Home Inside Story ಕರ್ನಾಟಕ ರಾಜ್ಯ ‘ಮರಳು ನೀತಿ’ಗೆ ಮರುಳಾಗದ ಉದ್ಯಮ; ಸರಕಾರದ ಖಜಾನೆಗೆ ನಿತ್ಯ ನಾಮ!

ಕರ್ನಾಟಕ ರಾಜ್ಯ ‘ಮರಳು ನೀತಿ’ಗೆ ಮರುಳಾಗದ ಉದ್ಯಮ; ಸರಕಾರದ ಖಜಾನೆಗೆ ನಿತ್ಯ ನಾಮ!

SHARE

ಅದು 2016ರ ಸಮಯ. ರಾಜ್ಯ ಸರಕಾರ ಅಕ್ರಮ ಮರಳು ಗಣಿಗಾರಿಕೆ ಮೇಲೆ ಕಡಿವಾಣ ಹಾಕಲು ಹೊಸದಾಗಿ ಮರಳು ನೀತಿ ಜಾರಿಗೆ ತಂದಿತ್ತು. ಮರಳು ನೀತಿ ಜಾರಿಯ ಆರಂಭ ಶೂರತ್ವದ ಪರಿಣಾಮವಾಗಿ ಮರಳು ಪೂರೈಕೆ ಕಡಿಮೆಯಾಯಿತು. ಇದರಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮರಳಿಗೆ ಅಕ್ಷರಶಃ ಚಿನ್ನದ ಬೆಲೆ ಬಂದಿತ್ತು. ಲಕ್ಷ ರೂಪಾಯಿ ಕೊಟ್ಟರೂ ಗುಣಮಟ್ಟದ ನದಿ ಮರಳು ಸಿಗುವುದು ಆಗ ಕಷ್ಟವಾಗಿತ್ತು. ಮರಳು ಮಾರಾಟಗಾರರು ರಸ್ತೆ ಬದಿಯ ಮಣ್ಣು, ರಾಜಕಾಲುವೆಗಳ ಮರಳನ್ನು ಜರಡಿ ಹಿಡಿದು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮರಳು ಲಾರಿಗಳ ಪರ್ಮಿಟ್‌ ಮೇಲೆ ನಿಯಂತ್ರಣ ಹೇರಿದ್ದರಿಂದ ಸಾವಿರಾರು ಲಾರಿಗಳು ಯಾರ್ಡ್‌ಗಳಲ್ಲೇ ನಿಲ್ಲುವಂತಾಗಿತ್ತು.

ಇದೆಲ್ಲವೂ ಹಳೇ ಕಥೆ. ನದಿ ಮರಳಿಗೆ ಪರ್ಯಾಯವಾಗಿ ಜಲ್ಲಿಕಲ್ಲಿನಿಂದ ತಯಾರಾಗುವ ಕೃತಕ ಮರಳು ‘ಎಂ- ಸ್ಯಾಂಡ್’, ನದಿಯಲ್ಲಿ ಮರಳು ಉತ್ಪಾದನೆಯಾಗುವ ಪ್ರಕ್ರಿಯೆಯನ್ನೇ ಕೃತಕವಾಗಿ ಮಾಡುವ ‘ರೋಬೊ ಸ್ಯಾಂಡ್‌’ ಹಾಗೂ ಹಳೆಯ ಮನೆಗಳ ಅವಶೇಷದ ‘ಡೆಬ್ರಿ ಸ್ಯಾಂಡ್‌’ ಪ್ರಯೋಗಗಳು ನಡೆದು ಈಗ ಎಂ- ಸ್ಯಾಂಡ್‌ ಹೆಚ್ಚು ಬಳಕೆಯಾಗುತ್ತಿದೆ. ಈ ಮರಳಲ್ಲದೆ ರಾಜ್ಯ ಸರಕಾರ ಮಲೇಷ್ಯಾದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವ ‘ಎಂಎಸ್‌ಐಎಲ್‌ ಮರಳು’ ಕೂಡಾ ನಗರ ಪ್ರದೇಶಗಳ ಮರಳಿನ ಅಭಾವವನ್ನು ತಗ್ಗಿಸಿದೆ. ಸದ್ಯ ಬೆಂಗಳೂರಿನ ಶೇಕಡ 95ರಷ್ಟು ನಿರ್ಮಾಣ ಕಾಮಗಾರಿಗಳಿಗೆ ಈಗ ಬಳಸುತ್ತಿರುವುದು ಎಂ- ಸ್ಯಾಂಡ್‌. ರಾಜ್ಯದ ನದಿ ಮೂಲದ ಮರಳಿಗೆ ಪರ್ಯಾಯವಾಗಿ ಬೇರೆ ಬೇರೆ ಮರಳು ಬಂದಿದ್ದರೂ, ರಾಜ್ಯದಲ್ಲಿ ಇನ್ನೂ ‘ಮರಳು ಮಾಫಿಯಾ’ಗೆ ಕಡಿವಾಣ ಬಿದ್ದಿಲ್ಲ.

