತೋ ಬಲ್ಲವರಾರು. ಅಲ್ಲಿಂದ ಆಕೆ ಸೇರಿದ್ದು ಇನ್ನೊಂದು ಖಾಸಗಿ ಕಂಪೆನಿ. ಅಲ್ಲಿ ಆಕೆಗೆ ಪರಿಚಯವಾದವನೇ ಬಿಜು ಬಾಲಕೃಷ್ಣನ್. ಈತ ಇನ್ನೊಬ್ಬಕುಖ್ಯಾತ ವಂಚಕ. ಆತನ ಇತಿಹಾಸ ಸದ್ಯಕ್ಕೆ ಪಕ್ಕಕ್ಕೆ ಎತ್ತಿಡೋಣ. ಅಲ್ಲಿ ಇವರ ಪ್ರೇಮ ಪುರಾಣ ಶುರುವಾಯ್ತು. ಡೈವೋರ್ಸ್ ನೀಡಿ ಒಂಟಿಯಾಗಿದ್ದ ಸರಿತಾ ಮತ್ತು ಬಿಜು ಜತೆಯಾಗಿ ಬಾಳಲು ಆರಂಭಿಸಿದರು.

ಬಿಜು ಜೊತೆ ಸೇರಿದ್ದೇ ತಡ ಸರಿತಾ ಮತ್ತಷ್ಟು ಚುರುಕಾರಿ ವ್ಯವಹಾರ ಕುದುರಿಸಲು ಆರಂಭಿಸಿದರು. ತನ್ನ ಹಳೆ ಮೋಸ, ವಂಚನೆಯ ಕೆಲಸಗಳ ಜತೆಗೆ ಸಿಕ್ಕ ಸಿಕ್ಕವರ ಮೇಲೆಲ್ಲಾ ಸುಳ್ಳು ಆರೋಪ ಹೊರಿಸಿ ಬ್ಲ್ಯಾಕ್‍ಮೇಲ್ ಮಾಡುವುದನ್ನೇ ಆಕೆ ಉದ್ಯೋಗ ಮಾಡಿಕೊಂಡರು.

ಯಾರಿಗೆ ದೊಡ್ಡ ಮೊತ್ತದ ಹಣ ಬೇಕೋ ಅವ್ರಿಗೆಲ್ಲಾ ವಿದೇಶಗಳಿಂದ ಸಾಲ ತೆಗೆಸಿಕೊಡುತ್ತೇವೆ ಅಂತ ಮೊದಲ ಬಿಸಿನೆಸ್ ಆರಂಭಿಸಿದರು. ಆದರೆ ಹಾಗೆ ಸಾಲ ತೆಗೆಸಿಕೊಡಲು 2 ರಿಂದ 3 ಲಕ್ಷ ಬೇಕು ಎಂದು ಹೇಳಿ ಹಣ ತೆಗೆದುಕೊಂಡು ಮತ್ತೆ ಇಬ್ಬರೂ ನಾಪತ್ತೆಯಾಗುತ್ತಿದ್ದರು. ಅತ್ತ ಸಾಲವೂ ಇಲ್ಲ ಇತ್ತ ಹಣವೂ ಇಲ್ಲ. ಹೀಗೆ ವಂಚನೆ ಮಾಡಿ ಒಂದಷ್ಟು ವರ್ಷ ಬದುಕಿದರು.

ಹೀಗಿರಬೇಕಿದ್ದರೆ 2009ರ ಅದೊಂದು ದಿನ ಇಬ್ಬರೂ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋದರು. ಮುಂದೆ ಜಾಮೀನಿನ ಮೇಲೆ ಇಬ್ಬರೂ ಜೈಲಿನಿಂದ ಬಿಡುಗಡೆಯಾಗಿ ಕೊಚ್ಚಿಗೆ ಹೋದರು. ಅಲ್ಲಿ 2011ರಲ್ಲಿ ಹೊಸ ಕಂಪೆನಿ ಆರಂಭಿಸಿದರು. ಅದರ ಹೆಸರೇ ಟೀಮ್ ಸೋಲಾರ್ ರಿನವೇಬಲ್ ಎನರ್ಜಿ ಸೊಲ್ಯೂಷನ್ಸ್. ಸೋಲಾರ್ ಹಗರಣದ ಮೂಲ ಶುರುವಾಗಿದ್ದು ಹೀಗೆ.

