Home Investigation ರಾಮ್ ರಹೀಮ್‌ಗೆ ನಟಿ ಹನಿಪ್ರೀತ್; ರಾಘವೇಶ್ವರ ಭಾರತಿಗೆ ‘ಸಾಫ್ಟ್‌ವೇರ್‌’ ಅಶ್ವಿನಿ ಉಡುಚೆ!

ರಾಮ್ ರಹೀಮ್‌ಗೆ ನಟಿ ಹನಿಪ್ರೀತ್; ರಾಘವೇಶ್ವರ ಭಾರತಿಗೆ ‘ಸಾಫ್ಟ್‌ವೇರ್‌’ ಅಶ್ವಿನಿ ಉಡುಚೆ!

SHARE

ಧರ್ಮಗಳು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವುದಿಲ್ಲ ಎಂಬುದು ಮಹಿಳಾವಾದಿಗಳ ಹಳೆಯ ಸ್ಟೇಟ್‌ಮೆಂಟ್. ಇದಕ್ಕೆ ಅಪಚಾರ ಎಂಬಂತೆ, ಧಾರ್ಮಿಕ ಕೇಂದ್ರಗಳಿಂದ ಮಹಿಳಾ ದೌರ್ಜನ್ಯದ ಕತೆಗಳು ಹೊರಬಿದ್ದಾಗ, ಆರೋಪಿಗಳ ಆರೈಕೆಗೆ ನಿಲ್ಲುವವರು ಮಹಿಳೆಯರೇ ಆಗಿರುತ್ತಾರೆ ಎಂಬುದನ್ನು ಈ ದೇಶದ ಧರ್ಮಗುರುಗಳ ಇತ್ತೀಚಿನ ವೃತ್ತಾಂತಗಳು ಹೇಳುತ್ತಿವೆ.

ಮೊನ್ನೆ ಮೊನ್ನೆ ಹರಿಯಾಣದಲ್ಲಿ ದೇರಾ ಸಚ್ಚಾ ಸೌಧದ ಹೆಸರಿನಲ್ಲಿ ಧಾರ್ಮಿಕ ಪಂಗಡವನ್ನು ಕಟ್ಟಿಕೊಂಡಿದ್ದ ಬಾಬಾ ರಾಮ್‌ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾದ ಘಟನೆಗೆ ದೇಶವೇ ಸಾಕ್ಷಿಯಾಗಿದೆ. ಈ ಸಮಯದಲ್ಲಿ ಬಾಬಾ ರಾಮ್ ರಹೀಮ್ ಜತೆಯಲ್ಲಿ ನಿಂತಾಕೆಯ ಹೆಸರು ಹನಿ ಪ್ರೀತ್‌ ಸಿಂಗ್. ಮೂಲತಃ ನಟಿಯಾಗಿದ್ದ ಈಕೆ ಧರ್ಮ ಗುರು ಪೋಷಾಕು ತೊಟ್ಟಿದ್ದ ರಾಮ್‌ ರಹೀಮ್‌ನನ್ನು ‘ತಂದೆ’ ಎಂದು ಕರೆಯುತ್ತಿದ್ದಳು. ಅವರಿಬ್ಬರ ನಡುವಿನ ಸಂಬಂಧ ಏನೇ ಇರಲಿ, ಆಕೆ ತನ್ನದೇ ಓರಗೆಯ ಮಹಿಳೆಯರು ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ವ್ಯಕ್ತಿಗೆ ಬೆಂಬಲವಾಗಿ ನಿಂತಿದ್ದು ಗಮನ ಸೆಳೆಯುವಂತಿತ್ತು.

