Home Media 2-0 ದಾಸ್ಯ ಮನಸ್ಥಿತಿಯ ಪತ್ರಕರ್ತರು, ರಾಜಕಾರಣಿಗಳ ಅಡಿಯಾಳು ಮಾಲಿಕರು & ಭಾರತದ ಮಾಧ್ಯಮ

ದಾಸ್ಯ ಮನಸ್ಥಿತಿಯ ಪತ್ರಕರ್ತರು, ರಾಜಕಾರಣಿಗಳ ಅಡಿಯಾಳು ಮಾಲಿಕರು & ಭಾರತದ ಮಾಧ್ಯಮ

SHARE

ಲೇಖಕರು: ಮಾರ್ಕಂಡೇಯ ಕಟ್ಜು

ಹಿರಿಯ ಪತ್ರಕರ್ತ ಜಿಮ್ ಅಕಾಸ್ಟಾ ಅವರ ಪ್ರವೇಶ ಪತ್ರಗಳನ್ನು ಅಮಾನತ್ತುಗೊಳಿಸಿರುವ ಶ್ವೇತಭವನದ ವಿರುದ್ಧ ಸಿಎನ್ಎನ್ ಮೊಕದ್ದಮೆ ಹೂಡಲು ನಿರ್ಧಾರಿಸಿರುವುದು ಅಮೆರಿಕದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಮತ್ತು ಹೆಚ್ಚಿನ ಅಮೆರಿಕನ್ನರು ಸಿಎನ್‌ಎನ್‌ಗೆ ಬೆಂಬಲ ನೀಡಿದ್ದಾರೆ.

ಇಂಥಹದ್ದೊಂದು ತೀರ್ಮಾನ ಭಾರತದಲ್ಲಿ ಹೇಗೆ ಸಾಧ್ಯ? 1975-77ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಇಂದಿರಾ ಗಾಂಧಿಯವರು ಅಮಾನತ್ತುಗೊಳಿಸಿದ್ದರು. ಎಲ್‌.ಕೆ. ಅಡ್ವಾಣಿಯವರ ಜನಪ್ರಿಯ ಹೇಳಿಕೆಯಂತೆ, ಈ ಸಂದರ್ಭದಲ್ಲಿ ದೇಶದ ಮಾಧ್ಯಮಗಳನ್ನು ಕೇವಲ ಬಾಗಲು ಹೇಳಿದರೆ ಅವು ಅವತ್ತು ತೆವಳಿಯೇ ಬಿಟ್ಟಿದ್ದವು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮುಖೇಶ್‌ ಅಂಬಾನಿ ‘ಸಿಎನ್‌ಎನ್‌- ಐಬಿಎನ್‌’ (ಈಗಿನ ಸಿಎನ್‌ಎನ್‌ ನ್ಯೂಸ್‌ 18) ವಾಹಿನಿಯನ್ನು ಖರೀದಿ ಮಾಡುತ್ತಿದ್ದಂತೆ ರಾಜ್‌ದೀಪ್‌ ಸರ್ದೇಸಾಯಿ ಮತ್ತು ಸಾಗರಿಕಾ ಘೋಷ್ ಸಂಸ್ಥೆಯನ್ನು ತೊರೆಯುವ ನಿರ್ಧಾರಕ್ಕೆ ಬಂದರು. 2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಮುಜುಗರಕ್ಕೀಡು ಮಾಡುವ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಕಾರಣಕ್ಕೆ ಸರ್ದೇಸಾಯಿ ಬಗ್ಗೆ ಮೋದಿ ಅಸಮಧಾನಗೊಂಡಿದ್ದರು ಎಂಬ ಮಾತುಗಳಿವೆ. ಇಂಥಹದ್ದೊಂದು ಬೆಳವಣಿಗೆ ನಡೆದಾಗ ಮಾಧ್ಯಮಗಳಿಂದ ಒಂದೇ ಒಂದೂ ಶಬ್ದವೂ ಹೊರ ಬೀಳಲಿಲ್ಲ.

