Home ಕರ್ನಾಟಕ ಗುಟ್ಟು ಬಿಟ್ಟುಕೊಡದ ಚಿಕ್ಕೋಡಿ ಕ್ಷೇತ್ರ: ಅಭಿವೃದ್ಧಿಗಿಂತ ‘ಕುಟುಂಬ ಪ್ರತಿಷ್ಠೆ’ಯೇ ಇಲ್ಲಿನ ರಾಜಕಾರಣ

ಗುಟ್ಟು ಬಿಟ್ಟುಕೊಡದ ಚಿಕ್ಕೋಡಿ ಕ್ಷೇತ್ರ: ಅಭಿವೃದ್ಧಿಗಿಂತ ‘ಕುಟುಂಬ ಪ್ರತಿಷ್ಠೆ’ಯೇ ಇಲ್ಲಿನ ರಾಜಕಾರಣ

SHARE

ಬೆಳಗಾವಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ. ಭೌಗೋಳಿಕವಾಗಿಯೂ ಅಷ್ಟೇ ವಿಶಿಷ್ಟವಾದ ಜಿಲ್ಲೆ. ಇಲ್ಲಿನ 14 ತಾಲೂಕುಗಳ ಪೈಕಿ ಚಿಕ್ಕೋಡಿಯೂ ಒಂದು. ಬೃಹತ್ ಜಿಲ್ಲೆಯಲ್ಲಿ ಸುಗಮ ಆಡಳಿತ ಸಾಧಿಸುವ ಸಲುವಾಗಿ ಚಿಕ್ಕೋಡಿಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿ ವಿಗಂಡಿಸಲಾಗಿದೆಯೇ ವಿನಃ ಈ ಕ್ಷೇತ್ರಕ್ಕೆ ಸ್ವತಂತ್ರ್ಯ ಜಿಲ್ಲೆಯ ಸ್ಥಾನಮಾನಗಳಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಚಿಕ್ಕೋಡಿಯನ್ನು ಸ್ವತಂತ್ರ್ಯ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ ಕೂಗಿಗೂ ದಶಕಗಳ ಇತಿಹಾಸವಿದೆ.

ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಬಂದರೆ ಬೆಳಗಾವಿ ಹಾಗೂ ಚಿಕ್ಕೋಡಿ ನಡುವೆ ಸಾಕಷ್ಟು ಅಂತರವಿದೆ. ನೀರಾವರಿ, ಬೃಹತ್ ಕೈಗಾರಿಕೆ ಸೇರಿದಂತೆ ಜಿಲ್ಲೆಯ ಪ್ರಮುಖ ಯೋಜನೆಗಳ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಚಿಕ್ಕೋಡಿ ಕ್ಷೇತ್ರದ ವಿರುದ್ಧ ರಾಜ್ಯ-ಕೇಂದ್ರ ಸರಕಾರಗಳು ಮಲತಾಯಿ ಧೋರಣೆ ತೋರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಜಿಲ್ಲೆಯಲ್ಲಿ ಏಳು ನದಿಗಳಿದ್ದರೂ ಇಲ್ಲಿನ ಜನರಿಗೆ ಮಾತ್ರ ಕುಡಿಯುವುದಕ್ಕೂ ನೀರಿಲ್ಲ ಎಂಬಂತಹ ಸ್ಥಿತಿ ಇದೆ.

ಹೀಗೆ ಅನೇಕ ಸಮಸ್ಯೆಗಳಿದ್ದಾಗ್ಯೂ ಇಲ್ಲಿನ ಜನಕ್ಕೆ ಚುನಾವಣೆಯಲ್ಲಿ ಈವರೆಗೆ ಹುಕ್ಕೇರಿ ಮತ್ತು ಕತ್ತಿ ಕುಟುಂಬದ ಹೊರತು ಬೇರೆ ಆಯ್ಕೆಗಳಿರಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಮಾತ್ರ ಮಾಜಿ ಸಂಸದ ರಮೇಶ್ ಕತ್ತಿಗೆ ಟಿಕೆಟ್ ನಿರಾಕರಿಸಿ ಉದ್ಯಮಿ ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಿ ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರ.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ನೇರ ಹಣಾಹಣಿ ನಡೆಸುವ ಕುತೂಹಲಕಾರಿ ಜಿಲ್ಲೆಗಳ ಪೈಕಿ ಬೆಳಗಾವಿಯೂ ಒಂದು. ಜಿಲ್ಲಾ ಕಾಂಗ್ರೆಸ್‌ಗೆ ಹುಕ್ಕೇರಿ ಕುಟುಂಬದ ಬಲವಿದ್ದರೆ, ಬಿಜೆಪಿ ಕತ್ತಿ ಸೋದರರ ಬಲ. ಒಟ್ಟಾರೆ ಕಳೆದ ಎರಡು ದಶಕಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಈ ಕುಟುಂಬಗಳದ್ದೇ ಪಾರುಪತ್ಯ.

