Home news-for-4-1-display #GoBackModi : ತಮಿಳುನಾಡಿನಲ್ಲಿ ಮೋದಿಗೆ ಮತ್ತೊಮ್ಮೆ ಮುಖಭಂಗ

#GoBackModi : ತಮಿಳುನಾಡಿನಲ್ಲಿ ಮೋದಿಗೆ ಮತ್ತೊಮ್ಮೆ ಮುಖಭಂಗ

SHARE

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಿಳುನಾಡಿನ ಜನ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗೋ ಬ್ಯಾಕ್‌ ಮೋದಿ ಎನ್ನುವ ಮೂಲಕ ಮೋದಿ ಹಾಗೂ ಬಿಜೆಪಿ ಪಕ್ಷಕ್ಕೆ ತಮಿಳುನಾಡು ಜನತೆ ಮತ್ತೊಮ್ಮೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ.

ಮೋದಿ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಶಂಕುಸ್ಥಾಪನೆಗೆ ಇಂದು (ಜ.27) ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಆದರೆ ಮೋದಿ ತಮಿಳುನಾಡಿಗೆ ಬರಬಾರದು ಎಂದು ತಮಿಳುನಾಡಿನ ನೆಟ್ಟಿಗರು #gobackmodi ಎಂದು ಎಂದು ಟ್ವೀಟರ್‌ನಲ್ಲಿ ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದ್ದು, ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಈ ಹ್ಯಾಷ್‌ಟ್ಯಾಗ್ ಬಳಿಸಿದ್ದಾರೆ.

ಗಾಜಾ ಚಂಡಮಾರತದ ಎಫೆಕ್ಟ್‌

ಕಳೆದ ನವೆಂಬರ್‌ ತಿಂಗಳಿನಲ್ಲಿ ಗಾಜಾ ಚಂಡ ಮಾರುತಕ್ಕೆ ಸಿಕ್ಕು ತಮಿಳುನಾಡಿನ ಕರಾವಳಿ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಚಂಡಮಾರುತದ ಪರಿಣಾಮ ಸುಮಾರು 3 ಲಕ್ಷ ಜನ ಮನೆ ಕಳೆದುಕೊಂಡು ಬೀದಿಗೆ ಬಿದ್ದದ್ದರು. 11 ಲಕ್ಷ ಮರಗಳು ನೆಲಕ್ಕೆ ಉರುಳಿದ್ದವು. ಅಲ್ಲದೆ ಅಪಾರ ಸಂಖ್ಯೆಯ ವಿದ್ಯುತ್ ಕಂಬಗಳು ಹಾನಿಗೊಳಗಾಗಿ ಕರಾವಳಿ ಭಾಗದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿತ್ತು. ಈಗಲೂ ತಮಿಳುನಾಡಿನಲ್ಲಿ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಲೇ ಇವೆ.

ಗಾಜಾ ಚಂಡಮಾರುತದ ನಷ್ಟ ತುಂಬಲು ತಮಿಳುನಾಡು ಸರಕಾರ ಕೇಂದ್ರದ ಬಳಿ ಸುಮಾರು 10 ಸಾವಿರ ಕೋಟಿ ಪರಿಹಾರ ನಿಧಿ ಕೇಳಿತ್ತು. ಆದರೆ ತಮಿಳುನಾಡು ಸರಕಾರದ ಮನವಿಯನ್ನು ಪುರಸ್ಕರಿಸದ ಕೇಂದ್ರ ಕನಿಷ್ಠ ಮೊತ್ತದ ಪರಿಹಾರವನ್ನು ಬಿಡುಗಡೆ ಮಾಡಿ ಕೈತೊಳೆದುಕೊಂಡಿತ್ತು. ಇದು ಸಾಮಾನ್ಯವಾಗಿ ತಮಿಳಿಗರಲ್ಲಿ ಮೋದಿ ವಿರುದ್ಧ ಆಕ್ರೋಶ ಭುಗಿಲೇಳಲು ಕಾರಣವಾಗಿದೆ.

