Home Cover Story ಪೇಟಿಎಂ, ಫೋನ್‌ ಪೇ, ಗೂಗಲ್ ಪೇ; ಮೊಬೈಲ್‌ ವ್ಯಾಲೆಟ್ ಬಳಸುವವರಿಗಾಗಿ ಈ ಅಗತ್ಯ ಮಾಹಿತಿ

ಪೇಟಿಎಂ, ಫೋನ್‌ ಪೇ, ಗೂಗಲ್ ಪೇ; ಮೊಬೈಲ್‌ ವ್ಯಾಲೆಟ್ ಬಳಸುವವರಿಗಾಗಿ ಈ ಅಗತ್ಯ ಮಾಹಿತಿ

SHARE

ಭಾರತ ಡಿಜಿಟಲೀಕರಣವಾಗುತ್ತಿದೆ. ಡಿಜಿಟಲ್ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ದೇಶ ಮೆಲ್ಲ ಮೆಲ್ಲನೆ ಕ್ಯಾಶ್‌ಲೆಸ್ ವ್ಯವಹಾರದ ಕಡೆಗೆ ಈಗಾಗಲೇ ಗಮನ ಹರಿಸಿದೆ. ನೋಟುಗಳ ಅಮಾನ್ಯೀಕರಣದ ನಂತರ ಭಾರತದಲ್ಲಿ ಡಿಜಿಟಲ್ ವ್ಯವಹಾರ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಡಿಜಿಟಲ್ ವ್ಯವಹಾರದಿಂದ ಗ್ರಾಹಕರಿಗೆ ಎಷ್ಟರ ಮಟ್ಟಿಗೆ ಅನುಕೂಲವಿದೆಯೋ, ಅಷ್ಟೇ ಅನಾನುಕೂಲವೂ ಇದೆ ಎನ್ನುತ್ತಿದೆ; ಆರ್‌ಬಿಐ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಕಳೆದ 2016-17ರ ಅವಧಿಯಲ್ಲಿ ಭಾರತದಲ್ಲಿ ಶೇ. 55ರಷ್ಟು ಜನ ವ್ಯವಹಾರವನ್ನು ಆನ್‌ಲೈನ್ ಮೂಲಕ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳ ಆನ್‌ಲೈನ್ ವ್ಯವಹಾರಕ್ಕೆ ಹೋಲಿಸಿದರೆ ಇದು ಶೇ. 28ರಷ್ಟು ಅಧಿಕ. 2016ಅಕ್ಟೋಬರ್‌ನಲ್ಲಿ 140 ಮಿಲಿಯನ್ ಬಾರಿ ಆನ್‌ಲೈನ್ ವ್ಯವಹಾರಗಳು ನಡೆದಿದ್ದರೆ, 2017 ಏಪ್ರಿಲ್ ವೇಳೆಗೆ ಈ ಪ್ರಮಾಣ 268 ಮಿಲಿಯನ್‌ಗೆ ಏರಿಕೆ ಕಂಡಿತ್ತು. ಈ ವಹಿವಾಟಿನಲ್ಲಿ 151.21 ಬಿಲಿಯನ್ ಡಾಲರ್ ಹಣ ಆನ್‌ಲೈನ್ ಮೂಲಕ ವಿನಿಮಯವಾಗಿದೆ. ಭಾರತದಲ್ಲಿ ಡಿಜಿಟಲ್ ವ್ಯವಹಾರಗಳು ಯಾವ ಗತಿಯಲ್ಲಿ ಬೆಳೆಯುತ್ತಿವೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ ನುಡಿಯುತ್ತಿವೆ.

ಭಾರತದಲ್ಲಿ ಕ್ಯಾಶ್‌ಲೆಸ್‌ ವ್ಯವಹಾರ ಅಭಿವೃದ್ಧಿ ಕಾಣುತ್ತಿರುವುದಕ್ಕೆ ಸ್ಮಾರ್ಟ್‌ಪೋನ್ ಹಾಗೂ ಮೊಬೈಲ್‌ ಡಾಟಾ ಅತೀ ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರ ಕೈಗೆ ಸಿಗುತ್ತಿರುವುದೂ ಒಂದು ಕಾರಣ. ಆದರೆ ಡಿಜಿಟಲ್ ವ್ಯವಹಾರಗಳು ಬೆಳೆದಂತೆಲ್ಲಾ, ಆನ್‌ಲೈನ್ ವಂಚನೆಯೂ ಅಧಿಕವಾಗುತ್ತಿದೆ ಎಂಬುದು ಸಹ ಅತ್ಯಂತ ಕಳವಳಕಾರಿ ವಿಚಾರವಾಗಿದೆ.