‘ಇಂಡಿಯಾ ಟುಡೇ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕರಣ್‌ ಥಾಪರ್‌ ಅವರ ಕಾರ್ಯಕ್ರಮವನ್ನು ವಾಹಿನಿಯ ಆಡಳಿತ ಮಂಡಳಿಯವರು ನವೀಕೃತಗೊಳಿಸಲಿಲ್ಲ. ಸಂದರ್ಶನವೊಂದರಲ್ಲಿ ಥಾಪರ್‌ ಮೋದಿಗೆ ಕಿರಿಕಿರಿ ಉಂಟು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಸರಕಾರವನ್ನು ಪ್ರಶ್ನಿಸುವ ಕಾರ್ಟೂನಿಸ್ಟ್‌ ಸತೀಶ್‌ ಆಚಾರ್ಯ ಅವರ ಹಲವು ಕಾರ್ಟೂನ್‌ಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿ ಕೊನೆಗೆ ‘ನೀವಿನ್ನು ನಮಗೆ ಬೇಕಾಗಿಲ್ಲ’ ಎಂದಿತು ‘ಮೇಲ್‌ ಟುಡೇ’. ಈಗಲೂ ಮಾಧ್ಯಮಗಳು ತುಟಿ ಬಿಚ್ಚಲಿಲ್ಲ.

ರಾಜಕೀಯ ಒತ್ತಡದಿಂದಾಗಿ ಪುಣ್ಯಾ ಪ್ರಸೂನ್ ಬಾಜಪೇಯಿ ಮತ್ತು ಮಿಲಿಂದ್ ಖಂಡೇಕರ್ ಅವರನ್ನು ‘ಎಬಿಪಿ’ ವಜಾಗೊಳಿಸಿತು. ಸಣ್ಣ ಪ್ರತಿರೋಧವನ್ನು ತೋರಿಯೂ ಅನಿವಾರ್ಯವಾಗಿ ಅವರು ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಯಿತು.

ಈ ಸಂದರ್ಭದಲ್ಲಿ ಭಾರತದ ಮಾಧ್ಯಮಗಳು ಯಾಕೆ ಸಿಎನ್‌ಎನ್‌ ರೀತಿಯಲ್ಲಿ ಧೈರ್ಯದಿಂದ ವರ್ತಿಸುತ್ತಿಲ್ಲ ಎಂದು ಹಲವರು ಕೇಳುತ್ತಿದ್ದಾರೆ. ನಾನು ಇಲ್ಲಿ ನನ್ನ ಅಭಿಪ್ರಾಯಗಳನ್ನು ತೆರೆದಿಡಲು ಬಯಸುತ್ತೇನೆ.

1. ಅಮೆರಿಕಾ ಅಥವಾ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯವು ಬಲವಾಗಿಲ್ಲ. ಇಲ್ಲಿ, ಹೆಚ್ಚಿನ ಜನರು ಅಧಿಕಾರಿಗಳೊಂದಿಗೆ ಕತ್ತಿ ಮಸೆಯಲು ಇಷ್ಟಪಡುವುದಿಲ್ಲ.

ಉದಾಹರಣೆಗಾಗಿ, 1975 ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ (ಅವರ ಕುರ್ಚಿಯನ್ನು ಉಳಿಸಲು; ಭಾರತದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ) ಎಲ್ಲಾ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು ಮತ್ತು ಮಾಧ್ಯಮಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣಗಳನ್ನು ಹೇರಲಾಗಿತ್ತು. ಅವತ್ತು ಇದರ ವಿರುದ್ಧ ಯಾರೂ ವಿಪರೀತ ಪ್ರತಿರೋಧವನ್ನು ತೋರಲಿಲ್ಲ. ಹೆಚ್ಚಿನ ಜನರು ‘ಇದು ನಮ್ಮ ಹಣೆ ಬರಹ’ ಎಂದು ಸುಮ್ಮನೆ ಇದ್ದು ಬಿಟ್ಟರು. ಇದಕ್ಕೆ ಅಪವಾದವಾಗಿದ್ದವರು ಧೈರ್ಯಶಾಲಿ ರಾಮನಾಥ್‌ ಗೋಯೆಂಕಾ ಮತ್ತು ಅವರ ‘ಇಂಡಿಯನ್ ಎಕ್ಸ್‌ಪ್ರೆಸ್‌ ಗ್ರೂಪ್’ ಮಾತ್ರ. ಅವರು ಅದಕ್ಕಾಗಿ ಬೆಲೆ ತೆರಬೇಕಾಯಿತು.

