Home Exclusive EXPLOSIVE: ರಾಘವೇಶ್ವರ ಸ್ವಾಮಿ ‘ಸ್ಟಾರ್ ವಿಟ್ನೆಸ್’ ಬತ್ತಳಿಕೆಯಲ್ಲಿ ಚೊಚ್ಚಲ ಕಾದಂಬರಿಯ ಅಸ್ತ್ರ

EXPLOSIVE: ರಾಘವೇಶ್ವರ ಸ್ವಾಮಿ ‘ಸ್ಟಾರ್ ವಿಟ್ನೆಸ್’ ಬತ್ತಳಿಕೆಯಲ್ಲಿ ಚೊಚ್ಚಲ ಕಾದಂಬರಿಯ ಅಸ್ತ್ರ

SHARE

ಆತ ಆಗ ಮೂರನೇ ತರಗತಿ ವಿದ್ಯಾರ್ಥಿ. ಆಗಿನ್ನೂ ರಾಷ್ಟ್ರೀಯ ಗಮನ ಸೆಳೆಯದ, ರಾಜ್ಯದ ಸಣ್ಣ ಸಮುದಾಯದ ಧಾರ್ಮಿಕ ಸಂಸ್ಥಾನವೊಂದರ ‘ಪರಿವಾರ’ವನ್ನು ಅನಧಿಕೃತವಾಗಿ ಸೇರಿಕೊಂಡ. ನಂತರ ಏಳನೇ ತರಗತಿಗೆ ಬರುವಷ್ಟರಲ್ಲಿ, ಶಾಲೆ ಬಿಟ್ಟು ಅಧಿಕೃತವಾಗಿಯೇ ಪರಿವಾರ ಸೇರಿಕೊಂಡ. ಮುಂದಿನ 8 ವರ್ಷಗಳ ಕಾಲ ಮಠದ ಗುರುಗಳ ‘ಸೇವೆ’ ಮಾಡಿಕೊಂಡಿದ್ದ. ಒಂದು ಹಂತದಲ್ಲಿ ಆತ ಮಠ ಬಿಟ್ಟು ಹೊರಬಂದ.

ಅದಾಗಿ ಮೂರು ವರ್ಷಗಳಿಗೆ ಮಠದ ಪೀಠಾಧಿಪತಿಯ ರಾಸಲೀಲೆ ಕಮ್ ಅತ್ಯಾಚಾರ ಆರೋಪ ಪ್ರಕರಣ ಹೊರಬಿತ್ತು. 2014ರ ಆಗಸ್ಟ್‌ ತಿಂಗಳಲ್ಲಿ ಹೊರಬಿದ್ದ ಕೇಸ್‌ ಅದು. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಕೇಸನ್ನು ಸಿಐಡಿ ತನಿಖೆಗೆ ಕೈಗೆತ್ತಿಕೊಂಡಿತು. ಒಟ್ಟು 152 ಜನರನ್ನು ಸಾಕ್ಷಿಗಳನ್ನಾಗಿ ಮಾಡಿತ್ತು.

ಅದರಲ್ಲಿ ‘ಸ್ಟಾರ್ ವಿಟ್ನೆಸ್’ ಆದವನು ಅಂದು ಮೂರನೇ ತರಗತಿ ಬಿಟ್ಟು ಮಠ ಸೇರಿಕೊಂಡಿದ್ದ ಬಾಲಕ; ಹೆಸರು ಅಭಿರಾಮ್ ಗಣಪತಿ ಹೆಗಡೆ, ಪುಟ್ಟ ಸಮುದಾಯದ ಹೆಸರು ಹವ್ಯಕರು, ಅವರ ಮಠದ ಹೆಸರು ರಾಮಚಂದ್ರಾಪುರ ಮಠ ಹಾಗೂ ಪೀಠಾಧಿಪತಿಯ ಹೆಸರು ರಾಘವೇಶ್ವರ ಭಾರತೀ ಸ್ವಾಮಿ.

