Home Inside Story ಪೊಲೀಸ್ ಇಲಾಖೆ ಆಡಿಟ್ ಚೆಕ್ 3: ಆಯುಧ, ಮದ್ದುಗುಂಡುಗಳೇ ಇಲ್ಲದ ಖಾಲಿ ಬಂದೂಕು; ಪೊಲೀಸರಿಂದ ಲಾ...

ಪೊಲೀಸ್ ಇಲಾಖೆ ಆಡಿಟ್ ಚೆಕ್ 3: ಆಯುಧ, ಮದ್ದುಗುಂಡುಗಳೇ ಇಲ್ಲದ ಖಾಲಿ ಬಂದೂಕು; ಪೊಲೀಸರಿಂದ ಲಾ & ಆರ್ಡರ್ ರಕ್ಷಣೆ!

SHARE

ಗಲಭೆ-ದೊಂಬಿ ನಿಯಂತ್ರಣ, ಭದ್ರತೆ, ಅಪರಾಧಿಗಳೊಡನೆ ಸೆಣಸಬೇಕಾದದಂತಹ ವಿಷಮ ಪರಿಸ್ಥಿತಿಗಳಲ್ಲಿ ಬಳಸಲು ಪೊಲೀಸರು ಆಯುಧಗಳನ್ನು ಬಳಸುವುದು ಸರ್ವೇಸಾಮಾನ್ಯ. ಆಯುಧಗಳು ಮತ್ತು ಪೊಲೀಸ್ ವ್ಯವಸ್ಥೆ ಎರಡೂ ಒಂದರೊಡನೊಂದು ಬೆಸೆದುಕೊಂಡಿರುವ ರಕ್ಷಣಾ ವ್ಯವಸ್ಥೆ ನಮ್ಮದು.

ಈ ಆಯುಧಗಳನ್ನು ಭಾರತ ಸರ್ಕಾರ ತನ್ನ ಸಶಸ್ತ್ರ ಆಯುಧಾಗಾರ ಕಾರ್ಖಾನೆಗಳಿಂದ ಪೊಲೀಸ್ ಠಾಣೆಗಳಿಗೆ ಆದ್ಯತೆ-ಅವಶ್ಯಕತೆಯ ಮೇಲೆ ಕಾಲಕಾಲಕ್ಕೆ ಪೂರೈಸುತ್ತದೆ. ಹೀಗೆ ಲಭ್ಯವಾಗುವ ಆಯುಧಗಳು ಪೊಲೀಸರ ಕಾರ್ಯ ನಿರ್ವಹಣೆಗೆ ನೆರವಾಗುತ್ತವೆ. ಈ ಆಯುಧಗಳ ಸಂಗ್ರಹಣೆಯ ಪರಿಸ್ಥಿತಿಯು “ಮೆಗಾಸಿಟಿ ಪೊಲೀಸ್ ಫೋರ್ಸ್’ ಯೋಜನೆಯ ಕೆಳಗೆ ಕರ್ನಾಟಕ ರಾಜ್ಯದ ಪೊಲೀಸ್ ಸ್ಟೇಷನ್ ಗಳಲ್ಲಿ ಹೇಗಿದೆಯೆಂಬ ತಪಾಸಣೆ ನಡೆಸಿದ ಸಿಎಜಿ ಲೆಕ್ಕಾಧಿಕಾರಿಗಳು ಇದೀಗ ಹೊಸ ಅಂಕಿ-ಅಂಶಗಳನ್ನು ಹೊರಹಾಕಿದ್ದಾರೆ. ಸ್ಟೇಷನ್ ಗಳಲ್ಲಿ ಅವಶ್ಯಕತೆಗಿಂತ ತೀರಾ ಕಡಿಮೆ ಸಂಖ್ಯೆಯಲ್ಲಿರುವ ಆಯುಧಗಳ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ.

