Home Cover Story ಮಂದಿರ- ಮಸೀದಿ ಭೂ ವಿವಾದ; ‘ಸುಗ್ರೀವಾಜ್ಞೆ ಸದ್ಯಕ್ಕಿಲ್ಲ’ ಎಂದವರು ಪ್ರಧಾನಿ ಮೋದಿ!

ಮಂದಿರ- ಮಸೀದಿ ಭೂ ವಿವಾದ; ‘ಸುಗ್ರೀವಾಜ್ಞೆ ಸದ್ಯಕ್ಕಿಲ್ಲ’ ಎಂದವರು ಪ್ರಧಾನಿ ಮೋದಿ!

SHARE

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ದೇವಸ್ಥಾನ ನಿರ್ಮಿಸುವ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೇ ಸುಗ್ರೀವಾಜ್ಞೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ’ ಅವರು ತಿಳಿಸಿದ್ದಾರೆ.

‘ಎಎನ್‌ಐ’ ಸುದ್ದಿ ಸಂಸ್ಥೆಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಕುರಿತಂತೆ ಸುದೀರ್ಘವಾಗಿ ಮಾತನಾಡಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಹಿಂದುತ್ವ ಸಂಘಟನೆಗಳ ಬಹುದೊಡ್ಡ ಬೇಡಿಕೆಯಾಗಿರುವ ರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ಮೋದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಮ ಮಂದಿರ ವಿಚಾರದಲ್ಲಿ, “ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುವ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಡ್ಡಿ ಉಂಟು ಮಾಡಿದ್ದರಿಂದ ನ್ಯಾಯಾಂಗ ಪ್ರಕ್ರಿಯೆ ನಿಧಾನಗತಿ ಪಡೆದುಕೊಂಡಿತು,” ಎಂದು ಅವರು ಪ್ರತಿಪಕ್ಷದ ಮೇಲೆ ಆರೋಪ ಹೊರಿಸಿದ್ದಾರೆ.

ರಾಮ ಮಂದಿರ ವಿಚಾರ ಬಿಜೆಪಿ ಪಾಲಿಗೆ ಕೇವಲ ಭಾವನಾತ್ಮಕ ವಿಷಯವೇ ಎಂದು ಕೇಳಿದ ಪ್ರಶ್ನೆಗೆ, “ ನಾವು ನಮ್ಮ ಬಿಜೆಪಿಯ ಪ್ರಣಾಳಿಕೆಯಲ್ಲಿ ಈ ಸಮಸ್ಯೆಗೆ ಸಂವಿಧಾನದ ಅಡಿಯಲ್ಲೇ ಪರಿಹಾರ ಕಂಡುಕೊಳ್ಳುತ್ತೇವೆ,” ಎಂದು ಹೇಳಿದ್ದೆವು ಎಂದು ತಿಳಿಸಿದ್ದಾರೆ.

2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ‘ಆರ್‌ಎಸ್‌ಎಸ್‌ನ ಸಹ ಸಂಸ್ಥೆಗಳು ಮತ್ತು ಪಕ್ಷದ ನಾಯಕರೇ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸುತ್ತಿದ್ದಾರೆ. ಚುನಾವಣೆಗೆ ಐದು ತಿಂಗಳಿರುವಾಗ ಈ ಸಂಘಟನೆಯ ಸದಸ್ಯರುಗಳು ಅಲ್ಲಲ್ಲಿ ಒತ್ತಡ ಹೇರುವ ಸಭೆಗಳನ್ನು ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಬೇಡಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೋದಿ, ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು ಬಹುಶಃ ಕೊನೆಯ ಹಂತದಲ್ಲಿದೆ ಎಂದಿದ್ದಾರೆ.

“ನ್ಯಾಯಾಂಗ ಪ್ರಕ್ರಿಯೆಗಳು ಮುಗಿಯಲಿ. ಒಮ್ಮೆ ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರ ಸರಕಾರವಾಗಿ ನಮ್ಮ ಜವಾಬ್ದಾರಿ ಏನಿದೆ ಅದನ್ನು ನಿರ್ವಹಿಸಲು ನಾವು ಸಿದ್ಧವಾಗಿದ್ದೇವೆ,” ಎಂದಿದ್ದಾರೆ.