ಕಳೆದ ವರ್ಷ ಆರ್‌ಬಿಐ ನೀಡಿರುವ ಅಂಕಿಅಂಶಗಳ ಪ್ರಕಾರ ನಡೆಯುವ 10 ವ್ಯವಹಾರಗಳಲ್ಲಿ ಒಬ್ಬರಿಗೆ ವಂಚನೆ ಮಾಡಲಾಗುತ್ತಿದೆ. ಸೈಬರ್ ವಂಚನೆಯನ್ನು ತಡೆಗಟ್ಟಲು ಸರ್ಕಾರ ಹಾಗೂ ಆರ್‌ಬಿಐ ಏನೇ ಕಾನೂನುಗಳನ್ನು ತಂದರೂ ಸಹ ವಂಚನೆಯನ್ನು ನಿಗ್ರಹಿಸುವುದು ಸಾಧ್ಯವಾಗುತ್ತಿಲ್ಲ. 2015-16 ರಲ್ಲಿ ಭಾರತದಲ್ಲಿ 16,468 ಸೈಬರ್ ವಂಚನೆ ಪ್ರಕರಣಗಳು ಕಂಡು ಬಂದಿದ್ದರೆ, 2016-17 ರಲ್ಲಿ 13,653 ಪ್ರಕರಣಗಳು ದಾಖಲಾಗಿವೆ.

ಪ್ರಸ್ತುತ ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು ಕಠಿಣ ನಿಲುವುಗಳನ್ನು ತಳೆದಿರುವ ಆರ್‌ಬಿಐ ಡಿಜಿಟಲ್ ಪಾವತಿ ಸಮಿತಿಗೆ ಮುಖ್ಯಸ್ಥರಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರನ್ನು ಆಯ್ಕೆ ಮಾಡಿದೆ, ಅಲ್ಲದೆ ಆನ್‌ಲೈನ್ ವ್ಯವಹಾರಗಳಲ್ಲಿ ತೊಡಗಿರುವ ಎಲ್ಲಾ ಖಾಸಗಿ ಕಂಪೆನಿಗಳ
ವಿರುದ್ಧ ಕೆಲವು ಕಠಿಣ ನಿರ್ಧಾರಗಳನ್ನು ತಳೆದಿದೆ.

ಆರ್‌ಬಿಐ ಡಿಜಿಟಲ್ ಪಾವತಿ ಸಮಿತಿ ಮುಖ್ಯಸ್ಥ, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ.

ಮೊಬೈಲ್ ವ್ಯಾಲೆಟ್:

ಪೇಟಿಎಂ, ಫೋನ್‌ ಪೆ, ಅಮೇಜಾನ್ ಪೆ, ಗೂಗಲ್ ಪೇ ಸೇರಿದಂತೆ ಹತ್ತಾರು ಮೊಬೈಲ್ ವ್ಯಾಲೆಟ್‌ಗಳು ಭಾರತದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿನಿತ್ಯ ದೇಶದಲ್ಲಿ ನಡೆಯುತ್ತಿರುವ ಆನ್‌ಲೈನ್ ವಹಿವಾಟಿನಲ್ಲಿ ವಿದೇಶಿ ಮೂಲದ ಈ ಖಾಸಗಿ ಕಂಪೆನಿಗಳ ಪಾಲು ಅಧಿಕ. ಆದರೆ ಈ ಯಾವ ಕಂಪೆನಿಗಳು ಸಹ ಗ್ರಾಹಕರ ಬಳಿ ನೇರಾನೇರಾ ಭೇಟಿಯಾಗಿ ಕೆವೈಸಿ (ಗ್ರಾಹಕರ ಗುರುತು ದಾಖಲೆ) ಪಡೆಯುವುದಿಲ್ಲ. ಬದಲಾಗಿ ಗ್ರಾಹಕರು ಬ್ಯಾಂಕ್‌ಗಳಿಗೆ ನೀಡಿರುವ ಆಧಾರ್ ನಂಬರ್ ಸೇರಿದಂತೆ ಇತರೆ ಮಾಹಿತಿಗಳನ್ನೇ ಬಳಸಿಕೊಂಡು ತಮ್ಮ ಸೇವೆಯನ್ನು ನೀಡುತ್ತಿವೆ.

