Home ಕರ್ನಾಟಕ ‘ಬಿಜೆಪಿ ಕೋಟೆ’ಯಲ್ಲಿ ಕಾಂಗ್ರೆಸ್‌ನ ‘ರೆಬೆಲ್ ನಾಯಕಿ’: ಕಮಲ ಅರಳುವ ಚಾನ್ಸೇ ಇಲ್ಲ…

‘ಬಿಜೆಪಿ ಕೋಟೆ’ಯಲ್ಲಿ ಕಾಂಗ್ರೆಸ್‌ನ ‘ರೆಬೆಲ್ ನಾಯಕಿ’: ಕಮಲ ಅರಳುವ ಚಾನ್ಸೇ ಇಲ್ಲ…

SHARE

ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನಾ ಕಾರಣಗಳಿಗಾಗಿ ಸದ್ದು ಮಾಡಿದ್ದ ಜಿಲ್ಲೆ ಬಾಗಲಕೋಟೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ನಡುವಿನ ರಾಜಕೀಯ ಕಾದಾಟಕ್ಕೆ ಇಲ್ಲಿನ ಬಾದಾಮಿ ವಿಧಾನಸಭಾ ಕ್ಷೇತ್ರ ವೇದಿಕೆ ಕಲ್ಪಿಸಿತ್ತು. ಅಖಾಡದಲ್ಲಿನ ಇಬ್ಬರು ತದ್ವಿರುದ್ಧ ವ್ಯಕ್ತಿತ್ವದ ನಾಯಕರ ಹಣಾಹಣಿ ಬಾದಾಮಿ, ಬಾಗಲಕೋಟೆ ಆಚೆಗೂ ಗಮನ ಸೆಳೆದಿತ್ತು.

ಸುಮಾರು 8 ತಿಂಗಳ ನಂತರ ಲೋಕಸಭಾ ಚುನಾವಣೆ ಎದುರಾಗಿದೆ. ಬಾಗಲಕೋಟೆ ಜಿಲ್ಲೆ ಮತ್ತೊಮ್ಮೆ ರಾಜ್ಯ ಗಮನ ಹರಿಸಬೇಕಾದಂತಹ ರಾಜಕೀಯ ಬೆಳವಣಿಗೆಗಳಿಗೆ ವೇದಿಕೆ ಕಲ್ಪಿಸಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಜನ ಆರಿಸುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿದೆ. ವೀಣಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವ 20 ಕ್ಷೇತ್ರಗಳ ಪೈಕಿ ಈಗ ಘೋಷಣೆಯಾಗಿರುವ 19 ಅಭ್ಯರ್ಥಿಗಳಲ್ಲಿ ಇರುವ ಏಕೈಕ ಮಹಿಳಾ ಅಭ್ಯರ್ಥಿ ಕೂಡ.

ಬಿಜೆಪಿಯಿಂದ ಹಾಲಿ ಸಂಸದರೂ ಆಗಿರುವ ಪಿ. ಸಿ. ಗದ್ದೀಗೌಡರ್ ಕಣದಲ್ಲಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿರುವ ಕ್ಷೇತ್ರಗಳಲ್ಲೊಂದು.

ಇದು ಬಿಜೆಪಿ ಕೋಟೆ:

ಬಾಗಲಕೋಟೆ ಲೋಕಸಭಾ ಕ್ಷೇತ್ರ. 

ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬದಾಮಿ, ಬಾಗಲಕೋಟೆ, ಹುನಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ ಬಾಗಲಕೋಟೆ ಲೋಕಸಭಾ ಕ್ಷೇತ್ರ. ಇದು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಾಲಿನ ಭದ್ರಕೋಟೆ ಎನಿಸಿಕೊಂಡಿರುವ ಜಿಲ್ಲೆಗಳಲ್ಲೊಂದು.

ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಡೆ ಬಿಜೆಪಿ ಶಾಸಕರಿದ್ದರೆ, ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಮಖಂಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆನಂದ್ ನ್ಯಾಮಗೌಡ ಇಬ್ಬರೆ ಕಾಂಗ್ರೆಸ್ ಪಾಲಿನ ಶಾಸಕರು. ಇದಲ್ಲದೆ 2004ರಿಂದ ಈವರೆಗೆ ಸತತ 3 ಬಾರಿ ಗೆಲ್ಲುವ ಮೂಲಕ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಬಿಜೆಪಿ ಪಕ್ಷದ ಹಿರಿಯ ನಾಯಕ ಸಂಸದ ಗದ್ದೀಗೌಡರ್ ಪರ್ವತಗೌಡರ್ ಚಂದನಗೌಡ ಅಥವಾ ಪಿ. ಸಿ. ಗದ್ದೀಗೌಡರ್.

ಬಹುತೇಕ ಕ್ಷೇತ್ರಗಳ ಇತಿಹಾಸ ಹೇಳುವಂತೆ, 1999ರ ಚುನಾವಣೆಯವರೆಗೆ ಈ ಭಾಗದಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಹೊಂದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ಎಸ್. ಪಾಟೀಲ್ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾದದ್ದೆ ಇಲ್ಲಿ ಕಾಂಗ್ರೆಸ್‌ನ ಕೊನೆಯ ಗೆಲುವು. ಆ ವರೆಗೆ ಎಲ್ಲಾ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಮುಖ ಎದುರಾಳಿ ಜನತಾ ದಳ.

ಆದರೆ, 2004ರ ಲೋಕಸಭಾ ಚುನಾವಣೆ ಎಲ್ಲವನ್ನು ಬದಲು ಮಾಡಿತ್ತು.

ಬಿಜೆಪಿಯಿಂದ ಸ್ಪರ್ಧಿಸಿದ್ದ ಗದ್ದೀಗೌಡರ್ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ನಂತರ ದಿನಗಳಲ್ಲಿ ಕಾಂಗ್ರೆಸ್ ಇಲ್ಲಿನ ಒಂದೊಂದೆ ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತಾ ಬಂದಿತ್ತು. ಬಿಜೆಪಿ ಪಕ್ಷದ ಸಂಘಟನೆ ಬೇರು ಮಟ್ಟದಿಂದ ಬಲವಾಯಿತು. ಆದರೆ, ಎಲ್ಲಾ ಕಡೆಗಳಂತೆ ಇಲ್ಲಿನ ಸತತ ಗೆಲುವು ಬಿಜೆಪಿ ಸಂಸದರನ್ನು ಜನರಿಂದ ದೂರ ಮಾಡಿತು. ಇಂತಹ ಸಮಯದಲ್ಲಿ ಬಂದಿರುವ ಚುನಾವಣೆಯನ್ನು ಬಿಜೆಪಿ ಪ್ರಯಾಸದಿಂದಲೇ ಎದುರಬೇಕಿದೆ.

ಬಿಜೆಪಿ ವಿರೋಧಿ ಅಲೆ

ಬಾಗಲಕೋಟೆ ಹಾಲಿ ಸಂಸದ ಹಾಗೂ ಬಿಜೆಪಿ ಹುರಿಯಾಳು ಪಿ.ಸಿ. ಗದ್ದೀಗೌಡರ್.

ಜಿಲ್ಲೆಯ ಮೂಲಭೂತ ಸೌಕರ್ಯ ವಿಚಾರಗಳ ಕಡೆಗೆ ಒಮ್ಮೆ ಗಮನ ಹರಿಸಿದರೆ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಿಗಿಂತ ಬಾಗಲಕೋಟೆ ತೀರಾ ಹಿಂದುಳಿದ ಜಿಲ್ಲೆ.

