Home ಅಂತಾರಾಷ್ಟ್ರೀಯ ನರಮೇಧವನ್ನು ಮಾರಾಟ ಮಾಡುವುದು ಹೇಗೆ?: ಅಮೆರಿಕಾ ಗನ್‌ ಲಾಬಿಗೆ ಅಲ್‌ಜಝೀರಾ ಗುಂಡೇಟು

ನರಮೇಧವನ್ನು ಮಾರಾಟ ಮಾಡುವುದು ಹೇಗೆ?: ಅಮೆರಿಕಾ ಗನ್‌ ಲಾಬಿಗೆ ಅಲ್‌ಜಝೀರಾ ಗುಂಡೇಟು

SHARE

ನ್ಯೂಜಿಲ್ಯಾಂಡ್‌ ಮಸೀದಿ ಮೇಲಿನ ಭೀಕರ ಗುಂಡಿನ ದಾಳಿಯ ಮುಂದುವರಿದ ಭಾಗವಾಗಿ ‘ಗನ್‌ ಲಾಬಿ’ ಸುತ್ತ ಅಂತಾರಾಷ್ಟ್ರೀಯ ಚರ್ಚೆಯೊಂದು ಮತ್ತೊಮ್ಮೆ ಗರಿಗೆದರಿದೆ.

ಗನ್‌ ಲಾಬಿ ಎಂದರೆ ಕೇವಲ ಬಂದೂಕುಗಳ ಮಾರಾಟವಲ್ಲ. ಬಂದೂಕು ಹಾಗೂ ಬಿಳಿ ಚರ್ಮದ ಹಿರಿಮೆಗೂ ಸಂಬಂಧವಿದೆ. ಅಮೆರಿಕಾದಂತಹ ದೇಶಗಳ ರಾಜಕಾರಣದಲ್ಲಿ ಗನ್‌ ಲಾಬಿಯ ಛಾಯೆ ಢಾಳಾಗಿ ಕಾಣಿಸುತ್ತದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುಟುಂಬವನ್ನು ತನ್ನ ಮೂಗಿನ ನೇರಕ್ಕೆ ಕುಣಿಸುವಷ್ಟು ಇದು ಪ್ರಬಲವಾಗಿದೆ.

ಮೇಲ್ನೋಟಕ್ಕೆ ಕಾರ್ಪೊರೇಟ್ ಕಾರ್ಯಶೈಲಿಯನ್ನು ಹೊಂದಿರುವ, ಹಿನ್ನೆಲೆಯಲ್ಲಿ ಎಲ್ಲಾ ಅಕ್ರಮಗಳನ್ನೂ ನಡೆಸುವ ಈ ಲಾಬಿಕೋರರಿಗೂ ಅಂತಾರಾಷ್ಟ್ರೀಯ ಬಲಪಂಥೀಯ ರಾಜಕೀಯ ಪಕ್ಷಗಳಿಗೂ ಒಂದು ಸಂಬಂಧ ಇರುವ ಹಾಗಿದೆ. ಅದಕ್ಕೆ ಪ್ರಬಲ ಸಾಕ್ಷಿಯೊಂದನ್ನು ಕತಾರ್ ಮೂಲದ ಆಲ್‌ ಜಝೀರಾ ಇಂಗ್ಲಿಷ್ ಸುದ್ದಿ ವಾಹಿನಿ ಹೊತ್ತುತಂದಿದೆ.

