Home ದೇಶ ಭಾರತದ ಚೊಚ್ಚಲ ಚುನಾವಣೆ: ನೆಹರೂ, ಸೇನ್ & ಆ ಮೊದಲ ಮತದಾರ!

ಭಾರತದ ಚೊಚ್ಚಲ ಚುನಾವಣೆ: ನೆಹರೂ, ಸೇನ್ & ಆ ಮೊದಲ ಮತದಾರ!

SHARE

1949 ನವೆಂಬರ್‌ 26ರಂದು ಭಾರತದ ಸಂವಿಧಾನ ಅಂಗೀಕಾರ ಪಡೆದುಕೊಂಡಿತು. ಇದಾಗಿ 1950ರ ಜನವರಿ 26ರಂದು ಸಂವಿಧಾನ ಜಾರಿಗೂ ಬಂತು. ಸಂವಿಧಾನ ಜಾರಿಯಾಗುತ್ತಿದ್ದಂತೆ ಅಸ್ತಿತ್ವದಲ್ಲಿದ್ದ ಸಂಸತ್‌ ಅಧಿಕಾರ ಕಳೆದುಕೊಂಡು ‘ಮಧ್ಯಂತರ ಸಂಸತ್‌’ ಎಂಬ ಹೆಸರು ಪಡೆಯಿತು. ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಾಗಿತ್ತು.

ಬ್ರಿಟಿಷರು ಆಗಸ್ಟ್ ತಿಂಗಳಿನಲ್ಲಿಯೇ ಭಾರತ ತೊರೆದು ಹೋಗಿದ್ದರು. ದೇಶದಲ್ಲಿ ಸರಕಾರವೊಂದು ಅಸ್ತಿತ್ವದಲ್ಲಿತ್ತಾದರೂ ಅದು ಈಗಿನ ಪೂರ್ಣ ಪ್ರಮಾಣದ ಸರಕಾರವಾಗಿರಲಿಲ್ಲ. ಇಂತಹ ಹೊತ್ತಲ್ಲಿ ದೇಶದ ಪ್ರಧಾನಿ ನೆಹರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ತೀರ್ಮಾನ ತಗೆದುಕೊಂಡರು. ಅವತ್ತು ಅವರ ಮತ್ತು ಭಾರತದ ಮುಂದೆ ಭಾರಿ ಸವಾಲಿತ್ತು. ಇಡೀ ಜಗತ್ತು ದೇಶದತ್ತ ನೋಡುತ್ತಿತ್ತು. ಅವರ ಕಣ್ಣೆದುರಲ್ಲೇ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಬೇಕಾಗಿತ್ತು.

ಭಾರತ ನೇರವಾಗಿ ಅದಾಗಲೇ ವಿದೇಶಗಳಲ್ಲಿ ಕಟ್ಟಿ ನಿಲ್ಲಿಸಲಾಗಿದ್ದ ಪ್ರಜಾಪ್ರಭುತ್ವ ಮಾದರಿಯನ್ನು ಆಯ್ಕೆ ಮಾಡಿಕೊಂಡಿತ್ತು. ಜಗತ್ತಿನ ಎಲ್ಲಾ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದು ಹಂತ ಹಂತವಾಗಿ ಬೆಳೆದು ಬಂದಿದ್ದರಿಂದ ಅಲ್ಲೆಲ್ಲಾ ಮಹಿಳೆಯರು, ಕೆಳ ವರ್ಗದವರು, ಕಾರ್ಮಿಕರು ಮತದಾನದ ಹಕ್ಕು ಪಡೆಯಲು ಹಲವು ಶತಮಾನಗಳನ್ನೇ ಸವೆಸಬೇಕಾಯಿತು. ಆದರೆ ಸಿದ್ಧ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಭಾರತದಲ್ಲಿ ಮಾತ್ರ ಮೊದಲ ಚುನಾವಣೆಯಲ್ಲೇ ಎಲ್ಲರಿಗೂ ಮತದಾನದ ಹಕ್ಕು ಸಿಕ್ಕಿತು.

ಅವತ್ತಿಗೆ ಒಂದು ಕ್ಷೇತದಲ್ಲಿ 180 ದಿನಕ್ಕಿಂತ ಹೆಚ್ಚು ವಾಸವಿರುವ 21 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಂವಿಧಾನಾತ್ಮಕವಾಗಿ ಮತದಾನದ ಹಕ್ಕು ನೀಡಲಾಯಿತು. 1951ರ ಬೇಸಿಗೆಗೆ ಮೊದಲು ಚುನಾವಣಾ ಪ್ರಕ್ರಿಯೆ ಮುಗಿಸಿ ಬಿಡಬೇಕು ಎಂದು ನೆಹರೂ ನಿರ್ಧರಿಸಿದ್ದರು. ಜಗತ್ತೇ ಕುತೂಹಲದಿಂದ ಭಾರತದತ್ತ ನೋಡುತ್ತಿದ್ದುದರಿಂದ ಆದಷ್ಟು ಬೇಗ ಈ ಕಾರ್ಯ ಮುಗಿದು ಹೋಗಲಿ ಎಂಬುದು ಅವರ ಬಯಕೆಯಾಗಿತ್ತು.

