Home Feature Story ಫಿಲಿಪ್ಪೀನ್ಸ್‌ನಲ್ಲಿ ಮೃತಪಟ್ಟ ತಿಮಿಂಗಿಲದ ಹೊಟ್ಟೆಯಲ್ಲಿತ್ತು 40 ಕೆ.ಜಿ ಪ್ಲಾಸ್ಟಿಕ್!

ಫಿಲಿಪ್ಪೀನ್ಸ್‌ನಲ್ಲಿ ಮೃತಪಟ್ಟ ತಿಮಿಂಗಿಲದ ಹೊಟ್ಟೆಯಲ್ಲಿತ್ತು 40 ಕೆ.ಜಿ ಪ್ಲಾಸ್ಟಿಕ್!

SHARE

ಶನಿವಾರ ಫಿಲಿಪ್ಪೀನ್ಸ್‌ನ ಮಿಂಡಾನೊ ದ್ವೀಪದ ಕಡಲ ತೀರದಲ್ಲಿ ಬೃಹತ್‌ ತಿಮಿಂಗಿಲದ ಶವ ಪತ್ತೆಯಾಗಿತ್ತು. ಇದರ ಮರಣೋತ್ತರ ಪರೀಕ್ಷೆ ನಡೆಸಿದಾಗ ತಿಮಿಂಗಿಲದ ಸಾವಿಗೆ ಬರೋಬ್ಬರಿ 40 ಕೆ.ಜಿ ತೂಕದ ಪ್ಲಾಸ್ಟಿಕ್ ಕಾರಣ ಎಂಬ ಅಂಶ ಬಯಲಾಗಿದೆ.

ಮಿಂಡಾನೋ ದ್ವೀಪದ ದಕ್ಷಿಣ ಪ್ರಾಂತ್ಯದ ಕಂಪೋಸ್ಟೆಲಾ ಕಣಿವೆಯ ಕಡಲ ತೀರದಲ್ಲಿ ಶನಿವಾರ ಮೃತ ತಿಮಿಂಗಿಲವೊಂದು ಬಂದು ಬಿದ್ದಿತ್ತು. ಭಾನುವಾರ ಈ ಮೃತ ತಿಮಿಂಗಿಲದ ಶವಪರೀಕ್ಷೆ ನಡೆಸಲಾಗಿದ್ದು, ಅದರ ಹೊಟ್ಟೆಯಲ್ಲಿ ಕಿರಾಣಿ ಚೀಲಗಳು, ಪ್ಲಾಸ್ಟಿಕ್ ಕಸದ ಚೀಲಗಳು, ಬಾಳೆ ತೋಟದಲ್ಲಿ ಉಪಯೋಗಿಸುವ 4 ಹಾಗೂ 16 ಪ್ಲಾಸ್ಟಿಕ್‌ ಅಕ್ಕಿ ಮೂಟೆಗಳು ಪತ್ತೆಯಾಗಿವೆ.

ಹೊಟ್ಟೆಯಲ್ಲಿ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಅಂಶ ಶೇಖರಣೆಯಾಗಿದ್ದರಿಂದ ಜೀರ್ಣ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಆಹಾರ ಸೇವಿಸಲಾಗಿದೆ ತಿಮಿಂಗಿಲ ನಿರ್ಜಲೀಕರಣಕ್ಕೆ ಒಳಗಾಗಿತ್ತು. ಕೊನೆಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿ ರಕ್ತವಾಂತಿ ಮಾಡಿ ಕೊನೆಯುಸಿರೆಳೆದಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ‘ವಾಷಿಂಗ್ಟನ್ ಪೋಸ್ಟ್‌’ಗೆ ಪ್ರತಿಕ್ರಿಯೆ ನೀಡಿರುವ ಡಿ. ಬೋನ್ ಕಲೆಕ್ಟರ್ ಮ್ಯೂಸಿಯಂ ಇಂಕ್‌ನ ಸ್ಥಾಪಕ ಹಾಗೂ ನಿರ್ದೇಶಕ ಡ್ಯಾರೆಲ್ ಬ್ಲಾಚ್ಲೆ, “ಮರಣೋತ್ತರ ಪರೀಕ್ಷೆಯಲ್ಲಿ ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿ 40 ಕೆ.ಜಿ ಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್‌ ಇರುವುದು ಪತ್ತೆಯಾಗಿದೆ. ಅಧಿಕ ಕಾಲ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಶೇಖರಣೆಯಾದ ಕಾರಣ ಅದನ್ನು ಜೀರ್ಣಿಸಲಾಗದೆ ಪ್ರಾಣ ಬಿಟ್ಟಿದೆ,” ಎಂದು ತಿಳಿಸಿದ್ದಾರೆ.