ತಮಿಳಿಗರ ಆಕ್ರೋಶ ಇದೇ ಮೊದಲಲ್ಲ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಿಳಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ಮಂಡಳಿ ರಚಿಸುವಂತೆ ಹಾಗೂ ಮೇಕೆದಾಟುವಿನಲ್ಲಿ ಕರ್ನಾಟಕ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ತಮಿಳಿಗರು ರಸ್ತೆಗಿಳಿದು ಹೋರಾಟ ನಡೆಸಿದ್ದರು.

ಈ ಹೋರಾಟಕ್ಕೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದವು. ಆದರೆ ಮೋದಿ ಈ ಕುರಿತು ಮೌನ ಮುರಿದಿರಲಿಲ್ಲ. ಅಲ್ಲದೆ ಕಾವೇರಿ ನದಿ ನೀರು ಹಂಚಿಕೆಗೆ ಮಂಡಳಿಯನ್ನೂ ರಚಿಸಿರಲಿಲ್ಲ ಮೇಕೆದಾಟುವಿನ ಬಗ್ಗೆಯೂ ತುಟಿಬಿಚ್ಚಿರಲಿಲ್ಲ ಎಂಬ ಕಾರಣಕ್ಕೆ ಗೋ ಬ್ಯಾಕ್‌ ಮೋದಿ ಎಂದು ತಮಿಳುನಾಡಿನ ನೆಟ್ಟಿಗರು ಮೋದಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು.

2018 ಏಪ್ರಿಲ್ 12ರಂದು ಮೋದಿ ಚೆನ್ನೈನಲ್ಲಿ ಏರ್ಪಡಿಸಿದ್ದ ರಕ್ಷಣಾ ವಸ್ತು ಪ್ರದರ್ಶನದ ಉದ್ಘಾಟನೆಗೆ ಆಗಮಿಸಿದ್ದಾಗಲೂ ತಮಿಳಿಗರು ಟ್ವೀಟರ್‌ ನಲ್ಲಿ #gobackmodi ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡಿ ಪ್ರತಿರೋಧ ತೋರಿದ್ದರು. ಇದು ಮೋದಿಗೆ ದೊಡ್ಡಮಟ್ಟದ ಮುಖಭಂಗ ಉಂಟುಮಾಡಿತ್ತು.

ತಮಿಳುನಾಡಿನ ತೂತುಕುಡಿಯಲ್ಲಿ ಸ್ಟರ್ಲೈಟ್‌ ಕಾರ್ಖಾನೆ ಪರಿಸರಕ್ಕೆ ಮಾರಕವಾದದ್ದು ಎಂದು ಹಲವು ದಶಕಗಳಿಂದ ತಮಿಳಿಗರು ಹೋರಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಹೋರಾಟದ ವೇಳೆ ಉಂಟಾದ ಗಲಭೆಯನ್ನು ತಡೆಯಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ 13 ಜನ ಮೃತಪಟ್ಟಿದ್ದರು. ಈ ಕುರಿತು ಮೋದಿ ಕ್ರಮ ಜರುಗಿಸಿರಲಿಲ್ಲ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ನೀಟ್ ಪರೀಕ್ಷೆಯ ಸಂದರ್ಭದಲ್ಲೂ ತಮಿಳುನಾಡು ಜನ ಮೋದಿ ನಡೆಯ ವಿರುದ್ಧ ಕೆಂಡಾಮಂಡಲವಾಗಿದ್ದರು.

2016 ರಲ್ಲಿ ಕೇರಳ ವಿಧಾನಸಭಾ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಕೇರಳ ಸರಕಾರವನ್ನು ಜರಿದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕೇರಳದ ಜನ ಟ್ವೀಟರ್ ನಲ್ಲಿ #pomonemodi ಎಂದು ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡುವ ಮೂಲಕ ಮೋದಿ ಕಾಲೆಳೆದಿದ್ದರು. ಈಗ ತಮಿಳುನಾಡಿನಲ್ಲಿ ಮತ್ತೊಮ್ಮೆ ಜನ ಗೋ ಬ್ಯಾಕ್‌ ಮೋದಿ ಎನ್ನುವ ಮೂಲಕ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದಾರೆ.