Home news-in-brief ಮುಗಿಯದ ವೇದಾಂತ ಗ್ರೂಪ್-ತಮಿಳುನಾಡು ಸಂಘರ್ಷ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಮುಗಿಯದ ವೇದಾಂತ ಗ್ರೂಪ್-ತಮಿಳುನಾಡು ಸಂಘರ್ಷ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ

SHARE

ತಮಿಳುನಾಡಿನಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದ್ದ ವೇದಾಂತ ಗ್ರೂಪ್‌ ಮತ್ತು ಅಲ್ಲಿನ ಸರಕಾರದ ನಡುವಿನ ಸಂಘರ್ಷ ಮುಗಿಯುವಂತೆ ಕಾಣುತ್ತಿಲ್ಲ.

ಟುಟುಕೋರಿನ್‌ನಲ್ಲಿರುವ ವೇದಾಂತ ಗ್ರೂಪ್‌ನ ಸ್ಟೆರ್ಲೈಟ್‌ ತಾಮ್ರದ ಉತ್ಪಾದನಾ ಘಟಕವನ್ನು ಮುಚ್ಚಲಾಗಿದೆ. ಈ ತಾಮ್ರ ಘಟಕದ ಒಳಗಿರುವ ಆಡಳಿತಾತ್ಮಕ ಕೇಂದ್ರಕ್ಕೆ ಪ್ರವೇಶಕ್ಕೆ ವೇದಾಂತ ಗ್ರೂಪ್‌ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅನುಮತಿ ನೀಡಿತ್ತು. ಈ ಅನುಮತಿಯನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಈ ಸಂಬಂಧ ತುರ್ತು ವಿಚಾರಣೆ ನಡೆಸಬೇಕೆಂದು ತಮಿಳುನಾಡು ಸರಕಾರ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂ ಕೋರ್ಟ್‌ ಇಂದು ತಳ್ಳಿ ಹಾಕಿದ್ದು ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದೆ.

ಈ ಕುರಿತು ಆದೇಶ ನೀಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ.ಎಂ ಕನ್ವಿಲ್ಕರ್‌, ಮತ್ತು ನ್ಯಾ. ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ವಿಚಾರಣೆಯನ್ನು ಮುಂದಿನ ವಾರ ನಡೆಸಲಾಗುವುದು ಎಂದು ಹೇಳಿದೆ.

ಏನಿದು ಪ್ರಕರಣ?

ಆಗಸ್ಟ್ 9ರಂದು ಸ್ಟೆರ್ಲೈಟ್‌ ತಾಮ್ರ ಘಟಕದಲ್ಲಿರುವ ಆಡಳಿತಾತ್ಮಕ ಘಟಕವನ್ನು ಪ್ರವೇಶಿಸಲು ವೇದಾಂತ ಗ್ರೂಪ್‌ಗೆ ಎನ್‌ಜಿಟಿ ಅನುಮತಿ ನೀಡಿತ್ತು. ಆಡಳಿತಾತ್ಮಕ ಕೇಂದ್ರಕ್ಕೆ ಪ್ರವೇಶ ನೀಡುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಎನ್‌ಜಿಟಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಆದರೆ ತಾಮ್ರ ಘಟಕ ಮುಚ್ಚಿರಬೇಕು ಮತ್ತು ಉತ್ಪಾದನಾ ಘಟಕಕ್ಕೆ ವೇದಾಂತ ಕಂಪನಿ ಪ್ರವೇಶಿಸುವಂತಿಲ್ಲ ಎಂದು ಎನ್‌ಜಿಟಿ ಸ್ಪಷ್ಟವಾಗಿ ಹೇಳಿತ್ತು. ಹಾಗೂ ಇದನ್ನು ಖಚಿತಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಹೀಗಿದ್ದೂ ಎನ್‌ಜಿಟಿ ಆದೇಶ ಪ್ರಶ್ನಿಸಿ ಆಗಸ್ಟ್‌ 14ರಂದು ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿತ್ತು.

ಗ್ಯಾಸ್‌ ಸೋರಿಕೆ, ಪ್ರತಿಭಟನೆ, ಗೋಲಿಬಾರ್‌..

ಇಂತಹದ್ದೊಂದು ವಿವಾದ, ನ್ಯಾಯಾಂಗ ಹೋರಾಟ ಆರಂಭವಾಗಿದ್ದು ಏಕೆ ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಗ್ಯಾಸ್‌ ಸೋರಿಕೆ, ಪ್ರತಿಭಟನೆ ಮತ್ತು ಗೋಲಿಬಾರ್‌ ವಿಚಾರಗಳು ಎದುರಾಗುತ್ತವೆ.

