Home Cover Story India Unmade: ಮೋದಿನಾಮಿಕ್ಸ್‌ನ ‘ಪವಾಡ ಬಯಲು’ ಮಾಡಿದ ಯಶವಂತ್‌ ಸಿನ್ಹಾ ಪುಸ್ತಕ!

India Unmade: ಮೋದಿನಾಮಿಕ್ಸ್‌ನ ‘ಪವಾಡ ಬಯಲು’ ಮಾಡಿದ ಯಶವಂತ್‌ ಸಿನ್ಹಾ ಪುಸ್ತಕ!

SHARE

“ಜಿಡಿಪಿ ಸಂಖ್ಯೆಗಳು ದಾರಿ ತಪ್ಪಿವೆ, ಆರ್‌ಬಿಐನ ಸ್ವಾಯತ್ತತೆ ತೀವ್ರ ಅಪಾಯದಲ್ಲಿದೆ ಮತ್ತು ಡಿಮಾನಟೈಸೇಷನಲ್‌ ದೊಡ್ಡ ಬ್ಯಾಂಕಿಂಗ್ ಹಗರಣವಾಗಿದೆ.” ಹೀಗಂಥ ಮಾಜಿ ಹಣಕಾಸು ಸಚಿವ, ಮಾಜಿ ಬಿಜೆಪಿಗ ಯಶವಂತ್‌ ಸಿನ್ಹಾ ತಮ್ಮ ಹೊಸ ಪುಸ್ತಕದಲ್ಲಿ ನರೇಂದ್ರ ಮೋದಿ ಸರಕಾರವನ್ನು ಕುಟುಕಿದ್ದಾರೆ.

‘ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗವರ್ನೆಮೆಂಟ್‌ ಬ್ರೋಕ್‌ ದ ಎಕಾನಮಿ (India Unmade: How the Modi Government Broke the Economy)‘ ಎಂಬ ತಮ್ಮ ಪುಸ್ತಕದುದ್ದಕ್ಕೂ ಅವರು ನರೇಂದ್ರ ಮೋದಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಏಪ್ರಿಲ್‌ನಲ್ಲಿ ಬಿಜೆಪಿ ತೊರೆದು ಕಳೆದೊಂದು ವರ್ಷದಿಂದ ನರೇಂದ್ರ ಮೋದಿಯ ಪ್ರಬಲ ಟೀಕಾಕಾರರಾಗಿ ಗುರುತಿಸಿಕೊಂಡಿರುವ ಸಿನ್ಹಾ ಆಗಾಗ ಕೇಂದ್ರ ಸರಕಾರದ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಅವರ ಆರೋಪಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿದೆ. ಮಾತ್ರವಲ್ಲ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌‌ ಶಾ ಸಿನ್ಹಾ ಅವರ ಮಾತುಗಳನ್ನು ‘ಕಸುಬಿಲ್ಲದವರ ಕನವರಿಕೆಗಳು’ ಎಂಬ ಅರ್ಥದಲ್ಲಿ ಮಾತನಾಡಿದ್ದರು.

ಆದರೆ ಮೋದಿ ಸರಕಾರವನ್ನು ತಾವು ಯಾವತ್ತೂ ಟೀಕಿಸಿಲ್ಲ ಎಂದು ಹೇಳಿರುವ ಸಿನ್ಹಾ, ಹಾಗೆ ನೋಡಿದರೆ ನರೇಂದ್ರ ಮೋದಿಯವರ ಸಾಮರ್ಥ್ಯ ಗುರುತಿಸಿ 2014ರಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಬೇಕು ಎಂದು ಹೇಳಿದ ಮೊದಲ ಹಿರಿಯ ಬಿಜೆಪಿಗರಲ್ಲಿ ನಾನು ಒಬ್ಬ ಎಂದಿದ್ದಾರೆ. “ನನಗೆ ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಕೆಲವು ಜನರ ತಪ್ಪು ಊಹಾಪೋಹಗಳಂತೆ ನನಗೆ ಸಚಿವ ಸ್ಥಾನ ಅಥವಾ ಇನ್ಯಾವುದೋ ಹುದ್ದೆ ನೀಡಿಲ್ಲ ಎಂಬ ಕಾರಣಕ್ಕೆ ನಾನು ಹೀಗೆ ಮಾತನಾಡುತ್ತಲೂ ಇಲ್ಲ,” ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಯಶವಂತ್‌ ಸಿನ್ಹಾ ಮತ್ತು ನರೇಂದ್ರ ಮೋದಿ.

