Home news-for-4-1-display ‘ಕಳಚಿದ ಬೇಡಿ’: ವೈಚಾರಿಕ ಪ್ರಜ್ಞೆಯ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಇನ್ನಿಲ್ಲ

‘ಕಳಚಿದ ಬೇಡಿ’: ವೈಚಾರಿಕ ಪ್ರಜ್ಞೆಯ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಇನ್ನಿಲ್ಲ

SHARE

ಧಾರ್ಮಿಕವಾಗಿ ಪೂರ್ವಗ್ರಹ ಪೀಡಿತರಾಗಿರುವವರು ಯಾವಾಗಲೂ ಗತವನ್ನು ವೈಭವೀಕರಿಸುವುದರಲೇ ಸಂತೋಷಪಡುತ್ತಾರೆ. ಅಂತವರು ಪ್ರತಿಪಾದಿಸುವುದು ಧರ್ಮವನ್ನಲ್ಲ. ಅದು ಮತಾಂಧತೆ…

ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ವಕೀಲಿಕೆ ಆರಂಭಿಸಿದ್ದ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತುಗಳಿವು.

‘ಶುದ್ಧ ಸಾಹಿತಿಗಳ ಕಣ್ಣಲ್ಲಿ ನಾನು ಎಂದೂ ಸಾಹಿತಿಯೇ ಆಗಿರಲಿಲ್ಲ’ ಎನ್ನುತ್ತಿದ್ದ ‘ಕೋಚೆ’ ಶನಿವಾರ ತಮ್ಮ 97ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ತಲೆಯಲ್ಲಿನ ಟ್ಯೂಮರ್‌ಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಸುಧಾರಿಸದೆ ಕೊನೆಯುಸಿರೆಳೆದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ವಕೀಲ, ನ್ಯಾಯಾಧೀಶ, ಕರ್ನಾಟಕ ಏಕೀಕರಣದ ಹೋರಾಟಗಾರ, ಚಳವಳಿಗಾರ, ಸಾಹಿತಿ – ಹೀಗೆ ಹಲವು ಆಯಾಮಗಳಲ್ಲಿ ಕನ್ನಡದ ವೈಚಾರಿಕ ಪ್ರಜ್ಞೆ ವಿಸ್ತರಿಸಿದವರು ಕೋಚೆ. ಸ್ವಾತಂತ್ರ್ಯ ಪೂರ್ವದ ಭಾರತ ಮತ್ತು ಸ್ವಾತಂತ್ರ್ಯಾನಂತರದ ಭಾರತವನ್ನು ಕಂಡಿದ್ದ ಹಾಗೂ ಎರಡೂ ಕಾಲಘಟ್ಟಗಳಲ್ಲಿ ಬದುಕಿದ್ದ ಅವರು ವೈಚಾರಿಕತೆಯ ವಿಚಾರದಲ್ಲಿ ಎಂದೂ ರಾಜೀಸೂತ್ರಕ್ಕೆ ಕಟ್ಟಿಬಿದ್ದವರಲ್ಲ ಎಂಬುದು ಅವರೊಂದಿಗೆ ಒಡನಾಡಿದವರ ಮಾತು.

“ಕೋಚೆ ನ್ಯಾಯಾಧೀಶರಾಗಿದ್ದವರು. ಸಮಯಾಭಾವ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲೂ ಅವರು ಸಾಹಿತ್ಯವನ್ನು ಸಾಹಿತ್ಯದ ವಿದ್ಯಾರ್ಥಿಗಳಿಗಿಂತಲೂ ಚೆನ್ನಾಗಿ ಓದಿಕೊಂಡಿದ್ದರು. ತಾವೂ ವೈಚಾರಿಕ ಪ್ರಜ್ಞೆ ಹೊಂದಿದ್ದರು ಮತ್ತು ಆ ವೈಚಾರಿಕ ಪ್ರಜ್ಞೆಯನ್ನ ಹೊಸಬರಿಗೂ ಹಂಚುತ್ತಿದ್ದರು. ನ್ಯಾಯಶಾಸ್ತ್ರ, ಸಾಹಿತ್ಯ ಮಾತ್ರವಲ್ಲ ಯಾವುದೇ ವಿಷಯದ ಬಗ್ಗೆ ಮಾತನಾಡಿಸಿದರೂ ಅವರು ಆ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅವರ ನಿಧನದಿಂದ ವೈಚಾರಿಕತೆಯ ದೊಡ್ಡ ಆಲದಮರವೊಂದು ಉರುಳಿಬಿದ್ದಂತಾಗಿದೆ” ಎನ್ನುತ್ತಾರೆ ಕೋಚೆ ಅವರೊಂದಿಗೆ ಆತ್ಮೀಯರಾಗಿದ್ದ ಮೀನಾ ಮೈಸೂರು.

