Home Feature Story ಸಾಮರ್ಥ್ಯವಿರದ ನಾಯಕರನ್ನು ಗುರುತಿಸುವುದು ಹೇಗೆ?: ಒಂದು ಮನೋವೈಜ್ಞಾನಿಕ ಪರಿಹಾರ

ಸಾಮರ್ಥ್ಯವಿರದ ನಾಯಕರನ್ನು ಗುರುತಿಸುವುದು ಹೇಗೆ?: ಒಂದು ಮನೋವೈಜ್ಞಾನಿಕ ಪರಿಹಾರ

SHARE

ರಾಜಕಾರಣಿಗಳ ರೀತಿ, ನೀತಿ, ಅರಿವಿನ ಮಟ್ಟದಂತಹ ಸಂಗತಿಗಳು ಸದಾ ಕಾಲ ಜನಸಾಮಾನ್ಯರ ಟೀಕೆ, ತಾತ್ಸಾರದ ಭಾವಗಳನ್ನೇ ಹೊರತರುತ್ತದೆ. ಇದರಲ್ಲಿ ಹೊಸದೇನು ಇಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತ ಪ್ರತಿನಿಧಿಗಳ ಬಗ್ಗೆ ಮೊದಲು ತಿಳಿದು ಬರುವ ಸತ್ಯಸಂಗತಿ ಇದು.

ಒಮ್ಮೆ ಗೆಲ್ಲಿಸಿದ ಮತದಾರಿಂದಲೇ, “ಸಾಕು ನಿಮ್ಮ ಸಹವಾಸ, ಕ್ಷೇತ್ರದಿಂದ ತೊಲಗಿರಿ”, ಎನ್ನುವ ಕೂಗು ಚುನಾವಣೆಯ ಸಮಯದಲ್ಲಂತೂ- ಕ್ಷೀಣವಾದರೂ ಸರಿಯೇ- ಕೇಳಿಬರುತ್ತದೆ. ಆದರೆ ಎಷ್ಟೇ ಜಾಲಾಡಿಸಿದರೂ ಇಂತಹ ಕೂಗುಗಳತ್ತ ಗಮನ ಹರಿಸುವ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಅಪರೂಪ.

ಇವೇ ಇಂದಿನ ರಾಜಕೀಯ ಪಕ್ಷಗಳ ಸಮೂಹ ಪ್ರಜ್ಞೆಯಾಗಿರುವುದಂತೂ ಸ್ಪಷ್ಟ. ನಮ್ಮ ದೇಶದ ರಾಜಕಾರಣಿಗಳಲ್ಲಂತೂ ಹೈಬ್ರಿಡ್ ವಂಶಪಾರಂಪರ್ಯತೆ ಎನ್ನಬಹುದಾದಂತಹ ರಾಜಕೀಯ ಗುಣ. ಕುಟುಂಬ ಹಿರಿಯರಿಂದ ಸರಾಗವಾಗಿ ಕಿರಿಯರಿಗೆ, ಸಹಜವೆನ್ನುವ ರೀತಿಯಲ್ಲಿ, ವರ್ಗಾಯಿಸಿಕೊಳ್ಳುತ್ತದೆ; ನಾ ಸ್ಥಾನ ಬಿಟ್ಟರೆ ನೀನಷ್ಟೇ ಬರಬೇಕು ಎನ್ನುವ ಸ್ವಭಾವ.

ಈ ಸ್ವಭಾವವು ವ್ಯವಸ್ಥಿತ ಕ್ರಮದಲ್ಲಿ ಸೂಕ್ತ ವೇದಿಕೆಯ ಮೂಲಕ ಜನರ ಮುಂದೆ ಕಾಣಿಸಿಕೊಳ್ಳುವುದು. ಗಳಗಳನೇ ಅಳುವುದು, ಭಾವುಕನಾಗುವುದು, ತೀರ್ಥಯಾತ್ರೆ, ಯಜ್ಞ-ಯಾಗದಿಗಳ ಮೂಲಕ ಜನಗಮನ ಸೆಳೆಯುವ ರೋಚಕ ತಂತ್ರ. ಇವೆಲ್ಲಕ್ಕೂ ಮೊದಲೇ ತರಬೇತಿ, ಸಿದ್ಧತೆಗಳಂತೂ ಆಗಿಯೇ ಇರುತ್ತವೆ.