ಗ್ರಾಹಕ ಮೊಬೈಲ್‌ನಲ್ಲಿ ಲಭ್ಯ ಇರುವ ಗೂಗಲ್ ಆಪ್‌ಗೆ ಹೋಗಿ ಮೊಬೈಲ್ ವ್ಯಾಲೆಟ್‌ಗೆ ಸಂಬಂಧಿಸಿದ ಆಪ್‌ ಅನ್ನು ಡೌನ್‌ಲೋಡ್ ಮಾಡಿ, ಆತನ/ ಆಕೆಯ ಮೊಬೈಲ್ ನಂಬರ್ ನಮೂದಿಸಿದರೆ ಸಾಕು. ಆತನ/ ಆಕೆಯ ಆದಾರ್ ನಂಬರ್‌ನಿಂದ ಬ್ಯಾಂಕ್ ಖಾತೆಯವರೆಗೆ ಎಲ್ಲಾ ಮಾಹಿತಿಗಳು ಮೊಬೈಲ್ ವ್ಯಾಲೆಟ್ ಸಂಸ್ಥೆಗೆ ಲಭ್ಯವಾಗುತ್ತದೆ. ಅದರೆ ಇದು ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ, 2018 ಅಕ್ಟೋಬರ್ ಆಧಾರ್ ಕಾಯ್ದೆ ಸೆಕ್ಷನ್ 57 ರ ಅಡಿಯಲ್ಲಿ ಕಾನೂನಿಗೆ ಸಂಪೂರ್ಣ ವಿರುದ್ಧವಾದ ನಡೆಯಾಗಿದೆ.

ಆಧಾರ್ ಸಂಖ್ಯೆ ಕಡ್ಡಾಯದ ಕುರಿತು 2018 ಅಕ್ಟೋಬರ್‌ನಲ್ಲಿ ತೀರ್ಪು ನೀಡಿದ ಸುಪ್ರೀಮ್ ಕೋರ್ಟ್‌ ಮೊಬೈಲ್ ಸಂಖ್ಯೆ ಪಡೆಯಲು ಅಧಾರ್‌ಅನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಗ್ರಾಹಕನ ಮೊಬೈಲ್‌ ಸಂಖ್ಯೆಯ ಮೂಲಕ ಆತನ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದ ಮೊಬೈಲ್ ವ್ಯಾಲೆಟ್ ಕಂಪೆನಿಗಳಿಗೆ ಸುಪ್ರೀಂನ ಈ ತೀರ್ಪು ಮರ್ಮಾಘಾತವಾಗಿತ್ತು. ಆದರೂ ಇಷ್ಟು ದಿನ ತನ್ನ ನಿಲುವನ್ನು ಸ್ಪಷ್ಟಪಡಿಸದ ಆರ್‌ಬಿಐ ಈಗ ಸುಪ್ರೀಂನ ತೀರ್ಪನ್ನು ಪಾಲಿಸುವ ನಿಟ್ಟಿನಲ್ಲಿ ಈಗ ಹೆಜ್ಜೆ ಹಾಕಿದೆ.

ಮಾರ್ಚ್ ಅಂತ್ಯದ ವೇಳೆ ಮೊಬೈಲ್ ವ್ಯಾಲೆಟ್‌ ಕಂಪೆನಿಗಳು ನೇರವಾಗಿ ಗ್ರಾಹಕನನ್ನು ಸಂಪರ್ಕಿಸಿ ಅವರ ಹೆಬ್ಬೆರಳಿನ ಗುರುತು (ಬಯೋ ಮೆಟ್ರಿಕ್) ಪಡೆದು ನಂತರ ಸೇವೆ ನೀಡಬೇಕು. ಇಲ್ಲದಿದ್ದರೆ ಅಂತಹ ಕಂಪೆನಿಯ ವ್ಯವಹಾರದ ಮಾನ್ಯತೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಆರ್‌ಬಿಐ ನ ಈ ನಡೆಯಿಂದ ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎನ್ನಲಾಗುತ್ತಿದೆ. ಅದೇ ವೇಳೆ, ಇಷ್ಟು ಕಡಿಮೆ ಕಾಲಮಿತಿಯಲ್ಲಿ ಮೊಬೈಲ್ ವ್ಯಾಲೆಟ್ ಸೇವೆ ನೀಡುವ ಕಂಪನಿಗಳು ಗ್ರಾಹಕರಿಂದ ನೇರವಾಗಿ ಕೆವೈಸಿ ಮಾಹಿತಿ ಪಡೆದುಕೊಳ್ಳುವುದು ಕಷ್ಟ ಇದೆ. ಇದು ಸಹಜವಾಗಿಯೇ ಅವುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಡಿಜಿಟಲ್ ಪಾವತಿ ಸಮಿತಿಯ ಪಾತ್ರ