ಜಿಲ್ಲೆಯಲ್ಲಿ ಇತ್ತೀಚೆಗೆ ಬಿಜೆಪಿ ಮೇಲುಗೈ ಸಾಧಿಸಿದಂತೆ ಕಂಡರೂ ದಶಕಗಳಿಂದ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಚಿಕ್ಕೋಡಿ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡ ನಂತರ 1971 ರಿಂದ 1991ರ ವರೆಗೆ ಸುಮಾರು 6 ಬಾರಿ ಇಂದಿರಾ ಗಾಂಧಿ ಅವರ ಆಪ್ತ ಎನಿಸಿಕೊಂಡ ಬಿ. ಶಂಕರಾನಾಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

1996ರಲ್ಲಿ ಜನತಾದಳದಿಂದ ರತ್ನಮಾಲ ಧಾರೇಶ್ವರ ಸವಣೂರು ಗೆಲುವು ಸಾಧಿಸಿದ್ದರೆ, 1998ರಲ್ಲಿ ಲೋಕಶಕ್ತಿ, 1999ರಲ್ಲಿ ಜನತಾದಳ ಹಾಗೂ 2004ರಲ್ಲಿ ಬಿಜೆಪಿಯಿಂದ ಹೀಗೆ ಮೂರು ಬಾರಿಯೂ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸಿ ರಮೇಶ್ ಜಿಗಜಿಣಗಿ ಗೆಲುವು ಸಾಧಿಸಿದ್ದರು.

2004ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಮಲ ಅರಳಿತ್ತು. ತದನಂತರ ಜಿಲ್ಲೆಯಾದ್ಯಂತ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಾ ಇಂದು ಚಿಕ್ಕೋಡಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದೆ.

2004ರ ವರೆಗೆ ಈ ಕ್ಷೇತ್ರವನ್ನು ಮೀಸಲು ಕ್ಷೇತ್ರವಾಗಿ ಗುರುತಿಸಲಾಗಿತ್ತು. ಆದರೆ, 2009ರಲ್ಲಿ ಈ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವಾಗಿ ಬದಲಾಯಿಸಿದ ನಂತರ ಸಂಸದ ರಮೇಶ್ ಜಿಗಜಿಣಗಿ ಬಿಜಾಪುರಕ್ಕೆ ವಲಸೆ ಹೋದರು. ಹೀಗಾಗಿ 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ರಮೇಶ್ ಕತ್ತಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಅವರ ಪ್ರಮುಖ ಎದುರಾಳಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ.

ಕತ್ತಿ ಹಾಗೂ ಹುಕ್ಕೇರಿ ಕುಟುಂಬಗಳು ಮುಖಾಮುಖಿಯಾದದ್ದು ಇಲ್ಲಿಂದಲೇ.

ಆದರೆ, 2009ರ ಸೋಲಿಗೆ 2014ರಲ್ಲಿ ಬಿಜೆಪಿ ಪರವಾದ ಅಲೆಯ ನಡುವೆಯೂ ರಮೇಶ್ ಕತ್ತಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ರಕಾಶ್ ಹುಕ್ಕೇರಿ ತಮ್ಮ ಸೇಡನ್ನು ತೀರಿಸಿಕೊಂಡಿದ್ದರು. ಅಲ್ಲದೆ ಮೊದಲ ಬಾರಿಗೆ ಕ್ಷೇತ್ರವನ್ನು ಸಂಸತ್‌ನಲ್ಲಿ ಪ್ರತಿನಿಧಿಸಿದ್ದರು. ಹೀಗಾಗಿ ಈ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಪ್ರಕಾಶ್ ಹುಕ್ಕೇರಿ ಹಾಗೂ ಬಿಜೆಪಿಯಿಂದ ಮಾಜಿ ಸಂಸದ ಉಮೇಶ್ ಕತ್ತಿ ಸ್ಪರ್ಧಿಸಲಿದ್ದಾರೆ ಎಂದೇ ಊಹಿಸಲಾಗಿತ್ತಾದರೂ, ರಾಜ್ಯ ಬಿಜೆಪಿ ಈ ಎಲ್ಲಾ ಲೆಕ್ಕಾಚಾರವನ್ನೂ ಉಲ್ಟಾ ಮಾಡಿದೆ.