ಕಿಕ್ಕಿರಿದ ಸಭಿಕರೆದುರಲ್ಲಿ ಧಾರಾಕಾರವಾಗಿ ಕಣ್ಣೀರು ಹರಿದು ಬರಬೇಕು , ತಕ್ಷಣದಲ್ಲಿ ಅದನ್ನು ಚೊಕ್ಕಟವಾದ ಬಿಳಿಯ ಕರವಸ್ತ್ರದ ಅಥವಾ ಅಂಗ ವಸ್ತ್ರದ ಮೂಲಕ ಯಾರಾದರೂ ಒರೆಸಿ ಸಾಂತ್ವನ ಹೇಳುವುದು. ಇದರಲ್ಲಿರುವ ನಾಟಕೀಯತೆಯನ್ನು ಗುರುತಿಸಿ ಗುಸುಗುಸು ಅನ್ನದಿರುವವರು ಅಪರೂಪ.

ಈ ನಡೆನುಡಿಗಳು ಒಂದು ವಿಧದ ಮಾನಸಿಕ ಲಕ್ಷಣವಾಗಿದ್ದು, ಜನಪ್ರತಿನಿಧಿಯಾಗುವವರಲ್ಲಿ ಆಗಿಂದಾಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಅವಕಾಶ ಒದಗಿ ಬರುತ್ತಿದ್ದಂತೆಯೇ ಚುರುಕಾಗುವುದು ಸಹಜ.

ಇಂತಹವುಗಳಲ್ಲಿ ಮೊದಲು ಎದ್ದು ಕಾಣಿಸುವ ಲಕ್ಷಣ, ವ್ಯಕ್ತಿ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದೇ ಆಗಿರುವುದು ಸಾಮಾನ್ಯ. ಇದನ್ನು ಅತಿ ಆತ್ಮವಿಶ್ವಾಸ ಎಂದು ಗುರುತಿಸಬಹುದು. ಇದರ ವೈಶಿಷ್ಟ್ಯತೆ ಎಂದರೆ ರಾಜಕೀಯ ಸನ್ನಿವೇಶಗಳಲ್ಲಷ್ಟೇ ಪ್ರತ್ಯಕ್ಷಗೊಳ್ಳುವಂತಹ ಗುಣ. ಈ ಮಾದರಿಯ ಆತ್ಮವಿಶ್ವಾಸ ಹೆಚ್ಚಿದ್ದಷ್ಟು ತರ್ಕ, ವಿಚಾರಗಳಿಗೆ ತಲೆಬಾಗುವ ಪ್ರಶ್ನೆಯೇ ಮಿದುಳಿನಲ್ಲಿ ಉದ್ಭವಿಸದು.

ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹುಮ್ಮಸ್ಸಿನಿಂದ ಮುಂದಾಗುವವರಲ್ಲಿ ಇಂತಹದೊಂದು ಶಕ್ತಿ ಹೇರಳವಾಗಿರುತ್ತದೆ. ಜ್ಯೋತಿಷಿಗಳು, ‘ಸೇಲ್ಸಮನ್’, ನಯವಂಚಕರು ಮತ್ತು ಚಾರಿತ್ರ್ಯ ವಿಕೃತರಲ್ಲಿ ಇವು ‘ಸಮಯ ಪ್ರಜ್ಞೆ’ ಎನ್ನುವಂತೆ ಸಂದರ್ಭಕ್ಕೆ ಸರಿಯಾಗಿ ಒದಗಿಬರುತ್ತದೆ.