ಸರಕಾರ ಮರಳಿಗಾಗಿ ಹೊಸ ನೀತಿ ತಂದರೂ, ಸರಕಾರವೇ ಮರಳು ಪೂರೈಕೆಗೆ ಮುಂದಾಗಿದ್ದರೂ, ‘ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ, ಟ್ರಾಕ್ಟರ್‌, ಜೆಸಿಬಿ ವಶ’ ಎಂಬ ಸುದ್ದಿಗಳು ಇನ್ನೂ ಕಡಿಮೆಯಾಗಿಲ್ಲ. ನದಿ ಮೂಲಗಳಿಂದ ಮರಳು ಎತ್ತಲು ಬಿಡ್‌ ವ್ಯವಸ್ಥೆ, ಪರವಾನಗಿ ಪಡೆದವರಿಂದ ರಾಯಧನ ವಸೂಲಿ, ಮರಳು ಎತ್ತಲು ಅನುಸರಿಸಬೇಕಾದ ನಿಯಮಗಳು, ಮರಳು ಯಾರ್ಡ್‌ಗಳಿಂದ ಸಾಗಣೆಯ ಮಾರ್ಗಸೂಚಿ – ಇವ್ಯಾವೂ ವ್ಯವಸ್ಥಿತವಾಗಿ ಪಾಲನೆಯಾಗುತ್ತಿಲ್ಲ. ಪರಿಣಾಮ ಪ್ರಕೃತಿ ಒಡಲಿಂದ ಮರಳು ದೋಚುವುದು ಮುಂದುವರಿದಿದೆ.

ರಾಜ್ಯದ ಹಲವು ಕಡೆಗಳಲ್ಲಿ ನದಿ ಒಡಲನ್ನು ಬಗೆಯುತ್ತಿವೆ ಜೆಸಿಬಿಗಳು

ಎಂಎಸ್‌ಐಎಲ್‌ ಮರಳು ಸದ್ಯಕ್ಕೆ ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಮಂಡ್ಯದಲ್ಲಿ ಮಾತ್ರ ಲಭ್ಯವಿದೆ. ಉಳಿದ ತಾಲ್ಲೂಕುಗಳಲ್ಲಿ ಸ್ಥಳೀಯ ನದಿ ಮೂಲಗಳ ಮರಳು ಹಂಚಿಕೆಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಜಿಲ್ಲಾಡಳಿತ ಒಂದು ದರ ನಿಗದಿ ಮಾಡಿದ್ದರೆ ಮಾರಾಟಗಾರರು ಮಾರುಕಟ್ಟೆಯಲ್ಲಿ ಹೇಳುವ ಬೆಲೆಯೇ ಬೇರೆ.

ಉತ್ತರ ಕನ್ನಡ ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಂಡರೆ, ಹಲವು ತಿಂಗಳುಗಳ ಬೇಡಿಕೆಗೆ ಸ್ಪಂದಿಸಿದ್ದ ಉತ್ತರಕನ್ನಡ ಜಿಲ್ಲಾಡಳಿತ ಇಲ್ಲಿನ ನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಗಳಿಂದ ಮರಳು ತೆಗೆಯಲು ಅನುಮತಿ ನೀಡಿದೆ. ಆದರೆ ಮತ್ತೆ ಮರಳು ಮಾಫಿಯಾ ಈ ನದಿಗಳಿಗೆ ವಕ್ಕರಿಸಿ ಜನಸಾಮಾನ್ಯರು ಅಧಿಕ ಹಣ ತೆತ್ತು ಮರಳು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮರಳು ಮಾರಾಟವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ನದಿ ಮೂಲಗಳಿಂದ ಮರಳು ತೆಗೆಯಲು ರಾಜ್ಯದಲ್ಲಿ ಬಿಡ್ಡಿಂಗ್‌ ವ್ಯವಸ್ಥೆ ಜಾರಿಯಲ್ಲಿದೆ. ಒಂದು ಟನ್‌ ಮರಳಿಗೆ ರಾಜ್ಯ ಸರಕಾರ ನಿಗದಿಪಡಿಸಿರುವ ಮೂಲ ಬೆಲೆ 60 ರೂಪಾಯಿ. ಇದಕ್ಕಿಂತ ಗರಿಷ್ಠ ದರಕ್ಕೆ ಬಿಡ್‌ ಮಾಡಿದವರಿಗೆ ನಿಗದಿತ ಸ್ಥಳದಲ್ಲಿ ಮರಳು ತೆಗೆಯಲು ಪರವಾನಗಿ ಹಂಚಿಕೆಯಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮುದ್ರ ಸೇರುವ ಶರಾವತಿ ನದಿಯ ಮರಳು ತೆಗೆಯಬಹುದಾದ ಆಯ್ದ ಸ್ಥಳಗಳಿಂದ ಮರಳು ಎತ್ತಲು ಅನುಮತಿ ನೀಡಲಾಗಿದೆ. ಸರಕಾರಿ ಕಾಮಗಾರಿಗಳಿಗೆ ಅಗತ್ಯವಿದ್ದಷ್ಟನ್ನು ದಾಸ್ತಾನು ಮಾಡಿಟ್ಟುಕೊಂಡು ಉಳಿದ ಮರಳನ್ನು ಮಾರಾಟ ಮಾಡಲು ಪರವಾನಗಿ ನೀಡಲಾಗಿದೆ.

