Home Media 2-0 ರಾಯಭಾರಿ ಕಚೇರಿಯಲ್ಲಿ ಖಶೋಗಿ ನಿಗೂಢ ನಾಪತ್ತೆ: ಸೌದಿ ದೊರೆಗಳು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತನನ್ನು ಕೊಲ್ಲಿಸಿದರಾ?

ರಾಯಭಾರಿ ಕಚೇರಿಯಲ್ಲಿ ಖಶೋಗಿ ನಿಗೂಢ ನಾಪತ್ತೆ: ಸೌದಿ ದೊರೆಗಳು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತನನ್ನು ಕೊಲ್ಲಿಸಿದರಾ?

SHARE

ಆತ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪತ್ರಕರ್ತ. ಒಸಾಮ ಬಿನ್‌ ಲಾಡೆನ್‌ ತರಹದ ಟಾಪ್‌ ಉಗ್ರನನ್ನೇ ಹಲವು ಬಾರಿ ಸಂದರ್ಶನ ನಡೆಸಿದಾತ. ಒಂದು ಕಾಲದಲ್ಲಿ ಸೌದಿ ರಾಜ ಕುಟುಂಬದ ಆಪ್ತ ವಲಯದಲ್ಲಿದ್ದ. ಹೀಗುರುತ್ತಲೇ ಅಮೆರಿಕಾದ ಪ್ರಖ್ಯಾತ ‘ವಾಷಿಂಗ್ಟನ್‌ ಪೋಸ್ಟ್‌’ ಸೇರಿದ ಆತ, ಬರಬರುತ್ತಾ ಸೌದಿ ದೊರೆಗಳ ವಿರುದ್ಧ ಬರೆಯ ತೊಡಗಿದ. ಪರಿಣಾಮ ಅವರ ವಿರೋಧ ಕಟ್ಟಿಕೊಂಡ. ಅದೊಂದು ದಿನ ಆತ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿ ಒಳ ಹೊಕ್ಕವನು ಮತ್ತೆ ಹೊರಗೆ ಬರಲೇ ಇಲ್ಲ. ಆತನ ಈ ‘ಮಿಸ್ಸಿಂಗ್‌’ ಪ್ರಕರಣಕ್ಕೂ ಕೆಲವೇ ಗಂಟೆಗಳ ಮೊದಲು ಎರಡು ವಿಮಾನದಲ್ಲಿ ಸೌದಿಯ ರಾಜಧಾನಿ ರಿಯಾದ್‌ನಿಂದ ಇಸ್ತಾಂಬುಲ್‌ಗೆ 15 ಜನರು ಬಂದಿಳಿದಿದ್ದರು. ಹೀಗೆ ಬಂದವರು ರಾಯಭಾರಿ ಕಚೇರಿ ಹೊಕ್ಕು ಕೆಲವೇ ಗಂಟೆಗಳಲ್ಲಿ ಹೊರ ಬಂದಿದ್ದರು…

ಯಾವುದೇ ಥ್ರಿಲ್ಲರ್‌ ಸಿನಿಮಾದ ಕಥೆಗೂ ಕಡಿಮೆ ಇಲ್ಲದ ಈ ರೋಚಕ ಕಥಾನಕದ ನಾಯಕನ ಹೆಸರೇ ಜಮಾಲ್‌ ಖಶೋಗಿ. ಅಮೆರಿಕಾದ ‘ವಾಷಿಂಗ್ಟನ್‌ ಪೋಸ್ಟ್‌’ನ ಒಪಿನಿಯನ್‌ ಎಡಿಟರ್‌ ಆಗಿದ್ದ ಅವರ ಈ ಮಿಸ್ಸಿಂಗ್‌ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿದೆ. ಜಾಗತಿಕ ಮಾಧ್ಯಮಗಳು ನಾಪತ್ತೆಯಾಗಿರುವ ಪತ್ರಕರ್ತನ ಹಿಂದೆ ಬಿದ್ದಿದ್ದು, ಆತ ಏನಾದ? ರಾಯಭಾರ ಕಚೇರಿ ಒಳಗೆ ಏನು ನಡೆಯಿತು? ಆತನ ಕೊಲೆಯಾಯಿತೇ? ಹೀಗೆ ಹಲವು ಪ್ರಶ್ನೆಗಳನ್ನು ಇಟ್ಟುಕೊಂಡು ತನಿಖಾ ವರದಿಗೆ ಇಳಿದಿವೆ. ಸದ್ಯಕ್ಕೆ ಬುಧವಾರ ಸ್ಫೋಟಕ ಸುದ್ದಿ ಪ್ರಕಟಿಸಿರುವ ‘ನ್ಯೂಯಾರ್ಕ್‌ ಟೈಮ್ಸ್‌’, “ಸೌದಿ ಸರಕಾರದ ಉನ್ನತ ವ್ಯಕ್ತಿಯ ಆದೇಶದ ಮೇರೆಗೆ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಕಚೇರಿಯಲ್ಲಿ ಖಶೋಗಿಯನ್ನು ಕೊಲೆ ಮಾಡಲಾಗಿದೆ ಎಂದು ಟರ್ಕಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,” ಎಂಬುದಾಗಿ ವರದಿ ಮಾಡಿದೆ.