ಜಿಲ್ಲೆಯಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ. ಈಗಲೂ ಜಿಲ್ಲೆಯ ಶೇ.70 ರಷ್ಟು ಜನ ಶೌಚಕ್ಕಾಗಿ ಬಹಿರ್ದೆಸೆಗೆ ತೆರಳಬೇಕಾದ ಪರಿಸ್ಥಿತಿ ಇದೆ. ಬಹಿರ್ದೆಸೆ ಇಲ್ಲಿನ ಹೆಣ್ಣುಮಕ್ಕಳ ಪಾಲಿನ ಮೊದಲ ಶತೃ. ಹೀಗಾಗಿ ಇಡೀ ಜಿಲ್ಲೆಯ ಎಲ್ಲಾ ಹಳ್ಳಿಯಲ್ಲೂ ಮನೆ ಮನೆಗೆ ಶೌಚಾಲಯ ನಿರ್ಮಿಸಿಕೊಡಲು ಜಿಲ್ಲಾಡಳಿತ ಸಾಕಷ್ಟು ಶ್ರಮವಹಿಸಿತ್ತು. ಆದರೆ ಸಂಸದ ಗದ್ದೀಗೌಡರ್ ಮಾತ್ರ ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಬಹಿರ್ದೆಸೆ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಸ್ವಚ್ಚ ಭಾರತ ಯೋಜನೆಯ ಅಡಿಯಲ್ಲಿ ಕೇಂದ್ರ ಸರಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಎಲ್ಲಾ ಜಿಲ್ಲೆಗಳಿಗೂ ಕೋಟ್ಯಾಂತರ ರೂ ಅನುದಾನ ನೀಡುತ್ತಿದೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಲ್ಲ. ಬಡವರ ಮನೆಗೆ ಶೌಚಾಲಯ ನಿರ್ಮಿಸಿಕೊಡಲು ಕೇಂದ್ರದ ಯೋಜನೆಯ ಅಡಿಯಿಂದ ಹಣಕಾಸು ಒದಗಿಸಿಲ್ಲ. ಅಲ್ಲದೆ ಕೇಂದ್ರ ಸರಕಾರದ ಯಾವುದೇ ಯೋಜನೆಯನ್ನು ಜಿಲ್ಲೆಗೆ ತಂದಿಲ್ಲ ಎಂಬುದು ಗದ್ದೀಗೌಡರ್ ಮೇಲಿನ ಪ್ರಮುಖ ಆರೋಪಗಳ ಪಟ್ಟಿ.

ಬೆಳಗಾವಿ ಬಾಗಲಕೋಟೆಯ ಹತ್ತಿರದ ವಾಣಿಜ್ಯ ನಗರಿ. ಹೀಗಾಗಿ ಇಲ್ಲಿನ ಜನ ಸಾಮಾನ್ಯವಾಗಿ ಬೆಳಗಾವಿ ಕಡೆಗೆ ಪ್ರಯಾಣಿಸುವುದು ಹೆಚ್ಚು. ಇದೇ ಕಾರಣಕ್ಕಾಗಿ ಬಾಗಲಕೋಟೆಯಿಂದ ಬೆಳಗಾವಿಯ ಕುಡಚಿಗೆ ರೈಲು ಮಾರ್ಗ ನಿರ್ಮಿಸಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸವಿದೆ. ಗದ್ದೀಗೌಡರ್ ಸಂಸದರಾದ ನಂತರ 2006ರಲ್ಲಿ ಅಂದಿನ ಕೇಂದ್ರದ ಯುಪಿಎ ಸರಕಾರ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆಗೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ ಅದೇ ವರ್ಷ ಈ ಯೋಜನೆಯ ಶಂಕುಸ್ಥಾಪನೆಯೂ ನೆರವೇರಿತ್ತು.

ಬಾಗಲಕೋಟೆ ಹಾಗೂ ಬೆಳಗಾವಿಯ ಕುಡಚಿ ನಡುವಿನ ದೂರ ಕೇವಲ 120 ಕಿ.ಮೀ. ಆದರೆ, ಈ ಯೋಜನೆ ಆರಂಭವಾಗಿ 13 ವರ್ಷಗಳೇ ಕಳೆದರೂ ಇನ್ನೂ ಕೇವಲ ಶೇ.30 ರಷ್ಟು ಕೆಲಸಗಳು ಮಾತ್ರ ನಡೆದಿದ್ದು, ಶೇ.70 ರಷ್ಟು ಕೆಲಸಗಳು ಬಾಕಿ ಉಳಿದಿವೆ. ಜಿಲ್ಲೆಯ ಮಹತ್ವಾಕಾಂಕ್ಷೆಯ ಈ ರೈಲ್ವೆ ಯೋಜನೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಲು ಸಂಸದ ಗದ್ದೀಗೌಡರ್ ಅವರ ಬೇಜವಾಬ್ದಾರಿತನವೇ ಕಾರಣ ಎಂಬುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣ.

ಇದಲ್ಲದೆ ಜಿಲ್ಲೆಯಲ್ಲಿ ಯಾವ ರಸ್ತೆಗಳು ಉತ್ತಮ ಸ್ಥಿತಿಯಲ್ಲಿಲ್ಲ. ಜನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾಗ್ಯೂ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಾಧ್ಯವಾಗಿಲ್ಲ. ಇನ್ನೂ ಜಿಲ್ಲೆಯ ಕುರಿತಾಗಿ ಗದ್ದೀಗೌಡರ್ ಸಂಸತ್‌ನಲ್ಲಿ ಒಂದೇ ಒಂದು ಗಂಭೀರ ಪ್ರಶ್ನೆಯನ್ನು ಎತ್ತಿಲ್ಲ. ಚರ್ಚೆಗಳಲ್ಲಿ ಪಾಲ್ಗೊಂಡಿಲ್ಲ ಎಂಬುದು ಅವರ ಮೇಲಿನ ಸರಣಿ ಆರೋಪಗಳು.

ಈ ನಡುವೆ, “ಜಿಲ್ಲಾ ಬಿಜೆಪಿಯ ಒಂದು ಬಣ ಸ್ವತಃ ಗದ್ದೀಗೌಡರ್ ಸೋಲನ್ನು ಬಯಸಿದ್ದರೆ, ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹವಾ ಹಾಲಿ ಸಂಸದರ ಪಾಲಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ,” ಎನ್ನತ್ತಾರೆ ಸ್ಥಳೀಯ ಪತ್ರಕರ್ತರೊಬ್ಬರು.

ಸಿದ್ದರಾಮಯ್ಯ ಹವಾ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕಳೆದ 2018ರ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನ ಪ್ರಭಾವಿ ನಾಯಕ ಶ್ರೀರಾಮು ಸ್ಪರ್ಧಿಸಿದ್ದಾಗಲೂ ಜಿಲ್ಲೆಯಾದ್ಯಂತ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದಾಗಲೂ ಸಿದ್ದರಾಮಯ್ಯನವರನ್ನು ಸೋಲಿಸುವುದು ಸಾಧ್ಯವಾಗಿರಲಿಲ್ಲ. ಪರಿಣಾಮ ಉತ್ತರದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅಖಂಡ ಗೆಲುವು ಸಾಧಿಸಿದ್ದರು.

“ಸಿದ್ದರಾಮಯ್ಯ ಗೆಲುವು ಸಾಧಿಸಿದ ನಂತರ ಬಾದಾಮಿ ಕ್ಷೇತ್ರಕ್ಕೆ ಉತ್ತಮ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಜನರಿಗೆ ಗುಣಮಟ್ಟದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇದಲ್ಲದೆ ಪ್ರತಿ ಎರಡು ತಿಂಗಳಿಗೊಮ್ಮೆ ಜನ ಸಂಪರ್ಕ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಂಕಷ್ಟಗಳಿಗೆ ಕಿವಿಯಾಗುತ್ತಿದ್ದಾರೆ. ಅಲ್ಲದೆ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಸಿದ್ದರಾಮಯ್ಯನವರ ಬಗ್ಗೆ ಜನರ ನಡುವೆ ಒಳ್ಳೆಯ ಅಭಿಪ್ರಾಯವಿದ್ದು, ಪ್ರಸ್ತುತ ಸಿದ್ದರಾಮಯ್ಯನವರ ಹವಾ ತುಸು ಹೆಚ್ಚೆ ಇದೆ,” ಎನ್ನುತ್ತಾರೆ ಈ ಭಾಗದ ಹಿರಿಯ ಪತ್ರಕರ್ತ ಪರಶುರಾಮ್ ಪೇಟ್ಕರ್.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೂ ತಕ್ಕ ಮಟ್ಟಿಗೆ ನೆಲೆ ಇದೆ. ಬಲಿಷ್ಠ ನಾಯಕರು ಹಾಗೂ ಸಂಘಟನೆ ಇದೆ. ಮೈತ್ರಿ ಸೂತ್ರದ ಆಧಾರದ ಮೇಲೆ ಇಲ್ಲಿನ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಸೇರಿ ಪ್ರಚಾರ ನಡೆಸಿದರೆ ಮೈತ್ರಿ ಅಭ್ಯರ್ಥಿಗೆ ಸಹಜವಾಗಿಯೇ ಸಹಾಯವಾಗಲಿದೆ.

ರೆಬಲ್ ಲೀಡರ್ ವೀಣಾ ಕಾಶಪ್ಪನವರ್

ಬಾಗಲಕೋಟೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ವೀಣಾ ವಿಜಯಾನಂದ ಕಾಶಪ್ಪನವರ್.

ಪ್ರಸ್ತುತ ಕಾಂಗ್ರೆಸ್ ಪಕ್ಷದ ಬಾಗಲಕೋಟೆಯ ಲೋಕಸಭಾ ಅಭ್ಯರ್ಥಿ ವೀಣಾ ವಿಜಯಾನಂದ ಕಾಶಪ್ಪನವರ್ ಅವರನ್ನು ರೆಬಲ್ ಲೀಡರ್ ಎಂದೇ ಕರೆಯಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿರುವ ವೀಣಾ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ವೀಣಾ ಕಾಶಪ್ಪನವರ್ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನೂರಾರು ಮಹಿಳೆಯರನ್ನು ಕಟ್ಟಿಕೊಂಡು ಬಯಲು ಶೌಚಮುಕ್ತ ಜಾಥ ಹಾಗೂ ಗ್ರಾಮ ವಾಸ್ತವ್ಯದಂತಹ ಮಹತ್ವದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಅಲ್ಲದೆ ಸರಕಾರಿ ಖರ್ಚಿನಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ಬಡ ಜನರಿಗೆ ನಿರ್ಮಿಸಿಕೊಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದವರು ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್.

ಇದಲ್ಲದೆ ಮಹಿಳೆಯರ ಅಪೌಷ್ಠಿಕತೆ ನೀಗಿಸುವ ಹಾಗೂ ಮಹಿಳೆಯರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಸಲುವಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವ ಕುರಿತ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅದರಲ್ಲಿ ಯಶಸ್ವಿ ಕಂಡಿದ್ದಾರೆ. ಇವರ ಹಲವು ಸಮಾಜಮುಖಿ ಕಾರ್ಯಗಳು ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೂ ಪಾತ್ರವಾಗಿತ್ತು.

ಅಲ್ಲದೆ ಜಿಲ್ಲೆಯಲ್ಲಿ ಇವರ ಕುರಿತು ಮತದಾರರಿಗೆ ವ್ಯಯಕ್ತಿಕವಾಗಿ ಒಳ್ಳೆಯ ಅಭಿಪ್ರಾಯವಿದೆ. ಇವರ ಜನಪ್ರಿಯತೆಯನ್ನು ಮತವಾಗಿಸಿಕೊಳ್ಳುವ ನಿಟ್ಟಿನಲ್ಲೇ ಕಾಂಗ್ರೆಸ್ ಪಕ್ಷ ಈ ಬಾರಿ ಬಾಗಲಕೋಟೆ ಲೋಕಸಭಾ ಟಿಕೆಟ್‌ ಅನ್ನು ವೀಣಾ ಅವರಿಗೆ ನೀಡಿದೆ ಎಂದೂ ಹೇಳಲಾಗುತ್ತಿದೆ.