‘ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಏರಿಸುವ ಸುವರ್ಣಾವಕಾಶವನ್ನು ಮೋದಿ ಕೈಚೆಲ್ಲಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಯುಪಿಎ ಪರಂಪರೆಯ ಸಮಸ್ಯೆಗಳಿಗೆ ಅವರು ಉತ್ತರ ಕಂಡುಕೊಳ್ಳಬಹುದಾಗಿತ್ತು ಮತ್ತು ಬಡ ದೇಶ ಎಂಬ ಹಣೆಪಟ್ಟಿಯಿಂದ ಭಾರತವನ್ನು ಮಧ್ಯಮ ಆದಾಯದ ದೇಶ ಎಂಬ ಸ್ಥಾನಕ್ಕೆ ಕೊಂಡೊಯ್ಯಬಹುದಾಗಿತ್ತು. ಆದರೆ ಅವರು ಅವಕಾಶವನ್ನು ಕಳೆದುಕೊಂಡರು,’ ಎಂದು ಸಿನ್ಹಾ ವಿಷಾದಿಸಿದ್ದಾರೆ.

ತಮ್ಮ ಪುಸ್ತಕದುದ್ದಕ್ಕೂ ಎನ್‌ಡಿಎ ಸರಕಾರದ ಯೋಜನೆಗಳನ್ನು ವಿಮರ್ಶೆಗೆ ಒಡ್ಡಿರುವ ಅವರು, ಕೇಂದ್ರ ಸರಕಾರದ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಸರಕಾರದ ಸ್ವ ಉದ್ಯೋಗ ಕಲ್ಪನೆಯನ್ನು, ಗಂಭೀರವಾಗಿರುವ ನಿರುದ್ಯೋಗ ಸಮಸ್ಯೆಯಿಂದ ಗಮನವನ್ನು ಬೇರೆಡೆ ಸೆಳೆಯುವ ಯತ್ನ ಎಂದು ಅವರು ಕರೆದಿದ್ದಾರೆ.

ನವೆಂಬರ್‌ 8, 2016ರಂದು ಹೆಚ್ಚಿನ ಮುಖಬೆಲೆಯ ಕರೆನ್ಸಿಯನ್ನು ನಿಷೇಧ ಮಾಡಿದ ಮಹಾ ದುರಂತವೇ ಮೋದಿ ಸರಕಾರದ ಮೈಲುಗಲ್ಲು ಎಂದು ಅವರು ವ್ಯಂಗ್ಯವಾಡಿದ್ದಾರೆ. “ಅನಾಣ್ಯೀಕರಣ ಒಂದು ತಿಕ್ಕಲು ನಿರ್ಧಾರ. ಇದರಿಂದ ಸರಕಾರಕ್ಕೆ ಏನೂ ಧಕ್ಕಲಿಲ್ಲ. ಆದರೆ ಭ್ರಷ್ಟ ಶ್ರೀಮಂತರನ್ನು ಪತ್ತೆ ಹಚ್ಚಲು ಮೋದಿ ಕಠಿಣ ತೀರ್ಮಾನ ತೆಗೆದುಕೊಂಡರು ಎಂಬುದಾಗಿ ಇದು ಚುನಾವಣಾ ಪ್ರಚಾರದ ಸರಕಾಯಿತು,” ಎಂದಿದ್ದಾರೆ. 2017ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ತೀರ್ಮಾನದಿಂದ ಭರ್ಜರಿ ಲಾಭ ಸಿಕ್ಕಿತು. ಆದರೆ ಸರಕಾರದ ತೀರ್ಮಾನದ ಹಿಂದಿನ ಉದ್ದೇಶಗಳು ಒಂದೊಂದಾಗಿ ಕರಗಿ ಕೊನೆಗೆ ದೊಡ್ಡ ಶೂನ್ಯ ಮಾತ್ರ ಉಳಿಯಿತು ಎಂದವರು ತಿಳಿಸಿದ್ದಾರೆ.