ಮನೋವಿಜ್ಞಾನದಲ್ಲಿ ಇದನ್ನು ಡನ್ನಿಂಗ್-ಕೃಗರ್ ಪರಿಣಾಮವೆಂದು ಗುರುತಿಸುತ್ತಾರೆ.

ಸಾಮರ್ಥ್ಯಗಳ ಕೊರತೆ ಎಷ್ಟೇ ಇದ್ದರೂ ಹಾಗೇನಿಲ್ಲವೆನ್ನುವ ಭ್ರಮೆಯಲ್ಲಿ ಮುನ್ನುಗ್ಗುವ ವ್ಯಕ್ತಿತ್ವ. ವಿಚಾರ ಮಾಡುವ ಗುಣ ಕಡಿಮೆ ಇದೆ ಎನ್ನುವುದು ಗೊತ್ತಾಗಿದ್ದರೂ ಅವುಗಳತ್ತ ಗಮನ ಹರಿಸದಿರುವುದು. ಹೀಗಾಗಿ ಮೊಂಡುತನ, ಒರಟುತನ ಮತ್ತು ಇತರೆ ಹಿತಕರ ಸನ್ನಿವೇಶಗಳನ್ನು ಬಳಸಿಕೊಂಡು ತಾವು ಸಮರ್ಥರೆಂದು ಬೀಗುವ ಪ್ರವೃತ್ತಿ.

ಅದೇ ಕೊಂಚವಾದರೂ ತನ್ನ ಸಾಮರ್ಥ್ಯ ಇಷ್ಟೇ ಎನ್ನುವಂತಹವರಲ್ಲಿ ಹೀಗೆ ಮುನ್ನುಗ್ಗುವ ಭ್ರಮೆಯಾಧಾರಿತ ಗುಣಗಳು ಕ್ಷೀಣವಾಗಿಯೇ ನಿಲ್ಲುತ್ತವೆ.

ತರ್ಕ, ವಿಚಾರಗಳು ವ್ಯಕ್ತಿಯಲ್ಲಿ ಎಚ್ಚರಿಕೆ, ಆತಂಕದ ಮನಸ್ಸನ್ನು ಸೃಷ್ಟಿಸಿ ಆ ಮೂಲಕ ಕಳವಳ, ಹಿಂಜರಿತದ ನಡೆನುಡಿಗಳನ್ನು ಹೊರತರುತ್ತವೆ. ಇಂತಹ ಸ್ವ ನಿಯಂತ್ರಣಗಳು ಇರದಿರುವವರಲ್ಲಿ ಭಯ, ಕಳಂಕ, ಆತಂಕದಂತಹ ಮಾನಸಿಕ ಸ್ಥಿತಿಗಳು ಪದೇ ಪದೇ ಬಂದು ಕಾಡಿಸುವುದಿಲ್ಲ.

ಆದುದರಿಂದಲೇ ಗಳಗಳನೆ ಅಳುವುದು, ಅಥವಾ ಮಾತಿಗೆ ತಪ್ಪಿರುವುದರಲ್ಲಿ ಕೊಂಚವೂ ಚಿಂತೆ, ಪಾಪಪ್ರಜ್ಞೆ ಅಡ್ಡವಾಗಿ ಬರುವುದಿಲ್ಲ.

ರಾಜಕಾರಣಿಗಳಲ್ಲಿ ಮೇಲೆದ್ದು ಕಾಣಿಸಿಕೊಳ್ಳುವ ಇಂತಹುದ್ದೇ ಇನ್ನೊಂದು ಗುಣವೆಂದರೆ; ಉಢಾಪೆ ಮಾತುಗಳು. ಬಾಯಿಮಾತಿನ ಮೂಲಕವೇ ಎಲ್ಲವೂ ಯಶಸ್ವಿಯಾಗಿ ನೆರವೇರಿಬಿಡಬಹುದು ಎನ್ನುವ ಅಚಲ ವಿಶ್ವಾಸ.

ಇಂತಹ ಮಾನಸಿಕ ಸ್ಥಿತಿ ಇರುವ ಚುನಾಯಿತ ಪ್ರತಿನಿಧಿಗಳೇ ಕರ್ತವ್ಯ ಭ್ರಷ್ಟ ಅಧಿಕಾರಿಗಳಿಗೆ ಶ್ರೀರಕ್ಷೆ. ಈ ಗುಣಗಳೆಲ್ಲದರ ಹಿಂದಿರುವ ಬಲವಾದ ಪ್ರೇರಕ ಶಕ್ತಿಯೆಂದರೆ, ಅಧಿಕಾರವೆಂಬ ಗುರಿ ತಲಪುವ ತನಕ ಎಡಬಿಡದೆ ಒದ್ದುಕೊಂಡು ಬರುವ ತೀವ್ರ ಬಯಕೆ ಮತ್ತು ಗೀಳು.

ಸಾವಿರಾರು ಗಹನದ ವಿಚಾರಗಳು, ಜನಸಾಮಾನ್ಯರ ಬದುಕನ್ನು ಕ್ಷಣದಲ್ಲಿ ನಿರ್ನಾಮ ಮಾಡುವಂತಹ ವಿಷಯಗಳು, ಅವು ಎಷ್ಟೇ ಜಟಿಲವಾಗಿದ್ದರೂ ಸರಿಯೇ ಅದೇನೂ ದೊಡ್ಡದಲ್ಲ ಎನ್ನುವ ಮನಸ್ಥಿತಿ ಕ್ಷಣದಲ್ಲಿ ಇವರುಗಳಲ್ಲಿ ಗಾಢವಾಗಿ ಮೂಡಿಬಿಡುತ್ತದೆ. ಆದುದರಿಂದಲೇ ಸದನ ಸಭೆಗಳಲ್ಲಿ ಸುಖ ನಿದ್ದೆ ಅನುಭವಿಸುವುದು, ಮೊಬೈಲಿನಲ್ಲಿ ತಲ್ಲೀನರಾಗುವುದು ಅಥವಾ ಸಂಪೂರ್ಣವಾಗಿ ಹಗಲುಗನಸುಗಳನ್ನು ಸವಿಯುತ್ತಲೇ ಶಾಸನಗಳನ್ನು ಮಾಡಿಬಿಡುವುದು ನಡೆಯುತ್ತದೆ.

ವ್ಯಕ್ತಿತ್ವ ಮನೋವೈಜ್ಞಾನಿಕ ಅಧ್ಯಯನಗಳು (ಪರ್ಸನಾಲಿಟಿ ಸ್ಟಡೀಸ್) ಇದರ ಮೇಲೆ ಬೆಳಕು ಚೆಲ್ಲಿವೆ. ಬುದ್ಧಿ ಸಾಮಾರ್ಥ್ಯ ಇರದ ರಾಜಕಾರಣಿಗಳನೇಕರು ಕ್ಷಾಮ, ಭೂಕಂಪ, ಯುದ್ಧದ ವಾತಾವರಣಗಳಲ್ಲಿನ ಸಣ್ಣಪುಟ್ಟ ವಿಷಯಗಳನ್ನೇ ಭಾವುಕರಾಗಿ ಹೇಳುವುದರ ಮೂಲಕ ಜನ ಮನಸ್ಸಿನಲ್ಲಿ ನೆಮ್ಮದಿಯನ್ನು ಹುಟ್ಟಿಸಿಬಿಡುತ್ತಾರೆ. ಸಮರದ ಬಗ್ಗೆ ಮಾತಾಡುವುದು, ಯೋಧರನ್ನು ಕೊಂಡಾಡುವುದರ ಮೂಲಕ ಮೂಲ ಸಮಸ್ಯೆಯತ್ತ ಜನ ಗಮನ ಹರಿಯದಂತೆ ಮಾಡುವಂತಹ ವಿಲಕ್ಷಣ ಗುಣ ಪ್ರದರ್ಶಿಸುತ್ತಾರೆ.

