Home Media 2-0 ಒಂದಾದ ಬದ್ಧ ವೈರಿಗಳು; ಟ್ರಂಪ್‌ ವಿರುದ್ದ ಕಾನೂನು ಸಮರ ಸಾರಿದ ಅಮೆರಿಕಾದ ಮಾಧ್ಯಮಗಳು

ಒಂದಾದ ಬದ್ಧ ವೈರಿಗಳು; ಟ್ರಂಪ್‌ ವಿರುದ್ದ ಕಾನೂನು ಸಮರ ಸಾರಿದ ಅಮೆರಿಕಾದ ಮಾಧ್ಯಮಗಳು

SHARE

ಇವರಿಬ್ಬರು ಅಮೆರಿಕಾದ ದೈತ್ಯ ಮಾಧ್ಯಮ ಸಂಸ್ಥೆಗಳು. ಹಾಗಂಥ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಸದಾ ಹಾವು ಮುಂಗುಸಿ ತರ ಕಚ್ಚಾಡುವ ಇವರದ್ದು ಎರಡು ದಶಕಗಳ ವೈರತ್ವ. ಈ ಬದ್ಧ ವೈರಿಗಳೀಗ ಒಟ್ಟಾಗಿದ್ದಾರೆ. ಇಅವರಿಬ್ಬರನ್ನು ಒಂದಾಗಿಸಿದವರು ಅಮೆರಿಕಾದ ವಿಲಕ್ಷಣ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಅಂದ ಹಾಗೆ ಇವರಿಬ್ಬರ ಹೆಸರು ಸಿಎನ್‌ಎನ್‌ ಮತ್ತು ಫಾಕ್ಸ್‌ ನ್ಯೂಸ್‌.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ‘ಸಿಎನ್‌ಎನ್‌’ ಕಾನೂನ ಸಮರ ಸಾರಿದೆ. ತನ್ನ ಪತ್ರಕರ್ತನಿಗೆ ಶ್ವೇತ ಭವನಕ್ಕೆ ಪ್ರವೇಶ ನಿರಾಕರಿಸುವುದನ್ನು ಪ್ರಶ್ನಿಸಿ ಅಧ್ಯಕ್ಷ ಟ್ರಂಪ್‌ ಮತ್ತು ಶ್ವೇತ ಭವನದ ಉನ್ನತ ಅಧಿಕಾರಿಗಳ ವಿರುದ್ಧ ಮಂಗಳವಾರ ಮುಂಜಾನೆ ವಾಷಿಂಗ್ಟನ್‌ ಡಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಸ್ಥೆ ದಾವೆ ಹೂಡಿದೆ. ವಿಶೇಷವೆಂದರೆ ಈ ಹೋರಾಟಕ್ಕೆ ಬದ್ಧ ವೈರಿ ಫಾಕ್ಸ್‌ ನ್ಯೂಸ್‌ ಸೇರಿದಂತೆ ಡಜನ್‌ಗೂ ಹೆಚ್ಚು ಮಾಧ್ಯಮಗಳು ಬೆಂಬಲ ಸೂಚಿಸಿವೆ.

ಅಮೆರಿಕಾದ ಪ್ರತಿಷ್ಠಿತ ಮತ್ತು ಖ್ಯಾತ ಮಾಧ್ಯಮ ಸಂಸ್ಥೆಗಳಾದ ಅಸೋಸಿಯೇಟ್‌ ಪ್ರೆಸ್‌ (ಎಪಿ), ಯುಎಸ್‌ಎ ಟುಡೇ, ವಾಷಿಂಗ್ಟನ್‌ ಪೋಸ್ಟ್‌, ಪೊಲಿಟಿಕೋ, ಬಝ್‌ಫೀಡ್‌, ಬ್ಲೂಂಬರ್ಗ್‌, ಫರ್ಸ್‌ ಲುಕ್‌ ಮೀಡಿಯಾ, ಗನ್ನೆಟ್‌, ಎನ್‌ಬಿಸಿ ನ್ಯೂಸ್‌, ದಿ ನ್ಯೂಯಾರ್ಕ್‌ ಟೈಮ್ಸ್‌, ದಿ ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಜರ್ನಲಿಸಂ ಇನ್ಸ್‌ಟ್ಯೂಟ್‌, ದಿ ಪ್ರೆಸ್‌ ಫ್ರೀಡಂ ಡಿಫೆನ್ಸ್‌ ಫಂಡ್‌, ಇಡಬ್ಲ್ಯೂ ಸ್ಕ್ರಿಪ್ಸ್‌ ಕಂಪನಿ ಮತ್ತು ಫಾಕ್ಸ್‌ ನ್ಯೂಸ್‌ ಸಿಎನ್‌ಎನ್‌ಗೆ ಬೆಂಬಲ ನೀಡಿವೆ.

ಪಟ್ಟಿಯಲ್ಲಿ ಫಾಕ್ಸ್‌ ನ್ಯೂಸ್‌ ಹೆಸರಿರುವುದು ಹಲವರ ಹುಬ್ಬೇರಿಸಿದೆ. ಹಾಗೆ ನೋಡಿದರೆ ಸಿಎನ್‌ಎನ್‌ ಪತ್ರಕರ್ತ ಜಿಮ್‌ ಅಕಾಸ್ಟಾ ಶ್ವೇತ ಭವನದಲ್ಲಿ ಟ್ರಂಪ್‌ ಜತೆ ಕಾದಾಟಕ್ಕೆ ಇಳಿದಾಗ ಫಾಕ್ಸ್‌ ನ್ಯೂಸ್‌ ವಿರೋಧಿ ಮಾತುಗಳನ್ನು ಆಡಿತ್ತು. ಫಾಕ್ಸ್‌ ಪ್ರತಿನಿಧಿಗಳಾದ ಸೀನ್‌ ಹನ್ನಿಟಿ ಮೊದಲಾದವರು ಸಾರ್ವಜನಿಕವಾಗಿಯೇ ಅಕಾಸ್ಟಾ ಮತ್ತು ಸಿಎನ್‌ಎನ್‌ನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು.

Also Read: ಅಕಾಸ್ಟಾ ಎಂಬ ಪತ್ರಕರ್ತ; ಟ್ರಂಪ್ ಎಂಬ ಅಧ್ಯಕ್ಷ: ಭಾರತದಲ್ಲಿವತ್ತು ಕಾಣಸಿಗದ ಅಪರೂಪದ ಮುಖಾಮುಖಿ!

ಆದರೆ ಎರಡು ದಶಕಗಳ ವೈರತ್ವವನ್ನು ಮರೆತ ಫಾಕ್ಸ್‌ ನ್ಯೂಸ್‌ ಇದೀಗ ಬಹಿರಂಗವಾಗಿ ಸಿಎನ್‌ಎನ್‌ ಬೆಂಬಲಕ್ಕೆ ಬಂದಿದೆ. ಇದು ಪತ್ರಿಕಾ ಸ್ವಾತಂತ್ರ್ಯ ವಿಷಯ ಎಂದು ಹೇಳಿರುವ ಫಾಕ್ಸ್‌ ನ್ಯೂಸ್‌ ಅಧ್ಯಕ್ಷ ಜೇ ವಲ್ಲಾಸ್‌, ಎಲ್ಲಾ ಮಾಧ್ಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಪ್ರಕಟಣೆಯನ್ನೇ ಬಿಡುಗಡೆ ಮಾಡಿದ್ದಾರೆ.

“ವೈಟ್‌ ಹೌಸ್‌ ಪ್ರತಿನಿಧಿಯ ಪ್ರವೇಶದ ಅನುಮತಿ ಪತ್ರವನ್ನು ಪಡೆಯಲು ಕಾನೂನು ಹೋರಾಟ ನಡೆಸುತ್ತಿರುವ ಸಿಎನ್‌ಎನ್‌ಗೆ ಫಾಕ್ಸ್‌ ನ್ಯೂಸ್‌ ಬೆಂಬಲ ನೀಡಲಿದೆ,” ಎಂದು ಅವರು ಹೇಳಿದ್ದಾರೆ. ಈ ಸಂಬಂಧ ‘ಪ್ರಕರಣದಲ್ಲಿ ತನಗೆ ಆಸಕ್ತಿ ಇದೆ (ಅಮಿಕಸ್‌ ಬ್ರೀಫ್‌) ಎಂದು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಲಾಗುವುದು,’ ಎಂದೂ ಫಾಕ್ಸ್‌ ನ್ಯೂಸ್‌ ಅಧ್ಯಕ್ಷರು ಹೇಳಿದ್ದಾರೆ.

“ಇತ್ತೀಚೆಗೆ ಬೆಳೆಯುತ್ತಿರುವ ಅಧ್ಯಕ್ಷರ ವಿರೋಧಾತ್ಮಕ ಧ್ವನಿಯನ್ನು ನಾವು ಕ್ಷಮಿಸುವುದಿಲ್ಲ. ನಾವು ಪತ್ರಿಕಾ ಸ್ವಾತಂತ್ರ್ಯ, ಪ್ರತಿನಿಧಿಗಳ ಮುಕ್ತ ಪ್ರವೇಶ ಮತ್ತು ಅಮೆರಿಕಾದ ಜನರಿಗೆ ಮುಕ್ತ ಮಾಹಿತಿ ನೀಡುವ ನಡೆಗಳನ್ನು ಬೆಂಬಲಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

ಫಾಕ್ಸ್‌ ನ್ಯೂಸ್‌ ಜತೆ ಉಳಿದ ಮಾಧ್ಯಮಗಳೂ ಅಮಿಕಸ್‌ ಬ್ರೀಫ್‌ ಸಲ್ಲಿಸಲಿದ್ದೇವೆ ಎಂದು ಹೇಳಿದ್ದು, ಸಿಎನ್‌ಎನ್‌ ಹೋರಾಟ ಮತ್ತಷ್ಟು ಬಲಗೊಂಡಿದೆ. ಈ ಕುರಿತು ವಾಷಿಂಗ್ಟನ್‌ ಪೋಸ್ಟ್‌ ಪ್ರಕಾಶಕ ಮತ್ತು ಸಿಇಒ ಫ್ರೆಡ್‌ ರ್ಯಾನ್‌ ಮಂಗಳವಾರ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, “ವೈಟ್ ಹೌಸ್ ವರದಿಗಾರನ ಪ್ರವೇಶದ ಅನುಮತಿಗಳನ್ನು ಮತ್ತೆ ಪಡೆಯುವ ಸಿಎನ್‌ಎನ್‌ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಕಠಿಣ ಪ್ರಶ್ನೆಗಳನ್ನು ಕೇಳುವುದು, ಈ ಮೂಲಕ ಪ್ರಬಲ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಓದುಗರಿಗೆ ಅತೀ ಹೆಚ್ಚಿನ ಮಾಹಿತಿ ನೀಡುವುದು ಓರ್ವ ಪತ್ರಕರ್ತನ ಕರ್ತವ್ಯವಾಗಿದೆ,” ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.

ಸುದ್ದಿ ರಾಷ್ಟ್ರೀಯ ಭದ್ರತೆ, ಆರ್ಥಿಕತೆ ಅಥವಾ ಪರಿಸರಕ್ಕೆ ಸಂಬಂಧಿಸಿದ್ದಾಗಿರಬಹುದು. ಇದಕ್ಕೆ ಸಂಬಂಧಿಸಿದಂತೆ ವರದಿಗಾರರು ಮುಕ್ತವಾಗಿ ಪ್ರಶ್ನೆಗಳನ್ನು ಕೇಳಲು ಶ್ವೇತಭವನದಲ್ಲಿ ಅವಕಾಶವಿರಬೇಕು. ಸ್ವತಂತ್ರ ಪತ್ರಕರ್ತರಿಗೆ ಅಧ್ಯಕ್ಷರನ್ನು ಸಂಪರ್ಕಿಸಲು ಮತ್ತು ಅವರ ಚಟುವಟಿಕೆಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಹೊಂದಿರಬೇಕು. ಪತ್ರಕರ್ತರನ್ನು ಅನಿಯಂತ್ರಿತ ಕಾರಣಗಳಿಗಾಗಿ ನಿಷೇಧಿಸುವುದು ಸರಿಯಲ್ಲ,” ಎಂದು13 ಮಾಧ್ಯಮ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

“ಈ ಅಧ್ಯಕ್ಷರು ಮತ್ತು ಯಾವುದೇ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ನಮ್ಮ ಸುದ್ದಿ ಸಂಸ್ಥೆಗಳು ಬೆಂಬಲಿಸುತ್ತವೆ. ಈ ತತ್ವಗಳ ಆಧಾರದ ಮೇಲೆ ನಾವು ಸಿಎನ್ಎನ್ ಮತ್ತು ಜಿಮ್ ಅಕೋಸ್ಟಾ ಅವರ ಮೊಕದ್ದಮೆಯನ್ನು ಬೆಂಬಲಿಸಿ ನ್ಯಾಯಾಲಯಕ್ಕೆ ಅಮಿಕಸ್‌ ಬ್ರೀಫ್‌ ಸಲ್ಲಿಸಲಿದ್ದೇವೆ,” ಮಾಧ್ಯಮ ಸಂಸ್ಥೆಗಳು ವಿವರ ನೀಡಿವೆ.

ಇಂಥಹದ್ದೊಂದು ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಕೊಲಂಬಿಯಾ ಬ್ರಾಡ್‌ಕಾಸ್ಟ್‌ ಸಿಸ್ಟಂ (ಸಿಬಿಎಸ್‌) ಮತ್ತು ಬಝ್‌ಫೀಡ್‌ ಕೂಡ ಹೋರಾಟಕ್ಕೆ ಕೈ ಜೋಡಿಸಿವೆ. ಎಬಿಸಿ ನ್ಯೂಸ್‌ ಮತ್ತು ವಾಲ್‌ ಸ್ಟ್ರೀಟ್‌ ಜರ್ನಲ್‌ ಕೂಡ ಸಿಎನ್‌ಎನ್‌ ಪರ ಧ್ವನಿ ಎತ್ತಿವೆ. ಹೀಗೆ ಟ್ರಂಪ್‌ ವಿರುದ್ಧದ ಕಾನೂನು ಹೋರಾಟ ಮಾಧ್ಯಮಗಳನ್ನು ಒಗ್ಗೂಡಿಸಿವೆ.

ಕೊನೆಯದಾಗಿ:

ಈ ಬೆಳವಣಿಗೆ ಬೆನ್ನಿಗೆ ಭಾರತದಲ್ಲಿ ಇದೆಲ್ಲಾ ಸಾಧ್ಯವಾ? ಎಂಬ ಪ್ರಶ್ನೆಯೂ ಎದ್ದಿದೆ. ಅಮೆರಿಕಾದಲ್ಲಿ ಮಾಧ್ಯಮವೊಂದರ ಪ್ರತಿನಿಧಿಯನ್ನು ಪ್ರವೇಶವನ್ನು ನಿರ್ಬಂಧಿಸಿದ್ದಕ್ಕೆ ಅಧ್ಯಕ್ಷರ ವಿರುದ್ಧವೇ ಕಾನೂನು ಹೋರಾಟ ನಡೆಯುತ್ತಿದೆ. ವೈರತ್ವಗಳನ್ನೆಲ್ಲಾ ಪಕ್ಕಕ್ಕಿಟ್ಟು ಮಾಧ್ಯಮಗಳು ಒಟ್ಟಾಗಿ ಸಮರ ಸಾರಿವೆ.

ಇದೇ ವೇಳೆ ಭಾರತದ ಮಾಧ್ಯಮಗಳಲ್ಲಿ ಹಲವು ಅಸಮಾನತೆಗಳು ತಾಂಡವವಾಡುತ್ತಿವೆ. ಸರಕಾರಿ ಜಾಹೀರಾತುಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಸರಕಾರವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸಿ ಸರಕಾರದ ವಿರುದ್ಧ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ ಬೆಳವಣಿಗೆಗಳು ಕಡಿಮೆ. ಹಿಂದೊಮ್ಮೆ ತನಗೆ ಜಾಹೀರಾತಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಆಂಧ್ರ ಪ್ರದೇಶದಲ್ಲಿ ‘ಈ ನಾಡು’ ಕೋರ್ಟ್‌ ಮೆಟ್ಟಿಲೇರಿದ್ದು ಬಿಟ್ಟರೆ ಅಂಥಹ ಬೆಳವಣಿಗೆಗಳು ದೇಶದಲ್ಲಿ ನಡೆದಿಲ್ಲ. ಮತ್ತು ಈ ಹೋರಾಟಗಳಿಗೆ ಉಳಿದ ಮಾಧ್ಯಮ ಸಂಸ್ಥೆಗಳೂ ಬೆಂಬಲ ವ್ಯಕ್ತಪಡಿಸಿದ್ದಿಲ್ಲ. ಅಮೆರಿಕಾದ ಬೆಳವಣಿಗೆಗಳ ಹಿನ್ನೆಲೆಯಲ್ಲಾದರೂ ಎಚ್ಚೆತ್ತುಕೊಳ್ಳಲು ಭಾರತದ ಮಾಧ್ಯಮಗಳಿಗಿದು ಸಕಾಲ.

Also Read: ಸಿಎಂ ಒಡೆತನದ ಮಾಧ್ಯಮಗಳಿಗೆ ಬೆಣ್ಣೆ, ಉಳಿದವರಿಗೆ ಸುಣ್ಣ: ಇದು ಕೆಸಿಆರ್ ‘ಜಾಹೀರಾತು ಹಗರಣ’!