ಯಾಕೆ ಕೆಲವು ಮಹಿಳೆಯರು ಇಂತಹ ಹಾದಿಯನ್ನು ತುಳಿಯುತ್ತಾರೆ? ಯಾಕೆ ಅತ್ಯಾಚಾರದಂತಹ ಆರೋಪಗಳನ್ನು ಹೊತ್ತವರ ಬೆಂಬಲಕ್ಕೆ ನಿಂತು ಬಿಡುತ್ತಾರೆ? ಇದು ಬರೀ ಹಣ, ಕೀರ್ತಿ ಹಾಗೂ ಐಶಾರಾಮಿ ಬದುಕಿನ ಕನಸಿಗಾಗಿ ಸ್ವಂತಿಕೆಯನ್ನು ಕಳೆದುಕೊಳ್ಳುವ ಪ್ರಕ್ರಿಯೆಯ ಭಾಗವಾ ಅಥವಾ ಭಾವನಾತ್ಮಕ ನೆಲೆಯಲ್ಲಿ ಹೆಣ್ಣಿನ ಮನಸ್ಸು ಹೊಂದಿರುವ ಅಕ್ಕರೆಯ ಅಭಿವ್ಯಕ್ತಿಯಾ?

ಇಂತಹ ಪ್ರಶ್ನೆಗಳು ಈಗ ಯಾಕೆ ಎಂದರೆ, ಉತ್ತರದಲ್ಲಿ ಬಾಬಾ ರಾಮ್‌ ರಹೀಮ್‌ಗೆ ಒಬ್ಬಳು ಹನಿ ಪ್ರೀತ್‌ ಸಿಕ್ಕ ರೀತಿಯಲ್ಲೇ ಇಲ್ಲಿ ದಕ್ಷಿಣದಲ್ಲಿ ರಾಘವೇಶ್ವರ ಭಾರತಿ ಸ್ವಾಮಿಗೆ ಅಶ್ವಿನಿ ಉಡುಚೆ ಸಿಕ್ಕಿದ್ದಾಳೆ. ಸಾಮಾನ್ಯ ಯುವತಿಯೊಬ್ಬಳು ಧಾರ್ಮಿಕ ಸಂಸ್ಥಾನವೊಂದರಲ್ಲಿ ವಹಿಸಿಕೊಂಡು ಬಂದ ಪಾತ್ರ ಮತ್ತು ಅದರ ಹಿನ್ನೆಲೆಯನ್ನು ‘ಸಮಾಚಾರ’ ಇಲ್ಲಿ ಬಯಲಿಗೆಳೆಯುತ್ತಿದೆ. ಇದು ಕರ್ನಾಟಕದ ಮಾಧ್ಯಮಗಳ ಪೈಕಿ ನಡೆಸಿದ ಸ್ವತಂತ್ರ ತನಿಖೆಯಲ್ಲಿ ಸಿಕ್ಕ ವಿಚಾರಗಳು.

ಅಂದಹಾಗೆ, ರಾಘವೇಶ್ವರ ಭಾರತಿ ಸ್ವಾಮಿ ಹೊಸನಗರ ಮೂಲದ ರಾಮಚಂದ್ರಾಪುರ ಮಠದ ಪೀಠಾಧಿಪತಿ. ಇವರ ಮೇಲೆ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪವೂ ಸೇರಿದಂತೆ ಎರಡು ಅತ್ಯಾಚಾರ ಆರೋಪ ಪ್ರಕರಣಗಳು ಹಾಗೂ ಒಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದ ಪ್ರಕರಣಗಳು ದಾಖಲಾಗಿವೆ. ವಿಶೇಷ ಅಂದರೆ, ಇತ್ತೀಚೆಗೆ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡು ತಮ್ಮ ಮೇಲಿನ ಆರೋಪಗಳಿಗೆ ‘ಉಫ್‌’ ಅಂದ ರಾಘವೇಶ್ವರ ಸ್ವಾಮಿ, ಮೇಲಿನ ಮೂರು ಪ್ರಕರಣಗಳ ಕುರಿತು ‘ಮಾತೇ ಆಡದಂತೆ’ ಪ್ರಮುಖ ಮಾಧ್ಯಮಗಳ ಮೇಲೆ ಮಾತ್ರ ತಡೆಯಾಜ್ಞೆ ತಂದಿದ್ದಾರೆ. ಅದರಲ್ಲಿ ‘ಸಮಾಚಾರ’ವೂ ಸೇರಿದೆ.

