Home ಅಂತಾರಾಷ್ಟ್ರೀಯ ‘ಐಸಿಸ್‌ ಯುಗಾಂತ್ಯ’: ಕಮರಿದ ಕ್ಯಾಲಿಫೇಟ್‌ ಕನಸು, ಸಿರಿಯಾದಿಂದ ಹೊರಬಿದ್ದ ಮಹತ್ವದ ಘೋಷಣೆ

‘ಐಸಿಸ್‌ ಯುಗಾಂತ್ಯ’: ಕಮರಿದ ಕ್ಯಾಲಿಫೇಟ್‌ ಕನಸು, ಸಿರಿಯಾದಿಂದ ಹೊರಬಿದ್ದ ಮಹತ್ವದ ಘೋಷಣೆ

SHARE

‘ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಆಂಡ್‌ ದಿ ಲೆವೆನೆಂಟ್‌’ ಅಥವಾ ಸಂಕ್ಷಿಪ್ತವಾಗಿ ಐಸಿಲ್‌ (ಐಸಿಸ್‌) ಹುಟ್ಟಡಗಿಸಿರುವುದಾಗಿ ಅಮೆರಿಕಾ ಬೆಂಬಲಿತ ಸಿರಿಯಾದ ಹೋರಾಟಗಾರರು ಘೋಷಿಸಿದ್ದಾರೆ.

ಈ ಮೂಲಕ ಒಂದು ಕಾಲದಲ್ಲಿ ಸಿರಿಯಾ ಮತ್ತು ಇರಾಕ್‌ನ ಮೂರನೇ ಒಂದು ಭಾಗವನ್ನು ಆಳುತ್ತಿದ್ದ ಉಗ್ರ ಸಂಘಟನೆ ವಿರುದ್ಧದ 4 ವರ್ಷಗಳ ಕಾದಾಡ ಅಂತ್ಯಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಇತ್ತೀಚೆಗೆ ಒಂದೊಂದೇ ನಗರಗಳನ್ನು ಕಳೆದುಕೊಂಡು ಬಂದಿದ್ದ ಐಸಿಸ್ ಶಸ್ತ್ರಧಾರಿಗಳು ಕೊನೆಯದಾಗಿ ಸಿರಿಯಾದ ಬಘೋಜ್‌ ಗ್ರಾಮದಲ್ಲಿ ನೆಲೆ ನಿಂತಿದ್ದರು. ಇದರ ಸತತ ಬಾಂಬ್‌ ದಾಳಿ ನಡೆಸಲಾಗಿದ್ದು ಅಲ್ಲೀಗ ಸ್ಫೋಟಕಗಳು ಸೃಷ್ಟಿಸಿದ ಕಂದಕಗಳು, ಬಂಡುಕೋರರ ಧ್ವಂಸವಾದ ಶೆಡ್‌ಗಳು ಮಾತ್ರ ಕಾಣಿಸುತ್ತಿವೆ.

ಐಸಿಸ್‌ಗೆ ಸೇರಿದ ಕಪ್ಪು ಬಾವುಟ ಕೆಸರಿನಲ್ಲಿ ಹೂತು ಹೋಗಿದ್ದರೆ ಸಿರಿಯನ್‌ ಡೆಮಾಕ್ರಾಟಿಕ್‌ ಫೋರ್ಸ್‌ (ಎಸ್‌ಡಿಎಫ್‌) ಬಾವುಟ ಎತ್ತರದ ಕಟ್ಟಡವೊಂದರ ಮೇಲೆ ಹಾರಾಡಿದೆ. ಈ ಮೂಲಕ ಐಸಿಎಲ್‌ ಸೋತು ಸುಣ್ಣವಾಗಿದೆ ಎಂಬುದನ್ನು ಎಸ್‌ಡಿಎಫ್‌ ವಕ್ತಾರ ಮುಸ್ತಾಫ ಬಾಲಿ ಟ್ಟಿಟರ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕುರ್ದಿಶ್‌ ನೇತೃತ್ವದ ಎಸ್‌ಡಿಎಫ್‌ ಪಡೆಗಳ ಈ ಕೊನೆಯ ಹೋರಾಟದಲ್ಲಿ ನೂರಾರು ಜನರು ಸಾವನ್ನಪ್ಪಿದ್ದರೆ, ಸಾವಿರಾರು ಜನರು ಊರು ಬಿಟ್ಟಿದ್ದರು. ಆದರೆ ಐಸಿಎಸ್‌ ನಾಯಕ ಅಬು ಬಕರ್‌ ಅಲ್‌ ಬಗ್ದಾದಿ ಸಾವು-ಬದುಕಿನ ಬಗ್ಗೆ ಯಾವುದೇ ವಿವರಗಳು ಸಿಕ್ಕಿಲ್ಲ.