ಅತ್ಯಾಧುನಿಕ ಆಯುಧಗಳಿಗೆ ಯೋಜನೆಯ ಆದ್ಯತೆ – ಗಮನವೇ ಕೊಡದ ಇಲಾಖೆ

ರಾಜ್ಯದ ಒಟ್ಟು ಪೊಲೀಸ್ ಠಾಣೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಬಳಸಲು 3,288 ಎಕೆ-47 ಸುಸಜ್ಜಿತ ರೈಫಲ್ ಗಳಿರಬೇಕು, ಆದರೆ ಇರುವುದು 2,088 ರೈಫಲ್ ಗಳು ಮಾತ್ರ, ಇನ್ನೂ 1,200 ಎಕೆ-47 ರೈಫಲ್ ಗಳ ಕೊರತೆಯಿದೆ. 5.56 ಎಂ.ಎಂ ರೈಫಲ್ ಗಳು 4,109ರಷ್ಟು ಅವಶ್ಯಕತೆಯಿದ್ದು, ಇರುವುದು 1,243 ರೈಫಲ್ ಗಳು ಮಾತ್ರ. 12 ಬೋರ್ ಆಕ್ಷನ್ ಗನ್ ಗಳು 4,896ರಷ್ಟು ಇರಬೇಕಿರುವುದು ಕೇವಲ 3,581 ಗನ್ ಗಳು ಮಾತ್ರ. 9ಎಂ.ಎಂ ಆಟೋಮ್ಯಾಟಿಕ್ ಪಿಸ್ತೂಲ್ ಗಳು 15,755ರಷ್ಟು ಇರಬೇಕಿರುವುದು 11,584ರಷ್ಟು ಮಾತ್ರ ಇವೆ. ಟಿಯರ್ ಗ್ಯಾಸ್ ಗನ್ ಗಳು 2,682ರಷ್ಟು ಇರಬೇಕಿರುವುದು 1,839 ಮಾತ್ರ ಇವೆ.

ಇವೆಲ್ಲವನ್ನೂ ಖರೀದಿಸಲು ಎಂ.ಸಿ.ಎಫ್ ಯೋಜನೆಯ ಕೆಳಗೆ ಅವಕಾಶವಿದ್ದರೂ, ಹಣಕಾಸಿನ ಕೊರತೆಯಿರದಿದ್ದರೂ ಆಯುಧಗಳ ಖರೀದಿ ಮಾತ್ರ ಇನ್ನೂ ನಡೆದಿಲ್ಲ. ಇಲಾಖಾ ಆಧುನೀಕರಣಕ್ಕೆಂದು ಇರುವ ಎಂ.ಪಿ.ಎಫ್ ಯೋಜನೆಯ ಅನುದಾನದ ಬಳಕೆ ನಡೆದೇ ಇಲ್ಲ. ಭಯೋತ್ಪಾದನೆ, ಒತ್ತೆಯಾಳು ಸಂದರ್ಭಗಳಲ್ಲಿ ಬಳಕೆಯಾಗುವ ‘ಲೇಸರ್ ಸೈಟ್ ಡಿವೈಸ್, ‘ಕಾರ್ನರ್ ಶಾರ್ಟ್ ವಿಶನ್ ಸೈಟ್, ‘ಜಂಪ್ ಗ್ರೇನೇಡ್ಸ್’ ನಂತಹ ಅತ್ಯಾಧುನಿಕ ಆಯುಧಗಳತ್ತ ಗಮನವೇ ಕೊಡದ ಪೊಲೀಸ್ ಇಲಾಖೆ ಲಭ್ಯವಿದ್ದ ಅನುದಾನದಲ್ಲಿ ಒಂದೇ ಬಗೆಯ ಆಯುಧಗಳನ್ನು ಖರೀದಿಸಿ ಬಿಲ್ಲು ತೋರಿಸಿದೆ. ಅಲ್ಲಿಗೆ ಪೊಲೀಸ್ ಇಲಾಖೆಯ ಆಧುನೀಕರಣ ಮತ್ತು ಆಯುಧಗಳ ಉನ್ನತೀಕರಣಕ್ಕೆ ಇಂಬು ಕೊಟ್ಟಿದ್ದ ಎಂ.ಪಿ.ಎಫ್ ಯೋಜನೆಯ ಮೂಲ ಉದ್ದೇಶಕ್ಕೇ ಎಳ್ಳುನೀರು ಬಿಡಲಾಗಿದೆ.