‘2013ರಲ್ಲಿ ಸ್ಟೆರ್ಲೈಟ್‌ ತಾಮ್ರ ಘಟಕದಲ್ಲಿ ಅನಿಲ ಸೋರಿಕೆಯಾಗಿ ಕಾರ್ಮಿಕರೊಬ್ಬರು ಮೃತಪಟ್ಟು, ಇನ್ನೂ ಕೆಲ ಕಾರ್ಮಿಕರು ಗಾಯಗೊಂಡಿದ್ದರು. ಈ ವಿಚಾರ ಸುದ್ದಿಗೆ ಗ್ರಾಸವಾಗುತ್ತಿದ್ದಂತೆ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಘಟಕವನ್ನು ಮುಂಚ್ಚುವಂತೆ ಆದೇಶಿಸಿದ್ದರು.

ಇದರ ವಿರುದ್ಧ ವೇದಾಂತ ಕಂಪನಿ ಎನ್‌ಜಿಟಿಗೆ ಮೊರೆ ಹೋಗಿತ್ತು. ಈ ಸಂದರ್ಭ ಹಸಿರು ನ್ಯಾಯಾಧಿಕರಣ ಸರಕಾರದ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು ಅದರ ಅಂತಿಮ ತೀರ್ಪಿನ್ನೂ ಹೊರಬಿದ್ದಿಲ್ಲ.

ಇದರ ಮಧ್ಯದಲ್ಲಿ ಸುಪ್ರೀಂ ಕೋರ್ಟ್‌ ಪರಿಸರಕ್ಕೆ ಹಾನಿ ಮಾಡಿದ್ದಕ್ಕೆ 100 ಕೋಟಿ ರೂಪಾಯಿ ದಂಡ ತೆರುವಂತೆ ಕಂಪನಿಗೆ ಆದೇಶ ನೀಡಿತ್ತು. ಇದೇ ವೇಳೆಗೆ ಕಂಪನಿ ತನ್ನ ಟುಟಿಕೋರಿನ್ ಘಟಕವನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಾದ ಬೆನ್ನಿಗೆ ಸ್ಥಳೀಯ ಜನರು ಪ್ರತಿಭಟನೆಗೆ ಇಳಿದಿದ್ದರು.

ಸತತ 99 ದಿನಗಳ ಕಾಲ ನಡೆದ ಪ್ರತಿಭಟನೆ ಮೇ 22 ರಂದು 100ನೇ ದಿನ ಕಾಲಿಡುತ್ತಿದ್ದಂತೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಈ ವೇಳೆ ನಡೆದ ಗೋಲಿಬಾರ್‌ನಲ್ಲಿ 13 ಪ್ರತಿಭಟನಾಕಾರರು ಸಾವನ್ನಪ್ಪಿ ನೂರಾರು ಜನರು ಗಾಯಗೊಂಡಿದ್ದರು. ಈ ಬೆಳವಣಿಗೆ ಬಳಿಕ ರಾಜ್ಯ ಸರಕಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೇಳಿ ಮೇ 28ರಂದು ಘಟಕಕ್ಕೆ ಶಾಶ್ವತ ಬೀಗ ಜಡಿದಿತ್ತು.

ಈ ಬಾರಿಯೂ ಪುನಃ ರಾಜ್ಯ ಸರಕಾರದ ಆದೇಶ ಪ್ರಶ್ನಿಸಿ ವೇದಾಂತ ಗ್ರೂಪ್‌ ಎನ್‌ಜಿಟಿ ಮೊರೆ ಹೋಗಿತ್ತು. ಅಲ್ಲಿ ಕಂಪನಿಗೆ ಅರ್ಧ ಜಯ ಸಿಕ್ಕಿದ್ದು ಅದನ್ನು ಪ್ರಶ್ನಿಸಿ ಈಗ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಹೀಗೆ ವೇದಾಂತ ಗ್ರೂಪ್‌ ಮತ್ತು ತಮಿಳುನಾಡು ಸರಕಾರದ ಮಧ್ಯೆ ಕಳೆದ ಐದು ವರ್ಷಗಳಿಂದ ನಿರಂತರ ಸಂಘರ್ಷ ಜಾರಿಯಲ್ಲಿದೆ. ಸದ್ಯಕ್ಕಂತೂ ಈ ಸಂಘರ್ಷ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.