“ಕಳೆದ ಒಂದು ವರ್ಷದ ಅವಧಿಯಲ್ಲಿ ಡಿ. ಬೋನ್ ಕಲೆಕ್ಟರ್ ಮ್ಯೂಸಿಯಂ ಸುಮಾರು 57 ತಿಮಿಂಗಿಲಗಳ ಶವ ಪರೀಕ್ಷೆ ನಡೆಸಿದೆ. ಈ ಎಲ್ಲಾ ತಿಮಿಂಗಿಲಗಳ ಸಾವಿಗೆ ಪ್ಲಾಸ್ಟಿಕ್ ಕಸವೇ ಕಾರಣವಾಗಿದೆ. ಆದರೆ ತಿಮಿಂಗಿಲದ ಹೊಟ್ಟೆಯಲ್ಲಿ ಈ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ನೋಡುತ್ತಿರುವುದು ಇದೆ ಮೊದಲು,” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಿಮಿಂಗಿಲದ ಸಾವಿಗೆ ಆಘಾತ ವ್ಯಕ್ತಪಡಿಸಿರುವ ಓಷಿಯಾನಿಕ್ ಸೊಸೈಟಿಯ ಬ್ಲೂ ಹಬಿಟ್ಸ್ ಯೋಜನಾ ವ್ಯವಸ್ಥಾಪಕ ಲಿಂಡ್ಸೆ ಮೊಹೆರ್, “ಪ್ಲಾಸ್ಟಿಕ್‌ನಿಂದಾಗಿ ದುರಂತ ಅಂತ್ಯಕಂಡ ತಿಮಿಂಗಿಲದ ಸಾವು ಮಾನವ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನಾದರೂ ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಸಮುದ್ರವನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತಗೊಳಿಸಲು ಮುಂದಾಗಬೇಕಿದೆ,” ಎಂದು ಅವರು ಕರೆ ನೀಡಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ ಪ್ಲಾಸ್ಟಿಕ್ ಮಾಲಿನ್ಯ:

ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಹೊಂದಿರುವ ದೇಶಗಳಲ್ಲಿ ಫಿಲಿಪ್ಪೀನ್ಸ್‌ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ದ್ವೀಪ ರಾಷ್ಟ್ರದ ಸಮುದ್ರ ಪ್ರದೇಶ ಸಂಪೂರ್ಣ ಮಲಿನವಾಗಿದೆ. ಇದೇ ಕಾರಣಕ್ಕೆ ಇಲ್ಲಿನ ಸರಕಾರ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ, ಕಾನೂನನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿಲ್ಲ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೂ ಅಲ್ಲಿನ ಸರಕಾರ ಮುಂದಾಗಿಲ್ಲ.