ಆದರೆ ನೆಹರೂ ಆತುರಕ್ಕೆ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಬ್ರೇಕ್‌ ಹಾಕಿದರು. 1950ರ ಮಾರ್ಚ್‌ನಲ್ಲಿ ಮೊದಲ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದ ಸುಕುಮಾರ್‌ ಸೇನ್‌ ಎಲ್ಲವನ್ನೂ ಮೊದಲಿನಿಂದ ಕಟ್ಟಬೇಕಾಗಿತ್ತು. ದೇಶದಲ್ಲಿ ಆಗ 21 ವರ್ಷ ದಾಟಿದ 17.6 ಕೋಟಿ ಜನರಿದ್ದರು. ಇವರಲ್ಲಿ ಶೇಕಡಾ 85ರಷ್ಟು ಜನರು ಅಸುಕ್ಷಿತರಾಗಿದ್ದರು. ಇವರನ್ನೆಲ್ಲಾ ನೋಂದಣಿ ಮಾಡಿಕೊಂಡು ಇವರಿಗೆಲ್ಲಾ ಮತದಾರರ ಗುರುತಿನ ಚೀಟಿ ನೀಡುವ ಸವಾಲು ಆಯೋಗದ ಮುಂದಿತ್ತು.

ಇದರ ಜತೆಗೆ ಇನ್ನೂ ಹಲವು ಅಸಾಧಾರಣ, ಅಸಾಮಾನ್ಯ ಕೆಲಸಗಳನ್ನು ಮಾಡಿ ಮುಗಿಸಬೇಕಿತ್ತು. ಮತ ಪತ್ರಗಳ ವಿನ್ಯಾಸ, ಪಕ್ಷಗಳಿಗೆ ಗುರುತುಗಳನ್ನು ನೀಡುವುದು. ಕಬ್ಬಿಣದ ಮತ ಪೆಟ್ಟಿಗೆಗಳನ್ನು ಹೊಸದಾಗಿ ಉತ್ಪಾದನೆ ಮಾಡಬೇಕಿತ್ತು. ಜತೆಗೆ 26 ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಬೇಕಾಗಿತ್ತು. ಹಾಗಾಗಿ ಸದ್ಯಕ್ಕೆ ಚುನಾವಣೆ ಸಾಧ್ಯವಿಲ್ಲ ಎಂದು ಬಿಟ್ಟರು ಸೇನ್.

ದೇಶದ ಮೊದಲ ಚುನಾವಣೆಯ ಮತ ಪೆಟ್ಟಿಗೆಗಳು ಹೀಗಿದ್ದವು.

ಕೊನೆಗೆ 1952ನೇ ಇಸವಿಯ ಮೊದಲ ತಿಂಗಳು ಚುನಾವಣೆ ನಿಗದಿಯಾಯಿತು. ಒಟ್ಟು 68 ಹಂತಗಳ ಕಂಡು ಕೇಳರಿಯದ ಚುನಾವಣೆಯದು. 489 ಲೋಕಸಭಾ ಸ್ಥಾನಗಳು, ಸುಮಾರು 3,280 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಇದಕ್ಕಾಗಿ 1,94,000 ಮತದಾನ ಕೇಂದ್ರಗಳನ್ನು ತೆರಯಲಾಯಿತು.

ಈ ಕೇಂದ್ರಗಳನ್ನು ತಲುಪುವುದು ಇನ್ನೊಂದು ಸಾಹಸವಾಗಿತ್ತು. ಕೆಲವು ಗ್ರಾಮೀಣ ಭಾಗಗಳನ್ನು ತಲುಪಲು ಸೇತುವೆಗಳನ್ನೇ ನಿರ್ಮಿಸಬೇಕಾಗಿತ್ತು. ಕೆಲವು ಬೆಟ್ಟ-ಗುಡ್ಡಗಳನ್ನು ಏರಲು ಕುದುರೆ, ಕತ್ತೆಗಳೇ ಸಾರಿಗೆಗಳಾಗಿದ್ದವು. ಇವುಗಳ ಬೆನ್ನ ಮೇಲೆ ಮತಯಂತ್ರಗಳನ್ನು ಹೊತ್ತು ಚುನಾವಣಾಧಿಕಾರಿಗಳು ಕಾಲ್ನಡಿಗೆಯಲ್ಲಿ ಗ್ರಾಮೀಣ ಭಾಗಗಳನ್ನು ತಲುಪಬೇಕಾಗಿತ್ತು. ಕೆಲವು ಕಡೆ ಮತಗಟ್ಟೆಗಳು 14,500 ಅಡಿ ಎತ್ತರದಲ್ಲಿದ್ದವು. ಹಿಂದೂ ಮಹಾಸಾಗರದಲ್ಲಿರುವ ಲೊಕ್ಕಾಡಿವ್‌, ಮಿನಿಕಾಯ್‌ ಮತ್ತು ಅಮಿಂಡಿವಿ ದ್ವೀಪಗಳನ್ನು ಸಂಪರ್ಕಿಸಲು ನೌಕಾದಳದ ನೌಕೆಗಳು ಬೇಕಾಗಿತ್ತು. ಕೆಲವು ನದಿಗಳನ್ನು ದಾಟಲು ಎರಡು ದಿನಗಳು ಬೇಕಾಗಿತ್ತು. ಭೌಗೋಳಿಕ ಸಮಸ್ಯೆಗಳು ಇವಾದರೆ, ಎರಡನೇ ಸಮಸ್ಯೆ ಸಾಮಾಜಿಕವಾದುದಾಗಿತ್ತು.