ಬಿಜೆಪಿಯ ಮನೆಯೊಂದು ಮೂರು ಬಾಗಿಲು

ಬಿಜೆಪಿ ನಾಯಕರಾದ ರಮೇಶ್ ಕತ್ತಿ, ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಉಮೇಶ್ ಕತ್ತಿ.

ಚಿಕ್ಕೋಡಿ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಮಾಜಿ ಸಚಿವ ಹಾಗೂ ಹಾಲಿ ಚಿಕ್ಕೋಡಿ ಶಾಸಕ ಉಮೇಶ್ ಕತ್ತಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಇಡೀ ಜಿಲ್ಲೆಯಲ್ಲಿ ರಾಜಕೀಯವಾಗಿ ಕತ್ತಿ ಕುಟುಂಬಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಜಿಲ್ಲಾ ಬಿಜೆಪಿಗೆ ತಕ್ಕ ಮಟ್ಟಿಗೆ ಇವರಿಗೆ ಪರ್ಯಾಯ ನಾಯಕತ್ವವಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಉಮೇಶ್ ಕತ್ತಿ ಸಹೋದರರಾದ ಮಾಜಿ ಸಂಸದ ರಮೇಶ್ ಕತ್ತಿಗೆ ಟಿಕೆಟ್ ಸಿಗಲಿದೆ ಎಂದೇ ಎಲ್ಲರೂ ಲೆಕ್ಕಾಚಾರ ಮಾಡಿದ್ದರು.

ಆದರೆ, ಕೊನೆಯ ಕ್ಷಣದಲ್ಲಿ ಈ ಎಲ್ಲಾ ಲೆಕ್ಕಾಚಾರವನ್ನು ಜಿಲ್ಲೆಯ ಪ್ರಬಲ ಉದ್ಯಮಿ ಅಣ್ಣಾಸಾಹೇಬ್ ಜೊಲ್ಲೆ ಉಲ್ಟಾ ಹೊಡೆಸಿದ್ದಾರೆ.

ಕಾರ್ಯಕರ್ತರ ಜೊತೆಗೆ ಸರಿಯಾಗಿ ಮಾತನಾಡುವುದಿಲ್ಲ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಅಲ್ಲದೆ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಿಗೆ ಗೈರಾಗಿರುವುದು ರಮೇಶ್ ಕತ್ತಿ ಟಿಕೆಟ್‌ಗೆ ಕತ್ತರಿ ಹಾಕಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೇ ರಮೇಶ್‌ಗೆ ಟಿಕೆಟ್ ನೀಡುವ ಕುರಿತು ಜಿಲ್ಲೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಆದರೆ, ಟಿಕೆಟ್ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ‘ಮೋದಿ ಅಲೆ’ಯ ನಡುವೆಯೂ ಅವರು ಸೋಲನುಭವಿಸಿದ್ದು ಸ್ವತಃ ಕತ್ತಿ ಸಹೋದರರಿಗೆ ಇರಿಸು ಮುರಿಸು ಉಂಟಾಗಿತ್ತು.

ಅಲ್ಲದೆ ಈ ಬಾರಿ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ರಾಜಕಾರಣ ಇನ್ನೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಲಕ್ಷ್ಮಣ ಸವದಿ ವಿರುದ್ಧ ಡಿಸಿಸಿ ಬ್ಯಾಂಕ್ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಕತ್ತಿ ಸಹೋದರರು ಕಳೆದ ಭಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಜೊತೆ ಕೈ ಜೋಡಿಸಿ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆಯನ್ನು ಸೋಲಿಸುವುದಕ್ಕಾಗಿ ಕೆಲಸ ಮಾಡಿದ್ದರು ಎಂಬ ಆರೋಪವಿದೆ.

ಇದೇ ಕಾರಣಕ್ಕೆ ಲಕ್ಷ್ಮಣ ಸವದಿ, ರಾಜು ಕಾಗೆ, ಹಾಲಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಸೇರಿದಂತೆ ಕ್ಷೇತ್ರದ ಪ್ರಮುಖ ನಾಯಕರು ರಮೇಶ್‌ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರ್‌ಎಸ್‌ಎಸ್‌ ಸಹ ಟಿಕೆಟ್ ನೀಡದಂತೆ ನೇರವಾಗಿ ಬಿಜೆಪಿಗೆ ಸೂಚನೆ ನೀಡಿತ್ತು ಎನ್ನಲಾಗುತ್ತಿದೆ.