“ಮರಳು ಮಾಫಿಯಾ ಅಡ್ಡದಂಧೆಯಿಂದಾಗಿ ಪರವಾನಿಗೆ ಇರುವ ಮರಳು ಲಾರಿ ಲೋಡ್‌ಗೆ 25,000-26,000 ರೂಪಾಯಿ ಮತ್ತು ಪರವಾನಿಗೆ ಇಲ್ಲದ ಅಕ್ರಮ ಮರಳು ಲಾರಿ ಲೋಡ್‌ಗೆ 15,000 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ,” ಎಂಬುದು ಹೊನ್ನಾವರ ತಾಲ್ಲೂಕು ಪಂಚಾಯ್ತಿ ಸದಸ್ಯರ ಆರೋಪ. ಸದ್ಯ ಇದಕ್ಕೆ ಸ್ಪಂದಿಸಿದ ತಹಶೀಲ್ದಾರರು ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಮರಳಿಗಾಗಿ ನದಿ ಪಾತ್ರಗಳ ಒಡಲನ್ನೇ ಅಡ್ಡಾದಿಡ್ಡಿಯಾಗಿ ಬಗೆಯಲಾಗುತ್ತಿದೆ

“ಶರಾವತಿ ನದಿಯಿಂದ ಮರಳು ತೆಗೆಯಲು ಹೊನ್ನಾವರ ತಾಲ್ಲೂಕಿನ ಸುಮಾರು 45 ಜನರಿಗೆ ಪರವಾನಿಗೆ ನೀಡಲಾಗಿದೆ. ಆದರೆ ಮರಳು ತೆಗೆದ ಪರವಾನಿಗೆದಾರರು ಸ್ಥಳಿಯವಾಗಿ ಅದನ್ನು ಮಾರದೇ ದೂರದ ಶಿರಸಿ, ಹಳಿಯಾಳ ಮುಂತಾದೆಡೆ ಲೋಡ್‌ ಮರಳನ್ನು 30,000 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಮರಳು ಗ್ರಾಹಕರು ಪಕ್ಕದ ಜಿಲ್ಲೆಯ ಕುಂದಾಪುರದಿಂದ ಮರಳು ತರಿಸಿ ನಿರ್ಮಾಣ ಕಾರ್ಯಗಳನ್ನು ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೊನ್ನಾವರ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ತುಕಾರಾಮ ನಾಯ್ಕ ಹಾಗೂ ಅಣ್ಣಯ್ಯ ನಾಯ್ಕ ಇತ್ತೀಚೆಗೆ ಪಂಚಾಯ್ತಿ ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.

ಮರಳು ಬೆಲೆ ಹೆಚ್ಚಾಗಿರುವುದರಿಂದ ವಸತಿ ಯೋಜನೆಯಡಿ ಫಲಾನುಭವಿಗೆ ಸರಕಾರದಿಂದ ನೀಡಲಾಗುವ ಹಣ ಮರಳು ಖರೀದಿಗೇ ಸಾಕಾಗುತ್ತಿಲ್ಲ. ಒಂದು ಸಣ್ಣ ಮನೆ ನಿರ್ಮಾಣಕ್ಕೆ ಮರಳಿಗಾಗೇ 75,000 ರೂಪಾಯಿವರೆಗೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಈ ಭಾಗದಲ್ಲಿದೆ. ಗುಣಮಟ್ಟದ ಮರಳು ಬೇಕೆಂದರೆ ಹೆಚ್ಚಿನ ಹಣ ನೀಡುವುದು ಅನಿವಾರ್ಯ ಎಂಬ ಸ್ಥಿತಿ ಇಲ್ಲಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಮಾತ್ರ ಗಂಭೀರವಾಗಿಲ್ಲ.