ಆನ್‌ಲೈನ್ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಆರ್‌ಬಿಐ ಡಿಜಿಟಲ್ ಪಾವತಿ ಸಮಿತಿಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಐದು ಜನರನ್ನೊಳಗೊಂಡ ಈ ಸಮಿತಿಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮಾಜಿ ಅಧ್ಯಕ್ಷ ನಂದನ್ ನೀಲೆಕಣಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು ಮುಂದಿನ 90 ದಿನಗಳಲ್ಲಿ ತಮ್ಮ ಜವಾಬ್ದಾರಿ ಹಾಗೂ ಆನ್‌ಲೈನ್ ವಂಚನೆಯನ್ನು ತಡೆಗಟ್ಟುವ ಕುರಿತ ವರದಿಯನ್ನು ಆರ್‌ಬಿಐಗೆ ಸಲ್ಲಿಸಬೇಕಿದೆ.

ಸಮಿತಿಯ ಜವಾಬ್ದಾರಿ ಹಾಗೂ ಸವಾಲುಗಳು

*ದೇಶದಲ್ಲಿ ಅಸ್ಥಿತ್ವದಲ್ಲಿರುವ ಡಿಜಿಟಲ್ ಪಾವತಿಗಳ ಪರಿಶೀಲನೆ.

*ಸರಕಾರಿ ಹಾಗೂ ಖಾಸಗಿ ಬ್ಯಾಂಕಿಂಗ್ ಸೇವೆಗಳ ನಡುವಿನ ಅಂತರವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ನೀಡುವುದು.

*ದೇಶದ ಹಣಕಾಸು ವ್ಯವಸ್ಥೆಯಲ್ಲಿ ಪ್ರಸ್ತುತ ಡಿಜಿಟಲ್ ಪಾವತಿಗಳ ಪ್ರಮಾಣವನ್ನು ನಿರ್ಣಯಿಸುವುದು.

*ಆರ್ಥಿಕತೆಯ ಡಿಜಿಟಲೀಕರಣ ಹಾಗೂ ಡಿಜಿಟಲ್ ಪಾವತಿಗಳ ಪರಿಣಾಮಕಾರಿ ಬಳಕೆಯಿಂದ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಅಳವಡಿಸಿಕೊಳ್ಳಬಹುದಾದ ಅತ್ಯುತ್ತಮ ಮಾರ್ಗದ ಕುರಿತು ದೇಶದಾದ್ಯಂತ ವಿಶ್ಲೇಷಣೆ ಕೈಗೊಳ್ಳುವುದು.

* ಡಿಜಿಟಲ್ ಪಾವತಿಗಳ ಸುರಕ್ಷತೆ ಹಾಗೂ ಭದ್ರತೆಯನ್ನು ಬಲಪಡಿಸುವ ಕುರಿತು ಕ್ರಮಗಳನ್ನು ಸೂಚಿಸುವುದು.

*ಡಿಜಿಟಲ್ ವಿಧಾನದ ಮೂಲಕ ಹಣಕಾಸಿನ ವ್ಯವಹಾರ ನಡೆಸುವ ಗ್ರಾಹಕನ ವಿಶ್ವಾಸ ಹಾಗೂ ನಂಬಿಕೆಯನ್ನು ಹೆಚ್ಚಿಸುವ ಮಾರ್ಗಸೂಚಿ ನೀಡುವುದು.

ಹೀಗೆ ಆರ್‌ಬಿಐ ಹತ್ತಾರು ಜವಾಬ್ದಾರಿಗಳನ್ನು ಡಿಜಿಟಲ್ ಪಾವತಿ ಸಮಿತಿಗೆ ನೀಡಿದೆ.