ಎಸ್‌ಡಿಎಫ್‌ ಕೂಡ ಶಸಸ್ತ್ರ ಬಂಡುಕೋರ ಸಂಘಟನೆಯಾಗಿದ್ದು, ಸಿರಿಯಾದ ಒಂದು ಭಾಗ (ಮ್ಯಾಪ್‌ನ ಮೇಲ್ಭಾಗದ ಭೂ ಪ್ರದೇಶ) ದಲ್ಲಿ ತನ್ನ ಆಳ್ವಿಕೆ ಸ್ಥಾಪಿಸಲು ಹೊರಟಿದೆ.

ಈ ಮೂಲಕ ಮುಸ್ಲಿಂ ಧರ್ಮಗುರುವಿನ ಆಳ್ವಿಕೆಗೆ ಒಳಪಟ್ಟ ‘ಕ್ಯಾಲಿಫೇಟ್‌’ ರಾಜ್ಯವನ್ನು ಸ್ಥಾಪಿಸುವ ಐಸಿಎಲ್‌ ಗುಂಪಿನ ಕನಸು ನುಚ್ಚುನೂರಾಗಿದೆ. ನಾಲ್ಕು ವರ್ಷದ ಹಿಂದೆ ಇದೇ ಗುಂಪು ಸುಮಾರು 80 ಲಕ್ಷ ಜನರನ್ನು ಆಳುತ್ತಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಐಸಿಸ್‌ ನಿರ್ನಾಮವಾಗಿದ್ದರೂ ಚದುರಿದ ಒಂದಷ್ಟು ತಂಡಗಳು ಅಲ್ಲಲ್ಲಿ ಉಳಿದುಕೊಂಡಿರಬಹುದು ಎಂದುಕೊಳ್ಳಲಾಗಿದೆ. ಜತೆಗೆ ಸಿರಿಯಾ ಮತ್ತು ಇರಾಕ್‌ನಲ್ಲಿ ಕೆಲವು ಸ್ಲೀಪರ್‌ ಸೆಲ್‌ಗಳೂ ಕಾರ್ಯಚರಿಸುತ್ತಿರಬಹುದು ಎಂಬ ಅನುಮಾನಗಳಿವೆ.

ಇನ್ನೊಂದುಕಡೆ ಸಿರಿಯಾ ಮತ್ತು ಇರಾಕ್‌ನಲ್ಲಿ ಐಸಿಸ್‌ ನಾಶವಾಗಿದ್ದರೂ ಈಜಿಪ್ಟ್‌ನ ಸಿನಾಯ್‌ ಪೆನಿನ್ಸುಲಾ, ಅಫ್ಘಾನಿಸ್ತಾನ ಮತ್ತು ಇದರ ದೇಶಗಳಲ್ಲಿರುವ ಐಸಿಸ್‌ನ ಘಟಕಗಳು ಇನ್ನೂ ಜೀವಂತವಾಗಿವೆ. ಜತೆಗೆ ಈ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡವರು ಒಂಟಿ ನರಿ (ಲೋನ್‌ ವೂಲ್ಫ್‌) ಗಳ ರೀತಿ ಅಲ್ಲಲ್ಲಿ ದಾಳಿ ಮಾಡುವ ಅಪಾಯಗಳೂ ಇವೆ.