ಪರಿಣಾಮ ಕಳೆದ ಒಂದು ದಶಕಗಳಿಂದ ಫಿಲಿಪ್ಪೀನ್ಸ್‌ನ ಕಡಲ ತೀರದಲ್ಲಿ ಅಪಾರ ಸಂಖ್ಯೆಯ ತಿಮಿಂಗಿಲಗಳು ಪ್ಲಾಸ್ಟಿಕ್ ತ್ಯಾಜ್ಯಗಳ ಕಾರಣಕ್ಕೆ ಸಾವನ್ನಪ್ಪಿವೆ. ತಿಮಿಂಗಿಲಗಳಲ್ಲದೆ ಕಡಲ ಸಸ್ತನಿಗಳಾದ ಡಾಲ್ಫಿನ್‌ಗಳು ಹಾಗೂ ಸಮುದ್ರ ಸಸ್ತನಿಗಳು (ಪರ್ಪೋಸಿಸ್‌) ಸಹ ಸಾವನ್ನಪ್ಪುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

ಫಿಲಿಪ್ಪೀನ್ಸ್‌ನಲ್ಲಿ ಇದೇ ರೀತಿ ಪ್ಲಾಸ್ಟಿಕ್‌ ಬಳಕೆ ಮುಂದುವರಿದರೆ ಸಮುದ್ರ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಗರ ಜೀವಿಗಳು ನಾಶವಾಗುವ ಸಾಧ್ಯತೆ ಇದೆ ಎಂಬುದಾಗಿ ಅಲ್ಲಿನ ಸರಕಾರವೇ 2017ರಲ್ಲಿ ತಿಳಿಸಿತ್ತು.

ಇನ್ನು 2016ರಿಂದೀಚೆಗೆ ಯುರೋಪ್‌ ಕಡಲ ತೀರಗಳಲ್ಲಿ ಸುಮಾರು 30 ತಿಮಿಂಗಿಲಗಳು ಪ್ಲಾಸ್ಟಿಕ್ ತ್ಯಾಜ್ಯಗಳ ಸೇವನೆಯಿಂದಾಗಿ ಮೃತಪಟ್ಟಿವೆ ಎಂದು ಈ ಹಿಂದೆಯೇ ‘ನ್ಯಾಷನಲ್ ಜಿಯೋಗ್ರಾಫಿಕ್ ವರದಿ’ ಎಚ್ಚರಿಕೆ ನೀಡಿತ್ತು.

ಮತ್ತೊಂದು ಬೆಳವಣಿಗೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಸ್ಟೇನ್ ಕಡಲ ತೀರದಲ್ಲಿ ಮೃತಪಟ್ಟಿದ್ದ ಸ್ಪರ್ಮ್ ತಿಮಿಂಗಿಲದ ಹೊಟ್ಟೆಯಲ್ಲಿ 30 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿದ್ದರೆ, ಅದೇ ವರ್ಷ ಮೇ ತಿಂಗಳಲ್ಲಿ ಥಾಯ್ಲೆಂಡ್ ಕಡಲ ತೀರದಲ್ಲಿ ಪತ್ತೆಯಾಗಿದ್ದ ಪೈಲಟ್ ತಿಮಿಂಗಿಲದ ಹೊಟ್ಟೆಯಲ್ಲಿ 8 ಕೆ.ಜಿ ತೂಕದ ಪ್ಲಾಸ್ಟಿಕ್ ಪತ್ತೆಯಾಗಿತ್ತು.

ಆದರೆ ಇದೆಲ್ಲವನ್ನೂ ಮೀರಿ ಇದೀಗ ಬರೋಬ್ಬರಿ 40 ಕೆ.ಜಿ ತ್ಯಾಜ್ಯ ತಿಮಿಂಗಲದ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ನೆಪದಲ್ಲಿಯಾದರೂ ಇದೀಗ ಜಗತ್ತು ಸಮುದ್ರ ಮಾಲಿನ್ಯದ ಬಗ್ಗೆ, ಅದರಿಂದ ಕಡಲ ಜೀವಿಗಳ ಮೇಲಾಗುವ ಪರಿಣಾಮದ ಬಗ್ಗೆ ತುರ್ತಾಗಿ ಆಲೋಚಿಸಬೇಕಿದೆ.