ಮೋಸ ಮಾಡಿ ಹಣಗಳಿಸಲೆಂದೇ ಈ ಕಂಪೆನಿ ಹುಟ್ಟು ಹಾಕಲಾಗಿತ್ತು. ಹಾಗಾಗಿ ಇದಕ್ಕೆ ರಾಜಕೀಯ ಬೆಂಬಲ ಬೇಕೇ ಬೇಕಾಗಿತ್ತು. ಅದಕ್ಕಾಗಿ ಕೇರಳದ ಪ್ರಮುಖ ರಾಜಕಾರಣಿಗಳ ಪರಿಚಯ ಮಾಡಿಕೊಂಡರು. ಆಗಿನ ಮುಖ್ಯಮಂತ್ರಿ ಉಮ್ಮನ್‍ ಚಾಂಡಿ ಆಪ್ತರನ್ನೂ ಅವರಿಬ್ಬರು ಈ ಜಾಲದೊಳಕ್ಕೆ ಎಳೆದುಕೊಂಡರು. ಕಂಪನಿಯ ಹೆಸರಿನಲ್ಲಿ ಹಣ ಎತ್ತಲು ಆರಂಭಿಸಿದರು. ಹೀಗೆ 7 ರಿಂದ 10 ಕೋಟಿ ರೂಪಾಯಿ ಹಣ ಸಂಗ್ರಹವಾಯಿತು. ಆದರೆ ವಿದೇಶದಿಂದ ಸೋಲಾರ್ ಪ್ಯಾನಲ್‍ಗಳು ಬರಲೇ ಇಲ್ಲ. ಎಲ್ಲರಿಗೂ ನಾಮ ಎಳೆದಿದ್ದರು ಬಿಜು ಮತ್ತು ಸರಿತಾ.

ಇಷ್ಟೆಲ್ಲಾ ವಂಚನೆ ನಡೆದರೂ ಯಾರೂ ಇವರ ವಿರುದ್ಧ ದೂರು ನೀಡಿರಲಿಲ್ಲ. ಕಾರಣ ಹೆಚ್ಚಿನವರು ಹೂಡಿದ ಹಣ ಕಪ್ಪು ಹಣವಾಗಿತ್ತು. ಜತೆಗೆ ಇವರಿಗೆ ರಾಜಕೀಯ ಬೆಂಬಲವಿದ್ದಿದ್ದರಿಂದ ಹಣ ಹಾಕಿದವರು ಸುಮ್ಮನಿದ್ದರು. ಆದರೆ ಸಾಜಿದ್ ಎಂಬ ಉದ್ಯಮಿ ಮಾತ್ರ ದೂರು ನೀಡಿಯೇ ಬಿಟ್ಟರು.

ಕೇಸು ದಾಖಲಾದರೂ ಸರಿತಾ ತನ್ನಲ್ಲಿದ್ದ ಗಣ್ಯ ವ್ಯಕ್ತಿಗಳ ಸಂಪರ್ಕ ಬಳಸಿಕೊಂಡ ಪರಿಣಾಮ ಬರೋಬ್ಬರಿ ಆರು ತಿಂಗಳು ಕಳೆದರೂ ಜಾರ್ಜ್‍ಶೀಟ್ ಬಿಡಿ ಆರೋಪಿಗಳ ವಿಚಾರಣೆಯೂ ನಡೆಯಲಿಲ್ಲ. ಆಗ 2013ರಲ್ಲಿ ಪಿ. ಡಿ. ಜೋಸೆಫ್ ಎಂಬ ಸಾಮಾಜಿಕ ಕಾರ್ಯಕರ್ತ ಮತ್ತೆ ಪ್ರಕರಣ ದಾಖಲಿಸಿದ. ಅದರ ವಿಚಾರಣೆಗೆ ಇಳಿದ ಪೊಲೀಸರ ಮುಂದೆ ಇವರಿಬ್ಬರ ಬೆಚ್ಚಿ ಬೀಳಿಸುವ ಕತೆಗಳು ತೆರೆದುಕೊಂಡವು.