ಐಸಿಸ್‌ ಹುಟ್ಟು ಮತ್ತು ನಾಶ:

2006ರಲ್ಲಿ ಅಲ್‌ಖೈದಾದ ಮೊಳಕೆಯಂತೆ ಐಸಿಸ್‌ ಇರಾಕ್‌ನಲ್ಲಿ ಹುಟ್ಟಿಕೊಂಡಿತ್ತು. 2003ರಲ್ಲಿ ಅಮೆರಿಕಾ ಇರಾಕ್‌ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಬಿಕ್ಕಟ್ಟಿನ ಲಾಭವನ್ನು ಇದು ಪಡೆದುಕೊಂಡಿತು. ಪ್ರಮುಖ ಅಲ್‌ಖೈದಾ ನಾಯಕರೇ ಮುಂದೆ ನಿಂತು ಇದನ್ನು ಆರಂಭಿಸಿದ್ದರು.

ಈ ಅವಧಿಯಲ್ಲಿ ಅಬ್ಬರಿಸಿದ್ದ ಐಸಿಸ್‌ ಇರಾಕ್‌ ರಾಜಧಾನಿ ಬಾಗ್ದಾದ್‌ನ ಮೇಲೆ ಬಾಂಬ್‌ಗಳ ಸುರಿಮಳೆ ಸುರಿಸಿತ್ತು. ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲಿತ ಬುಡಕಟ್ಟು ಬಂಡುಕೋರ ನಾಯಕರು ಮತ್ತು ಅಮೆರಿಕಾದ ಸೇನಾ ನೆಲೆಗಳ ಮೇಲೆ ನಿರಂತರ ದಾಳಿಗಳನ್ನು ನಡೆಸಿತ್ತು.

ನಂತರ ಇಲ್ಲಿಂದ ಐಸಿಸ್‌ನ್ನು ಹೊರಗಟ್ಟಲಾಯಿತು. ಬಳಿಕ ಇರಾಕ್‌ನ ಎರಡನೇ ಅತೀ ದೊಡ್ಡ ನಗರ ಮೊಸುಲ್‌ನ್ನು ಅದು ತನ್ನ ನೆಲೆಯಾಗಿಸಿಕೊಂಡಿತ್ತು. 2010ರ ಸುಮಾರಿಗೆ ಅಬು ಬಕರ್ ಅಲ್‌ ಬಗ್ದಾದಿ ಈ ಸಂಘಟನೆ ಮುಖ್ಯಸ್ಥನಾಗಿ ಗುರುತಿಸಿಕೊಂಡಿದ್ದ.

ಬಗ್ದಾದಿ ಬರುತ್ತಿದ್ದಂತೆ ಸಂಘಟನೆ ಯುದ್ಧ ಪೀಡಿತ ಇರಾಕ್‌ ಮತ್ತು ಸಿರಿಯಾದಲ್ಲಿ ನೆಲೆ ಕಂಡುಕೊಳ್ಳಲು ಆರಂಭಿಸಿತು. ಈ ಸಂದರ್ಭದಲ್ಲಿ ತನ್ನ ಪ್ರಭಾವ ಬೆಳೆಸಿದ್ದಲ್ಲದೆ, ಪ್ರಬಲ ಸೇನಾ ಶಕ್ತಿಯಾಗಿಯೂ ಸಂಘಟನೆ ಬೆಳೆದಿ ನಿಂತಿತ್ತು.