ಇದು ಈ ಮೂರು ಪ್ರಕರಣಗಳ ಆಚೆಗೆ ರಾಮಚಂದ್ರಾಪುರ ಮಠದ ಪಡಸಾಲೆಯಲ್ಲಿ ಸಿಕ್ಕ ಮತ್ತೊಂದು ಸ್ಫೋಟಕ ಸುದ್ದಿ. ಧರ್ಮ ಪ್ರಚಾರದ ಹೆಸರಿನಲ್ಲಿ ಪೀಠದ ಮೇಲೆ ಕುಳಿತ ವ್ಯಕ್ತಿ ಬೆಳೆಸಿಕೊಂಡ ಮೊದಲ ‘ದೈವಿಕ ಸಂಬಂಧ’ ಮತ್ತು ಅದು ಆತನ ಬದುಕಿನಲ್ಲಿ ವಹಿಸುತ್ತಿರುವ ಪಾತ್ರದ ಪರಿಚಯ.

ಯಾರೀಕೆ ಅಶ್ವಿನಿ ಉಡುಚೆ?:

ವಿಜ್ಞಾನ ಬರಹಗಾರ ಯು.ಬಿ. ಪವನಜ ಜತೆ ಅಶ್ವಿನಿ ಉಡುಚೆ. 

ಸರಿ ಸುಮಾರು 33 ವರ್ಷದ ಅಶ್ವಿನಿ ಉಡುಚೆ ಹೊರ ಜಗತ್ತಿನ ಪಾಲಿಗೆ ಇವತ್ತು ಸ್ಯಾಪ್‌ ಲ್ಯಾಬ್ ಎಂಬ ಪ್ರಮುಖ ಬಹುರಾಷ್ಟ್ರೀಯ ಕಂಪನಿಯೊಂದರ ಸಾಫ್ಟ್‌ವೇರ್‌ ಎಂಜಿನಿಯರ್‌ ಉದ್ಯೋಗಿ. ವಾರ್ಷಿಕ ಲಕ್ಷಾಂತರ ರೂಪಾಯಿ ಪ್ಯಾಕೇಜ್ ಸಂಬಳ ಪಡೆಯುವ ನೌಕರಿಯನ್ನು ಉಳಿಸಿಕೊಂಡು, ಜತೆಗೆ ರಾಮಚಂದ್ರಾಪುರ ಮಠದಲ್ಲಿ ಧಾರ್ಮಿಕ ಸೇವೆಗೆ ಇಳಿದ ಹವ್ಯಕ ಸಮುದಾಯದ ಹೆಣ್ಣು ಮಗಳು ಈಕೆ.

ಆಗಿನ್ನೂ ಅಶ್ವಿನಿ 10ನೇ ತರಗತಿಯ ವಿದ್ಯಾರ್ಥಿನಿ. ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಬಡ ಕುಟುಂಬದಲ್ಲಿ ಆಕೆಯ ಬದುಕು ಹರೆಯಕ್ಕೆ ಕಾಲಿಟ್ಟ ದಿನಗಳು. ತಂದೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ತಾಯಿ ವರದಾಂಬಿಕೆಗೆ ಮೂರ್ಚೆ ರೋಗವೊಂದು ಕಾಣಿಸಿಕೊಂಡಿತ್ತು. ಅವತ್ತಿಗೆ ಅವರಿಗಿದ್ದ ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿ ಸಾಧ್ಯವಾಗಿದ್ದು, ಮಠದ ಗುರುಗಳಿಂದ ಮಂತ್ರಾಕ್ಷತೆ ಪಡೆಯುವ ಮೂಲಕ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ. ಹೀಗೆ, ಅಶ್ವಿನಿ ಅನಾರೋಗ್ಯದ ತಾಯಿಯನ್ನು ಕರೆದುಕೊಂಡು ಮೊದಲ ಬಾರಿಗೆ ಮಠಕ್ಕೆ, ರಾಘವೇಶ್ವರ ಭಾರತಿ ಸ್ವಾಮಿ ಸಂಸ್ಥಾನಕ್ಕೆ ಕಾಲಿಡುತ್ತಾಳೆ.

