Home Cover Story ‘ಟ್ರೆಂಡಿಂಗ್‌ ಡಿಮೋ’: ಮೋದಿ ಕಾಲೆಳೆದವರ ಗಂಭೀರ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಪರದಾಡುತ್ತಿದೆ ಬಿಜೆಪಿ

‘ಟ್ರೆಂಡಿಂಗ್‌ ಡಿಮೋ’: ಮೋದಿ ಕಾಲೆಳೆದವರ ಗಂಭೀರ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಪರದಾಡುತ್ತಿದೆ ಬಿಜೆಪಿ

SHARE

ನೋಟು ಬದಲಾವಣೆಗೆ ಎರಡು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ದೇಶದಾದ್ಯಂತ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ‘ಕರಾಳ ದಿನ’ದ ಹೆಸರಿನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಮಾಧ್ಯಮಗಳು ಕೂಡ ಇದೇ ಸುದ್ದಿಯನ್ನು ಬೆಳಗ್ಗೆಯಿಂದ ಪ್ರಸ್ತಾಪಿಸುತ್ತಿವೆ. ಆದರೆ, ಸಾಮಾಜಿಕ ಜಾಲತಾಣಗಳು ಮಾತ್ರ ಇನ್ನೊಂದು ಹೆಜ್ಜೆ ಮಂದಿಟ್ಟಿದ್ದು, ಅನಾಣ್ಯೀಕರಣದ ಸುತ್ತ ಮಾಹಿತಿ ಸಾಗರವನ್ನೇ ಸೃಷ್ಟಿಸಿವೆ. ವಿಶೇಷವಾಗಿ ಟ್ಟಿಟ್ಟರ್‌ನಲ್ಲಿ ‘ಡಿಸ್ಟ್ರಕ್ಷನ್‌ ಬೈ ಡಿಮಾನಟೈಸೇಷನ್‌’ ಮತ್ತು ‘ಡಿಮಾನಟೈಸೇಷನ್‌ ಡಿಸಾಸ್ಟರ್‌’ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಇವುಗಳನ್ನು ಹುಡುಕಿಕೊಂಡು ಹೊರಟರೆ, ಹಾಸ್ಯದ ಜತೆಗೆ ಗಂಭೀರ ಪ್ರಶ್ನೆಗಳೂ ಅನಾಣ್ಯೀಕರಣ ಎಂಬ ಅನರ್ಥ ಕ್ರಾಂತಿಯ ಸುತ್ತ ಕೇಳುತ್ತಿರುವುದು ಕಣ್ಣಿಗೆ ರಾಚುತ್ತದೆ.

ಮುಖ್ಯವಾಗಿ, ನೋಟು ನಿಷೇಧದ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣವನ್ನು ಜನರು ಮತ್ತೊಮ್ಮೆ ನನೆನಪಿಸಿದ್ದಾರೆ. ಅನಾಣ್ಯೀಕರಣದ ನಂತರ ಭಾಷಣ ಮಾಡಿದ್ದ ಮೋದಿ, ‘ನನಗೆ 50 ದಿನ ಸಮಯ ನೀಡಿ. ತಪ್ಪು ಮಾಡಿದ್ದರೆ ನನ್ನನ್ನು ಜೀವಂತ ಸುಟ್ಟು ಬಿಡಿ,’ ಎಂದು ಭಾವೋದ್ವೇಗದ ಮಾತುಗಳನ್ನು ಆಡಿದ್ದರು. ಇದಕ್ಕೆ ಎಂದಿನ ತಮ್ಮ ಟಿಪಿಕಲ್ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್‌, ‘ಈ ಅವಧಿಯಲ್ಲಿ ದೇಶದ ಆರ್ಥಿಕತೆ ಸುಟ್ಟು ಕರಕಲಾಯಿತು’ ಎಂದಿದ್ದಾರೆ.

ಇದೇ ಅನಾಣ್ಯೀಕರಣದ ಸಂದರ್ಭದಲ್ಲಿ ಮಾಜಿ ಪ್ರಧಾನಿ, ವಿಶ್ವದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮನ್‌ಮೋಹನ್‌ ಸಿಂಗ್‌ ಸಂಸತ್‌ನಲ್ಲಿ ಹೇಳಿದ ಮಾತುಗಳನ್ನೂ ಜನರು ನೆನಪಿಸಿಕೊಂಡಿದ್ದಾರೆ. ‘ಅನಾಣ್ಯೀಕರಣ ಒಂದು ಸಂಘಟಿತ ಲೂಟಿ ಮತ್ತು ಕಾನೂನಾತ್ಮಕ ದರೋಡೆ’ ಎಂದಿದ್ದರು ಸಿಂಗ್‌. ಜತೆಗೆ ಅದರ ಪರಿಣಾಮಗಳನ್ನು ಅವರು ಪಟ್ಟಿ ಮಾಡಿದ್ದರು. ಹೆಚ್ಚು ಕಡಿಮೆ ಅವರು ಹೇಳಿದ ಪರಿಣಾಮಗಳು ಆರ್ಥಿಕತೆ ಮೇಲಾಗಿದ್ದು ಮಾಜಿ ಪ್ರಧಾನಿಗಳನ್ನು ಜನರು ನೆನಪಿಸಿಕೊಂಡಿದ್ದಾರೆ.

ಮೋದಿ ತೆಗೆದುಕೊಂಡ ಈ ಡಿಮಾನಾಟೈಸೇಷನ್‌ ನಿರ್ಧಾರವನ್ನು ಹಲವರು ಬೆಂಬಲಿಸಿದ್ದರು. ಇದನ್ನು ಯಾರೆಲ್ಲಾ ಬೆಂಬಲಿಸಿದ್ದರು ಮತ್ತು ಯಾರೆಲ್ಲಾ ವಿರೋಧಿಸಿದ್ದರು ಎಂಬುದರ ಪಟ್ಟಿಯನ್ನು ಟ್ಟಿಟ್ಟರ್‌ ಬಳಕೆದಾರರೊಬ್ಬರು ಶೇರ್‌ ಮಾಡಿದ್ದಾರೆ. ಬೆಂಬಲಿಸಿದವರ ಪಟ್ಟಿಯಲ್ಲಿ ಹಣಕಾಸು ಕ್ಷೇತ್ರಕ್ಕೆ ಹೊರಗಿನವರಾದ ಸಿನಿಮಾ ನಟರು, ಬಾಬಾ ರಾಮ್‌ದೇವ್‌, ಕ್ರಿಕೆಟಿಗ ವಿರೇಂದ್ರ ಸೇಹ್ವಾಗ್‌ರ ಹೆಸರುಗಳನ್ನು ಅವರು ಹಾಕಿದ್ದಾರೆ. ಆದರೆ ವಿರೋಧಿಸಿದವರೆಲ್ಲರೂ ಖ್ಯಾತನಾಮ ಆರ್ಥಿಕ ತಜ್ಞರಾಗಿದ್ದಾರೆ. ಇದರಲ್ಲಿ ಮನಮೋಹನ್‌ ಸಿಂಗ್‌, ರಘುರಾಮ್‌ ರಾಜನ್‌, ಅಮರ್ಥ್ಯ ಸೇನ್‌ ಮೊದಲಾದವರು ಇದ್ದಾರೆ. ಮೋದಿ ನಿರ್ಧಾರವನ್ನು ನಂಬಿದವರು ಮತ್ತು ಸ್ವಾಗತಿಸಿದವರೆಲ್ಲಾ ಹಣಕಾಸು ವಿಚಾರಗಳನ್ನು ಬಲ್ಲವರಲ್ಲ ಎಂಬುದನ್ನು ಅವರು ಈ ಮೂಲಕ ಸೂಚ್ಯವಾಗಿ ಹೇಳಿದ್ದಾರೆ. ಇದು ಒಟ್ಟಾರೆ ಟ್ರೆಂಡಿಂಗ್‌ನಲ್ಲಿ ಗಮನಸೆಳೆಯುವ ವಿಚಾರವಾಗಿದೆ.

ಬೆಂಬಲ, ಅಭಿಮಾನದಾಚೆಗೆ ‘ನೋಟ್‌ ಬ್ಯಾನ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅನುಯಾಯಿಗಳು ಈ ನಿರ್ಧಾರದಿಂದ ಕಪ್ಪು ಹಣ ನಿರ್ಮೂಲನವಾಗಲಿದೆ. ಭ್ರಷ್ಟಾಚಾರ ನಿಂತು ಹೋಗಲಿದೆ, ಭಯೋತ್ಪಾದನೆ ನಶಿಸಲಿದೆ, ಕೇವಲ ಡಿಜಿಟಲ್‌ ಹಣ ಚಲಾವಣೆ ಮಾತ್ರ ಉಳಿದುಕೊಳ್ಳಲಿದೆ ಎಂಬುದಾಗಿ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಈಗ ಮೌನಕ್ಕೆ ಜಾರಿದ್ದಾರೆ’ ಎಂದು ಕಮ್ಯೂನಿಸ್ಟ್‌ ಪಕ್ಷದ ನಾಯಕ ಸೀತಾರಾಮ್‌ ಯೆಚೂರಿ ಕಿಡಿಕಾರಿದ್ದಾರೆ. “ಸತ್ಯವೇನೆಂದರೆ ಮೋದಿ ಒಬ್ಬರೇ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ,” ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ಎರಡು ವರ್ಷಗಳ ನಂತರ ಅನಾಣ್ಯೀಕರಣ ಎಂಬುದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿರುವಾಗ, ಸಾಮಾಜಿಕ ಜಾಲತಾಣಗಳು ನೈಜ ಆಕ್ರೋಷಕ್ಕೆ ವೇದಿಕೆಯಾಗಿವೆ. ಮೊದಲ ವರ್ಷದ ಡಿಮಾನಟೈಸೇಷನ್‌ ಸಂಭ್ರಮಾಚರಣೆ ನಡೆಸಿದ್ದ ಬಿಜೆಪಿ ಈ ಬಾರಿ ಮೌನಕ್ಕೆ ಜಾರಿದ್ದು ಜನರ ಈ ಆಕ್ರೋಶವನ್ನು ಅರಿತುಕೊಂಡಂತೆ ಕಾಣಿಸುತ್ತಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಅನಾಣ್ಯೀಕರಣದಿಂದ ಭಯಗೊಂಡಿದೆ ಎಂಬರ್ಥದಲ್ಲಿ ಬಲಪಂಥೀಯರು ಹುಟ್ಟುಹಾಕಿದ ಹ್ಯಾಶ್‌ಟ್ಯಾಗ್‌ಗೆ ನೀರಸ ಪ್ರತಿಕ್ರಿಯೆ ಕಾಣಿಸುತ್ತಿದೆ. ಒಟ್ಟಿನಲ್ಲಿ, ಎರಡು ವರ್ಷಗಳ ನಂತರವೂ ಅನಾಣ್ಯೀಕರಣದ ಒಂದು ನಿರ್ಧಾರ ಜನಪ್ರಿಯ ಪ್ರಧಾನಿ ಹಾಗೂ ಅವರ ಆಡಳಿತವನ್ನು ಇನ್ನದ್ದಂತೆ ಕಾಡುತ್ತಿದೆ. ಅಂದು ನಂಬಿದ ಒಂದು ವರ್ಗ ಇವತ್ತು ಉತ್ತರಗಳಿಲ್ಲದೆ, ಪ್ರಶ್ನೆಗಳನ್ನಷ್ಟೆ ಎದುರಿಗೆ ಇಟ್ಟುಕೊಂಡು ಡ್ಯಾಮೇಜ್ ಕಂಟ್ರೋಲ್‌ಗೆ ದಾರಿ ಹುಡುಕುವ ಪರಿಸ್ಥಿತಿಗೆ ಬಂದು ನಿಂತಿದೆ.