Home Cover Story ಸಚಿನ್ ಪೈಲಟ್: ಕಷ್ಟಪಟ್ಟು ಪಕ್ಷ ಕಟ್ಟಿದ ಯುವ ನಾಯಕ ರಾಜಸ್ಥಾನದ ಸಿಎಂ ಗಾದಿಯತ್ತ… 

ಸಚಿನ್ ಪೈಲಟ್: ಕಷ್ಟಪಟ್ಟು ಪಕ್ಷ ಕಟ್ಟಿದ ಯುವ ನಾಯಕ ರಾಜಸ್ಥಾನದ ಸಿಎಂ ಗಾದಿಯತ್ತ… 

SHARE

“ಒಂದೊಂದು ಇಟ್ಟಿಗೆ ಇಟ್ಟುಕೊಂಡು ಪಕ್ಷವನ್ನು ಹೇಗೆ ಕಟ್ಟಬೇಕೆಂದು ನನಗೆ ಗೊತ್ತಿದೆ.” ಹೀಗಂತ ಅಂದೊಮ್ಮೆ ಹೇಳಿದ್ದರು ಸಚಿನ್‌ ಪೈಲಟ್‌; ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು.

ಈ ಮಾತನ್ನು ಅವರಿಂದು ಉಳಿಸಿಕೊಂಡಿದ್ದಾರೆ. 2014ರಲ್ಲಿ ರಾಜ್ಯದಲ್ಲಿ ನಾಮವಶೇಷವಾಗಿದ್ದ ಕಾಂಗ್ರೆಸ್‌ನ್ನು ಒಂದರ ಮೇಲೊಂದು ಇಟ್ಟಿಗೆ ಇಟ್ಟಂತೆ ಬೆಳೆಸಿದ ಸಚಿನ್‌ ಪೈಲಟ್‌ ಇವತ್ತು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಗೆಲುವಿನ ಹಿಂದೆ ಅಶೋಕ್‌ ಗೆಹ್ಲೋಟ್‌ರಂಥ ಮ್ಯಾಜಿಷಿಯನ್‌ಗಳ ಕೈವಾಡ ಇದೆಯಾದರೂ ಇದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಚಿನ್‌ ಪೈಲಟ್‌. ಅಂದ ಹಾಗೆ ಅವರಿಗಿನ್ನೂ ಜಸ್ಟ್‌ 41 ವರ್ಷ.

ಹಳೆ ತಲೆಮಾರಿನ ನಾಯಕರ ನಿರ್ಗಮನದ ನಂತರ ಕಾಂಗ್ರೆಸ್‌ ಪಕ್ಷದೊಳಗೆ ಹುಟ್ಟಿಕೊಂಡಿರುವ ಯುವ ತಂಡದ ಮುಂಚೂಣಿ ನಾಯಕ ಪೈಲಟ್. ಈ ಹಿಂದೆ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವವನ್ನೂ ಬೆನ್ನಿಗಿಟ್ಟುಕೊಂಡಿರುವ ಅವರು ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದಾರೆ. ಮುಖ್ಯಮಂತ್ರಿಯಾದರೆ ಇತ್ತೀಚಿನ ದಿನಗಳಲ್ಲಿ ಅತೀ ಕಿರಿಯ ವಯಸ್ಸಿಗೆ ಸಿಎಂ ಹುದ್ದೆಗೇರಿದ ಹಿರಿಮೆಯನ್ನು ಸಚಿನ್‌ ಪೈಲಟ್‌ ತಮ್ಮದಾಗಿಸಿಕೊಳ್ಳಲಿದ್ದಾರೆ.