ಒಂದೊಮ್ಮೆ ಇಂಥಹ ಬೆಳವಣಿಗೆ ಅಮೆರಿಕಾ ಅಥವಾ ಯುರೋಪ್‌ನಲ್ಲಿ ಸಂಭವಿಸಿದ್ದರೆ ಬಹುಶಃ ಅದಕ್ಕೆ ವ್ಯಾಪಕವಾದ ಆಕ್ರೋಶ ಮತ್ತು ಪ್ರತಿರೋಧ ವ್ಯಕ್ತವಾಗುತ್ತಿತ್ತು.

2. ಪಾಶ್ಚಾತ್ಯ ಮತ್ತು ಭಾರತೀಯ ಮಾಧ್ಯಮಗಳೆರಡೂ ಉದ್ಯಮಿಗಳ ಒಡೆತನದಲ್ಲೇ ಇವೆ. ಆದರೆ ಪಾಶ್ಚಾತ್ಯ ಉದ್ಯಮಿಗಳು ರಾಜಕೀಯ ಮುಖಂಡರಿಗೆ ತಲೆ ಬಾಗುವುದಿಲ್ಲ. ಬದಲಿಗೆ ಅಲ್ಲಿ ರಾಜಕಾರಣಿಗಳೇ ಸಾಮಾನ್ಯವಾಗಿ ಉದ್ಯಮಿಗಳ ಮುಂದೆ ಬಾಗಿ ನಿಲ್ಲುತ್ತಾರೆ.

ಇದಕ್ಕೆ ಹಲವು ಕಾರಣಗಳಿವೆ.

ಮೊದಲನೆಯದಾಗಿ ಭಾರತದಲ್ಲಿ, ಉದ್ಯಮಿಯೋರ್ವ ಅಧಿಕಾರದಲ್ಲಿ ಇರುವವರನ್ನು ಕೆರಳಿಸಲು ಯತ್ನಿಸಿದರೆ, ಅಧಿಕಾರದಲ್ಲಿರುವ ನಾಯಕರು ಸಾಮಾನ್ಯವಾಗಿ ಕೇಂ‍ದ್ರೀಯ ತನಿಖಾ ದಳ, ಆದಾಯ ತೆರಿಗೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅಥವಾ ಜಾರಿ ನಿರ್ದೇಶನಾಲಯದ ಮೂಲಕ ಅವನನ್ನು ಅಥವಾ ಅವಳನ್ನು ಕಟ್ಟಿ ಹಾಕುತ್ತಾರೆ. ಈ ಅಧಿಕಾರಿಗಳು “ಪಂಜರದ ಗಿಣಿಗಳು” (ಸರ್ವೋಚ್ಚ ನ್ಯಾಯಾಲಯವು ಅವರನ್ನು ಕರೆದಿರುವಂತೆ) ಎಂಬುದು ಎಲ್ಲರಿಗೂ ಗೊತ್ತಿದೆ. ಈ ತನಿಖಾ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ರಾಜಕೀಯ ಗುರುಗಳನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಕೆಲವೊಮ್ಮೆ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಮಟ್ಟಕ್ಕೂ ಇದು ಹೋಗುವುದಿದೆ.