“ಅವತ್ತು ಗುರುಗಳು (ರಾಘವೇಶ್ವರ ಭಾರತಿ) ಆಶ್ವಿನಿ ತಾಯಿಗೆ ಶಿವ ಕವಚವನ್ನು ಬೋಧಿಸುತ್ತಾರೆ. ಅದರಿಂದ ಅವರ ಮೂರ್ಚೆ ರೋಗ ಕೊಂಚ ಮಟ್ಟಿಗೆ ಹತೋಟಿಗೆ ಬರುತ್ತದೆ. ಅಲ್ಲಿಂದ ಆಚೆಗೆ ಅಶ್ವಿನಿ ರಾಘವೇಶ್ವರ ಭಾರತಿ ಸ್ವಾಮಿ ಸನ್ನಿಧಾನದಲ್ಲಿ ಗುರುತಿಸಿಕೊಳ್ಳುತ್ತಾಳೆ. ಆಕೆಯನ್ನು ಗುರುಗಳೇ ಮೈಸೂರಿನಲ್ಲಿ ಪಿಯುಸಿಗೆ ಸೇರಿಸುತ್ತಾರೆ. ಅಲ್ಲಿಯೇ ಬಿಸಿಎ ಮುಗಿಸಿ, ಬೆಂಗಳೂರಿನಲ್ಲಿ ಎಂಸಿಎ ಮಾಡುತ್ತಾಳೆ. ವಿದ್ಯಾಭ್ಯಾಸದ ನಂತರ ಸ್ಯಾಪ್‌ ಲ್ಯಾಬ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅವತ್ತಿಂದ ಇವತ್ತಿನವರೆಗೆ ಆಕೆ ಮತ್ತು ಗುರುಗಳ ನಡುವೆ ನಿರಂತರ ಸಂಭಾಷಣೆ ಇದೆ,’’ ಎನ್ನುತ್ತಾರೆ ಅಕೆಯನ್ನು ಮಠದಲ್ಲಿ ಹತ್ತಿರದಿಂದ ನೋಡಿದ ಭಕ್ತರೊಬ್ಬರು.

ಅಶ್ವಿನಿ ಮತ್ತು ರಾಘವೇಶ್ವರ ಭಾರತಿ ಸ್ವಾಮಿ ನಡುವೆ ಎಷ್ಟರ ಮಟ್ಟಿಗೆ ಸಂಭಾಷಣೆಗಳು ನಡೆಯುತ್ತವೆ ಎಂಬುದನ್ನು ಸಿಐಡಿ ಅಧಿಕಾರಿಯೊಬ್ಬರು ವಿವರಿಸುತ್ತಾರೆ. “ಶಾಮ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ನಾವು ರಾಘವೇಶ್ವರ ಭಾರತಿ ಸ್ವಾಮಿಯ ಖಾಸಗಿ ದೂರವಾಣಿ ಸಂಖ್ಯೆಯ ಸಿಡಿಆರ್‌ ತೆಗೆಸಿದ್ದೆವು. ಯಾವತ್ತು ಶಾಮ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಂಡರೋ ಅವತ್ತೇ ಅಶ್ವಿನಿ ನಂಬರ್‌ನಿಂದ ರಾಘವೇಶ್ವರ ಭಾರತಿ ಸಂಖ್ಯೆಗೆ ಹಲವು ಬಾರಿ ಕರೆಗಳು ಹೋಗಿದ್ದವು. ನಾವು ಆಕೆಯನ್ನು ಕರೆದು ವಿಚಾರಣೆಯನ್ನೂ ನಡೆಸಿದ್ದೆವು. ಆಕೆ ಕರೆ ಮಾಡಿದ್ದು ಹೌದು, ಆದರೆ ಯಾಕೆ ಮಾಡಿದ್ದೆ ಎಂಬುದು ನೆನಪಿಲ್ಲ ಅಂತ ಹೇಳಿದ್ದಳು,’’ ಎಂದು ನೆನಪಿಸಿಕೊಳ್ಳುತ್ತಾರೆ ಒಬ್ಬರು ಪೊಲೀಸ್‌ ಅಧಿಕಾರಿ.