ಅಭಿರಾಮ್ ಜಿ ಹೆಗಡೆ ಮೊದಲ ಬಾರಿಗೆ ಸುದ್ದಿ ಕೇಂದ್ರಕ್ಕೆ ಬಂದಿದ್ದು ರಾಘವೇಶ್ವರ ಸ್ವಾಮಿ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಾಗ. ಸಿಐಡಿಗೆ ಅಭಿರಾಮ್ ನೀಡಿದ ಹೇಳಿಕೆಯನ್ನು ಆಧರಿಸಿ ಅವತ್ತಿಗೆ ಪ್ರಜಾವಾಣಿ, ‘ಕಿಂಡಿಯಲ್ಲಿ ಕಂಡ ರಾಸಲೀಲೆ’ ಎಂಬ ವರದಿಯೊಂದನ್ನು ಪ್ರಕಟಿಸಿತ್ತು. ನಂತರ, ಕೆಳಹಂತದ ನ್ಯಾಯಾಲಯದಲ್ಲಿ ಪ್ರಕರಣದ ತೀರ್ಪು ಹೊರಬಿದ್ದಾಗ ಖುದ್ದು ರಾಘವೇಶ್ವರ ಭಾರತೀ ಸ್ವಾಮಿ ಬಾಯಲ್ಲಿ ಅಭಿರಾಮ್ ಹೆಸರು ಕೇಳಿಬಂತು. ಅದನ್ನು ಹೊರತು ಪಡಿಸಿದರೆ, ಈ ವರೆಗೆ ಅಭಿರಾಮ್ ಬಗೆಗೆ ಹೊರಪ್ರಪಂಚಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಅಭಿರಾಮ್ ಮತ್ತೆ ಸುದ್ದಿಕೇಂದ್ರಕ್ಕೆ ಬರಲಿದ್ದಾರೆ. ಅದೂ ತಮ್ಮ ಚೊಚ್ಚಲ ಕಾದಂಬರಿಯೊಂದರ ಮೂಲಕ ಎಂಬುದು ಗಮನಾರ್ಹ.

ಅಭಿರಾಮ್ ಹೆಗಡೆ ಸಿಐಡಿಗೆ ನೀಡಿದ ಹೇಳಿಕೆ ಆಧರಿಸಿ ‘ಪ್ರಜಾವಾಣಿ’ ಪ್ರಕಟಿಸಿದ ವರದಿಯ ಪ್ರತಿ. 

ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿಯಾಗಿದ್ದವರು ಅಭಿರಾಮ್ ಅಜ್ಜ. ಧಾರ್ಮಿಕವಾಗಿ ಮಠಕ್ಕೆ ನಡೆದುಕೊಂಡು ಬಂದ ಕೌಟುಂಬಿಕ ಹಿನ್ನೆಲೆ ಅಭಿರಾಮ್‌ಗೆ ಇದೆ. ಅದೇ ಕಾರಣಕ್ಕೆ ಓದಬೇಕಾದ ಹುಡುಗ ಹೋಗಿ ಮಠ ಸೇರಿಕೊಂಡಿದ್ದ. ಅಲ್ಲಿಂದ ಮುಂದಿನದು ಚಿಕ್ಕ ಪಯಣ.