ಅನಾಣ್ಯೀಕರಣದ ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಡಿಮಾನಟೈಸೇಷನ್‌ನಿಂದಾಗಿ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ, ನೇರವಾಗಿ ಮತ್ತು ಪರೋಕ್ಷವಾಗಿ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ ಇದರಿಂದ ಸರಕಾರ ಆರ್ಥಿಕ ಆರೋಗ್ಯ ಚೇತರಿಕೆಯಾಗುತ್ತಿದೆ ಎಂದಿದ್ದರು. ಇದರ ವಿರುದ್ಧ ಕೆಂಡಕಾರಿರುವ ಸಿನ್ಹಾ, ಇದು ಡಿಮಾನಟೈಸೇಷನ್‌ನ ನಿಜವಾದ ಉದ್ದೇಶವಾಗಿರಲಿಲ್ಲ. ನಗದು ಹೊಂದಿರುವವರನ್ನು ಸಂಘಟಿತ ಆರ್ಥಿಕ ವಲಯಕ್ಕೆ ಕರೆತಂದು ಅವರಿಂದ ತೆರಿಗೆ ಕಟ್ಟಿಸುವುದು ಸರಕಾರದ ಗುರಿಯಾಗಿತ್ತು ಎಂದು ನೆನಪಿಸಿದ್ದಾರೆ.

ಮೇಕ್‌ ಇನ್‌ ಇಂಡಿಯಾ:

ಇಷ್ಟಕ್ಕೆ ನಿಲ್ಲದ ಸಿನ್ಹಾ, ಮೋದಿಯವರ ಅತ್ಯಂತ ಪ್ರಸಿದ್ಧವಾದ ಮೇಕ್ ಇನ್ ಇಂಡಿಯಾ ಯೋಜನೆಯಿಂದ ದೇಶದ ಉದ್ಯಮ ಅಸ್ವಸ್ಥವಾಗಿದೆ ಎಂದಿದ್ದಾರೆ. ಇದು ಯುಪಿಎ ಕಾಲದ ಯೋಜನೆಯ ಹೊಸ ಸ್ವರೂಪವಾಗಿತ್ತಷ್ಟೇ ಮತ್ತಿದು ಮೋದಿ ಸರಕಾರದ ಅತೀ ದೊಡ್ಡ ಸೋಲು ಎಂದು ಅವರು ಕರೆದಿದ್ದಾರೆ.

ಬೆಳವಣಿಗೆ ದರ ಮತ್ತು ಉದ್ಯೋಗದ ಬಗ್ಗೆಯೂ ಪುಸ್ತಕದಲ್ಲಿ ಮಾತನಾಡಿರುವ ಅವರು, ಸರಕಾರದ ಆರ್ಥಿಕ ನಿರ್ವಹಣೆ ಉತ್ತಮವಾಗಿ ಕಾಣುವಂತೆ ಮಾಡಲು ಈ ಹಿಂದಿನ ಬೆಳವಣಿಗೆ ದರವನ್ನು ಮರು ಪರಿಶೀಲನೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಮೊದಲ ನಾಲ್ಕು ವರ್ಷಗಳಲ್ಲಿ ಸರಾಸರಿ ಶೇ. 7.35 ಬೆಳವಣಿಗೆ ದರ ತೋರಿಸಲಾಯಿತು ಎಂದಿದ್ದಾರೆ.