ನರಮೇಧವನ್ನು ಮಾರುವುದು ಹೇಗೆ? (how to sell a massacre) ಎಂಬ ಹೆಸರಿನ ಸುಮಾರು 45 ನಿಮಿಷಗಳ ತನಿಖಾ ವರದಿಯಲ್ಲಿ, ಅಮೆರಿಕಾ ಗನ್ ಲಾಬಿ, ಅದು ದೇಶವೊಂದರ ಶಸ್ತ್ರಾಸ್ತ್ರಗಳ ಮೇಲಿನ ನಿಷೇಧ ಕಾಯ್ದೆ ಕಿತ್ತು ಹಾಕಲು ನಡೆಸುವ ಪ್ರಯತ್ನ, ಅದೇ ದೇಶದ ರಾಜಕೀಯ ಪಕ್ಷವೊಂದು ನೆರವು ಕೇಳುವುದು, ಸಾರ್ವಜನಿಕ ಅಭಿಪ್ರಾಯ ರೂಪಿಸಿ ಅಧಿಕಾರಕ್ಕೆ ಬರಲು ಹಿಡಿಯುವ ಹಾದಿಗಳನ್ನು ದಾಖಲೆ ಸಮೇತ ಮುಂದಿಡಲಾಗಿದೆ.

ಅಂದಹಾಗೆ, ಇಂತಹದೊಂದು ತನಿಖಾ ವರದಿಗೆ ಆಲ್‌ ಜಝೀರಾ ಇಂಗ್ಲಿಷ್ ತೆಗೆದುಕೊಂಡಿದ್ದು ಮೂರು ವರ್ಷಗಳು. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ವರದಿ ಸದ್ಯದಲ್ಲೇ ನಡೆಯಲಿರುವ ಚುನಾವಣೆ ಮೇಲೆ ಪರಿಣಾಮ ಬೀರಲು ಆರಂಭಿಸಿದೆ.

ತನಿಖಾ ವರದಿ ನಡೆಸಿದ್ದು ಹೇಗೆ?

ತನಿಖಾ ವರದಿಯ ತಯಾರಿ ಆರಂಭವಾಗಿದ್ದು 2015ರಲ್ಲಿ. ಅಮೆರಿಕಾದ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ನೆಲೆ ನಿಂತಿದ್ದ ಅಲ್‌ಜಝೀರಾ ಇನ್ವೆಸ್ಟಿಗೇಷನ್‌ ವಿಭಾಗ ಅಮೆರಿಕಾದ ಗನ್‌ ಲಾಬಿ ಬಗ್ಗೆ ತನಿಖೆ ನಡೆಸಬೇಕು ಎಂದು ನಿರ್ಧರಿಸಿತ್ತು. ಇದಕ್ಕಾಗಿ ರಹಸ್ಯ ಕಾರ್ಯಾಚರಣೆಗೆ ತಂಡ ಸಿದ್ಧವಾಯಿತು.

ಇದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಬಂದೂಕು ಪರ ಇರುವ ಗುಂಪೊಂದನ್ನು ಸೃಷ್ಟಿಸುವುದು. ಆ ಗುಂಪು ಅಮೆರಿಕಾದ ಎನ್‌ಆರ್‌ಎ (ನ್ಯಾಷನಲ್‌ ರೈಫಲ್ಸ್‌ ಅಸೋಸಿಯೇಷನ್‌ ಆಫ್‌ ಅಮೆರಿಕಾ)ಯನ್ನು ಸಂಪರ್ಕಿಸುವುದು ಎಂಬ ನಿರ್ಧಾರಕ್ಕೆ ಬರಲಾಯಿತು. ಎನ್‌ಆರ್‌ಎ, ಅಮೆರಿಕಾದಲ್ಲಿ ಬಂದೂಕು ಹಕ್ಕಿಗಾಗಿ ಹೋರಾಡುವ ಲಾಭ ರಹಿತ ಸಂಸ್ಥೆ.

ಯೋಜನೆಯಂತೆ ಓರ್ವ ವ್ಯಕ್ತಿಯ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲೂ ಒಂದು ಗುಂಪನ್ನು ರಚಿಸಲಾಯಿತು. ಆತ ಮತ್ಯಾರೂ ಅಲ್ಲ, ಆಸ್ಟ್ರೇಲಿಯಾ ಮೂಲದ ಅಲ್‌ಜಝೀರಾ ಪತ್ರಕರ್ತ. ಆತ ‘ಗನ್‌ ರೈಟ್ಸ್‌ ಆಸ್ಟ್ರೇಲಿಯಾ’ ಎಂಬ ಗುಂಪು ಸ್ಥಾಪಿಸಿ ಅದರ ಅಧ್ಯಕ್ಷನಾದ.

