Home Cover Story ಬಿಎಸ್‌ವೈ ಆಡಿಯೊ ತನಿಖೆ ಕೈಬಿಡಲು ಕಮಲದ ‘ಆಪರೇಷನ್‌’ ನಿಲ್ಲಿಸುವ ಆಫರ್‌!

ಬಿಎಸ್‌ವೈ ಆಡಿಯೊ ತನಿಖೆ ಕೈಬಿಡಲು ಕಮಲದ ‘ಆಪರೇಷನ್‌’ ನಿಲ್ಲಿಸುವ ಆಫರ್‌!

SHARE

ಬಿಎಸ್‌ವೈ ಆಡಿಯೊ ಪ್ರಕರಣದ ಎಸ್‌ಐಟಿ ತನಿಖೆ ಕೈ ಬಿಡಲು ಬಿಜೆಪಿ ಆಪರೇಷನ್ ಕಮಲವನ್ನೇ ನಿಲ್ಲಿಸುವ ಆಫರ್‌ ನೀಡಿದೆ ಎನ್ನಲಾಗಿದೆ. ಎಸ್‌ಐಟಿ ತನಿಖೆ ಕೈಬಿಟ್ಟರೆ ಆಪರೇಷನ್‌ ಕಮಲದ ಪ್ರಯತ್ನವನ್ನೇ ನಿಲ್ಲಿಸುವುದಾಗಿ ಬಿಜೆಪಿಯ ಹಿರಿಯ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಹಸ್ಯ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಕಾರಣಕ್ಕೆ ಯಡಿಯೂರಪ್ಪ ಮತ್ತಿತರರ ವಿರುದ್ಧ ನಡೆಯಬೇಕಿದ್ದ ಎಸ್ಐಟಿ ತನಿಖೆಯ ವಿಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳಿವೆ. “ನಾವು ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಕೈ ಬಿಡುತ್ತೇವೆ, ನೀವು ಎಸ್ಐಟಿ ತನಿಖೆ ನಡೆಸುವ ವಿಷಯದಲ್ಲಿ ಹಠ ಹಿಡಿಯಬೇಡಿ” ಎಂಬ ಸಂದೇಶ ಬಿಜೆಪಿ ನಾಯಕರಿಂದ ಕುಮಾರಸ್ವಾಮಿ ಅವರಿಗೆ ರವಾನೆಯಾಗಿದೆ ಎನ್ನುತ್ತವೆ ಉನ್ನತ ಮೂಲಗಳು.

ಯಡಿಯೂರಪ್ಪ ಆಡಿಯೊ ಪ್ರಕರಣದಿಂದ ಅಸಮಾಧಾನಗೊಂಡಿರುವ ಬಿಜೆಪಿ ಹೈಕಮಾಂಡ್, ಏನಾದರೂ ಮಾಡಿ ಈ ಪ್ರಕರಣಕ್ಕೆ ಜೀವ ಬರದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಲೋಕಸಭಾ ಚುನಾವಣೆಯನ್ನು ಎದುರಿಸಲು ಪಕ್ಷ ಮುಜುಗರ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಘಟಕದ ನಾಯಕರಿಗೆ ವಿವರಿಸಿದೆ ಎನ್ನಲಾಗಿದೆ.

“ನಾವು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಲ್ಲ. ಲೋಕಸಭಾ ಚುನಾವಣೆಯ ನಂತರ ಯಾವ್ಯಾವ ಸನ್ನಿವೇಶಗಳು ಎದುರಾಗುತ್ತವೋ ನೋಡೋಣ. ಅಲ್ಲಿಯವರೆಗೆ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ” ಎಂದು ಪಕ್ಷದ ವರಿಷ್ಠರು ರಾಜ್ಯ ಘಟಕದ ನಾಯಕರಿಗೆ ಹೇಳಿದ್ದಾರೆ ಎಂಬ ಮಾತುಗಳು ಪಕ್ಷದೊಳಗೆ ಹರಿದಾಡುತ್ತಿವೆ.

Also Read: ‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 

ಈ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಹಲವು ನಾಯಕರು ಕುಮಾರಸ್ವಾಮಿ ಅವರೊಂದಿಗೆ ರಹಸ್ಯ ಚರ್ಚೆ ನಡೆಸಿದ್ದು, ಎಸ್ಐಟಿ ತನಿಖೆಗೆ ತರಾತುರಿ ಮಾಡಬೇಡಿ. ಮುಂದಿನ ದಿನಗಳಲ್ಲಿ ನಡೆಸಿದರೂ ಅದೊಂದು ಶಾಸ್ತ್ರದಂತೆ ಮುಗಿದು ಹೋಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿನ ಈ ವಿದ್ಯಮಾನಗಳನ್ನು ಕಂಡ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರಿಬ್ಬರೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವೈಯಕ್ತಿಕ ನೋವನ್ನು ತೋಡಿಕೊಂಡಿದ್ದಲ್ಲದೆ, ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದರು.

