Home news-for-4-1-display ನಿಲ್ಲದ ಸೈನಿಕರ ಸಾವಿನ ಸರಣಿ; ಜಮ್ಮು- ಕಾಶ್ಮೀರದ ಇಂದಿನ ಸ್ಥಿತಿ

ನಿಲ್ಲದ ಸೈನಿಕರ ಸಾವಿನ ಸರಣಿ; ಜಮ್ಮು- ಕಾಶ್ಮೀರದ ಇಂದಿನ ಸ್ಥಿತಿ

SHARE

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಮೊರೆತ ಮುಂದುವರಿದಿದೆ. ಉಗ್ರರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಸೋಮವಾರ ಸೇನಾಧಿಕಾರಿ ಸೇರಿದಂತೆ ’55 ರಾಷ್ಟ್ರೀಯ ರೈಫಲ್ಸ್‌’ಗೆ ಸೇರಿದ ನಾಲ್ಕು ಮಂದಿ ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಣಿವೆ ರಾಜ್ಯದ ಜನ ಜೀವನ ಸಂಪೂರ್ಣ ಸ್ತಬ್ಧವಾಗಿದೆ.

ಪುಲ್ವಾಮದಿಂದ 10 ಕಿ.ಮೀ. ದೂರದಲ್ಲಿ ಜೈಷ್‌ – ಎ – ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರರಿಬ್ಬರನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಉಗ್ರರು ಅಡಗಿದ್ದಾರೆ ಎನ್ನಲಾದ ಕಟ್ಟಡದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿವೆ. ಸೇನೆಯ ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಮುಖ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ಮಾನ್‌ ಮತ್ತು ರಶೀದ್‌ ಗಾಜಿ ಎಂಬ ಇಬ್ಬರು ಉಗ್ರರನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಜೈಷ್‌ ಉಗ್ರರನ್ನು ಗುರಿಯಾಗಿಸಿಕೊಂಡು ಭಾನುವಾರ ಮಧ್ಯರಾತ್ರಿಯಿಂದಲೇ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಜೈಷ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಝರ್‌ನ ಆಪ್ತ ಎನ್ನಲಾದ ಕರ್ಮಾನ್‌ ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳುವ ಹಾಗೂ ತರಬೇತಿ ನೀಡುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಗಾಜಿ ಜೈಷ್‌ ಸಂಘಟನೆಯಲ್ಲಿ ಬಾಂಬ್‌ ತಯಾರಿಕೆ ಹಾಗೂ ಉಗ್ರರ ತಂಡಗಳಿಗೆ ತರಬೇತಿಯಲ್ಲಿ ತೊಡಗಿದ್ದ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಮತ್ತೆ ಕಲ್ಲು ತೂರಾಟ:

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಿಂಗಲೀನ ಗ್ರಾಮದಲ್ಲಿ ಯುವಜನರು ಮತ್ತು ಭದ್ರತಾ ಪಡೆಗಳ ನಡುವೆ ಸೋಮವಾರ ಘರ್ಷಣೆ ಉಂಟಾಗಿದೆ. ರಸ್ತೆಗಳಲ್ಲಿ ಸೇರಿರುವ ಯುವಜನರು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭದ್ರತಾ ಪಡೆಗಳು ಈ ಯುವಜನರ ಗುಂಪುಗಳ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ‘ರೈಸಿಂಗ್‌ ಕಾಶ್ಮೀರ್‌’ ವರದಿ ಮಾಡಿದೆ.

ಪ್ರತ್ಯೇಕತಾವಾದಿಗಳು, ಸೇನೆಯ ವಿರುದ್ಧದ ಸಿಟ್ಟಿರುವ ಯುವಜನರು ಹಾಗೂ ಅಮಾಯಕ ಜನ ಸಾಮಾನ್ಯರು ಎಲ್ಲರೂ ಈಗ ಸೇನೆ ಒಂದೇ ದೃಷ್ಟಿಯಿಂದ ನೋಡುತ್ತಿದೆ. ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ವಿಶೇಷ ಭದ್ರತೆಗಳನ್ನು ವಾಪಸ್‌ ಪಡೆಯಲಾಗಿದೆ. ಜಮ್ಮು ಸೇರಿದಂತೆ ಹಲವು ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಲವೆಡೆ ಕರ್ಫ್ಯೂ ವಿಧಿಸದಿದ್ದರೂ ಕರ್ಫ್ಯೂ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಶ್ಮೀರ ಬಂದ್:

ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಕಾಶ್ಮೀರದ ಜನಜೀವನ ಸ್ತಬ್ಧವಾಗಿದೆ. ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೆಟ್ರೋಲ್‌ ಬಂಕ್‌ಗಳು ಸೇರಿದಂತೆ ಎಲ್ಲಾ ಅಂಗಡಿಗಳೂ ಮುಚ್ಚಿವೆ. ಹಲವು ಕಡೆ ಜನ ಮನೆಗಳಿಂದ ಹೊರಗೆ ಬರುತ್ತಿಲ್ಲ. ಕಾಶ್ಮೀರದ ವ್ಯಾಪಾರಿಗಳ ಹಾಗೂ ಉತ್ಪಾದಕರ ಒಕ್ಕೂಟ (ಕೆಟಿಎಂಎಫ್‌), ಕಾಶ್ಮೀರ ಆರ್ಥಿಕ ಕೂಟ (ಕೆಇಎ) ಮತ್ತು ಇತರೆ ವ್ಯಾಪಾರಿ ಸಂಘಟನೆಗಳು ಪುಲ್ವಾಮ ಘಟನೆಯನ್ನು ಖಂಡಿಸಿ ಬಂದ್‌ಗೆ ಕರೆ ನೀಡಿವೆ. ಇದರಿಂದ ರಾಜ್ಯದ ಬಹುತೇಕ ಭಾಗದಲ್ಲಿ ಜನ ಜೀವನ ಸೋಮವಾರ ಪೂರ್ತಿ ಸ್ತಬ್ಧಗೊಂಡಿದೆ.

ಜನ ಗುಂಪುಗೂಡದಂತೆ ತಡೆಯಲು ಪೊಲೀಸರು, ಅರೆಸೇನಾ ಪಡೆಗಳ ಯೋಧರು ಗಸ್ತು ತಿರುಗುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‌ಪಿಎಫ್‌ ಯೋಧರು ರಸ್ತೆಗಳಿಗೆ ಮುಳ್ಳುತಂತಿ ಹಾಕುತ್ತಿದ್ದಾರೆ. ಲಾಲ್‌ ಚೌಕ್‌ ಮತ್ತು ಮೈಸುಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಘಂಟಾ ಘರ್‌ ಮಾರ್ಗವಾಗಿ ಯಾವುದೇ ವಾಹನಗಳು ಹಾದುಹೋಗದಂತೆ ತಡೆಯಲಾಗಿದೆ. ಹಲವು ರಸ್ತೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಲಾಲ್‌ ಚೌಕ್‌ನಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ವಾರದ ಸಂತೆ ಮಾರುಕಟ್ಟೆಯೂ ನಿನ್ನೆ ಬಂದ್‌ ಆಗಿತ್ತು. ಜಮ್ಮುವಿನ ಹಲವು ಪ್ರದೇಶಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಜಮ್ಮುವಿನಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳು ಬೀಡುಬಿಟ್ಟಿವೆ. ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಬ್ರಾಡ್‌ಬಾಂಡ್‌ ಇಂಟರ್‌ನೆಟ್‌ನ ಸ್ಪೀಡ್‌ ತಗ್ಗಿಸಲಾಗಿದೆ.

“ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆಗಳು ನಡೆದಿವೆ. ಅದನ್ನು ಬಿಟ್ಟರೆ ಜಮ್ಮು ಅಥವಾ ಶ್ರೀನಗರದಲ್ಲಿ ಯಾವುದೇ ಗಂಭೀರ ಘಟನೆಗಳು ನಡೆದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಜಮ್ಮು ಐಜಿಪಿ ಎಂ.ಕೆ. ಸಿನ್ಹಾ ಹೇಳಿದ್ದಾರೆ.