Home Investigation ‘ಚದುರವಳ್ಳಿಯಿಂದ ಕೋಲ್ಕತ್ತಾವರೆಗೆ’: ರಾಘವೇಶ್ವರ ಭಾರತಿ ಸ್ವಾಮಿಯ ಕಾವಿ & ಕಾರ್ಪೊರೇಟ್ ಕನೆಕ್ಷನ್!

‘ಚದುರವಳ್ಳಿಯಿಂದ ಕೋಲ್ಕತ್ತಾವರೆಗೆ’: ರಾಘವೇಶ್ವರ ಭಾರತಿ ಸ್ವಾಮಿಯ ಕಾವಿ & ಕಾರ್ಪೊರೇಟ್ ಕನೆಕ್ಷನ್!

SHARE

ಸುಮಾರು 11 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ಸಮುದಾಯ ಹವ್ಯಕರದ್ದು. ಧಾರ್ಮಿಕ ನಂಬಿಕೆಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳುತ್ತಲೇ, ಆಧುನಿಕತೆಗೆ- ಹೊರ ಜಗತ್ತಿಗೆ ತೆರೆದುಕೊಂಡವರು ಇವರು. ಇದರಲ್ಲಿ ಒಂದು ವರ್ಗ ನಡೆದುಕೊಳ್ಳುತ್ತ ಬಂದಿರುವುದು ರಾಮಚಂದ್ರಾಪುರ ಮಠಕ್ಕೆ. ಈ ಮಠದ ಪೀಠದಲ್ಲಿ ಕುಳಿತಿರುವ ರಾಘವೇಶ್ವರ ಭಾರತಿ ಸ್ವಾಮಿ ಸದ್ಯ ವಿವಾದಗಳ ಕೇಂದ್ರ ಬಿಂದು. ಉತ್ತರ ಭಾರತದ ಧಾರ್ಮಿಕ ಗುರುಗಳ ರೀತಿಯಲ್ಲೇ, ರಾಘವೇಶ್ವರ ಭಾರತಿ ಕೂಡ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿ. 2014ರಿಂದ ಆರಂಭವಾಗಿ ಇಲ್ಲೀವರೆಗೆ ಅವರ ಮೇಲೆ ಎರಡು ಅತ್ಯಾಚಾರ ಪ್ರಕರಣಗಳು, ಭೂ ಕಬಳಿಕೆ ಆರೋಪಗಳು ಬಂದಿವೆ. ಆದರೆ, ಪೀಠದಲ್ಲಿ ಕುಳಿತುಕೊಳ್ಳುವ ಅವರ ಅಧಿಕಾರಕ್ಕೆ ಯಾವುದೇ ಚ್ಯುತಿ ಆಗಿಲ್ಲ. ಕಾರಣ, ಕಾನೂನು ಅಂಗಳದಲ್ಲಿಯೂ ಸ್ವಾಮಿ ಪರವಾಗಿ ನಡೆಸಿಕೊಂಡು ಬಂದ ಹೋರಾಟಗಳು.

ಇತ್ತೀಚೆಗಷ್ಟೇ ರಾಘವೇಶ್ವರ ಸ್ವಾಮಿ ಪರವಾಗಿ ಕಪಿಲ್ ಸಿಬಲ್‌ರಂತಹ ವಕೀಲರು ಸುಪ್ರಿಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಮುಂದೆ ಬಂದಿದ್ದಾರೆ. ಇವತ್ತಿಗೆ ಕಪಿಲ್ ಸಿಬಲ್ ಒಂದು ಹಿಯರಿಂಗ್‌ಗೆ ಲಕ್ಷಗಳ ಲೆಕ್ಕದಲ್ಲಿ ಚಾರ್ಜ್ ಮಾಡುತ್ತಾರೆ ಎಂದು ವಕೀಲರ ಸಮುದಾಯ ನಂಬುತ್ತದೆ. ಅಂತಹ ದುಬಾರಿ ವಕೀಲರನ್ನು ರಾಘವೇಶ್ವರ ಭಾರತಿ ತಮ್ಮ ಪರವಾಗಿ ವಾದ ಮಂಡಿಸಲು ನೇಮಿಸುತ್ತಾರೆ. ಮಠದ ಮೂಲಗಳ ಪ್ರಕಾರ, ಈವರೆಗೆ ರಾಘವೇಶ್ವರ ಭಾರತಿ ಸ್ವಾಮಿ ಇಂತಹ ಕಾನೂನು ಹೋರಾಟಗಳಿಗಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇಷ್ಟಕ್ಕೂ ಈ ಪ್ರಮಾಣದ ಹಣ ಧಾರ್ಮಿಕ ಕೇಂದ್ರವೊಂದರ ಮುಖ್ಯಸ್ಥರ ಬಳಿ ಇರಲು ಹೇಗೆ ಸಾಧ್ಯ?

‘ಮಠದ ಶ್ರೀಮಂತ ಭಕ್ತರು ದೇಣಿಗೆ ರೂಪದಲ್ಲಿ ಹಣ ನೀಡುತ್ತಾರೆ,’ ಎನ್ನುತ್ತಾರೆ ಮಠದ ವಕ್ತಾರರೊಬ್ಬರು. ಇದು ಮೇಲ್ನೋಟಕ್ಕೆ ಕಾಣಿಸುವ ಅಂಶವಾದರೆ, ಆಳದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ಸಂಪರ್ಕಗಳು ಈ ದೇಶದ ದೊಡ್ಡ ಕಾರ್ಪೊರೇಟ್ ಕುಳಗಳವರೆಗೆ ಇದೆ.

‘ಸಮಾಚಾರ’ ನಡೆಸಿದ ಸ್ವತಂತ್ರ ತನಿಖೆಯೊಂದರಲ್ಲಿ, ಇದೇ ರಾಘವೇಶ್ವರ ಭಾರತಿ ಅವರ ಪೂರ್ವಾಶ್ರಮದ ತಂಗಿ, ಚುದುರವಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ, ಶಾಲೆಯೊಂದರ ಮುಖ್ಯಸ್ಥರ ಪತ್ನಿಯಾಗಿರುವ ನಳಿನಿ ಭಟ್ ಕೋಲ್ಕತ್ತಾ ಮೂಲದ ಕಂಪನಿಯೊಂದರ ‘ಹೋಲ್‌ಟೈಮ್‌ ಡೈರೆಕ್ಟರ್’ ಆಗಿದ್ದಾರೆ ಎಂಬುದು ದಾಖಲೆ ಸಮೇತ ಬಯಲಾಗುತ್ತಿದೆ. ಇದು ಧರ್ಮ ಬೋಧನೆಗಾಗಿ ರಾಮಚಂದ್ರಾಪುರ ಪೀಠಕ್ಕೆ ಬಂದು ಕುಳಿತ ಹರೀಶ್ ಶರ್ಮಾ ಎಂಬ ಸಾಮಾನ್ಯ ಹವ್ಯಕ ಬ್ರಾಹ್ಮಣ ಕುಟುಂಬದವರ ಕಾರ್ಪೊರೇಟ್ ಸಂಬಂಧಗಳ ಕತೆಗೆ ಮುನ್ನುಡಿ ಅಷ್ಟೆ.

ಚದುರವಳ್ಳಿ ಶ್ರೀನಿವಾಸಭಟ್ಟ ನಳಿನಿ- ರಾಘವೇಶ್ವರ ಸ್ವಾಮಿ ಸ್ವಂತ ತಂಗಿ. 

ಮೇಲಿನ ದಾಖಲೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಭ್ಯ ಇದೆ. ಇದರ ಪ್ರಕಾರ, ಇಮಾಮಿ ಫ್ರಾಂಕ್‌ರೋಸ್ ಲಿಮಿಟೆಡ್ ಎಂಬ ಕಂಪನಿಯ ನಿರ್ದೇಶಕರುಗಳಲ್ಲಿ ಒಬ್ಬರು ಚದುರವಳ್ಳಿ ಶ್ರೀನಿವಾಸಭಟ್ಟ ನಳಿನಿ. ಅಂದರೆ, ರಾಘವೇಶ್ವರ ಭಾರತಿ ಸ್ವಾಮಿ ತಂಗಿ.

2014ರ ಫೆಬ್ರವರಿಯ 10ನೇ ತಾರೀಖು ಸುಮಾರು 1,200 ಕೋಟಿ ವ್ಯವಹಾರ ನಡೆಸಲು ಅನುಮತಿ ಪಡೆದುಕೊಂಡ ‘ಇಮಾಮಿ ಫ್ರಾಂಕ್‌ರೋಸ್ ಲಿಮಿಟೆಡ್‌’ಗೆ ನಳಿನಿ ನಿರ್ದೇಶಕಿಯಾಗುತ್ತಾರೆ. ಹೇಗೆ?

ಇದಕ್ಕೆ ಉತ್ತರವನ್ನು ಹುಡುಕಿಕೊಂಡು ಹೊರಟರೆ ಕಂಪನಿ ದಾಖಲೆಗಳು ಹಾಗೂ ರಾಘವೇಶ್ವರ ಸ್ವಾಮಿ ಬೆಳೆಸಿಕೊಂಡ ಕಾರ್ಪೊರೇಟ್ ಸಂಬಂಧಗಳನ್ನು ಹತ್ತಿರದಿಂದ ಬಲ್ಲವರು ನೀಡುವ ಮಾಹಿತಿ ಹೊಸ ಹೊಳವುಗಳನ್ನು ನೀಡುತ್ತದೆ.

ಅದು ಗೋ ಜಾಗೃತಿ ಕೆಲಸ:

ಅದು 2005ರ ಕಾಲಘಟ್ಟ. ಅವತ್ತಿಗಿನ್ನೂ ಸೀಮೆಗೆ, ಗುರಿಕಾರರಿಗೆ ಸೀಮಿತವಾಗಿದ್ದ ರಾಮಚಂದ್ರಾಪುರ ಮಠ ತನ್ನ ಪ್ರಾಬಲ್ಯ ವಿಸ್ತರಣೆ ಪ್ರಯತ್ನದಲ್ಲಿತ್ತು. ಅದಕ್ಕಾಗಿ ಗೋ ಜಾಗೃತಿ ಹೆಸರಿನಲ್ಲಿ ಮೊದಲು ಸ್ಥಳೀಯ ಮಟ್ಟದಲ್ಲಿ ನಂತರ ರಾಷ್ಟ್ರಮಟ್ಟದಲ್ಲಿ ಸಮಾವೇಶಗಳನ್ನು ಆಯೋಜಿಸುವ ಕೆಲಸ ಶುರುಮಾಡಿತು. ಉಗ್ರ ಭಾಷಣಕಾರ ಚಕ್ರವರ್ತಿ ಸೂಲೆಬೆಲೆ ರೀತಿಯ ಯುವಕರನ್ನು ಕರೆತಂದು, ಭಾಷಣವೊಂದಕ್ಕೆ ಸಾವಿರ ರೂಪಾಯಿ ರಾಯಧನ ನೀಡಿ ಗೋ ರಕ್ಷಣೆ ಬಗ್ಗೆ ಭಾಷಣ ಶುರುಮಾಡಿಸಿತು. ಮೇಲ್ನೋಟಕ್ಕೆ ಇದು ಗೋ ಸಂರಕ್ಷಣೆಯ ಜಾಗೃತಿ ಕೆಲಸವಾಗಿ ಕಾಣಿಸುತ್ತಿದ್ದರೂ, ಆಳದಲ್ಲಿ ಮಠದ ಪ್ರಾಬಲ್ಯ ವಿಸ್ತರಣೆಯ ಕಾರ್ಯಸೂಚಿ ಇದರ ಹಿಂದಿತ್ತು. ಇದರ ಭಾಗವಾಗಿ ರಾಘವೇಶ್ವರ ಸ್ವಾಮಿಗೆ ಪರಿಚಯವಾಗಿದ್ದು ಕೋಲ್ಕತ್ತಾ ಮೂಲದ, ಇಮಾಮಿ ಹೆಸರಿನ ಬೃಹತ್ ಕಾರ್ಪೊರೇಟ್ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದ ರಾಧೆ ಶಾಮ್ ಅಗರ್‌ವಾಲ್ ಕುಟುಂಬ.

ಇವರ ಪರಿಚಯ ಗಾಢ ಸಂಬಂಧವಾಗಿ ಮಾರ್ಪಾಡಾಗಲು ಭಾವನಾತ್ಮಕ ನೆಲೆಯ ಘಟನೆಯೊಂದು ಕಾರಣ ಎನ್ನುತ್ತಾರೆ ಅಂದು ಸ್ವಾಮಿ ಮತ್ತು ಇಮಾಮಿ ಗ್ರೂಪ್ ನಡುವೆ ಸೇತುವೆಯಾಗಿ ನಿಂತವರು. “ರಾಘವೇಶ್ವರ ಭಾರತಿ ಆರ್‌ಎಸ್‌ ಅಗರ್‌ವಾಲ್ ಕುಟುಂಬಕ್ಕೆ ಪರಿಚಯವಾದ ಹೊತ್ತಿಗೆ ಉದ್ಯಮಿ ಕುಟುಂಬದ ಸದಸ್ಯರೊಬ್ಬರಿಗೆ ಗಂಭೀರ ಕಾಯಿಲೆಯೊಂದು ಬಂದಿತ್ತು. ಇದನ್ನು ಮೊದಲು ಪತ್ತೆ ಹಚ್ಚಿ ಅವರಿಗೆ ಜ್ಯೋತಿಷ್ಯದ ಮೂಲಕ ಸಾಂತ್ವಾನ ಹೇಳಿದ್ದು ವಿಷ್ಣು ಪ್ರಸಾದ್ ಪೂಚಕ್ಕಾಡು ಎಂಬ ಮಂತ್ರವಾದಿ. ಈತ ವಿದೇಶಗಳಲ್ಲಿ, ದೇಶದ ದೊಡ್ಡ ಕಾರ್ಪೊರೇಟ್ ಕುಟುಂಬಗಳಿಗೆ ಮಂತ್ರ ತಂತ್ರದ ವಿದ್ಯೆಯ ಮೂಲಕ ಸಾಂತ್ವಾನ ಹೇಳುತ್ತಾರೆ. ಮೇಲಾಗಿ ರಾಘವೇಶ್ವರ ಭಾರತಿ ಅವರ ಆಪ್ತ ಕೂಡ. ಹೀಗೊಂದು ಭಾವನಾತ್ಮಕ ನೆಲೆಯಲ್ಲಿ ಅಗರ್‌ವಾಲ್ ಕುಟುಂಬ ಪೀಠಕ್ಕೆ ಹತ್ತಿರವಾಯಿತು,’’ ಎನ್ನುತ್ತವೆ ಮೂಲಗಳು.

ಇಮಾಮಿ ಕುಟುಂಬದ ಜತೆ ‘ಸರ್ವಸಂಘ ಪರಿತ್ಯಾಗಿ’ ರಾಘವೇಶ್ವರ ಸ್ವಾಮಿ

ಸಿಮೆಂಟ್ ಫ್ಯಾಕ್ಟರಿ ಯೋಜನೆ:

ಕೋಲ್ಕತ್ತಾ ಮೂಲದ ಕಾರ್ಪೊರೇಟ್ ಪ್ರಪಂಚದ ಸಂಬಂಧ ಬೆಳೆದ ನಂತರ ಅದು ಉದ್ಯಮದ ಒಡನಾಟಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವತ್ತಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬೇರೆ ಅಧಿಕಾರದಲ್ಲಿತ್ತು. ಹೀಗಾಗಿ, ರಾಘವೇಶ್ವರ ಸ್ವಾಮಿಗಳ ಮುಂದಾಳತ್ವದಲ್ಲಿ ಅಗರ್‌ವಾಲ್ ಕುಟುಂಬ ಕರ್ನಾಟಕದಲ್ಲಿ ಸಿಮೆಂಟ್ ಫ್ಯಾಕ್ಟರಿಯೊಂದನ್ನು ಸ್ಥಾಪಿಸಲು ಯೋಜನೆ ರೂಪಿಸಿತ್ತು. ಇದಕ್ಕೆ ಅವತ್ತು ಬಳ್ಳಾರಿಯಲ್ಲಿ ಕಬ್ಬಿಣದ ಅದಿರನ್ನು ದೋಚುತ್ತಿದ್ದ ರೆಡ್ಡಿ ಕುಟುಂಬದೊಂದಿಗೆ ನೆರವಿಗಾಗಿ ಮಾತುಕತೆಗಳೂ ನಡೆದಿದ್ದವು. ಆದರೆ ಬಿಜೆಪಿ ಸರಕಾರ ಅಸ್ಥಿರಗೊಂಡು ಸಿಎಂ ಯಡಿಯೂರಪ್ಪ ಜೈಲಿಗೆ ಹೋಗುವ ಮೂಲಕ ಇಡೀ ಯೋಜನೆ ನನೆಗುದಿಗೆ ಬಿತ್ತು. ಮುಂದಿನ ದಿನಗಳಲ್ಲಿ ಅಗರ್‌ವಾಲ್ ಕುಟುಂಬ ಇದೇ ಸಿಮೆಂಟ್ ಫ್ಯಾಕ್ಟರಿ ಯೋಜನೆಯನ್ನು ಹೊರ ರಾಜ್ಯವೊಂದರಲ್ಲಿ ಅನುಷ್ಠಾನಕ್ಕೆ ತಂದಿತು.

ಸಿಮೆಂಟ್ ಫ್ಯಾಕ್ಟರಿಯ ಯೋಜನೆ ವಿಫಲವಾಯಿತಾದರೂ, ಅಗರ್‌ವಾಲ್ ಕುಟುಂಬ ಹಾಗೂ ರಾಘವೇಶ್ವರ ಭಾರತಿ ಅವರ ಸಂಬಂಧದಲ್ಲಿ ಏನೂ ವ್ಯತ್ಯಾಸಗಳಾಗಲಿಲ್ಲ. ಒಂದು ಹಂತದಲ್ಲಿ, ಗುರಿಕಾರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಾಘವೇಶ್ವರ ಭಾರತಿ, “ನಾವು ಇಲ್ಲಿ ಅಲ್ಲದಿದ್ದರೆ ಕೋಲ್ಕತ್ತಾದಲ್ಲಿ ಹೊಸ ಮಠವನ್ನೇ ಕಟ್ಟುತ್ತೇವೆ,’’ ಎಂದು ಸಮುದಾಯದ ಮುಂದೆ ಹೇಳಿದರು. ಅವರ ಬಾಯಿಂದ ಹೀಗೊಂದು ಮಾತು ಹೊರಬೀಳಲು ಕಾರಣವಾಗಿದ್ದು ಅಷ್ಟೊತ್ತಿಗಾಗಲೇ ಕೋಲ್ಕತ್ತಾದಲ್ಲಿ ಗಟ್ಟಿಯಾಗಿದ್ದ ಕಾರ್ಪೊರೇಟ್ ಕುಟುಂಬದ ಜತೆಗಿನ ಒಡನಾಟವಾಗಿತ್ತು.

ಮೊದಲ ಅತ್ಯಾಚಾರ ಪ್ರಕರಣ:

ಹೀಗಿರುವಾಗಲೇ ಇಸವಿ 2014 ಕಾಲಿಟ್ಟಿತ್ತು. ಎಲ್ಲಾ ಬೆದರಿಕೆ, ಮಾನಸಿಕ ಒತ್ತಡಗಳನ್ನು ಎದುರಿಸಿ ನಿಂತ ರಾಮಕಥಾ ಗಾಯಕಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಮೊದಲ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದರು. ‘ಅವರ ಮನೆಯಲ್ಲಿ ಈ ವಿಚಾರ ಮೊದಲು ಗೊತ್ತಾಗುತ್ತಿದ್ದಂತೆ ಕರ್ನಾಟಕದ ಖ್ಯಾತ ಸಂಪಾದಕರೊಬ್ಬರು ಹಾಗೂ ಆರ್‌ಎಸ್‌ಎಸ್‌ ಮುಖಂಡರ ಹಿಮ್ಮೇಳದಲ್ಲಿ ಗಿರಿನಗರದ ಮಠದಲ್ಲಿ ಸಭೆಯೊಂದು ನಡೆದಿತ್ತು. ಈ ಸಮಯದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ತಾವು ಪೀಠ ಬಿಟ್ಟು ಹಿಮಾಲಯಕ್ಕೆ ಹೊರಟು ಹೋಗುವುದಾಗಿ ಆಶ್ವಾಸನೆಯನ್ನೂ ನೀಡಿದ್ದರು’ ಎಂಬುದು ಈ ಘಟನಾವಳಿಗಳಲ್ಲಿ ಉಪಸ್ಥಿತರಿದ್ದ ಒಬ್ಬರು ನೀಡುವ ಮಾಹಿತಿ.

ಆದರೆ, ಸ್ವಾಮಿ ಹಿಮಾಲಯಕ್ಕೆ ಹೋಗಲಿಲ್ಲ. ಬದಲಿಗೆ, ತಮ್ಮ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದ ಕುಟುಂಬದ ವಿರುದ್ಧವೇ ದೂರು ದಾಖಲಿಸಿದರು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಅವರ ತಂಗಿ ಚದುರವಳ್ಳಿ ಶ್ರೀನಿವಾಸಭಟ್ಟ ನಳಿನಿಯವರನ್ನು ಅಗರ್‌ವಾಲ್ ಕುಟುಂಬದ ಅಡಿಯಲ್ಲಿದ್ದ ಇಮಾಮಿ ಫ್ರಾಂಕ್‌ರೋಸ್ ಲಿಮಿಟೆಡ್ ಎಂಬ ಸರಣಿ ಔಷಧಿ ಮಾರಾಟ ಮಳಿಗೆಗಳನ್ನು ನಡೆಸುವ ಕಂಪನಿಗೆ ನಿರ್ದೇಶಕಿಯನ್ನಾಗಿ ಮಾಡಿದರು.

‘ಸಮಾಚಾರ’ದ ಬಳಿ ಇರುವ ಕಂಪನಿಯ ದಾಖಲೆಗಳಲ್ಲಿ ನಳಿನಿ ನಿರ್ದೇಶಕರಾಗಿದ್ದರೂ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿದ್ದಾರೆ. 2017ರಲ್ಲಿ ಕಂಪನಿ ಒಟ್ಟು 10 ಸಾಮಾನ್ಯ ಸಭೆಗಳನ್ನು ನಡೆಸಿದೆ ಎಂದು ಐಟಿ ಇಲಾಖೆಗೆ ಮಾಹಿತಿ ನೀಡಿದೆ. ಇದರಲ್ಲಿ ಕೇವಲ ಒಂದು ಸಭೆಯಲ್ಲಿ ನಳಿನಿ ಭಾಗವಹಿಸಿದ್ದಾರೆ. ವಾರ್ಷಿಕ ಸಾಮಾನ್ಯ ಸಭೆಗೆ ಅವರು ಗೈರು ಹಾಜರಾಗಿದ್ದಾರೆ ಎನ್ನುತ್ತವೆ ದಾಖಲೆಗಳು. ಆದರೆ, ಕಂಪನಿಯ ದಾಖಲೆಗಳು ನಳಿನಿ ಅವರಿಗೆ ಒಟ್ಟು 12,75,900 ರೂಪಾಯಿಗಳನ್ನು ಸಂಬಳ ರೂಪದಲ್ಲಿ ನೀಡಿದೆ ಎಂಬುದನ್ನು ನಮೂದಿಸಿವೆ. ಮೂಲಗಳ ಪ್ರಕಾರ, ರಾಘವೇಶ್ವರ ಸ್ವಾಮಿ ತಮ್ಮ ರಘುನಂದನ್ ಶರ್ಮಾ ಕೂಡ ಇಮಾಮಿ ಗ್ರೂಪ್ ಕಂಪನಿಯಲ್ಲಿಯೇ ಉತ್ತಮ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ.

ಇಮಾಮಿ ಫ್ರಾಂಕ್‌ರೋಸ್‌ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ದಾಖಲೆ. 

ರಾಘವೇಶ್ವರ ಭಾರತಿ ಸ್ವಾಮಿ ತಮ್ಮ ಪೀಠದ ವ್ಯಾಪ್ತಿ ವಿಸ್ತರಣೆಯ ಜತೆ ಜತೆಗೆ ಪೂರ್ವಾಶ್ರಮದ ಕುಟುಂಬಕ್ಕೂ ಪ್ರತ್ಯಕ್ಷವಾಗಿ ನೆರವಾಗುತ್ತ ಬಂದಿದ್ದರ ಪರಿಣಾಮಗಳು ಇವು.

ಪೀಠಾಧಿಪತಿಗಳು ಸನ್ಯಾಸಿಗಳಾಗಿರುತ್ತಾರೆ, ಪೂರ್ವಾಶ್ರಮದಿಂದ ಸಂಬಂಧ ಕಡೆದುಕೊಂಡಿರುತ್ತಾರೆ, ಆತ್ಮಶ್ರಾದ್ಧ ಮಾಡಿಕೊಂಡು ಪೀಠ ಏರಿದವರು ನಿಸ್ವಾರ್ಥವಾಗಿ ಧರ್ಮ ಪ್ರಚಾರ ಮಾಡುತ್ತಾರೆ ಎಂದು ಮಠಕ್ಕೆ ನಡೆದುಕೊಳ್ಳುವವರು ನಂಬುತ್ತಾರೆ. ಅಷ್ಟೆ ಅಲ್ಲ ಪದ್ಧತಿಗಳೂ ಕೂಡ ಇದನ್ನೇ ಹೇಳುತ್ತವೆ. ಒಂದು ಕಡೆ ಚಾರಿತ್ರ್ಯವನ್ನೂ ಆರೋಪ ರಹಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗದ ರಾಘವೇಶ್ವರ ಭಾರತಿ ಸ್ವಾಮಿ, ಮತ್ತೊಂದು ಕಡೆ ಯಾವ ಉದ್ಯಮಪತಿಗೂ ಕಡಿಮೆ ಇಲ್ಲದಂತೆ ಕಾರ್ಪೊರೇಟ್ ಸಂಬಂಧಗಳನ್ನು ಕುಟುಂಬ ಸುಖಕ್ಕಾಗಿ ಬಳಕೆ ಮಾಡಿದ್ದಾರೆ. ಇಷ್ಟಾದ ನಂತರವೂ ಹವ್ಯಕ ಸಮುದಾಯ ಅವರೊಳಗೊಬ್ಬ ಸರ್ವಸಂಘ ಪರಿತ್ಯಾಗಿಯನ್ನೇ ಕಾಣುತ್ತಾರೆ ಎಂದಾದರೆ, ಅದು ಅವರ ನಂಬಿಕೆಗೆ ಬಿಟ್ಟ ವಿಚಾರ ಅಷ್ಟೆ.