Home ಕರ್ನಾಟಕ ಒಂದು ಹಸು ಬಲಿ, ಮತ್ತೊಂದು ಹರಕೆಯ ಕುರಿ; ‘ಬ್ರಾಹ್ಮಣರ ಕ್ಷೇತ್ರ’ದಲ್ಲಿ ರೆಡ್ಡಿ ನಿರ್ಣಾಯಕ

ಒಂದು ಹಸು ಬಲಿ, ಮತ್ತೊಂದು ಹರಕೆಯ ಕುರಿ; ‘ಬ್ರಾಹ್ಮಣರ ಕ್ಷೇತ್ರ’ದಲ್ಲಿ ರೆಡ್ಡಿ ನಿರ್ಣಾಯಕ

SHARE

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸತತ 6 ಬಾರಿ ಗೆದ್ದು ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರು ಮಾಜಿ ಸಚಿವ ದಿವಂಗತ ಅನಂತಕುಮಾರ್. ಅನಂತಕುಮಾರ್ ಮರಣದ ನಂತರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದೆ ಎಲ್ಲರೂ ಭಾವಿಸಿದ್ದರು.

ಮಂಡ್ಯದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಅಂಬರೀಷ್ ನಿಧನದಿಂದಾಗಿ ಆವರ ಪತ್ನಿ ಸುಮಲತಾ ಪರ ಮಂಡ್ಯ ಟಿಕೆಟ್‌ಗಾಗಿ ಬ್ಯಾಟ್ ಮಾಡಿದವರು ರಾಜ್ಯ ಬಿಜೆಪಿ ನಾಯಕರು. ಇನ್ನೂ ಸ್ವಪಕ್ಷೀಯರೇ ಆದ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲಾರರೆ ಎಂದೇ ರಾಜಕೀಯ ವಠಾರಗಳಲ್ಲಿ ಮಾತುಗಳು ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗಿ ಕಳೆದ ಒಂದು ತಿಂಗಳಿಂದ ಕ್ಷೇತ್ರದ ಮನೆಮನೆಗಳಿಗೆ ತೆರಳಿ ಸ್ವತಃ ತೇಜಸ್ವಿನಿ ಪ್ರಚಾರ ಕಾರ್ಯದಲ್ಲೂ ತೊಡಗಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸೇನೆ ಜತೆಗೆ ಹೊಂದಿರುವ ಸಂಬಂಧವನ್ನು ಹಂಚಿಕೊಂಡು ಜನರನ್ನು ತಲುಪುವ ಪ್ರಯತ್ನ ಆರಂಭಿಸಿದ್ದರು.

ಆದರೆ, ಬಿಜೆಪಿ ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಾರ್ಚ್25ರ ಬೆಳಗಿನ ಜಾವ ಬಿಜೆಪಿ ರಾಷ್ಟ್ರೀಯ ನಾಯಕರ ಕೊನೆಯ ಹಂತದ ಚರ್ಚೆ ಮಹತ್ತರ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈ ತಪ್ಪಿತ್ತು. ಹಾಗೂ ಸಂಘಪರಿವಾರದ ಹಿನ್ನೆಲೆ, ಉಗ್ರ ಹಿಂದುತ್ವ ಭಾಷಣಕಾರ ಎನ್ನಿಸಿಕೊಂಡಿದ್ದ, ವಕೀಲ ತೇಜಸ್ವಿ ಸೂರ್ಯ ಎಂಬ 28ರ ಯುವಕನಿಗೆ ಟಿಕೆಟ್ ನೀಡಲಾಯಿತು.

ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಿ ಮನೆಮಾತಾದವರು ತೇಜಸ್ವಿನಿ. ಕ್ಷೇತ್ರದಲ್ಲಿ ಅನಂತಕುಮಾರ್ ಜೊತೆಜೊತೆಗೆ ಪಕ್ಷದ ಕೆಲಸಗಳಲ್ಲೂ ತೊಡಗಿಸಿಕೊಂಡ ತೇಜಸ್ವಿನಿ ವಿದ್ಯಾರ್ಥಿ ಜೀವನದಲ್ಲೇ ಧಾರವಾಡದಲ್ಲಿ ಎಬಿವಿಪಿ ಕಾರ್ಯಕರ್ತರಾಗಿದ್ದವರು. ಇಂತಹ ಹಿನ್ನೆಲೆಯ ಮಹಿಳೆಯೊಬ್ಬರನ್ನು ಕಡೆಗಣಿಸಿ ಯಾಕಾಗಿ ತೇಜಸ್ವಿ ಸೂರ್ಯ ಎಂಬ ಯುವಕನಿಗೆ ಟಿಕೆಟ್ ನೀಡಲಾಯಿತು? ಇದು ಇವತ್ತಿಗೂ ಬೆಂಗಳೂರು ಕ್ಷೇತ್ರದಲ್ಲಿ ಬಿಜೆಪಿಯವರನ್ನೂ ಒಳಗೊಂಡು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಯಾರೀ ತೇಜಸ್ವಿ ಸೂರ್ಯ?

ಬೆಂಗಳೂರು ದಕ್ಷಿಣ ಬಿಜೆಪಿ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ.

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾಮಾನ್ಯ ಮತದಾರನಿರಲಿ, ಅಸಲಿಗೆ ಇಲ್ಲಿನ ಸ್ಥಳೀಯ ಬಿಜೆಪಿ ಪಕ್ಷದ ನಾಯಕರು ಕಾರ್ಯಕರ್ತರಿಗೂ ಸಹ ನಿನ್ನೆ ಮೊನ್ನೆವರೆಗೂ ಹೆಚ್ಚು ಪರಿಚಯವಿಲ್ಲದ ಹೆಸರು ತೇಜಸ್ವಿ ಸೂರ್ಯ. ಮೂಲವನ್ನು ಹುಡುಕುತ್ತಾ ಹೋದರೆ ಹಲವು ಅಚ್ಚರಿಗಳು ಎದುರಾಗುತ್ತವೆ.

ಬಿಜೆಪಿಯಿಂದ ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಹೆಸರು ಘೋಷಣೆಯಾಗುತ್ತಿದ್ದಂತೆ ಮರುದಿನ ಆತ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಕಟುವಾಗಿ ಮಾತನಾಡಿದ್ದ ಭಾಷಣವೊಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಲೇವಡಿ ಮಾಡುತ್ತಿದ್ದ ತೇಜಸ್ವಿ ಸೂರ್ಯ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಅವರ ಖಾಸಾ ಅಣ್ಣನ ಮಗ.

1991ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ತೇಜಸ್ವಿ ಸೂರ್ಯ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರು ಕಾನೂನು ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿ ಪಡೆಯುತ್ತಾರೆ. ಪ್ರಸ್ತುತ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿರುವ ಸೂರ್ಯ, ಬಿಜೆಪಿ ಪಕ್ಷದ ಬಹುತೇಕ ಪ್ರಕರಣಗಳ ಪರವಾಗಿ ಹಾಜರಾಗುತ್ತಿದ್ದಾರೆ. ಬಿಜೆಪಿ ಯುವ ಮೋರ್ಚದ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

ಸೂತ್ರದ ಹಿಂದೆ ಬಿ. ಎಲ್. ಸಂತೋಷ್?

ಬಿಜೆಪಿ ಸಂಘಟಕ ಬಿ.ಎಲ್. ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ.

ಬೆಂಗಳೂರಿನ ದಕ್ಷಿಣಕ್ಕೆ ಕಳೆದ ವಾರದವರೆಗೆ ತೇಜಸ್ವಿನಿ ಅನಂತಕುಮಾರ್ ಹೆಸರು ಹೆಚ್ಚು ಕಡಿಮೆ ಅಂತಿಮವಾಗಿತ್ತು. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತೇಜಸ್ವಿನಿ ಅನಂತಕುಮಾರ್ ಹೆಸರನ್ನೇ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಕ್ಷೇತ್ರದಲ್ಲಿ ತೇಜಸ್ವಿನಿ ಚುನಾವಣಾ ಕಚೇರಿಯನ್ನೂ ತೆರೆದಿದ್ದರು. ಆದರೆ ಕಳೆದ ಒಂದು ವಾರದ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಇದರ ಹಿಂದೆ ಕೇಳಿಬರುತ್ತಿರುವ ಹೆಸರು ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದಿರುವ ಬಿ. ಎಲ್. ಸಂತೋಷ್.

ಬಿಎಸ್‌ವೈ, ಈಶ್ವರಪ್ಪ ಹೆಸರು ರಾಜ್ಯದ ಜನರಿಗೆ ಚಿರಪರಿಚಿತವಾಗಿದ್ದರೂ, ಸಂತೋಷ್ ಎಂಬ ಹೆಸರು ಬಿಜೆಪಿ ವಲಯ ಹಾಗೂ ಸಂಘಟನಾ ಸದಸ್ಯರಿಗೆ ಬಿಟ್ಟರೆ ಹೊರ ಜಗತ್ತಿಗೆ ಕೊಂಚ ಅಪರಿಚಿತ. ಯಾವಾಗಲೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುವ ಸಂತೋಷ್ ಬಿಜೆಪಿಯಲ್ಲಿ ಸಂಘಟನಾ ಚತುರ ಎಂದೇ ಚಿರಪರಿಚಿತರು. ಆದರೆ, ತೇಜಸ್ವಿನಿಗೆ ಟಿಕೆಟ್ ಕೈ ತಪ್ಪಲು ಇವರೇ ಕಾರಣ ಎನ್ನಲಾಗುತ್ತಿದೆ.

ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿದ್ದ ದಿವಂಗತ ಅನಂತಕುಮಾರ್ ಅವರಿಗೂ ರಾಜ್ಯದ ರಾಜಕಾರಣದಲ್ಲಿ ತೊಡಗಬೇಕು ಹಾಗೂ ಮುಖ್ಯಮಂತ್ರಿ ಹುದ್ದೆಗೆ ಏರಬೇಕು ಎಂಬ ಆಸೆ ಇದ್ದದ್ದು ಸುಳ್ಳಲ್ಲ. ಆದರೆ, ಬಿ. ಎಸ್. ಯಡಿಯೂರಪ್ಪನವರಂತಹ ನಾಯಕರನ್ನು ಮೀರಿ ಆ ಸ್ಥಾನಕ್ಕೆ ಬೆಳೆಯುವುದು ಆ ಕಾಲದಲ್ಲಿ ಸಾಧ್ಯವೇ ಇರಲಿಲ್ಲ. ಏಕೆಂದರೆ ಅವರ ಬೆನ್ನ ಹಿಂದೆ ಅತಿದೊಡ್ಡ ಲಿಂಗಾಯತ ಮತಗಳಿದ್ದವು.

ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಯಡಿಯೂರಪ್ಪ ಬಣದ ಎದುರಾಗಿ ಬಿಜೆಪಿಯಲ್ಲಿ ಸದ್ದಿಲ್ಲದೆ ಸಂತೋಷ್ ಬಣ ರೂಪುಗೊಳ್ಳುತ್ತಿದೆ. “ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗೆದ್ದರೂ ಸೋತರೂ ಚುನಾವಣೆಯ ನಂತರ ಅಡ್ವಾನಿ ಹಾಗೂ ಮುರಳಿ ಮನೋಹರ್ ಜೋಶಿ ತರಹ ಪಕ್ಷ ಯಡಿಯೂರಪ್ಪನವರನ್ನೂ ನೇಪಥ್ಯಕ್ಕೆ ಸರಿಸುವುದು ಬಹುತೇಕ ಖಚಿತವಾಗಿದೆ. ಇದೂ ಬಿಎಸ್‌ವೈಗೂ ತಿಳಿದಿದೆ. ಹೀಗಾಗಿ ಸಂತೋಷ್ ಭವಿಷ್ಯದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ,” ಎನ್ನುತ್ತವೆ ಪಕ್ಷದ ಮೂಲಗಳು.

ಹೀಗಾಗಿಯೇ “ಈಗಿನಿಂದಲೇ ಪಕ್ಷದಲ್ಲಿ ಯಡಿಯೂರಪ್ಪನವರ ಸ್ಥಾನಮಾನಗಳನ್ನು ಕಸಿಯಲು ಆರ್‌ಎಸ್‌ಎಸ್‌ ನಾಯಕ ಸಂತೋಷ್ ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯೇ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿಸಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿರುವುದು,” ಎನ್ನುತ್ತಿವೆ ಹೆಸರೇಳಲಿಚ್ಚಿಸದ ಬಿಜೆಪಿ ಪಕ್ಷದ ಮೂಲಗಳು.

ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಕೊರಳಿಗೆ ಭ್ರಷ್ಟಾಚಾರದ ಅನೇಕ ಆರೋಪಗಳು ಸುತ್ತಿಕೊಂಡಿದ್ದವು. ಈ ಸಂದರ್ಭದಲ್ಲಿ ಅವರ ರಾಜೀನಾಮೆಗೆ ಆರ್‌ಎಸ್‌ಎಸ್‌ನಿಂದ ಒತ್ತಾಯಿಸಿ ಕೊನೆಗೂ ರಾಜೀನಾಮೆ ಪಡೆದದ್ದು ಹಾಗೂ ಬಿಎಸ್‌ವೈ ವಿರುದ್ದ ಈಶ್ವರಪ್ಪನವರನ್ನು ಎತ್ತಿಕಟ್ಟಿ ‘ರಾಯಣ್ಣ ಬ್ರಿಗೇಡ್’ ಸಂಘಟನೆ ಸ್ಥಾಪಿಸಲು ಪ್ರೇರಣೆ ನೀಡಿದ್ದೂ ಇದೇ ಬಿ. ಎಲ್‌. ಸಂತೋಷ್ ಎಂಬುದು ಬಹುಚರ್ಚಿತ ಸಂಗತಿ.

ಈ ಕುರಿತು ಪ್ರತಿಕ್ರಿಯೆಗಾಗಿ ಸಂತೋಷ್‌ ಅವರನ್ನು ಸಂಪರ್ಕಿಸಲಾಯಿತಾದರೂ, ಅವರು ದೂರವಾಣಿ ಕರೆಗೆ ಲಭ್ಯರಾಗಲಿಲ್ಲ.

ರಾಷ್ಟ್ರಮಟ್ಟದ ಸಂಬಂಧಗಳು:

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದವರು ಇಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್ ಹಾಗೂ ಕರ್ನಾಟಕದ ಅನಂತಕುಮಾರ್. ಇವರೆಲ್ಲರೂ ಆ ದಿನಗಳಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌. ಕೆ. ಅಡ್ವಾನಿ ತಂಡದಲ್ಲಿ ಕಾಣಿಸಿಕೊಂಡವರು ಹಾಗೂ ಅವರ ಖಾಸಾ ಶಿಷ್ಯರಾಗಿದ್ದವರು.

ಪರಿಣಾಮ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಎಲ್‌. ಕೆ. ಅಡ್ವಾನಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಅಡ್ವಾನಿ ಕ್ಯಾಂಪ್‌ನಲ್ಲಿದ್ದ ಎಲ್ಲರನ್ನೂ ಪಕ್ಷದಲ್ಲಿ ಕಡೆಗಣಿಸಲಾಗಿತ್ತು. ವೆಂಕಯ್ಯ ನಾಯ್ಡುರನ್ನು ಉಪರಾಷ್ಟ್ರಪತಿ ಮಾಡುವ ಮೂಲಕ ‘ರಾಜಕೀಯ ಸನ್ಯಾಸ’ ನೀಡಿದರೆ, ಕಳೆದ 5 ವರ್ಷದಲ್ಲಿ ವಿದೇಶಾಂಗ ಸಚಿವರು ಮೋದಿಯಾ? ಅಥವಾ ಸುಷ್ಮಾ ಸ್ವರಾಜ್ ಅವರೆ? ಎಂದು ಸಂಶಯ ಹುಟ್ಟಿಸುವಷ್ಟರ ಮಟ್ಟಿಗೆ ಮೋದಿ ವಿದೇಶಿ ಪ್ರವಾಸ ಕೈಗೊಂಡಾಗಿತ್ತು. ಇನ್ನೂ ಈ ಬಾರಿ ಆರೋಗ್ಯದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಚುನಾವಣೆಗೂ ಸ್ಪರ್ಧಿಸುತ್ತಿಲ್ಲ.

ಇನ್ನೂ ಅನಂತ್ ಕುಮಾರ್‌ಗೆ ನೆಪಮಾತ್ರಕ್ಕೆ ರಸಗೊಬ್ಬರದಂತಹ ಅಷ್ಟೇನು ಪ್ರಾಮುಖ್ಯತೆ ಇಲ್ಲದ ಖಾತೆ ನೀಡಲಾಗಿತ್ತು. 2016ರಲ್ಲಿ ಜಿಎಸ್‌ಟಿಗೆ ಸಂಸತ್‌ನಲ್ಲಿ ಒಪ್ಪಿಗೆ ಪಡೆಯುವ ಸಲುವಾಗಿ ವಿರೋಧ ಪಕ್ಷದಲ್ಲೂ ಒಳ್ಳೆಯ ಇಮೇಜ್ ಇರುವ ಕಾರಣಕ್ಕೆ ಅನಂತ್ ಕುಮಾರ್‌ಗೆ ಸಂಸದೀಯ ವ್ಯವಹಾರಗಳ ಖಾತೆ ನೀಡಿ ಅವರ ಮೂಲಕ ಮೋದಿ ಜಿಎಸ್‌ಟಿ ಕಾಯ್ದೆಯನ್ನು ಪಾಸು ಮಾಡಿಸಿದ್ದರು ಎಂಬುದು ರಾಜಕೀಯ ವಿಶ್ಲೇಷಣೆಗಳು.

ಅನಂತ್ ಕುಮಾರ್ ಮೃತರಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ತೇಜಸ್ವಿನಿಗೆ ಟಿಕೆಟ್ ಕೈತಪ್ಪಲು ತಾವೆ ನೇರ ಕಾರಣ ಎಂಬ ಸಂದೇಶ ರವಾನೆಯಾದರೆ ತಮ್ಮ ಇಮೇಜ್‌ಗೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ ಮೋದಿ ಮತ್ತು ಅಮಿತ್ ಶಾ ಈ ಕೆಲಸವನ್ನು ಬಿ. ಎಲ್‌. ಸಂತೋಷ್ ಮೂಲಕ ಸಾಧಿಸಿಕೊಂಡಿದ್ದಾರೆ. ಅಲ್ಲಿಗೆ ಮೋದಿ ಒಂದೇ ಕಲ್ಲಿನಲ್ಲಿ ಎರಡು ಮಾವಿನಕಾಯಿ ಹೊಡೆತಂದಾಗಿದೆ ಎನ್ನುವ ಮಾತು ಪ್ರಸ್ತುತ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.

ಮುಂದೇನು?

ತೇಜಸ್ವಿನಿ ಸೂರ್ಯನಿಗೆ ಟಿಕೆಟ್ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ. ಸೋಮಣ್ಣ ಮತ್ತು ಆರ್. ಅಶೋಕ್.

ತೇಜಸ್ವಿನಿ ಅನಂತ ಕುಮಾರ್‌ಗೆ ಟಿಕೆಟ್‌ ಕೈತಪ್ಪುತ್ತಿದ್ದಂತೆ ವಿಜಯನಗರ ಶಾಸಕ ವಿ. ಸೋಮಣ್ಣ ಸೇರಿದಂತೆ ಅನೇಕ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಪಕ್ಷದ ವಿರುದ್ಧ ಸಂಪೂರ್ಣ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲೂ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೊರತು ಬೇರೆ ಯಾವ ನಾಯಕರು ಸಹ ಇರಲಿಲ್ಲ. ಇನ್ನೂ ಬೆಂಗಳೂರು ದಕ್ಷಿಣದ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು.

ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ಮುಂಚೆ ಆರ್ಶೀವಾದ ಪಡೆಯಲು ತೇಜಸ್ವಿನಿ ಅವರ ಮನೆಗೆ ತೆರಳಿದ್ದಾಗ ಅಲ್ಲಿದ್ದ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ತೇಜಸ್ವಿನಿಯವರೇ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಪಕ್ಷದೊಳಗೆ ದೊಡ್ಡ ಮಟ್ಟದ ಅಸಮಾಧಾನ ಹೊಗೆಯಾಡುತ್ತಿರುವುದು ಗೋಚರಿಸುತ್ತದೆ.

ಈ ಕುರಿತು ‘ಸಮಾಚಾರ’ ಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹಾಲಿ ಶಾಸಕ ವಿ. ಸೋಮಣ್ಣ, “ತೇಜಸ್ವಿನಿ ಅವರಿಗೆ ಟಿಕೆಟ್ ಕೈ ತಪ್ಪಲು ಕಾರಣವಾದರೂ ಏನು? ಎಂಬ ಪ್ರಶ್ನೆಗೆ ಉತ್ತರ ಸಿಗುವವರೆಗೆ ನಾವು ಯಾರೂ ಚುನಾವಣಾ ಪ್ರಚಾರಕ್ಕೆ ಹಾಜರಾಗುವುದಿಲ್ಲ. ಪ್ರಚಾರದ ಕುರಿತು ಮುಂದಿನ ಎರಡು ದಿನಗಳ ನಂತರ ತಮ್ಮ ತೀರ್ಮಾನವನ್ನು ಘೋಷಿಸುತ್ತೇವೆ,” ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಮಟ್ಟಿಗೆ ಒಕ್ಕಲಿಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ. ವಿ. ಸೋಮಣ್ಣ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರು ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿಯದೆ ತಟಸ್ಥರಾದರೆ ಗೋವಿಂದರಾಜನಗರ, ವಿಜಯನಗರದ ಭಾಗದಲ್ಲಿ ಅಪರಿಚಿತ ವ್ಯಕ್ತಿಯಾದ ತೇಜಸ್ವಿ ಸೂರ್ಯ ಲೀಡ್ ಗಳಿಸುವುದಿರಲಿ ಸಾಮಾನ್ಯ ಮತ ಗಳಿಕೆಯೂ ಕಷ್ಟ ಎನ್ನಲಾಗುತ್ತಿದೆ. ಇನ್ನೂ ತೇಜಸ್ವಿನಿ ಅನಂತಕುಮಾರ್ ಬೆಂಬಲಿಗರ ನಡೆಯನ್ನು ಅವಲೋಕಿಸಿದರೆ ಕ್ಷೇತ್ರದಲ್ಲಿ ಇವರು ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಟ್ರಬಲ್ ಶೂಟರ್ ಆಗ್ತಾರ ರಾಮಲಿಂಗಾರೆಡ್ಡಿ?

ಮಾಜಿ ಸಚಿವ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ.

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಾಲಿಗೆ ಸಚಿವ ಡಿ. ಕೆ. ಶಿವಕುಮಾರ್ ಟ್ರಬಲ್ ಶೂಟರ್ ಎಂದು ಗುರುತಿಸಿಕೊಂಡಿದ್ದರೆ, ಬೆಂಗಳೂರಿನ ಪಾಲಿಗೆ ಕಾಂಗ್ರೆಸ್‌ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿಯೇ ಟ್ರಬಲ್ ಶೂಟರ್.

ರಾಮಲಿಂಗಾರೆಡ್ಡಿಗೆ ಈ ಭಾಗದಲ್ಲಿ ಸಾಕಷ್ಟು ಪ್ರಭಾವವಿದೆ. ರಾಜಕೀಯದ ಆಚೆಗೆ ದಿವಂಗತ ಅನಂತಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ರಾಮಲಿಂಗಾ ರೆಡ್ಡಿ ಪರೋಕ್ಷವಾಗಿ ಅನಂತಕುಮಾರ್ ಅವರನ್ನು ಬೆಂಬಲಿಸಿದ್ದರು ಹಾಗೂ ಈ ಭಾಗದಲ್ಲಿ ಅನಂತಕುಮಾರ್ ಈವರೆಗೆ ಸುಲಭವಾಗಿ ಗೆಲುವು ಸಾಧಿಸಲು ಸಹಕಾರ ನೀಡಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿದೆ.

ಎರಡು ಬಾರಿ ಜಯನಗರದ ಶಾಸಕರಾಗಿ ಆಯ್ಕೆಯಾಗಿದ್ದ ದಿವಂಗತ ಬಿ. ಎನ್. ವಿಜಯಕುಮಾರ್ ಕ್ಷೇತ್ರದಲ್ಲಿ ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದೇ ಖ್ಯಾತನಾಮರು. ಇವರು ಅಕಾಲಿಕ ಮರಣಕ್ಕೆ ತುತ್ತಾದಾಗ ಅವರ ಪರವಾಗಿ ಕ್ಷೇತ್ರದಲ್ಲಿ ದೊಡ್ಡ ಅಲೆ ಇತ್ತು. ಹೀಗಾಗಿ ಈ ಬಾರಿಯೂ ಕ್ಷೇತ್ರದಲ್ಲಿ ಕನಿಕರದ ಅಲೆಯ ಮೇಲೆ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ತನ್ನ ಮಗಳಾದ ಸೌಮ್ಯ ರೆಡ್ಡಿಯನ್ನು ಮೊದಲ ಬಾರಿಗೆ ಚುನಾವಣೆಗೆ ನಿಲ್ಲಿಸಿದ್ದ ರಾಮಲಿಂಗಾರೆಡ್ಡಿ ವಿಜಯ ಕುಮಾರ್ ಸಾವಿನ ಅನುಕಂಪದ ಅಲೆಯ ನಡುವೆಯೂ ಮಗಳನ್ನು ಗೆಲ್ಲಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ಇದು ಜಯನಗರ ಸೇರಿದಂತೆ ದಕ್ಷಿಣ ಭಾಗದಲ್ಲಿ ರಾಮಲಿಂಗಾ ರೆಡ್ಡಿ ಪ್ರಭಾವದ ಕುರಿತ ಒಂದು ಸಣ್ಣ ಉದಾಹರಣೆಯಷ್ಟೆ.

“ರಾಜಕೀಯದಲ್ಲಿ ವಿರೋಧ ಪಕ್ಷದವರೇ ಆದರೂ ಸಹ ಎಲ್ಲರ ನಡುವೆಯೂ ಕೆಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದವಾಗುವುದು ಸಾಮಾನ್ಯ. ಅನೇಕ ಕ್ಷೇತ್ರಗಳಲ್ಲಿ ಸ್ವತಃ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಇತಿಹಾಸ ಇದೆ. ಬೆಂಗಳೂರು ದಕ್ಷಿಣದಲ್ಲೂ ಈವರೆಗೆ ಒಳ ಒಪ್ಪಂದ ಇದ್ದದ್ದು ಸತ್ಯ. ಆದರೆ ಅನಂತ್ ಕುಮಾರ್ ಮರಣದ ನಂತರ ಇದು ಮುಂದುವರೆಯುವುದು ಸಾಧ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಬಿ. ಕೆ. ಹರಿಪ್ರಸಾದ್ ಪರ ರಾಮಲಿಂಗಾರೆಡ್ಡಿ ಕ್ಷೇತ್ರದಲ್ಲಿ ಇಳಿದು ಕೆಲಸ ಮಾಡಲು ಆರಂಭಿಸಿದರೆ ಈ ಕ್ಷೇತ್ರದಲ್ಲಿ ಎರಡು ದಶಕಗಳ ನಂತರ ಕಾಂಗ್ರೆಸ್ ಮತ್ತೆ ದೊಡ್ಡ ಅಂತರದಲ್ಲಿ ಗೆಲ್ಲುವುದು ಖಚಿತ,” ಎನ್ನುತ್ತಾರೆ ಪತ್ರಕರ್ತ ಸುನೀಲ್ ಸಿರಸಂಗಿ. ಇವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದಾರೆ ಮತ್ತು ಸ್ಥಳೀಯ ರಾಜಕಾರಣವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದಾರೆ.

ತೇಜಸ್ವಿ ಸೂರ್ಯ ಹಳೇ ಸಂಬಂಧ:

ತೇಜಸ್ವಿ ಸೂರ್ಯ ಹಾಗೂ ಆತನ ಮೇಲೆ ಆರೋಪ ಹೊರಿಸಿರುವ ಮಾಜಿ ಗೆಳತಿ ಡಾ. ಸೋಮ್ ದತ್.

ಈ ಎಲ್ಲಾ ವ್ಯಾಖ್ಯಾನಗಳ ನಡುವೆಯೇ ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಹಳೇ ಸಂಬಂಧವೊಂದು ಈಗ ಚರ್ಚೆಗೆ ಬಂದಿದೆ.

ಪಕ್ಕಾ ಆರ್‌ಎಸ್‌ಎಸ್‌ ಶಾಖೆಯಲ್ಲಿ ಬೆಳೆದಿರುವ ತೇಜಸ್ವಿ ಸೂರ್ಯ 2014ರಲ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಮಹಿಳಾ ಮೀಸಲಾತಿಯನ್ನು ಕಟುವಾಗಿ ವಿರೋಧಿಸಿ ಬರೆದಿದ್ದರು. ಅವರು ನಾಮಪತ್ರ ಸಲ್ಲಿಸಿದ ನಂತರ ಹಳೆಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಮಾರ್ಚ್.28 ಗುರುವಾರ ‘ಟೈಮ್ಸ್ ಆಫ್‌ ಇಂಡಿಯಾ’ ತೇಜಸ್ವಿ ಸೂರ್ಯ ಅವರ ಈ ಟ್ವೀಟ್‌ ಕುರಿತು ಮುಖಪುಟದಲ್ಲಿ ವರದಿ ಮಾಡಿತ್ತು.

ಪರಿಣಾಮ ಹಳೆಯ ಟ್ವೀಟ್‌ ಅಳಿಸಿಹಾಕಿದ್ದ ತೇಜಸ್ವಿ ಸೂರ್ಯ ಮಾದ್ಯಮಗಳ ಎದುರು ತೇಪೆ ಹಾಕುವ ಕೆಲಸಕ್ಕೂ ಮುಂದಾಗಿದ್ದರು. ಆದರೆ, ಈ ಬಿಸಿ ಆರುವ ಮುಂಚೆಯೇ ತೇಜಸ್ವಿ ಮಾಜಿ ಗೆಳತಿ ಡಾ. ಸೋಮ್ ದತ್ತ ಖಾಸಗಿ ಮಾಹಿತಿಯನ್ನು ಮುಂದಿಟ್ಟರು.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ #ಮೀಟೂ ರೀತಿಯ ಸರಣಿ ಆರೋಪ ಮಾಡಿರುವ ಡಾ. ಸೋಮ್ “ಆತನಿಗೆ 23 ವರ್ಷ ಇದ್ದಾಗಲೆ ನನ್ನ ಜೊತೆ ಸಂಬಂಧವಿತ್ತು. ತೇಜಸ್ವಿ ಕುರಿತಾಗಿ ಪೂರ್ಣ ಸತ್ಯ ತಿಳಿಯದೆ ಕುರುಡಾಗಿ ಆತನನ್ನು ಬೆಂಬಲಿಸಬೇಡಿ. ಮಹಿಳೆಯನ್ನು ಶೋಷಿಸುವ, ಹೆಣ್ಣಿನ ಮೇಲೆ ಹಲ್ಲೆ ಮಾಡುವ ವ್ಯಕ್ತಿ ನಮ್ಮ ಮುಂದಾಳು ಆಗಲು ನೀವು ಬಯಸುತ್ತೀರಾ? ಆ ಬಗ್ಗೆ ಸಾಕ್ಷ್ಯ ಬೇಕೆ? ನಾನು ಹಂಚಿಕೊಳ್ಳುತ್ತೇನೆ.” ಎಂದರು.

ತೇಜಸ್ವಿ ಸೂರ್ಯನ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ಮೀಟೂ ಮಾದರಿ ಆರೋಪ ಹೊರಿಸಿರುವ ಸಂತ್ರಸ್ತೆ ಡಾ.ಸೋಮ್ ದತ್.

“ಪ್ರತಿಯೊಬ್ಬ ಹಿಂದೂ ಸಹ ಧಾರ್ಮಿಕ ವ್ಯಕ್ತಿಯಲ್ಲ ಹಾಗೂ ಉತ್ತಮ ಭಾಷಣಗಳು ಉತ್ತಮ ವ್ಯಕ್ತಿಯನ್ನು ಸೂಚಿಸುವುದಿಲ್ಲ. ತೇಜಸ್ವಿಯಿಂದ ಅನ್ಯಾಯಕ್ಕೊಳಗಾದ ಮೊದಲ ಮಹಿಳೆ ನಾನಲ್ಲ, ಭಾಗಶಃ ಕೊನೆಯವಳೂ ನಾನಾಗಿರಲು ಸಾಧ್ಯವಿಲ್ಲ” ಎಂದು ಸರಣಿ ಟ್ವೀಟ್ ಮಾಡುವ ಮೂಲಕ ತೇಜಸ್ವಿ ಎಸಗಿದ್ದಾರೆ ಎನ್ನಲಾದ ಅನ್ಯಾಯದ ವಿರುದ್ಧ ಹೇಳಿಕೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಉದ್ಯಮ ಹಿನ್ನೆಲೆಯ ಡಾ. ಸೋಮ್ ತಮ್ಮ ಅಕೌಂಟ್‌ನ್ನೇ ಡಿಲೀಟ್ ಮಾಡಿದ್ದಾರೆ.

ಡಾ.ಸೋಮ್ ದುತ್ತ ಸಿಂಗ್ ಶ್ರೀಮಂತ ಮನೆತನದ ಹುಡುಗಿ. ವೈದ್ಯ ದಂಪತಿಗಳ ಮಗಳಾಗಿರುವ ಈಕೆಗೆ ಉದ್ಯಮಿಯಾಗುವ ಕನಿಸಿತ್ತು. ಈ ಮೂಲಕ ಬೆಂಗಾಳಿಗಳ ಸಾಂಪ್ರದಾಯಿಕ ಮನಸ್ಥಿತಿಗೆ ವಿರುದ್ಧ ನಿಲ್ಲುವ ನಡೆ ಇಟ್ಟು ಅಮೆರಿಕಾದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದರು. ಮುಂದೆ, ಹೂಡಿಕೆ ಮಾರ್ಗದರ್ಶಿಯಾಗಿ ಕೆಲಸ ಶುರುಮಾಡಿದರು. ಈ ಸಮಯದಲ್ಲಿ ತೇಜಸ್ವಿಗೆ 23 ವರ್ಷ ಮತ್ತು ತನ್ನ ಜತೆ ಸಂಬಂಧ ಇತ್ತು, ಇದರಿಂದ ತಾನು ಯಾತನೆ ಅನುಭವಿಸಿದೆ ಎಂದವರು ಹೇಳಿಕೊಂಡಿದ್ದಾರೆ. ಇದು ಕೂಡ ಯುವ ಮುಖಂಡನಿಗೆ ಸಮಸ್ಯೆಯಾಗುವ ಸಾಧ್ಯತೆ ಕಾಣಿಸುತ್ತಿದೆ.

ಕ್ಷೇತ್ರದ ವಸ್ತು ಸ್ಥಿತಿ

ಗೋವಿಂದರಾಜನಗರ, ವಿಜಯನಗರ, ಚಿಕ್‌ಪೇಟೆ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ. ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣ ಬೆಂಗಳೂರಿನ ಇತರೆ ಲೋಕಸಭಾ ಕ್ಷೇತ್ರಗಳಿಗಿಂತ ಉತ್ತಮ ಸ್ಥಿತಿಯಲ್ಲೇ ಇದೆ. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿನ ಜನ ಹೆಚ್ಚು ಸಂತುಷ್ಟಿಗಳಾಗಿದ್ದಾರೆ.

ಕಸದ ಸಮಸ್ಯೆ ಬಿಟ್ಟರೆ ಈ ಭಾಗಗಳಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆಗಳಿಲ್ಲ. ದಿವಂಗತ ಅನಂತ್‌ ಕುಮಾರ್ ಅವರಿಗೆ ಈ ಭಾಗದಲ್ಲಿ ಸಜ್ಜನ ರಾಜಕಾರಣಿ ಎಂಬ ಹೆಸರಿದೆ. ಒಕ್ಕಲಿಗ, ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ. ಅಲ್ಲದೆ ಬೆಂಗಳೂರಿನಲ್ಲೇ ಅಧಿಕ ಬ್ರಾಹ್ಮಣ ಮತದಾರರನ್ನು ಹೊಂದಿರುವ ಕ್ಷೇತ್ರವೂ ಹೌದು. ಇದೆ ಕಾರಣಕ್ಕೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಲಾಗಿದೆ ಎಂಬುದು ಒಂದು ಲೆಕ್ಕಾಚಾರ.

ಆದರೆ, ತೇಜಸ್ವಿ ಎದುರು ಸ್ಪರ್ಧಿಸುತ್ತಿರುವವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್. 1999ರಲ್ಲೇ ಈ ಕ್ಷೇತ್ರದಿಂದ ಅನಂತಕುಮಾರ್ ಎದುರು ಸ್ಪರ್ಧಿಸಿ 50 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಅಲ್ಲದೆ ಕ್ಷೇತ್ರದ ಜನರ ಜೊತೆ ಅವರಿಗೆ ಉತ್ತಮ ಒಡನಾಟವಿದೆ ಹಾಗೂ ಈ ಕ್ಷೇತ್ರದ ಮತದಾರರಿಗೆ ತೇಜಸ್ವಿಗಿಂತ ಹೆಚ್ಚು ಚಿರಪರಿಚಿತ ಎಂಬುದು ಬಿ. ಕೆ. ಹರಿಪ್ರಸಾದ್ ಪಾಲಿನ ಧನಾತ್ಮಕ ಅಂಶಗಳು. ಇದರ ನಡುವೆ ಬಿಜೆಪಿಯ ಬಿಕ್ಕಟ್ಟು ಕೂಡ ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

ಇಷ್ಟೆಲ್ಲಾ ರಾಜಕೀಯ ವಿಶ್ಲೇಷಣೆ ಹಾಗೂ ತೀರ್ಮಾನಗಳ ನಡುವೆ ಬಿಜೆಪಿ ಪಾಲಿಗೆ ಬೆಂಗಳೂರು ದಕ್ಷಿಣ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ ಎಂಬುದು ಕೊನೆಯ ಆದರೆ ಗಮನಾರ್ಹ ಸಂಗತಿ. ಬಿಜೆಪಿ ಆಯ್ಕೆಯಾಗಿರವ ತೇಜಸ್ವಿ ಸೂರ್ಯ ಎಂಬ ವ್ಯಕ್ತಿಯ ಸತ್ವ ಪರೀಕ್ಷೆಗಿಂತ ಜಾಸ್ತಿ ಇಲ್ಲಿ ನಡೆಯುವುದು ‘ನರೇಂದ್ರ ಮೋದಿ ಹವಾ’ದ ಅಗ್ನಿ ಪರೀಕ್ಷೆ. ಇದಕ್ಕಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರ ನಿರ್ಧಾರ ಮುಖ್ಯವಾಗುತ್ತದೆ.