Home ದೇಶ ಕಾಂಗ್ರೆಸ್‌ ಪ್ರಣಾಳಿಕೆ 2019: ಕೊಟ್ಟ ಮಾತು, ನೀಡಿದ ಭರವಸೆ, ಇಟ್ಟ ಗುರಿ…

ಕಾಂಗ್ರೆಸ್‌ ಪ್ರಣಾಳಿಕೆ 2019: ಕೊಟ್ಟ ಮಾತು, ನೀಡಿದ ಭರವಸೆ, ಇಟ್ಟ ಗುರಿ…

SHARE

ದೇಶದ ಶೇಕಡಾ 20ರಷ್ಟು ಕಡು ಬಡವರಿಗೆ ವರ್ಷಕ್ಕೆ 72,000 ಕನಿಷ್ಠ ಆದಾಯ ಖಾತ್ರಿ, ಸರಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ, ಜಿಎಸ್‌ಟಿ ತೆರಿಗೆ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ, ಆರೋಗ್ಯ ಹಕ್ಕು ಕಾಯ್ದೆ ಜಾರಿ, ಕಿಸಾನ್‌ ಬಜೆಟ್‌ ಮಂಡನೆ, 34 ಲಕ್ಷ ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳ ಭರ್ತಿ, ಪತ್ರಕರ್ತರಿಗೆ ಪೊಲೀಸ್ ಭದ್ರತೆ, ಸೇನಾ ವಿಶೇಷಾಧಿಕಾರ ಕಾಯ್ದೆಗಳ ಪರಿಷ್ಕರಣೆ…

ಹೀಗೆ ಸಾಗುತ್ತದೆ 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೊರಬಿದ್ದಿರುವ ಕಾಂಗ್ರೆಸ್ ಪ್ರಣಾಳಿಕೆ.

ಮಂಗಳವಾರ ನವದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಕಾಂಗ್ರೆಸ್‌ ವಿಲ್‌ ಡೆಲಿವರ್‌’ ಹೆಸರಿನ 55 ಪುಟಗಳ ಪ್ರಣಾಳಿಕೆಯನ್ನು ದೇಶದ ಮುಂದಿಟ್ಟರು.

ಪ್ರಣಾಳಿಕೆಯ ಆರಂಭದಲ್ಲಿಯೇ ಗಮನ ಸೆಳೆಯುವ ಹೇಳಿಕೆ. 

‘ನಾನು ಕೊಟ್ಟ ಮಾತನ್ನು ಯಾವತ್ತೂ ಮರೆತಿಲ್ಲ’ ಎಂಬ ರಾಹುಲ್ ಗಾಂಧಿ ಹೇಳಿಕೆಯೊಂದಿಗೆ ಆರಂಭವಾಗುವ ಹೊಸ್ತಿಕೆಗಾಗಿ ನಡೆಸಿದ ಸಿದ್ಧತೆಗಳ ಅಂಕಿ ಅಂಶಗಳು ಇದರಲ್ಲಿ ಲಭ್ಯ ಇವೆ.

ಪ್ರಣಾಳಿಕೆಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮುನ್ನಡಿಯೊಂದನ್ನು ಬರೆದಿದ್ದಾರೆ. ಇದರಲ್ಲಿರುವ ಪ್ರತಿ ಅಕ್ಷರವೂ ‘ಇದು ಜನ ದನಿ’ ಎಂದಿರುವ ರಾಹುಲ್, ಒಬ್ಬ ವ್ಯಕ್ತಿಯ ‘ಮನ್‌ ಕೀ ಬಾತ್’ ಅಲ್ಲ ಎಂದಿದ್ದಾರೆ. ಪ್ರತಿ ಪಕ್ಷ ‘ಕೊಟ್ಟ ಮಾತು- ಇಟ್ಟ ಗುರಿ’ ಸ್ಪಷ್ಟವಾಗಿ ಪ್ರಣಾಳಿಕೆಯಲ್ಲಿ ಕಾಣಿಸುತ್ತಿದೆ.

ಏನಿದೆ ಪ್ರಣಾಳಿಕೆಯಲ್ಲಿ?:

 1. ಬಡತನ ನಿವಾರಣೆಗೆ ಕನಿಷ್ಠ ಆದಾಯ ಖಾತ್ರಿ ಅಥವಾ ನ್ಯಾಯ್‌ (ನ್ಯೂನತಮ್‌ ಆಯ್‌ ಯೋಜನಾ): ದೇಶದ ಶೇಕಡಾ 20ರಷ್ಟು ಜನರ ಖಾತೆಗೆ ವಾರ್ಷಿಕ 72,000 ರೂಪಾಯಿ ಜಮೆ. ಸಾಧ್ಯವಾದಷ್ಟು ಮಹಿಳೆಯರ ಖಾತೆಗೆ ಜಮೆ.
 2. ಉದ್ಯೋಗ ಕ್ರಾಂತಿ: ಖಾಲಿ ಇರುವ 34 ಲಕ್ಷ ಸರಕಾರಿ ಹುದ್ದೆಗಳ ಭರ್ತಿ. ಇದರಲ್ಲಿ 2020ರ ಮಾರ್ಚ್‌ಗೂ ಮುನ್ನ 4 ಲಕ್ಷ ನೌಕರರ ನೇಮಕ, ರಾಜ್ಯಗಳಲ್ಲಿ ಖಾಲಿ ಇರುವ 20 ಲಕ್ಷ ಉದ್ಯೋಗ ಭರ್ತಿಗೆ ಒತ್ತಾಯ, ಎಲ್ಲಾ ಸ್ಥಳೀಯ ಮತ್ತು ನಗರ ಆಡಳಿತ ಸಂಸ್ಥೆಗಳಲ್ಲಿ ಸೇವಾ ಮಿತ್ರ ಹೆಸರಿನ 10 ಲಕ್ಷ ಉದ್ಯೋಗ ಸೃಷ್ಟಿ. ಹೆಚ್ಚಿನ ಉದ್ಯೋಗ ಸೃಷ್ಟಿಸುವ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡುವ ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ.
 3. ರೈತರು ಮತ್ತು ಕೃಷಿ ಕಾರ್ಮಿಕರು: ಪ್ರತೀ ವರ್ಷ ‘ಕಿಸಾನ್‌ ಬಜೆಟ್‌’ ಮಂಡನೆ, ರೈತರಿಗಾಗಿ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಮತ್ತು ಯೋಜನಾ ಆಯೋಗ ಸ್ಥಾಪನೆ.
 4. ಯುನಿವರ್ಸಲ್‌ ಹೆಲ್ತ್‌ ಕೇರ್‌: ಆರೋಗ್ಯ ಹಕ್ಕು ಕಾಯ್ದೆ ಜಾರಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಜಾಲದ ಮೂಲಕ ಉಚಿತ ಡಯಗ್ನಾಸ್ಟಿಕ್‌, ಹೊರ ರೋಗಿ ಚಿಕಿತ್ಸೆ, ಉಚಿತ ಔಷಧ ಹಾಗೂ ಚಿಕಿತ್ಸೆಗೆ ಕ್ರಮ. ಇದಕ್ಕಾಗಿ 2023-24ರ ಹೊತ್ತಿಗೆ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುವ ಜಿಡಿಪಿ ಮೊತ್ತ ಶೇಕಡಾ 3ಕ್ಕೆ ಏರಿಕೆ.
 5. ಜಿಎಸ್‌ಟಿ 2.0: ಜಿಎಸ್‌ಟಿ ತೆರಿಗೆ ನೀತಿಯನ್ನು ಸರಳಗೊಳಿಸುವುದು, ಒಂದೇ ಮಧ್ಯಮ ದರದ ತೆರಿಗೆ ಜಾರಿ, ಪಂಚಾಯತ್‌ ಮತ್ತು ನಗರ ಪಾಲಿಕೆಗಳಿಗೆ ಜಿಎಸ್‌ಟಿ ಆದಾಯದಲ್ಲಿ ಪಾಲು.
 6. ಸೇನಾ ಪಡೆ ಮತ್ತು ಅರೆಸೇನಾ ಪಡೆ: ಸೇನಾ ಪಡೆಗಳ ಬೇಡಿಕೆ ನೀಗಿಸಲು ಭದ್ರತಾ ವೆಚ್ಚ ಹೆಚ್ಚಳ, ಪಾರದರ್ಶಕ ರೀತಿಯಲ್ಲಿ ಸೇನಾ ಪಡೆಗಳ ಆಧುನೀಕರಣ, ಭದ್ರತಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರ ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ ಸೇವೆ ಸುಧಾರಣೆ.
 7. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ: ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಸರಕಾರಿ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ. ಶಾಲೆಗಳು ಸೂಕ್ತ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಕರನ್ನು ಹೊಂದುವಂತಾಗಲು 2023-24ರ ಹೊತ್ತಿಗೆ ಜಿಡಿಪಿಯ ಶೇಕಡಾ 6ರಷ್ಟು ಹಣ ಮೀಸಲಿಡುವ ಭರವಸೆ.
 8. ಲಿಂಗ ಸಮಾನತೆ: 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲೇ ಲೋಕಸಭೆ ಮತ್ತು ವಿಧಾನಸಭೆಯ ಶೇಕಡಾ 33ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವ ವಿಧೇಯಕ ಮಂಡನೆ. ಅಲ್ಲದೆ ಕೇಂದ್ರ ಸರಕಾರದ ಎಲ್ಲಾ ಹುದ್ದೆಗಳಲ್ಲೂ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ.
 9. ಆದಿವಾಸಿ: ಅರಣ್ಯ ಹಕ್ಕು ಕಾಯ್ದೆ ಜಾರಿ. ಅನ್ಯಾಯವಾಗಿ ಯಾವುದೇ ಅರಣ್ಯ ನಿವಾಸಿಗಳ ಒಕ್ಕಲೆಬ್ಬಿಸುವಿಕೆ ಇಲ್ಲ. ಟಿಂಬರ್‌ಗೆ ಹೊರತಾದ ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ ಆಯೋಗ ಸ್ಥಾಪನೆ.
 10. ಗೃಹ ಸಂಕೀರ್ಣದ ಹಕ್ಕು: ಮನೆಯಿಲ್ಲದ ಅಥವಾ ಸ್ವಂತ ಭೂಮಿಯನ್ನು ಹೊಂದಿರದ ಪ್ರತಿ ಗ್ರಾಮೀಣ ಕುಟುಂಬಗಳಿಗೆ ನಿವೇಶನಕ್ಕಾಗಿ ಭೂಮಿ ಒದಗಿಸಲು ಗೃಹ ಸಂಕೀರ್ಣ ಹಕ್ಕು ಮಸೂದೆ ಜಾರಿ.
 11. ಧ್ವೇಷ ಅಪರಾಧಗಳಿಗೆ ಕಡಿವಾಣ: ಗುಂಪು ಹಲ್ಲೆ ಮತ್ತು ಎಸ್‌ಸಿ, ಎಸ್‌ಟಿ, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟುವ ಭರವಸೆ. ಗಲಭೆ, ಗುಂಪು ಘರ್ಷಣೆ, ಧ್ವೇಷ ಅಪರಾಧಗಳನ್ನು ತಡೆಗಟ್ಟುವಲ್ಲಿ ನಿರ್ಲಕ್ಷ ತೋರಿದರೆ ಜಿಲ್ಲಾಡಳಿತ, ಪೊಲೀಸರುನ್ನು ಹೊಣೆಯಾಗಿಸುವ ನೀತಿ ಜಾರಿ.
 12. ಸ್ವಾತಂತ್ರ್ಯದ ಸಂಭ್ರಮಾಚರಣೆ: ಖಾಸಗಿತನದ ಹಕ್ಕು, ವಿದ್ಯಾರ್ಥಿಗಳು, ಪತ್ರಕರ್ತರು, ಪ್ರಾಧ್ಯಾಪಕರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ಸರಕಾರೇತರ ಸಂಸ್ಥೆಗಳ ಸ್ವಾತಂತ್ರ್ಯ ಕಾಪಾಡಲು ಕಾನೂನು ಜಾರಿ. ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಹಳೆಯ, ನ್ಯಾಯವಲ್ಲದ ಕಾನೂನುಗಳ ಮರು ಪರಿಶೀಲನೆ.
 13. ಸರಕಾರಿ ಸಂಸ್ಥೆಗಳ ರಕ್ಷಣೆ: ಆರ್‌ಬಿಐ, ಇಸಿಐ, ಸಿಐಸಿ, ಸಿಬಿಐ ಸಂಸ್ಥೆಗಳನ್ನು ಸಂಸತ್ತಿಗೆ ಉತ್ತರದಾಯಿ ಮಾಡುವುದಲ್ಲದೆ ಅವುಗಳ ಗೌರವ, ಅಧಿಕಾರ, ಸ್ವಾಯತ್ತತೆ ರಕ್ಷಣೆಗೆ ಕ್ರಮ.
 14. ಪಟ್ಟಣ ಮತ್ತು ನಗರಾಭಿವೃದ್ಧಿ: ನಗರ ಮತ್ತು ಪಟ್ಟಣಗಳಿಗೆ ನವ ಮಾದರಿಯ ಆಡಳಿತ, ನೇರವಾಗಿ ಮೇಯರ್ ಮತ್ತು ಉಪಮೇಯರ್‌ಗಳ ಆಯ್ಕೆ. ಸ್ಲಮ್‌ಗಳಿಂದ ಅನಿಯಂತ್ರಿತ ಒಕ್ಕಲೆಬ್ಬಿಸುವಿಕೆಯಿಂದ ರಕ್ಷಣೆ. ನಗರಾಡಳಿತ, ಗೃಹ, ಜೀವನ ನಿರ್ವಹಣೆ, ಮಾಲಿನ್ಯ, ಹವಮಾನ ಬದಲಾವಣೆ, ನಗರ ಸಾರಿಗೆ, ವಿಪತ್ತು ನಿರ್ವಹಣೆಯನ್ನು ಒಳಗೊಂಡ ಸಮಗ್ರ ನಗರೀಕರಣ ನೀತಿ ಜಾರಿ.
 15. ಪರಿಸರ ಮತ್ತು ಹವಮಾನ ಬದಲಾವಣೆ: ಜಾಗತಿಕ ತಾಪಮಾನ ಏರಿಕೆ ತಡೆಯಲು ಮತ್ತು ಪರಿಸರ ರಕ್ಷಣೆಗೆ ಕ್ರಮ. ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ ಜಾರಿ. ಅರಣ್ಯ, ವನ್ಯಜೀವಿಗಳು, ನೀರಿನ ಮೂಲಗಳು, ನದಿ, ಶುದ್ಧ ಗಾಳಿ, ಕರಾವಳಿ ಪ್ರದೇಶಗಳ ರಕ್ಷಣೆ.

6 ಸೂತ್ರಗಳು- ಮುಂದಿರುವ ಆಯ್ಕೆ:

ಮೇಲಿನ ಅಷ್ಟೂ ಭರವಸೆಗಳನ್ನು ಕಾಂಗ್ರೆಸ್ ಒಟ್ಟು ಆರು ವಿಭಾಗಗಳಾಗಿ ವಿಭಾಗಿಸಿದೆ. ಇದು ದೇಶದ ಮುಂದಿರುವ ಆಯ್ಕೆ ಎಂದಿದೆ. ಕಳೆದ ಐದು ವರ್ಷಗಳ ಆಡಳಿತದ ವೈಫಲ್ಯಗಳಿಂದ ದೇಶವನ್ನು ಹೊಸ ಹಾದಿಗೆ ಕರೆತರುವ ಕಾರಣಕ್ಕೆ- ಒಂದು ವೇಳೆ ಅಧಿಕಾರಕ್ಕೆ ಬಂದರೆ- ಕಾಮ್, ದಾಮ್, ಶಾನ್, ಸುಶಾಶನ್, ಸ್ವಾಭಿಮಾನ್ ಹಾಗೂ ಸಮ್ಮಾನ್ ನೆಲೆಯಲ್ಲಿ ಪರಿಹಾರದ ಸೂತ್ರವನ್ನು ಮುಂದಿಟ್ಟಿದೆ.

ಇಂತಹ ಭರವಸೆಗಳ ನಡುವೆ ಒಟ್ಟಾರೆ ಪ್ರಣಾಳಿಕೆಯಲ್ಲಿ ಗಮನ ಸೆಳೆಯುವ ಅಂಶ ದೇಶದ ಮಾಧ್ಯಮ ಮತ್ತು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಕಾಂಗ್ರೆಸ್ ಹೊಂದಿರುವ ಆಲೋಚನೆ.

ಮಾಧ್ಯಮ ಮತ್ತು ಮಾಧ್ಯಮ ಸ್ವಾತಂತ್ರದ ಕುರಿತು ಕಾಂಗ್ರೆಸ್ ಪ್ರಣಾಳಿಕೆ ಮುಂದಿಟ್ಟ ಭರವಸೆಗಳು. 

ಭಾರತೀಯ ಪತ್ರಿಕಾ ಮಂಡಳಿ ಕಾಯ್ದೆಗೆ ತಿದ್ದುಪಡಿ, ಪತ್ರಿಕಾ ಮಂಡಳಿ, ಪತ್ರಿಕಾ ಸಂಸ್ಥೆಗಳು, ಮಾಧ್ಯಮಗಳ ಜತೆ ಸೇರಿ ‘ನೀತಿ ಸಂಹಿತೆ’ ಜಾರಿಗೆ ಕೆಲಸ, ಮಾಧ್ಯಮಗಳಲ್ಲಿನ ಏಕಸ್ವಾಮ್ಯ ತಡೆಗೆ ಕಾನೂನು/ ದೂರು, ಬಿಕ್ಕಟ್ಟಿನ ಸ್ಥಳಗಳಲ್ಲಿ ಹಾಗೂ ಜನಪರ ತನಿಖಾ ವರದಿಗಳಿಗಾಗಿ ಕೆಲವು ಪತ್ರಕರ್ತರಿಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸುವ ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿದೆ.

ಚುನಾವಣೆ ಬಂದಾಗ ಪ್ರಣಾಳಿಕೆ ಹಾಗೂ ಭಾಷಣಗಳ ರೂಪದಲ್ಲಿ ಜನರಿಗೆ ಎಲ್ಲಾ ಪಕ್ಷಗಳು ಭರವಸೆ ನೀಡುತ್ತವೆ. ಮತ್ತೊಮ್ಮೆ ಚುನಾವಣೆ ಎದುರಾದಾಗ ಅಧಿಕಾರದಲ್ಲಿರುವ ಪಕ್ಷ ತಾನು ಮುಂದಿಟ್ಟಿದ್ದ ಪ್ರಣಾಳಿಕೆಯನ್ನು ನೆನಪಿಸಿಕೊಂಡು ‘ಸಾಧನೆ’ಯನ್ನು ಜನರ ಮುಂದಿಡುತ್ತವೆ.

ಇದು ದೇಶದ ಅತಿ ದೊಡ್ಡ ಪ್ರತಿಪಕ್ಷದ ಪ್ರಣಾಳಿಕೆಯಾಗಿರುವ ಹಿನ್ನೆಲೆಯಲ್ಲಿ, ಸಹಜವಾಗಿಯೇ ಗಮನ ಸೆಳೆಯುತ್ತಿದೆ.

ಬಿಜೆಪಿ ಆಕ್ರೋಶದ ಪ್ರತಿಕ್ರಿಯೆ:

ಪ್ರಾಣಾಳಿಕೆ ಬಿಡುಗಡೆ ಬೆನ್ನಿಗೆ ಪತ್ರಿಕಾಗೋಷ್ಠಿ ನಡೆಸಿರುವ ಬಿಜೆಪಿ ನಾಯಕ ಅರುಣ್‌ ಜೇಟ್ಲಿ, ಕಾಂಗ್ರೆಸ್‌ ಆತಂಕಕಾರಿ ಭರವಸೆಗಳನ್ನು ನೀಡಿದೆ ಎಂದರು.

ರಾಷ್ಟ್ರದ್ರೋಹ ಮತ್ತು ಸೇನಾ ವಿಶೇಷಾಧಿಕಾರ ಕಾಯ್ದೆಯನ್ನು ಮರು ಪರಿಶೀಲನೆ ನಡೆಸುವುದಾಗಿ ಕಾಂಗ್ರೆಸ್‌ ಹೇಳುವ ಮೂಲಕ ದೇಶ ವಿರೋಧಿ ಚಟುವಟಿಕೆಗೆ ಕೈ ಪಕ್ಷ ಪ್ರೋತ್ಸಾಹಿಸುತ್ತಿರುವಂತೆ ಕಾಣಿಸುತ್ತಿದೆ ಎಂದು ಅವರು ಕಿಡಿಕಾರಿದರು. ಆದರೆ ಭಾವನಾತ್ಮಕ ಅಂಶಗಳಾಚೆಗೆ ಅವರು ಕಾಂಗ್ರೆಸ್‌ ನೀಡಿದ ಉಳಿದ ಭರವಸೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.