ಪೂರಕವಾಗಿದೆ ಜಾತಿ ಲೆಕ್ಕಾಚಾರ:

ಉತ್ತರ ಕರ್ನಾಟಕ ಭಾಗದ ಇತರೆ ಕ್ಷೇತ್ರಗಳಂತೆ ಬಾಗಲಕೋಟೆಯಲ್ಲೂ ಗೆಲುವು ಸಾಧಿಸಬೇಕು ಎಂದರೆ ಅಭಿವೃದ್ಧಿ ಕೆಲಸಗಳಿಂಗಿಂತ ಜಾತಿ ಲೆಕ್ಕಾಚಾರಗಳೇ ನಿರ್ಣಾಯಕ. ಈ ವಿಚಾರದಲ್ಲೂ ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿ ಅಭ್ಯರ್ಥಿ ಗದ್ದೀಗೌಡರ್ ಗಾಣಿಗ ಸಮಾಜಕ್ಕೆ ಸೇರಿದವರಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ವೀಣಾ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಾಗಲಕೋಟೆಯಲ್ಲಿ ಲಿಂಗಾಯತ ಹಾಗೂ ಗಾಣಿಗ ಎರಡೂ ಸಮಾಜಗಳು ತಲಾ 1.5 ಲಕ್ಷ ಮತಗಳನ್ನು ಹೊಂದಿದೆ. ಆದರೆ, ಜಿಲ್ಲೆಯಲ್ಲಿ ಪ್ರಬಲರಾಗಿರುವ ಕುರುಬರು 2.5 ಲಕ್ಷ ಮತಗಳನ್ನು ಹೊಂದಿದ್ದು ನಿರ್ಣಾಯಕರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೆಸೆಯಿಂದ ಈ ಸಮಾಜದ ಮತಗಳು ಕಾಂಗ್ರೆಸ್ ಪಾಲಾದರೆ ಬಿಜೆಪಿಗೆ ಸಂಕಷ್ಟ ಎದುರಾಗುವುದು ಖಚಿತ.

ಇನ್ನೂ ಜಿಲ್ಲೆಯಲ್ಲಿ ಹಿಂದುಳಿದ ದಲಿತ ಮತಗಳು 4 ಲಕ್ಷದಷ್ಟಿದ್ದರೆ, ಮುಸ್ಲಿಂ ಸಮುದಾಯದವರ ಮತ ಸುಮಾರು 2 ಲಕ್ಷದಷ್ಟಿದೆ. 1.5 ಲಕ್ಷ ನೇಕಾರರು, 1.2 ಲಕ್ಷ ರೆಡ್ಡಿ ಮತಗಳಿವೆ. ಇದಲ್ಲದೆ 3.2 ಲಕ್ಷ ಇತರೆ ಮತದಾರರಿದ್ದಾರೆ. ಈ ಪೈಕಿ ಮುಸ್ಲಿಂ ಹಾಗೂ ದಲಿತ ಮತಗಳು ಕಾಂಗ್ರೆಸ್‌ನ ಪಾರಂಪರಿಕ ಮತಗಳಾಗಿದ್ದು ಈ ಪೈಕಿ ಶೇ. 60 ರಷ್ಟು ಮತಗಳು ಕಾಂಗ್ರೆಸ್‌ ಪರವಾಗಿ ಚಲಾವಣೆಯಾದರೂ ಮೊದಲ ಸ್ಪರ್ಧೆಯಲ್ಲೇ ವೀಣಾ ಕಾಶಪ್ಪನವರ್ ಗೆಲುವಿನ ನಗೆ ಬೀರಲಿದ್ದಾರೆ ಎನ್ನುತ್ತಿವೆ ಬಾಗಲಕೋಟೆ ಭಾಗದ ರಾಜಕೀಯ ವಿಶ್ಲೇಷಣೆಗಳು.

ಇಷ್ಟಿದ್ದೂ ಬಿಜೆಪಿ ಗೆದ್ದರೆ ಅದು ನಿಜವಾಗಿಯೂ ಸ್ಥಳೀಯ ಅಭ್ಯರ್ಥಿಗಿಂತ ಪಕ್ಷದ ರಾಷ್ಟ್ರೀಯ ಪ್ರಚಾರ ಮತ್ತು ಮೋದಿ ಬಿತ್ತಿದ ಭರವಸೆಗಳಷ್ಟೆ ಕಾರಣಗಳಾಗುತ್ತವೆ ಅಷ್ಟೆ.