ಆದರೆ ಹೀಗೆ ಬೆಳೆದ ಸಂಘಟನೆ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿತು. ರಕ್ಕಾ ಎಂಬ ಸಿರಿಯಾದ ನಗರದಲ್ಲಿ ಸಿರಿಯಾ ಅಧ್ಯಕ್ಷ ಅಸದ್ ವಿರೋಧಿ ಬಣದಲ್ಲಿ ನಿಂತಿದ್ದ ಫ್ರೀ ಸಿರಿಯನ್‌ ಆರ್ಮಿಯ ಎರಡು ಬಣಗಳನ್ನು ಐಸಿಸ್‌ ಹೊಸಕಿಹಾಕಿತು. ನರ ಮೇಧಗಳನ್ನು ನಡೆಸಿ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿತು. ವಿದೇಶಿ ಪತ್ರಕರ್ತರು, ಅಂತರಾಷ್ಟ್ರೀಯ ನೆರವು ಕಾರ್ಯಕರ್ತರನ್ನು ಜೀವಂತವಾಗಿ ಸುಟ್ಟುಹಾಕಿತು. ಅಲ್ಲಿಗೆ ಐಸಿಸ್‌ನ ಪತನ ಆರಂಭವಾಗಿತ್ತು.

ಮುಂದೆ 2014ರಲ್ಲಿ ಇರಾಕ್‌ನ ಸಿಂಜಾರ್‌ ಪ್ರದೇಶದಲ್ಲಿ ಸಾವಿರಾರು ಮಹಿಳೆಯರು, ಯುವತಿಯನ್ನು ಒತ್ತೆ ಇಟ್ಟುಕೊಂಡು ಐಸಿಸ್‌ ಲೈಂಗಿಕವಾಗಿ ಬಳಸಿಕೊಂಡಿತು. ಅದರಲ್ಲಿ ಹೆಚ್ಚಿನವರು ಇಂದಿಗೂ ನಾಪತ್ತೆಯಾಗಿದ್ದಾರೆ. 2015ರ ಪ್ಯಾರಿಸ್‌ ದಾಳಿ ಸೇರಿದಂತೆ ಹಲವು ದಾಳಿಗಳನ್ನು ನಡೆಸಿತು.

ನಂತರ ನಡೆದಿದ್ದೆಲ್ಲಾ ಇತಿಹಾಸ. ಇರಾಕ್‌, ಸಿರಿಯಾ ಎಲ್ಲೆಲ್ಲೂ ಬಂಡುಕೋರರು, ವಿದೇಶಿ ಸೇನೆಗಳು ಐಸಿಸ್‌ ಮೇಲೆ ಮುಗಿಬಿದ್ದವು. ಹೀಗೆ ಎಲ್ಲಾ ಭಾಗಗಳನ್ನೂ ಕಳೆದುಕೊಂಡು ಕೊನೆಗೆ ಕೊನೆಗೆ ಸಿರಿಯಾದ ಸಣ್ಣ ಪಟ್ಟಣವೊಂದರಲ್ಲಿ ಉಸಿರು ಉಳಿಸಿಕೊಂಡಿತ್ತು. ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಾಣಿಯಾಗಿಸಿಕೊಂಡು ತನ್ನ ನೆಲೆ ಉಳಿಸಿಕೊಳ್ಳಲು ಹೋರಾಡುತ್ತಿತ್ತು.

ಆದರೆ ಇಲ್ಲಿಗೂ ನುಗ್ಗಿದ ಅಮೆರಿಕಾ ಬೆಂಬಲಿತ ಎಸ್‌ಡಿಎಫ್‌ 1,00,000 ಕ್ಕೂ ಹೆಚ್ಚು ಬಾಂಬ್‌ಗಳನ್ನು ಸುರಿದು ಈ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಹೋರಾಟದಲ್ಲಿ ಲೆಕ್ಕವಿಲ್ಲದಷ್ಟು ಬಂದೂಕುಧಾರಿಗಳು ಸಾವನ್ನಪ್ಪಿದ್ದರೆ, ಅಷ್ಟೇ ಪ್ರಮಾಣದಲ್ಲಿ ನಾಗರಿಕರೂ ಅಸುನೀಗಿರುವುದು ದುರಂತ.