ಈ ಸಮಯದಲ್ಲಾಗಲೆ ಜಿಲ್ಲಾ ಬಿಜೆಪಿಯಲ್ಲಿ ಕತ್ತಿ ಕುಟುಂಬಕ್ಕೆ ಸರಿಸಮಾನವಾಗಿ ಮತ್ತೊಂದು ಉದ್ಯಮ ಹಿನ್ನೆಲೆಯ ಜೊಲ್ಲೆ ಕುಟುಂಬದ ಜನಪ್ರಿಯತೆ ಮುನ್ನೆಲೆಗೆ ಬಂದಿತ್ತು. ಅಲ್ಲದೆ ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಪ್ತ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಪಾಲಿಗೆ ಗೆಲ್ಲುವ ಕುದುರೆ ಎನಿಸಿಕೊಂಡ ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನಿರಾಕರಿಸಲು ಸಾಧ್ಯವಾಗಿರಲಿಲ್ಲ ಎನ್ನುತ್ತಿವೆ ಬೆಳಗಾವಿ ಜಿಲ್ಲಾ ಬಿಜೆಪಿ ಮೂಲಗಳು. (ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ ಜೊಲ್ಲೆ ಅವರ ಪತ್ನಿ)

“ಟಿಕೆಟ್ ಕೈ ತಪ್ಪಿರುವುದು ಸಾಮಾನ್ಯವಾಗಿ ಕತ್ತಿ ಸಹೋದರರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ‘ಯಾರೋ ನಾಯಕರು ಗೆಲ್ಲಲು ನಾವ್ಯಾಕೆ ಪ್ರಚಾರ ಕಾರ್ಯದಲ್ಲಿ ತೊಡಗಬೇಕು’ ಎಂದು ಜಿಲ್ಲೆಯಲ್ಲಿ ಕತ್ತಿ ಬಣದ ಕಾರ್ಯಕರ್ತರು ಬಹಿರಂಗವಾಗಿಯೇ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಇವನ್ನೆಲ್ಲ ಗಮನಿಸಿದರೆ ಒಟ್ಟಾರೆ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲನುಭವಿಸಿದ್ದ ಬಿಜೆಪಿಗೆ ಈ ಬಾರಿಯೂ ಪಕ್ಷದೊಳಗಿನ ಭಿನ್ನಮತ ದೊಡ್ಡ ಪೆಟ್ಟು ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ” ಎನ್ನುತ್ತಾರೆ ಸ್ಥಳೀಯ ಪತ್ರಕರ್ತರೊಬ್ಬರು.

ಸಮಸ್ಯೆಗಳ ಪಟ್ಟಿ & ಹುಕ್ಕೇರಿ ರಿಪೋರ್ಟ್ ಕಾರ್ಡ್

ಚಿಕ್ಕೋಡಿ ಹಾಲಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಹುರಿಯಾಳು ಪ್ರಕಾಶ್ ಹುಕ್ಕೇರಿ.

ಹಾಗೆ ನೋಡಿದರೆ ಚಿಕ್ಕೋಡಿಯಲ್ಲಿ ಗೆಲ್ಲುವುದು ಕಾಂಗ್ರೆಸ್‌ಗೂ ಅಷ್ಟು ಸುಲಭವಾಗಿಲ್ಲ. ಒಂದೆಡೆ ಸಂಸದರಾಗಿ ಪ್ರಕಾಶ್ ಹುಕ್ಕೇರಿ ಅವರ ಕಾರ್ಯವೈಖರಿ ಬಗ್ಗೆ ಕ್ಷೇತ್ರದ ಜನರು ಭ್ರಮ ನಿರಸನಗೊಂಡಿದ್ದರೆ ಮತ್ತೊಂದೆಡೆ ಸ್ವತಃ ಕಾಂಗ್ರೇಸಿಗರೆ ಈ ಬಾರಿ ಪ್ರಕಾಶ್ ಹುಕ್ಕೇರಿಯನ್ನು ಸೋಲಿಸಲು ಪಣ ತೊಟ್ಟಂತೆ ಕಾಣಿಸುತ್ತಿದೆ. ಈ ಪೈಕಿ ಮುಂಚೂಣಿಯಲ್ಲಿ ಕೇಳಿಸುತ್ತಿರುವ ಹೆಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ.