ಸಚಿನ್‌ ಪೈಲಟ್‌ ಉತ್ತರ ಪ್ರದೇಶದ ಪ್ರಮುಖ ಸಮುದಾಯ ಗುಜ್ಜರ್‌ಗೆ ಸೇರಿದವರು. ಇವರ ಹೆಸರಿನ ಜತೆ ಪೈಲಟ್‌ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದಕ್ಕೆ ಒಂದು ಕಥೆಯಿದೆ. ಅದು ಅವರ ತಂದೆಯ ಬಗೆಗಿನದು. ಸಚಿನ್‌ ಪೈಲಟ್ ತಂದೆ ರಾಜೇಶ್‌ ಪೈಲಟ್‌; ಅವರ ಮೂಲ ಹೆಸರು ರಾಜೇಶ್ವರ್ ಪ್ರಸಾದ್‌ ಸಿಂಗ್‌ ಬಿಧೂರಿ. ಅವರು ಭಾರತೀಯ ವಾಯು ಸೇನೆಯಲ್ಲಿ ಪೈಲಟ್‌ ಆಗಿದ್ದರು. ರಾಜೇಶ್‌ ವಾಯುಸೇನೆಯಿಂದ ನಿವೃತ್ತರಾದರೂ ಅವರ ಹುದ್ದೆಯ ಹೆಸರು ಮಾತ್ರ ಅವರ ಬೆನ್ನು ಬಿಡಲಿಲ್ಲ. ಮುಂದೆ ಅವರು ತಮ್ಮ ಹೆಸರನ್ನೇ ರಾಜೇಶ್‌ ಪೈಲಟ್‌ ಎಂದು ಬದಲಾಯಿಸಿಕೊಂಡರು. ಅದೇ ಮಗನಿಗೂ ಬಳುವಳಿಯಾಗಿ ಬಂತು.

ಇದಿಷ್ಟೇ ಅಲ್ಲ ಸಚಿನ್‌ಗೆ ರಾಜಕಾರಣವೂ ಉಡುಗೊರೆ ರೂಪದಲ್ಲೇ ಬಂತು. ರಾಜೇಶ್‌ ಪೈಲಟ್‌ ಕೇಂದ್ರ ಸಚಿವರಾಗಿದ್ದರು. ಕಾಂಗ್ರೆಸ್‌ನಲ್ಲಿ ಪ್ರಬಲ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಅವರು 2000ನೇ ಇಸವಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅಕಾಲಿಕ ಮರಣವನ್ಪಪ್ಪಿದರು. ಆಗ ತಂದೆಯಿಂದ ಖಾಲಿಯಾಗಿದ್ದ ಜಾಗವನ್ನು ತುಂಬಲು ಸಚಿನ್‌ ಪೈಲಟ್‌ ಬರಬೇಕಾಯಿತು. ಹೀಗೆ ಅಚಾನಕ್ಕಾಗಿ ರಾಜಕೀಯದ ಸೆಳೆತಕ್ಕೆ ಸಿಕ್ಕವರಿಂದ ಮುಖ್ಯಮಂತ್ರಿ ಹುದ್ದೆಯ ಹಾದಿಯಲ್ಲಿದ್ದಾರೆ.

ಸೆಪ್ಟೆಂಬರ್‌ 7, 1977ರಲ್ಲಿ ಜನಿಸಿದ ಸಚಿನ್‌ ಪೈಲಟ್‌ ಮೂಲತಃ ರಾಜಕಾರಣದ ಕಡೆ ಒಲವಿದ್ದವರಲ್ಲ. ಪ್ರಾಥಮಿಕ ಶಿಕ್ಷಣವನ್ನು ನವದೆಹಲಿಯ ಏರ್‌ಫೋರ್ಟ್‌ ಬಾಲ್‌ ಭಾರತಿ ಶಾಲೆಯಲ್ಲಿ ಪೂರೈಸಿದ ಅವರು ಅಲ್ಲಿಂದ ಸೈಂಟ್‌ ಸ್ಟೀಫನ್ಸ್‌ ಕಾಲೇಜಿಗೆ ಸೇರಿ ಬಿಎ ಪದವಿ ಪಡೆದರು. ನಂತರ ಅಮೆರಿಕಾದ ಪೆನ್ಲಿಲ್ವೇನಿಯಾ ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದುಕೊಂಡರು. ತಂದೆಗೆ ಮಗನೂ ಪೈಲಟ್‌ ಆಗಬೇಕು ಎಂಬ ಆಸೆ. ಈ ನಿಟ್ಟಿನಲ್ಲಿ ಸಚಿನ್‌ ಕೂಡ ಹೆಜ್ಜೆ ಇಟ್ಟಿದ್ದರು. ಪೈಲಟ್‌ ಲೈಸನ್ಸ್‌ ಕೂಡ ಪಡೆದುಕೊಂಡಿದ್ದರು.

ಆದರೆ ಎಂಬಿಎ ಪದವಿ ಮುಗಿಸಿ ಭಾರತಕ್ಕೆ ಬಂದವರು ‘ಬಿಬಿಸಿ’ಯ ದೆಹಲಿ ಕಚೇರಿ ಸೇರಿಕೊಂಡರು. ಮುಂದೆ ಅಮೆರಿಕಾ ಮೂಲದ ಜನರಲ್‌ ಮೋಟರ್ಸ್‌ನಲ್ಲಿ ಎರಡು ವರ್ಷಗಳ ಕಾಲ ಅಧಿಕಾರಿಯಾಗಿದ್ದರು. ಇದರ ನಡುವೆಯೇ ಘಟಿಸಿದ ತಂದೆ ಸಾವು ಅವರ ಬದುಕಿನ ದಿಕ್ಕನ್ನು ರಾಜಕಾರಣದತ್ತ ತಿರುಗಿಸಿತು.

ತಂದೆ ನಿಧನರಾದಾಗ 2000 ನೇ ಇಸವಿಯಲ್ಲಿ ದೌಸಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗ ಸಚಿನ್‌ ಚುನಾವಣೆಗೆ ನಿಲ್ಲಬೇಕೆಂಬ ಮಾತುಗಳು ಇತ್ತಾದರೂ ಅವರಿಗೆ ಅದಕ್ಕೆ ಬೇಕಾದ ವಯಸ್ಸಿನ ಅರ್ಹತೆ ಇರಲಿಲ್ಲ. ಹೀಗಾಗಿ ತಾಯಿ ರಮಾ ಪೈಲಟ್‌ ಚುನಾವಣೆಗೆ ನಿಂತು ಜಯ ಸಾಧಿಸಿದರು. 2004ರ ಗೊತ್ತಿಗೆ ಚುನಾವಣೆಗೆ ನಿಲ್ಲಲು ಬೇಕಾದ ವಯಸ್ಸು ಪೂರ್ಣಗೊಂಡ ನಂತರ ಸಚಿನ್‌ ಪೈಲಟ್‌ ಸ್ವತಃ ತಾವೇ ಅಖಾಡಕ್ಕಿಳಿದು ಜಯಭೇರಿ ಬಾರಿಸಿದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸು.

  ಪತ್ನಿ ಸಾರಾ ಪೈಲಟ್‌ ಜತೆ ಸಚಿನ್‌.

ಚುನಾವಣೆಗೆ ಗೆದ್ದ ವರ್ಷವೇ ಸಚಿನ್‌ ಪೈಲಟ್‌ ಮದುವೆಯೂ ಆದರು. ಅವರದು ‘ಲವ್‌ ಮ್ಯಾರೇಜ್‌’ ಆಗಿತ್ತು. ಹುಡುಗಿ ಮನೆಯವರಿಗೆ ಈ ಮದುವೆ ಸುತಾರಾಂ ಇಷ್ಟವಿಲ್ಲದ್ದರಿಂದ ಅವತ್ತಿಗೆ ಸಚಿನ್‌ ಪೈಲಟ್‌ ಮದುವೆ ವಿವಾದಕ್ಕೆ ಕಾರಣವಾಗಿತ್ತು. ಅವರ ಪತ್ನಿ ಸಾರಾ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಪುತ್ರಿಯಾಗಿದ್ದರು. ರಾಜಕಾರಣದೊಳಗಿನ ಈ ಅಂತರ್‌ಧರ್ಮೀಯ ಮದುವೆ ಫಾರೂಕ್‌ ಅವರಿಗಾಗಲಿ, ಮಗ ಓಮರ್ ಅಬ್ದುಲ್ಲಾ ಅವರಿಗಾಗಲಿ ಇಷ್ಟವಿರಲಿಲ್ಲ. ಹೀಗಾಗಿ 2004ರಲ್ಲಿ ದೆಹಲಿಯಲ್ಲಿ ನಡೆದ ಸರಳ ವಿವಾಹವನ್ನು ಅಬ್ದುಲ್ಲಾ ಕುಟುಂಬ ಬಹಿಷ್ಕರಿಸಿತ್ತು. ಕೆಲವೇ ಕೆಲವು ಆಪ್ತರ ಮುಂದೆ ಸಚಿನ್‌ – ಸಾರಾ ಮದುವೆ ನಡೆಯಿತು. ಮುಂದೆ ಎಲ್ಲವೂ ಸರಿಯಾಯಿತು. “ಇದಕ್ಕೆ ನಾವು ಜತೆಯಾಗಿ, ಖುಷಿಯಾಗಿರುವುದೇ ಕಾರಣ” ಎಂದೊಮ್ಮೆ ಹೇಳಿದ್ದರು ಸಚಿನ್‌ ಪೈಲಟ್‌.

ಅಲ್ಲಿಂದ ಅವರು ರಾಜಕಾರಣದಲ್ಲಿ ಬಹುದೂರು ನಡೆದು ಬಂದರು. 2009ರಲ್ಲಿ ಅಜ್ಮೇರ್‌ ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆ ಆಯ್ಕೆಯಾದವರು ಮನ್‌ಮೋಹನ್‌ ಸಿಂಗ್ ಸಂಪುಟದಲ್ಲಿ ಸಚಿವರಾದರು. ಆಗಿನ್ನೂ ಅವರಿಗೆ 32ನೇ ವಯಸ್ಸು. 2014ರಲ್ಲಿ ಸಚಿವರಾಗಿರುವಾಗಲೇ ಅವರನ್ನು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ (ಆರ್‌ಪಿಸಿಸಿ) ಯ ಅಧ್ಯಕ್ಷರನ್ನಾಗಿ ಮಾಡಿ ಅಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಜವಾಬ್ದಾರಿ ನೀಡಿದರು.

ದೆಹಲಿಯಿಂದ ಬಂದ ಸಚಿನ್‌ ಪೈಲಟ್‌ ಜೈಪುರದ ಆರ್‌ಪಿಸಿಸಿ ಕಚೇರಿಯೊಳಗೆ ಕಾಲಿಟ್ಟಾಗ ರಾಜ್ಯದಲ್ಲಿ ಪಕ್ಷ ಚಿಂತಾಜನಕ ಸ್ಥಿತಿ ತಲುಪಿತ್ತು. ಅಧಿಕಾರದಲ್ಲಿದ್ದ ಪಕ್ಷ 2013ರ ಚುನಾವಣೆಯಲ್ಲಿ 21 ಸ್ಥಾನಗಳಿಗೆ ಕುಸಿದಿತ್ತು. 163 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ನಾಗಾಲೋಟದಲ್ಲಿ ಮುಂದುವರಿಯುತ್ತಿತ್ತು. ಇದರ ನಡುವೆಯೇ 2014ರ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿತ್ತು.

ಸಣ್ಣ ಅವಧಿಯಲ್ಲಿ ಸವಾಲನ್ನು ಕೈಗೆತ್ತಿಕೊಂಡ ಸಚಿನ್‌ ಪೈಲಟ್‌ ಮೊದಲ ಯತ್ನದಲ್ಲಿ ಹೀನಾಯ ಸೋಲು ಕಾಣಬೇಕಾಯಿತು. 2014ರ ಲೋಕಸಭೆ ಚುನಾವಣೆಯಲ್ಲಿ ಅಜ್ಮೇರ್‌ನಿಂದ ಸ್ಪರ್ಧಿಸಿದ್ದ ಪೈಲಟ್‌ ಸ್ವತಃ ಸೋಲುಂಡರೆ, ಬಿಜೆಪಿ ಕ್ವೀನ್‌ಸ್ವೀಪ್‌ ಸಾಧನೆ ಮೆರೆಯಿತು. ಈ ಸಂದರ್ಭದಲ್ಲಿ ರಾಜಸ್ಥಾನ ಕಾಂಗ್ರೆಸ್‌ ಆರೋಗ್ಯ ಕೋಮಾಕ್ಕೆ ಹೋಗಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗಾಲಿಲ್ಲ. ಮುಂದಿನ 5 ವರ್ಷ ರಾಜ್ಯ ಕಾಂಗ್ರೆಸ್‌ನ್ನು ಹಿಡಿತಕ್ಕೆ ತೆಗೆದುಕೊಂಡು, ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸಿದರು ಪೈಲಟ್‌.

ಬೈಕ್‌ ರ್ಯಾಲಿಯೊಂದರಲ್ಲಿ ಸಚಿನ್‌ ಪೈಲಟ್‌-ಅಶೋಕ್‌ ಗೆಹ್ಲೋಟ್‌ ಡಬ್ಬಲ್‌ ರೈಡ್‌.