ಇದಕ್ಕೆ ವಿರುದ್ಧವಾಗಿ ಪಾಶ್ಚಾತ್ಯ ದೇಶಗಳಲ್ಲಿ ಅಧಿಕಾರಿಗಳು ಹೆಚ್ಚು ವೃತ್ತಿಪರರಾಗಿದ್ದಾರೆ. ಉದಾಹರಣೆಗೆ, ಸಿಎನ್ಎನ್ ಅನ್ನು ಹತೋಟಿಯಲ್ಲಿಡಲು ಡೊನಾಲ್ಡ್ ಟ್ರಂಪ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಅಥವಾ ಆಂತರಿಕ ಆದಾಯ ಸೇವಾ ಇಲಾಖೆಗೆ ಆದೇಶಿಸಿದರೆ ಅವರು ಈ ಕೆಲಸ ಮಾಡದಿರುವ ಸಾಧ್ಯತೆಗಳೇ ಹೆಚ್ಚು.

ಟ್ರಂಪ್‌ಗೆ ಮುಜುಗರಕ್ಕೀಡು ಮಾಡುವ ಪ್ರಶ್ನೆ ಕೇಳಿದ್ದ ಸಿಎನ್‌ಎನ್‌ ಶ್ವೇತ ಭವನದ ಪ್ರತಿನಿಧಿ ಜಿಮ್‌ ಅಕಾಸ್ಟಾ

ಎರಡನೆಯದಾಗಿ, ಹೆಚ್ಚಿನ ಭಾರತೀಯ ಮಾಧ್ಯಮ ಮಾಲೀಕರು ಅನೇಕ ಇತರ ವ್ಯವಹಾರಗಳನ್ನು ನಡೆಸುತ್ತಿರುತ್ತಾರೆ. ಅವರ ವೃತ್ತಪತ್ರಿಕೆ ಅಥವಾ ಟಿವಿ ಚಾನಲ್ ನಿಜ ಅರ್ಥದಲ್ಲಿ ಹೆಚ್ಚಿನ ಲಾಭ ತರುವ ಅವರ ಇತರ ವ್ಯವಹಾರಗಳಿಗೆ ಪೂರಕವಾಗಿರುತ್ತದೆ ಅಥವಾ ಅವುಗಳ ಹಿತಾಸಕ್ತಿಯನ್ನು ರಕ್ಷಿಸುವ ಸಾಧನವಾಗಿರುತ್ತದೆ.

ಮೂರನೆಯದಾಗಿ, 1947 ರಲ್ಲಿ ಭಾರತವು ಸ್ವಾತಂತ್ರ್ಯ ಹೊಂದಿದ್ದರೂ ಹೆಚ್ಚಿನ ಭಾರತೀಯ ಪತ್ರಕರ್ತರು ಇನ್ನೂ ವಸಾಹತುಶಾಹಿ ಮನಸ್ಥಿತಿಯಲ್ಲೇ ಇದ್ದಾರೆ. ಸಚಿವರು ಅಥವಾ ಐಎಎಸ್ ಅಧಿಕಾರಿಯೊಬ್ಬರ ಮುಂದೆ ಅವರು ತಾವು ಸಣ್ಣವರು ಎಂದುಕೊಂಡಿರುತ್ತಾರೆ (ಒಂದೊಮ್ಮೆ ಅಧಿಕಾರಿಗಳು ಇವರ ಕಿಸೆಯಲ್ಲಿದ್ದರೆ ಮಾತ್ರ ಅಭಿಪ್ರಾಯಗಳು ಬೇರೆಯಾಗಿರುತ್ತವೆ). ಆದ್ದರಿಂದ ಸಿಎನ್ಎನ್ ರೀತಿಯಲ್ಲಿ ಅವರುಗಳನ್ನು ವಿರೋಧಿಸಲು ಧೈರ್ಯವನ್ನು ಅಪರೂಪಕ್ಕಷ್ಟೇ ಪ್ರದರ್ಶಿಸುತ್ತಾರೆ.