ಕಳೆದ ಗುರುವಾರ ಮಧ್ಯಾಹ್ನ ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯೊಳಕ್ಕೆ ಖಶೋಗಿ ತೆರಳಿದ್ದರು. ನಂತರ ಅವರು ಎಲ್ಲೂ ಪತ್ತೆಯಾದ ಬಗ್ಗೆ ಮಾಹಿತಿಗಳಿಲ್ಲ. ‘ಅವರನ್ನು ಕೊಲೆ ಮಾಡಲು ಸಂಕೀರ್ಣ ಮತ್ತು ತುರ್ತು ಯೋಜನೆ ರೂಪಿಸಲಾಗಿತ್ತು,’ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ. ‘ರಾಯಭಾರ ಕಚೇರಿ ಒಳಕ್ಕೆ ಅವರು ಪ್ರವೇಶಿಸಿದ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಸೌದಿ ಸಂಚುಕೋರರ ತಂಡ ಕೊಲೆ ಮಾಡಿ ಸಣ್ಣ ಗರಗಸದಿಂದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದೆ’ ಎಂದು ವರದಿ ವಿವರಿಸಿದೆ.

ಸೌದಿ ಅರೇಬಿಯಾ ರಾಯಭಾರ ಕಚೇರಿ ಹೊರಗೆ ಕೊನೆಯ ಬಾರಿಗೆ ಮಧ್ಯಾಹ್ನ 1.14ಕ್ಕೆ ಕಾಣಿಸಿಕೊಂಡಿದ್ದ ಜಮೀಲ್‌ ಖಶೋಗಿ

ಆದರೆ ಇದನ್ನು ಸೌದಿ ಅರೇಬಿಯಾ ರಾಜ ಮೊಹಮ್ಮದ್‌ ಬಿನ್ ಸಲ್ಮಾನ್‌ ತಳ್ಳಿ ಹಾಕಿದ್ದಾರೆ. “ಖಶೋಗಿ ರಾಯಭಾರ ಕಚೇರಿಯೊಳಗೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ನಿರ್ಗಮಿಸಿದ್ದಾರೆ,” ಎಂದು ಅವರು ಉತ್ತರ ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೋಗನ್‌, “ತನ್ನ ಸಮಜಾಯಿಷಿಗೆ ಸೌದಿ ಅರೇಬಿಯಾ ಸಾಕ್ಷ್ಯಗಳನ್ನು ಒದಗಿಸಬೇಕು,” ಎಂದು ಆಗ್ರಹಿಸಿದ್ದಾರೆ. ಆದರೆ ಇಂದಿನವರೆಗೂ ರಾಯಭಾರ ಕಚೇರಿಯಿಂದ ಅವರು ಹೊರಗೆ ಹೋಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಸೌದಿ ಸರಕಾರ ನೀಡಿಲ್ಲ.