2001ರಲ್ಲೇ ತನ್ನ ಪೇಯಿಂಗ್‍ ಗೆಸ್ಟ್ ಮನೆಯಲ್ಲಿದ್ದ ಬಿ. ಎಡ್ ವಿದ್ಯಾರ್ಥಿನಿ ರೇಶ್ಮಿ ಎನ್ನುವಾಕೆಯನ್ನು ಬಿಜು ಮದುವೆಯಾಗಿ ಆಕೆಯನ್ನು ಮುಂದೆ ಕೊಲೆ ಮಾಡಿದ್ದ. ಅದರ ನಡುವೆ ಈ ಸರಿತಾ ನಾಯರ್‌ ಗಂಟು ಹಾಕಿಕೊಂಡಿದ್ದಳು. ಆಕೆಯನ್ನೂ ಬಿಟ್ಟು ಸಿನಿಮಾ ನಟಿ ಶಾಲು ಮೆನನ್‌ ಜತೆ ಆತ ಸಂಬಂಧ ಬೆಳೆಸಿದ. ಆದರೆ ಅದು ಮದುವೆ ಹಂತಕ್ಕೆ ಹೋಗುವ ಮೊದಲೇ ಸರಿತಾ ಮತ್ತು ಬಿಜು ಇಬ್ಬರೂ ಬಂಧಿತರಾದರು.

ಕೇರಳ ಪೊಲೀಸರಿಂದ ಬಂಧಿತರಾಗಿದ್ದ ಸರಿತಾ ನಾಯರ್‌.

ಹಾಗೆ ಬಂಧಿತರಾದವರು ಇದ್ದ ಬದ್ದವರ ಮೇಲೆಲ್ಲಾ ಆರೋಪಗಳನ್ನು ಹೊರಿಸುತ್ತಾ ಬಂದರು. ಇಳಿ ವಯಸ್ಸಿನ ಉಮ್ಮನ್‌ ಚಾಂಡಿಯಿಂದ ಹಿಡಿದು ಕೇರಳದ ಆಗಿನ ಶಾಸಕರು, ಸಚಿವರುಗಳ ಮೇಲೆಲ್ಲಾ ಆರೋಪಗಳ ಸುರಿಮಳೆಯನ್ನೇ ಸುರಿಸಿರು. ಲಂಚದಿಂದ ಹಿಡಿದು ಲೈಂಗಿಕ ಕಿರುಕುಳ, ಅತ್ಯಾಚಾರದವರೆಗೆ ಆಕೆಯ ಆರೋಪಗಳು ಹರಡಿಕೊಂಡಿದ್ದವು. ಮಲಯಾಳಂ ಭಾಷೆಯ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಮೇಲೆಯೂ ಈಕೆ ಇಂತಹದ್ದೇ ಆರೋಪ ಹೊರಿಸಿದರು.

ಆದರೆ ಸೆಮಿ ಪೋರ್ನ್‌ ಸಿನೆಮಾ ನಟಿಯ ಇತಿಹಾಸ ಬಲ್ಲವರು ಆಕೆಯನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ಸೋಲಾರ್ ಹಗರಣದಲ್ಲಿ ನ್ಯಾಯಾಲಯ ಬಿಜು ಮತ್ತು ಸರಿತಾರನ್ನು ದೋಷಿಗಳೆಂದು ತೀರ್ಪು ನೀಡಿತು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದರು. ಹಾಗೆ ಹೊರ ಬಂದ ಸರಿತಾ ಸೋಲಾರ್ ಹಗರಣದಲ್ಲಿ ಭಾಗಿಯಾದ ರಾಜಕಾರಣಿಗಳ ಹೆಸರು ಬಹಿರಂಗಪಡಿಸುವ ಬೆದರಿಕೆಗಳನ್ನು ಹಾಕುತ್ತಲೇ ಬಂದರು. ಹಾಗೆ ಕಾಲದಿಂದ ಕಾಲಕ್ಕೆ ಸದ್ದು ಮಾಡುತ್ತಾ ಬಂದವರು ಈಗ ವಯನಾಡಿಗೆ ಬಂದು ತಲುಪಿದ್ದಾರೆ.

ಪಶ್ಚಿಮಘಟ್ಟ ಪ್ರದೇಶದ ಹಸಿರಿನ ನಡುವೆ ಇರುವ ವಯನಾಡು ಈಗಾಗಲೇ ರಾಷ್ಟ್ರದ ಗಮನ ಸೆಳೆಯುವ ಲೋಕಸಭಾ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದೀಗ ಸರಿತಾ ಸ್ಪರ್ಧೆ ಒಟ್ಟಾರೆ ಕವರೇಜ್‌ಗೆ ಬೇಕಾದ ರಂಗನ್ನು ತುಂಬದೆ.