Home news-for-4-1-display ಮತ್ತೆ ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ; ಉತ್ತರ ಪ್ರದೇಶದ ಚುನಾವಣಾ ಹೊಣೆ

ಮತ್ತೆ ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ; ಉತ್ತರ ಪ್ರದೇಶದ ಚುನಾವಣಾ ಹೊಣೆ

SHARE

ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಪೂರ್ವ ಉತ್ತರ ಪ್ರದೇಶದ ಚುನಾವಣಾ ಹೊಣೆಯನ್ನು ಅವರಿಗೆ ವಹಿಸಲಾಗಿದೆ. 47 ವರ್ಷದ ಪ್ರಿಯಾಂಕಾ ರಾಜಕೀಯ ಪ್ರವೇಶಕ್ಕೆ ಕಾಂಗ್ರೆಸ್‌ ಅಧಿಕೃತ ಮುದ್ರೆಯೊತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಬಳಿಕ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಿದೆ. ಈ ಮೂಲಕ ಪ್ರಿಯಾಂಕಾ ಪಕ್ಷ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ.

ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಹಲವಾರು ವರ್ಷಗಳಿಂದ ಊಹಾಪೋಹಗಳು ಚಾಲ್ತಿಯಲ್ಲಿದ್ದವು. ತಮ್ಮ ರಾಜಕೀಯ ಪ್ರವೇಶ ಕುರಿತು ಪ್ರಿಯಾಂಕಾ ಕೂಡಾ ಸೌಮ್ಯವಾಗಿ ನಿರಾಕರಿಸುತ್ತಲೇ ಬಂದಿದ್ದರು. ಈಗ ಕಾಂಗ್ರೆಸ್‌ ಪಕ್ಷ ಅವರನ್ನು ಪೂರ್ವ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಿಸಿದೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರ ಕ್ಷೇತ್ರಗಳಲ್ಲಿ ರಣತಂತ್ರ ನಡೆಸಲು ಕಾಂಗ್ರೆಸ್‌ ಮುಂದಾಗಿದೆ.

ಕಳೆದ ಲೋಕಸಭಾ ಚುನಾವಣೆಯವರೆಗೆ ಪ್ರಿಯಾಂಕಾ ಗಾಂಧಿ ಪಕ್ಷದ ಒಳಗೆ ಚುನಾವಣಾ ರೂಪುರೇಷೆ ಹಾಗೂ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕೆಲಸಕ್ಕೆ ಸೀಮಿತವಾಗಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸಹೋದರಿಗೆ ಪೂರ್ವ ಉತ್ತರ ಪ್ರದೇಶದಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್, “ಪಕ್ಷದ ರಾಷ್ಟ್ರಾಧ್ಯಕ್ಷರಾದ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಅವರನ್ನು ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಪ್ರಿಯಾಂಕಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ” ಎಂದು ತಿಳಿಸಿದೆ.

ಪಕ್ಷದ ಹಿರಿಯ ನಾಯಕರಾದ ಜೋತಿರಾದಿತ್ಯ ಸಿಂಧಿಯಾ ಅವರನ್ನು ಪಶ್ಚಿಮ ಉತ್ತರ ಪ್ರದೇಶದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಉತ್ತರ ಪ್ರದೇಶದ ಚುನಾವಣಾ ಜವಾಬ್ದಾರಿಯನ್ನು ನಿಭಾಯಿಸಿದ್ದ ಮತ್ತೊಬ್ಬ ಹಿರಿಯ ನಾಯಕ ಗುಲಾಮ್ ನಭಿ ಆಜಾದ್ ಅವರನ್ನು ಹರಿಯಾಣದಲ್ಲಿ ಯುವಕರನ್ನು ಸಂಘಟಿಸಲು ಹಾಗೂ ಚುನಾವಣಾ ಮೇಲ್ವಿಚಾರಣೆ ನಡೆಸಲು ವರ್ಗಾಯಿಸಲಾಗಿದೆ.

ಪ್ರಿಯಾಂಕಾ ಗಾಂಧಿಯವರನ್ನು ಪೂರ್ವ ಉತ್ತರಪ್ರದೇಶದ ಕಾರ್ಯದರ್ಶಿಯನ್ನಾಗಿ ನೇಮಿಸುತ್ತಿದ್ದಂತೆ ಉತ್ತರಪ್ರದೇಶದ ಕಾಂಗ್ರೆಸ್ ಕೇಂದ್ರ ಕಚೇರಿಯ ಎದುರು ಅಭಿಮಾನಿಗಳು ಪಠಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಅನೇಕ ರಾಜಕೀಯ ನಾಯಕರು ಹಾಗೂ ಗಣ್ಯರು ಪ್ರಿಯಾಂಕಾ ಗಾಂಧಿಯವರ ರಾಜಕೀಯ ಎಂಟ್ರಿಗೆ ಟ್ವೀಟರ್ ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

ದಾರಿ ಅಷ್ಟು ಸುಗಮವಿಲ್ಲ:

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಾಗಲೇ ರಾಹುಲ್ ಗಾಂಧಿ, ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ತರುವ ಸುಳಿವು ನೀಡಿದ್ದರು. ಆದರೆ ಪ್ರಿಯಾಂಕಾ ಅವರ ಮುಂದಿನ ರಾಜಕೀಯ ದಾರಿ ಅಷ್ಟು ಸುಗಮವಲ್ಲ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಏಕೆಂದರೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಎಸ್‌ಪಿ- ಬಿಎಸ್‌ಪಿ ನಡುವೆ ನೇರಾನೇರ ಹಣಾಹಣಿ ಎಂದೇ ಬಿಂಬಿಸಲಾಗಿದೆ. ಅಲ್ಲದೆ ಇಡೀ ರಾಜ್ಯಾದ್ಯಂತ ಹಿಂದುತ್ವದ ಹೆಸರಿನಲ್ಲಿ ಮತ ಪಡೆಯುವ ಯೋಗಿ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನಲಾಗುತ್ತಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ಕಾಂಗ್ರೆಸ್ ಅಷ್ಟೊಂದು ಲಘುವಾಗಿ ಪರಿಗಣಿಸಿಲ್ಲ ಎಂಬುದು ಪ್ರಿಯಾಂಕಾ ರಾಜಕೀಯ ಪ್ರವೇಶ ಸ್ಪಷ್ಟಪಡಿಸಿದೆ. ಆದರೆ ಅವರಿಗೆ ಜವಾಬ್ದಾರಿ ನೀಡಲಾಗಿರುವ ಪೂರ್ವ ಉತ್ತರಪ್ರದೇಶದ 30 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಈ ಬಾರಿ ಪಕ್ಷವನ್ನು ಬಲವಾಗಿ ಸಂಘಟಿಸಿ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಪೂರ್ವ ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಿಯಾಂಕಾ ಈ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.

ಪಕ್ಷ ಸಂಘಟನೆಯಷ್ಟೇ ಅಲ್ಲದೆ ಪ್ರಿಯಾಂಕಾ ಗಾಂಧಿ ಚುನಾವಣೆಗೂ ಸ್ಫರ್ಧಿಸುವ ಮಾತುಗಳು ಕೇಳಿಬಂದಿದೆ. ರಾಹುಲ್ ಗಾಂಧಿ ಸಂಸದರಾಗಿರುವ ಅಮೇಠಿ ಅಥವಾ ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್ ಬರೇಲಿ ಈ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ಸ್ಫರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.