ಉತ್ತರ ಭಾರತದಲ್ಲಿ ಹೆಂಡತಿಯರನ್ನು ಇಂಥಹವರ ಪತ್ನಿ ಎಂದಷ್ಟೇ ಹೇಳುತ್ತಿದ್ದರು. ತಮ್ಮ ಹೆಸರನ್ನು ವಿವಾಹಿತ ಮಹಿಳೆಯರು ಹೇಳುತ್ತಿರಲಿಲ್ಲ; ಅವರಿಗೆ ಹೆಸರು ಹೇಳಲು ಗಂಡಂದಿರು ಅವಕಾಶವೂ ನೀಡಿರಲಿಲ್ಲ. ಇದರಿಂದ ಸುಮಾರು 28 ಲಕ್ಷ ಮಹಿಳೆಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಸಾಧ್ಯವಾಗದೆ ಅಷ್ಟೂ ಜನ ಈ ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿಯಬೇಕಾಯಿತು.

ಅಣಕು ಚುನಾವಣೆ:

ನಿಜವಾದ ಚುನಾವಣೆ ನಡೆಯುವ ಮೊದಲು ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಎಂದರೆ ಹೇಗಿರುತ್ತದೆ, ಚುನಾವಣೆ ಅಂದರೆ ಏನು ಎಂಬುದನ್ನು ತಿಳಿಸಿ ಹೇಳಬೇಕಾಗಿತ್ತು. ತಮ್ಮ ತಲೆಯಲ್ಲಿದ್ದ ಕಲ್ಪನೆಗಳನ್ನು ನೆಹರೂ ಅಧಿಕಾರಿಗಳ ತಲೆಗೆ ದಾಟಿಸಿ ಅಲ್ಲಿಂದ ಅದನ್ನು ಜನರ ತಲೆಗೆ ತುಂಬಬೇಕಾಗಿತ್ತು.

ಜಮಾ ಮಸೀದಿ ಪ್ರದೇಶದಲ್ಲಿ ಮೊದಲ ಚುನಾವಣೆಯಲ್ಲಿ ಮತದಾನ ಮಾಡಲು ಅಂಧ ಮತದಾರರೊಬ್ಬರನ್ನು ಕರೆ ತಂದಿರುವುದು.

ಹೀಗಾಗಿ ಅಧಿಕಾರಿಗಳಿಗಾಗಿ ಅಣಕು ಚುನಾವಣೆಗಳನ್ನು ನಡೆಸಲಾಯಿತು. ಮುಂದೆ ಒದಗಿ ಬರಬಹುದಾದ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರಗಳನ್ನು ಕಂಡುಕೊಳ್ಳಲಾಯಿತು.

ಮೊದಲ ಚುನಾವಣೆಯಲ್ಲಿ 25 ಗುರುತುಗಳನ್ನು ಬಳಕೆ ಮಾಡಲಾಗಿತ್ತು. ದಿನ ನಿತ್ಯ ಬಳಕೆ ಮಾಡುವ, ಸಾಮಾನ್ಯ ಜನರು ಕಂಡಿರಬಹುದಾದ ಜೋಡಿ ಎತ್ತು, ಆನೆ, ಲಾಟೀನು ಇಂಥವೇ ಗುರುತುಗಳನ್ನು ಇದರಲ್ಲಿ ಬಳಸಲಾಗಿತ್ತು. ಆರಂಭದಲ್ಲಿ ರೈಲ್ವೇ ಎಂಜಿನ್‌ ಕೂಡ ಇದರಲ್ಲಿ ಸೇರಿತ್ತು. ಆದರೆ ಕೊನೆ ಕ್ಷಣದಲ್ಲಿ ಗ್ರಾಮೀಣ ಭಾಗದವರು ಅದನ್ನು ನೋಡಿಲ್ಲ ಎಂಬ ಕಾರಣಕ್ಕೆ ಆ ಚಿನ್ಹೆಯನ್ನು ಕೈ ಬಿಡಲಾಯಿತು.

ಈ ಚೀಟಿಗಳನ್ನು ಹಾಕುವ ಬ್ಯಾಲೆಟ್‌ ಬಾಕ್ಸ್‌ಗಳಿಗಾಗಿಯೇ ದೊಟ್ಟ ಮಟ್ಟದ ಕಬ್ಬಿಣ ಬೇಕಾಗಿತ್ತು. ಕೊನೆಗೆ ಬಾಕ್ಸ್‌ ಉತ್ಪಾದನೆ ಮಾಡಲಾಗದೆ ಮರದಿಂದಲೂ ಬಾಕ್ಸ್‌ಗಳನ್ನು ಮಾಡಬೇಕಾಗಿ ಬಂದಿತ್ತು.