ಬೌಗೋಳಿಕ ಲಕ್ಷಣಗಳಲ್ಲಿ ವೈಶಿಷ್ಠ್ಯತೆಯನ್ನು ಹೊಂದಿರುವಂತೆ ಚಿಕ್ಕೋಡಿಯ ಒಂದೊಂದು ಭಾಗದಲ್ಲಿ ಒಂದೊಂದು ತೆರನಾದ ಸಮಸ್ಯೆಗಳಿವೆ. ರೈತರ, ಕೂಲಿ ಕಾರ್ಮಿಕರ, ನೇಕಾರ, ಕೈಗಾರಿಕೆ, ಸಕ್ಕರೆ ಕಾರ್ಖಾನೆ, ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ, ರಸ್ತೆ-ಸಾರಿಗೆ ಸೇರಿದಂತೆ ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯದ್ದೇ ದೊಡ್ಡ ಸಮಸ್ಯೆ. 7 ನದಿಗಳಿದ್ದರೂ ಅಸಮರ್ಪಕ ನೀರಾವರಿ ವ್ಯವಸ್ಥೆಯಿಂದಾಗಿ ಜಿಲ್ಲೆಯ ರೈತ ವರ್ಗ ನಲುಗಿ ಹೋಗಿದೆ.

ಕೃಷ್ಣ, ಘಟಪ್ರಭ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7 ನದಿಗಳು ಹರಿಯುತ್ತವೆ. ಆದರೆ ಚಿಕ್ಕೋಡಿ ಕ್ಷೇತ್ರದ ಬಹುಪಾಲು ತಾಲೂಕುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಶೇ.60 ರಷ್ಟು ಕೃಷಿ ಭೂಮಿಗಳಿಗೆ ನೀರಾವರಿ ವ್ಯವಸ್ಥೆಯೇ ಇಲ್ಲ.

ಕೃಷಿ ಭೂಮಿಗಳಿಗೆ ನೀರು ಒದಗಿಸಬೇಕು ಎಂಬ ಕಾರಣಕ್ಕಾಗಿ ಬೆಳಗಾವಿ ಕ್ಷೇತ್ರದಲ್ಲಿ ‘ವೀರಭದ್ರೇಶ್ವರ ಏತ ನಿರಾವರಿ ಯೋಜನೆ’ಯನ್ನು ಕೈಗೊಳ್ಳಲಾಗಿದೆ. ರಾಮದುರ್ಗ ತಾಲೂಕಿನ ಹುನಗುಂದ ಭಾಗದ ‘ರಾಮೇಶ್ವರ ಏತ ನೀರಾವರಿ’ ಹಾಗೂ ಘಟಪ್ರಭ, ಮಲಪ್ರಭ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆಯಾದರೂ ಇದರ ಲಾಭ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಾಲೂಕುಗಳಿಗೆ ಇಲ್ಲದಂತಾಗಿದೆ.

ಜಿಲ್ಲೆಯಲ್ಲೇ ರಾಯಭಾಗ ತಾಲೂಕು ಅತ್ಯಂತ ಹಿಂದುಳಿದ ಬಯಲುಸೀಮೆ ಭಾಗ. ಈ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದೆ. ಹೀಗಾಗಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಈ ತಾಲೂಕನ್ನು ಸೇರಿಸಬೇಕು ಎಂಬ ಕೂಗಿದೆ. ಆದರೆ ಈವರೆಗೆ ಇದು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಈ ಪ್ರಮಾಣದ ಅಭಾವ ಇದ್ದರು ಸಂಸದರಾಗಿ ರಾಯಭಾಗ ಹೋರಾಟದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಪಾಲ್ಗೊಂಡಿಲ್ಲ. ಹಾಗೂ ಕೇಂದ್ರದಿಂದ ಜಿಲ್ಲೆಗೆ ಯಾವುದೇ ಸ್ವತಂತ್ರ್ಯ ನೀರಾವರಿ ಯೋಜನೆಯಾಗಲಿ ಅಥವಾ ಅನುದಾನವಾಗಲಿ ತಂದಿಲ್ಲ ಎಂಬುದು ಅವರ ಮೇಲಿನ ಮೊದಲ ಆರೋಪ.