ಗ್ರಾಹಕರು ಕೈಗೊಳ್ಳಬೇಕಾದ ಎಚ್ಚರಿಕಾ ಕ್ರಮಗಳು

ಆನ್‌ಲೈನ್ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ, ಸುಪ್ರೀಂ ಕೋರ್ಟ್ ಹಾಗೂ ಅರ್‌ಬಿಐ ಎಷ್ಟೇ ಪರಿಣಾಮಕಾರಿ ನಿಯಮಗಳನ್ನು ಜಾರಿಗೆ ತಂದರೂ ಸಹ ಸೈಬರ್ ವಂಚನೆಯನ್ನು ತಡೆಗಟ್ಟುವುದು ಅಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ಡಿಜಿಟಲ್ ವ್ಯವಹಾರದಲ್ಲಿ ತೊಡಗುವ ಗ್ರಾಹಕರು ಯಾವಾಗಲೂ ಎಚ್ಚರಾಗಿರುವುದು ಉತ್ತಮ. ಆ ನಿಟ್ಟಿನಲ್ಲಿ ಆನ್‌ಲೈನ್ ವಂಚನೆಗೆ ಒಳಗಾಗದಿರಲು ಗ್ರಾಹಕರು ಕೈಗೊಳ್ಳಬೇಕಾದ ಸೂಕ್ತ ಎಚ್ಚರಿಕಾ ಕ್ರಮಗಳು ಇಲ್ಲಿವೆ.

*ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸುವಾಗ ಹುಷಾರಾಗಿರಿ

ಗ್ರಾಹಕರು ಮೊಬೈಲ್‌ನಲ್ಲಿ ಯಾವುದೇ ವಸ್ತುವನ್ನು ಹುಡುಕಾಡುವಾಗ ಆದಷ್ಟು ಎಚ್ಚರಿಕೆವಹಿಸಿ. ಏಕೆಂದರೆ ಸೈಬರ್ ಅಪರಾಧಿಗಳು ನೀವು ಹುಡುಕುತ್ತಿರವ ವಸ್ತುವಿನ ವೆಬ್‌ಸೈಟಿನಲ್ಲಿ ಬ್ಲಾಕ್ ಎಸ್‌ಇಓ (ವಿಷಯುಕ್ತ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ತಂತ್ರಗಳು) ತಂತ್ರಗಳ ಮೂಲಕ ಅದೇ ವಸ್ತುವನ್ನು ಹೋಲುವ ಸುಳ್ಳು ಲಿಂಕ್ ಗಳನ್ನು ಅಳವಡಿಸಿರುತ್ತಾರೆ. ಅಲ್ಲದೆ ನೀವು ಆ ಲಿಂಕ್‌ಗಳನ್ನು ಉದ್ದೇಶವೂರ್ವಕವಾಗಿ ಒತ್ತುವಂತೆ ಪ್ರೇರೇಪಿಸಲಾಗುತ್ತದೆ.

ಅಕಸ್ಮಾತ್ ನೀವು ಆ ಲಿಂಕ್ ಅನ್ನು ಪ್ರವೇಶಿಸಿ ಹಣ ಸಂದಾಯ ಮಾಡಿದರೆ ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ ಇಂಟರ್ನೆಟ್‌ನಲ್ಲಿ ವಸ್ತುಗಳ ಕುರಿತ ಹುಡುಕಾಟ ನಡೆಸುವಾಗ ಗ್ರಾಹಕರು ಆದಷ್ಟು ಎಚ್ಚರಿಕೆವಹಿಸಿ, ಯಾವ ವೆಬ್‌ಸೈಟಿಗೆ ಪ್ರವೇಶಿಸುತ್ತಿದ್ದೀರಿ ಹಾಗೂ ಅದರ ನಂಬಿಕಾರ್ಹತೆಯ ಕುರಿತು ದೃಢಪಡಿಸಿಕೊಳ್ಳಿ.