ಸಣ್ಣ ವಯಸ್ಸಿನಲ್ಲಿ ಹೆಗಲೇರಿಸಿಕೊಂಡ ಪರಿವಾರದ ಬದುಕು, ವಯಸ್ಸಿನ ಜತೆಗೆ ಮಠದಲ್ಲಿ ಬೆಳೆಸಿಕೊಂಡ ವರ್ಚಸ್ಸು, ಮೈಸೂರಿನಲ್ಲಿ ಕಂಡ ಕಿಂಡಿಯ ಸತ್ಯ, ಎದುರಿಗೆ ನಿಂತು ನೇರ ಪ್ರಶ್ನೆ ಎಸೆದ ಮುಗ್ಧತನ, ಹಠಕ್ಕೆ ಬಿದ್ದು ಹೊರಗೆ ಬದುಕು ಕಟ್ಟಿಕೊಳ್ಳುವ ಸಾಹಸ, ನಂಬಿಕೆ ಹಾಗೂ ಸತ್ಯದ ವಿಚಾರ ಬಂದಾಗ, ಸತ್ಯವನ್ನೇ ಪ್ರತಿಪಾದಿಸಲು ಹೋಗಿ ಮೈಮೇಲೆ ಎಳೆದುಕೊಂಡ ರಿಸ್ಕ್‌ಗಳು ಹೀಗೆ, ಇವತ್ತಿಗೆ ಬರೀ 26 ವರ್ಷದ ಅಭಿರಾಮ್ ಹೆಗಡೆ ಕಂಡಿದ್ದು, ನೋಡಿದ್ದು, ಕೇಳಿದ್ದು, ಅನುಭವಿಸಿದ ಕತೆಗಳೇ ಕಂತೆಕಂತೆಯಷ್ಟಿವೆ. ಇವೆಲ್ಲವನ್ನೂ ಕಾದಂಬರಿ ರೂಪದಲ್ಲಿ ಹೊರತರಲಿದ್ದಾರೆ. ಈ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಮುಂದೆ ಬಂದಿರುವ ಅಭಿರಾಮ್ ‘ಸಮಾಚಾರ’ಕ್ಕೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.

ಅಭಿರಾಮ್ ಹೆಗಡೆ.

ಸಮಾಚಾರ: ಏನಿದು ವಿಟ್ನೆಸ್‌ ಅಕೌಂಟ್ ಆಫ್ ದಿ ಸ್ಟೋರಿನಾ?

ಅಭಿರಾಮ್: ಹಾಗೆನಿಲ್ಲ. ವಿಟ್ನೆಸ್ ಅಕೌಂಟ್ ಅಂದ್ರೆ ಒಂದು ಕೇಸಿನ ಸುತ್ತ ಮುತ್ತ ಅಷ್ಟೆ ಆಗಿ ಬಿಡುತ್ತದೆ. ನಾನು ಕಾದಂಬರಿಯ ಮೂಲಕ ನನ್ನ ಬದುಕಿನಲ್ಲಿ ನಡೆದ ಘಟನೆಗಳ ಸುತ್ತ ಕತೆಯನ್ನು ಹೇಳಲು ಹೊರಟಿದ್ದೇನೆ. ಅದರಲ್ಲಿ ಕೇಸು ಒಂದು ಪುಟ್ಟ ಅಧ್ಯಾಯ ಅಷ್ಟೆ. ಅದನ್ನು ಬಿಟ್ಟೂ ಇನ್ನೂ ಹತ್ತು ಹಲವು ಸಂಗತಿಗಳಿವೆ. ಅವೆಲ್ಲವನ್ನೂ ಕತೆಯ ರೂಪದಲ್ಲಿ ಮುಂದಿಡುವುದು ಒಟ್ಟಾರೆ ಕಾದಂಬರಿಯ ಉದ್ದೇಶ. ಹೀಗಾಗಿ ಒಬ್ಬ ಸಾಕ್ಷೀದಾರನ ಹೇಳಿಕೆಗೆ ಇದು ಸೀಮಿತವಾಗಿರುವುದಿಲ್ಲ…

ಸಮಾಚಾರ: ನೀವು ಭಾರಿ ಸದ್ದು ಮಾಡಿದ್ದ ಪ್ರಕರಣದ ಸಾಕ್ಷೀದಾರರು. ಕಾದಂಬರಿಯಲ್ಲಿ ಅದರ ಆಚೆಗಿನ ವಿಚಾರಗಳು ಇರುತ್ತವೆ ಎಂದು ಹೇಳುತ್ತಿದ್ದೀರಾ? ಯಾಕೆ ಇದೇ ಸಮಯದಲ್ಲಿ ಹೊರಪ್ರಪಂಚಕ್ಕೆ ವಿಚಾರಗಳನ್ನು ತಲುಪಿಸಲು ಹೊರಟಿದ್ದೀರಾ, ಅದೂ ಕಾದಂಬರಿ ರೂಪದಲ್ಲಿ?

ಅಭಿರಾಮ್: ಸಮಯದ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಎಲ್ಲಾ ಮಕ್ಕಳಂತೆ ನಾನು ಬೆಳೆದವನಲ್ಲ. ಎಲ್ಲರೂ ಶಾಲೆಗೆ ಹೋಗುವಾಗ ನಾನು ಮಠಕ್ಕೆ ಹೋದೆ. ಎಲ್ಲಾ ಮಠಕ್ಕೆ ಹೋಗುವಾಗ ನಾನು ಮಠ ಬಿಟ್ಟು ಬಂದೆ. ರಾಜ್ಯ ಸಣ್ಣ ಸಮುದಾಯವೊಂದರಿಂದ ಬಂದವನು ನಾನು. ಆ ಸಮುದಾಯ ನಂಬುವ ಒಂದು ಧಾರ್ಮಿಕ ಕೇಂದ್ರದ ಬೆಳವಣಿಗೆಯನ್ನು ಚಿಕ್ಕವಯಸ್ಸಿನಲ್ಲೇ ಹತ್ತಿರದಿಂದ ಕಂಡವನು. ಈವರೆಗೆ ಸಾಕಷ್ಟು ಅನುಭವಗಳು ಆಗಿವೆ ಮತ್ತು ನನ್ನ ವಯಸ್ಸಿನಲ್ಲಿ ಅದು ದೊಡ್ಡದಾಗಿ ಕಾಣಿಸುತ್ತಿವೆ.

ಈ ಕಾರಣಕ್ಕೆ ನನ್ನ ಆ ನೆನಪುಗಳನ್ನು ಹೊರಜಗತ್ತಿಗೆ ತಿಳಿಸಬೇಕು ಅಂತ ಹೊರಟಿದ್ದೀನಿ. ನಾನು ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಹೇಳಲು ಹೊರಟಾಗ ಸಾಕ್ಷಿ ಕೊಡಿ ಅಂದರೆ ನನ್ನ ಬಳಿ ಇರಲು ಸಾಧ್ಯವಿಲ್ಲ. ಅವು ನನ್ನ ನೆನಪುಗಳಷ್ಟೆ. ಅದಕ್ಕಾಗಿಯೇ ಕಾದಂಬರಿ ರೂಪದಲ್ಲಿ ಹೇಳಲು ಹೊರಟಿದ್ದೀನಿ. ಬರೆದು ಮುಗಿಸಿದ್ದು ಇತ್ತೀಚೆಗೆ. ಇನ್ನೂ ಕೊನೆಯ ಒಂದಷ್ಟು ಅಧ್ಯಾಯಗಳು ಬಾಕಿ ಇವೆ.

ಸಮಾಚಾರ: ಅಂದರೆ ನಿಮ್ಮ ಕಾದಂಬರಿಯಲ್ಲಿ ಮಠ, ಮಠಾಧೀಶರ ಪಾತ್ರಗಳೂ ಸೇರಿದಂತೆ ಹಲವು ಪಾತ್ರಗಳಿಗೆ ಪ್ರಾಮುಖ್ಯತೆ ಇದೆ?

ಅಭಿರಾಮ್: ಕಾದಂಬರಿಯ ಕತೆಯನ್ನು ನಾನು ಈಗಲೇ ಹೇಳಲು ಹೋಗುವುದಿಲ್ಲ. ನನ್ನ ಕ್ರೀಯಾಶೀಲ ಪ್ರಯತ್ನ ಕಾದಂಬರಿ. ಅದು ನನ್ನ ಬಾಲ್ಯಕ್ಕೆ ಸಂಬಂಧಿಸಿದ್ದು, ನನ್ನ ನಂಬಿಕೆಗಳು ಧಾರ್ಮಿಕ ವಾತಾವರಣದಲ್ಲಿ ರೂಪಗೊಂಡ ದಿನಗಳಿಗೆ ಸಂಬಂಧಿಸಿದ್ದು. ಅದರಲ್ಲಿ ಯಾರು, ಯಾವ ಪಾತ್ರಗಳ ರೂಪದಲ್ಲಿ ಬರುತ್ತಾರೆ ಎಂಬುದನ್ನು ನೀವು ಕಾದು ನೋಡಬೇಕು.