ಇದಲ್ಲದೆ ಬೆಳಗಾವಿಯಲ್ಲಿ ಕಬ್ಬು ಪ್ರಮುಖ ಬೆಳೆ. ಬೆಳಗಾವಿ ಭಾಗದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆದು ಉತ್ಪಾದಿಸಲಾಗುವ ಸಕ್ಕರೆ ಮುಂಬೈಗೆ ಸೇರಿದಂತೆ ರಾಷ್ಟ್ರದ ನಾನಾ ಕಡೆಗಳಲ್ಲಿ ಉತ್ತಮ ಬೇಡಿಕೆ ಇದೆ. ಇದೇ ಕಾರಣಕ್ಕೆ ಇಲ್ಲಿ ಉತ್ಪಾದಿಸಲಾಗುವ ಶೇ.100ರಷ್ಟು ಸಕ್ಕರೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತದೆ. (ಬೆಳಗಾವಿ ಸಕ್ಕರೆಯನ್ನು ಕರ್ನಾಟಕದಲ್ಲಿ ಕೊಳ್ಳುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ) ಹೀಗಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಹುತೇಕ ಉತ್ತಮ ಲಾಭದಲ್ಲೇ ಇವೆ. ಆದರೆ, ರೈತರಿಗೆ ಮಾತ್ರ ತಾವು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿನ ಕಬ್ಬು ಬೆಳೆಗಾರರು ನೂರಾರು ಟನ್ ಕಬ್ಬಿನೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇದಲ್ಲದೆ ರೈತರಿಗೆ ಇಲ್ಲಿ ವ್ಯವಸ್ಥಿತ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲ. ಹೀಗೆ ರೈತರ ಪಾಲಿಗೆ ಸಾಕಷ್ಟು ಸಮಸ್ಯೆಗಳಿವೆ. ಆದರೆ, ರಾಜ್ಯ ಸಕ್ಕರೆ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದ ಹಿರಿಯ ರಾಜಕಾರಣಿ ಪ್ರಕಾಶ್ ಹುಕ್ಕೇರಿ ರೈತರ ಸಮಸ್ಯೆಗಳಿಗೆ ಅದರಲ್ಲೂ ಪ್ರಮುಖವಾಗಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸಕ್ಕರೆ ಸಚಿರಾಗಿದ್ದಾಗಲೂ ಸರಿ ಇದೀಗ ಸಂಸದರಾಗಿದ್ದಾಗಲೂ ಸರಿಯಾಗಿ ಸ್ಪಂದಿಸಿಲ್ಲ ಎಂಬುದು ಜನಸಾಮಾನ್ಯರ ಆರೋಪ.

ಇನ್ನೂ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಕೇಂದ್ರದ ಯೋಜನೆಯ ಅಡಿಯಲ್ಲಿ ಬೃಹತ್ ಕೈಗಾರಿಕೆಗಳು ಬಂದಿಲ್ಲ. ಜವಳಿ ಮತ್ತು ಐಟಿ ಪಾರ್ಕ್ ಅಭಿವೃದ್ಧಿ ಮಾಡಿಲ್ಲ. ಪರಿಣಾಮ ಬೆಳಗಾವಿಯಲ್ಲಿ ನಿರುದ್ಯೋಗದ ಸಮಸ್ಯೆ ತಲೆದೋರಿದೆ. ಇಂಟರ್‌ಸಿಟಿ ರೈಲು ಓಡಾಟ, ರೈಲು ವ್ಯವಸ್ಥೆ ಸುಧಾರಣೆಯಾಗಿಲ್ಲ. ಚಿಕ್ಕೋಡಿ ಘಟಪ್ರಭಾ ಸವದತ್ತಿ ರೈಲು ಯೋಜನೆ ಕನಸಾಗಿಯೇ ಉಳಿದಿದೆ. ಮೂಲಭೂತ ಸೌಲಭ್ಯಗಳು ಸುಧಾರಿಸಿಲ್ಲ. ಹೀಗೆ ಹತ್ತಾರು ಸರಣಿ ಆರೋಪಗಳನ್ನು ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎದುರಿಸುತ್ತಿದ್ದಾರೆ.

ಸಂಸದರಾಗಿ ಆಯ್ಕೆಯಾದ ಮೇಲೆ ಅವರು ಮಾಡಿರುವುದು ಎರಡೇ ಕೆಲಸ. ಒಂದು ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ತಂದದ್ದು ಹಾಗೂ ಮಕ್ಕಳ ಹಾಗೂ ಮಹಿಳಾ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿದ್ದು. ಆದರೆ, ಈ ಎರಡೂ ಯೋಜನೆಗಳ ಕಾಮಗಾರಿಯನ್ನು ಸೂಕ್ತ ಸಮಯದಲ್ಲಿ ಮುಗಿವ ಹಾಗೆ ನಿರ್ವಹಿಸಿಲ್ಲ. ಪರಿಣಾಮ ಈ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು ಜಿಲ್ಲೆಯ ಜನ ಪ್ರಕಾಶ್ ಹುಕ್ಕೇರಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ.

