Home Media 2-0 ಶ್ರೀನಿ ರಾಜು, ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಮತ್ತು ಟಿವಿ9 ಮಾರಾಟದ ಹಿಂದಿನ ವಿವಾದಿತ...

ಶ್ರೀನಿ ರಾಜು, ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಮತ್ತು ಟಿವಿ9 ಮಾರಾಟದ ಹಿಂದಿನ ವಿವಾದಿತ ಕಥೆ!

SHARE

ಅದೊಂದು ಹಲವು ಚಾನಲ್‌ಗಳ ಸಮೂಹ. ಸುಮಾರು ಐದು ರಾಜ್ಯಗಳ ಜನರಲ್ಲಿ ಅಭಿಪ್ರಾಯ ರೂಪಿಸುವ ಶಕ್ತಿ ಈ ಸಂಸ್ಥೆಯ ಚಾನಲ್‌ಗಳಿಗಿತ್ತು. ಈ ಕಾರಣಕ್ಕೆ ಈ ಸಂಸ್ಥೆಯ ಮಾರಾಟದ ಸುದ್ದಿ ಬಂದಾಗ ಜನರು ಕುತೂಹಲಿಗಳಾಗುತ್ತಿದ್ದರು. ಆದರೆ ಹೆಚ್ಚು ಕಡಿಮೆ ಸುಮಾರು 4 ವರ್ಷಗಳಿಂದ ತೋಳ ಬಂತು ತೋಳ ಎಂಬಂತಾಗಿತ್ತು ‘ಟಿವಿ9’ ಬ್ರ್ಯಾಂಡ್‌ ಅಡಿಯಲ್ಲಿರುವ ವಾಹಿನಿಗಳ ಮಾರಾಟದ ಕಥೆ. ಹಲವು ರಾಜ್ಯದ ಜನರ ಮನೆ ಮತ್ತು ಮನದಲ್ಲಿ ಇಳಿದು ಹೋದ ಟಿವಿ9 ಕೊನೆಗೂ ಮಾರಾಟಗೊಂಡಿದೆ.

‘ಬಿಸಿನೆಸ್‌ ಲೈನ್‌’ಗೆ ಹೇಳಿಕೆ ನೀಡಿರುವ ಟಿವಿ9ನ ಅತಿ ದೊಡ್ಡ ಹೂಡಿಕೆದಾರ ಕಂಪನಿಗಳಾದ ‘ಐಲ್ಯಾಬ್‌ ವೆಂಚರ್ಸ್‌’ ಮತ್ತು ‘ಚಿಂತಲಪಾಟಿ ಹೋಲ್ಡಿಂಗ್ಸ್‌’ ಮುಖ್ಯಸ್ಥ ಶ್ರೀನಿವಾಸ ರಾಜು “ಇದು (ಷೇರು ಮಾರಾಟ) ಬಹುತೇಕ ಪೂರ್ಣಗೊಂಡಿದೆ” ಎಂದಿದ್ದಾರೆ. ಈ ಮೂಲಕ ಟಿವಿ9 ಸಮೂಹದ ಮಾರಾಟದ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಮತ್ತು ಈ ಮಾರಾಟದ ಹಿಂದೆ ಒಂದು ರೋಚಕ ಕಥೆಯಿದೆ.

14 ವರ್ಷಗಳ ಪಯಣ:

14 ವರ್ಷಗಳ ಹಿಂದೆ ಟಿವಿ9 ಎಂಬ ವಾಹಿನಿ 2004ರ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ಹುಟ್ಟಿಕೊಂಡಾಗ ಮುಂದೊಂದು ದಿನ ಈ ಪಾಟಿ ಬೆಳೆಯುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ದೇಶದ ಮೊತ್ತ ಮೊದಲ ಪ್ರಾದೇಶಿಕ ಭಾಷೆಯ 24/7 ಸುದ್ದಿ ವಾಹಿನಿಯಾಗಿ ಟಿವಿ9 ತೆಲುಗಿನಲ್ಲಿ ಆರಂಭವಾಗಿತ್ತು. ಅಲ್ಲಿಂದ ಅದು 2006ರ ಸುಮಾರಿಗೆ ಕರ್ನಾಟಕಕ್ಕೆ ಕಾಲಿಟ್ಟಿತ್ತು.

ತನಿಖಾ ಪತ್ರಿಕೋದ್ಯಮದ ಮೂಲಕ 24/7 ಸುದ್ದಿ ವಾಹಿನಿಗಳಿಗೆ ಹೊಸ ಅರ್ಥ ನೀಡಿದ ಟಿವಿ9 ಬಲುಬೇಗ ಜನಪ್ರಿಯತೆಯ ಉತ್ತುಂಗಕ್ಕೆ ಏರಿತ್ತು. ಪರಿಣಾಮ ಇವತ್ತಿಗೂ ಕನ್ನಡ ಮತ್ತು ತೆಲುಗಿನಲ್ಲಿ ವಾಹಿನಿ ನಂಬರ್‌ ವನ್‌ ಸ್ಥಾನದಿಂದ ಕೆಳಗಿಳಿದಿಲ್ಲ. ಗುಜರಾತಿ ಮತ್ತು ಮರಾಠಿಯಲ್ಲಿ ಉತ್ತಮ ರೇಟಿಂಗ್‌ ಕಾಯ್ದುಕೊಂಡು ಬಂದಿದೆ. ಟಿವಿ1 ಹೈದರಾಬಾದ್‌, ಟಿವಿ9 ಯುಎಸ್‌ಎ, ಇಂಗ್ಲೀಷ್‌ನಲ್ಲಿರುವ ನ್ಯೂಸ್‌ 9 ಕೂಡ ಉತ್ತಮ ಸ್ಥಿತಿಯಲ್ಲೇ ಇವೆ. ಬಹುಶಃ ಹೀಗೆ 7 ವಾಹಿನಿಗಳೂ ಸುಭದ್ರವಾಗಿರುವ ದೇಶದ ಏಕೈಕ ಸುದ್ದಿ ವಾಹಿನಿಗಳ ಸಮೂಹ ಟಿವಿ9.

ಈ ವಾಹಿನಿಗಳೆಲ್ಲವೂ ‘ಅಸೋಸಿಯೇಟ್‌ ಬ್ರಾಡ್‌ಕಾಸ್ಟ್‌ ಕಂಪನಿ ಲಿ. (ಎಬಿಸಿಎಲ್)‘ ಒಡೆತನಕ್ಕೆ ಸೇರಿವೆ. ಇದರಲ್ಲಿ ಹೆಚ್ಚಿನ ಪಾಲು ಹಣ ಹೂಡಿರುವವರು ಶ್ರೀನಿವಾಸ ರಾಜು ಅಲಿಯಾಸ್‌ ಶ್ರೀನಿ ರಾಜು. ಅವರ ಹೂಡಿಕೆಯಲ್ಲಿ ವಾಹಿನಿ ಸುಸ್ಥಿಯಲ್ಲಿತ್ತು. ಹೀಗಿದ್ದೂ ಇದರ ಮಾರಾಟಕ್ಕೆ ಅವರೇಕೆ ಮುಂದಾದರು?

ಆಂಧ್ರ ಇಭ್ಭಾಗ ಮತ್ತು ಆರಂಭವಾದ ಟಿವಿ9 ವಿವಾದಗಳು:

ಆಂಧ್ರ ಪ್ರದೇಶ 2014ರಲ್ಲಿ ಇಭ್ಭಾಗವಾಗಿ ಪ್ರತ್ಯೇಕ ತೆಲಂಗಾಣ ರಾಜ್ಯವಾಗಿ ಉದಯಿಸಿತು. ಶ್ರೀನಿ ರಾಜುಗೆ ಆಗ ಮೊದಲ ಸಮಸ್ಯೆ ಆರಂಭವಾಯಿತು. ಟಿವಿ9 ಮತ್ತು ಇನ್ನೊಂದು ಸುದ್ದಿ ವಾಹಿನಿ ‘ಎಬಿಎನ್‌ ಆಂಧ್ರ ಜ್ಯೋತಿ’ಗೆ ಕೇಬಲ್‌ ಆಪರೇಟರ್‌ಗಳು ತೆಲಂಗಾಣ ರಾಜ್ಯದಲ್ಲಿ ನಿರ್ಬಂಧ ವಿಧಿಸಿದರು. ತೆಲಂಗಾಣ ಉದಯದ ಪ್ರವರ್ತಕ ಕೆ. ಚಂದ್ರಶೇಖರ್ ರಾವ್‌ ವಾಹಿನಿಗಳ ವಿರುದ್ಧ ಬಹಿರಂಗ ಸಮರ ಸಾರಿದರು. ಮುಂದಿನ ದಿನಗಳಲ್ಲಿ ಟಿವಿ9 ಇನ್ನೂ ಸಂಕಷ್ಟಕ್ಕೆ ಸಿಲುಕಿತು. ಇತ್ತೀಚಿನ ದಿನಗಳಲ್ಲಂತೂ ಟಿವಿ9 ಹಲವು ವಿವಾದಗಳಿಗೆ ಗುರಿಯಾಯಿತು.

ತಮ್ಮ ತಾಯಿ ವಿರುದ್ಧ ಯುವ ನಟಿಯೊಬ್ಬರ ನೀಡಿದ್ದ ಹೇಳಿಕೆಯನ್ನು ಟಿವಿ9 ಪ್ರಸಾರ ಮಾಡಿದ್ದು ತೆಲುಗಿನ ಖ್ಯಾತ ನಟ, ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಆಕ್ರೋಶಕ್ಕೆ ಕಾರಣವಾಗಿತ್ತು. ವರದಿಗಳ ಪ್ರಕಾರ ಇದು ಯಾವ ಮಟ್ಟಕ್ಕೆ ಹೋಯಿತು ಎಂದರೆ, ಶ್ರೀನಿ ಒಂದು ಹಂತದಲ್ಲಿ ಪವನ್‌ ಕಲ್ಯಾಣ್‌ರನ್ನು ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯಕ್ಕೆ ಎಳೆದೊಯ್ಯಲು ಸಿದ್ಧತೆ ನಡೆಸಿದ್ದರು.

ಇದಕ್ಕೂ ಮುನ್ನ, ಚಾನಲ್‌ ತೆಲುಗು ದೇಶಂ ಪರವಾಗಿದೆ ಎಂಬ ಕಾರಣಕ್ಕ ವೈ. ಎಸ್‌. ಜಗನ್‌ ಮೋಹನ್‌ ರೆಡ್ಡಿಯೂ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ವಾಹಿನಿಗೆ ‘ಪೀತ ಪತ್ರಿಕೋದ್ಯಮ’ದ ಪಟ್ಟ ಕಟ್ಟಿದ್ದರು. ಹೀಗೆ ವಾಹಿನಿಯೊಳಗೆ ನಡೆಯುತ್ತಿದ್ದ ಒಂದೊಂದೂ ಬೆಳವಣಿಗೆಗಳೂ ಹೊರಗೆ ಸುಮಾರು 18 ಕಂಪನಿಗಳ ಒಡೆಯರಾಗಿರುವ, ಅಪ್ಪಟ ಉದ್ಯಮಿ ಶ್ರೀನಿ ರಾಜು ಅವರ ಇತರ ಉದ್ಯಮಗಳಿಗೆ ಹೊಡೆತ ನೀಡಲು ಆರಂಭಿಸಿತು.

ಅದರಲ್ಲೂ ಮುಖ್ಯವಾಗಿ ಅವರ ಹೂಡಿಕೆಯ ಬಿಸಿನೆಸ್‌ ಸಿಟಿ ‘ಶ್ರೀನಿ ಸಿಟಿ’ ಮತ್ತು ಚಿತ್ತೂರು ಜಿಲ್ಲೆಯಲ್ಲಿರುವ ‘ಪೀಪುಲ್‌ ಕ್ಯಾಪಿಟಲ್‌’ಗಳ ಭವಿಷ್ಯದ ಮೇಲೆ ಕರಾಳ ಛಾಯೆ ಆವರಿಸಲು ಆರಂಭಿಸಿತು. ಪರಿಣಾಮ, ‘ಅನಿವಾರ್ಯವಾಗಿ ಅವರು ಕಂಪನಿಯನ್ನು ತೊರೆಯುವ ನಿರ್ಧಾರಕ್ಕೆ ಬರಬೇಕಾಯಿತು,’ ಎಂಬುದಾಗಿ ಅವರ ಆಪ್ತರು ಹೇಳಿದ್ದನ್ನು ‘ಹ್ಯಾನ್ಸ್‌ ಇಂಡಿಯಾ’ ವರದಿ ಮಾಡಿದೆ.

ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಬೇಕು ಎಂದು ಶ್ರೀನಿ ರಾಜುಗೇನೋ ಅನಿಸಿತ್ತು. ಆದರೆ ವಾಹಿನಿಯನ್ನು ಕೊಂಡುಕೊಳ್ಳಲು ಯಾರೂ ಇರಲಿಲ್ಲ. ಹಲವು ಸುತ್ತಿನ ಮಾರಾಟ ಪ್ರಕ್ರಿಯೆಗಳ ನಂತರವೂ ವಾಹಿನಿ ಮಾರಾಟವಾಗಿರಲಿಲ್ಲ. ಇದೀಗ ಸುಮಾರು 450 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಖರೀದಿ ಮಾಡಲು ನಾಲ್ವರು ಮುಂದೆ ಬಂದಿದ್ದಾರೆ. ಕಂಪನಿಯ ಶೇಕಡಾ 80 ಷೇರುಗಳನ್ನು ಇವರು ಖರೀದಿಸಲಿದ್ದಾರೆ.

ಟಿವಿ9 ಸಂಸ್ಥಾಪಕ, ಅಧ್ಯಕ್ಷ ಮತ್ತು ಹಾಲಿ ಸಿಇಒ ರವಿ ಪ್ರಕಾಶ್‌.

ಪ್ರಮುಖವಾಗಿ ಹೈದರಾಬಾದ್‌ ಮೂಲದ ಪಿ. ವಿ. ಕೃಷ್ಣಾ ರೆಡ್ಡಿ ಒಡೆತನದ ‘ಮೆಗಾ ಇಂಜಿನಿಯರಿಂಗ್‌ ಆಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ.’ ಹಾಗೂ ಡಾ. ಜುಪಲ್ಲಿ ರಾಮೇಶ್ವರ್‌ ರಾವ್‌ ಒಡೆತನದ ಸಿಮೆಂಟ್‌ ಮತ್ತು ರಿಯಲ್‌ ಎಸ್ಟೇಟ್‌ ಕಂಪನಿ ‘ಮೈ ಹೋಮ್‌ ಗ್ರೂಪ್‌’ ಭಾರತದ ಕಡೆಯಿಂದ ಷೇರುಗಳನ್ನು ಖರೀದಿ ಮಾಡಲಿದೆ. ಇನ್ನಿಬ್ಬರು ವಿದೇಶಿ ಹೂಡಿಕೆದಾರರು ಹಣ ಚೆಲ್ಲಲಿದ್ದಾರೆ. ಇದರ ಜತೆಗೆ ಕಂಪನಿಯ 100 ಜನ ಸಿಬ್ಬಂದಿಗಳಿಗೂ ಷೇರು ನೀಡಲಾಗುತ್ತದೆ ಎಂಬುದಾಗಿ ಬಿಸಿನೆಸ್‌ ಲೈನ್‌ ವರದಿ ಮಾಡಿದೆ.

ವಿಶೇಷ ಅಂದರೆ, ತಳಮಟ್ಟಕ್ಕೆ ಬಂದಾಗ ಉದ್ಯೋಗಿಗಳಿಗೆ ನೀಡಿದ ಷೇರಿನ ವಿಚಾರ ಎಲ್ಲಿಯೂ ಪ್ರಸ್ತಾಪವಾದಂತೆ ಕಾಣಿಸುತ್ತಿಲ್ಲ. ‘ಸಮಾಚಾರ’ಕ್ಕೆ ವಾಹಿನಿ ಮೂಲಗಳು ನೀಡಿದ ಮಾಹಿತಿ ಪ್ರಕಾರ, “ಕಳೆದ ತಿಂಗಳು ಹತ್ತು ವರ್ಷ ಪೂರೈಸಿದ ಸಿಬ್ಬಂದಿಗಳಿಗೆ 2.5 ಲಕ್ಷ ರೂಪಾಯಿ ಸಂದಾಯವಾಗಿದೆ. ಇದು ಯಾಕೆ ಎಂಬ ಮಾಹಿತಿಯನ್ನೇ ಆಡಳಿತ ಮಂಡಳಿ ಸ್ಪಷ್ಟವಾಗಿ ನೀಡಿಲ್ಲ.’’

ಮಾರಾಟದ ನಂತರವೂ ಸಂಸ್ಥಾಪಕ, ಅಧ್ಯಕ್ಷ ಮತ್ತು ಹಾಲಿ ಸಿಇಒ ರವಿ ಪ್ರಕಾಶ್‌ ಕಂಪನಿಯನ್ನು ಮುನ್ನಡೆಸಲಿದ್ದಾರೆ. “ಟಿವಿ9ನ ಸದ್ಯದ ಮ್ಯಾನೇಜ್‌ಮೆಂಟ್‌ನಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಮತ್ತು ನೆಟ್ವರ್ಕ್‌ನ ಬೆಳವಣಿಗೆ ಮತ್ತು ವಿಸ್ತರಣೆಗೆ ಯಾವುದೇ ಅಡ್ಡಿ ಇರುವುದಿಲ್ಲ,” ಎಂದು ಎಬಿಸಿಎಲ್‌ ನಿರ್ದೇಶಕ ಕ್ಲಿಫೋರ್ಡ್ ಪೆರೇರಾ ಹೇಳಿದ್ದಾರೆ.

ಹೀಗೊಂದು ವಿಚಿತ್ರ ಸನ್ನಿವೇಶದಲ್ಲಿ ಶ್ರೀನಿ ರಾಜು 14 ವರ್ಷಗಳ ನಂತರ ಟಿವಿ9ನಲ್ಲಿ ಹೂಡಿದ್ದ ಹಣವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅವರು ಹಣವನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾರಣವಾಗಿದ್ದು ಬೇರೇನೂ ಅಲ್ಲ ಅವರ ಉದ್ಯಮ. ಮತ್ತು ಅದನ್ನು ಇವತ್ತು ಖರೀದಿಸಲು ಹೊರಟಿರುವವರೂ ಉದ್ಯಮಿಗಳು. ಅವರ ಉದ್ದೇಶಗಳೇನು? ಅವು ಸ್ಪಷ್ಟವಾಗಿವೆ. ಇಷ್ಟೇ ವಾಸ್ತವ!