ಸಶಸ್ತ್ರ ಮೀಸಲುಪಡೆಗಳ ಔಟ್ ಡೇಟೆಡ್ ಆಯುಧಗಳು

ಗಲಭೆ-ದೊಂಬಿ ಇನ್ನಿತ್ಯಾದಿ ತುರ್ತು ಸಂದರ್ಭಗಳಲ್ಲಿ ಕಾರ್ಯಪ್ರವೃತ್ತವಾಗುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಅವಶ್ಯಕತೆ ಬಿದ್ದಾಗ, ಪರಿಸ್ಥಿತಿ ಕೈ ಮೀರಿದಾಗ ಜನರನ್ನು ತಹಬಂದಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸುವ, ಪ್ರಾಣಹಾನಿಯಾಗದಂತೆ ಉದ್ರಿಕ್ತರಿಗೆ ಗುಂಡು ಹೊಡೆಯುವ ಮೂಲಕ ಪರಿಸ್ಥಿತಿಯನ್ನು ತಹಬಂದಿಗೆ ತರುತ್ತಾರೆ. ಇವರಿಗೆ ಆಯುಧಗಳು ಅತ್ಯವಶ್ಯ ಮತ್ತು ಅನಿವಾರ್ಯವೂ ಸಹ. ಇಂತಹ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಶಶ್ತ್ರ ಮೀಸಲು ಪಡೆಗಳು ಬಳಸುತ್ತಿರುವ ಆಯುಧಗಳು ಒಂದೋ ಓಬೀರಾಯನ ಕಾಲದ ಔಟ್ ಡೇಟೆಡ್ ಆಯುಧಗಳು, ಅಥವ ಕೆಟ್ಟು ಕುಳಿತ ಪಳೆಯುಳಿಕೆಯಂತಹ ಬಂದೂಕುಗಳು. ಇದನ್ನು ಇಷ್ಟು ವರ್ಷಗಳ ಬಳಕೆಯ ನಂತರ ಅನುಪಯುಕ್ತವೆಂದು ತಿರಸ್ಕರಿಸಿ ಹೊಸ ಆಯುಧಗಳನ್ನು ಬಳಸಬೇಕೆಂಬುದು ನಿಯಮ.

ಆದರೆ ಹೊಸ ಆಯುಧಗಳ ಖರೀದಿಗೆ ಎಂ.ಪಿ.ಎಫ್ ಯೋಜನೆಯಡಿ ಕೊಟ್ಟ ಹಣವನ್ನು ಬಳಸದೆ, ಹಳೆಯ ಕಾಲದ ಬಳಕೆಗೆ ಯೋಗ್ಯವಲ್ಲದ ಆಯುಧಗಳನ್ನೇ ಕರ್ನಾಟಕ ಪೊಲೀಸ್ ಸಶಸ್ತ್ರ ಮೀಸಲುಪಡೆ ಬಳಸುತ್ತಿರುವುದು, ಅವರ ಜೀವಕ್ಕೇ ಮುಳುವಾಗುವ ಸಾಧ್ಯತೆಯಿದೆಯೆಂದು ಸಿಎಜಿ ಲೆಕ್ಕಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಳೆಯ ಆಯುಧಗಳನ್ನು ವಿಲೇವಾರಿ ಮಾಡದೇ ಇನ್ನೂ ಏತಕ್ಕೆ ಬಳಸಲಾಗುತ್ತಿದೆಯೆಂಬ ಸಿಎಜಿ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರವು.. ಈ ಓಬೀರಾಯನ ಕಾಲದ ಆಯುಧಗಳನ್ನು ವಿಲೇವಾರಿ ಮಾಡುವ ವಿಧಾನವೇನೆಂದು ತಮಗೆ ತಿಳಿದಿಲ್ಲ, ಇದಕ್ಕಾಗಿ ಕೇಂದ್ರ ಸಿ.ಆರ್.ಪಿ.ಎಫ್ ಪೊಲೀಸ್ ವಿಭಾಗದ ಸಲಹೆ ಕೇಳಿದ್ದೇವೆಂಬ ಬಾಲಿಶ ಉತ್ತರ ಕೊಟ್ಟಿದೆ.

ಉನ್ನತಾಧಿಕಾರಿಗಳ ಕಚೇರಿಗಳ ಬಂದೂಕುಗಳಿಗೆ ಗುಂಡೇ ಇಲ್ಲ!

ಇದರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಲಾದ ಮೈಸೂರು, ಬೆಳಗಾವಿ, ಧಾರವಾಡ, ಹಾಸನ, ಮಂಗಳೂರು, ಹುಬ್ಬಳ್ಳಿಗಳ 16 ಪೊಲೀಸ್ ಉನ್ನತಾಧಿಖಾರಿಗಳ ಕಚೇರಿಗಳಲ್ಲಿರುವ ಪಿಸ್ತೂಲು-ಬಂದೂಕುಗಳಿಗೆ ಅಗತ್ಯ ಸಂದರ್ಭಗಳಲ್ಲಿ ತುಂಬಲು ಗುಂಡುಗಳೇ ಇಲ್ಲದಿರುವ ಪರಿಸ್ಥಿತಿಯಿದೆ. ತುರ್ತು ಸಂದರ್ಭಗಳಲ್ಲಿ ಈ ಆಯುಧಗಳನ್ನು ಬಳಸಬೇಕಾದ ಸಂದರ್ಭ ಬಂದಲ್ಲಿ ಗುಂಡುಗಳಿಲ್ಲದ ಈ ಆಯುಧಗಳನ್ನು ಬಳಸಲೂ ಸಾಧ್ಯವಿಲ್ಲ. ಪೊಲೀಸ್ ಉನ್ನತಾಧಿಕಾರಿಗಳ ಕಚೇರಿಯಲ್ಲೇ ಇಂತಹ ಕೆಟ್ಟ ಪರಿಸ್ಥಿತಿಯಿದ್ದರೆ ಉಳಿದ ಗ್ರಾಮೀಣಭಾಗದ ಪೊಲೀಸ್ ಠಾಣೆಗಳ ಸ್ಥಿತಿ ಇನ್ನೆಷ್ಟು ಕೆಟ್ಟದಿರಬೇಕು ಎಂಬುದು ಗಾಬರಿಯಾಗಲು ತಕ್ಕುನಾದ ವಿಷಯವೇ ಸರಿ.

ಇದಿಷ್ಟು ಆಯುಧಗಳ ಕೊರತೆಯ ವಿಷಯವಾದರೆ, ಲಭ್ಯವಿರುವ ಆಯುಧಗಳ ಕ್ಲೀನಿಂಗ್ & ಮೈಂಟೆನೆನ್ಸ್ ವಿಚಾರದಲ್ಲಿ ಪೊಲೀಸ್ ಠಾಣೆಗಳ ಸಿಬ್ಬಂದಿಗಿರುವ ನಿರ್ಲಕ್ಷ್ಯವನ್ನು ಸಿಎಜಿ ಆಡಿಟ್ ವರದಿಎತ್ತಿ ತೋರಿಸಿದೆ. ಟೆಸ್ಟ್ ಚೆಕ್ ಮಾಡಲಾದ 60 ಪೊಲೀಸ್ ಠಾಣೆಗಳಲ್ಲಿ 21 ಠಾಣೆಗಳಲ್ಲಿ ಕಾಲಕಾಲಕ್ಕೆ ಪೊಲೀಸ್ ಸಿಬ್ಬಂದಿ ಬಳಸುವ ಪಿಸ್ತೂಲು- ಬಂದೂಕುಗಳನ್ನು ಶುಚಿಗೊಳಿಸುವ ಕೆಲಸವೂ ನಡೆಯುತ್ತಿಲ್ಲ.

ಇಂತಹ ಕಳಪೆ ಆಯುಧ ವ್ಯವಸ್ಥೆಯಿಟ್ಟುಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಲು ಹೊರಟು ನಿಂತಿರುವ ಕರ್ನಾಟಕ ಪೊಲೀಸ್ ಇಲಾಖೆಯನ್ನು ನಂಬಿಕೊಂಡು ಜನರು ಹೇಗೆ ನೆಮ್ಮದಿಯಿಂದಿರಬೇಕೆಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಜೊತೆಗೆ ತನ್ನ ಪ್ರಮುಖ ಇಲಾಖೆಯೊಂದಕ್ಕೆ ಬೇಕಾದ ಮೂಲಭೂತ ಆಯುಧಗಳ ಪೂರೈಕೆಯತ್ತ ಕುರುಡುಗಣ್ಣಾಗಿರುವ ಸರ್ಕಾರದ ಬೇಜವಾಬ್ದಾರಿತನವೂ ಇಲ್ಲಿ ಪ್ರಶ್ನಾರ್ಹವಾಗಿದೆ.

Also Read: ಪೊಲೀಸ್‌ ಇಲಾಖೆ ಆಡಿಟ್ ಚೆಕ್- 1: ಇಲಾಖೆಯ ಆಧುನೀಕರಣ ಯೋಜನೆಯಲ್ಲೇ ಹೆಗ್ಗಣಗಳು…

Also Read: ಪೊಲೀಸ್ ಇಲಾಖೆ ಆಡಿಟ್ ಚೆಕ್- 2: ಹೊರಗೆ ಥಳಕು, ಠಾಣೆಗಳಲ್ಲಿ ಹುಳುಕು; ಮಕಾಡೆ ಮಲಗಿದ ಎಂಪಿಎಫ್ ಯೋಜನೆ!