Home news-in-brief ಗಣರಾಜ್ಯೋತ್ಸವಕ್ಕೆ ‘ಗನ್‌ಡೌನ್ ಸಾಧನೆ’; ಯೋಗಿ ಆಡಳಿತದಲ್ಲಿ 3,026 ಎನ್‌ಕೌಂಟರ್‌

ಗಣರಾಜ್ಯೋತ್ಸವಕ್ಕೆ ‘ಗನ್‌ಡೌನ್ ಸಾಧನೆ’; ಯೋಗಿ ಆಡಳಿತದಲ್ಲಿ 3,026 ಎನ್‌ಕೌಂಟರ್‌

SHARE

ಉತ್ತರ ಪ್ರದೇಶದಲ್ಲಿ ನಿತ್ಯ ಆರು ಎನ್‌ಕೌಂಟರ್‌ಗಳು ನಡೆಯುತ್ತಿದ್ದು, ಪ್ರತಿದಿನ 14 ಮಂದಿ ಬಂಧನವಾಗುತ್ತಿದೆ. ಇದನ್ನೇ ಯೋಗಿ ಸರಕಾರ ಈಗ ಸಾಧನೆ ಎಂದು ಬಿಂಬಿಸಿಕೊಳ್ಳಲು ಮುಂದಾಗಿದೆ.

ಅಪರಾಧ ಪ್ರಕರಣಗಳಿಗೆ ಕುಖ್ಯಾತಿಯಾಗಿರುವ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಬಳಿಕ 3 ಸಾವಿರಕ್ಕೂ ಹೆಚ್ಚು ಎನ್‌ಕೌಂಟರ್‌ಗಳು ನಡೆದಿದ್ದು, ಇದನ್ನೇ ಗಣರಾಜ್ಯೋತ್ಸವದಲ್ಲಿ ಸಾಧನೆಯಾಗಿ ಬಿಂಬಿಸಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ.

2017ರ ಮಾರ್ಚ್‌ನಿಂದ 2018ರ ಜುಲೈವರೆಗೆ ಉತ್ತರ ಪ್ರದೇಶದಲ್ಲಿ 3,026 ಎನ್‌ಕೌಂಟರ್‌ಗಳು ನಡೆದಿವೆ. ಎನ್‌ಕೌಂಟರ್‌ಗಳಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ. 838 ಮಂದಿ ಆರೋಪಿಗಳು ಗಾಯಗೊಂಡಿದ್ದಾರೆ. 7,043 ಆರೋಪಿಗಳನ್ನು ಬಂಧಿಸಲಾಗಿದೆ. 11,981 ಅಪರಾಧಿಗಳ ಜಾಮೀನು ರದ್ದುಗೊಂಡಿದ್ದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಎನ್‌ಕೌಂಟರ್‌ ಹಾಗೂ ಬಂಧನಗಳ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅನೂಪ್‌ ಚಂದ್ರ ಪಾಂಡೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ ಈ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ. ಯೋಗಿ ಆದಿತ್ಯನಾಥ್‌ ತಮ್ಮ ಆಡಳಿತಾವಧಿಯ ಸುಮಾರು ಒಂದೂವರೆ ವರ್ಷದಲ್ಲಿ ನಡೆದಿರುವ ಎನ್‌ಕೌಂಟರ್‌ಗಳನ್ನು ರಾಜ್ಯದಲ್ಲಿ ಬಿಜೆಪಿ ಸರಕಾರದ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೊಲೀಸ್‌ ಎನ್‌ಕೌಂಟರ್‌ಗಳಲ್ಲಿ 69 ಅಪರಾಧಿಗಳು ಮೃತಪಟ್ಟಿದ್ದರೆ, ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್‌) 9 ಅಪರಾಧಿಗಳನ್ನು ಎನ್‌ಕೌಂಟರ್ ಮಾಡಿ 139 ಮಂದಿಯನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಉತ್ತರ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿಯಂಥ ಕೆಲಸಗಳಿಗೆ ಒತ್ತು ನೀಡುತ್ತಿಲ್ಲ. ನಕಲಿ ಎನ್‌ಕೌಂಟರ್‌ಗಳು ಹೆಚ್ಚಾಗುತ್ತಿದ್ದು, ನಮ್ಮ ಪಕ್ಷವೂ ಸರಕಾರದ ಈ ಎನ್‌ಕೌಂಟರ್‌ ಪ್ರಿಯತೆಯನ್ನು ಖಂಡಿಸುತ್ತಲೇ ಬಂದಿದೆ” ಎಂದು ಸಮಾಜವಾದಿ ಪಕ್ಷದ ವಕ್ತಾರ ಸುನಿಲ್‌ ಸಿಂಗ್‌ ಸಜ್ಜನ್‌ ತಿಳಿಸಿದ್ದಾರೆ.

Also Read: ‘ಎನ್‌ಕೌಂಟರ್‌ ರಾಜ್‌’, ಗುಜರಾತ್‌ to ಉತ್ತರ ಪ್ರದೇಶ; ಯೋಗಿ ನಾಡಲ್ಲಿ 59 ಎನ್‌ಕೌಂಟರ್‌

“ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಎನ್‌ಕೌಂಟರ್‌ಗಳ ಬಗ್ಗೆ ಸುಪ್ರೀಂಕೋರ್ಟ್‌ ಕೂಡಾ ಕಳವಳ ವ್ಯಕ್ತಪಡಿಸಿದೆ. ರಾಜ್ಯದ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ಸಿಬಿಐ ತನಿಖೆ ನಡೆದರೆ ಮುಖ್ಯಮಂತ್ರಿ ಹಾಗೂ ಉನ್ನತ ಪೊಲೀಸ್‌ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ” ಎಂದು ಸಜ್ಜನ್‌ ಹೇಳಿದ್ದಾರೆ.

“ರಾಜ್ಯದಲ್ಲಿ ಕಾನೂನು – ಸುವ್ಯವಸ್ಥೆ ಎಂಬುದು ಸಂಪೂರ್ಣ ಹದಗೆಟ್ಟಿದೆ. ಪ್ರತಿನಿತ್ಯ ಕೊಲೆಗಳು ನಡೆಯುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ಗಳ ಬಗ್ಗೆ ಸುಪ್ರೀಂಕೋರ್ಟ್‌ ಕೂಡಾ ಕಾಳಜಿ ತೋರಿದೆ. ರಾಜ್ಯಕ್ಕೆ ಕಪ್ಪು ಚುಕ್ಕೆಯಂತಿರುವ ಎನ್‌ಕೌಂಟರ್‌ಗಳನ್ನೇ ಸರಕಾರದ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ನಾಚಿಕೆಗೇಡು. ರಾಜ್ಯದ ಅಭಿವೃದ್ಧಿ ಸಾಧನೆಗಳ ಬಗ್ಗೆ ಈ ಸರಕಾರಕ್ಕೆ ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ಎನ್‌ಕೌಂಟರ್‌ಗಳನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳಲು ಯೋಗಿ ಸರಕಾರ ಮುಂದಾಗಿದೆ” ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಪ್ರಮೋದ್‌ ತಿವಾರಿ ಹೇಳಿದ್ದಾರೆ.

ಕಾರ್ಟೂನ್‌ ಕೃಪೆ: ಸತೀಶ್ ಆಚಾರ್ಯ