ಅದರ ಮುಂದುವರಿದ ಭಾಗವಾಗಿ ಇಂದು ಕೂಡಾ ಶಾಸಕ ನಾಗೇಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಇನ್ನು ಯಾವ ಕಾರಣಕ್ಕೂ ಬಿಜೆಪಿ ಕ್ಯಾಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಹೀಗೆ ಆಪರೇಷನ್ ಕಮಲ ಕಾರ್ಯಾಚರಣೆಯಿಂದ ಹಿಂದೆ ಸರಿಯುವುದಾಗಿ ಬಿಜೆಪಿಯ ನಾಯಕರು ಹೇಳಿರುವುದರಿಂದ ಮತ್ತು ಬಾಂಬೆಯಲ್ಲಿ ವಾಸ್ತವ್ಯ ಹೂಡಿದ್ದ ಭಿನ್ನಮತೀಯ ಶಾಸಕರು ರಾಜ್ಯಕ್ಕೆ ಮರಳಿರುವುದರಿಂದ ಕುಮಾರಸ್ವಾಮಿ ಕೂಡಾ ಎಸ್ಐಟಿ ತನಿಖೆ ಬಗ್ಗೆ ಸದ್ಯಕ್ಕೆ ನಿರಾಸಕ್ತಿ ತಾಳಿದ್ದಾರೆ.

ಆಡಿಯೊ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿ ಒಂದು ವಾರ ಕಳೆದರೂ ತನಿಖೆಗೆ ಎಸ್ಐಟಿ ತಂಡ ರಚನೆಯಾಗಿಲ್ಲ. ಹಾಗೆಯೇ ಅದರ ನೇತೃತ್ವ ಯಾರಿಗೆ ಎನ್ನುವುದೂ ನಿರ್ಧಾರವಾಗಿಲ್ಲ. ಸದನದಲ್ಲಿ ಪಟ್ಟು ಹಿಡಿದಿದ್ದ ಸರ್ಕಾರ ಇದುವರೆಗೆ ಎಸ್ಐಟಿ ತನಿಖೆಗೆ ಯಾರನ್ನೂ ನೇಮಿಸಿಲ್ಲ. ಸರ್ಕಾರ ಈ ವಿಷಯದಲ್ಲಿ ಮುಂದುವರಿಯಲಿಕ್ಕಿಲ್ಲ ಎಂಬ ಬಿಜೆಪಿಯ ವಿಶ್ವಾಸಕ್ಕೆ ಇದು ಇನ್ನಷ್ಟು ಬಲ ತಂದಿದೆ.

ಸರ್ಕಾರಕ್ಕೆ ಕಿರಿ ಕಿರಿಯಾದರೆ ಎಸ್ಐಟಿ ತನಿಖೆಗೆ ಸರ್ಕಾರ ಮುಂದಾಗಬಹುದು. ಇಲ್ಲದಿದ್ದರೆ ಎಸ್ಐಟಿ ತನಿಖೆ ನಡೆಯವುದು ಅನುಮಾನ. ಅಕಸ್ಮಾತ್ ಹೇಳಿದ್ದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಎಸ್ಐಟಿ ರಚಿಸಿದರೂ ಅದು ಬಿಜೆಪಿಯ ಪಾಲಿಗೆ ತಲೆ ನೋವಾಗಿ ಪರಿಣಮಿಸುವುದಿಲ್ಲ.

ಆಡಿಯೊ ಟೇಪ್ ಆರೋಪದ ಗದ್ದಲದಲ್ಲಿಯೇ ಏಳು ದಿನಗಳ ಬಜೆಟ್ ಅಧಿವೇಶನ ಕಳೆದುಹೋಯಿತು. ಇದರ ತನಿಖೆಯನ್ನು ಮೈತ್ರಿ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದ್ದು, ಸರ್ಕಾರದ ಮುಂದಿನ ನಡೆ ವಿಶೇಷ ತನಿಖಾ ತಂಡ ನೇಮಿಸುವುದು. ಆದರೆ ಬಿಜೆಪಿ ಇದಕ್ಕೆ ಅಸಹಕಾರ ತೋರಿಸಲು ನಿರ್ಧರಿಸಿದೆ.

ಯಡಿಯೂರಪ್ಪ ಅವರಿಗೆ ನೊಟೀಸ್ ನೀಡಿದರೂ ಸಹ ತನಿಖೆಗೆ ಹಾಜರಾಗದಿರಲು ಚಿಂತಿಸಿದ್ದಾರೆ. ಸರ್ಕಾರ ಎಸ್‌ಐಟಿಯನ್ನು ನೇಮಕ ಮಾಡಿದ ಕೂಡಲೇ ಅದಕ್ಕೆ ತಡೆ ತರಲು ಬಿಜೆಪಿ ಕೋರ್ಟ್ ಗೆ ಹೋಗಲೂ ತಯಾರಿ ನಡೆಸಿದೆ.