ಹೊರ ಜಗತ್ತಿನ ದೃಷ್ಟಿಯಲ್ಲಿ ಗೋ ರಕ್ಷಣೆ, ಧರ್ಮ ಪ್ರಚಾರ ಸೇರಿದಂತೆ ತಮ್ಮದೇ ಸಾಮಾಜಿಕ ಧಾರ್ಮಿಕ ಕೈಂಕರ್ಯಗಳಲ್ಲಿ ಮುಳುಗಿ ಹೋಗಿರುವವರು ರಾಘವೇಶ್ವರ ಭಾರತಿ ಸ್ವಾಮಿ. ಪೀಠದ ಬಹುದೊಡ್ಡ ಹೊಣೆಗಾರಿಕೆ ತಮ್ಮ ಮೇಲಿದೆ ಎಂದವರು ಹೇಳಿಕೊಳ್ಳುತ್ತಾರೆ. ಅಂತವರು ಯಾಕೆ ಸುಮಾರು 2 ದಶಕಗಳ ಅಂತರದಲ್ಲಿ ಒಬ್ಬಳು ಸಾಮಾನ್ಯ ಭಕ್ತೆಯ ಜತೆ ನಿರಂತರ ಸಂಪರ್ಕ ಕಾಯ್ದುಕೊಂಡಿದ್ದಾರೆ? ಇದಕ್ಕೆ ಉತ್ತರವನ್ನು ಅವರೇ ನೀಡಬೇಕಿದೆ. ಈ ವಿಚಾರದಲ್ಲಿ ಇನ್ನಷ್ಟು ಆಳಕ್ಕಿಳಿದರೆ ‘ಸಮಾಚಾರ’ಕ್ಕೆ ಲಭ್ಯವಾದ ಮಾಹಿತಿ ಈ ಇಬ್ಬರ ನಡುವಿನ ‘ದೈವಿಕ ಸಂಬಂಧ’ದ ಸ್ವರೂಪವನ್ನು ಇನ್ನಷ್ಟು ನಿಚ್ಚಳವಾಗಿ ಪರಿಚಯಿಸುತ್ತದೆ.

ಪ್ರಕರಣಗಳ ಹಾಳೆಗಳಲ್ಲಿ:

ಅಶ್ವಿನಿ ಉಡುಚೆ ಎಂಬ ಪಾತ್ರವೊಂದು ಇವತ್ತು ರಾಮಚಂದ್ರಾಪುರ ಪೀಠದ ಸುತ್ತ ತನ್ನದೇ ಆದ ಪ್ರಭಾವಳಿ ಹೊಂದಿದೆ ಎಂಬುದನ್ನು ಸರಕಾರಿ ದಾಖಲೆಗಳೇ ಹೇಳುತ್ತಿವೆ. ವಿಶೇಷವಾಗಿ ಮಾಧ್ಯಮಗಳು ಮಾತನಾಡದಂತೆ ತಡೆ ತಂದ ಮೂರು ಪ್ರಕರಣಗಳ ಆರೋಪ ಪಟ್ಟಿಯಲ್ಲಿ, ಸಂತ್ರಸ್ಥರ ಹೇಳಿಕೆಗಳಲ್ಲಿ ಈಕೆಯ ಹೆಸರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪ್ರಕರಣಗಳಲ್ಲಿ ಜನರಿಗೆ ಮಾಹಿತಿ ನೀಡದಂತೆ ನ್ಯಾಯಾಲಯವೇ ಹೇಳಿರುವ ಹಿನ್ನೆಲೆಯಲ್ಲಿ ‘ಸಮಾಚಾರ’ ಅವುಗಳನ್ನು ಇಲ್ಲಿ ಬಹಿರಂಗಪಡಿಸಲು ಹೋಗುವುದಿಲ್ಲ.

ನಿಟ್ಟೂರಿನ ಸಾಮಾನ್ಯ ಕುಟುಂಬದಿಂದ ಬಂದ ಅಶ್ವಿನಿ ಉಡುಚೆ ಮಠದ ಸಂಪರ್ಕಕ್ಕೆ ಬಂದ ನಂತರ ಆಕೆಯ ಬದುಕು ಬದಲಾಗಿದೆ ಎಂಬುದನ್ನು ಅಕೆಯನ್ನು ಹತ್ತಿರದಿಂದ ನೋಡುತ್ತಿರುವವರು ಹೇಳುತ್ತಾರೆ. “ಆಕೆಯದ್ದು ಒಂದು ರೀತಿಯ ಸಮರ್ಪಣಾ ಮನೋಭಾವ. ಗುರುಗಳ (ರಾಘವೇಶ್ವರ ಭಾರತಿ) ಬಗೆಗೆ ಅಪಾರ ಗೌರವ, ಭಕ್ತಿ, ಶ್ರದ್ಧೆ ಎಲ್ಲವೂ ಆಕೆಯಲ್ಲಿದೆ. ಹಾಗಂತ ಆಕೆ ಮಠದಿಂದಾಗಲೀ ಪೀಠದಿಂದಾಗಲೀ ಯಾವುದೇ ಅನುಕೂಲ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಆಕೆ ಓದಿದ್ದೂ ಕೂಡ ವಿದ್ಯಾಭ್ಯಾಸದ ಸಾಲ ತೆಗೆದುಕೊಂಡು. ಆಕೆಯೇ ಅದನ್ನು ಕಟ್ಟಿದ್ದಾಳೆ ಕೂಡ. ಇವತ್ತು ಗೋಕರ್ಣದಲ್ಲಿ ಆಕೆಯೇ ತಂದೆ-ತಾಯಿಗೆ ಜಾಗ ಖರೀದಿಸಿದ್ದಾಳೆ. ಅಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಕೆಯ ತಂದೆ ಅರ್ಚಕರಾಗಿದ್ದಾರೆ,’’ ಎಂದು ಮಾಹಿತಿ ಕೊಡುತ್ತಾರೆ ರಾಮಚಂದ್ರಾಪುರ ಮಠದ ಪ್ರಮುಖ ಹುದ್ದೆಯಲ್ಲಿರುವ ಮಾಜಿ ಅಧಿಕಾರಿಯೊಬ್ಬರು.

ಇದೇ ವಿಚಾರದಲ್ಲಿ ಗೋಕರ್ಣದ ಈ 5 ಗುಂಟೆ ಜಾಗವನ್ನು ಮಠದ ಕಡೆಯಿಂದ ಅಶ್ವಿನಿಗೆ ನೀಡಲಾಗಿದೆ ಎಂಬ ಆರೋಪವನ್ನು ಕೆಲವರು ಹೊರಿಸಿದ್ದಾರೆ. ಇದನ್ನು ‘ಸಮಾಚಾರ’ ಸ್ವತಂತ್ರ ತನಿಖೆಗೆ ಒಳಪಡಿಸಲು ಹೋಗಿಲ್ಲವಾದ್ದರಿಂದ ಅಶ್ವಿನಿ ಕುಟುಂಬ ಉಡುಚೆಯಿಂದ ಗೋಕರ್ಣಕ್ಕೆ ಬಂದು ನೆಲೆಸಿದ ವಿಚಾರದಲ್ಲಿ ಯಾವುದೇ ಅಭಿಪ್ರಾಯಗಳನ್ನೂ ಇಲ್ಲಿ ದಾಖಲಸಲು ಹೋಗುವುದಿಲ್ಲ.

ತಮ್ಮ ಹೆಸರನ್ನು ಬಳಕೆ ಮಾಡಬಾರದು ಎಂಬ ಷರತ್ತಿನೊಂದಿಗೆ ‘ಸಮಾಚಾರ’ದ ಜತೆ ಮಾತನಾಡಿದ ಮಾಜಿ ಅಧಿಕಾರಿ, “ಅಶ್ವಿನಿ ಉಡುಚೆ ಪೀಠದಿಂದ ಏನನ್ನಾದರೂ ಪಡೆದಿದ್ದಾಳೆ ಎಂಬುದಕ್ಕಿಂತ ಆಕೆ ಪೀಠಕ್ಕಾಗಿ ತ್ಯಾಗ ಮಾಡಿದ್ದಾಳೆ ಎಂದು ನನಗೆ ಅನೇಕ ಬಾರಿ ಅನ್ನಿಸಿದೆ. ಧಾರ್ಮಿಕ ಸಂಸ್ಥಾನಗಳಲ್ಲಿ ಇಂತಹ ಮಹಿಳೆಯರ ಅರ್ಪಣೆಗಳು ಎಲ್ಲಿಯೂ ಗಣನೆಗೆ ಬಾರದೇ ಹೋಗುತ್ತದೆ,’’ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ:

ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡುತ್ತಿರುವ ರಾಘವೇಶ್ವರ ಭಾರತಿ ಹಾಗೂ ಅಶ್ವಿನಿ ನಡುವಿನ ದಕಶದ ಹಿಂದಿನ ಆರ್ಕುಟ್ ಸಂಭಾ‍ಷಣೆ. 