ಇದು ಕೇವಲ ಉತ್ತರ ಕನ್ನಡ ಜಿಲ್ಲೆಯೊಂದರ ಕಥೆ ಮಾತ್ರವಲ್ಲ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ ಹಲವೆಡೆ ಮರಳಿನ ಅಭಾವವಿದೆ. ಈ ಅಭಾವವನ್ನು ಮರಳು ಮಾಫಿಯಾ ಲಾಭವಾಗಿ ಬಳಸಿಕೊಳ್ಳುತ್ತಿದೆ. ಮರಳು ಗಣಿಗಾರಿಕೆ ಕುರಿತಂತೆ ನಿಯಮಗಳೆಲ್ಲವೂ ಕಾಗದದ ಮೇಲಷ್ಟೇ ಇವೆ. ಅವ್ಯಾವೂ ಬಹುತೇಕ ಕಡೆಗಳಲ್ಲಿ ಜಾರಿಗೆ ಬರುತ್ತಿಲ್ಲ.

2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಕಳೆದ ವರ್ಷ 40 ಲಕ್ಷ ಟನ್‌ ನದಿ ಮೂಲದ ಮರಳನ್ನು ತೆಗೆಯಲಾಗಿದೆ. ಇದರಿಂದ ಸರಕಾರಕ್ಕೆ ಬಂದಿರುವ ಆದಾಯ ಕೇವಲ 25 ಕೋಟಿ ರೂಪಾಯಿ ಮಾತ್ರ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಒಟ್ಟಾಗಿ ಕಠಿಣ ಕ್ರಮಕ್ಕೆ ಮುಂದಾದರೆ ಪರವಾನಗಿದಾರರಿಂದಲೇ ನೂರಾರು ಕೋಟಿ ವಸೂಲಾಗುತ್ತದೆ. ಆದರೆ, ಈ ಸಕ್ರಮದ ಹಾದಿಗೆ ಮಾಫಿಯಾ ಅಡ್ಡಿಯಾಗಿದೆ.

ನದಿಯ ನೀರಿನಡಿಯಿಂದ ಕೊಪ್ಪರಿಗೆಗೆ, ಕೊಪ್ಪರಿಗೆಯಿಂದ ಟ್ಯಾಕ್ಟರ್‌ಗೆ ಮರಳು ಸಾಗಣೆ

ಮರಳು ಎತ್ತಲು ಕರಾವಳಿ ಜಿಲ್ಲೆಗಳಲ್ಲಿ ಜೆಸಿಬಿ ಅಥವಾ ಯಾವುದೇ ಯಂತ್ರಗಳನ್ನು ಬಳಸುವಂತಿಲ್ಲ. ಮರಳು ಯಾರ್ಡ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ವೇ- ಬ್ರಿಜ್‌, ಒಂದು ಕಚೇರಿ ಇರಬೇಕಾದ್ದು ಕಡ್ಡಾಯ. ಆದರೆ, ಈ ನಿಯಮಗಳನ್ನು ಯಾವುದೇ ಭಯವಿಲ್ಲದೆ ಗಾಳಿಗೆ ತೂರಲಾಗುತ್ತಿದೆ. ಮರಳು ಗಣಿಗಾರಿಕೆಯ ಬಿಡ್ಡಿಂಗ್‌ನ ಇ-ಪ್ರಕ್ಯೂರ್‌ಮೆಂಟ್‌ ವ್ಯವಸ್ಥೆ ಎಂಬ ರಂಗೋಲೆ ಕೆಳಗೆ ತೂರುವ ಮಾರ್ಗವನ್ನೂ ಪರವಾನಗಿದಾರರು ಕಂಡುಕೊಂಡಿದ್ದಾರೆ. ಎಲ್ಲಾ ಮರಳು ಪರವಾನಗಿದಾರರು ಮೊದಲೇ ಮಾತುಕತೆ ನಡೆಸಿ ನಿಗದಿತ ಸ್ಥಳಗಳ ಬಿಡ್ಡಿಂಗ್‌ ಅನ್ನು ಅಂತಿಮಗೊಳಿಸಿಕೊಂಡು ಆನ್‌ಲೈನ್‌ ಬಿಡ್ಡಿಂಗ್ ಎಂಬ ಶಾಸ್ತ್ರವನ್ನು ಪೂರೈಸುವ ಸ್ಥಿತಿ ಇದೆ. ರಾಜ್ಯದಲ್ಲಿ ಅತಿ ಹೆಚ್ಚು ಮರಳು ಗಣಿಗಾರಿಕೆ ನಡೆಯುವ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಶಾಸ್ತ್ರವನ್ನು ವ್ಯವಸ್ಥಿತವಾಗಿ ನಡೆಸುತ್ತಿರುವ ಆರೋಪಗಳಿವೆ.