ಅಯೋಧ್ಯೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜನವರಿ 4ರಂದು ನಿಗದಿಪಡಿಸಿದೆ. ಪ್ರಕರಣವನ್ನು ಪ್ರತಿ ದಿನ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಅರ್ಜಿಯನ್ನೂ ಸಲ್ಲಿಸಿದ್ದಾರೆ.

ತ್ರಿವಳಿ ತಲಾಖ್‌ಗೆ ಸುಗ್ರೀವಾಜ್ಞೆ ಜಾರಿಗೆ ತಂದವರು ರಾಮ ಮಂದಿರಕ್ಕೆ ಯಾಕೆ ಸುಗ್ರೀವಾಜ್ಞೆ ಜಾರಿಗೆ ತರುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, “ಸುಪ್ರೀಂ ಕೋರ್ಟ್‌ ಆದೇಶದ ನಂತರವೇ ತ್ರಿವಳಿ ತಲಾಖ್‌ ಸುಗ್ರೀವಾಜ್ಞೆ ಜಾರಿಗೆ ತರಲಾಯಿತು,” ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ರಾಮ ಮಂದಿರಕ್ಕೆ ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ತಡೆ ಒಡ್ಡಬಾರದು ಮತ್ತು ನ್ಯಾಯಾಂಗ ತನ್ನ ಕೆಲಸ ನಿರ್ವಹಿಸಲು ಕಾಂಗ್ರೆಸ್‌ ಅವಕಾಶ ಮಾಡಿಕೊಡಬೇಕು. ಇದನ್ನು ರಾಜಕೀಯದ ಲೆಕ್ಕದಲ್ಲಿ ತೂಕಕ್ಕೆ ಹಾಕಬೇಡಿ ಎಂದವರು ಕಾಂಗ್ರೆಸ್‌ಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ. “ರಾಷ್ಟ್ರೀಯ ಶಾಂತಿ ಮತ್ತು ಅನ್ಯೋನ್ಯತೆಗಾಗಿ ಅಯೋಧ್ಯೆ ವಿಷಯನ್ನು ತನ್ನ ವಕೀಲರ ಮೂಲಕ ನ್ಯಾಯಾಲದಲ್ಲಿ ಸ್ಥಗಿತಗೊಳಿಸುವ ಕ್ರಮದಿಂದ ಕಾಂಗ್ರೆಸ್‌ ದೂರ ಇರಬೇಕು ಎಂದು ನಾನು ಕೋರಿಕೊಳ್ಳುತ್ತೇನೆ,” ಎಂದಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ವಕೀಲರೂ ಸೇರಿ ಎಲ್ಲರೂ ಪ್ರಕರಣದಲ್ಲಿ ಅವಧಿಗೂ ಮುನ್ನ ತೀರ್ಪು ಬರುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ರಾಮ ಮಂದಿರ ವಿಚಾರವನ್ನು ಮುನ್ನೆಲೆಗೆ ತರುವ ದೊಡ್ಡ ಪ್ರಯತ್ನವೊಂದನ್ನು ಹಿಂದುತ್ವದ ಸಂಘಟನೆಗಳು ಜಾರಿಯಲ್ಲಿಟ್ಟಿದೆ. ನಾಲ್ಕೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮೋದಿ ಸರಕಾರವನ್ನು ಕೊನೆಯ ಹಂತದಲ್ಲಿ ಸುಗ್ರೀವಾಜ್ಞೆಗೆ ಆಗ್ರಹಿಸುವ ಮೂಲಕ ಅವು ಚುನಾವಣೆಗೆ ಧಾರ್ಮಿಕ ವಿಚಾರವನ್ನೇ ಅಜೆಂಡಾವನ್ನಾಗಿ ಮುಂದಿಡುವ ಪ್ರಯತ್ನದಲ್ಲಿದೆ. ಹೀಗಿರುವಾಗಲೇ, ಸ್ವತಃ ಮೋದಿ ರಾಮ ಮಂದಿರ ಭೂ ವಿವಾದವನ್ನು ನ್ಯಾಯಾಲಯದಿಂದ ಆಚೆಗೆ ಇತ್ಯರ್ಥಗೊಳಿಸಲು ಸರಕಾರ ಸಿದ್ಧವಿಲ್ಲ ಎಂಬ ಸಂದೇಶವನ್ನು ಸಂದರ್ಶನದ ಮೂಲಕ ತಲುಪಿಸಿದ್ದಾರೆ.