ಈತನನ್ನು ತನಿಖಾ ವರದಿಗೆ ಬೇಕಾದಂತೆ ಅಲ್‌ಜಝೀರಾ ಇನ್ವೆಸ್ಟಿಗೇಷನ್‌ ತಂಡದವರು ಸಜ್ಜುಗೊಳಿಸಿದರು. ವೃತ್ತಿಪರ ತರಬೇತಿ ನೀಡಲಾಯಿತು. ಗೌಪ್ಯ ಕ್ಯಾಮೆರಾಗಳನ್ನು ಧರಿಸುವುದು, ಅವುಗಳನ್ನು ಬಳಸುವುದು, ಬಂದೂಕಿನ ಬಗ್ಗೆ ಆಸಕ್ತಿ ಇರುವಂತೆ ತೋರಿಸಿಕೊಳ್ಳುವ ಕೌಶಲ್ಯಗಳನ್ನು ಕಲಿಸಲಾಯಿತು.

ಆಸ್ಟ್ರೇಲಿಯಾ ಟು ವಾಷಿಂಗ್ಟನ್‌:

ಈ ‘ಗನ್‌ ರೈಟ್ಸ್‌ ಆಸ್ಟ್ರೇಲಿಯಾ’ದಿಂದ ಎನ್‌ಆರ್‌ಎಗೆ ಹೋಗಿ ಅಲ್ಲಿ ಆಸ್ಟ್ರೇಲಿಯಾದ ಕಠಿಣ ಶಸ್ತ್ರಾಸ್ತ್ರ ಕಾಯ್ದೆಯನ್ನು ಟೀಕಿಸುವುದು; ಹೀಗೆ ಮಾತನಾಡುತ್ತಾ ಎನ್‌ಆರ್‌ಎ ಅಧಿಕಾರಿಗಳಿಗೆ ಹತ್ತಿರವಾಗಿ ಅವರ ಬಾಯಿಯಿಂದ ಕೆಲವು ರಹಸ್ಯಗಳನ್ನು ಬಾಯಿ ಬಿಡಿಸುವ ಗುರಿ ಹಾಕಿಕೊಳ್ಳಲಾಯಿತು.

ಅಮೆರಿಕಾದಲ್ಲಿ ಹತ್ಯಾಕಾಂಡಗಳು ನಡೆದಾಗ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ, ಅಮೆರಿಕಾ ಕಾಂಗ್ರೆಸ್‌ ಸದಸ್ಯರ ಮೇಲೆ ಹೇಗೆ ಒತ್ತಡ ಹೇರುತ್ತಾರೆ, ಮಾಧ್ಯಮಗಳನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿತ್ತು.

ಮೊದಲಿಗೆ ಕೆಂಟುಕಿಯ ಲೂಯಿವಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಆರ್‌ಎ ಕಾರ್ಯಗಾರಕ್ಕೆ ಅಲ್‌ಜಝೀರಾ ಪತ್ರಕರ್ತ ತೆರಳಿ, ‘ಆಸ್ಟ್ರೇಲಿಯಾದಲ್ಲಿ ಭಯದ ವಾತಾವರಣ ಇದೆ. ಬಂದೂಕು ಇದ್ದಲ್ಲಿ ನಾವೆಲ್ಲರೂ ಸುರಕ್ಷಿತವಾಗಿರಬಹುದು. ಹಾಗಾಗಿ ನಾನು ಬಂದೂಕುಗಳ ಪರ ಲಾಬಿ ನಡೆಸುತ್ತಿದ್ದೇನೆ’ ಎಂದು ತನ್ನ ನಿಲುವು ಪ್ರಕಟಿಸಿದ. ಹಾಗೆ ಹೇಳುತ್ತಿದ್ದಂತೆ ಅಲ್ಲಿದ್ದ ಎನ್‌ಆರ್‌ಎ ಅಧಿಕಾರಿಗಳ ಮುಖ ಅರಳಿತ್ತು. ಕೈ ಕುಲುಕಿ ಹಲವರು ಆತನ ಬೆನ್ನುತಟ್ಟಿದ್ದರು.