ಮೋದಿ ಉಲ್ಲೇಖಿಸಿದ ಪಕೋಡ ಮಾರಾಟಗಾರರು, ಆಟೋ ರಿಕ್ಷಾ ಚಾಲಕರು, ಟೀ ಮಾರಾಟಗಾರರು ಮತ್ತು ವೃತ್ತ ಪತ್ರಿಕೆ ಹಂಚುವವರು ಅಸಂಘಟಿತ ವಲಯದಲ್ಲಿದ್ದು ಅವು ಯಾವುದೇ ವ್ಯಕ್ತಿಗಳ ಮಹತ್ವಾಕಾಂಕ್ಷೆಯ ಉದ್ಯೋಗಗಳಲ್ಲ ಎಂದು ತಿಳಿಸಿದ್ದಾರೆ. ಜಿಡಿಪಿ ಬೆಳವಣಿಗೆಯನ್ನು ವ್ಯಂಗ್ಯ ಮಾಡಿರುವ ಅವರು, “ಹೂಡಿಕೆ ಇಲ್ಲದೆ, ಕೈಗಾರಿಕಾ ಅಭಿವೃದ್ಧಿ ಇಲ್ಲದೆ, ಕೃಷಿ ಬೆಳವಣಿಗೆ ಇಲ್ಲದೆ 7.35ರ ದರದಲ್ಲಿ ಬೆಳವಣಿಗೆ ಕಾಣುತ್ತಿರುವ ವಿಶ್ವದ ಏಕೈಕ ದೇಶ ಭಾರತ. ಇದು ಪವಾಡ,” ಎಂದಿದ್ದಾರೆ.

ಆದರೆ ಜಿಎಸ್‌ಟಿ ಒಳ್ಳೆಯ ಯೋಜನೆ ಎಂದು ಸಿನ್ಹಾ ತಮ್ಮ ಪುಸ್ತಕದಲ್ಲಿ ಹೊಗಳಿದಿದ್ದಾರೆ. ಜಿಎಸ್‌ಟಿ ಸರಳವಾಗಿದೆ ಮತ್ತು ತೆರಿಗೆಯ ಮೇಲೆ ತೆರಿಗೆ ಇಲ್ಲದೇ ಇರುವುರಿಂದ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಆದರೆ ಮೋದಿ ಮತ್ತು ಅರುಣ್‌ ಜೇಟ್ಲಿ ಜೋಡಿ ಆರಂಭದಲ್ಲೇ ಇದನ್ನು ಹಾಳುಗೆಡವಿತು. ಈಗಾಗಲೇ 200 ಬಾರಿ ಜಿಎಸ್‌ಟಿ ತಿದ್ದಲಾಗಿದೆ. 400 ನೋಟಿಫಿಕೇಷನ್‌, 100 ಕ್ಕೂ ಹೆಚ್ಚು ಸುತ್ತೋಲೆಗಳನ್ನು ಕಳುಹಿಸಲಾಗಿದೆ. ಇದು ಮೋದಿ ಜೇಟ್ಲಿ ಜೋಡಿಯ ವಿಫಲತೆಗೆ ಸಾಕ್ಷಿ ಎಂದು ಜರೆದಿದ್ದಾರೆ.

ಹಾಗಂಥ ಯುಪಿಎ ಏನು ಇವರಿಗಿಂತ ಉತ್ತಮವಾಗಿರಲಿಲ್ಲ ಎಂದವರು ವಿವರಿಸಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತ ತಟ್ಟಿದಾಗ ಯುಪಿಎ ಸರಕಾರ ಕೊಳ್ಳುವಿಕೆಯನ್ನು ಹೆಚ್ಚಿಸಲು ನಿರಂತರ ಯತ್ನಿಸಿತು. ಹಲವು ಉತ್ಪನ್ನಗಳ ಮೇಲಿನ ತೆರಿಗೆ ಇಳಿಸಲಾಯಿತು. ಕೆಲವು ಅಬಕಾರಿ ತೆರಿಗೆಗಳನ್ನಂತೂ ತೆಗೆದು ಹಾಕಲಾಯಿತು. ಸಾಲ ಮನ್ನಾ ಮತ್ತು ನರೇಗಾ ಯೋಜನೆಗಳ ಮೂಲಕ ಜನರ ಜೇಬಲ್ಲಿ ಹಣ ತುಂಬಲು ಉತ್ತೇಜನ ನೀಡಲಾಯಿತು. ಆದರೆ ಇವೆಲ್ಲಾ ಪ್ರಯತ್ನಗಳಾಚೆಗೆ ಉತ್ಪಾದನಾ ವಲಯ ಸ್ಪಲ್ಪಮಟ್ಟಿಗಷ್ಟೇ ಉತ್ತೇಜನ ಕಂಡಿತು ಮತ್ತು ಹೂಡಿಕೆ ಏರಿಕೆಯಾಗಲಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಆದರೆ ಇದನ್ನೆಲ್ಲಾ ಮೀರಿ ಹೋಗಬಹುದಾದ ಎಲ್ಲಾ ಅವಕಾಶಗಳೂ ಮೋದಿ ಸರಕಾರಕ್ಕಿತ್ತು. ಸ್ವಾತಂತ್ರ್ಯನಂತರ ಅಪರೂಪದ ಜನಾದೇಶವನ್ನು ಪಡೆದುಕೊಂಡಿತ್ತು. ಆದರೆ ಅದನ್ನು ಕೈಚೆಲ್ಲಿತು ಎಂದಿದ್ದಾರೆ. ಬದಲಿಗೆ ಮೋದಿ ಸರಕಾರ ಕಾರ್ಯಕ್ರಮ ನಿರ್ವಹಣೆಯಲ್ಲಿ ಚಾಣಾಕ್ಷವಾಗಿದೆ. ಆತ ಅಭಿಪ್ರಾಯ ರೂಪಿಸುವಲ್ಲಿ ನಿಸ್ಸೀಮ. ಮೋದಿ ಕಳೆದು ಹೋದ ಅರ್ಧ ದಶಕವನ್ನು ಭಾರತಕ್ಕೆ ಕೊಟ್ಟಿದ್ದಾರೆ. ಮತ್ತೊಮ್ಮೆ, ಮಗದೊಮ್ಮೆ 2024ರಲ್ಲಿ ಅವರನ್ನು ಆಯ್ಕೆ ಮಾಡಿದರೆ ಅಲ್ಲಿಗೆ ದಶಕವೇ ನಿರರ್ಥಕವಾಗಲಿದೆ ಎಂಬುದಾಗಿ ಸಿನ್ಹಾ ಎಚ್ಚರಿಸಿದ್ದಾರೆ.

ಕಳೆದ 50 ತಿಂಗಳಲ್ಲಿ ಮೋದಿ ಸರಕಾರ ಬೆರಗಾಗುವಂತ ಆರ್ಥಿಕ ನಿರ್ವಹಣೆಯ ಅಂಕಿ ಅಂಶಗಳು, ಪ್ರಗತಿ, ಸಾಧನೆಗಳ ಬಗ್ಗೆ ಸುಳ್ಳುಗಳನ್ನು ಹೇಳುತ್ತಿದೆ. ಹೀಗಾಗಿ ಪ್ರಭುತ್ವಕ್ಕೆ ಸತ್ಯ ಹೇಳುವುದು ಅತ್ಯಗತ್ಯವಾಗಿದೆ. ಹಾಗಾಗಿ ನಾನು ಪುಸ್ತಕ ಬರೆಯುವ ಮೂಲಕ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದಿದ್ದಾರೆ. ಜಗ್ಗರ್‌ನಾಟ್‌ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದ್ದು ಇದಕ್ಕೆ ಸಹ ಲೇಖಕರಾಗಿ ಪತ್ರಕರ್ತ ಆದಿತ್ಯ ಸಿನ್ಹಾ ಲೇಖನಿ ಹಿಡಿದಿದ್ದಾರೆ.