ಪ್ರಕಾಶ್ ಸೋಲಿಗೆ ರಮೇಶ್ ಕಂಕಣ

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ.

ಪ್ರಕಾಶ್ ಹುಕ್ಕೇರಿಯನ್ನು ಸೋಲಿಸುವ ಮೂಲಕ ಬೆಳಗಾವಿ ಭಾಗದಲ್ಲಿ ತಮ್ಮ ಪ್ರಭಾವ ಎಂತಾದ್ದು ಎಂದು ಹೈಕಮಾಂಡ್‌ಗೆ ತೋರಿಸಲು ಕಾಂಗ್ರೆಸ್ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಕಾಂಗ್ರೆಸ್ ವಲಯದಿಂದಲೇ ಕೇಳಿಬರುತ್ತಿವೆ. ಇದಕ್ಕೆ ಕಾರಣಗಳು ಇಲ್ಲದೆ ಏನಿಲ್ಲ.

ಈ ಭಾಗದ ಪ್ರಭಾವಿ ರಾಜಕಾರಣಿಗಳಲ್ಲಿ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಯೂ ಒಬ್ಬರು. ಗೋಕಾಕ, ಅರಬಾವಿ, ಸವದತ್ತಿ, ಅಥಣಿ, ಕಾಗವಾಡ ಕ್ಷೇತ್ರಗಳಲ್ಲಿ ರಮೇಶ್ ತಮ್ಮದೇಯಾದ ಹಿಡಿತ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅಧಿಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಕಾಗವಾಡ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ಶಾಸಕ ರಾಜು ಕಾಗೆ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವಲ್ಲಿ ಇವರು ನಿರ್ಣಾಯಕ ಪಾತ್ರವಹಿಸಿದ್ದರು.

ಇದೇ ಕಾರಣಕ್ಕೆ ಇವರಿಗೆ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನವನ್ನು ನೀಡಲಾಗಿತ್ತು. ಆದರೆ, ಸಚಿವ ಸಂಪುಟ ವಿಸ್ತರಣೆ ವೇಳೆ ಇವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ಮುನಿಸಿಕೊಂಡು ನಾಲ್ವರು ಕಾಂಗ್ರೆಸ್ ಶಾಸಕರ ಜೊತೆಗೆ ಮುಂಬೈಗೆ ತೆರಳುವ ಮೂಲಕ ಮೈತ್ರಿ ಸರಕಾರದಲ್ಲಿ ನಡುಕ ಹುಟ್ಟಿಸಿದ್ದರು. ಒಂದು ಹಂತದಲ್ಲಿ ಪಕ್ಷ ತೊರೆಯಲು ಮುಂದಾಗಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ.

ಇದೀಗ ಕ್ಷೇತ್ರದಲ್ಲಿ ತನಗಿರುವ ಬಲವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರಕಾಶ್ ಹುಕ್ಕೇರಿಯನ್ನು ಸೋಲಿಸಲು ರಮೇಶ್ ಜಾರಕಿಹೊಳಿ ತಯಾರಿ ನಡೆಸಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿಪ ಪರ ಪ್ರಚಾರ ನಡೆಸುವಂತೆ ರಮೇಶ್ ಸ್ವತಃ ತನ್ನ ಕಾರ್ಯಕರ್ತರಿಗೆ ಹಾಗೂ ಈ ಭಾಗದ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಸೂಚಿಸಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಪಕ್ಷದ ನಂಬಿಕಾರ್ಹ ಮೂಲಗಳು.

ಹುಕ್ಕೇರಿ ವರ್ಸಸ್‌ ಜೊಲ್ಲೆ

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ.

ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಂತೆ ಬೆಳಗಾವಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ಲಿಂಗಾಯತ ಮತಗಳೇ ನಿರ್ಣಾಯಕ. ಜಿಲ್ಲೆಯಲ್ಲಿ ಒಟ್ಟು13, 94,163 ಮತಗಳಿದ್ದು, ಈ ಪೈಕಿ 3.8 ಲಕ್ಷ ಮತದಾರರನ್ನು ಹೊಂದಿರುವ ಲಿಂಗಾಯತರೆ ಇಲ್ಲಿ ನಿರ್ಣಾಯಕರು. ನಂತರದ ಸ್ಥಾನಗಳಲ್ಲಿ 2.45 ಲಕ್ಷ ಮತದಾರರನ್ನು ಹೊಂದಿರುವ ದಲಿತ-ಹಿಂದುಳಿದ ಹಾಗೂ 1.77 ಲಕ್ಷ ಮತದಾರರನ್ನು ಹೊಂದಿರುವ ಕುರುಬರಿದ್ದಾರೆ. ಅಲ್ಪ ಸಂಖ್ಯಾತರ ಸಂಖ್ಯೆಯೂ ಜಿಲ್ಲೆಯಲ್ಲಿ 1.95 ಲಕ್ಷದಷ್ಟಿದೆ.

ಅಧಿಕ ಸಂಖ್ಯೆಯಲ್ಲಿ ಲಿಂಗಾಯತ ಮತಗಳು ಚಿಕ್ಕೋಡಿಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು? ಎಂದು ತೀರ್ಮಾನಿಸಲಿದೆ. ಆದರೆ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಇಬ್ಬರೂ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಬಾರಿ ಲಿಂಗಾಯತ ಮತಗಳು ಎರಡೂ ಪಕ್ಷದ ಪರವಾಗಿ ಒಡೆದು ಹೋಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

“ಲಿಂಗಾಯತ ಮತಗಳು ಒಡೆದು ಹೋದರೆ ದಲಿತ ಹಾಗೂ ಅಲ್ಪ ಸಂಖ್ಯಾತ ಮತಗಳು ಈ ಬಾರಿ ಜಿಲ್ಲೆಯಲ್ಲಿ ಗೆಲುವಿನ ಅಭ್ಯರ್ಥಿ ಯಾರು? ಎಂದು ತೀರ್ಮಾನಿಸಲಿವೆ. ಆದರೆ, ಚಿಕ್ಕೋಡಿ ಮಹಾರಾಷ್ಟ್ರ ಗಡಿ ಭಾಗದಲ್ಲಿದ್ದು ಇಲ್ಲಿ ಹಿಂದುತ್ವ ಬಿಜೆಪಿ ಹಾಗೂ ಮೋದಿ ಪರ ಅಲೆ ಈ ಬಾರಿ ಹೆಚ್ಚು ಸದ್ದು ಮಾಡುತ್ತಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಬಿಜೆಪಿ ನಡುವೆ ನೇರಾ ನೇರಾ ಪೈಪೋಟಿ ಎಂದು ವ್ಯಾಖ್ಯಾನಿಸಿದರು ಜನರ ಒಲವು ಬಿಜೆಪಿ ಪರ ತುಸು ಹೆಚ್ಚೆ ಕಾಣಿಸಿಕೊಳ್ಳುತ್ತಿದೆ. ಆದರೆ ಎರಡೂ ಪಕ್ಷಗಳ ಒಳಗೆ ಬಣ ರಾಜಕಾರಣವೂ ನಡೆಯುತ್ತಿದ್ದು ಇಂತವರೆ ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ” ಎನ್ನುತ್ತಾರೆ ಈ ಭಾಗದ ಹಿರಿಯ ಪತ್ರಕರ್ತ ಲೋಹಿತ್.

ಒಟ್ಟಾರೆ ಚಿಕ್ಕೋಡಿ ಲೋಕಸಭಾ ಚುನಾವಣೆ ಈ ಬಾರಿ ಎರಡು ಪಕ್ಷ ಹಾಗೂ ಎರಡು ಕುಟುಂಬಗಳ ನಡುವಿನ ಪ್ರತಿಷ್ಠಿತ ಕಣವಾಗಿ ಬದಲಾಗಿದೆ. ಅಭಿವೃದ್ಧಿಗಿಂತ ಇಲ್ಲಿ ಯಾವಾಗಲೂ ಪ್ರತಿಷ್ಠೆಯೆ ಮೇಲುಗೈ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 4 ಸ್ಥಾನ ಗೆದ್ದು ಸಮಬಲ ಸಾಧಿಸಿದೆ. ಇನ್ನೂ ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲದಿರುವುದು ಕಾಂಗ್ರೆಸ್ ಮೇಲೆ ಅಂತಹ ಪರಿಣಾಮ ಬೀರದು. ಹೀಗಾಗಿ ಈ ಬಾರಿಯ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು ಕೊನೆಯ ಕ್ಷಣದವರೆಗೆ ಗೆಲ್ಲುವ ಅಭ್ಯರ್ಥಿ ಯಾರು ಎಂದು ಊಹಿಸುವುದು ಕಷ್ಟ. ಆದರೆ ಎರಡೂ ಪಕ್ಷಗಳ ನಡುವೆ ಪ್ರಬಲ ಪೈಪೋಟಿಗಂತು ಈ ಕ್ಷೇತ್ರ ಸಾಕ್ಷಿಯಾಗಲಿದೆ.