ನಿಯಮ ಉಲ್ಲಂಘನೆಗೆ ಸಾವಿರದ ಲೆಕ್ಕದಲ್ಲಿ ದಂಡ ಹಾಕಿ ಯಾರ್ಡ್‌ನಲ್ಲಿ ಉಳಿದಿದ್ದ ಲಕ್ಷಗಟ್ಟಲೆ ಮರಳನ್ನು ಮಾರಿಕೊಳ್ಳಲು ಅದೇ ಪರವಾನಗಿದಾರರಿಗೆ ಅವಕಾಶ ಕೊಟ್ಟ ಘಟನೆಯೂ ಮಲೆನಾಡಿನ ತೀರ್ಥಹಳ್ಳಿಯಲ್ಲಿ ನಡೆದುಹೋಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಚಿವರ ಪ್ರಭಾವವಿಲ್ಲದೆ ಯಾವ ಮಾಫಿಯಾಗಳೂ ನಡೆಯುವುದಿಲ್ಲ. ಮರಳು ಮಾಫಿಯಾ ಕೂಡಾ ಇದರಿಂದ ಹೊರತಾಗಿಲ್ಲ. ಯಾವುದೇ ನಿಯಮಗಳು ಬಂದಾಗಲೂ ಆರಂಭದಲ್ಲಷ್ಟೇ ಒಂದಷ್ಟು ಸದ್ದು ಮಾಡುತ್ತವೆ. ಮುಂದೆ ಪ್ರಭಾವಿಗಳ ಪ್ರಭಾವಕ್ಕೆ, ಅಧಿಕಾರಿಗಳ ಆಲಸ್ಯಕ್ಕೆ ಈ ನಿಯಮಗಳು ಬಲಿಯಾಗುತ್ತವೆ.

ರಾಜ್ಯದಲ್ಲಿ ಮರಳು ಮಾಫಿಯಾಗೆ ಕಡಿವಾಣ ಹಾಕಲು ಹಾಗೂ ಗುಣಮಟ್ಟದ ಮರಳು ಎಲ್ಲರಿಗೂ ನ್ಯಾಯಯುತ ಬೆಲೆಯಲ್ಲಿ ಸಿಗಲು ಸರಕಾರ ಎಂಎಸ್‌ಐಎಲ್‌ ಮರಳಿನ ಪೂರೈಕೆಗೆ ಮುಂದಾಗಿತ್ತು. ಆದರೆ, ಸದ್ಯ ಎಂಎಸ್‌ಐಎಲ್‌ ಮರಳು ಕೆಲವೇ ಜಿಲ್ಲೆಗಳಲ್ಲಷ್ಟೇ ಲಭ್ಯವಿದೆ. ಎಂ- ಸ್ಯಾಂಡ್‌ ಮೇಲೆ ದೀರ್ಘ ಬಾಳಿಕೆಯ ನಂಬಿಕೆ ಇಲ್ಲದ ಕಾರಣ ಬೆಂಗಳೂರಿನಿಂದ ಹೊರಗೆ ಮನೆಗಳ ನಿರ್ಮಾಣಕ್ಕೆ ನದಿ ಮೂಲದ ಮರಳಿಗೇ ಹೆಚ್ಚು ಬೇಡಿಕೆ ಇದೆ. ಸರಕಾರ ಮರಳು ಮಾಫಿಯಾ ಬಗ್ಗೆ ಗಂಭೀರವಾಗುವವರೆಗೂ, ಸ್ಥಳೀಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುವವರೆಗೂ ಮರಳು ಗಣಿಗಾರಿಕೆಯ ನಿಯಮ ಉಲ್ಲಂಘನೆಗಳು ಮುಂದುವರಿಯುತ್ತಲೇ ಇರುತ್ತವೆ.