ಆತ ಹಲವು ಬಾರಿ ಆಸ್ಟ್ರೇಲಿಯಾ ಮತ್ತು ವಾಷಿಂಗ್ಟನ್‌ ನಡುವೆ ಪ್ರಯಾಣ ಬೆಳೆಸಿದ ನಂತರ ಸಂಬಂಧಗಳು ಮತ್ತಷ್ಟು ಗಟ್ಟಿಯಾದವು. ಉನ್ನತ ವ್ಯಕ್ತಿಗಳ ಭೇಟಿ ಸಾಧ್ಯವಾಯಿತು. ಬಂದೂಕು ಹೊಂದುವುದರ ಪರವಾಗಿ ವಾದಿಸುತ್ತಾ ಬಂದ ಅಮೆರಿಕಾ ಅಧ್ಯಕ್ಷರ ಪುತ್ರ ಜೂನಿಯರ್‌ ಡೊನಾಲ್ಡ್‌ ಟ್ರಂಪ್‌, ಎನ್ಆರ್‌ಎ ಮುಖ್ಯಸ್ಥ ವೈನೆ ಲಾ ಪಿರ್ರೆ ಪರಿಚಯವಾಯಿತು.

ಹೀಗಿರುವಾಗಲೇ ತನಿಖಾ ತಂಡ ತೆಗೆದುಕೊಂಡು ಒಂದು ನಿರ್ಧಾರ ವರದಿಯ ಇನ್ನೊಂದು ಆಯಾಮವನ್ನು ಮುಂದಿಟ್ಟಿತು. ಇಲ್ಲಿಂದ ನಂತರ ನಡೆದಿದ್ದು ತನಿಖಾ ವರದಿಯ ಎರಡನೇ ಅಧ್ಯಾಯ.

ಅಧ್ಯಾಯ 2:

ವಾಷಿಂಗ್ಟನ್‌ ಸಂಬಂಧ ಗಟ್ಟಿಯಾಗುತ್ತಿದ್ದಂತೆ ಅಲ್‌ಜಝೀರಾ ಪತ್ರಕರ್ತ ಮತ್ತೊಂದು ದಾಳ ಉರುಳಿಸಿದ. ಆಸ್ಟ್ರೇಲಿಯಾದಲ್ಲಿ ಬಂದೂಕು ಸಂಸ್ಕೃತಿಯ ಪರವಾಗಿದ್ದ ಪೌಲಿನ್‌ ಹ್ಯಾನ್ಸನ್‌ ಅವರ ಬಲಪಂಥೀಯ ಪಕ್ಷ ‘ಒನ್‌ ನೇಷನ್‌’ ಸಂಪರ್ಕಿಸಿದ. ಪತ್ರಕರ್ತನ ಎನ್‌ಆರ್‌ಎ ಜತೆಗಿದ್ದ ಸಂಬಂಧ ಕೇಳಿ ಈ ಪಕ್ಷದ ಪದಾಧಿಕಾರಿಗಳ ಮುಖ್ಯಸ್ಥ ಜೇಮ್ಸ್‌ ಅಶ್ಬಿ ಉಬ್ಬಿ ಹೋದರು. ಉತ್ಸುಕರಾದ ಅವರು ಎನ್‌ಆರ್‌ಎ ಪದಾಧಿಕಾರಿಗಳನ್ನು ಭೇಟಿ ಮಾಡಿಸಲು ದುಂಬಾಲು ಬಿದ್ದರು.

ಕೊನೆಗೆ ಜೇಮ್ಸ್‌ ಅಶ್ಬಿ ಮತ್ತು ಸ್ಟೀವ್‌ ಡಿಕ್ಸನ್‌ ಎಂಬ ಇನ್ನೋರ್ವ ಪಕ್ಷದ ಪದಾಧಿಕಾರಿಗೆ ಎನ್‌ಆರ್‌ಎ ಪದಾಧಿಕಾರಿಗಳನ್ನು ಪತ್ರಕರ್ತ ಪರಿಚಯಿಸಿದ. ಅವರ ಮೊದಲ ಭೇಟಿ ವಾಷಿಂಗ್ಟನ್‌ನಲ್ಲಿ ನಡೆಯಿತು.

ಒನ್‌ ನೇಷನ್‌ನ ಜೇಮ್ಸ್‌ ಅಶ್ಬಿ ಮತ್ತು ಸ್ಟೀವ್‌ ಡಿಕ್ಸನ್‌ ಜತೆ ಮಧ್ಯದಲ್ಲಿ ಕುಳಿತಿರುವ ಅಲ್‌ಜಜೀರಾ ಪತ್ರಕರ್ತ ರೋಜರ್‌ ಮುಲ್ಲರ್. 

ಎನ್‌ಆರ್‌ಎ ಪದಾಧಿಕಾರಿಗಳನ್ನು ಕಂಡು ಖುಷಿಯಾದ ಒನ್‌ ನೇಷನ್‌ ಪಕ್ಷದ ರಾಜಕಾರಣಿಗಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು.

‘ಶೂಟೌಟ್‌ಗಳು ನಡೆದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?’ ಎಂಬುದು ಮೊದಲ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರಿಸಿದ ಎನ್‌ಆರ್‌ಎ ಅಧಿಕಾರಿಗಳು, ಮಾಧ್ಯಮಗಳು ‘ಮೊದಲಿಗೆ ಕೇಳಿದಾಗ ಏನೂ ಉತ್ತರಿಸುವುದಿಲ್ಲ’ ಎಂದು ಬಿಟ್ಟರು. ನಂತರ ಕೇಳಿದಾಗ, ‘ಇದು ಅಪರಾಧ’ ಎನ್ನುತ್ತೇವೆ. ಮತ್ತೂ ಪ್ರಶ್ನೆ ಕೇಳಿದರೆ, ‘ಮಕ್ಕಳ ಗೋರಿಯ ಮೇಲೆ ನಿಮ್ಮ ರಾಜಕೀಯ ಅಜೆಂಡಾ ಹರಡಲು ನಿಮಗೆಷ್ಟು ಧೈರ್ಯ ಎಂದು ಅವರನ್ನೇ ಅವಮಾನಿಸುತ್ತೇವೆ,’ ಎನ್ನುವ ಸಿದ್ಧ ಮಾದರಿಯ ಪ್ರತಿಕ್ರಿಯೆಗಳನ್ನು ಮುಂದಿಟ್ಟರು.