ಒಂದು ಮಾತ್ರಹೇಳಬಲ್ಲೆ; ಮಠ, ಮಠಾಧೀಶರ ಆಚೆಗೆ ಇದರಲ್ಲಿ ಕಾರ್ಪುರೇಟ್ ಜಗತ್ತಿನ ಹಲವು ಪಾತ್ರಗಳೂ ಇವೆ. ಉದ್ಯಮ, ಹಣ, ನಂಬಿಕೆ ನಡುವೆ ಇರುವ ಅತ್ಯಂತ ತೆಳು ಗೆರೆಯನ್ನು ಕಾದಂಬರಿ ಬಿಚ್ಚಿಡುತ್ತದೆ. ಎಷ್ಟೋ ಜನ ಹೊರಗಿನವರಿಗೆ ಇಲ್ಲಿ ಬರುವ ದೃಶ್ಯಗಳು ನಂಬುವುದಕ್ಕೆ ಅಸಾಧ್ಯ ಅಂತ ಅನ್ನಿಸಿದರೂ ಅಚ್ಚರಿ ಏನಿಲ್ಲ.

ಸಮಾಚಾರ: ನೀವು ಹೇಳಲು ಹೊರಟ ಕತೆಯ ವ್ಯಾಪ್ತಿ ದೊಡ್ಡದೆ ಇರುವ ಹಾಗಿದೆ. ಕನ್ನಡದಲ್ಲಿ ಇದೊಂದು ವಿಶಿಷ್ಟ ಪ್ರಯೋಗ ಆಗಬಹುದು ಎಂಬ ನಂಬಿಕೆ ಇದೆಯಾ?

ಅಭಿರಾಮ್: ಯಾವುದೇ ಕಾದಂಬರಿ ಆದರೂ ನಿಜ ಜೀವನದ ಜತೆಗೆ ಸಂಬಂಧ ಇದ್ದೇ ಇರುತ್ತದೆ. ಅದೇ ರೀತಿ ನಂದೂ ಕೂಡ. ಮೊದಲೇ ಹೇಳಿದಂತೆ ನನ್ನ ಜೀವನದಲ್ಲಿ ಯಾವುದು ಯಾವ ಕಾಲಕ್ಕೆ ನಡೆಯಬೇಕೋ, ಅದು ನಡೆಯಬೇಕಾದ ಕಾಲದಲ್ಲಿ ನಡೆಯಲಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಹೊಸ ಪ್ರಪಂಚದ ಪರಿಚಯ ನಿಮಗೆ ಮಾಡಿಸಲಾಗುತ್ತದೆ. ಅದರ ಜತೆಗೆ, ನಾವು ಇವತ್ತು ನಂಬುವ ಧಾರ್ಮಿಕತೆ, ಅದರ ಸುತ್ತ ಬೆಳೆದ ಪರಿಸರ, ಸಾಮಾನ್ಯ ಜನರ ಗಟ್ಟಿ ನಂಬಿಕೆಗಳು, ಅವು ಹೇಗೆ ಬಳಕೆಯಾಗುತ್ತವೆ, ಅಂತಿಮ ಪರಿಣಾಮಗಳೇನು ಹೀಗೆ ಹತ್ತು ಹಲವು ವಿಚಾರಗಳಿವೆ.

ಅದರ ಜತೆಗೆ, ನೀವು ಊಹೆ ಮಾಡದ ಹಲವು ಪಾತ್ರಗಳು ಇಲ್ಲಿ ಬಂದು ಹೋಗುತ್ತವೆ. ಏನಕ್ಕೂ ಇನ್ನು ಕೆಲವೇ ದಿನ, ಪುಸ್ತಕ ನಿಮ್ಮ ಕೈಯಲ್ಲೇ ಇರುತ್ತದೆ.

ಸಮಾಚಾರ: ಯಾವಾಗ ಕಾದಂಬರಿಯನ್ನು ನಿರೀಕ್ಷೆ ಮಾಡಬಹುದು? ಕೆಲಸ ಮುಗಿದಿದೆಯಾ?

ಅಭಿರಾಮ್: ಮೊದಲು ಇದನ್ನು ವೆಬ್‌ ಸೀರಿಸ್ ರೂಪದಲ್ಲಿ ಹೊರಗೆ ತರಲು ಹೊರಟಿದ್ದೆವು. ಒಂದಷ್ಟು ಸ್ನೇಹಿತರು ಕತೆ ಕೇಳಿ ಥ್ರಿಲ್ ಆಗಿದ್ದರು. ಆದರೆ ನಂತರ ಅದರ ವ್ಯಾಪ್ತಿ ನೋಡಿ ಸುಸ್ತಾದರು. ಹೀಗಾಗಿ ಮೊದಲು ಕಾದಂಬರಿ ರೂಪದಲ್ಲಿ ನನ್ನ ನೆನಪುಗಳನ್ನು ಬರೆದು ಮುಗಿಸಲು ಕುಳಿತೆ. ಈಗಾಗಲೇ ಎಂಟು ಅಧ್ಯಾಯಗಳು ಮುಗಿದಿವೆ. ಇನ್ನೂ ಐದಾರು ಅಧ್ಯಾಯಗಳು ಬಾಕಿ ಇವೆ. ಹೋಂ ವರ್ಕ್‌ ಎಲ್ಲಾ ಮುಗಿದಿದೆ. ಎಲ್ಲವೂ ಅಂದುಕೊಂಡಂರೆ ಆದರೆ ಮುಂದಿನ ಕೆಲವೇ ದಿನಗಳಲ್ಲಿ ಕಾದಂಬರಿ ನಿಮ್ಮ ಕೈಲಿ ಇರುತ್ತದೆ.

ಸಮಾಚಾರ: ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಇಂತಹ ಕಾದಂಬರಿಗಳು ಅಪರೂಪ ಅನ್ನಿಸುತ್ತೆ. ಈ ಬಗ್ಗೆ ಆಲೋಚನೆ ಮಾಡಿದ್ದೀರಾ?

ಅಭಿರಾಮ್: ನನಗೆ ಸಾಹಿತ್ಯ ಅಷ್ಟಾಗಿ ಗೊತ್ತಿಲ್ಲ. ಪ್ರಕಾರಗಳ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಕತೆ ನನ್ನಂತೆಯೇ ದಿನಗಳನ್ನು ಕಳೆದ ನನ್ನ ಸಮುದಾಯದ ಲಕ್ಷಾಂತರ ಜನರ ಕತೆ ಕೂಡ. ಹೀಗಾಗಿ, ಅವರು ಇದನ್ನು ಅವರದ್ದೇ ಕತೆಯಾಗಿ ಓದಿಕೊಂಡರೆ ಅಷ್ಟು ಸಾಕು. ನಿರೀಕ್ಷೆ ಅಂತ ಏನಿಲ್ಲ, ಆದರೆ ಒಮ್ಮೆ ನಾನು ಕಂಡ, ನೋಡಿದ, ಅನುಭವಿಸಿದ, ಪ್ರತಿರೋಧಿಸಿದ ಸಂಗತಿಗಳನ್ನು ಜಗತ್ತಿನ ಎದುರಿಗೆ ಇಡಬೇಕು. ಅದಷ್ಟೆ ನನ್ನ ಮುಂದಿರುವ ಆಯ್ಕೆ. ಅದಕ್ಕಾಗಿ ಕಾದಂಬರಿ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಅದನ್ನು ಓದುಗರಿಗೆ ತಲುಪಿಸಲಾಗುತ್ತದೆ. ಅವರ ಪ್ರತಿಕ್ರಿಯೆಯ ಬಗ್ಗೆ ಕುತೂಹಲದಿಂದ ಇದ್ದೇನೆ.