Home news-for-4-1-display 377 ರದ್ದು: ಸಂಭ್ರಮದ ಜತೆಗೆ ಹೊಣೆಗಾರಿಕೆಯನ್ನೂ ಹೆಚ್ಚಿಸಿದ ಸುಪ್ರಿಂ ತೀರ್ಪು

377 ರದ್ದು: ಸಂಭ್ರಮದ ಜತೆಗೆ ಹೊಣೆಗಾರಿಕೆಯನ್ನೂ ಹೆಚ್ಚಿಸಿದ ಸುಪ್ರಿಂ ತೀರ್ಪು

SHARE

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ದೇಶದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂಬ ಆದೇಶ ನೀಡಿ ಮೂರು ದಿನ ಕಳೆದಿದೆ. ಸಹಜವಾಗಿಯೇ ಈ ತೀರ್ಪು ಎಲ್‌ಜಿಬಿಟಿ (ಲೆಸ್ಬಿಯನ್, ಗೇ, ದ್ವಿಲಿಂಗಿ ಮತ್ತು ತೃತೀಯ ಲಿಂಗಿ) ಸಮುದಾಯದಲ್ಲಿ ಹರ್ಷದ ಹೊನಲನ್ನೇ ಉಕ್ಕಿಸಿದೆ. ಈ ತೀರ್ಪನ್ನು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಸಂಭ್ರಮಿಸಲಾಗಿದೆ.

ಆದರೆ ಆಳದಲ್ಲಿ ಈ ತೀರ್ಪು ಸಮುದಾಯದ ಮೇಲೆ ಬೀರಲಿರುವ ಪರಿಣಾಮಗಳೇನು? ‘ಸಮಾಚಾರ’ ಈ ಹಿನ್ನೆಲೆಯಲ್ಲಿ ಸಮುದಾಯದ ಒಳಗಿರುವವರನ್ನು ಮಾತಿಗೆಳೆದಾಗ ಹುಟ್ಟುದ ವರದಿ ಇದು…

ಸುಪ್ರೀಂ ಕೋರ್ಟ್‌ನ ತೀರ್ಪು ಈ ಸಮುದಾಯದವರಿಗೆ ಸಿಕ್ಕ ‘ನಿಜವಾದ ಸ್ವಾತಂತ್ರ್ಯ’ ಎನ್ನುತ್ತಾರೆ ನಿಶಾ. “ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ನಮಗೆ ಸೆಕ್ಸ್‌ ಮಾಡಲು ಅವಕಾಶ ನೀಡಿದೆ ಅಂತಲ್ಲ. ನಮ್ಮ ಸಲಿಂಗ ಪ್ರೇಮಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಷ್ಟು ವರ್ಷಗಳ ಕಾಲ ನಾವು ಕಾನೂನಿನ ಕಣ್ಣಿನಲ್ಲಿ ಅಪರಾಧಿಗಳಾಗಿದ್ದೆವು. ಮೊನ್ನೆಯಿಂದ ನಾವು ನಿರಪರಾಧಿಗಳಾಗಿದ್ದೇವೆ,” ಎಂದು ವಿವರಿಸುತ್ತಾರೆ ಅವರು.

ಈ ಸಮುದಾಯದ ಈ ಹಿಂದಿನ ಕರಾಳ ಘಟನೆಗಳನ್ನು ನೆನಪಿಸಿಕೊಳ್ಳುವ ಅವರು 2016ರಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕುತ್ತಾರೆ. ಹಾಸನದಲ್ಲಿ 2013ರಲ್ಲಿ ಸಲಿಂಗಿಗಳಾಗಿದ್ದ 13 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. “ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಮ್ಮ ಸಮುದಾಯದವರನ್ನು ಭೇಟಿಯಾದಾಗ ನೀವು ಅನೈಸರ್ಗಿಕ ಲೈಂಗಿಕ ಸಂಪರ್ಕ ನಡೆಸುತ್ತಿದ್ದೀರಿ ಎಂದು ಈ 13 ಜನರನ್ನು ಬಂಧಿಸಿದ್ದರು. ಈ ಪ್ರಕರಣ ಇನ್ನೂ ನಡೆಯುತ್ತಲೇ ಇದೆ. ಈಗ ತೀರ್ಪು ಬಂದಿರುವುದರಿಂದ ಪ್ರಕರಣ ಕೊನೆಯಾಗಲಿದೆ,” ಎನ್ನುತ್ತಾರೆ ಅವರು.

ಹೀಗೆ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕಿದ್ದ ಎಷ್ಟೋ ಸಂದರ್ಭಗಳು ಮುಂದೆ ಉದ್ಭವಿಸುವುದಿಲ್ಲ ಎಂದು ವಿವರಿಸುತ್ತಾರೆ ಅವರು. “ಇಲ್ಲಿಯವರೆಗೆ ಮುಕ್ತವಾಗಿ ನಾನು ಗೇ, ನಾನು ಲೆಸ್ಬಿಯನ್‌ ಎಂದು ಹೇಳಿಕೊಳ್ಳಲು ಅವಕಾಶ ಇರಲಿಲ್ಲ. ಮೊದಲು ನಾವು ಮುಕ್ತವಾಗಿ ಹೇಳಿಕೊಂಡರೆ ಅಪರಾಧಿಗಳಾಗುತ್ತಿದ್ದೆವು. ಈಗ ಈ ನಿಟ್ಟಿನಲ್ಲಿ ಮುಕ್ತತೆಗೆ ಅನುಕೂಲಕಾರಿ ವಾತಾವರಣ ಸೃಷ್ಟಿಯಾಗಿದೆ,” ಎಂದು ತೀರ್ಪಿನ ಪರಿಣಾಮಗಳನ್ನು ವಿವರಿಸುತ್ತಾರೆ.

ಆದರೆ ನಮ್ಮ ಜವಾಬ್ದಾರಿ ಇಲ್ಲಿಗೇ ಮುಗಿದಿಲ್ಲ ಎನ್ನುತ್ತಾರೆ ಈ ಸಮುದಾಯದ ಪರ ಹೋರಾಡುತ್ತಾ ಬಂದ ಅಕೈ ಪದ್ಮಶಾಲಿ. “ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ಗಂಭೀರವಾಗಿ ತೆಗೆದುಕೊಂಡು ಜಾರಿಗೊಳಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಜತೆಗೆ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಏನೇ ತಾರತಮ್ಯ, ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ ಅದರ ಬಗ್ಗೆ ಗಮನ ಹರಿಸಲು ಪ್ರತ್ಯೇಕವಾದ ಆಯೋಗವನ್ನು ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಆರಂಭಿಸಬೇಕು,” ಎಂಬ ಬೇಡಿಕೆಯನ್ನು ಅವರು ಮುಂದಿಡುತ್ತಾರೆ. ಇದಕ್ಕಾಗಿ ಹೋರಾಟಗಳನ್ನು ಮಾಡಲಿದ್ದೇವೆ. ಈ ಹೋರಾಟಗಳು ಇಲ್ಲಿಗೇ ನಿಲ್ಲುವುದಿಲ್ಲ ಎನ್ನುತ್ತಾರೆ ಅಕೈ.

ಈಗ ಸಿಕ್ಕಿರುವ ಜಯ ಕೇವಲ ನ್ಯಾಯಾಂಗದ ಜಯ. ಆದರೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಕಳಂಕ ಅಷ್ಟು ಸುಲಭವಾಗಿ ಹೋಗುವುದಿಲ್ಲ ಎನ್ನುತ್ತಾರೆ ನಿಶಾ. “ಮಂಗಳೂರಿನಂಥ ಪ್ರದೇಶದಲ್ಲಿ ಹೆಣ್ಮಕ್ಕಳು ಪಬ್‌ಗಳಿಗೆ ಹೋದರೆ ಹಿಂದುತ್ವವಾದಿಗಳು ಹೊಡೆಯುತ್ತಿದ್ದಾರೆ. ಪರಿಸ್ಥಿತಿ ಹೀಗಿದೆ. ಹೀಗಿರುವಾಗ ಕಾನೂನಿನ ಜಯ ಸಿಕ್ಕಿದ್ದರೂ, ಸಾಮಾಜಿಕ, ಧಾರ್ಮಿಕ, ನೈತಿಕವಾಗಿ ನಮಗಿನ್ನೂ ಸವಾಲುಗಳಿವೆ. ಬಿಜೆಪಿ ಕೇಂದ್ರದಲ್ಲಿ ಆಳುತ್ತಿದೆ, ಹಿಂದುತ್ವಾದಿಗಳು, ಭಜರಂಗದಳ, ಶ್ರೀರಾಮಸೇನೆಯವರು ಲೆಗ್ಗಿಂಗ್ಸ್‌ ಹಾಕಿಕೊಂಡಿರುವುದರಿಂದಲೇ ರೇಪ್‌ಗಳಾಗುತ್ತಿದೆ ಎನ್ನುತ್ತಿದ್ದಾರೆ. ಹೀಗೊಂದು ವಾತಾವರಣದಲ್ಲಿ ‘ನಾವು ಹೆಣ್ಣು-ಹೆಣ್ಣು, ಗಂಡು-ಗಂಡು ಜೀವನ ಮಾಡುತ್ತೇವೆ’ ಎಂದಾಗಲೂ ದಾಳಿಗಳು ನಡೆಯುತ್ತವೆ. ಹೀಗಾಗಿ ಪೊಲೀಸರು, ಕಾನೂನು ಜಾರಿಗೊಳಿಸುವವರು, ಸಾಮಾನ್ಯ ಜನರಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ; ಮೂಲಭೂತವಾದಿಗಳೂ ಇದರಲ್ಲಿ ಸೇರುತ್ತಾರೆ,” ಎಂದು ವಿವರಿಸುತ್ತಾರೆ ನಿಶಾ.

ಸಾಮಾನ್ಯವಾಗಿ ಎಲ್ಲಾ ಆದೇಶಗಳೂ ಕಾಗದದ ಮೇಲಿರುತ್ತವೆ. ಸಾಮಾಜಿಕ ಬದಲಾವಣೆ ಎನ್ನುವುದು ತಕ್ಷಣಕ್ಕೆ ಆಗುವುದಿಲ್ಲ. ಇದಕ್ಕಾಗಿ ಸಂಘ ಸಂಸ್ಥೆಗಳ ಮೂಲಕ, ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಹಾಗೆ ನೋಡಿದರೆ ಈ ಆದೇಶದಿಂದ ನಿಜವಾಗಿಯೂ ಜವಾಬ್ದಾರಿ ಹೆಚ್ಚಾಗಿದೆ. ಸಂಭ್ರಮ ಪಡೋದಕ್ಕಿಂತ ಈ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಎಂಬುದು ಅವರ ಅಭಿಪ್ರಾಯ.

ಇದರಾಚೆಗೆ ಕಾನೂನನ್ನು ವಿವಿಧ ಸ್ತರಗಳಿಗೆ ಕೊಂಡೊಯ್ಯುವ ಅವಶ್ಯಕತೆಗಳ ಬಗ್ಗೆ ಗಮನ ಸೆಳೆಯುತ್ತಾರೆ ಅಕೈ ಪದ್ಮಶಾಲಿ. ನಮ್ಮ ನಾಗರೀಕ ಹಕ್ಕುಗಳು, ವೈವಾಹಿಕ ಹಕ್ಕುಗಳು, ಮಕ್ಕಳ ದತ್ತು ಹಕ್ಕುಗಳು, ಆಸ್ತಿ ಹಕ್ಕುಗಳು ಎಲ್ಲದರಲ್ಲೂ ಸಮಾನ ನಾಗರೀಕರಾಗಿ ಬಾಳಲು ಅವಕಾಶ ಸೃಷ್ಟಿಯಾಗಬೇಕು. ಅದಕ್ಕಾಗಿ ಮತ್ತೊಂದು ಸುತ್ತಿನ ಆಂದೋಲವನ್ನು ರೂಪಿಸಬೇಕಾಗುತ್ತದೆ ಎಂಬ ನೀಲ ನಕ್ಷೆಯನ್ನು ಅವರು ಮುಂದಿಡುತ್ತಾರೆ.

ಇವೆಲ್ಲವುಗಳ ಜತೆಗೆ ಸಮಾಜದಲ್ಲಿ ಬೇರೂರಿರುವ ಮಡಿವಂತಿಕೆಯೂ ಕಡಿಮೆಯಾಗಬೇಕಿದೆ. ಅದಕ್ಕೆ ಕಾನೂನಿನ ಆಚೆಗೆ ಪರಿಣಾಮಕಾರಿ ಜಾಗೃತಿ ಕೆಲಸ ನಡೆಯಬೇಕಿದೆ. ಒಂದು ಕಡೆ ಸಂಭ್ರಮ ಮತ್ತು ಅದರ ಆಚೆಗೆ ಇರುವ ಹೊಣೆಗಾರಿಕೆಗಳು. ಇದನ್ನು ನಿಭಾಯಿಸಲು ಸಿದ್ಧವಾದಂತೆ ಕಾಣಿಸುತ್ತಿದೆ ಬೆಂಗಳೂರಿನ ಎಲ್‌ಜಿಬಿಟಿ ಸಮುದಾಯ.