ಹೀಗೊಂದು ಉತ್ತರ ಕೇಳಿ ಒನ್‌ ನೇಷನ್‌ ರಾಜಕಾರಣಿಗಳ ಖುಷಿಗೆ ಪಾರವೇ ಇರಲಿಲ್ಲ. ಆಸ್ಟ್ರೇಲಿಯಾದಲ್ಲಿ 1996ರಲ್ಲಿ ನಡೆದ ಶೂಟೌಟ್‌ನಲ್ಲಿ 36 ಜನರು ಅಸು ನೀಗಿದ ನಂತರ ದೇಶದಲ್ಲಿ ಅಟೋಮ್ಯಾಟಿಕ್‌, ಸೆಮಿ ಅಟೋಮ್ಯಾಟಿಕ್‌ ಮತ್ತು ಶಾಟ್‌ಗನ್‌ಗಳನ್ನು ನಿಷೇಧಿಸಲಾಗಿತ್ತು. ಇದನ್ನು ಬದಲಾಯಿಸಬೇಕು ಎಂಬುದು ಒನ್‌ ನೇಷನ್‌ ಮುಖ್ಯಸ್ಥ ಸೆನೆಟರ್‌ ಪೌಲಿನ್‌ ಹಾನ್ಸನ್‌ ಹೆಬ್ಬಯಕೆಯಾಗಿತ್ತು. ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಅವರಿಗೆ ಸಿಕ್ಕಿರಲಿಲ್ಲ. ಇದೀಗ ಎನ್‌ಆರ್‌ಎ ರೂಪದಲ್ಲಿ ಅದಕ್ಕೆ ಬೇಕಾದ ಸ್ಪಷ್ಟತೆ ಸಿಕ್ಕಿತ್ತು.

ಆದರೆ ಒನ್‌ ನೇಷನ್‌ ಅಷ್ಟಕ್ಕೇ ನಿಲ್ಲಲಿಲ್ಲ. ತಮ್ಮ ಪಕ್ಷಕ್ಕೆ ಎನ್‌ಆರ್‌ಎನಿಂದ ಧನ ಸಹಾಯ ಪಡೆದುಕೊಳ್ಳಲು ಅಶ್ಬಿ ಮತ್ತು ಡಿಕ್ಸನ್‌ ಮುಂದಾದರು. ಎನ್‌ಆರ್‌ಎ ಮುಂದೆ 2 ಕೋಟಿ ಡಾಲರ್‌ಗಳ ರಾಜಕೀಯ ದೇಣಿಗೆಗೆ ಬೇಡಿಕೆ ಇಟ್ಟರು. ಪ್ರತಿಯಾಗಿ ಈ ಹಣದಲ್ಲಿ ಹೆಚ್ಚಿನ ಸೆನೆಟರ್‌ಗಳನ್ನು ಆಯ್ಕೆ ಮಾಡಿ ದೇಶದ ಬಂದೂಕು ಕಾನೂನನ್ನು ಬದಲಾಯಿಸುತ್ತೇವೆ ಎಂಬ ಭರವಸೆ ನೀಡಿದರು. ಪರೋಕ್ಷವಾಗಿ ಎನ್‌ಆರ್‌ಎಗೆ ಆಸ್ಟ್ರೇಲಿಯಾದಲ್ಲಿ ಹೊಸ ಮಾರುಕಟ್ಟೆ ಸೃಷ್ಟಿಸಿಕೊಡುವ ಆಫರ್‌ನ್ನು ಅವರು ನೀಡಿದ್ದರು.

ಈ ಸಂದರ್ಭದಲ್ಲಿ ಗನ್‌ ಲಾಬಿಯ ಸೂಕ್ಷ್ಮಗಳ ಪಾಠವನ್ನು ಎನ್‌ಆರ್‌ಎ ಅಧಿಕಾರಿಗಳು ಒನ್‌ ನೇಷನ್‌ ಪಕ್ಷದವರಿಗೆ ಒಪ್ಪಿಸಿದ್ದರು. ಮಾಧ್ಯಮಗಳಲ್ಲಿರುವ ವರದಿಗಾರರ ಮೂಲಕ ದರೋಡೆಗೆ ಒಳಗಾದವರು, ಹಲ್ಲೆಗೆ ಗುರಿಯಾದವರ ಬಗ್ಗೆ ವರದಿಗಳನ್ನು ಬರೆಸುವುದು. ಈ ಮೂಲಕ ಬಂದೂಕಿನ ಅಗತ್ಯವನ್ನು ಸಾರಬೇಕು ಎಂದು ತಿಳಿಸಿ ಹೇಳಿದ್ದರು. ಇದರ ಜತೆಗೆ ನಾವು ಸ್ಥಳೀಯ ಪತ್ರಿಕೆಗಳಲ್ಲಿ ಬಂದೂಕು ಪರ ಅತಿಥಿಗಳಿಂದ ಅಂಕಣವನ್ನೂ ಬರೆಸುತ್ತಿದ್ದೆವು ಎಂಬ ವಿವರಗಳನ್ನು ಎನ್‌ಆರ್‌ಎ ಅಧಿಕಾರಿಗಳು ನೀಡಿದ್ದರು.

ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆಗೆ ಬಂದೂಕು ಹೇಗೆ ಅನುಕೂಲ ಎಂಬ ವಿಡಿಯೋಗಳನ್ನೂ ನಾವು ಹರಿ ಬಿಡುತ್ತೇವೆ ಎಂದು ಅವರು ವಿವರಿಸಿದ್ದರು. ‘ಆಫ್ರಿಕಾದಿಂದ ಬಂದವರು ಆಸ್ಟ್ರೇಲಿಯಾದಲ್ಲಿ ಮನೆಗಳನ್ನು ದರೋಡೆ ಮಾಡುತ್ತಾರೆ’ ಎಂಬ ವಿವರಗಳನ್ನು ಡಿಕ್ಸನ್‌ ನೀಡಿದಾಗ, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವಾಗ ‘ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಿಲ್ಲ’ ಎಂಬುದನ್ನು ಉಲ್ಲೇಖಿಸುವಂತೆ ತಿಳಿಸಿದ್ದರು.

ಹೀಗೆ ಎಳೆ ಎಳೆಯಾಗಿ ಬಂದೂಕು ಲಾಬಿ ಹೇಗೆ ಕೆಲಸ ಮಾಡುತ್ತದೆ ಎಂಬ ವಿವರಗಳನ್ನು ಅಲ್‌ಜಝೀರಾ ಸ್ಟಿಂಗ್‌ ಆಪರೇಷನ್‌ನಲ್ಲಿ ಬಿಚ್ಚಿಟ್ಟಿದೆ.

ಇದು ಬಹಿರಂಗವಾಗುತ್ತಿದ್ದಂತೆ ಆಸ್ಟ್ರೇಲಿಯಾದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, “ಆಸ್ಟ್ರೇಲಿಯಾ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಅಮೆರಿಕಾದ ಗನ್‌ ಲಾಬಿಗಳಿಂದ ಹಣ ಸ್ವೀಕರಿಸುವ ಬೆಳವಣಿಗೆ ಅತ್ಯಂತ ಅಪಾಯಕಾರಿ,” ಎಂದಿದ್ದಾರೆ. “ಈ ಕಾರಣಕ್ಕಾಗಿ ರಾಜಕೀಯ ಪಕ್ಷಗಳು ವಿದೇಶಿ ದೇಣಿಗೆ ಪಡೆಯುವುದನ್ನು ಅಪರಾಧವನ್ನಾಗಿಸಿದ್ದೇವೆ,” ಎಂದು ಅವರು ವಿವರಿಸಿದ್ದಾರೆ.

ಇವಿಷ್ಟು ಸದ್ಯದ ಬೆಳವಣಿಗೆಗಳು. ತನಿಖಾ ವರದಿಯ ಎರಡನೇ ಭಾಗ ಇನ್ನಷ್ಟೇ ಹೊರ ಬರಬೇಕಿದ್ದು, ಅದರಲ್ಲಿ ಅಮೆರಿಕಾ ರಾಜಕಾರಣದಲ್ಲಿ ತಲ್ಲಣ ಎಬ್ಬಿಸುವ ಅಂಶಗಳಿಗೆ ಎಂಬ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.

ನರಮೇಧವನ್ನು ಮಾರಾಟ ಮಾಡುವುದು ಹೇಗೆ?:

ಕೃಪೆ: ಅಲ್‌ ಜಝೀರಾ