*ಕ್ಲಿಕ್ ಬದಲು ಟೈಪಿಸುವುದು ಸೂಕ್ತ

ಮೊಬೈಲ್‌ನಲ್ಲಿ ಯಾವುದೇ ವೆಬ್‌ಸೈಟಿಗೆ ಭೇಟಿ ನೀಡುವುದಾದರೆ ಆ ವೆಬ್‌ಸೈಟಿನ ಹೆಸರನ್ನು ಸರಿಯಾಗಿ ಟೈಪಿಸಿ ಆ ನಂತರ ಭೇಟಿ ನೀಡುವುದು ಸೂಕ್ತ. ಏಕೆಂದರೆ ಸೈಬರ್ ವಂಚಕರು ಹಣ ಕೀಳುವ ಸಲುವಾಗಿ ಅಂತಹ ನೂರಾರು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿ ಮಾಡಿರುತ್ತಾರೆ. ಅಲ್ಲದೆ ನೀವು ಹುಟುಕಾಟ ನಡೆಸುವ ವೆಬ್‌ಸೈಟಿನಲ್ಲಿ HTTP ಪಕ್ಕದಲ್ಲಿ S ಎಂಬ ಅಕ್ಷರ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ. HTTPS ಎಂಬ ಅಕ್ಷರ ಇದ್ದರೆ ಅ ವೆಬ್‌ಸೈಟ್ ಸುರಕ್ಷಿತ ಎಂದು ಅರ್ಥ.

*ನಂಬಿಕಾರ್ಹರಿಂದ ಮಾತ್ರ ಖರೀದಿಸಿ

ಅನ್‌ಲೈನ್‌ನಲ್ಲಿ ಯಾವುದೇ ವಸ್ತುವಿನ ಖರೀದಿಗೆ ಮುಂದಾಗುವುದಕ್ಕೂ ಮುಂಚೆ, ನೀವು ಹಣ ಸಂದಾಯ ಮಾಡುತ್ತಿರುವ ಸಂಸ್ಥೆ ನಂಬಿಕಾರ್ಹವೆ ಎಂಬುದನ್ನು ಧೃಡಪಡಿಸಿಕೊಳ್ಳಿ. ಏಕೆಂದರೆ ಇಂದು ಅನಾಮಧೇಯ ಹೆಸರಿನಲ್ಲಿ ಹತ್ತಾರು ಶಾಪಿಂಗ್ ಕಂಪೆನಿಗಳು ಹುಟ್ಟಿವೆ. ಇವು ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ.

* ಡಿಜಿಟಲ್ ವ್ಯವಹಾರಕ್ಕೆ ಸ್ವಂತ ಕಂಪ್ಯೂರ್ ಮೊಬೈಲ್ ಬಳಸಿ

ಹೆಚ್ಚು ಡಿಜಿಟಲ್ ವ್ಯವಹಾರದಲ್ಲಿ ತೊಡಗುವ ಗ್ರಾಹಕರು ಆದಷ್ಟು ಸ್ವಂತ ಕಂಪ್ಯೂಟರ್ ಹಾಗೂ ಮೊಬೈಲ್ ಬಳಸುವುದು ಸೂಕ್ತ. ಏಕೆಂದರೆ ನೀವು ಬೇರೆಯ ಕಂಪ್ಯೂಟರ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದರೆ ನಿಮ್ಮ ಎಲ್ಲಾ ವಿವರಗಳು ಅದರಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಬಳಸಿಕೊಂಡು ನಿಮ್ಮ ಖಾತೆಗೆ ಕನ್ನ ಹಾಕಬಹುದು. ಅಲ್ಲದೆ ನಿಮ್ಮ ಕಂಪ್ಯೂಟರ್‌ಗೆ ಯಾವುದೇ ವೈರಸ್ ಸೋಕದಂತೆ ಎಚ್ಚರವಹಿಸಿ.

* ಒಂದೇ ಇ-ಮೇಲ್ ಬಳಸಿ

ಆನ್‌ಲೈನ್ ಶಾಪಿಂಗ್ ಸೇರಿದಂತೆ ಎಲ್ಲಾ ಡಿಜಿಟಲ್ ವ್ಯವಹಾರಗಳಿಗೂ ಒಂದೇ ಇ-ಮೇಲ್ ಬಳಸುವುದು ಸೂಕ್ತ. ಕೆಲವೊಮ್ಮೆ ನಿಮ್ಮ ಇ-ಮೇಲ್ ಇನ್ಬಾಕ್ಸ್‌ಗೆ ಶಾಪಿಂಗ್, ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಕುರಿತ ಸಾಕಷ್ಟು ಇ-ಮೇಲ್‌ಗಳು ಬಂದಿರುತ್ತವೆ. ಇವುಗಳ ಪೈಕಿ ಶೇ.90 ರಷ್ಟು ಮೆಸೇಜ್‌ಗಳು ನಕಲಿಯಾಗಿರುವ ಸಾಧ್ಯತೆ ಇದೆ. ಅಂತಹ ಮೆಸೇಜ್‌ಗಳನ್ನು ಆಗಿಂದಾಗ್ಗೆ ಡಿಲೀಟ್ ಮಾಡುವುದು ಸೂಕ್ತ.