ಹೆಚ್ಚು ಕಡಿಮೆ ಈ ಚುನಾವಣೆ ಒಂದು ರೀತಿಯಲ್ಲಿ ಪ್ರಹಸನದಂತೆಯೇ ಇತ್ತು. 1951-52 ಹಾಗೂ 57ರ ಚುನಾವಣೆಯಲ್ಲಿ ಈಗಿನಂತೆ ಬ್ಯಾಲೆಟ್‌ ಪೇಪರ್‌ಗಳಿರಲಿಲ್ಲ. ಜನರು ಬ್ಯಾಲೆಟ್‌ ಪೇಪರ್‌ನ್ನು ಪಡೆದುಕೊಂಡು ಪರದೆ ಹಿಂದೆ ಹೋಗಿ ಅಲ್ಲಿ ಬೇರೆ ಬೇರೆ ಪಕ್ಷಗಳ ಗುರುತುಗಳಿದ್ದ ಬಾಕ್ಸ್‌ಗಳಿಗೆ ಅವನ್ನು ಹಾಕಬೇಕಾಗಿತ್ತು. ಹೆಚ್ಚಿನ ಜನರು ಆ ಪೇಪರ್‌ನ್ನು ಕಿಸೆಗೆ ಹಾಕಿಕೊಂಡು ಮನೆಗೆ ಒಯ್ದು ಬಿಡುತ್ತಿದ್ದರು. ಅದು ಅವರಿಗೆ ಮೊದಲ ಚುನಾವಣೆಯ ನೆನಪಿನ ಬುತ್ತಿಗಳಾಗಿದ್ದವು. ಇನ್ನು ಕೆಲವರು ಮತ ಪೆಟ್ಟಿಗೆಗಳ ಮುಂದೆ ಪ್ರಾರ್ಥನೆ ಮಾಡುತ್ತಾ ಕುಳಿತು ಬಿಡುತ್ತಿದ್ದರು. ಒಂದಷ್ಟು ಜನ ತಮ್ಮ ಅಭ್ಯರ್ಥಿ ಗೆಲ್ಲಲಿ ಎಂದು ಅವುಗಳ ಒಳಗೆ ಹೂವು, ನೋಟು, ಚಿಲ್ಲರೆಗಳನ್ನು ಹಾಕುತ್ತಿದ್ದರು.

ಮೊದಲ ಚುನಾವಣೆಯ ಮತ ಪೆಟ್ಟಿಗೆಗಳು ಹೀಗಿದ್ದವು.

ನೆಹರೂ ಆಪ್ತರ ಕೂಟ:

ಭಾರತದಲ್ಲಿ ಚುನಾವಣೆ ನಡೆಯುವಾಗಲೇ ಅತ್ತ ಇಂಗ್ಲೆಂಡ್‌ನಲ್ಲಿ ಚುನಾವಣೆ ನಡೆಯುತ್ತಿತ್ತು. ಹಾಗೆ ನೋಡಿದರೆ ಅಲ್ಲಿನ ಚುನಾವಣಾ ಮಾದರಿಯನ್ನೇ ಇಲ್ಲೂ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅಲ್ಲಿ ಎರಡು ಪಕ್ಷಗಳ ವ್ಯವಸ್ಥೆ ಇದ್ದರೆ, ಇಲ್ಲಿ ನೂರಾರು ಪಕ್ಷಗಳಿದ್ದವು. ನೆಹರೂ ನೇತೃತ್ವದ ಅಖಿಲ ಭಾರತ ಕಾಂಗ್ರೆಸ್‌ ಪಕ್ಷ ಒಂದು ಕಡೆಯಾದರೆ ಅವರ ಸಂಪುಟದಿಂದ ಹೊರ ಬಂದವರು ಬೇರೆ ಬೇರೆ ಪಕ್ಷಗಳನ್ನು ಕಟ್ಟಿಕೊಂಡಿದ್ದರು.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಜೆ. ಬಿ. ಕೃಪಲಾನಿ ಕಿಸಾನ ಮಜ್ದೂರ್‌ ಪಾರ್ಟಿ ಸ್ಥಾಪಿಸಿದರು. ರಾಮ್‌ ಮನೋಹರ್‌ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೋಷಿಯಲಿಸ್ಟ್‌ ಪಾರ್ಟಿ ಹುಟ್ಟು ಹಾಕಿದರೆ, ನೆಹರೂ ಸಂಪುಟದಲ್ಲಿದ್ದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಜನಸಂಘಕ್ಕೆ ಅಡಿ ಗಲ್ಲು ಹಾಕಿದರು. ಶೆಡ್ಯೂಲ್ಡ್‌ ಕಾಸ್ಟ್‌ ಫೆಡರೇಷನ್‌ಗೆ ಸಂವಿಧಾನ ಶಿಲ್ಪಿ ಬಿ.ಆರ್‌ ಅಂಬೇಡ್ಕರ್‌ ಮರು ಜನ್ಮ ನೀಡಿದರು. ಕ್ರಾಂತಿಯ ಯತ್ನ ವಿಫಲವಾಗಿದ್ದರಿಂದ ಕಮ್ಯೂನಿಸ್ಟ್‌ ಪಕ್ಷವೂ ಚುನಾವಣಾ ರಾಜಕೀಯಕ್ಕೆ ಧುಮುಕಿತು. ಹೀಗೆ ಕಾಂಗ್ರೆಸ್‌ನಿಂದಲೇ ಹೊರ ಬಂದ ನಾಯಕರು ಕಾಂಗ್ರೆಸ್‌ ವಿರುದ್ಧವೇ ಹತ್ತಾರು ಪಕ್ಷಗಳನ್ನು ಕಟ್ಟಿ ನಿಲ್ಲಿಸಿದರು.

ನೆಹರೂ ಏಕಾಂಗಿ ಹೋರಾಟ:

ಈಗ ಕಾಂಗ್ರೆಸ್‌ನಲ್ಲಿ ನಾಯಕರು ಯಾರೂ ಉಳಿದಿರಲಿಲ್ಲ; ನೆಹರೂ ಬಿಟ್ಟು. ವಿಚಿತ್ರವೆಂದರೆ ಅವರ ಮಿತ್ರರೆಲ್ಲಾ ಈಗ ವಿರುದ್ಧ ಬಣದಲ್ಲಿದ್ದರು. ಅವರನ್ನೆಲ್ಲಾ ಏಕಾಂಗಿಯಾಗಿ ಎದುರಿಸಬೇಕಾಗಿತ್ತು. ಒಬ್ಬೊಬ್ಬರು ಒಂದೊಂದು ಭಾಗದಲ್ಲಿ ಚುನಾವಣೆಗೆ ನಿಂತಿದ್ದರು. ಅಲ್ಲಿನ ತಳ ಮಟ್ಟದ ಸಮಸ್ಯೆಗಳೇ ಭಿನ್ನವಾಗಿದ್ದವು. ಈ ಎಲ್ಲಾ ಸವಾಲುಗಳ ಮಧ್ಯೆ ಅಕ್ಷರಶಃ ಬೀದಿಗಿಳಿದರು ಜವಹರ್‌ಲಾಲ್‌ ನೆಹರೂ.

9 ವಾರಗಳ ಅಂತರದಲ್ಲಿ ನೆಹರೂ ದೇಶದಾದ್ಯಂತ 25,000 ಮೈಲಿ ಕ್ರಮಿಸಿದರು. 18,000 ಮೈಲಿ ವಿಮಾನದ ಮೂಲಕ, 5,200 ಮೈಲಿ ಕಾರಿನಲ್ಲಿ ಮತ್ತು 1,600 ಮೈಲಿ ರೈಲಿನಲ್ಲಿ ಪ್ರಯಾಣಿಸಿದರು. ಅದೊಂದು ರೀರಿಯಲ್ಲಿ ಏಕವ್ಯಕ್ತಿ ಪ್ರದರ್ಶನ. ಕಾಂಗ್ರೆಸ್‌ ಮುಖ್ಯಸ್ಥ, ನಾಯಕ, ಕಾರ್ಯಕರ್ತ ಎಲ್ಲವೂ ಅವರೇ ಆಗಿದ್ದರು. ದೇಶದ ಬೇರೆ ಬೇರೆ ಭಾಗಗಳಿಗೆ ಹೋಗುತ್ತಿದ್ದಂತೆ ಅಲ್ಲಿನ ಜನರಿಗೆ ಅಗತ್ಯವಾಗಿದ್ದ, ಜನ ಜೀವನಕ್ಕೆ ಸಂಬಂಧಿಸಿದ ಮಾತುಗಳನ್ನು ಅವರು ಆಡುತ್ತಿದ್ದರು. ಹೀಗೆ 300 ಬೃಹತ್‌ ಬಹಿರಂಗ ಸಭೆಗಳು, ಅಸಂಖ್ಯಾತ ಸಣ್ಣ ಪುಟ್ಟ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸುಮಾರು 2 ಕೋಟಿ ಜನರನ್ನು ಭಾಷಣದ ಮೂಲಕ ಮತ್ತು ಅಷ್ಟೇ ಸಂಖ್ಯೆಯ ಜನರನ್ನು ಕಾರಿನಲ್ಲಿ ಕೈ ಬೀಸುತ್ತಾ ನೇರವಾಗಿ ತಲುಪಿದ್ದರು ನೆಹರೂ.

1952ರ ಚುನಾವಣೆ ವೇಳೆ ಪಂಜಾಬ್‌ನಲ್ಲಿ ಪ್ರಚಾರ ನಿರತರಾಗಿರುವ ನೆಹರೂ.

ಹಿಮಾಚಲ ಪ್ರದೇಶದಲ್ಲಿ ಮೊದಲ ಚುನಾವಣೆ:

ಕೊನೆಗೆ ಎಲ್ಲಾ ಸರ್ಕಸ್‌ಗಳು ಮುಗಿದು ಚುನಾವಣೆಗೂ ಹತ್ತಿರವಾಗುತ್ತಿತ್ತು. ಆದರೆ ಹಿಮಪಾತದಿಂದ ಸಂಪರ್ಕ ಕಡಿದುಕೊಳ್ಳುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ತಿಂಗಳ ಮೊದಲೇ ಚುನಾವಣೆ ನಡೆಯಿತು. ಹಿಮಾಚಲ ಪ್ರದೇಶದ ಚಿನಿ ಗ್ರಾಮದಲ್ಲಿ ಅಂದರೆ ಅಕ್ಟೋಬರ್‌ 25, 1951ರಂದು ಮೊತ್ತ ಮೊದಲ ಚುನಾವಣೆ ನಡೆಯಿತು.

ದೇಶದ ಉಳಿದ ಭಾಗದಲ್ಲಿ ಜನವರಿ, ಫೆಬ್ರವರಿಯಲ್ಲಿ ಚುನಾವಣೆ ನಿಗದಿಯಾಯಿತು. 489 ಸ್ಥಾನಗಳ ಆಯ್ಕೆಗೆ 53 ಪಕ್ಷಗಳ 1849 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. 314 ಕ್ಷೇತ್ರಗಳಲ್ಲಿ ಜನರು ಒಬ್ಬರನ್ನೇ ಆಯ್ಕೆ ಮಾಡಬೇಕಾಗಿತ್ತು. ಇನ್ನು 86 ಕ್ಷೇತ್ರಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡದಿಂದ ಹೆಚ್ಚುವರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರು. ಇಲ್ಲಿ ಇಬ್ಬರನ್ನು ಜನರು ಆಯ್ಕೆ ಮಾಡಬೇಕಾಗಿತ್ತು. ಒಂದು ಕ್ಷೇತ್ರದಲ್ಲಿ ಮಾತ್ರ ಒಟ್ಟು ಮೂರು ಜನರನ್ನು ಚುನಾಯಿಸಬೇಕಾಗಿತ್ತು. ಕೇರಳದ ಕೊಟ್ಟಾಯಂನಲ್ಲಿ ಶೇಕಡಾ 80.5ರಷ್ಟು ಮತದಾನ ನಡೆದರೆ ಈಗಿನ ಮಧ್ಯ ಪ್ರದೇಶದ ಶಹ್ದೂಲ್‌ನಲ್ಲಿ ಕೇವಲ ಶೇಕಡಾ 18ರಷ್ಟು ಮತದಾನ ನಡೆಯಿತು.

ಹಾಗೂ ಹೀಗೆ ಚುನಾವಣಾ ಪ್ರಕ್ರಿಯೆ ಮುಗಿದಿದ್ದೇ ಭಾರತದ ಪಾಲಿಗೆ ದೊಡ್ಡ ಸಾಧನೆಯಾಗಿತ್ತು. ಕೊನೆಗೆ ಫಲಿತಾಂಶ ಹೊರಬಿದ್ದಾಗ 489 ಲೋಕಸಭೆ ಸ್ಥಾನಗಳಲ್ಲಿ 364 ಕಾಂಗ್ರೆಸ್‌ ಪಾಲಾಗಿತ್ತು. 3,280 ವಿಧಾನಸಭಾ ಸ್ಥಾನಗಳಲ್ಲಿ 2,247ನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. ಲೋಕಸಭೆಯಲ್ಲಿ ಶೇಕಡಾ 45 ಮತ್ತು ವಿಧಾನಸಭೆಯಲ್ಲಿ ಶೇಕಡಾ 42 ಮತಗಳನ್ನು ಕಾಂಗ್ರೆಸ್‌ ಬುಟ್ಟಿಗೆ ಹಾಕಿಕೊಂಡಿತ್ತು.

ಸಿಪಿಐ 16 ಸ್ಥಾನಗಳನ್ನು ಗೆದ್ದುಕೊಂಡು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಸೋಷಿಯಲಿಸ್ಟ್‌ ಪಾರ್ಟಿ ಎರಡಂಕಿ ದಾಟಿದ ಇನ್ನೊಂದು ಪಕ್ಷವಾಗಿತ್ತು. ಅದು 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಜನಸಂಘ ಮೊದಲ ಚುನಾವಣೆಯಲ್ಲಿ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು. ಆದರೆ ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಭಾರತದ ದೊಡ್ಡ ದೊಡ್ಡ ತಲೆಗಳೆಲ್ಲಾ ಮೊದಲ ಚುನಾವಣೆಯಲ್ಲೇ ಸೋತಿದ್ದರು. ಮೊರಾರ್ಜಿ ದೇಸಾಯಿ, ಬಿ.ಆರ್‌. ಅಂಬೇಡ್ಕರ್‌, ಜೆ.ಬಿ. ಕೃಪಲಾನಿ ಸೋತವರ ಪಟ್ಟಿಯಲ್ಲಿದ್ದ ಮೊದಲ ಸಾಲಿನಲ್ಲಿದ್ದರು.

ಅಂತು ಇಂತೂ 1952ರ ಮೊದಲ ಭಾಗದಲ್ಲಿ ಮೂರು ವರ್ಷಗಳ ನಂತರ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಯಿತು. ಪಂಡಿತ್‌ ಜವಹರ್‌ಲಾಲ್‌ ನೆಹರೂ ಅವರ ಕಾಂಗ್ರೆಸ್‌ ಪಕ್ಷ ಚುನಾವಣೆ ಗೆದ್ದಿದ್ದಲ್ಲದೆ ನೆಹರೂ ಭಾರತದ ಮೊದಲ ಚುನಾಯಿತ ಪ್ರಧಾನಿಯಾಗಿ ಆಯ್ಕೆಯಾದರು. ಅಷ್ಟೇ ಅಲ್ಲ ಭಾರತದ ಪ್ರಜಾಪ್ರಭುತ್ವದ ಹೀರೋ ಆಗಿ ನೆಹರೂ ಮೂಡಿ ಬಂದರು. ಅವರು ಹೀರೋ ಆದರೆ ಅವರ ಹಿಂದಿನ ಶಕ್ತಿಯಾಗಿದ್ದವರು ಮತ್ಯಾರೂ ಅಲ್ಲ, ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌.

ದೇಶದ ಮೊದಲ ಚುನಾವಣಾ ಆಯುಕ್ತ ಬಂಗಾಳ ಮೂಲದ ಸುಕುಮಾರ್‌ ಸೇನ್‌.

ಸ್ವತಂತ್ರ ಭಾರತದ ಮೊದಲ ಮತದಾರ:

ಈ ಚುನಾವಣೆಯ ನಿಜವಾದ ಹೀರೋಗಳು ಯಾರೂ ಇಂದು ಬದುಕಿಲ್ಲ. ಆದರೆ ಈ ಚುನಾವಣೆಯಲ್ಲಿ ಮೊದಲ ಮತದಾನ ಮಾಡಿದ ಮತದಾರರೊಬ್ಬರು ನಮ್ಮ ನಡುವೆ ಇಂದಿಗೂ ಇದ್ದಾರೆ. ಅವರೇ ಹಿಮಾಚಲ ಪ್ರದೇಶದ ಶ್ಯಾಮ್‌ ಶರಣ್‌ ನೇಗಿ.

ಇಲ್ಲಿ ಹಿಮ ಬೀಳುವ ಕಾರಣಕ್ಕೆ ಮೊದಲ ಚುನಾವಣೆ ನಡೆದಿದ್ದರಿಂದ ನೇಗಿ ಅವರಿಗೆ ಮೊದಲ ಮತ ಚಲಾಯಿಸುವ ಅವಕಾಶ ಒದಗಿ ಬಂದಿತ್ತು. ಅಲ್ಲಿಂದ ಅವರು ಕಳೆದ 65 ವರ್ಷಗಳಿಂದ ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತಾ ಬರುತ್ತಿದ್ದಾರೆ. ಅಂದ ಹಾಗೆ ಸದ್ಯ ಅವರಿಗೆ 102 ವರ್ಷ ವಯಸ್ಸು.

ನೇಗಿಯೇ ಭಾರತದ ಮೊದಲ ಮತದಾರರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ 2007ರಲ್ಲಿ ನೇಗಿ ಇರುವ ಕಿನ್ನೌರ್‌ ಜಿಲ್ಲೆಯ ಜಿಲ್ಲಾಧಿಕಾರಿ ಮನೀಶಾ ನಂದ ಎಂಬವವರು ಜಿಲ್ಲಾಧಿಕಾರಿಯಾಗಿದ್ದರು.

“ನನಗೆ ಕಿನ್ನೌರ್‌ ಮೇಲೆ ಬಹಳ ಆಸಕ್ತಿ ಇತ್ತು. ದೇಶದಲ್ಲೇ ಈ ಹಿಮಚ್ಛಾದಿತ ಪ್ರದೇಶದಲ್ಲಿ ಮೊದಲ ಚುನಾವಣೆ ನಡೆದಿತ್ತು ಎಂಬುದು ನನಗೆ ತಿಳಿದಿತ್ತು,” ಎನ್ನುತ್ತಾರೆ ನಂದ. ಒಂದು ದಿನ ಅವರು ಹೀಗೆ ಮತದಾರರ ಪಟ್ಟಿ ನೋಡುತ್ತಿದ್ದರು. ಅದರಲ್ಲಿ ಕುತೂಹಲಕ್ಕೆ 90 ವರ್ಷ ಮೇಲ್ಪಟ್ಟವರ ಹೆಸರು ನೋಡುತ್ತಿದ್ದರು. ಅದರಲ್ಲಿ ನೇಗಿ ಹೆಸರಿತ್ತು. ಆಗ ಅವರಿಗೆ 92 ವರ್ಷ ವಯಸ್ಸು.

ತಕ್ಷಣ ಕುತೂಹಲಕ್ಕೆ ನಂದ, ಚುನಾವಣಾ ಇಲಾಖೆಗೆ ಅವರನ್ನು ಪತ್ತೆ ಮಾಡುವಂತೆ ಸೂಚಿಸಿದರು. ಮುಂದೆ ನಂದ ಅಲ್ಲಿಂದ ವರ್ಗವಾದರು. ಆದರೆ ಅಷ್ಟೊತ್ತಿಗಾಗಲೇ ಚುನಾವಣಾ ಅಧಿಕಾರಿಗಳು ಅವರನ್ನು ಪತ್ತೆ ಮಾಡಿದ್ದರು. ಹೀಗಾಗಿ ಆಗಿನ ಜಿಲ್ಲಾಧಿಕಾರಿ ಎಂ. ಸುಧಾ ರಾವ್‌ ಕಲ್ಪ ಗ್ರಾಮಕ್ಕೆ ತೆರಳಿ ನೇಗಿ ಅವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ನೇಗಿ ನಾನು ಸ್ವತಂತ್ರ ಭಾರತದ ಮೊದಲ ಮತದಾರ ಎಂದಿದ್ದಾರೆ. ಅದಕ್ಕೆ ಕಾರಣವೂ ಇತ್ತು. ಜುಲೈ 1, 1917ರಲ್ಲಿ ಹುಟ್ಟಿದ ನೇಗಿ ಸರಕಾರಿ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರನ್ನು ಚುನಾವಣಾ ಕರ್ತವ್ಯಕ್ಕೆ ಹಾಕಿದ್ದರು. ಹಾಗಾಗಿ ಅವರು ಮತ ಹಾಕಿ ಬೇರೆ ಕಡೆಗೆ ಹೋಗಬೇಕಾಗಿತ್ತು.

“ನನ್ನ ತಂದೆ ಮತ ಗಟ್ಟೆ ಅಧಿಕಾರಿಗಳ ಬಳಿ, ಸಮಯಕ್ಕೂ ಮೊದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವಂತೆ ಈ ಮೂಲಕ ಬೇರೆ ಮತಗಟ್ಟೆಗೆ ಕರ್ತವ್ಯಕ್ಕೆ ತೆರಳಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಅವರ ಕಾಳಜಿ ನೋಡಿ ಮತದಾನಕ್ಕೆ ಅಧಿಕಾರಿ ಅವಕಾಶ ನೀಡಿದ್ದು. ಹೀಗಾಗಿ ಅವರು ಮೊದಲ ಮತದಾರರಾಗಿ ಮತದಾನ ಮಾಡಿದರು,” ಎಂದು ವಿವರಿಸಿದ್ದರು ಅವರ ಪುತ್ರ ಚಂದ್ರ ಪ್ರಕಾಶ್‌.

ಈ ಕಥೆಯನ್ನು ದೇವಿ ಈ ಹಿಂದಿನ ಅಧಿಕಾರಿ ನಂದ ಗಮನಕ್ಕೆ ತಂದಿದ್ದರು. ಆದರೆ ಅವರು ಅದನ್ನು ನೇರವಾಗಿ ನಂಬಲು ಸಿದ್ಧವಿರಲಿಲ್ಲ.

ಹೀಗಾಗಿ ಚುನಾವಣಾ ಕಚೇರಿಯಲ್ಲಿ ದಾಖಲೆಗಳ ಹುಟುಕಾಟ ಆರಂಭಿಸಿದರು. ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಈ ಹುಟುಕಾಟ ಮುಂದುವರೆಯಿತು. ಆಗ ನೇಗಿ ಹೇಳಿದ್ದು ಸರಿ, ಅವರೇ ಮೊದಲ ಮತದಾರರು ಎಂಬುದು ಋಜುವಾತಾಯಿತು.

ಮೊದಲ ಮತದಾರನನ್ನು ಬೆನ್ನು ಹತ್ತಿದ್ದು ನನ್ನ ಪಿಎಚ್‌ಡಿ ಮುಗಿಸಿದಂತಿತ್ತು ಎನ್ನುತ್ತಾರೆ ನಂದ. ಈ ವಿಚಾರ ಗೊತ್ತಾಗಿ ಮುಂದೆ 2012ರಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತ ನವೀನ್‌ ಚಾವ್ಲಾ ಕಲ್ಪದಲ್ಲಿರುವ ನೇಗಿ ಮನೆಗೆ ಹೋಗಿ ಅವರಿಗೆ ಸನ್ಮಾನ ಮಾಡಿ ಬಂದಿದ್ದರು.

2014ರ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಅಂಗವಾಗಿ ಗೂಗಲ್‌ ನೇಗಿ ಅವರ ವಿಡಿಯೋ ಬಿಡುಗಡೆ ಮಾಡಿತ್ತು. ಇದೇ ನೇಗಿ 65 ವರ್ಷಗಳ ನಂತರ ಮತ್ತೆ 2019ರಲ್ಲಿ ಮತದಾನ ಮಾಡಲು ಉತ್ಸುಕರಾಗಿದ್ದಾರೆ.

ಇದಿಷ್ಟು ಭಾರತದ ಮೊದಲ ಚುನಾವಣೆ ಮತ್ತು ಮೊದಲ ಮತದಾರನ ಕಥೆ.

ಪೂರಕ ಮಾಹಿತಿ: Democracy’s Biggest Gamble: India’s First Free Elections in 1952 – Ramachandra Guha; Electoral practices: Elections and its comic moments of crisis – Prannoy Roy Asok Lahiri (India Today);