Home Media 2-0 ದೇಶಪ್ರೇಮದ ಸರ್ಟಿಫಿಕೇಟ್‌ & ‘ಫಾಕ್ಸ್‌’ ಪಾಲಿಗೆ ಹುಳಿ ದ್ರಾಕ್ಷಿಯಾದ ಜಾಹೀರಾತುಗಳು!

ದೇಶಪ್ರೇಮದ ಸರ್ಟಿಫಿಕೇಟ್‌ & ‘ಫಾಕ್ಸ್‌’ ಪಾಲಿಗೆ ಹುಳಿ ದ್ರಾಕ್ಷಿಯಾದ ಜಾಹೀರಾತುಗಳು!

SHARE

ಹಲವಾರು ಸಂದರ್ಭದಲ್ಲಿ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಮಾದರಿಯಾಗಿ ತೆಗೆದುಕೊಳ್ಳುವ ಪರಿಪಾಠ ಭಾರತದಲ್ಲಿದೆ. ಈ ಮಾದರಿಗಳು ತೊಡುವ ಉಡುಪು, ಜೀವನಶೈಲಿ, ಆಹಾರ ಪದ್ಧತಿಗೆ ಹೆಚ್ಚಿನ ಸಂದರ್ಭದಲ್ಲಿ ಮೀಸಲಾಗಿವೆ. ಮತ್ತು ಈ ಕಾರಣಕ್ಕೆ ಟೀಕೆಗೂ ಗುರಿಯಾಗಿದ್ದಿದೆ. ಆದರೆ ಈ ದೇಶಗಳಿಂದ ತೆಗೆದುಕೊಳ್ಳಲೇಬೇಕಿರುವ ಹಲವು ಆದರ್ಶ ವಿಚಾರಗಳು ಜನಸಾಮಾನ್ಯರ ಮಧ್ಯೆ ಚರ್ಚೆಗೆ ಬಂದಿದ್ದು ವಿರಳ.

ಹೀಗೆ ಚರ್ಚೆಗೆ ಬರಲೇಬೇಕಿರುವ ವಿಚಾರಗಳಲ್ಲಿ ಇದೂ ಒಂದು. ಏನದು?

‘ಫಾಕ್ಸ್‌ ನ್ಯೂಸ್‌’ ಅಮೆರಿಕಾದ ಖ್ಯಾತ ಸುದ್ದಿ ವಾಹಿನಿ. ಜಾಗತಿಕ ಮಾಧ್ಯಮ ದೈತ್ಯ ರುಪರ್ಟ್‌ ಮುರ್ಡೋಕ್‌ ಒಡೆತನಕ್ಕೆ ಸೇರಿದ ವಾಹಿನಿಯಿದು. ತನ್ನ ಮಾಧ್ಯಮಗಳ ಶಕ್ತಿಯಿಂದಾಗಿ ಹಲವು ದೇಶಗಳ ಆಡಳಿತ ಸರಕಾರಗಳನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುವಷ್ಟರ ಮಟ್ಟಿಗೆ ಈ ರುಪರ್ಟ್‌ ಮುರ್ಡೋಕ್‌ ಪ್ರಭಾವಶಾಲಿ. ಅದಕ್ಕೆ ಅಮೆರಿಕವೂ ಹೊರತಲ್ಲ.

ಆದರೆ ಜನಸಾಮಾನ್ಯರನ್ನು, ಅಲ್ಲಿನ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ನೈಜ ಪ್ರಜಾಪ್ರಭುತ್ವದ ಸಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದಕ್ಕೆ ಹೊಸದಾಗಿ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ.