ಇದೆಲ್ಲವೂ ಪೈಲಟ್‌ ಪಾಲಿಗೆ ಸುಲಭದಾಗಿರಲಿಲ್ಲ. ಅಷ್ಟೊತ್ತಿಗಾಗಲೇ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಕಿರಿಯರು ಮತ್ತು ಹಿರಿಯರ ಗುಂಪುಗಾರಿಕೆ ಆರಂಭವಾಗಿತ್ತು. ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಂತೂ ಪೈಲಟ್‌ ಕಾರ್ಯವೈಖರಿ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿದರು. ‘ಪಕ್ಷ ಕಟ್ಟುವುದಕ್ಕಿಂತ ಮುಂದಿನ ಮುಖ್ಯಮಂತ್ರಿಯಾಗುವ ಉತ್ಸಾಹವೇ ಸಚಿನ್‌ ಪೈಲಟ್‌ಗೆ ಹೆಚ್ಚಾಗಿದೆ,’ ಎಂದು ಚಾಟಿ ಬೀಸಿದ್ದರು. ಇದೇ ವೇಳೆಗೆ ‘ಪನಾಮ ಪೇಪರ್ಸ್‌’ ತನಿಖಾ ಮಾಹಿತಿಗಳ ಕಣಜದಲ್ಲಿ ಸಚಿನ್‌ ಪೈಲಟ್‌ ಹೆಸರು ಕೂಡ ಕಾಣಿಸಿಕೊಂಡಿತ್ತು. ಸರಿಯಾದ ಸಮಯಕ್ಕೆ ಸಿಎಂ ಗಾದಿಗಾಗಿ ಗೆಹ್ಲೋಟ್‌ ಒಳಗೊಳಗೇ ದಾಳ ಉರುಳಿಸಿದ್ದರು.

ಆದರೆ ವಿವಾದ, ಗುಂಪುಗಾರಿಗೆ, ತಮ್ಮ ಮೇಲೆ ಕೇಳಿ ಬಂದ ಭ್ರಷ್ಟಾಚಾರ ಆರೋಪವನ್ನು ಮೆಟ್ಟಿ ನಿಲ್ಲುತ್ತಲೇ ಮುನ್ನುಗ್ಗಿದರು ಪೈಲಟ್‌. ಅದರ ಮೊದಲ ಫಲಿತಾಂಶ ಈ ವರ್ಷದ ಆರಂಭದಲ್ಲಿ ನಡೆದ ಉಪಚುನಾವಣೆಯಲ್ಲಿ ಸಿಕ್ಕಿತು. ಎರಡು ಮೂರು ದಶಕಗಳಿಂದ ಕಾಂಗ್ರೆಸ್‌ ಕೈಗೆ ದಕ್ಕದೇ ಇದ್ದ ಅಲ್ವಾರ್‌ ನಗರ ಮತ್ತು ಅಜ್ಮೇರ್‌ ನಗರ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಭಾರೀ ಮತಗಳ ಅಂತರದಿಂದ ಗೆದ್ದುಕೊಂಡಿತು. ಈ ಬೆಳವಣಿಗೆಯಿಂದ ಪಕ್ಷದಲ್ಲೂ ಸಚಿನ್‌ ಪೈಲಟ್‌ ಕೈ ಬಲವಾಯಿತು. ಭಿನ್ನಾಭಿಪ್ರಾಯಗಳು ಸತ್ತು ಮಲಗಿದವು.

ಒಂದು ಕಡೆ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಚಿನ್‌ಗೆ ಈ ಜಯ ಸಹಾಯ ಮಾಡಿದರೆ, ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡು ಬಂತು. ಅದರ ಬೆನ್ನೇರಿ ಹೊರಟ ಸಚಿನ್‌ ಪೈಲಟ್‌ ವಿಮಾನವೀಗ ಜೈಪುರದಲ್ಲಿ ಲ್ಯಾಂಡ್‌ ಆಗಿದೆ. ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ. ಒಂದೊಮ್ಮೆ ಅಶೋಕ್‌ ಗೆಹ್ಲೋಟ್‌ ಅಡ್ಡ ಬರದೇ ಇದ್ದಲ್ಲಿ 41ನೇ ವಯಸ್ಸಿಗೆ ಸಚಿನ್‌ ಪೈಲಟ್‌ ರಾಜಸ್ಥಾನದ ಸಿಎಂ ಗಾದಿ ಮೇಲೆ ಕೂರಲಿದ್ದಾರೆ.

ಚಿತ್ರ ಕೃಪೆ: ದಿ ಕ್ವಿಂಟ್‌

Join Samachara Official. CLICK HERE