“ಹೊಸ ಪೀಳಿಗೆಯವರು ಅವರ ಒಡನಾಟಕ್ಕೆ ಬಂದರೆ ಅವರ ಪರಿಚಯ ಹಾಗೂ ಆಸಕ್ತಿಗಳನ್ನು ಕೇಳುತ್ತಿದ್ದರು. ಯುವಜನರ ಆಸಕ್ತಿಯ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದರು. ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ರಾಮಾಯಣ ದರ್ಶನಂ ಹಾಗೂ ಕುವೆಂಪು ಸಾಹಿತ್ಯದ ವೈಚಾರಿಕತೆಯ ಬಗ್ಗೆ ಅಥೆಂಟಿಕ್‌ ಆಗಿ ಮಾತನಾಡಬಲ್ಲವರಾಗಿದ್ದರು. ಅವರು ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದರೂ ಸಾಹಿತ್ಯವನ್ನು ಅಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದರು. ಪರಿಪೂರ್ಣ ಬದುಕನ್ನು ಬಾಳಿದ ಅವರು ಕಳೆದ ವಾರದ ಹಿಂದಿನವರೆಗೂ ಚೆನ್ನಾಗಿಯೇ ಇದ್ದರು” ಎಂದು ನೆನಪಿಸಿಕೊಳ್ಳುತ್ತಾರೆ ಮೀನಾ.

ಹುಟ್ಟು- ಬದುಕು:

ಕೋಚೆ ಅವರು ಜನಿಸಿದ್ದು 1922ರ ಫೆಬ್ರುವರಿ 27ರಂದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ. ತಂದೆ ವೀರಣ್ಣ, ತಾಯಿ ಬಸಮ್ಮ. ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ಕೋಚೆ ಅನಂತಪುರದಲ್ಲಿ ಕಾಲೇಜು ಕಲಿತರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಕೋಚೆ ಸೆರೆಮನೆವಾಸ ಅನುಭವಿಸಿದ್ದರು. ನಂತರದಲ್ಲಿ ಬಿಎ ಪದವಿ, ಕಾನೂನು ಪದವಿಯನ್ನೂ, ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1946ರಲ್ಲಿ ವಕೀಲಿಕೆ ಆರಂಭಿಸಿದ ಕೋಚೆ, 1965ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. ನಿವೃತ್ತಿಯ ನಂತರ ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆ ನಡೆಸುವುದರ ಜತೆಗೆ ಹಲವಾರು ಕಾರ್ಮಿಕ ಸಂಘಟನೆಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನದಲ್ಲಿ ಸಕ್ರಿಯರಾಗಿದ್ದರು. ಅರವಿಂದಾಶ್ರಮದ ಸಂಪರ್ಕದಲ್ಲಿದ್ದ ಕೋಚೆ, ಕರ್ನಾಟಕ ವಿಭಾಗದ ಅರವಿಂದಾಶ್ರಮವನ್ನು ಪ್ರಾರಂಭಿಸಿದ್ದರು.

ಕೋಚೆ ಅವರ ಅಂಕಣ ಬರಹಗಳಾದ ‘ನ್ಯಾಯಾಧೀಶರ ನೆನಪುಗಳು’, ‘ನ್ಯಾಯಾಲಯದಲ್ಲಿ ಸತ್ಯ ಕಥೆಗಳು’ ಆ ಕಾಲಕ್ಕೆ ಜನಪ್ರಿಯವಾಗಿದ್ದವು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ಕವನ ಸಂಕಲನಗಳು; ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮೊದಲಾದ ಕಥಾ ಸಂಕಲನಗಳು; ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ಕಾದಂಬರಿಗಳನ್ನು ಕೋಚೆ ರಚಿಸಿದ್ದಾರೆ.

ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ಜೀವನಚರಿತ್ರೆಗಳು; ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು; ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಮುಂತಾದ ಸಂಪಾದಿತ ಕೃತಿಗಳು ಸೇರಿದಂತೆ ಕೋಚೆ ಸುಮಾರು 80 ಪುಸ್ತಕಗಳನ್ನು ಹೊರತಂದಿದ್ದರು.

‘ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್‌’ ಕೃತಿಯ ಮೂಲಕ ಇತಿಹಾಸವನ್ನು ಮರುಶೋಧಿಸುವ ಪ್ರಯತ್ನ ನಡೆಸಿದ್ದರು ಕೋಚೆ. ಇದೇ ಕಾರಣಕ್ಕೆ ಅವರು ಸನಾತನವಾದಿಗಳ ವಿರೋಧ ಎದುರಿಸಬೇಕಾಯಿತು. ‘ನನ್ನ ಮನಸ್ಸು ನನ್ನ ನಂಬುಗೆ’ ಅವರ ಆತ್ಮಕಥೆ. 1988ರಲ್ಲಿ ‘ಕೋಚೆ ಯಾರು ಏನು ಎಂತು?’ ಎಂಬ ಅಭಿನಂದನಾ ಗ್ರಂಥವನ್ನು ಕೋಚೆ ಆಪ್ತರು ಅವರಿಗೆ ಅರ್ಪಿಸಿದ್ದರು.

ಕೋಚೆ 2013ರಲ್ಲಿ ವಿಜಯಪುರದಲ್ಲಿ (ಹಿಂದಿನ ಬಿಜಾಪುರ) ನಡೆದಿದ್ದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದರು. ಸ.ಸ. ಮಾಳವಾಡ ಪ್ರಶಸ್ತಿ, ಸಂ.ಶಿ. ಭೂಸನೂರಮಠ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿಲಿಟ್ ಪದವಿ ಸೇರಿದಂತೆ ಹಲವು ಗೌರವಗಳು ಕೋಚೆ ಅವರಿಗೆ ಸಂದಿದ್ದವು.

ಚಿತ್ರಕೃಪೆ: ಸಂಡೆ ಇಂಡಿಯನ್‌.