‘ಫಾಕ್ಸ್‌ ನ್ಯೂಸ್‌’ಗೆ ಭಾರತದ ಬಹುಸಂಖ್ಯಾತ ಟಿವಿ ಮಾಧ್ಯಮಗಳಂತೆ ಮೊದಲಿನಿಂದಲೂ ಒಂದು ಬದಿಗೆ ವಾಲುವ ಅಭ್ಯಾಸ ಜಾಸ್ತಿ. ಸದ್ಯ ಅದು ಟ್ರಂಪ್‌ ಸರಕಾರದ ಜತೆ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಟ್ರಂಪ್‌ ಆಡಳಿತದ ಪ್ರಾಪಗಂಡಾ ಎಂಬ ಟೀಕೆಗೂ ವಾಹಿನಿ ಗುರಿಯಾಗುತ್ತಾ ಬಂದಿದೆ.

ಹೀಗಿರುವಾಗಲೇ ಕಳೆದ ವಾರ ವಾಹಿನಿಯ ಪ್ರಮುಖ ಕಾರ್ಯಕ್ರಮ ‘ಜಸ್ಟೀಸ್‌ ವಿತ್‌ ಜಡ್ಜ್ ಜೆನಿನ್‌’ನಲ್ಲಿ ಅದರ ಖ್ಯಾತ ನಿರೂಪಕಿ ಜೆನಿನ್‌ ಪಿರ್ರೋ ಅಲ್ಲಿನ ಸಂಸತ್‌ ಸದಸ್ಯೆ ಇಲ್ಹಾನಾ ಓಮರ್‌ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಓಮರ್‌ ಬುರ್ಖಾ ಧರಿಸುತ್ತಾರೆ ಎಂಬುವುದೇ ಈ ಪ್ರಶ್ನೆ ಏಳಲು ಕಾರಣವಾಗಿತ್ತು. ಸೊಮಾಲಿಯಾದಿಂದ ವಲಸೆ ಬಂದ ಪೋಷಕರಿಗೆ ಹುಟ್ಟಿ ಅಮೆರಿಕಾ ಪೌರತ್ವ ಪಡೆದ ಇಲ್ಹಾನಾ ಓಮರ್‌ ಅಮೆರಿಕಾದ ಸಂಸತ್‌ (ಮಿನ್ನೊಸೇಟಾ)ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಕೂಡ ಹೌದು. ಆಕೆಯ ಬಗ್ಗೆ ಪಿರ್ರೋ ನೀಡಿದ ಪ್ರತಿಕ್ರಿಯೆ ಅಮೆರಿಕನ್ನರ ತೀವ್ರ ಟೀಕೆಗೆ ಗುರಿಯಾಯಿತು. ಜನರ ಪ್ರತಿರೋಧ ಹೆಚ್ಚಾಗುತ್ತಿದ್ದಂತೆ ಫಾಕ್ಸ್‌ ನ್ಯೂಸ್‌ ಕ್ಷಮೆಯನ್ನೂ ಕೋರಿತು.

ಆದರೆ ಅಲ್ಲಿಗೆ ಇದು ನಿಲ್ಲಲಿಲ್ಲ.

ಇಲ್ಹಾನಾ ಓಮರ್‌ 2018ರ ಅಮೆರಿಕಾ ಸಂಸತ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇಲ್ಲಿನ ಸಂಸಸ್ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಜತೆಗೆ ಏಕಕಾಲದಲ್ಲಿ ರಶೀದಾ ತ್ಲೈಬ್‌ ಎಂಬ ಇನ್ನೋರ್ವ ಮಹಿಳೆಯೂ ಸಂಸತ್‌ ಪ್ರವೇಶಿಸಿದ್ದರು.

ಇದಕ್ಕೂ ಮುನ್ನ ಫಾಕ್ಸ್‌ ನ್ಯೂಸ್‌ ಮತ್ತೊಂದು ವಿವಾದಕ್ಕೆ ಸಿಲುಕಿತ್ತು. ಮತ್ತೋರ್ವ ಜನಪ್ರಿಯ ಆಂಕರ್‌ ಟಕ್ಕರ್‌ ಕಾರ್ಲ್‌ಸನ್‌ 10 ವರ್ಷಗಳ ಹಿಂದೆ ನೀಡಿದ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಬೇಕಾದ ಪರಿಸ್ಥಿತಿ ಡಿಸೆಂಬರ್‌ನಲ್ಲಿ ಒದಗಿ ಬಂದಿತ್ತು. ದಶಕದ ಕೆಳಗೆ ರೇಡಿಯೋ ವಾಹಿನಿಯೊಂದಕ್ಕೆ ಮಾಡಿದ ಧ್ವನಿ ಮುದ್ರಿಕೆಯಲ್ಲಿ ಮಹಿಳೆರನ್ನು ‘ಅತ್ಯಂತ ಸಂಪ್ರದಾಯಸ್ಥರು’ ಎಂಬುದಾಗಿ ಟಕ್ಕರ್‌ ಕರೆದಿದ್ದರು. ಜತೆಗೆ ಇತ್ತೀಚೆಗೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಜೈಲು ಪಾಲಾದ ವಾರನ್‌ ಜೆಫ್‌ರನ್ನು ಸಮರ್ಥಿಸಿಕೊಂಡಿದ್ದರು.

ಇದನ್ನು ಪ್ರಗತಿಪರ ಮೀಡಿಯಾ ವಾಚ್‌ಡಾಗ್‌ ‘ಮೀಡಿಯಾ ಮ್ಯಾಟರ್ಸ್‌ ಆಫ್‌ ಅಮೆರಿಕಾ’ ಎಂಬ ಸಂಸ್ಥೆ ಬಿಡುಗಡೆ ಮಾಡಿತ್ತು. ಮತ್ತು ಕಾರ್ಲ್‌ಸನ್‌ರನ್ನು ಫಾಕ್ಸ್‌ ನ್ಯೂಸ್‌ನಿಂದ ವಜಾಗೊಳಿಸಬೇಕು ಎಂಬ ಆಂದೋಲನಕ್ಕೆ ಚಾಲನೆ ನೀಡಿತ್ತು. ಜತೆಗೆ ಕಾರ್ಯಕ್ರಮಕ್ಕೆ ನೀಡುವ ಜಾಹೀರಾತನ್ನು ಹಿಂಪಡೆಯುವಂತೆ ಕಾರ್ಪೊರೇಟ್‌ ಕಂಪನಿಗಳನ್ನು ಕೇಳಿಕೊಂಡಿತ್ತು.

ಇದಕ್ಕೀಗ ಇಲ್ಹಾನಾ ಓಮರ್‌ ಪ್ರಕರಣವೂ ಸೇರಿಕೊಂಡು ಜನರ ಆಕ್ರೋಶ ಹೆಚ್ಚಾಗಿದೆ. ಈ ಆಕ್ರೋಶಕ್ಕೆ ತಲೆಬಾಗಿ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಟಕ್ಕರ್‌ ಕಾರ್ಲ್‌ಸನ್‌ ಟುನೈಟ್‌’ಗೆ ನೀಡುತ್ತಿದ್ದ ಜಾಹೀರಾತನ್ನು 33 ಕಂಪನಿಗಳ ಹಿಂಪಡೆದಿವೆ. ಇದೀಗ ಜಾಹೀರಾತು ನೀಡುತ್ತಿರುವ ಇತರರ ವಿರುದ್ಧವೂ ಜನರು ಹ್ಯಾಷ್‌ ಟ್ಯಾಗ್‌ಗಳನ್ನು ಬಳಸಿ ಸಂಸ್ಥೆಗಳನ್ನು ಟ್ಯಾಗ್‌ ಮಾಡಿ ಅಭಿಯಾನ ಮುಂದುವರಿಸಿದ್ದಾರೆ.

‘ಟಕ್ಕರ್‌ ಕಾರ್ಲ್‌ಸನ್‌ ಟುನೈಟ್‌’ ಕಾರ್ಯಕ್ರಮದ ಸ್ಕ್ಕೀನ್‌ ಗ್ರಾಬ್‌; ಪ್ರತಿ ದಿನ ಸ್ಥಳೀಯ ಕಾಲಮಾನ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ ಸರಾಸರಿ 5.25 ಲಕ್ಷ ವೀಕ್ಷಕರಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಸುದ್ದಿ ವಾಹಿನಿಗಳಿಗಿಂತ ಅತ್ಯಂತ ಹೆಚ್ಚಿನ ವೀಕ್ಷಕರನ್ನು ಹಿಡಿದಿಡುವ ಕಾರ್ಯಕ್ರಮ ಇದು.

ದೊಡ್ಡ ದೊಡ್ಡ ಕಂಪನಿಗಳು ಈಗಾಗಲೇ ತಮ್ಮ ಜಾಹೀರಾತನ್ನು ಹಿಂಪಡೆದಿದ್ದರೆ, ಇನ್ನುಳಿದ ಸಣ್ಣ ಪುಟ್ಟ ಕಂಪನಿಗಳ ಮೇಲೆಯೂ ಜಾಹೀರಾತು ನೀಡದಂತೆ ತೀವ್ರ ಒತ್ತಡ ಸೃಷ್ಟಿಯಾಗಿದೆ.

ಜಾಹೀರಾತು ಸ್ಥಗಿತದ ರೂಪದಲ್ಲಿ ವಾಹಿನಿ ಮೇಲೆ ನಡೆದಿರುವ ಈ ಪ್ರಹಾರ ಸಂಸ್ಥೆಯ ಆದಾಯಕ್ಕೆ ಹೊಡೆತ ನೀಡುವ ಮಟ್ಟಕ್ಕೆ ಬಂದು ನಿಂತಿದೆ. ತನ್ನ ಜಾಹೀರಾತುಗಳನ್ನು ಉಳಿಸಿಕೊಳ್ಳಲು ‘ಅಮೆರಿಕಾ ವಾಚಿಂಗ್‌’ ಹೆಸರಿನಲ್ಲಿ ಫಾಕ್ಸ್‌ ನ್ಯೂಸ್‌ ತನ್ನ ಗತ ಸಾಧನೆಗಳನ್ನು ಜನರ ಮುಂದಿಡುತ್ತಾ ಜಾಹೀರಾತಿಗಾಗಿ ಬೇಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಹೀಗೆ ಅಮೆರಿಕಾದ ಜನರು ಮತ್ತು ಅಲ್ಲಿನ ಜವಾಬ್ದಾರಿಯುವ ಕಂಪನಿಗಳು ಜಾಹೀರಾತು ಆದಾಯ ಎಂಬ ವಾಹಿನಿಗಳ ಜೀವಜಲವನ್ನೇ ಕಡಿತಗೊಳಿಸಿ ಎಲ್ಲೆ ಮೀರಿದವರಿಗೆ ತಕ್ಕ ಸಂದೇಶವನ್ನು ರವಾನಿಸಿದ್ದಾರೆ.

ವ್ಯತ್ಯಾಸ ಇಷ್ಟೇ. ಭಾರತದಲ್ಲಿ ಧಾರ್ಮಿಕ ಸಾಮರಸ್ಯ ಸಾರುವ ರಂಗು ರಂಗಿನ ಜಾಹೀರಾತಿನ ಕಾರಣಕ್ಕೆ ಸರ್ಫ್‌ ಎಕ್ಸೆಲ್‌ನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತದೆ. ಅದೇ ಅಮೆರಿಕಾದಲ್ಲಿ ಹಿಜಾಬ್‌ ಧರಿಸಿದಾಕೆಯ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡಿದ್ದಕ್ಕೆ ವಾಹಿನಿಗೆ ಜಾಹೀರಾತು ನೀಡದಂತೆ ಜನ ಅಭಿಯಾನ ನಡೆಸುತ್ತಾರೆ.

ಕಲಿಯಬೇಕಾಗಿದ್ದು ಬಹಳ ಇದೆ. ಆದರೆ ಯಾವುದು, ಯಾಕೆ ಎನ್ನುವುದಷ್ಟೇ ಮುಖ್ಯ.