* ಪಾಸ್‌ವರ್ಡ್‌ ಆಗಿಂದಾಗ್ಗೆ ಬದಲಿಸಿ

ನೀವು ಎರಡಕ್ಕಿಂತ ಹೆಚ್ಚು ನೆಟ್ ಬ್ಯಾಂಕಿಂಗ್ ಆಪ್ ಬಳಸುತ್ತಿದ್ದರೆ ಆಗಿಂದಾಗ್ಗೆ ನಿಮ್ಮ ನೆಟ್ ಬ್ಯಾಂಕಿಂಗ್ ಪಾಸ್‌ವಡ್‌ ಬದಲಿಸುತ್ತಿರುವುದು ಉತ್ತಮ. ನೀವು ಹಲವು ದಿನಗಳಿಂದ ನಿಮ್ಮ ಎಲ್ಲಾ ಅಕೌಂಟಿಗೂ ಒಂದೇ ಪಾಸ್‌ವರ್ಡ್‌ ಬಳಸುತ್ತಿದ್ದರೆ ಕಂಪ್ಯೂಟರ್, ಮೊಬೈಲ್ ಹ್ಯಾಕರ್‌ಗಳು ನಿಮ್ಮ ಪಾಸ್‌ವರ್ಡ್‌ ಕದಿಯುವ ಸಾಧ್ಯತೆ ಇರುತ್ತದೆ.

* ಪಬ್ಲಿಕ್ ವೈಫೈ ಉಪಯೋಗಿಸಬೇಡಿ

ಪಬ್ಲಿಕ್ ವೈಫೈ ಬಳಸುವ ಮೂಲಕ ಆನ್‌ಲೈನ್ ಹಣ ವ್ಯವಹಾರ ನಡೆಸುವುದು ಸುರಕ್ಷಿತವಲ್ಲ. ಹ್ಯಾಕರ್‌ಗಳು ಸಾರ್ವಜನಿಕ ಸ್ಥಳದಲ್ಲಿರುವ ವೈಫೈ ಕನೆಕ್ಷನ್‌ ಅನ್ನು ತುಂಬಾ ಸುಲಭವಾಗಿ ಹ್ಯಾಕ್ ಮಾಡಬಲ್ಲರು. ಹೀಗೆ ಹ್ಯಾಕ್ ಮಾಡುವಾಗ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಕದಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲಾ ಪೇಮೆಂಟ್‌ ಗಳನ್ನೂ ನಿಮ್ಮ ಮೊಬೈಲ್ ಡಾಟಾ ದಲ್ಲೇ ಮಾಡುವುದು ಸೂಕ್ತ.

* ಲಾಗೌಟ್ ಆಗಲು ಮರೆಯಬೇಡಿ

ನೀವು ನೆಟ್ ಬ್ಯಾಂಕಿಗ್ ಅಥವಾ ಇನ್ಯಾವುದೇ ಅನ್‌ಲೈನ್ ವಹಿವಾಟಿನಲ್ಲಿ ತೊಡಗಿದ್ದಾಗ ನಿಮ್ಮ ವಹಿವಾಟು ಮುಗಿದ ತಕ್ಷಣ ಲಾಗೌಟ್ ಆಗುವುದು ಸೂಕ್ತ. ಇಲ್ಲದಿದ್ದರೆ ನಿಮ್ಮ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿವೆ.

* ನಂಬಿಕಾರ್ಹವಲ್ಲದ ಆಪ್ ಡೌನ್‌ಲೋಡ್ ಮಾಡಬೇಡಿ

ಆನ್‌ಲೈನ್ ವಂಚಕರು ಗ್ರಾಹಕರಿಗೆ ಮೋಸ ಮಾಡುವ ಸಲುವಾಗಿ ಹತ್ತಾರು ನಕಲಿ ಆಪ್‌ಗಳನ್ನು ಡಿಸೈನ್ ಮಾಡಿರುತ್ತಾರೆ. ಹೀಗಾಗಿ ನೀವು ಮೋಬೈಲ್‌ನಲ್ಲಿ ಯಾವುದೇ ಅಪ್ ಡೌನ್‌ಲೋಡ್ ಮಾಡುವಾಗ ಅದರ ನಂಬಿಕಾರ್ಹತೆಯ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ.