Home Exclusive ಪೊಲೀಸ್‌ ಇಲಾಖೆ ಆಡಿಟ್ ಚೆಕ್- 1: ಇಲಾಖೆಯ ಆಧುನೀಕರಣ ಯೋಜನೆಯಲ್ಲೇ ಹೆಗ್ಗಣಗಳು…

ಪೊಲೀಸ್‌ ಇಲಾಖೆ ಆಡಿಟ್ ಚೆಕ್- 1: ಇಲಾಖೆಯ ಆಧುನೀಕರಣ ಯೋಜನೆಯಲ್ಲೇ ಹೆಗ್ಗಣಗಳು…

SHARE

ಜನರ ಸುರಕ್ಷತೆ ಮತ್ತು ಅಪರಾಧ ತನಿಖೆ ಮತ್ತು ನಿಯಂತ್ರಣದ ಹೊಣೆ ಹೊತ್ತಿರುವುದು ಪೊಲೀಸ್ ಇಲಾಖೆ. ಇದನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ‘ಮಾಡ್ರನೈಸೇಷನ್ ಆಫ್ ಪೊಲೀಸ್ ಫೋರ್ಸ್’ (ಎಂಪಿಎಫ್) ಎಂಬ ಯೋಜನೆಯೊಂದನ್ನು 1969ರಿಂದ ಜಾರಿಯಲ್ಲಿಟ್ಟಿದೆ. ಗೃಹ ಇಲಾಖೆಯ ಕೆಳಗೆ ಬರುವ ಪೊಲೀಸ್ ವ್ಯವಸ್ಥೆಯನ್ನು ವಿದೇಶಗಳಲ್ಲಿರುವಂತೆ ಮೇಲ್ಮಟ್ಟಕ್ಕೇರಿಸುವುದು, ಸಂವಹನ ವ್ಯವಸ್ಥೆಯ ಅಭಿವೃದ್ಧಿ, ಮೂಲಸೌಕರ್ಯಗಳ ಉನ್ನತೀಕರಣ, ಆಯುಧಗಳ ಖರೀದಿ ಮತ್ತು ತರಬೇತಿಗಳ ಮೂಲಕ ಇನ್ನಷ್ಟು ಸದೃಢಗೊಳಿಸುವುದು ಯೋಜನೆಯ ಉದ್ದೇಶ.

ರಾಜ್ಯ ಸರ್ಕಾರಗಳು ವಿಶೇಷ ಸಂದರ್ಭಗಳಲ್ಲಿ ಸೈನ್ಯ ಮತ್ತು ಕೇಂದ್ರ ಸಶಸ್ತ್ರ ದಳದವರನ್ನು ನೆಚ್ಚಿಕೊಳ್ಳಬೇಕಾದ ಅಗತ್ಯವನ್ನು ತಡೆಗಟ್ಟಿ, ಭದ್ರತೆಯ ವಿಷಯದಲ್ಲಿ ರಾಜ್ಯಗಳೇ ಈ ಯೋಜನೆಯ ಕೆಳಗೆ ಸ್ವಾವಲಂಬನೆ ಪಡೆಯಬೇಕೆಂಬುದು ಈ ಯೋಜನೆಯ ಸಾರ. ಇದಕ್ಕೆಂದು ಎಂಪಿಎಫ್ ಯೋಜನೆಯ ಕೆಳಗೆ ‘ಮೆಗಾಸಿಟಿ ಪೊಲೀಸಿಂಗ್’ ಎಂಬ ಉಪಯೋಜನೆಯನ್ನು 2005ರಲ್ಲಿ ಜಾರಿಗೊಳಿಸಲಾಗಿತ್ತು. ಈ ಉಪಯೋಜನೆಯ ಕೆಳಗೆ ಕೇಂದ್ರ ಸರ್ಕಾರವು ಕೊಡುವ ಅನುದಾನವನ್ನು ಬಳಸಿ ಪೊಲೀಸ್ ಇಲಾಖೆಯನ್ನು ಸದೃಢಗೊಳಿಸಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ‘ಸ್ಟೇಟ್ ಲೆವೆಲ್ ಎಂಪವರ್ ಕಮಿಟಿ’ಯನ್ನು ಸಹ ರಚಿಸಲಾಗಿತ್ತು. ಆಗಿನಿಂದ ಇಲ್ಲಿಯವರೆಗೂ ಈ ಯೋಜನೆ ಮುಂದುವರೆಯುತ್ತಿದೆ.

ಈ ನಡುವೆ ಈ ಯೋಜನೆಯ ಕೆಳಗೆ ನೀಡಲಾದ ಅನುದಾನದ ಸಮರ್ಪಕ ಬಳಕೆ ಆಗುತ್ತಿದೆಯೇ ಇಲ್ಲವೆ ಎಂಬುದನ್ನು 2012ರಿಂದ 2017ರವರೆಗಿನ ಅವಧಿಯ ಲೆಕ್ಕಪತ್ರಗಳನ್ನು ತಪಾಸಣೆಗೊಳಪಡಿಸಿದ ಕೇಂದ್ರ ಕಂಟ್ರೋಲರ್ ಆಫ್ ಆಡಿಟರ್ ಜೆನರಲ್ ಲೆಕ್ಕಾಧಿಕಾರಿಗಳು ಸದ್ಯ ವರದಿಯನ್ನು ಬಹಿರಂಗಪಡಿಸಿದ್ದಾರೆ. ಈ ವರದಿಯಲ್ಲಿ ಕಂಡುಬಂದಿರುವ ಯೋಜನಾ ಅನುಷ್ಠಾನದಲ್ಲಿನ ಲೋಪದೋಷಗಳು, ಹಣ ದುರ್ಬಳಕೆಯ ವರದಿಗಳು ಆಘಾತಕಾರಿಯಾಗಿವೆ.

ಇರಬೇಕಾದಷ್ಟು ಪೊಲೀಸರಿಲ್ಲ; ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ:

2017ರಲ್ಲಿ ನಡೆದ ಲೆಕ್ಕಪತ್ರ ಪರಿಶೋಧನೆಯ ಆರಂಭಿಕ ತಪಾಸಣೆಯು ಹೇಳುವಂತೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ ಸಂಖ್ಯೆಯೇ ಅತ್ಯಂತ ಕಡಿಮೆಯಿದೆ. ಯಾವುದೇ ಊರಿನ 1 ಲಕ್ಷ ಜನಸಂಖ್ಯೆಗೆ ಕನಿಷ್ಠ ಪಕ್ಷ 183 ಮಂದಿ ಪೊಲೀಸ್ ಸಿಬ್ಬಂದಿಯಿರಬೇಕು. ಆದರೆ, ಕರ್ನಾಟಕದಲ್ಲಿ ಲಕ್ಷ ಮಂದಿಗೆ ಲಭ್ಯವಿರುವ ಪೊಲೀಸರ ಸಂಖ್ಯೆ ಕೇವಲ 145.

ಕೇಂದ್ರ ಗೃಹ ಸಚಿವಾಲಯದ ನಿಯಮಾವಳಿಯಂತೆ ರಾಜ್ಯದ ಒಟ್ಟು ಪೊಲೀಸ್ ಸಿಬ್ಬಂದಿಗಳಲ್ಲಿ 33 ಪ್ರತಿಶತ ಮಹಿಳಾ ಸಿಬ್ಬಂದಿಯಿರಬೇಕು, ಕರ್ನಾಟಕದಲ್ಲಿ ಕೇವಲ 5 ಪ್ರತಿಶತದಷ್ಟು ಮಾತ್ರ ಮಹಿಳಾ ಪೊಲೀಸ್ ಸಿಬ್ಬಂದಿಯಿರುವುದು ಈ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲವೇ ಇಲ್ಲ ಇನ್ನುವಷ್ಟಿದೆ ಎಂಬುದನ್ನು ಎತ್ತಿ ತೋರಿಸಿದೆ. ಕೇಂದ್ರ ಗೃಹಸಚಿವಾಲಯವೇ 33 ಪ್ರತಿಶತ ಮಹಿಳಾ ಪೊಲೀಸರ ನೇಮಕಾತಿಯನ್ನು ಒತ್ತಿ ಹೇಳಿದರೂ, ರಾಜ್ಯ ಸರ್ಕಾರದ ಕಾನೂನು ನೀತಿಯೊಂದು ಪೊಲೀಸ್ ಸಿಬ್ಬಂದಿ ನೇಮಕದಲ್ಲಿ ಕೇವಲ 20 ಪ್ರತಿಶತದಷ್ಟು ಮಾತ್ರ ಮಹಿಳಾ ಸಿಬ್ಬಂದಿ ನೇಮಕಕ್ಕೆ ಅನುವು ಮಾಡಿಕೊಟ್ಟಿದೆ. ಸರ್ಕಾರವೇ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನಿರಾಕರಿಸಿದಂತಾಗಿದೆ. ಪಕ್ಕದ ತಮಿಳುನಾಡಿನಲ್ಲಿ 12%, ಮಹಾರಾಷ್ಟ್ರದಲ್ಲಿ 11%, ಕೇರಳದಲ್ಲಿ 6% ಮಹಿಳಾ ಪ್ರಾನಿನಿಧ್ಯವಿದ್ದರೂ, ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ 5% ಮಾತ್ರ ಮಹಿಳಾ ಪ್ರಾತಿನಿಧ್ಯವಿರುವುದು ರಾಜ್ಯಸರ್ಕಾರವೇ ಹೇಳಿದ 20% ಮಹಿಳಾ ಪ್ರಾತಿನಿಧ್ಯತೆಯನ್ನು ತಾನೇ ನಿರಾಕರಿಸಿದಂತಿದೆ.

ಕರ್ನಾಟಕದಲ್ಲಿ ‘ಓಬವ್ವ ಪಡೆ’ ಹೆಸರಿನಲ್ಲಿ ಮಹಿಳಾ ಪೊಲೀಸ್‌ ತಂಡವನ್ನು ಕಟ್ಟುವ ಪ್ರಯತ್ನ ನಡೆದಿತ್ತಾದರೂ, ಇವತ್ತಿಗೆ ಪಡೆ ಸುದ್ದಿಯಿಂದ ಮರೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಯೋಜನೆ ಕುಂಟುತ್ತಾ ಸಾಗಿದೆ. (ಸಾಂದರ್ಭಿಕ ಚಿತ್ರ). 

ಕ್ರಿಯಾಯೋಜನೆಯನ್ನೇ ಕಡೆಗಣಿಸಿದ ಇಲಾಖೆ:

ಎಂಪಿಎಫ್ ಯೋಜನೆಯಡಿಯಲ್ಲಿ ಲಭ್ಯವಾಗುವ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ಪೊಲೀಸ್ ಇಲಾಖೆಯ ತರಬೇತಿ ವ್ಯವಸ್ಥೆ, ಆಯುಧಗಳು, ಸಂವಹನ ವ್ಯವಸ್ಥೆ, ಕಟ್ಟಡ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ, ಫೊರೆನ್ಸಿಕ್ ವಿಭಾಗದ ಆಧುನೀಕರಣದಂಥ ಸೀಮಿತ ಅಭಿವೃದ್ಧಿಯನ್ನಷ್ಟೇ ಮಾಡಬಹುದು. ಈ ಬಗ್ಗೆ ವಾರ್ಷಿಕ ಆಕ್ಷನ್ ಪ್ಲಾನ್ ಒಂದನ್ನು ರೂಪಿಸಿ, ಯಾವುದಕ್ಕೆ ಎಷ್ಟು ಹಣ ವ್ಯಯವಾಗುತ್ತದೆಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕಿತ್ತು.

ಆದರೆ ಬಹಳಷ್ಟು ಜಿಲ್ಲೆಗಳಲ್ಲಿ ವರ್ಷಗಳೇ ಕಳೆದರೂ ಈ ಆಕ್ಷನ್ ಪ್ಲಾನ್ ಇನ್ನೂ ಸಿದ್ದವೇ ಆಗಿಲ್ಲ. ಸಲ್ಲಿಸಲಾಗಿರುವ ಬೆರಳೆಣಿಕೆಯಷ್ಟು ಕ್ರಿಯಾ ಯೋಜನೆಗಳಲ್ಲಿ ಸೂಚಿತ ವಿಷಯಗಳನ್ನೇ ಕೈ ಬಿಡಲಾಗಿದೆ. ಬಹಳಷ್ಟು ಆಕ್ಷನ್ ಪ್ಲಾನ್‌ಗಳು ಅಸಮರ್ಪಕ ಮತ್ತು ಯೋಜನೆಯ ವ್ಯಾಪ್ತಿಗೆ ಬರದಷ್ಟು ಕಳಪೆಯಾಗಿವೆಯೆಂದು ಸಿಎಜಿ ಆಡಿಟ್ ವರದಿ ಆಕ್ಷೇಪಣೆಯೆತ್ತಿದೆ.

ಖಜಾನೆಯಲ್ಲಿ ಕೊಳೆಯುತ್ತಿದೆ ಅಭಿವೃದ್ಧಿಯ ಅನುದಾನ:

ಈ ಎಂಪಿಎಫ್ ಯೋಜನೆಯ ಒಟ್ಟು ಹಣಕಾಸನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60-40 ಪಾಲುದಾರಿಕೆಯಲ್ಲಿ ಹೊಂದಿಸಿ ಪೊಲೀಸ್ ಇಲಾಖೆಗೆ ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತವೆ. ಹೀಗೆ ಬಿಡುಗಡೆ ಮಾಡಲಾದ ಹಣಕಾಸನ್ನು ಇಲಾಖೆಯ ಅಭಿವೃದ್ಧಿಗೆ ಬಳಸಬೇಕಿದ್ದ ಕರ್ನಾಟಕ ಪೊಲೀಸ್ ಇಲಾಖೆಯು ಆ ಹಣವನ್ನು ದೊಡ್ಡ ಪ್ರಮಾಣದಲ್ಲಿ ಬಳಸದೆ ಹಾಗೆಯೇ ಇಟ್ಟುಕೊಂಡಿದೆ. ಇಲಾಖೆಯ ಮೂಲಭೂತ ಸೌಕರ್ಯ ಅಭಿವೃದ್ಧಿ, ‘ಫಿಂಗರ್ ಪ್ರಿಂಟ್ ಬ್ಯೂರೋ’ಗೆ ಆಧುನಿಕ ಉಪಕರಣಗಳ ಖರೀದಿ, ಸೋಲಾರ್ ಪವರ್ ಪ್ಯಾಕ್ಸ್ ಖರೀದಿ, ಡಿಜಿಟಲ್ ವೈರ್ ಲೆಸ್ ಸಾಧನಗಳ ಖರೀದಿ, ಅತ್ಯಾಧುನಿಕ ಸಿಸಿಟಿವಿ ಉಪಕರಣಗಳ ಖರೀದಿಗೆಂದು ಯೋಜನೆಯ ಕೆಳಗೆ ಮಂಜೂರಾದ 35 ಕೋಟಿ.17 ಲಕ್ಷ ರುಪಾಯಿಗಳನ್ನು ಇಲಾಖೆಯು ಬಳಸದೆ ಖಜಾನೆಯಲ್ಲೇ ಕೊಳೆಯಲು ಬಿಟ್ಟಿದೆ.

ಅಭಿವೃದ್ಧಿಗೆಂದು ಹಣ ಕೊಟ್ಟರೆ ಪುರಾತನ ಕಾಲಕ್ಕೆ ತೆರಳಿದರು:

ಇದಿಷ್ಟೇ ಅಲ್ಲದೆ, ಬಳಸಿರುವ ಅನುದಾನದಲ್ಲಿಯೂ ಬೇಕಾಬಿಟ್ಟಿ ಧೋರಣೆಯಿಂದ ಇಡೀ ಪೊಲೀಸ್ ಇಲಾಖೆಯ ಸರ್ವೋನ್ನತ ಅಭಿವೃದ್ಧಿಗೆ ಮೀಸಲಾಗಿಟ್ಟ ಯೋಜನೆಯೊಂದರ ಅನುದಾನವನ್ನು ಎಷ್ಟು ಬೇಕೋ ಅಷ್ಟು, ಹೇಗೆ ಬೇಕೆಂದರೆ ಹಾಗೆ ಮನಸೋ ಇಚ್ಛೆ ಖರ್ಚು ಮಾಡಿರುವ ಕಾರಣಕ್ಕೆ ಯೋಜನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲಾಗಿರುವುದು ಸಿಎಜಿ ವರದಿಯ ಸವಿಸ್ತಾರ ವರದಿಯಲ್ಲಿ ಬಯಲಾಗಿದೆ.

ಪರಿಣಾಮವಾಗಿ ವಿದೇಶಗಳ ಪೊಲೀಸ್ ವ್ಯವಸ್ಥೆಯಂತೆ ಅಲ್ಟ್ರಾ ಮಾಡರ್ನ್ ಅಭಿವೃದ್ಧಿ ಮಾದರಿಗಳನ್ನು ಒಳಗೊಂಡು ಜನಸ್ನೇಹಿಯಾಗಬಹುದಿದ್ದ ಕರ್ನಾಟಕ ಪೊಲೀಸ್ ಇಲಾಖೆಯು, ತನ್ನ ಬೇಕಾಬಿಟ್ಟಿ ಧೋರಣೆಗಳು, ನಿರಾಸಕ್ತಿ, ಉದಾಸೀನತೆಯಿಂದ ಇಲಾಖೆಯನ್ನೇ 30 ವರ್ಷಗಳಷ್ಟು ಹಿಂದಕ್ಕೆ ಎಳೆದೊಯ್ದಿರುವುದನ್ನು ನಿರೂಪಿಸಲು ಆಘಾತಕಾರಿ ಸಾಕ್ಷ್ಯಗಳನ್ನು ಸಿಎಜಿ ವರದಿ ಮುಂದಿಟ್ಟಿದೆ. ಇವುಗಳನ್ನು ಒಂದೊಂದಾಗಿ ಮುಂದಿನ ಸರಣಿಗಳಲ್ಲಿ ನೋಡೋಣ.

(ನಾಳೆ: ಹೇಳುವರು ಕೇಳುವರಿಲ್ಲದ ಹಾಳುಕೊಂಪೆಗಳಾದ ಪೊಲೀಸ್ ಸ್ಟೇಷನ್‌ಗಳು)