ಅಶ್ವಿನಿ ಉಡುಚೆ ಎಂಬ ಪಾತ್ರವೊಂದು ರಾಮಚಂದ್ರಾಪುರ ಮಠದ ಒಟ್ಟಾರೆ ಘಟನಾವಳಿಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಗೌಪ್ಯ ವಿಚಾರವಾಗಿ ಇವತ್ತು ಉಳಿದಿಲ್ಲ ಎಂಬುದು ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಈಕೆಯನ್ನು ಕೇಂದ್ರವಾಗಿಟ್ಟುಕೊಂಡು ರಾಘವೇಶ್ವರ ಭಾರತಿ ವಿಚಾರದಲ್ಲಿ ಸಾಕಷ್ಟು ಪೋಸ್ಟ್‌ಗಳು ಹರಿದಾಡಲು ಆರಂಭವಾಗಿವೆ. ಈಕೆ ಮತ್ತು ರಾಘವೇಶ್ವರ ಭಾರತಿ ನಡುವೆ ದಶಕದ ಹಿಂದೆ ನಡೆದ ಆರ್ಕುಟ್ ಸಂಭಾಷಣೆಯನ್ನು ಸಾಕ್ಷಿ ರೂಪದಲ್ಲಿ ಮುಂದಿಡಲಾಗುತ್ತಿದೆ. ಅದರಲ್ಲೂ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ದೋಷರೋಪ ಪಟ್ಟಿ ಸಲ್ಲಿಕೆಯಾದ ನಂತರ ಅಶ್ವಿನಿ ಉಡುಚೆ ಹೆಸರೂ ಕೂಡ ಹೆಚ್ಚು ಕೇಳಿ ಬರುತ್ತಿದೆ.

ಈ ಎಲ್ಲವುಗಳ ಕುರಿತು ಅಶ್ವಿನಿ ಉಡುಚೆ ಪ್ರತಿಕ್ರಿಯೆಗಾಗಿ ‘ಸಮಾಚಾರ’ ಆಕೆಯನ್ನು ಸಂಪರ್ಕಿಸಿತಾದರೂ, ಯಾವುದೇ ಮರುತ್ತರ ಈವರೆಗೂ ಲಭ್ಯವಾಗಿಲ್ಲ.

ಇದು ಧಾರ್ಮಿಕ ಸಂಸ್ಥಾನವೊಂದರಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಯುವತಿಯೊಬ್ಬಳ ವೃತ್ತಾಂತ. ಬಾಬಾ ರಾಮ್‌ ರಹೀಮ್‌ ವಿಚಾರದಲ್ಲಿ ಹನಿ ಪ್ರೀತ್‌ ಎಂಬ ಕ್ಯಾರೆಕ್ಟರ್‌ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಹೆಚ್ಚು ಕಡಿಮೆ ಇದೇ ಮಾದರಿಯಲ್ಲಿ ರಾಮಚಂದ್ರಾಪುರ ಮಠದ ಪೀಠದ ವಿವಾದದಲ್ಲಿ ಅಶ್ವಿನಿ ಹೆಸರು ಮುನ್ನೆಲೆಗೆ ಬಂದಿದೆ. ವ್ಯತ್ಯಾಸ ಇಷ್ಟೇ. ಹನಿಪ್ರೀತ್‌ ನಟಿ, ಅಶ್ವಿನಿ ಉಡುಚೆ ಸಾಫ್ಟ್‌ವೇರ್‌ ಎಂಜಿನಿಯರ್‌. ಹೀಗಾಗಿಯೇ ಇದು ರಾಘವೇಶ್ವರ ಭಾರತಿ ಕಾರ್ಪೊರೇಟ್‌ ಕನೆಕ್ಷನ್‌ನ ಇನ್ನೊಂದು ಆಯಾಮದಂತೆ ಕಾಣಿಸುತ್ತಿದೆ.

Join Samachara Official. CLICK HERE