ಬೆಚ್ಚಿ ಬೀಳಿಸುತ್ತಿದೆ ಹತ್ಯೆ ಸಂಚು

ಟರ್ಕಿ ಅಧಿಕಾರಿ ಖಶೋಗಿ ಹತ್ಯೆಯ ವಿವರಗಳನ್ನು ‘ನ್ಯೂಯಾರ್ಕ್‌ ಟೈಮ್ಸ್‌’ಗೆ ನೀಡಿದ್ದು, ಮಾಹಿತಿಗಳು ಬೆಚ್ಚಿ ಬೀಳಿಸುವಂತಿವೆ. ‘ಇಷ್ಟು ದೊಡ್ಡ ಪ್ರಮಾಣದ ಕೊಲೆಗೆ ಉನ್ನತ ಸೌದಿ ಅಧಿಕಾರಿಗಳು ಮಾತ್ರ ಆದೇಶ ಕೊಡಲು ಸಾಧ್ಯ, ಈ ಆದೇಶದ ಮೇಲೆ ಎರಡು ವಿಮಾನಗಳಲ್ಲಿ 15 ಸೌದಿ ಏಜೆಂಟ್‌ಗಳು ಮಂಗಳವಾರ ಟರ್ಕಿಗೆ ಬಂದಿದ್ದರು. ಖಶೋಗಿ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಎಲ್ಲಾ 15 ಜನರು ವಾಪಸ್‌ ತೆರಳಿದ್ದಾರೆ. ಸೌದಿ ಅರೇಬಿಯಾ ಸರಕಾರ ಮತ್ತು ಭದ್ರತಾ ಸೇವೆಯಲ್ಲಿ ಇವರ ಪಾತ್ರ ಏನು ಎಂಬದರ ಬಗ್ಗೆ ಸರಕಾರ ತನಿಖೆ ನಡೆಸುತ್ತಿದೆ. ಇವರಲ್ಲಿ ಒಬ್ಬ ಮರಣೋತ್ತರ ಪರೀಕ್ಷೆ ನಡೆಸುವ ತಜ್ಞನಾಗಿದ್ದು ಈತನೇ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ,’ ಎಂದು ಅಧಿಕಾರಿ ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.

ಟರ್ಕಿಯ ಸರಕಾರದ ಪರವಾಗಿರುವ ಪತ್ರಿಕೆಯೊಂದರ ಅಂಕಣಕಾರ ಕೆಮಲ್‌ ಒಝ್ಟುರ್ಕ್‌, ಈ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿ, “ಅವರನ್ನು ಕೊಲ್ಲುವ ಕ್ಷಣದ ವಿಡಿಯೋ ಇದೆ,” ಎಂದಿದ್ದಾರೆ. ಆದರೆ ಅಧಿಕೃತವಾಗಿ ಅವರು ಕೊಲೆಯಾಗಿದ್ದಾರೆ ಎಂಬುದಕ್ಕೆ ಯಾವುದೇ ನಿಖರ ಸಾಕ್ಷ್ಯಗಳು ಸಿಕ್ಕಿಲ್ಲ.

ತನ್ನ ಪತಿಯ ಬಗ್ಗೆ ಯಾವುದೇ ಸುಳಿವುಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡುವಂತೆ ಪತ್ನಿ ಹ್ಯಾಟಿಸ್‌ ಸೆಂಗಿಝ್ ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ಗೆ ಮನವಿ ಮಾಡಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗವೂ ಈ ಬಗ್ಗೆ ಜಕಾಳಜಿ ವ್ಯಕ್ತಪಡಿಸಿದ್ದು ತನಿಖೆಗೆ ಸಹಕರಿಸುವಂತೆ ಸೌದಿ ಅರೇಬಿಯಾಗೆ ಮನವಿ ಮಾಡಿಕೊಂಡಿದೆ. ಸಾಮಾನ್ಯವಾಗಿ ರಾಯಭಾರ ಕಚೇರಿಯೊಳಗೆ ಬೇರೆ ದೇಶದ ತನಿಖಾ ಸಂಸ್ಥೆಗಳೂ ಪ್ರವೇಶಿಸುವಂತಿಲ್ಲ. ಆದರೆ ಟರ್ಕಿ ಪೊಲೀಸರನ್ನು ಸ್ವತಃ ಸೌದಿ ಅರೇಬಿಯಾ ರಾಯಭಾರ ಕಚೇರಿಯೊಳಕ್ಕೆ ಹುಡುಕಾಟಕ್ಕೆ ಬರುವಂತೆ ಆಹ್ವಾನ ನೀಡಿದೆ. ಟರ್ಕಿಯ ತನಿಖಾ ತಂಡ ರಾಯಭಾರ ಕಚೇರಿ ಒಳಗೆ ತೆರಳಬೇಕಿದ್ದು, ಆ ನಂತರವೇ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ. ಆದರೆ ಅವರ ಕೊಲೆಯ ಸುತ್ತ ದಟ್ಟ ಅನುಮಾನಗಳು ಕವಿದುಕೊಂಡಿವೆ.

ಹೀಗೆ ನಡೆಯಿತೇ ಖಶೋಗಿ ಕೊಲೆ?

ಖಶೋಗಿ ನಾಪತ್ತೆಯಾದ ದಿನ ಎರಡು ವಿಮಾನಗಳು ಇಸ್ತಾಂಬುಲ್‌ಗೆ ಬಂದಿಳಿದಿದ್ದವು. ಈ ವಿಮಾನಗಳು ಗಲ್ಫ್‌ಸ್ಟ್ರೀಮ್‌ IV ಎಂಬ ಸೌದಿ ಸರಕಾರದ ಸ್ಕೈ ಪ್ರೈಮ್‌ ಏವಿಯೇಷನ್‌ ಜತೆ ಕೆಲಸ ಮಾಡುವ ಸಂಸ್ಥೆಗೆ ಸೇರಿದ್ದವು. ಮೊದಲ ವಿಮಾನ ಅಟಾಟರ್ಕ್‌ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್‌ 2ರ ಬೆಳಗ್ಗಿನ ಜಾವ 3.13 ಕ್ಕೆ ಇಳಿಯಿತು. ಇದರಲ್ಲಿ 9 ಜನರಿದ್ದರು. ನಿಲ್ದಾಣದಲ್ಲಿ ಇಳಿದವರೇ ನೇರ ರಾಯಭಾರ ಕಚೇರಿ ಪಕ್ಕದಲ್ಲೇ ಇದ್ದ ಹೋಟೇಲ್‌ಗೆ ನುಗ್ಗಿ ಮೂರು ದಿನಗಳ ಮಟ್ಟಿಗೆ ಕೊಠಡಿಗಳನ್ನು ಪಡೆದುಕೊಂಡರು.

ಇನ್ನೊಂದು ವಿಮಾನ ಅಕ್ಟೋಬರ್‌ 2ರಂದು ಸಂಜೆ 5.15ಕ್ಕೆ ಇಸ್ತಾಂಬುಲ್‌ನಲ್ಲಿ ಬಂದಿಳಿಯಿತು. ಇದರಲ್ಲಿ ಒಟ್ಟು ಆರು ಪ್ರಯಾಣಿಕರಿದ್ದರು. ಅವರು ನೇರವಾಗಿ ನಿಲ್ದಾಣದಿಂದ ರಾಯಭಾರ ಕಚೇರಿ ಒಳ ಹೊಕ್ಕರು. ಅಷ್ಟೊತ್ತಿಗಾಗಲೇ ಖಶೋಗಿ ರಾಯಭಾರ ಕಚೇರಿ ಒಳ ಹೊಕ್ಕಿದ್ದರು. ವಿಮಾನ ಬಂದವರು ಕೇವಲ 1 ಗಂಟೆ ರಾಯಭಾರ ಕಚೇರಿಯೊಳಗೆ ಕೆಲಸ ಮುಗಿಸಿ ವಾಪಸಾದರು. ಸರಿಯಾಗಿ 6.20ಕ್ಕೆ ವಿಮಾನ ಕೈರೋ ಮಾರ್ಗವಾಗಿ ರಿಯಾದ್‌ನತ್ತ ತೆರಳಿತು.

ಇದೇ ವೇಳೆ ಮೊದಲ ವಿಮಾನದಲ್ಲಿ ಬಂದಿದ್ದವರೂ ತಮಗೆ ಸೇರಿದ ವಸ್ತುಗಳನ್ನು ಹೋಟೆಲ್‌ನಿಂದ ಪ್ಯಾಕ್‌ ಮಾಡಿಕೊಂಡು ಅಂದೇ ಸಂಜೆ 10:46ಕ್ಕೆ ಬಂದಿದ್ದ ವಿಮಾನದಲ್ಲೇ ದುಬೈ ಮಾರ್ಗವಾಗಿ ರಿಯಾದ್‌ಗೆ ವಾಪಾಸಾದರು.

ಖಶೋಗಿ ಕೊಲೆಯಾದ ದಿನ ಸೌದಿ ಅಧಿಕಾರಿಗಳು ತಮ್ಮ ದೇಶಕ್ಕೆ ವಾಪಸ್ ತೆರಳಿದ ವಿಮಾನ

ಇದರ ಮಧ್ಯದಲ್ಲಿ ಖಶೋಗಿ ನಾಪತ್ತೆಯಾಗಿದ್ದರು. ರಾಯಭಾರ ಕಚೇರಿಯಲ್ಲಿರುವ ಭದ್ರತಾ ಕ್ಯಾಮೆರಾಗಳಲ್ಲಿ ಸರಿಯಾಗಿ 1 ಗಂಟೆ 14 ನಿಮಿಷಕ್ಕೆ ಖಶೋಗಿ ಕಚೇರಿ ಒಳ ಹೊಕ್ಕಿರುವುದು ದಾಖಲಾಗಿದೆ. ಖಶೋಗಿ ಒಳ ಹೋಗುವಾಗ ತಮ್ಮ ಹೆಂಡತಿ ಶೆಂಗಿಝ್‌ರನ್ನು ಹೊರಗಡೆ ಕಾಯುತ್ತಿರುವಂತೆ ಹೇಳಿ ಹೋಗಿದ್ದರು. ಆದರೆ ಖಶೋಗಿ ಪುನಃ ಹೊರಗೆ ಬರಲೇ ಇಲ್ಲ. ಬದಲಿಗೆ ಖಶೋಗಿ ಒಳಹೋದ ಎರಡೂವರೆ ಗಂಟೆಗಳ ಬಳಿಕ ಡಿಪ್ಲೊಮ್ಯಾಟಿಕ್‌ ಲೈಸನ್ಸ್‌ ಹೊತ್ತ ಆರು ಕಾರುಗಳು ರಾಯಭಾರ ಕಚೇರಿಯಿಂದ ಹೊರ ಬಿದ್ದಿದ್ದವು. ಇದರಲ್ಲಿ 15 ಸೌದಿ ಅಧಿಕಾರಿಗಳಿದ್ದರು, ಗೂಢಚರರು ಇದ್ದರು ಎಂದು ಟರ್ಕಿಯ ಸರಕಾರದ ಪರವಾಗಿರುವ ಪತ್ರಿಕೆ ‘ಸಬಾಹ್‌’ ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ 2 ವ್ಯಾನ್‌ ಗಾತ್ರದ ಟಿಂಟ್‌ ಗ್ಲಾಸ್‌ಗಳನ್ನು ಹೊಂದಿದ್ದ ಎರಡು ಬೆನ್ಜ್‌ ಕಾರುಗಳೂ ರಾಯಭಾರ ಕಚೇರಿಯಿಂದ ಹೊರ ಬಂದಿವೆ. ಅವು ನೇರವಾಗಿ 300 ಮೀಟರ್‌ ದೂರದಲ್ಲಿರುವ ಸೌದಿ ರಾಯಭಾರಿಯ ನಿವಾಸದತ್ತ ತೆರಳಿವೆ. ಗಮನಾರ್ಹ ಅಂಶವೆಂದರೆ ಅಂದೇ ರಾಯಭಾರಿ ನಿವಾಸದಲ್ಲಿ ಕೆಲಸಕ್ಕಿದ್ದ ಟರ್ಕಿಯ ಆಳುಗಳಿಗೆ ಇವತ್ತು ಕೆಲಸಕ್ಕೆ ಬರಬೇಡಿ ಎಂಬ ಸೂಚನೆ ನೀಡಲಾಗಿತ್ತು. ಹೀಗಾಗಿ ಖಶೋಗಿಯನ್ನು ಅದೇ ಬೆನ್ಜ್‌ ಕಾರುಗಳಲ್ಲಿ ಕೊಂಡೊಯ್ದಿರಬಹುದು ಎಂಬ ದಟ್ಟ ಅನುಮಾನಗಳು ಎದ್ದಿವೆ.

ಯಾರು ಈ ಖಶೋಗಿ?

ಜಮಲಾ ಖಶೋಗಿಯನ್ನು ಪ್ರಸಕ್ತ ಜಮಾನದ ಅತ್ಯಂತ ಪ್ರಭಾವಿ ಸೌದಿ ಮತ್ತು ಅರಬ್‌ ಪತ್ರಕರ್ತ ಹಾಗೂ ರಾಜಕೀಯ ವಿಮರ್ಶಕ ಎಂದು ಪರಿಗಣಿಸಲಾಗುತ್ತದೆ. 1958ರಲ್ಲಿ ಸೌದಿ ಅರೇಬಿಯಾದ ಮದೀನಾದಲ್ಲಿ ಜನಿಸಿದ ಖಶೋಗಿ ತಮ್ಮ 30 ವರ್ಷಗಳ ಪತ್ರಿಕೋದ್ಯಮದಲ್ಲಿ ಹಲವು ನೆನಪಿನಲ್ಲಿ ಉಳಿಯುವಂತಹ ವರದಿಗಳಿಗೆ ಪೆನ್ನು ಹಿಡಿದಿದ್ದರು.

ಆರಂಭದಲ್ಲಿ ಸೌದಿ ಮೂಲದ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದರು. ಈ ಸಂದರ್ಭಲ್ಲಿ ಅಫ್ಘಾನಿಸ್ತಾನ, ಅಲ್ಜೀರಿಯಾ, ಕುವೈಟ್‌ ಮತ್ತು ಮಧ್ಯ ಪೂರ್ವ ದೇಶಗಳ ಬಗ್ಗೆ ಅವರು ಮಾಡಿದ ವರದಿಗಳು ಚರ್ಚೆಗೆ ಗ್ರಾಸವಾಗಿದ್ದವು. ಒಸಮಾ ಬಿನ್‌ ಲಾಡೆನ್‌ರನ್ನು ಹಲವು ಸಂದರ್ಭದಲ್ಲಿ ಸಂದರ್ಶನ ನಡೆಸಿ ಖಶೋಗಿ ಎಲ್ಲರ ಹುಬ್ಬೇರಿಸಿದ್ದರು.

ಖಶೋಗಿ ನಾಪತ್ತೆ ಬೆನ್ನಲ್ಲೇ ಅವರ ಅಂಕಣದ ಜಾಗವನ್ನು ಖಾಲಿ ಬಿಟ್ಟು ಪತ್ರಿಕೆ ಪ್ರಕಟಿಸಿದ ವಾಷಿಂಗ್ಟನ್‌ ಪೋಸ್ಟ್‌

ಮುಂದೆ ಸೌದಿಯ ರಾಜರಲ್ಲಿ ಒಬ್ಬರಾಗಿದ್ದ ಟರ್ಕಿ ಬಿನ್‌ ಫೈಸಲ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು. ಮುಂದೆ ಮತ್ತೋರ್ವ ರಾಜ ಅಲ್ವಲೀದ್ ಬಿನ್‌ ತಲಾಲ್‌ ನಡೆಸುತ್ತಿದ್ದ ‘ಅಲ್‌ ಅರಬ್‌’ ವಾಹಿನಿಯ ಜನರಲ್‌ ಮ್ಯಾನೇಜರ್ ಆಗಿ ನೇಮಕಗೊಂಡರು. ಒಂದೇ ದಿನದಲ್ಲಿ ಫೆಬ್ರವರಿ 2015ರಂದು ಈ ಚಾನಲ್‌ ಕಣ್ಮುಚ್ಚಿತು.

ಇದಾದ ಬಳಿಕ ಖಶೋಗಿಗೂ ಸೌದಿ ರಾಜ ಬಿನ್‌ ಸಲ್ಮಾನ್‌ಗೂ ವೈರತ್ವ ಹುಟ್ಟಿಕೊಂಡಿತು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಖಶೋಗಿ ಮಾತನಾಡುತ್ತಿದ್ದರು. ಸೌದಿ ‘ಮುಸ್ಲಿಂ ಬ್ರದರ್‌ಹುಡ್‌’ಗೆ ಉಗ್ರರ ಪಟ್ಟ ಕಟ್ಟಿದ್ದನ್ನು ಅವರು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಹೀಗಿರುತ್ತಲೇ ಅದೊಂದು ದಿನ ಅವರು ದೇಶ ಬಿಟ್ಟು ಅಮೆರಿಕಾಕ್ಕೆ ಬಂದರು. ರಾಜಧಾನಿ ವಾಷಿಂಗ್ಟನ್‌ಗೆ ಬಂದವರಿಗೆ ‘ವಾಷಿಂಗ್ಟನ್‌ ಪೋಸ್ಟ್‌’ ಕೆಂಪು ಹಾಸು ಹಾಸಿ ಸ್ವಾಗತಿಸಿತು. ಅಲ್ಲಿ ಅವರು ಬರೆದ ಮೊದಲ ಲೇಖನಕ್ಕೆ ಮೆಕ್ಕಾ ಪ್ರಾಂತ್ಯದ ರಾಜ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿ ಟ್ಟೀಟ್‌ ಮಾಡಿದ್ದರು.

ವಾಷಿಂಗ್ಟನ್‌ ಪೋಸ್ಟ್‌ ಸೇರಿದ ಬಳಿಕ ಅವರಿಗೆ ‘ಒಪಿನಿಯನ್‌ ಎಡಿಟರ್‌’ ಹುದ್ದೆ ನೀಡಲಾಯಿತು. ಅಲ್ಲಿಂದ ಖಶೋಗಿ ಧ್ವನಿ ಮತ್ತಷ್ಟು ಬಲವಾಯಿತು. ಸೌದಿ ಅರೇಬಿಯಾದ ನೀತಿಗಳನ್ನು ಮತ್ತಷ್ಟು ಟೀಕಿಸಿ ಮುಕ್ತವಾಗಿ ಬರೆಯಲು ಆರಂಭಸಿದರು. ಪೆನ್ನಿನ ವೇಗ ಹೆಚ್ಚಾಗುತ್ತಿದ್ದಂತೆ ಖಶೋಗಿ ಮತ್ತು ದೊರೆಗಳ ವೈರತ್ವ ಮತ್ತಷ್ಟು ಹೆಚ್ಚಾಯಿತು.

ಪರಿಸ್ಥಿತಿ ಕಾವು ಪಡೆದಿದ್ದಾಗಲೇ ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್‌ ಸೆಂಗಿಝ್ ಜತೆಗಿನ ಮದುವೆಗೆ ಸಂಬಂಧಿಸಿದ ದಾಖಲೆಯನ್ನು ಪಡೆದುಕೊಳ್ಳಲು ರಾಯಭಾರ ಕಚೇರಿ ಒಳಗೆ ಹೊಕ್ಕರು ಖಶೋಗಿ. ಹೊರಗೆ ಪತ್ನಿ ತಮ್ಮ ಸಂಬಂಧಕ್ಕೆ ಮದುವೆಯ ಬಂಧ ಸಿಗಲಿದೆ ಎಂದು ಕಾಯುತ್ತಾ ಕುಳಿತಿದ್ದರು. ಆದರೆ ಒಳ ಹೋದ ಖಶೋಗಿ ವಾರ ಕಳೆದರೂ ಹೊರಗೆ ಬಂದಿಲ್ಲ. ಅವರ ಭವಿಷ್ಯ ಏನಾಗಿದೆ ಎಂಬುದು ಇಂದಿಗೂ ತಿಳಿದು ಬಂದಿಲ್ಲ. ತನ್ನ ಗಂಡನ ಬರುವಿಕೆಯ ನಿರೀಕ್ಷೆಯಲ್ಲಿ ಸೆಂಗಿಝ್‌ ಇನ್ನೂ ಕಾಯುತ್ತಲೇ ಇದ್ದಾರೆ. ಆದರೆ ಅವರು ಬರುವ ಸಾಧ್ಯತೆಗಳು ಕ್ಷೀಣಿಸುತ್ತಿವೆ. ಪತ್ರಿಕೋದ್ಯಮ ಓರ್ವ ಅಪರೂಪದ, ಪ್ರಖ್ಯಾತ ಪತ್ರಕರ್ತನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.