ಇದನ್ನು ಬ್ರಿಟಿಷ್ ನೌಕಾ ಇತಿಹಾಸ ತಜ್ಞ ಪಾರ್ಕಿನ್ಸನ್‌ನ Law of triviality ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ವಿವರಿಸಲಾಗಿದೆ.

ಒಂದಂತೂ ನಿಜ ತುಂಬಾ ಜಟಿಲವಾದ ವಿಷಯಗಳತ್ತ ಜನರ ಗಮನ ಸೆಳೆಯುವುದು ಕಷ್ಟ. ಬದಲಿಗೆ ಪುರಾಣದ ಕತೆಯೋ, ಹಾಸ್ಯದ ತುಣುಕೋ, ಗಂಭೀರವೆನ್ನುವಂತಹ ವಿಷಯದ ಬಗ್ಗೆ ಹಗುರವಾದ ನುಡಿಗಳನ್ನಾಡುವುದರ ಮೂಲಕ ‘ಎಲ್ಲವೂ ಸರಿಯಾಗಿದೆ’ ಎನ್ನುವಂತಹ ಭಾವನೆಯನ್ನು ಮೂಡಿಸುತ್ತಾರೆ. ಇಂತಹ ಅದೆಷ್ಟೋ ವಿಷಯಗಳ ಬಗ್ಗೆ ನಮ್ಮ ರಾಜಕೀಯ ಮುಖಂಡರು ನಿತ್ಯವೂ ಮಾತಾಡುತ್ತಲೇ ಇರುತ್ತಾರೆ. ಸುಶಿಕ್ಷಿತರು, ಸೂಕ್ಷ್ಮಮತಿಗಳು ರಾಜಕೀಯ ಪ್ರವೇಶಿಸಲು ಹಿಂಜರಿಯುವುದಕ್ಕೆ ಇವುಗಳೂ ಕಾರಣ.

ಈ ಬಾರಿ ಎದುರಿಗಿರುವ ಅವಕಾಶಗಳು:

ತಮಿಳುನಾಡಿನ ಕಾಲೇಜು ವಿದ್ಯಾರ್ಥಿಗಳ ಮೊದಲ ಮತದಾನ. (ಚಿತ್ರ ಸಾಂದರ್ಭಿಕ). 

ಈ ಬಾರಿಯ ಮಹಾಚುನಾವಣೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ನವಯುಗದ ಯುವಜನರಿದ್ದಾರೆ. ಅವರಿಗೆ ತಂತ್ರಜ್ಞಾನದ ಪರಿಚಯವಿದೆ. ಅದರ ಮೂಲಕ ಹರಿದುಬರುವ ವಿಷಯಗಳತ್ತ ನಿಗಾ ಕೊಡುವ ಆಸಕ್ತಿ ಇದೆ. ಈ ವಿಷಯಗಳ ಬಗ್ಗೆ ಅಂತರ್ಜಾಲದ ವಲಯಗಳ ಮೂಲಕ ಹೊರಬರುವ ಜನಾಭಿಪ್ರಾಯಗಳನ್ನು ಚೆನ್ನಾಗಿ ಆಲೋಚಿಸಿ ಬೆಂಬಲ ನೀಡುವುದಕ್ಕೆ ಅವಕಾಶವಿದೆ. ಉತ್ತಮ ಪ್ರಜಾ ನಾಯಕರನ್ನು ಗುರುತಿಸುವುದಕ್ಕೆ ಈಗ ಅವಕಾಶಗಳು ಹೇರಳವಾಗಿವೆ.

ಆದುದರಿಂದ ಈ ಸನ್ನಿವೇಶದಲ್ಲಿ ಅವರು ಎಚ್ಚೆತ್ತ ಮತದಾರರಾಗುವುದರ ಅಗತ್ಯವಿದೆ.

