Home news-in-brief ‘ಸಮಾಚಾರ’ದ ಹಿರಿಯ ಉಪಸಂಪಾದಕ ದಯಾನಂದ ಅವರ ಕಥಾ ಸಂಕಲನಕ್ಕೆ ‘ಬಸವರಾಜ ಕಟ್ಟೀಮನಿ’ ಪ್ರಶಸ್ತಿ

‘ಸಮಾಚಾರ’ದ ಹಿರಿಯ ಉಪಸಂಪಾದಕ ದಯಾನಂದ ಅವರ ಕಥಾ ಸಂಕಲನಕ್ಕೆ ‘ಬಸವರಾಜ ಕಟ್ಟೀಮನಿ’ ಪ್ರಶಸ್ತಿ

SHARE

ಪ್ರತಿ ವರ್ಷ ನೀಡಲಾಗುವ ‘ಬಸವರಾಜ ಕಟ್ಟೀಮನಿ ಪ್ರಶಸ್ತಿ’ ಈ ಬಾರಿ ಕಥೆಗಾರ ದಯಾನಂದ ಅವರ ಪುಸ್ತಕಕ್ಕೆ ಸಂದಿದೆ. ಅವರ ‘ದೇವರು ಕಚ್ಚಿದ ಸೇಬು’ ಕಥಾ ಸಂಕಲನಕ್ಕೆ ‘ಕಥಾ’ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.

ಕರ್ನಾಟಕದ ಮಟ್ಟಿಗೆ ವೈಚಾರಿಕ ಕ್ರಾಂತಿಯನ್ನು ಸೃಷ್ಟಿಸಿದ್ದ ಸಾಹಿತಿಗಳಲ್ಲಿ ಬಸವರಾಜ್‌ ಕಟ್ಟೀಮನಿ ಕೂಡ ಒಬ್ಬರು. 1919 ರಿಂದ 1989ರವರೆಗೆ ಬದುಕಿ ಬಾಳಿದ ಅವರು ತಮ್ಮ ಜೀವಮಾನದುದ್ದಕ್ಕೂ 40 ಕಾದಂಬರಿಗಳಿಗೆ, 10 ಕಥಾ ಸಂಕಲನಗಳಿಗೆ ಲೇಖನ ಹಿಡಿದಿದ್ದರು. ಇದಿಷ್ಟೇ ಅಲ್ಲದೆ ಕಾವ್ಯ, ನಾಟಕ, ಪ್ರವಾಸ ಕಥನ, ಸಂಪಾದನೆ, ಮಕ್ಕಳ ಕಥೆಗಳು ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡಿದವರು ಅವರು. ಅವರ ಬದುಕು ಹೊಸ ಪೀಳಿಗೆಗೆ ದಾರಿ ದೀಪವಾಗಬೇಕು ಎಂಬ ಉದ್ದೇಶದಿಂದ 2012ರಲ್ಲಿ ಬೆಳಗಾವಿಯಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವನ್ನು ಆರಂಭಿಸಲಾಗಿತ್ತು.

ಆರಂಭದಲ್ಲಿ ದಿವಂಗತ ಡಾ.ಎಂ.ಎಂ. ಕಲಬುರ್ಗಿ ಇದರ ಅಧ್ಯಕ್ಷರಾಗಿದ್ದರು. 2012ರಲ್ಲಿ ಮೊದಲ ಬಾರಿಗೆ ಪ್ರತಿಷ್ಠಾನದ ಕಡೆಯಿಂದ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಲಾಯಿತು. ನಾಡಿನ ಖ್ಯಾತ ಸಾಹಿತಿಗಳಾದ ಬೋಳುವಾರು ಮಹಮ್ಮದ್‌ ಕುಂ‍‍ಞ, ಗೀತಾ ನಾಗಭೂಷಣ ಮೊದಲಾದವರಿಗೆ ಈಗಾಗಲೇ ಈ ಪ್ರಶಸ್ತಿ ಸಂದಿದೆ.

ಆದರೆ ಕಲಬುರ್ಗಿಯವರು ನಿಧನರಾದ ನಂತರ ಪ್ರಶಸ್ತಿ ನೀಡುವ ಪರಿಪಾಠ ನಿಂತು ಹೋಗಿತ್ತು. ಇದೀಗ 2015-16 ಮತ್ತು 2016-17ನೇ ಸಾಲಿನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇದರಲ್ಲಿ 2017ನೇ ಸಾಲಿನ ಕಥಾ ವಿಭಾಗದಲ್ಲಿ ಸದ್ಯ ‘ಸಮಾಚಾರ’ದಲ್ಲಿ ಉಪ ಸಂಪಾದಕರಾಗಿರುವ ದಯಾನಂದ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಅವರ ಕಥಾ ಸಂಕಲನಕ್ಕೆ ಸಂದಾಯವಾಗುತ್ತಿರುವ ಎರಡನೇ ಪ್ರಶಸ್ತಿ ಎಂಬುದು ಇನ್ನೊಂದು ಖುಷಿಯ ವಿಚಾರ. ಈ ಹಿಂದೆ ‘ಛಂದ ಪುಸ್ತಕ ಪ್ರಶಸ್ತಿ’ಯನ್ನೂ ಅವರು ಇದೇ ಕಥಾ ಸಂಕಲನಕ್ಕೆ ಪಡೆದುಕೊಂಡಿದ್ದರು.