3. ಅಮೆರಿಕಾ ಮತ್ತು ಯೂರೋಪ್‌ನಲ್ಲಿ ಆಂಡರ್ಸನ್ ಕೂಪರ್, ಬಾಬ್ ವುಡ್ವರ್ಡ್, ಬಾರ್ಬರಾ ವಾಲ್ಟರ್ಸ್, ಕ್ರಿಸ್ಟಿಯಾನ್ ಅಮಾನ್ಪೋರ್, ಫರೀದ್ ಝಕಾರಿಯಾ ಮತ್ತು ಇತರ ಹೆಚ್ಚಿನ ಪತ್ರಕರ್ತರು ಸಿಬ್ಬಂದಿಗಳಾಗಿದ್ದರೂ ಮಾಧ್ಯಮಗಳ ಮಾಲೀಕರ ಚೌಕಟ್ಟನ್ನು ಅಂಧವಾಗಿ ಒಪ್ಪಿಕೊಳ್ಳುವುದಿಲ್ಲ; ಇದೇ ಸಂದರ್ಭದಲ್ಲಿ ಮಾಲಿಕರೂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರುತ್ತದೆ. ಈ ಪತ್ರಕರ್ತರು ತಮ್ಮದೇ ಆದ ನೈತಿಕತೆ ಮತ್ತು ವೃತ್ತಿಪರ ಮಾನದಂಡಗಳನ್ನು ಹೊಂದಿರುತ್ತಾರೆ; ಮತ್ತು ಅದನ್ನು ಪಾಲಿಸುವಂತೆ ಮಾಲಿಕರನ್ನು ಒತ್ತಾಯಿಸುತ್ತಾರೆ.

ಇದೇ ರೀತಿ ನನ್ನ ಅಂದಾಜಿನ ಪ್ರಕಾರ ಸಿಎನ್‌ಎನ್‌ ಪ್ರಕರಣದಲ್ಲಿಯೂ ಮಾಲಿಕ ಟೆಡ್‌ ಟರ್ನರ್‌ ಪ್ರಖ್ಯಾತ ಪತ್ರಕರ್ತರ ಸಲಹೆಯನ್ನು ಪಡೆದುಕೊಂಡಿರಲೇಬೇಕು. ಮತ್ತು ಅವರುಗಳು ಜಿಮ್‌ ಅಕಾಸ್ಟಾ ಬೆನ್ನಿಗೆ ನಿಲ್ಲವುಂತೆ ಹಾಗೂ ಮೊದಲ ತಿದ್ದುಪಡಿ ಹಕ್ಕುಗಳ ಪರ ಹೋರಾಡುವಂತೆ (ಪತ್ರಿಕಾ ಸ್ವಾತಂತ್ರ್ಯ) ಸಲಹೆ ನೀಡಿರುವ ಸಾಧ್ಯತೆ ಇದೆ.

ಭಾರತದಲ್ಲಿ ದೊಡ್ಡ ಮಾಧ್ಯಮಗಳ ಮಾಲಿಕರೂ ಸೇರಿ ಯಾವುದೇ ಮಾಧ್ಯಮಗಳ ಮಾಲಿಕರಿಗೆ ಈ ರೀತಿ ನಡೆದುಕೊಳ್ಳಲು ಧೈರ್ಯವಿಲ್ಲ. ಇಲ್ಲಿ ಹೆಚ್ಚಿನ ಪತ್ರಕರ್ತರು ನಿಜವಾಗಿಯೂ ಸ್ವತಂತ್ರವಾಗಿಲ್ಲ; ಬದಲಿಗೆ ಮಾಲಿಕರ ಹಿಡಿತದಲ್ಲಿದ್ದಾರೆ. ಅದೇ ಮಾಲಿಕ ರಾಜಕಾರಣಿಗಳ ಕಾಲಿಗೆ ಬೀಳುತ್ತಿರುತ್ತಾನೆ.

ಲೇಖಕರು ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಮಾಜಿ ಅಧ್ಯಕ್ಷರು

ಕೃಪೆ: ದಿ ವೈರ್‌

Join Samachara Official. CLICK HERE