1. ಇದರಿಂದ ರಾಜಕೀಯ ಪಕ್ಷಗಳ ಉದಾಸೀನ ಮನೋಭಾವಗಳಿಗೆ ಸವಾಲು ಎಸೆಯಬಹುದು. ಭಾವುಕ ರಾಜಕಾರಣಿಗಳು, ವೇಷಧಾರಿ ಜನನಾಯಕರು, ಕರ್ತವ್ಯ ಭ್ರಷ್ಟ ಚುನಾಯಿತ ಜನಪ್ರತಿನಿಧಿಗಳಿಗೆ ಮತ ನೀಡದಿರುವುದು ಎದುರಿಗಿರುವ ಅವಕಾಶಗಳು.

2. ನಿಮ್ಮ ಕ್ಷೇತ್ರದ ಬಗ್ಗೆ ಜನಪ್ರತಿನಿಧಿಯು ಕಾಳಜಿ ವಹಿಸಿಲ್ಲವೆನ್ನುವ ಭಾವನೆ ಮೂಡಿದ್ದ ಪಕ್ಷದಲ್ಲಿ ಅಂತಹದೊಂದು ವಾದವನ್ನು ಬೆಂಬಲಿಸುವುದು ಸೂಕ್ತ. ಇಂತಹ ಬೆಂಬಲಗಳು ಕ್ಷೇತ್ರದ ಅಭಿವೃದ್ಧಿಯಾಗುವುದರೊಂದಿಗೆ ಜನಪ್ರತಿನಿಧಿಗಳಲ್ಲಿ ಕಾಣಿಸಿಕೊಳ್ಳುವ ಜಾಣಮರೆವನ್ನು ಸರಿಪಡಿಸುವ ಪ್ರಯತ್ನವೂ ಆಗಬಲ್ಲದು.

ರಾಜಕೀಯ ಪಕ್ಷಗಳ ಘೋಷಣೆ, ಚೀರಾಟಗಳ ಹಿಂದೆ ಬದಲಾಗದ ವ್ಯಕ್ತಿತ್ವದ ಲಕ್ಷಣಗಳಿವೆ. ಮೊಂಡುತನ, ಮಾತಿನಲ್ಲೇ ನಯವಂಚಕತನ ಹೊಂದಿರುವವರು, ಹುಸಿ ಆಶ್ವಾಸನೆಗಳನ್ನು ನೀಡುವವರು ಚುನಾವಣೆಯ ಕಣದಲ್ಲಿ, ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

3. ಅವರನ್ನು ಅಲ್ಲಿಂದ ಇಳಿಯುವಂತೆ ಮಾಡುವ ಶಕ್ತಿ ಮತದಾರರ ಒಗ್ಗಟಿನಲ್ಲಿದೆ. ಈ ಒಗ್ಗಟನ್ನು ಪ್ರದರ್ಶನ ಮಾಡಲು ಹಿಂದೆಂದಿಗಿಂತಲೂ ಇಂದು ಸುಲಭವಾದ ಮಾರ್ಗಗಳಿವೆ. ಅದರಲ್ಲಿಯೂ ನಿಮ್ಮ ಕೈಯಲ್ಲೇ ಇರುವ ಮೊಬೈಲುಗಳು ಈ ಸಮಯದಲ್ಲಿ ಅತ್ಯುತ್ತಮ ಅಸ್ತ್ರವಾಗಬಲ್ಲದು.

ಉತ್ತಮ ಪ್ರತಿನಿಧಿಗಳು ಉತ್ತಮ ಸೇವೆ ಮಾಡಬಲ್ಲರು. ಅದೇ ಸಾಮರ್ಥ್ಯವಿರದ ನಾಯಕರು ಎಲ್ಲಿದ್ದರೂ ಅಪಾಯವೇ, ಎಚ್ಚರವಿರಲಿ.